ಕುರಿಯನ್ನು ಕೊಳ್ಳುವವರು ಚೌಕಾಸಿಗೆ ತೊಡಗಿದಾಗ ಇದರ ಬೆಲೆ ೩೫೦ ರೂ.ಗಳು. ಬೆಲೆಯನ್ನು ಕಡಿಮೆ ಮಾಡಬೇಡಿ, ಕೊರೊನಾ ಕಾರಣದಿಂದಾಗಿ ನಮಗೆ ಯಾವುದೇ ಸಂಪಾದನೆಯಿಲ್ಲ ಎಂದರು ಪ್ರಕಾಶ್ ಕೊಕ್ರೆ. ಶ್ವೇತ ವರ್ಣದ ಕುರಿಮರಿಯೊಂದನ್ನು ನೆಲದ ಮೇಲಿನ ತಕ್ಕಡಿಗೆ ಹಾಕಿದ ಅವರು, “ತೀನ್ ಕಿಲೋ (ಮೂರು ಕೆ.ಜಿ.)” ಎಂದರು. ಕೆ.ಜಿ.ಗೆ ೨೦೦ ರೂ.ಗಳಂತೆ ಮಾರಲು ಒತ್ತಾಯಿಸಿದ ಇಬ್ಬರು ಗಿರಾಕಿಗಳಿಗೆ, “ಬೆಲೆ ಬಹಳ ಕಡಿಮೆಯಾಯಿತು. ಆದರೆ ನನಗೆ ಹಣದ ಅವಶ್ಯಕತೆಯಿದೆ” ಎಂದು ತಿಳಿಸುತ್ತಾ ಕುರಿಯನ್ನು ಅದರ ಹೊಸ ಮಾಲೀಕರುಗಳಿಗೆ ಒಪ್ಪಿಸಿದರು.
ವಾಡಾ ತಾಲ್ಲೂಕಿನ ದೆಸೈಪಾಡ ಕೊಪ್ಪಲಿನ ತೆರೆದ ಬಯಲಿನಲ್ಲಿ ಜೂನ್ ಕೊನೆಯ ವಾರದ ಮಧ್ಯಾಹ್ನ, ಪ್ರಕಾಶ್ ಅವರ ಕುಟುಂಬವನ್ನು ನಾನು ಸಂಧಿಸಿದಾಗ, “ಹೋಗಲಿ ಬಿಡಿ. ನಾವು ಏನು ತಾನೇ ಮಾಡಲು ಸಾಧ್ಯ?” ಎನ್ನುತ್ತ ಪ್ರಕಾಶ್ ನಿಡುಸುಯ್ದರು. ಕೋವಿಡ್-೧೯ ಲಾಕ್ ಡೌನ್ ಪ್ರಾರಂಭಗೊಂಡು ಮೂರು ತಿಂಗಳು ಕಳೆದಿತ್ತು.
ಧಂಗರ್ ಸಮುದಾಯದ ಆರು ಅಲೆಮಾರಿ ಪಶುಪಾಲಕ ಕುಟುಂಬಗಳೊಂದಿಗೆ ಪ್ರಕಾಶ್ ಅವರ ಕುಟುಂಬವೂ ಸಹ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬಯಲೊಂದರಲ್ಲಿ, ಎರಡು ದಿನಗಳ ಮಟ್ಟಿಗೆ ಬೀಡುಬಿಟ್ಟಿತ್ತು. ಕೆಲವು ಹೆಂಗಸರು ತೊಂಡಲೆಯುವ ಚಿಕ್ಕ ಜಾನುವಾರುಗಳನ್ನು ಹಿಡಿದಿಡಲು ನೈಲಾನ್ ಬಲೆಯನ್ನು ಅಣಿಗೊಳಿಸುತ್ತಿದ್ದರು. ಧಾನ್ಯಗಳನ್ನು ತುಂಬಿದ್ದ ಮೂಟೆಗಳು, ಅಲ್ಯುಮಿನಿಯಂ ತಪ್ಪಲೆಗಳು, ಪ್ಲಾಸ್ಟಿಕ್ ಬಕೆಟ್ ಹಾಗೂ ಇತರೆ ವಸ್ತುಗಳು ಬಯಲಿನ ಸುತ್ತಲೂ ಹರಡಿದ್ದವು. ಕೆಲವು ಮಕ್ಕಳು ಕುರುಮರಿಗಳೊಂದಿಗೆ ಆಡುತ್ತಿದ್ದರು.
ಈಗ ತಾನೇ ಚೌಕಾಸಿ ಮಾಡಿದ ಬೆಲೆಗೆ ನಡೆಸಿದ ವ್ಯಾಪಾರದಂತೆಯೇ ಕುರಿಮರಿಗಳು, ಕುರಿಗಳು ಹಾಗೂ ಮೇಕೆಗಳ ಮಾರಾಟವು ಧನ್ಗರ್ ಸಮುದಾಯದ ಜೀವನ ನಿರ್ವಹಣೆಯ ಪ್ರಮುಖ ಆಧಾರವಾಗಿದೆ. ಏಳು ಕುಟುಂಬಗಳು, ಸುಮಾರು ೨೦ ಕುದುರೆಗಳೊಂದಿಗೆ ೫೦೦ ಜಾನುವಾರಗಳನ್ನು ಹೊಂದಿವೆ. ಕುರಿಗಳನ್ನು ಸಾಕುವ ಇವರು, ಹಣ ಅಥವ ದವಸ ಧಾನ್ಯಗಳಿಗೆ ಪ್ರತಿಯಾಗಿ ಅವನ್ನು ಮಾರುತ್ತಾರೆ. ಸಾಮಾನ್ಯವಾಗಿ, ಕುಟುಂಬದ ಸ್ವಂತ ಬಳಕೆಯ ಹಾಲಿಗೆಂದು ಮೇಕೆಗಳನ್ನು ಸಾಕಲಾಗುತ್ತದೆ. ಪ್ರಾಸಂಗಿಕವಾಗಿ ಅವನ್ನು ಮಾಂಸದ ವ್ಯಾಪಾರಿಗಳಿಗೆ ಮಾರುತ್ತಾರೆ. ಕೆಲವೊಮ್ಮೆ ಅವರ ಜಾನುವಾರುಗಳು ಹೊಲಗಳಲ್ಲಿ ಮೇಯುತ್ತವೆ. ಅವುಗಳ ಗೊಬ್ಬರಕ್ಕೆ ಪ್ರತಿಯಾಗಿ ಭೂಮಾಲೀಕನು ಆ ಕುಟುಂಬಗಳಿಗೆ ಆಹಾರ, ನೀರು ಹಾಗೂ ಕೆಲವು ದಿನಗಳ ಮಟ್ಟಿಗೆ ತಂಗಲು ಜಾಗವನ್ನು ಒದಗಿಸುತ್ತಾನೆ.
“ಗಂಡು ಕುರಿಯನ್ನು (ಮೆಂಧ) ಮಾತ್ರವೇ ನಾವು ಮಾರಾಟ ಮಾಡಿ, ಹೆಣ್ಣು ಕುರಿಯನ್ನು ಉಳಿಸಿಕೊಳ್ಳುತ್ತೇವೆ. ತಮ್ಮ ಜಮೀನುಗಳಲ್ಲಿ ಮೇಯಿಸಲು ಉಪಯೋಗವಾಗುತ್ತವೆಂಬ ಕಾರಣಕ್ಕಾಗಿ, ರೈತರು ನಮ್ಮಿಂದ ಕುರಿಗಳನ್ನು ಕೊಳ್ಳುತ್ತಾರೆ. ಅವುಗಳ ಗೊಬ್ಬರದಿಂದ ಮಣ್ಣು ಫಲವತ್ತಾಗುತ್ತದೆ” ಎಂಬುದಾಗಿ, ಈ ಪಶುಪಾಲಕರ ಗುಂಪಿನ ಮುಖ್ಯಸ್ಥರಾದ ೫೫ರ ವಯಸ್ಸಿನ ಪ್ರಕಾಶ್ ನಮಗೆ ತಿಳಿಸಿದರು.











