ಒಂದು ಕಾಲದಲ್ಲಿ ಯಥೇಚ್ಛವಾಗಿದ್ದ ಅಂತರ್ಜಲವನ್ನು ನೆನೆಸಿಕೊಳ್ಳುತ್ತಾ ಅನಂತಪುರ ಜಿಲ್ಲೆಯ ನಾಗರೂರಿನ ರೈತರು ಆ ಕಾಲವು ಮತ್ತೆ ಮರಳಿಬರಬೇಕೆಂದು ಹಂಬಲಿಸುತ್ತಾರೆ. ಹಿಂದಿನ ದಿನಗಳಲ್ಲಿದ್ದ ಚೆನ್ನಾಗಿದ್ದ ಜೀವನಮಟ್ಟವನ್ನು ನೆನಪುಗಳಲ್ಲೂ ಬಿಡಲು ಸಾಧ್ಯವಾಗುತ್ತಿಲ್ಲವೆಂಬಂತೆ 2007 ರ ಹಿಂದಿನ ಕಾಲವನ್ನೂ ಕೂಡ ಇಲ್ಲಿಯ ಜನರು ಕೆಲವೊಮ್ಮೆ ವರ್ತಮಾನಕಾಲವೆಂಬಂತೆ ಮಾತನಾಡುತ್ತಾರೆ.

2007 ರ ಆಸುಪಾಸಿನಲ್ಲಿ ಮಳೆಯ ಪ್ರಮಾಣವು ಸಾಕಷ್ಟು ಕಮ್ಮಿಯಾಗಿದ್ದರೂ ಕೂಡ ನಾಗರೂರಿನ ಸರೋವರಗಳು ಕೊನೆಯ ಬಾರಿಗೆ ಉಕ್ಕಿಹರಿಯುತ್ತಿದ್ದವು. ''ಎನ್. ಟಿ. ರಾಮರಾವ್ (ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ) ರ ಕಾಲದಲ್ಲಿ ಮಳೆಯು ಕಾಲಕಾಲಕ್ಕೆ ಸರಿಯಾಗಿ ಆಗುತ್ತಿತ್ತು. ನಂತರ ವೈ. ಎಸ್. ರಾಜಶೇಖರ ರೆಡ್ಡಿಯವರು ಬಂದಾಗ (ಮೇ 2004 ರಲ್ಲಿ ಅಧಿಕಾರಕ್ಕೆ ಬಂದಾಗ) ಸರೋವರಗಳ ನೀರು ಒಂದು ವಾರದ ಮಟ್ಟಿಗೆ ಉಕ್ಕಿಹರಿದವು. ಅದೇ ಕೊನೆ'', ಎನ್ನುತ್ತಿದ್ದಾರೆ 42 ರ ಪ್ರಾಯದ ಕೃಷಿಕ ರಾಮಕೃಷ್ಣ ನಾಯ್ಡು.
PHOTO • Sahith M.

''ಎನ್. ಟಿ. ರಾಮರಾವ್ ರ ಕಾಲದಲ್ಲಿ ಕಾಲಕಾಲಕ್ಕೆ ಮಳೆಯಾಗುತ್ತಿತ್ತು'', ಬರವು ಸತತವಾಗಿ ತಮ್ಮ ಹಳ್ಳಿಯಲ್ಲಿ ನೆಲೆಯೂರುವ ಮುನ್ನದ ದಿನಗಳನ್ನು ನೆನೆಸಿಕೊಳ್ಳುತ್ತಿರುವ ವಿ. ರಾಮಕೃಷ್ಣ ನಾಯ್ಡು

ಹಲವು ವರ್ಷಗಳ ಕಾಲ ಸುರಿದ ಕಮ್ಮಿ ಮಳೆಯ ಬೆನ್ನಿಗೇ ಒಂದು ವರ್ಷ ಬಂದ ಬಹಳ ಒಳ್ಳೆಯ ವರ್ಷಧಾರೆಯು ಬಾವಿಗಳನ್ನು ತುಂಬಿಸಿದ ಮತ್ತು ಅಂತರ್ಜಲ ಮಟ್ಟವನ್ನು ಏರಿಸಿದ ಹೊರತಾಗಿಯೂ ಪರಿಸ್ಥಿತಿಗಳು ನಿಧಾನವಾಗಿ ಬದಲಾಗುತ್ತಲೇ ಹೋದವು. 2011 ರ ಹಿಂದಿನ ಕೆಲ ವರ್ಷಗಳಲ್ಲಿ ನಾಗರೂರಿನಲ್ಲಿ ದಾಖಲಾದ ವಾರ್ಷಿಕ ಮಳೆಯ ಪ್ರಮಾಣವು (ಅನಂತಪುರದ ಅಂತರ್ಜಲ ಮತ್ತು ಜಲಪರಿಶೋಧನಾ ಇಲಾಖೆಯು ದಾಖಲಿಸಿದಂತೆ) 700 - 800 ಮಿಲಿಮೀಟರ್ ಗಳಷ್ಟಿತ್ತು. ಆದರೆ ಜೂನ್ 2011 ರ ನಂತರ ಈ ಪ್ರದೇಶದಲ್ಲಿ ದಾಖಲಾದ ಗರಿಷ್ಠ ಮಳೆಯ ಪ್ರಮಾಣವೆಂದರೆ 607 ಮಿಲಿಮೀಟರ್ (ಜೂನ್ 2015 - ಮೇ 2016). ಇನ್ನು ಈ ಗರಿಷ್ಠ ಮಳೆಯ ಪ್ರಮಾಣವು ನಂತರದ ವರ್ಷಗಳಲ್ಲಿ ಕೇವಲ 400 - 530 ಮಿಲಿಮೀಟರ್ ಅನ್ನು ತಲುಪಿತ್ತು.

ಆದರೆ ಅನಂತಪುರ ಜಿಲ್ಲೆಯ 750 ಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ನೀರಿನ ಪ್ರಮಾಣದಲ್ಲಾಗುತ್ತಿದ್ದ ಇಳಿಕೆಯು 1990 ರಷ್ಟು ಹಿಂದೆಯೇ ಆರಂಭವಾಗಿತ್ತು ಎನ್ನುವುದು ಸತ್ಯ. ಈ ದಶಕದಲ್ಲೇ ಸುಮಾರು 2300 ರಷ್ಟು ಜನಸಂಖ್ಯೆಯಿರುವ ಅನಂತಪುರದ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳಾದ ರಾಗಿ ಮತ್ತು ನಿಂಬೆಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳಾದ ನೆಲಗಡಲೆ ಮತ್ತು ಕಿತ್ತಳೆಗಳನ್ನು ಬೆಳೆಯಲಾರಂಭಿಸಿದ್ದರು. ''ಆಗ ಅದೊಂದು ಟ್ರೆಂಡ್ ಆಗಿತ್ತು. ವಾಣಿಜ್ಯ ಬೆಳೆಗಳು ಹೆಚ್ಚಿನ ಲಾಭವನ್ನು ತರುತ್ತಿದ್ದರಿಂದ ಎಲ್ಲರೂ ಇಂಥಾ ಬೆಳೆಗಳನ್ನೇ ಬೆಳೆಯತೊಡಗಿದ್ದರು'', ಎನ್ನುತ್ತಾರೆ ಕೃಷಿಕರಾದ ಸುನಿಲ್ ಬಾಬು.

PHOTO • Sahith M.

ತಮ್ಮ ಜಮೀನಿನಲ್ಲಿ ನೀರಾವರಿಗಾಗಿ 2 ಲಕ್ಷ ರೂಪಾಯಿಗಳನ್ನು ಕೊಳವೆಗಳಿಗೆ ಸೇರಿದಂತೆ, ಒಟ್ಟು 10 ಲಕ್ಷ ರೂಪಾಯಿಗಳನ್ನು ಕೊಳವೆಬಾವಿಗಳನ್ನು ಕೊರೆಸಲೆಂದೇ ಕೆ. ಶ್ರೀನಿವಾಸುಲು ಮತ್ತು ಅವರ ಕುಟುಂಬವು ವಿನಿಯೋಗಿಸಿದೆ

ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣವು ಇಳಿಮುಖವಾಗುತ್ತಿರುವ ಜೊತೆಗೇ, ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಬೇಡುವ ವಾಣಿಜ್ಯ ಬೆಳೆಗಳತ್ತ ರೈತರು ವಾಲುವುದೆಂದರೆ ಸಹಜವಾಗಿಯೇ ಕೊಳವೆಬಾವಿಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಅದಕ್ಕಿಂತಲೂ ಹೆಚ್ಚಿನ ಆಳದಲ್ಲಿರುವ ಅಂತರ್ಜಲವನ್ನು ತೆಗೆಯುವ ಹಪಾಹಪಿಯೂ ಹೆಚ್ಚಾಗತೊಡಗಿತ್ತು. ''40 ವರ್ಷಗಳ ಹಿಂದೆ ಕೊಳವೆಬಾವಿಗಳೇ ಇರಲಿಲ್ಲ. ಆಗ ಇದ್ದಿದ್ದು ಬಾವಿಗಳು (ನಾಗರಿಕರೇ ಕೈಯಾರೆ ಕೊರೆದವುಗಳು) ಮಾತ್ರ. ಬಾವಿಗಾಗಿಯೂ ಕೂಡ ನಾವು ಕೇವಲ 10 ಅಡಿಗಳಷ್ಟು ಆಳಕ್ಕೆ ಹೋದರೂ ನಮಗೆ ನೀರು ಸಿಗುತ್ತಿತ್ತು'', ಎಂದು ಕಳೆದಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ 70 ರ ಪ್ರಾಯದ ಕೃಷಿಕರೂ, ಸುನಿಲ್ ಬಾಬುರವರ ತಂದೆಯೂ ಆದ ಕೆ. ಶ್ರೀನಿವಾಸುಲು.

ಆದರೆ ಅಂತರ್ಜಲ ಮಟ್ಟದಲ್ಲಾಗುತ್ತಿರುವ ತೀವ್ರ ಇಳಿಕೆ ಮತ್ತು ಅಂತರ್ಜಲವನ್ನು ಮತ್ತೆ ತುಂಬಿಸುವ ಕೆಲಸಗಳು ಪ್ರತೀ ವರ್ಷವೂ ಕಮ್ಮಿಯಾಗುತ್ತಿರುವುದರಿಂದ ಸದ್ಯ ಇಲ್ಲಿಯ ಕೊಳವೆಬಾವಿಗಳು ನೀರನ್ನು ಪಡೆಯಲು 700 - 800 ಅಡಿಗಳ ಆಳದವರೆಗೆ ಹೋಗುತ್ತಿವೆ. ಇಲ್ಲಿಯ ಅಂತರ್ಜಲ ಮಟ್ಟವು ಅನಂತಪುರದ ಅಂತರ್ಜಲ ಮತ್ತು ಜಲಪರಿಶೋಧನಾ ಇಲಾಖೆಯು 1972 ರಲ್ಲಿ ದಾಖಲಿಸಲು ಪ್ರಾರಂಭಿಸಿದಾಗಿನಿಂದ ಅತೀ ಕಡಿಮೆ ಮಟ್ಟಕ್ಕೆ ಇಳಿದುಹೋಗಿದೆ ಎಂಬುದು ಗಮನಾರ್ಹ. ಇನ್ನು 1000 ಅಡಿಗಳಿಗೂ ಹೆಚ್ಚಿನ ಆಳವನ್ನು ತಲುಪಿಯೂ ಕೂಡ ನೀರು ಸಿಗದ ಅದೆಷ್ಟೋ ರೈತರು ನಾಗರೂರಿನಲ್ಲಿದ್ದಾರೆ.

2009 ರಲ್ಲಿ ಎಮ್. ಎಸ್. ಸ್ವಾಮಿನಾಥನ್ ಸಂಶೋಧನಾ ಸಂಸ್ಥೆಯು ನಡೆಸಿದ ಅಧ್ಯಯನದ ಪ್ರಕಾರ ಕ್ಷಿಪ್ರಗತಿಯಲ್ಲಿ ಏರುತ್ತಿರುವ ಕೊಳವೆಬಾವಿ ನೀರಾವರಿಯು ಜಿಲ್ಲೆಯ ಅಂತರ್ಜಲದ ಮಟ್ಟವನ್ನು ಇಳಿಸಿದ್ದಲ್ಲದೆ ತೆರೆದ ಬಾವಿಗಳನ್ನೂ ಕೂಡ ಒಣಗುವಂತೆ ಮಾಡುತ್ತಿವೆ ಎಂಬುದನ್ನು ಕಂಡುಕೊಳ್ಳಲಾಗಿದೆ. ''ಅಂತರ್ಜಲದ ಬಳಕೆಯ ಪ್ರಮಾಣವನ್ನು ಗಮನಿಸಿದರೆ ಜಿಲ್ಲೆಯಲ್ಲಿರುವ 63 ಮಂಡಲ್ ಗಳಲ್ಲಿ 12 ಮಾತ್ರ 'ಸುರಕ್ಷಿತ' ಎನ್ನುವಂತಿದೆ'', ಎಂದು ಈ ಅಧ್ಯಯನ ವರದಿಯು ಹೇಳಿದೆ.

PHOTO • Sahith M.

ನಾಗರೂರಿನಲ್ಲಿ ಎಷ್ಟೆಷ್ಟು ಆಳದಲ್ಲಿ ಅಂತರ್ಜಲದ ಲಭ್ಯತೆಯಿದೆ ಎಂಬುದನ್ನು ತೋರಿಸುತ್ತಿರುವ ರೇಖಾನಕ್ಷೆ - 2001-02 ರಲ್ಲಿ ಇದು ಸುಮಾರು 10 ಮೀಟರ್ ಆದರೆ, 2017 ರಲ್ಲಿ 25 ಮೀಟರ್ ಗಿಂತಲೂ ಹೆಚ್ಚಾಗಿದೆ. ನೀರು ದಕ್ಕುತ್ತಿದ್ದ ಆಳವು ಕೆಲವು ವರ್ಷಗಳಲ್ಲಿ ಕಮ್ಮಿಯಾಗಿರುವುದು ಸತ್ಯವಾದರೂ ಸರಾಸರಿಗಳನ್ನು ಅವಲೋಕಿಸಿದರೆ ಇಳಿಮುಖವಾಗಿರುವುದು ಸ್ಪಷ್ಟ (ಮೂಲ: ಅಂತರ್ಜಲ ಮತ್ತು ಜಲಪರಿಶೋಧನಾ ಇಲಾಖೆ, ಅನಂತಪುರ). ಬಲ: ತನ್ನ ಜಮೀನಿನಲ್ಲಿ ವೈಫಲ್ಯವನ್ನು ಕಂಡ ಕೊಳವೆಬಾವಿಯೊಂದರ ತೂತನ್ನು ತೋರಿಸುತ್ತಿರುವ ಕೆ. ಶ್ರೀನಿವಾಸುಲು

ಶ್ರೀನಿವಾಸುಲು ತಮ್ಮ ಒಂಭತ್ತು ಎಕರೆಗಳ ಭೂಮಿಯಲ್ಲಿ ತಲಾ 1 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಒಟ್ಟು ಎಂಟು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ಇವರು ಮತ್ತು ಇವರ ಮೂವರು ಗಂಡುಮಕ್ಕಳು ಖಾಸಗಿ ಲೇವಾದೇವಿಯವರಿಂದ ಸುಮಾರು 5 ಲಕ್ಷಗಳಷ್ಟು ಸಾಲವನ್ನು ಮಾಡಿಕೊಂಡಿದ್ದಾರೆ. ಹೀಗೆ ಕೊರೆಸಿದ ಎಂಟು ಕೊಳವೆಬಾವಿಗಳಲ್ಲಿ ಒಂದು ಮಾತ್ರ ಸದ್ಯ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದೆ. ಈ ಕೊಳವೆಬಾವಿಯು ಇವರ ಜಮೀನಿನಿಂದ 2 ಕಿಲೋಮೀಟರುಗಳ ದೂರದಲ್ಲಿದ್ದು ಇಲ್ಲಿಂದ ಕೊಳವೆಗಳಲ್ಲಿ ನೀರನ್ನು ತಮ್ಮ ಕೃಷಿಭೂಮಿಗೆ ಸಾಗಿಸಲು ಕುಟುಂಬವು ಮತ್ತೆ 2 ಲಕ್ಷಗಳಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ವ್ಯಯಿಸಿದೆ. ''ಇನ್ನೇನು ಫಲ ನೀಡಲು ನಮ್ಮ ಬಾಯಿಯನ್ನು ತಲುಪಲಿವೆ ಎಂಬಂತಿರುವ ಬೆಳೆಗಳನ್ನು ರಕ್ಷಿಸಲು ನಾವು ಮಾಡುತ್ತಿರುವ ಪ್ರಯತ್ನಗಳಿವು'', ಎನ್ನುತ್ತಿದ್ದಾರೆ ಶ್ರೀನಿವಾಸುಲು.

ಹೀಗೆ ಶ್ರೀನಿವಾಸುಲುರವರಂತಹ ಹಲವಾರು ಹತಾಶ ರೈತರು ನೀರು ಸಿಕ್ಕೇ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಳವೆಬಾವಿಗಳನ್ನು ಕೊರೆಸಿದರ ಪರಿಣಾಮವಾಗಿ 2013 ರಲ್ಲಿ ಸುಮಾರು 2 ಲಕ್ಷ ಕೊಳವೆಬಾವಿಗಳು ಈ ಜಿಲ್ಲೆಯೊಂದರಲ್ಲೇ ಕೊರೆಯಲ್ಪಟ್ಟಿವೆ. ಡಾ. ವೈ. ವಿ. ಮಲ್ಲರೆಡ್ಡಿಯವರು ತಮ್ಮ ಕೃತಿಯಾದ 'ಅನಂತ ಪ್ರಸ್ಥಾನಂ' ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ರೆಡ್ಡಿಯವರು ಅನಂತಪುರದ ಆಕ್ಸಿಯನ್ ಫ್ರಾಟೆರ್ನಾ ಪರಿಸರ ವಿಜ್ಞಾನ ಕೇಂದ್ರದಲ್ಲಿ ನಿರ್ದೇಶಕರಾಗಿರುವವರು. ''ಇಷ್ಟಾದರೂ 2013 ರ ಬೇಸಿಗೆಯಲ್ಲಿ ಸುಮಾರು 80,000 ಕೊಳವೆಬಾವಿಗಳು ಒಣಗಿಹೋಗಿದ್ದವು'', ಎಂದು ರೆಡ್ಡಿ ಬರೆಯುತ್ತಾರೆ.

ರೆಡ್ಡಿಯವರು ಈ ವರದಿಗಾರರಿಗೆ ಹೇಳಿರುವ ಪ್ರಕಾರ 2017 ರ ಹೊತ್ತಿಗೆ ಒಟ್ಟು ಕೊಳವೆಬಾವಿಗಳ ಸಂಖ್ಯೆಯು ಸುಮಾರು 2.5 ಲಕ್ಷಕ್ಕೇರಿದೆ. ''(ಅಂತರ್ಜಲ ಇಲಾಖೆಯ) ಅಧಿಕಾರಿಗಳು ನನಗೆ ಇತ್ತೀಚೆಗೆ ಹೇಳಿರುವ ಪ್ರಕಾರ ಕೇವಲ 20% ಕೊಳವೆ ಬಾವಿಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದು ಉಳಿದ 80% ಕೊಳವೆಬಾವಿಗಳು ಯಾವುದಕ್ಕೂ ಪ್ರಯೋಜನವಿಲ್ಲವೆಂಬಂತಾಗಿದೆ'', ಎನ್ನುತ್ತಾರೆ ಡಾ. ರೆಡ್ಡಿ.
PHOTO • Sahith M.

ನಾಗರೂರಿನಲ್ಲಿರುವ ವೈಫಲ್ಯವನ್ನು ಕಂಡ ಒಂದು ಕೊಳವೆಬಾವಿ ಮತ್ತು ಈ ರಂಧ್ರವನ್ನು ಮುಚ್ಚಲು ಇಡಲಾಗಿರುವ ಒಂದು ಕಲ್ಲು

ಈ 80 ಪ್ರತಿಶತದಲ್ಲಿ ರಾಮಕೃಷ್ಣ ನಾಯ್ಡುರವರ ಕೊಳವೆಬಾವಿಯೂ ಇದೆ. 2000 ದ ನಂತರ ತನ್ನ 5.5 ಎಕರೆ ಭೂಮಿಯಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಸಿದ್ದ ನಾಯ್ಡುರವರ ಕೊಳವೆಬಾವಿಗಳಲ್ಲಿ ಈಗ ಸುಸ್ಥಿತಿಯಲ್ಲಿರುವುದು ಒಂದು ಮಾತ್ರ. ''ಹಿಂದೆ ಬಹಳ ಮರಗಳಿದ್ದವು, ಬೇಕಾದಷ್ಟು ನೀರೂ ಇತ್ತು. ಆಗ ಸಾಲಗಳ ಹೊರೆಯಿರಲಿಲ್ಲ. 2010-11 ರ ಆಸುಪಾಸಿನಲ್ಲಿ ನಾನು ಸಾಲಗಳನ್ನು ತೆಗೆದುಕೊಳ್ಳಲಾರಂಭಿಸಿದ್ದೆ'', ಎನ್ನುತ್ತಿದ್ದಾರೆ ನಾಯ್ಡು. ಈಗ ಅವರಿಗೆ ಖಾಸಗಿ ಲೇವಾದೇವಿಯವರಿಂದ ಪಡೆದುಕೊಂಡ 2.70 ಲಕ್ಷಗಳ ಹೊರೆಯು ತಲೆಯ ಮೇಲಿದೆ ಮತ್ತು ಪ್ರತೀ ತಿಂಗಳೂ ಕೃಷಿಯಿಂದ ಸಿಗುವ ಆದಾಯದಿಂದ ಕೇವಲ 2 ಪ್ರತಿಶತ ಬಡ್ಡಿಯನ್ನಷ್ಟೇ ನೀಡಲು ಅವರಿಗೆ ಸಾಧ್ಯವಾಗುತ್ತಿದೆ. ''ರಾತ್ರಿಗಳಲ್ಲಿ ನನಗೆ ನಿದ್ದೆ ಬೀಳುತ್ತಿಲ್ಲ. ಸಾಲಗಾರರ ಬಗ್ಗೆಯೇ ನಾನು ಯೋಚಿಸುತ್ತಿರುತ್ತೇನೆ. ನಾಳೆ ಯಾರು ಸಾಲವನ್ನು ಕೇಳಿಕೊಂಡು ನನ್ನ ಮನೆಬಾಗಿಲಿಗೆ ಬರಬಹುದು? ನಾಳೆ ಹಳ್ಳಿಯ ಯಾರಿಂದ ನನ್ನ ಮಾನವು ಹರಾಜಾಗಲಿದೆ?... ಅಂತೆಲ್ಲಾ'', ಎನ್ನುವ ಅವರ ದನಿಯಲ್ಲಿ ಹತಾಶೆಯಿದೆ.

ಸಾಲದ ಹೊರೆ, ಒಂದಕ್ಕಿಂತ ಹೆಚ್ಚಿರುವ ಕೊಳವೆಬಾವಿಗಳು, ನೀರು ಮತ್ತು ಸಾಲದ ಬಗೆಗಿನ ಮುಗಿಯದ ಚಿಂತೆ ಇತ್ಯಾದಿಗಳ ಹೊರತಾಗಿಯೂ ರೈತನೊಬ್ಬ ಉತ್ತಮ ಇಳುವರಿಯನ್ನು ತೆಗೆದನೆಂದರೆ ಅನಂತಪುರದ ಕೃಷಿಮಾರುಕಟ್ಟೆಗಳಲ್ಲಾಗುವ ದರಗಳ ಭಾರೀ ಏರುಪೇರುಗಳಿಂದಾಗಿ ಲಾಭವು ಸಿಕ್ಕೇಸಿಗುತ್ತದೆ ಎಂಬ ಖಾತ್ರಿಯಿಲ್ಲ. ನಾಯ್ಡುರವರು ತಕ್ಕಮಟ್ಟಿನ ಲಾಭದ ನಿರೀಕ್ಷೆಯನ್ನು ಮಾಡಿದ್ದರೂ ಈ ವರ್ಷ ಎಪ್ರಿಲ್ ನಲ್ಲಿ ಕೊಳವೆಬಾವಿಯ ನೀರಿನಿಂದಾಗಿ ಸಾಂಬಾರಿಗಾಗಿ ಬಳಸಲಾಗುವ ಕುಂಬಳಕಾಯಿಯ ಉತ್ತಮ ಇಳುವರಿಯೇ ಸಿಕ್ಕಿತ್ತು. ''ನಾನು ಫಸಲನ್ನು ತೆಗೆಯುವ ಒಂದು ವಾರದ ಹಿಂದೆ ಬೆಲೆಯು ಕಿಲೋಗ್ರಾಮ್ ಒಂದಕ್ಕೆ 15 ರೂಪಾಯಿಗಳಿಂದ 1 ರೂಪಾಯಿಗಿಳಿದಿತ್ತು. ಹೀಗಾಗಿ ಕೊನೆಗೆ ಬೆಳೆದದ್ದನ್ನೆಲ್ಲಾ ನಾನು ಮೇಕೆಗಳಿಗೆ ತಿನ್ನಿಸಬೇಕಾಯಿತು'', ಎನ್ನುತ್ತಾರೆ ನಾಯ್ಡು.

PHOTO • Sahith M.

ತನ್ನ ಆರು ಎಕರೆ ಕೃಷಿಭೂಮಿಯಲ್ಲಿ ಆರು ಕೊಳವೆಬಾವಿಗಳನ್ನು ಕೊರೆಸಿ ಆರರಲ್ಲೂ ಸೋತುಹೋದ ಜಿ. ಶ್ರೀರಾಮುಲು ಇಂಥದ್ದೇ ಒಂದು ಕೊಳವೆಬಾವಿಯ ತೂತಿನ ಬಳಿಯಲ್ಲಿ ನಿಂತಿದ್ದಾರೆ

''ಟೊಮ್ಯಾಟೋಗೂ ಕೂಡ ಬೆಲೆಯೇ ಇರಲಿಲ್ಲ'', ಎನ್ನುತ್ತಿದ್ದಾರೆ ಡಿಸೆಂಬರ್ 2016 ರಲ್ಲಿ ಕೊಳವೆಬಾವಿಯ ನೀರಿನ ನೆರವಿನಿಂದ ಉತ್ತಮ ಇಳುವರಿಯನ್ನು ಪಡೆದ ಹೊರತಾಗಿಯೂ ಕೈಸುಟ್ಟುಕೊಂಡ ರೈತ ಜಿ. ಶ್ರೀರಾಮುಲು. ಇವರು ತನ್ನ ಆರು ಎಕರೆ ಭೂಮಿಯಲ್ಲಿ ಆರು ಕೊಳವೆಬಾವಿಗಳನ್ನು ತೆರೆಸಿ ಎಲ್ಲದರಲ್ಲೂ ನಷ್ಟ ಅನುಭವಿಸಿದ್ದಾರೆ. ಹಳ್ಳಿಯ ಹೊರಭಾಗದಲ್ಲಿರುವ ಶ್ರೀ ಸಾಯಿ ಟಿಫಿನ್ ಹೋಟೇಲಿನಲ್ಲಿ ಚಹಾ ಹೀರುತ್ತಿರುವ ಇವರು ತಮ್ಮ ಕೊಳವೆಬಾವಿಗಳ ಅನುಭವಗಳನ್ನು ನಮ್ಮೊಂದಿಗೆ ಚರ್ಚಿಸುತ್ತಿದ್ದಾರೆ. ಅಂದಹಾಗೆ ನಿತ್ಯವೂ ಮುಂಜಾನೆಯ ಸುಮಾರು 7:30 ರ ಜಾವಕ್ಕೆ ಈ ಜಾಗವು ಗ್ರಾಹಕರಿಂದ ತುಂಬಿಹೋಗುತ್ತದೆ. ಗ್ರಾಹಕರಲ್ಲಿ ಬಹಳಷ್ಟು ಮಂದಿ ಸಾಯುತ್ತಿರುವ ಬೆಳೆಗಳಿಂದಾಗಿ ತಮ್ಮ ಜಮೀನಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯದೆ ಇಲ್ಲಿಗೆ ಬಂದಿರುವ ರೈತರು ಮತ್ತು MNREGA ಯೋಜನೆಯಡಿಯಲ್ಲಿ ದಿನಕೂಲಿಗಾಗಿ ದುಡಿಯಲು ಕಾಮಗಾರಿಗಳಾಗುತ್ತಿರುವ ಸ್ಥಳಗಳಿಗೆ ಹೋಗುತ್ತಿರುವ ಕೃಷಿಕರು. ಈ ಹೋಟೇಲನ್ನು ಕುಂಬಾರರಾಗಿದ್ದ ಕೆ. ನಾಗರಾಜು 2003 ರಲ್ಲಿ ಆರಂಭಿಸಿದ್ದರು. ''ಮೊದಮೊದಲು ದಿನವೊಂದಕ್ಕೆ ನಮಗೆ 200-300 ರೂಪಾಯಿಗಳ ವ್ಯಾಪಾರವಷ್ಟೇ ಆಗುತ್ತಿತ್ತು. ಈಗ ದಿನವೊಂದಕ್ಕೆ ಸುಮಾರು 1000 ದಷ್ಟಾಗುತ್ತಿದೆ'', ಎನ್ನುತ್ತಿದ್ದಾರೆ ಅವರು.

ಇಲ್ಲಿ ಸ್ಥಳೀಯ ರೈತರು ರಾಷ್ಟ್ರರಾಜಕಾರಣದಿಂದ ಹಿಡಿದು ಕೊಳವೆಬಾವಿಗಳೊಂದಿಗಿನ ತಮ್ಮ ಅದೃಷ್ಟ, ಸಾಲಗಳವರೆಗೆ ಬಹುತೇಕ ಎಲ್ಲಾ ವಿಷಯಗಳ ಬಗ್ಗೆಯೂ ಚರ್ಚಿಸುತ್ತಾರೆ. ''ಒಂದು ಕಾಲದಲ್ಲಿ ಪಕ್ಷವು ಹಳ್ಳಿಯ ಮುಖಂಡರ ಕೈಯಲ್ಲಿತ್ತು. ಇಗ ನಾವು ಗಂಗಮ್ಮಳೊಂದಿಗಿದ್ದೇವೆ (ನೀರು)'', ಎಂದು ಹೋಟೇಲಿಗೆ ಬಂದಿರುವ ಗ್ರಾಹಕನೊಬ್ಬ ಸಿನಿಕನಾಗಿ ಹೇಳುತ್ತಿದ್ದಾನೆ. ಇದರ ಅರ್ಥವೇನೆಂದರೆ ಮುಂಚೆ ಪಕ್ಷದ ಬಣಗಳ ಮಧ್ಯೆ ಜಗಳಗಳಾಗುತ್ತಿದ್ದಾಗ ಬಂಧನಗಳಿಂದ ತಪ್ಪಿಸಿಕೊಳ್ಳಲು ಜನರು ಖರ್ಚು ಮಾಡುತ್ತಿದ್ದರೆ, ಈಗ ಎಲ್ಲರೂ ತಮ್ಮ ಹಣವನ್ನು ನೀರಿಗಾಗಿಯೇ ವ್ಯಯಿಸುತ್ತಿದ್ದಾರಂತೆ.

PHOTO • Sahith M.

ನಾಗರೂರಿನ ಹೊರಭಾಗದಲ್ಲಿರುವ ಶ್ರೀ ಸಾಯಿ ಟಿಫಿನ್ ಹೊಟೇಲ್. ಇಲ್ಲಿಗೆ ಬರುವ ಗ್ರಾಹಕರಲ್ಲಿ ಹೆಚ್ಚಿನವರು ರೈತರು. ಅದರಲ್ಲೂ ಬೆಳೆಗಳು ತಮ್ಮ ಕೈಹಿಡಿಯುತ್ತಿಲ್ಲವಾದ್ದರಿಂದ ದಿನಕೂಲಿಗಾಗಿ ಕಾರ್ಮಿಕರಂತೆ ದುಡಿಯುತ್ತಿರುವವರು

ಹೀಗೆ ಪ್ರತೀವರ್ಷವೂ ನೀರಿನ ಪ್ರಮಾಣವು ಇಳಿಕೆಯಾಗುತ್ತಾ ಹೋಗುತ್ತಿದ್ದಂತೆ ಕೃಷಿ ಎಂಬುದು ಯಾರಿಗೂ ಬೇಡವಾದ ವೃತ್ತಿಯಾಗಿ ಅನಂತಪುರದಲ್ಲಿ ಬದಲಾಗುತ್ತಿದೆ. ಬಹಳಷ್ಟು ಜನರು ತಮ್ಮ ಹೆಣ್ಣುಮಕ್ಕಳನ್ನು ಕೃಷಿಕ ಕುಟುಂಬಗಳಿಗೆ ವಿವಾಹ ಮಾಡಿಕೊಡಲು ಒಪ್ಪುತ್ತಿಲ್ಲವಂತೆ. ''ನನಗೆ ನಮ್ಮ ಹಳ್ಳಿಯ ಹೆಣ್ಣನ್ನೇ ವಿವಾಹವಾಗಬೇಕು ಎಂದಿತ್ತು. ಆದರೆ ಹುಡುಗಿಯ ಹೆತ್ತವರು ನನಗೆ ಹೈದರಾಬಾದ್ ಅಥವಾ ಇನ್ನೆಲ್ಲಾದರೂ ಖಾಸಗಿ ಕೆಲಸವೊಂದು ಸಿಕ್ಕರೆ ಮಾತ್ರ ತಾವು ಒಪ್ಪುತ್ತೇವೆ ಎಂದರು. ತಮ್ಮ ಮಗಳನ್ನು ರೈತನೊಬ್ಬನಿಗೆ ವಿವಾಹ ಮಾಡಿಕೊಡುವುದು ಅವರಿಗಿಷ್ಟವಿರಲಿಲ್ಲ'', ಎನ್ನುತ್ತಾರೆ ನಾಯ್ಡು.

ಅಂದಹಾಗೆ ನಾಯ್ಡುರವರಿಗೆ ವಕೀಲರಾಗುವ ಕನಸಿತ್ತು. ''ಬಹುಷಃ ಆ ಜೀವನವೇ ಚೆನ್ನಾಗಿರುತ್ತಿತ್ತೋ ಏನೋ. ವಕೀಲನಾಗಿ ಜನರಿಗೆ ನ್ಯಾಯ ಒದಗಿಸಲಾದರೂ ನಾನು ನೆರವಾಗುತ್ತಿದ್ದೆ'', ಎನ್ನುತ್ತಾರೆ ಆತ. ಆದರೆ ಕೌಟುಂಬಿಕ ಕಲಹಗಳಿಂದಾಗಿ ಅವರ ಓದು ಪದವಿಯ ಅರ್ಧಕ್ಕೇ ಮುಗಿದುಹೋಯಿತು. ಸದ್ಯ 42 ರ ಪ್ರಾಯದ, ಅವಿವಾಹಿತ ನಾಯ್ಡು ಇಂದಿಗೂ ತನ್ನ ನನಸಾಗದ ಕನಸಿನ ಭಾರಗಳನ್ನು ಹೊತ್ತು ಬದುಕುತ್ತಿದ್ದಾರೆ.

Rahul M.

Rahul M. is an independent journalist based in Anantapur, Andhra Pradesh, and a 2017 PARI Fellow.

Other stories by Rahul M.
Sahith M.

Sahith M. is working towards an M.Phil degree in Political Science from Hyderabad Central University.

Other stories by Sahith M.