ಬಮ್ದಾಭಾಯಿಸಾ ಮೊಹಲ್ಲಾಕ್ಕೆ ಮೊಹಲ್ಲಾವೇ ನಹಕುಲ್ ಪಾಂಡೋಗೆ ಹೆಂಚು ತಯಾರಿಸಲು ಸಹಾಯ ಮಾಡಲೆಂದು ನೆರೆದಿತ್ತು. ಇದೊಂದು ಊರಿನ ಒಗ್ಗಟ್ಟಿನ ಪ್ರದರ್ಶನವಾಗಿತ್ತು, ಹೆಂಚು ತಯಾರಿಕೆಯಲ್ಲಿ ಕೂಡಿಕೊಂಡ ಜನರು ಸಮುದಾಯ ಸಹಾಯದ ಭಾಗವಾಗಿ ಉಚಿತವಾಗಿ ಇದನ್ನು ಮಾಡುತ್ತಿದ್ದರು. ನಹಕುಲ್‌ ತನಗೆ ಸಹಾಯ ಮಾಡಲು ಬಂದ ಜನರಿಗೆ ತನ್ನ ಮನೆಯಲ್ಲೇ ತಯಾರಿಸಿದ ವೈನ್‌ ನೀಡಿದ್ದನ್ನು ಹೊರತುಪಡಿಸಿದರೆ.

ಆದರೆ ಅವರೆಲ್ಲ ಸೇರಿ ಯಾಕೆ ಹೆಂಚು ತಯಾರಿಸುತ್ತಿದ್ದಾರೆ? ಎಲ್ಲಕ್ಕಿಂತಲೂ ಮುಖ್ಯವಾಗಿ ನಹಕುಲ್‌ ಮನೆಯ  ಹೆಂಚುಗಳು ಎಲ್ಲಿ ಹೋದವು? ಅವರ ಮನೆಯತ್ತ ನೋಡಿದರೆ ಅದು ತನ್ನ ಹೆಂಚುಗಳನ್ನು ಕಳೆದುಕೊಂಡು ಬೋಳಾಗಿ ನಿಂತಿತ್ತು.

“ಇದು ಸರ್ಕಾರಿ ಲೋನಿನ ಕಥೆ” ಎಂದು ಬೇಸರದಿಂದ ಹೇಳಿದರು. “ನಾನು 4,800 ರೂಪಾಯಿಗಳನ್ನು ಸಾಲವಾಗಿ ಪಡೆದು ಎರಡು ಹಸುಗಳನ್ನು ಕೊಂಡಿದ್ದೆ.” ಇದು ಸಾಲದ ಅಧಿಕೃತ ತಿರುಳು - ʼಸಾಫ್ಟ್‌ʼ ಲೋನ್‌ ಎಂದು ಕರೆಯಲಾಗುವ ಇದರಲ್ಲಿ ಒಂದಿಷ್ಟು ಸಬ್ಸಿಡಿ ಸೌಲಭ್ಯವಿರುತ್ತದೆ ಹಾಗೂ ಬಡ್ಡಿಯೂ ಕಡಿಮೆ. ಆಗಿನ ಕಾಲದಲ್ಲಿ ಆ ಹಣಕ್ಕೆ 1994ರಲ್ಲಿ ಸುರ್ಗುಜಾದ ಈ ಭಾಗದಲ್ಲಿ ನಿಜವಾಗಿಯೂ ಎರಡು ಹಸುಗಳನ್ನು ಖರೀದಿಸಬಹುದಿತ್ತು.

ನಹಕುಲ್‌ ಅವರಿಗೆ ಮೂಲತಃ ಸಾಲ ತೆಗೆದುಕೊಳ್ಳುವ ಯೋಚನೆಯಲ್ಲೇ ಇದ್ದಿರಲಿಲ್ಲ. ಅವರ ಪಾಂಡೋ ಆದಿವಾಸಿ ಸಮುದಾಯದ ಹಲವರು ಸಾಲ ಮಾಡಿ ತಮ್ಮ ತಮ್ಮ ನೆಲವನ್ನೇ ಕಳೆದುಕೊಂಡಿದ್ದರು. ಹೀಗಾಗಿ ಅಲ್ಲಿನ ಹಲವರು ಈ ವಿಷಯದಲ್ಲಿ ಬಹಳ ಜಾಗರೂಕರಾಗಿದ್ದರು. ಆದರೆ ಇದು ಸರ್ಕಾರಿ ಸಾಲವಾಗಿದ್ದು, ವಿಶೇಷವಾಗಿ ಆದಿವಾಸಿಗಳ ವಿಶೇಷ ಪ್ರಯೋಜನಕ್ಕಾಗಿ ಸ್ಥಳೀಯ ಬ್ಯಾಂಕ್ ಮೂಲಕ ವಿತರಿಸಲಾಗುತ್ತದೆ. ಇದರರ್ಥ ಅದನ್ನು ಪಡೆಯುವುದರಿಂದ ಹೆಚ್ಚಿನ ಹಾನಿಯಾಗುವುದಿಲ್ಲವೆಂದು ಅವರು ಭಾವಿಸಿದರು. ಅದೊಂದು ಮಾತಿದೆ - ಆ ಕ್ಷಣಕ್ಕೆ ಅದು ಒಳ್ಳೆಯದಾಗಿಯೇ ತೋರುತ್ತದೆ.

ಆದರೆ ಆ ಸಾಲವನ್ನು ತೀರಿಸಲು ಸಾಧ್ಯವಾಗಲಿಲ್ಲ ಎಂದು ನಹಕುಲ್ ಹೇಳಿದರು. ಪಾಂಡೋಗಳು ಅತ್ಯಂತ ಬಡವರು ಮತ್ತು ಅವರನ್ನು 'ವಿಶೇಷ ದುರ್ಬಲ ಬುಡಕಟ್ಟು ಗುಂಪು' ಎಂದು ವರ್ಗೀಕರಿಸಲಾಗಿದೆ. ಈ ಸಮುದಾಯದ ಸಾಮಾನ್ಯ ಸ್ಥಿತಿಗೆ ನಹಕುಲ್ ಅವರ ಬದುಕೂ ಹೊರತಾಗಿಲ್ಲ.

PHOTO • P. Sainath

ನಹಕುಲ್ ಕೂಡ ಯೋಜನೆಯನ್ನು ಶಿಕ್ಷೆಯಾಗಿ ಅನುಭವಿಸಿದರು

"ಕಂತುಗಳನ್ನು ಕಟ್ಟುವಂತೆ ಒತ್ತಡವಿತ್ತು," ಎಂದು ಅವರು ನಮಗೆ ಹೇಳಿದರು. ಬ್ಯಾಂಕ್ ಅಧಿಕಾರಿಗಳಿಂದ ಸಾಕಷ್ಟು ಬಯ್ಗುಳವನ್ನೂ ಪಡೆದರು. “ನಾನು ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಸ್ವಲ್ಪ ಹಣವನ್ನು ಪಾವತಿಸಿದೆ. ಕೊನೆಯದಾಗಿ ಮನೆಯ ಮಾಡಿಗೆ ಹೊದೆಸಿದ್ದ ಹೆಂಚನ್ನೂ ಮಾರಿದೆ."

ಬಡತನವನ್ನು ಹೋಗಲಾಡಿಸಲೆಂದು ನೀಡಿದ ಸಾಲವು ಅವರ ತಲೆಯ ಮೇಲಿನ ಸೂರನ್ನೇ ಕಿತ್ತುಕೊಂಡಿತ್ತು. ಅವರ ಬಳಿ ಈಗ ಸಾಲದಿಂದ ಕೊಂಡ ಹಸುಗಳೂ ಇಲ್ಲ. ಅಥವಾ ಅವುಗಳನ್ನು ಮಾರಾಟ ಮಾಡಿದರು. ಈ ಯೋಜನೆಯು ತನ್ನ ಒಳಿತಿಗಾಗಿದೆ ಎಂದು ನಹಕುಲ್ ನಂಬಿದ್ದರು ಆದರೆ ವಾಸ್ತವವಾಗಿ ಅವರು ಬ್ಯಾಂಕ್ ಸಿಬ್ಬಂದಿ ಸಾಧಿಸಬೇಕಿದ್ದ ʼಟಾರ್ಗೆಟ್‌ʼನ ಒಂದು ಅಂಕಿಯಾಗಿದ್ದರಷ್ಟೇ. ನಂತರ ಇಲ್ಲಿ ವಾಸವಾಗಿದ್ದ ಕೆಲವು ಮೂಲನಿವಾಸಿಗಳು ಇದೇ ರೀತಿ ಸಾಲ ಪಡೆದು ಇದೇ ಮಾದರಿಯ ಶಿಕ್ಷೆಯನ್ನೂ ಅನುಭವಿಸಿದ್ದರು.

“ನಹಕುಲ್‌ ಮತ್ತಿತರರಿಗೆ ಈ ಸಾಲ ಯೋಜನೆಯಡಿ ಸಿಗುವ ಹಣದ ಅಗತ್ಯವಿತ್ತು ಆದರೆ ಅದನ್ನು ಅವರಿಗೆ ಅಗತ್ಯವಿರುವ ವಿಷಯಗಳಿಗೆ ಪಡೆಯುವುದು ಸಾಧ್ಯವಿರಲಿಲ್ಲ,” ಎಂದು ಕೆಲವು ಹಳ್ಳಿಗಳಿಗೆ ನನ್ನೊಂದಿಗೆ ಬಂದ ವಕೀಲ ಮೋಹನ್ ಕುಮಾರ್ ಗಿರಿ ಹೇಳಿದರು. ಸುರ್ಗುಜಾ ಅವರ ಹುಟ್ಟೂರು. "ಅವರು ತಮ್ಮ ಅಗತ್ಯಗಳಿಗೆ ಸಂಬಂಧಿಸದ ಯೋಜನೆಗಳಿಗಾಗಿ ಅದನ್ನು ತೆಗೆದುಕೊಳ್ಳಬೇಕಾಗಿತ್ತು. ಸಾಮಾನ್ಯವಾಗಿ, ನಾವು ತಲೆಯ ಮೇಲೊಂದು ಸೂರು ಹೊಂದಿಸಿಕೊಳ್ಳಲು ಸಾಲ ಮಾಡುತ್ತೇವೆ. ಆದರೆ ನಹಕುಲ್‌ ತೆಗದುಕೊಂಡ ಸಾಲ ಅವರ ತಲೆಯ ಮೇಲಿನ ಸೂರನ್ನೇ ಕಿತ್ತುಕೊಂಡಿತು. ಅವರು ಪಡೆದ ಸಾಲ ಅವರ ಪಾಲಿಗೆ ನಿಷ್ಪ್ರಯೋಜಕವಾಯಿತು. ಈ ಜನರು ಈಗಲೂ ಸಾಲಕ್ಕಾಗಿ ಬಡ್ಡಿ ವ್ಯಾಪಾರಸ್ಥರ ಬಳಿಯೇ ಏಕೆ ಹೋಗುತ್ತಾರೆಂದು ನಿಮಗೆ ಅರ್ಥವಾಗಿರಬಹುದು."

ಜೇಡಿಮಣ್ಣಿನಿಂದ ಅದ್ಭುತವಾದ ಹೆಂಚುಗಳನ್ನು ತಯಾರಿಸುವ ಅವರ ಕರಕುಶಲತೆಯನ್ನು ಕಂಡು ನಾವಿಬ್ಬರೂ ಮನಸೋತೆವು. ನಮ್ಮೊಂದಿಗಿದ್ದ ಇನ್ನಿಬ್ಬರು ಕೆಲಸ ಮುಗಿಸಿ ಕುಡಿಯಲಿರುವ ಸ್ಥಳೀಯ ಶರಾಬಿನ ರುಚಿಯನ್ನು ಕಲ್ಪಿಸಿಕೊ‍ಳ್ಳುತ್ತಾ ಆ ಆದಿವಾಸಿ ಜನರ ಕುರಿತು ಹೊಟ್ಟೆಕಿಚ್ಚುಪಡುತ್ತಾ ನಮ್ಮೊಂದಿಗೆ ಹೆಜ್ಜೆಹಾಕಿದರು.

ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕದಲ್ಲಿ ಈ ಲೇಖನವು ʼಟೇಕ್ ಎ ಲೋನ್, ಲೂಸ್ ಯುವರ್ ರೂಫ್ʼ ಎನ್ನುವ ಶೀರ್ಷಿಕೆಯೊಂದಿಗೆ ಛಾಯಾಚಿತ್ರಗಳಿಲ್ಲದೆ ಪ್ರಕಟಿತಗೊಂಡಿದೆ – ಅದೇ ಲೇಖನದ ಅನುವಾದವನ್ನು ಇಲ್ಲಿ ಛಾಯಾಚಿತ್ರಗಳೊಂದಿಗೆ ಪ್ರಕಟಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru