ಫೆಬ್ರವರಿ 18, 1983ರಂದು ನೆಲ್ಲಿ ಹತ್ಯಾಕಾಂಡ ನಡೆದಾಗ ರಶೀದ್ ಬೇಗಂಗೆ ಕೇವಲ ಎಂಟು ವರ್ಷ. “ಅವರು ಎಲ್ಲೆಡೆಯಿಂದ ಜನರನ್ನು ಸುತ್ತುವರೆದು ನಂತರ ಒಂದು ಕಡೆಗೆ ಓಡಿಸತೊಡಗಿದರು. ಹಾಗೆ ಓಡುತ್ತಿರುವವರ ಮೇಲೆ ಬಾಣಗಳನ್ನು ಬಿಟ್ಟರು; ಕೆಲವರ ಕೈಯಲ್ಲಿ ಬಂದೂಕು ಕೂಡಾ ಇತ್ತು. ಈ ರೀತಿಯಾಗಿ ಅವರು ಹಲವರನ್ನು ಕೊಂದರು. ಅಲ್ಲಿ ಕೆಲವರ ಕುತ್ತಿಗೆ ಕತ್ತರಿಸಲ್ಪಟ್ಟಿತ್ತು. ಕೆಲವರ ಎದೆಯ ಮೇಲೆ ಹಲ್ಲೆ ನಡೆಸಲಾಗಿತ್ತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಆ ದಿನ, ಆರು ಗಂಟೆಗಳ ಅವಧಿಯಲ್ಲಿ, ಮಧ್ಯ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ನೆಲ್ಲಿ (ಅಥವಾ ನೆಲಿ) ಪ್ರದೇಶದಲ್ಲಿ ಬಂಗಾಳ ಮೂಲದ ಸಾವಿರಾರು ಮುಸ್ಲಿಮರನ್ನು ಕೊಲ್ಲಲಾಯಿತು. ಅಲಿಸಿಂಗಾ, ಬಸುಂಧರಿ ಜಲಾಹ್, ಬೋರ್ಬೋರಿ, ಭುಗ್ದುಬಾ ಬಿಲ್, ಭುಗ್ದುಬಾ ಹಬಿ, ಖುಲಾಪಥರ್, ಮತಿಪರ್ಬತ್, ಮುಲಾಧಾರಿ, ನೆಲಿ ಮತ್ತು ಸಿಲ್ಭೇಟಾ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಕೆಲವು ಗ್ರಾಮಗಳಾಗಿವೆ. ಅಧಿಕೃತ ವರದಿಗಳು ಸಾವಿನ ಸಂಖ್ಯೆಯನ್ನು ಸುಮಾರು 2,000 ಎಂದು ಹೇಳುತ್ತವೆ, ಆದರೆ ಅನಧಿಕೃತ ಅಂದಾಜಿನ ಪ್ರಕಾರ ಇದು 3,000-5,000.
ಮನೆಯಲ್ಲಿ ರೂಮಿ ಎಂದು ಕರೆಯಲ್ಪಡುವ ರಶೀದಾ ಹತ್ಯಾಕಾಂಡದಲ್ಲಿ ಬದುಕುಳಿದವರು. ಆದರೆ ತನ್ನ ನಾಲ್ವರು ತಂಗಿಯರು ಸಾಯುವುದನ್ನು ಮತ್ತು ತಾಯಿ ತೀವ್ರವಾಗಿ ಗಾಯಗೊಂಡಿರುವುದನ್ನು ಅವರು ಕಣ್ಣಾರೆ ನೋಡಬೇಕಾಯಿತು. "ಅವರು ನನ್ನ ಮೇಲೆ ಈಟಿಯಿಂದ ದಾಳಿ ಮಾಡಿದರು ಮತ್ತು ನನ್ನ ಸೊಂಟಕ್ಕೆ ಗುಂಡು ಹಾರಿಸಿದರು. ಒಂದು ಗುಂಡು ನನ್ನ ಕಾಲನ್ನು ಸೀಳಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
1979ರಿಂದ 1985ರವರೆಗೆ ಅಸ್ಸಾಂನಲ್ಲಿ ನಡೆದ ವಿದೇಶಿಯರ ವಿರುದ್ಧದ ಆಂದೋಲನದಿಂದ ಭುಗಿಲೆದ್ದ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಈ ಹತ್ಯೆಗಳು ನಡೆದವು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್ಯು) ಮತ್ತು ಅದರ ಮಿತ್ರಪಕ್ಷಗಳು ಇದರ ನೇತೃತ್ವ ವಹಿಸಿದ್ದವು. ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಹಾಕಬೇಕು ಮತ್ತು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕು ಎನ್ನುವುದು ಅವರ ಒತ್ತಾಯವಾಗಿತ್ತು.


