ಯಾವುದೇ ಮಹಿಳೆಯ ಪಾಲಿಗೆ ನ್ಯಾಯವು ಈ ರೀತಿ ಕೊನೆಗೊಳ್ಳಲು ಹೇಗೆ ಸಾಧ್ಯ?
- ಬಿಲ್ಕಿಸ್ ಬಾನೊ

ಮಾರ್ಚ್ 2002ರಲ್ಲಿ, 19 ವರ್ಷದ ಬಿಲ್ಕಿಸ್ ಯಾಕೂಬ್ ರಸೂಲ್ ಮೇಲೆ ಗುಂಪೊಂದು  ಕ್ರೂರವಾಗಿ ಅತ್ಯಾಚಾರವೆಸಗಿ, ಆಕೆಯ ಮೂರು ವರ್ಷದ ಮಗಳು ಸಲೇಹಾ ಸೇರಿದಂತೆ ಆಕೆಯ ಕುಟುಂಬದ 14 ಸದಸ್ಯರನ್ನು ಗುಜರಾತ್ ರಾಜ್ಯದ ದಾಹೋಡ್ ಜಿಲ್ಲೆಯಲ್ಲಿ ಕೊಂದು ಹಾಕಿತ್ತು. ಆ ಸಮಯದಲ್ಲಿ ಬಿಲ್ಕಿಸ್ ಐದು ತಿಂಗಳ ಗರ್ಭಿಣಿಯಾಗಿದ್ದರು.

ಲಿಮ್ಖೇಡಾ ತಾಲ್ಲೂಕಿನ ರಣಧಿಕ್ಪುರ ಗ್ರಾಮದಲ್ಲಿ ಆ ದಿನ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪುರುಷರು  ಅವರ ಹಳ್ಳಿಯವರೇ ಆಗಿದ್ದರು. ಅವರಿಗೆ ಅವರೆಲ್ಲರ ಪರಿಚಯವಿತ್ತು.

2003ರ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆ ನಡೆಸಿತ್ತು.  ಒಂದು ತಿಂಗಳ ನಂತರ ಆರೋಪಿಗಳನ್ನು ಬಂಧಿಸಲಾಯಿತು. ಆಗಸ್ಟ್ 2004 ರಲ್ಲಿ, ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಿತು, ಅಲ್ಲಿ ಸುಮಾರು ನಾಲ್ಕು ವರ್ಷಗಳ ನಂತರ, ಜನವರಿ 2008 ರಲ್ಲಿ, ವಿಶೇಷ ಸಿಬಿಐ ನ್ಯಾಯಾಲಯವು 20 ಆರೋಪಿಗಳಲ್ಲಿ 13 ಜನರನ್ನು ತಪ್ಪಿತಸ್ಥರೆಂದು ಘೋಷಿಸಿತು. ಈ ಪೈಕಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಮೇ 2017ರಲ್ಲಿ, ಬಾಂಬೆ ಹೈಕೋರ್ಟ್ ಏಳು ಜನರ ಖುಲಾಸೆಯನ್ನು ರದ್ದುಗೊಳಿಸಿತು ಮತ್ತು ಶಿಕ್ಷೆಯನ್ನು ಅನುಭವಿಸಿದ ಎಲ್ಲಾ 11 ಜನರ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯಿತು.

ಐದು ವರ್ಷಗಳ ನಂತರ, ಆಗಸ್ಟ್ 15, 2022ರಂದು, ಗುಜರಾತ್ ಸರ್ಕಾರ ರಚಿಸಿದ ಜೈಲು ಸಲಹಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ 11 ಜನರಿಗೆ ವಿನಾಯಿತಿ ನೀಡಲಾಯಿತು.

ಅವರ ಬಿಡುಗಡೆಯ ಕಾನೂನುಬದ್ಧತೆಯ ಬಗ್ಗೆ ಹಲವಾರು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇಲ್ಲಿ ಕವಿ ಬಿಲ್ಕಿಸ್ ಜೊತೆ ಮಾತನಾಡುತ್ತಾ ತನ್ನ ಸ್ವಂತ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಪ್ರತಿಷ್ಟಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯನ್ನು ಆಲಿಸಿ

ನನ್ನ ಹೆಸರು ಬಿಲ್ಕಿಸ್‌ ಎಂದುಕೊಳ್ಳೋಣ

ನಿನ್ನ ಹೆಸರಿನಲ್ಲಿ ಅಂತಹದ್ದೇನಿದೆ ಬಿಲ್ಕಿಸ್?
ಅದೇಕೆ ನನ್ನ ಕಾವ್ಯದಲ್ಲಿ ಗಾಯದಂತೆ ಉರಿಯುತ್ತದೆ?
ಅದೇಕೆ ನಿನ್ನ ಹೆಸರು ಕೇಳಿದರೆ
ಕವಿತೆಯ ಜಡ ಕಿವಿಗಳಿಂದ ರಕ್ತ ಸುರಿಯಲಾರಂಭಿಸುತ್ತದೆ.

ನಿನ್ನ ಹೆಸರಿನಲ್ಲಿ ಅಂತಹದ್ದೇನಿದೆ ಬಿಲ್ಕಿಸ್?
ಅದೇಕೆ ಸಡಿಲ ನಾಲಿಗೆಗಳು ಹೀಗೆ ಮರಗಟ್ಟಿ ಹೋಗಿವೆ?
ಹೇಳಿಕೆಗಳೇಕೆ ಅರ್ಧದಲ್ಲೇ ನಿಲ್ಲುತ್ತಿವೆ?

ನಿನ್ನ ಕಣ್ಣುಗಳಲ್ಲಿನ ದುಃಖದ ಕುದಿಯುವ ಸೂರ್ಯ
ನನ್ನ ಕಣ್ಣುಗಳಲ್ಲಿ ಪ್ರತಿಫಲಿಸಿ ಕಸಿವಿಸಿಗೊಳಿಸುತ್ತದೆ
ಆ ಮೂಲಕ ನಿನ್ನ ನೋವಿನ ಆಳ ನಾ ಕಾಣಬಲ್ಲೆ,

ಆ ಅಂತ್ಯವಿಲ್ಲದ ಮರುಭೂಮಿಯು ಬೆಂಕಿಯುಗುಳುವ ದಾರಿ
ಮತ್ತು ನೆನಪುಗಳ ಅಲೆಯೆಬ್ಬಿಸುವ ಕಡಲು,
ಹೃದಯಗಳನ್ನು ಕೊಯ್ದು ಹಾಕುವಂತಹ ಕಣ್ಣುಗಳಲ್ಲಿ ಅವು ಸೆರೆಯಾಗುತ್ತವೆ,

ನನ್ನ ನಂಬಿಕೆಗಳನ್ನೆಲ್ಲ ಹುಸಿಗೊಳಿಸುವವು ಅವು,
ಮತ್ತು ಈ ಕಪಟ ನಾಗರಿಕತೆಯ ಅಡಿಪಾಯವನ್ನೇ ಕಿತ್ತೆಸೆಯುತ್ತದೆ
ಈ ನಾಗರಿಕತೆಯೆನ್ನುವುದು ರಟ್ಟಿನ ಕಟ್ಟಡ, ಶತಮಾನಗಳಿಂದ ಮಾರಾಟವಾದ ಸುಳ್ಳು.

ಅಷ್ಟಕ್ಕೂ ನಿನ್ನ ಹೆಸರಲ್ಲೇನಿದೆ ಬಿಲ್ಕಿಸ್
ಶಾಯಿಯನ್ನು ಹಿಮ್ಮೆಟ್ಟಿಸುವಂತಹದ್ದು
ನ್ಯಾಯದ ಮುಖವು ಕಳಂಕಿತವಾಗಿ ಕಾಣುವಂತಹದ್ದು?

ಈ ಭೂಮಿ ನಿನ್ನ ರಕ್ತದಲ್ಲಿ ತೊಯ್ದು ಒಡೆದಿದೆ
ಸಲೇಹಾಳ ಮೃದುವಾದ, ಒಡೆದ ತಲೆಯ ಹಾಗೆ
ಒಂದು ದಿನ ಅದು ನಾಚಿಕೆಯಿಂದ ಸಿಡಿಯುತ್ತದೆ.

ದೇಹದ ಮೇಲೆ ಉಳಿದ ಬಟ್ಟೆಯಲ್ಲೇ
ನೀನು ಹತ್ತಿದ ಬೆಟ್ಟ
ಅಂದು ಬೆತ್ತಲೆಯಾಗಿ ನಿಲ್ಲಲಿದೆ

ಅದರ ಮೇಲೆ ಯುಗಯುಗಾಂತರಗಳವರೆಗೆ ಒಂದು ಹುಲ್ಲು ಕೂಡ ಬೆಳೆಯುವುದಿಲ್ಲ
ಮತ್ತು ಈ ಭೂಮಿಯ ಮೂಲಕ ಹಾದುಹೋಗುವ ಗಾಳಿ
ಅಸಹಾಯಕತೆಯ ಶಾಪ ಹರಡುತ್ತದೆ.

ಅಷ್ಟಕ್ಕೂ ನಿನ್ನ ಹೆಸರಲ್ಲೇನಿದೆ ಬಿಲ್ಕಿಸ್
ಬ್ರಹ್ಮಾಂಡದ ತುಂಬಾ ಅಲೆಯುವ
ನನ್ನ ಪೌರುಷದ ಪೆನ್ನು
ನಡುವಿನಲ್ಲಿಯೇ ಬರೆಯಲಾಗದೆ ಸಿಲುಕಿಕೊಳ್ಳುತ್ತದೆ
ನೈತಿಕತೆಯ ಹೊತ್ತ ಪೆನ್ನಿನ ತುದಿಯನ್ನು ಮುರಿಯುತ್ತದೆ

ಈ ಕವಿತೆಯೂ ಹಾಗೇ ಎನ್ನಿಸುತ್ತಿದೆ
ತಾನು ವ್ಯರ್ಥವೆಂದು ಸಾಬೀತುಪಡಿಸುತ್ತಿದೆ
- ನಿರ್ಜೀವ ಕ್ಷಮೆಯಂತೆ, ಪ್ರಶ್ನಾರ್ಹ ಕಾನೂನು ವಿಷಯದಂತೆ -
ಹೌದು, ನೀನು ಅದನ್ನು ಸ್ಪರ್ಶಿಸಿ ನಿನ್ನ ಧೈರ್ಯದ ಬದುಕನ್ನು ಈ ಕವಿತೆಯಲ್ಲಿ ಉಸಿರಾಡಿದರೆ ಅದಕ್ಕೆ ಜೀವ ಬರುಬಹುದು.

ಈ ಕವಿತೆಗೆ ನಿನ್ನ ಹೆಸರನ್ನು ನೀಡು, ಬಿಲ್ಕಿಸ್.
ಹೆಸರಷ್ಟೇ ಅಲ್ಲ, ಈ ಹೆಸರಿನೊಳಗೆ ಉತ್ಸಾಹವನ್ನೂ ತುಂಬು,
ಜರ್ಜರಗೊಂಡಿರುವ ನಮ್ಮೆಲ್ಲರ ಚೇತನಕ್ಕೆ ಜೀವ ತುಂಬು ಬಿಲ್ಕಿಸ್.

ನನ್ನ ಬೇರುಗಳಿಂದ ಬೇರ್ಪಟ್ಟ ಹೆಸರುಗಳಿಗೆ ಶಕ್ತಿ ಕೊಡು.
ನನ್ನ ಕಠಿಣ ಪ್ರಯತ್ನಗಳಿಗೆ ಮಳೆಯಂತೆ ಬೋರ್ಗರೆಯುವುದನ್ನು ಕಲಿಸು.

ಬಡವಾಗಿ ನಲುಗುತ್ತಿರುವ ನನ್ನ ಭಾಷೆಯೊಳಗೆ
ಗಟ್ಟಿ ಶಬ್ದಗಳ ತುಂಬು
ಅದು ನಿನ್ನ ಮೃದುವಾದ, ಸುಮಧುರ ಭಾಷಣದಂತಿರಬೇಕು
ಧೈರ್ಯಕ್ಕೆ ಇನ್ನೊಂದು ಹೆಸರಾಗಬೇಕು

ಸ್ವಾತಂತ್ರ್ಯಕ್ಕೆ ಬಿಲ್ಕಿಸ್ ಎಂಬುದು ಅಡ್ಡಹೆಸರು.
ನ್ಯಾಯ ಪಡೆಯುವ ಹೋರಾಟ ನಿನ್ನ ಹೆಸರು
ಪ್ರತೀಕಾರ ಮೊಂಡುತನದ ವಿರುದ್ಧವಾಗಿದೆ, ಬಿಲ್ಕಿಸ್.

ಮತ್ತು ಬಿಲ್ಕಿಸ್‌ ಅವುಗಳನ್ನು ನಿನ್ನ ನೋಟದಿಂದ ಸುಟ್ಟುಬಿಡು
ಸುಟ್ಟ ಕರಿಯು ನ್ಯಾಯದ ಕಣ್ಣಿನ ಕಾಡಿಗೆಯಾಗಲಿ

ಬಿಲ್ಕಿಸ್‌ ಎಂದರೆ ಪ್ರಾಸ, ಬಿಲ್ಕಿಸ್‌ ಎಂದರೆ ಲಯ
ಬಿಲ್ಕಿಸ್‌ ಎಂದರೆ ಹಾಳೆ-ಲೇಖನಿಯ ನಡುವಿನ ಅಂತರ ಇಲ್ಲವಾಗಿಸುವವಳು
ಬಿಲ್ಕಿಸ್‌ ಎಂದರೆ ಎದೆಯೊಳಗೆ ಉಳಿದ ಸುಂದರ ಹಾಡು

ಆ ಹೆಸರಿನ ಹಾರಾಟ ದೂರದ ತೆರೆದ ಆಕಾಶದಲ್ಲಿರಲಿ;
ಮಾನವೀಯತೆಯ ಬಿಳಿ ಪಾರಿವಾಳಗಳು
ಈ ರಕ್ತಸಿಕ್ತ ಭೂಮಿಯನ್ನು ಆವರಿಸಲಿ

ಅವುಗಳ ನೆರಳಿನಲ್ಲಿ ವಿಶ್ರಾಂತಿ ಪಡೆದುಕೋ ಬಿಲ್ಕಿಸ್
ಆಗ ನಿನ್ನ ಹೆಸರಿನ ಒಳಗೆ ಅಡಗಿರುವ ಎಲ್ಲವನ್ನೂ ಹೇಳಿಕೋ
ಬಿಲ್ಕಿಸ್.
ಒಂದೇ ಒಂದು ಹಾರೈಕೆ ಬಿಲ್ಕಿಸ್! ನನ್ನ ಹೆಸರೂ ಆಗಿರಲಿ ಬಿಲ್ಕಿಸ್ ಎಂದು.

ಅನುವಾದ: ಶಂಕರ. ಎನ್. ಕೆಂಚನೂರು

Poem : Hemang Ashwinkumar

Hemang Ashwinkumar is a poet, fiction writer, translator, editor and critic. He works in Gujarati and English. His English translations include Poetic Refractions (2012), Thirsty Fish and other Stories (2013), and a Gujarati novel Vultures (2022). He has also translated Arun Kolatkar’s Kala Ghoda Poems (2020), Sarpa Satra (2021) and Jejuri (2021) into Gujarati.

Other stories by Hemang Ashwinkumar
Illustration : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Editor : Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru