ಚಿಟ್ಟೆಂಪಲ್ಲಿ ಪರಮೇಶ್ವರಿಯವರಿಗೆ ಒಮ್ಮೊಮ್ಮೆ ಎಲ್ಲಾದರೂ ದೂರ ಓಡಿಹೋಗಬೇಕು ಅನ್ನಿಸುತ್ತದೆ. "ಆದರೆ, ನಾನು ನನ್ನ ಮಕ್ಕಳನ್ನು ಬಿಟ್ಟುಹೋಗಲು ಸಾಧ್ಯವಿಲ್ಲ. ಅವರಿಗೆ ಇರುವುದು ನಾನು ಮಾತ್ರ” ಎಂದು 30 ವರ್ಷದ ಆ ತಾಯಿ ಹೇಳುತ್ತಾರೆ.

ಪರಮೇಶ್ವರಿ ಅವರ ಪತಿ ಚಿಟ್ಟೆಂಪಲ್ಲಿ ಕಮಲಚಂದ್ರ ಅವರು ನವೆಂಬರ್ 2010 ರಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿದಾಗ ಅವರಿನ್ನೂ 20ರ ಹರೆಯದ ಕೃಷಿಕರಾಗಿದ್ದರು. “ಸಾಯುವ ಮುನ್ನ ಒಂದು ಪತ್ರವನ್ನು ಕೂಡ ಬರೆದಿಡಲಿಲ್ಲ. ಬಹುಶಃ ಅವರಿಗೆ ಚೆನ್ನಾಗಿ ಬರೆಯಲು ಬರುತ್ತಿರಲಿಲ್ಲವೇನೋ, ”ಎಂದು ಅವರು ಮುಗುಳು ನಗುತ್ತಲೇ ಹೇಳುತ್ತಾರೆ.

ಈಗ ಪರಮೇಶ್ವರಿಯವರು ತಮ್ಮ ಇಬ್ಬರು ಮಕ್ಕಳಾದ ಶೇಷಾದ್ರಿ ಮತ್ತು ಅನ್ನಪೂರ್ಣರ ಏಕೈಕ ಪೋಷಕಿ. ಈ ಮಕ್ಕಳು ಈಗ 30 ಕಿಲೋಮೀಟರ್ ದೂರದಲ್ಲಿರುವ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. "ನನಗೆ ಅವರಿಬ್ಬರೂ ತುಂಬಾ ನೆನಪಾಗುತ್ತಾರೆ," ಎಂದು ತಾಯಿ ಹೇಳುತ್ತಾರೆ. "ಅವರಿಗೆ ಸಮಯಕ್ಕೆ ಸರಿಯಾಗಿ ಹೊತ್ತೊತ್ತಿನ ಊಟವನ್ನು ಸಿಗುತ್ತಿದೆ ಎಂಬುದು ಗೊತ್ತಿದೆ" ಎನ್ನುತ್ತಾ ಸ್ವತಃ ಸಮಾಧಾನಪಟ್ಟುಕೊಳ್ಳುತ್ತಾರೆ.

ಪ್ರತಿ ತಿಂಗಳಿಗೊಮ್ಮೆ ತನ್ನ ಮಕ್ಕಳನ್ನು ಭೇಟಿ ಮಾಡಲು ಈ ತಾಯಿ ಕಾಯುತ್ತಿರುತ್ತಾರೆ. "ನನ್ನ ಬಳಿ ಹಣವಿದ್ದರೆ ನಾನು [ಮಕ್ಕಳಿಗೆ] 500 [ರೂಪಾಯಿ] ಕೊಡುತ್ತೇನೆ ಮತ್ತು ನನ್ನ ಬಳಿ ಹಣ ಕಡಿಮೆಯಿದ್ದರೆ, ನಾನು ಅವರಿಗೆ 200 [ರೂಪಾಯಿ] ನೀಡುತ್ತೇನೆ" ಎಂದು ಅವರು ಹೇಳುತ್ತಾರೆ.

ಈ ಕುಟುಂಬ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಸಮುದಾಯಕ್ಕೆ ಸೇರಿದೆ. ಪರಮೇಶ್ವರಿ ಚಿಲ್ತಂಪಲ್ಲೆ  ಗ್ರಾಮದಲ್ಲಿ ಒಂದು ಕೋಣೆಯಂತಿರುವ ಮನೆಯಲ್ಲಿ ಇವರು ವಾಸಿಸುತ್ತಿದ್ದಾರೆ. ಅವರ ಮನೆಯ ಮೇಲ್ಛಾವಣಿ ಕುಸಿದಿದ್ದು, ಹೊರಗೆ ತೆರೆದ ಕೊಟ್ಟಿಗೆ ಇದೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿರುವ ಈ ಮನೆಯು ಅವರ ದಿವಂಗತ ಪತಿ ಕಮಲ್ ಚಂದ್ರ ಅವರ ಕುಟುಂಬದ ಒಡೆತನದಲ್ಲಿದೆ. ಮದುವೆಯ ನಂತರ ಪತಿಯೊಂದಿಗೆ ಅವರು ಇಲ್ಲಿಗೆ ಬಂದರು.

PHOTO • Amrutha Kosuru
PHOTO • Amrutha Kosuru

ಎಡ: 2010ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪರಮೇಶ್ವರಿ ಅವರ ಪತಿ ಚಿಟ್ಟೆಂಪಲ್ಲಿ ಕಮಲ್ ಚಂದ್ರ. ಬಲ: ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಚಿಲ್ತಂಪಲ್ಲೆ ಗ್ರಾಮದಲ್ಲಿ ಪರಮೇಶ್ವರಿ ಒಂಟಿಯಾಗಿ ವಾಸಿಸುತ್ತಿದ್ದಾರೆ

ಪತಿಯ ಆತ್ಮಹತ್ಯೆಯ ನಂತರ ಪರಮೇಶ್ವರಿ ಅವರ ಪ್ರಾಥಮಿಕ ಆದಾಯದ ಮೂಲವೆಂದರೆ ಆಸರಾ ಪಿಂಚಣಿ ಯೋಜನೆ ಯಡಿ ಸಿಗುತ್ತಿರುವ ವಿಧವಾ ವೇತನ. "ನಾನು 2019 ರವರೆಗೆ 1,000 [ರೂಪಾಯಿಗಳು] ಪಡೆಯುತ್ತಿದ್ದೆ, ಆದರೆ ಈಗ ಪ್ರತಿ ತಿಂಗಳು 2,016 [ರೂಪಾಯಿಗಳನ್ನು] ಸಿಗುತ್ತಿದೆ" ಎಂದು ಅವರು ಹೇಳುತ್ತಾರೆ.

ಪಿಂಚಣಿ ಹೊರತುಪಡಿಸಿ ಪ್ರತೀ ತಿಂಗಳೂ ಅವರಿಗೆ 2,500 ರುಪಾಯಿ ಅದೇ ಹಳ್ಳಿಯಲ್ಲಿ ಇರುವ ಅವರ ಅತ್ತೆಯ ಒಡೆತನದ ಜೋಳದ ಹೊಲದಲ್ಲಿ ಕೆಲಸ ಮಾಡಿ ಸಂಪಾದನೆಯಾಗುತ್ತದೆ. ಪರಮೇಶ್ವರಿ ಅವರು ಇತರರ ತೋಟಗಳಲ್ಲಿ ದೈನಂದಿನ ಕೂಲಿ ಕೆಲಸ ಮಾಡುತ್ತಾರೆ, ಇದಕ್ಕಾಗಿ ಅವರಿಗೆ ದಿನಕ್ಕೆ 150-200 ಸಿಗುತ್ತದೆ, ಆದರೆ ಅವರು ಅಗತ್ಯವಿದ್ದಾಗ ಮಾತ್ರ ಅಂತಹ ಕೆಲಸವನ್ನು ಮಾಡುತ್ತಾರೆ.

ಅವರ ಈ ಗಳಿಕೆಯು ಕುಟುಂಬದ ತಿಂಗಳ ಜೀವನದ ಖರ್ಚಿಗೆ ಸರಿಯಾಗುತ್ತದೆ. "ಹಣವು ಸಾಕಾಗದೇ ಇರುವ ತಿಂಗಳುಗಳಿವೆ," ಎಂದು ಮಾತನಾಡುವಾಗ ತನ್ನ ಸೀರೆ ಸೆರಗಿನ ತುದಿಯನ್ನು ತಿರುಚುತ್ತಾರೆ.

ಇದು ಸಾಕಾಗುವುದಿಲ್ಲ ಏಕೆಂದರೆ ಪತಿ ತೀರಿಹೋಗಿ 13 ವರ್ಷಗಳಾದರೂ ಅವರು ಬಿಟ್ಟುಹೋಗಿರುವ ಸಾಲವನ್ನು ತೀರಿಸಲು ಪರಮೇಶ್ವರಿ ಹೆಣಗಾಡುತ್ತಿದ್ದಾರೆ. ಖಾಸಗಿ ಲೇವಾದೇವಿದಾರರಿಗೆ (ಅಪುಲೋರಸ್) ನೀಡುವ ಈ ಮಾಸಿಕ ಸಾಲದ ಮೊತ್ತವು ಕುಟುಂಬದಲ್ಲಿ ಸಂಪಾದನೆ ಮಾಡುವ ಏಕೈಕ ವ್ಯಕ್ತಿಯಾದ ಇವರಿಗೆ ನಿರಂತರ ಒತ್ತಡವನ್ನುಂಟುಮಾಡುತ್ತಿದೆ. "ಎಷ್ಟು ಸಾಲವಿದೆ ಎಂಬುದು ನನಗೇ ತಿಳಿದಿಲ್ಲ," ಎಂದು ಚಿಂತೆಯಿಂದ ಹೇಳುತ್ತಾರೆ.

PHOTO • Amrutha Kosuru
PHOTO • Amrutha Kosuru

(ಎಡ)ಚಿಟ್ಟಂಪಲ್ಲೆಯಲ್ಲಿರುವ ತನ್ನ ಅಡುಗೆಮನೆಯಲ್ಲಿ ಪರಮೇಶ್ವರಿ ಮತ್ತು (ಬಲ) ತನ್ನ ಮನೆಯ ಹೊರಗೆ ಕೆಲಸ ಅವರು ಮಾಡುತ್ತಿರುವುದು

ಅವರ ಪತಿ ಕಮಲ್ ಚಂದ್ರ ಅವರು ಕೆಲವು ಎಕರೆಗಳನ್ನು ಗುತ್ತಿಗೆಗೆ ತೆಗೆದುಕೊಂಡಿದ್ದರು ಮತ್ತು ಆ ಖರ್ಚನ್ನು ಸರಿದೂಗಿಸಲು ಸಾಲವನ್ನು ತೆಗೆದುಕೊಂಡಿದ್ದರು. ಅವರು ಸಾಯುವ ಮೊದಲು ವಿಕಾರಾಬಾದ್ ಜಿಲ್ಲೆಯ ಐದು ಜನ ಬೇರೆ ಬೇರೆ ಲೇವಾದೇವಿದಾರರಿಂದ ತೆಗೆದುಕೊಂಡಿದ್ದ ಆ ಸಾಲ 6 ಲಕ್ಷ ರುಪಾಯಿಯಾಗಿತ್ತು. “ನನಗೆ [ಆ ಸಾಲದ ಮೊತ್ತ] ಮೂರು ಲಕ್ಷ [ರೂಪಾಯಿ] ಎಂದು ಮಾತ್ರ ತಿಳಿದಿತ್ತು. ಸಾಲ ಇಷ್ಟು ದೊಡ್ಡದು ಎಂದು ನನಗೆ ಗೊತ್ತಿರಲಿಲ್ಲ,” ಎಂದು ಪರಮೇಶ್ವರಿ ಹೇಳುತ್ತಾರೆ.

ಗಂಡನ ಮರಣದ ಕೆಲವು ವಾರಗಳ ನಂತರ ಲೇವಾದೇವಿಗಾರರು ಇವರನ್ನು ಸಂಪರ್ಕಿಸಿದಾಗ, ಕಮಲ್ ಇಬ್ಬರು ಲೇವಾದೇವಿಗಾರರಿಂದ 1.5 ಲಕ್ಷ ಮತ್ತು ಇತರ ಮೂವರಿಂದ ತಲಾ ಒಂದು ಲಕ್ಷ ಸಾಲವನ್ನು ಪಡೆದಿದ್ದಾರೆ ಎಂದು ತಿಳಿಯಿತು. ಅದೂ ಶೇಕಡಾ 36 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಯಾವುದೇ ಲಿಖಿತ ದಾಖಲೆಗಳಿಲ್ಲದ ಕಾರಣ ಪರಮೇಶ್ವರಿಯವರ ಬಳಿ ಸಾಲಗಳ ಸರಿಯಾದ ಲೆಕ್ಕವಿಲ್ಲ.

"ನಾನು ನನ್ನ ಬಾಕಿಯನ್ನು ಪಾವತಿಸಲು ಹೋದಾಗ ಅವರು ಹೇಳಿದ್ದನ್ನು ನಾನು ನಂಬುತ್ತೇನೆ" ಎಂದು ಅವರು ಹೇಳುತ್ತಾರೆ. ಕಳೆದ ತಿಂಗಳು ಅವರು ಇನ್ನೂ ಎಷ್ಟು ಪಾವತಿಸಬೇಕು ಎಂದು ಸಾಲ ನೀಡಿದ ಒಬ್ಬರನ್ನು ಕೇಳಿದಾಗ ಅವರು ಸ್ಪಷ್ಟವಾಗಿ ಪ್ರತಿಕ್ರಿಯಿಸಲಿಲ್ಲ ಮತ್ತು ಆ ಬಗ್ಗೆ ಅವರ ಅರಿವು ಕತ್ತಲಲ್ಲೇ ಉಳಿಯಿತು.

ಪ್ರತಿ ತಿಂಗಳೂ ಅವರು ಸಾಲ ನೀಡಿದ ಪ್ರತಿಯೊಬ್ಬನಿಗೂ 2,000 ರುಪಾಯಿ ನೀಡುತ್ತಾರೆ. ಈ ಭಾರದಿಂದ ತತ್ತರಿಸಿಹೋಗಿ ಅವರು ಪ್ರತಿ ಐದು ಜನರಿಗೆ ತಿಂಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ಸಾಲದ ಕಂತನ್ನು ಪಾವತಿಸುತ್ತಾರೆ. "ಒಂದು ತಿಂಗಳಲ್ಲಿ ಈ ಎಲ್ಲಾ ಐದು ಜನರಿಗೆ ಪಾವತಿಸಲು ನನ್ನ ಬಳಿ ಹಣವಿಲ್ಲ" ಎಂದು ಅವರು ಹೇಳುತ್ತಾರೆ ಮತ್ತು ಆದ್ದರಿಂದ ಕೆಲವರಿಗೆ ಕೇವಲ 500 ರುಪಾಯಿ ಮಾತ್ರ ಪಾವತಿಸಲು ಸಾಧ್ಯವಾಗುತ್ತದೆ.

PHOTO • Amrutha Kosuru
PHOTO • Amrutha Kosuru

ಎಡ: ಕುಟುಂಬದ ಒಂದು ಹಳೆಯ ಚಿತ್ರ . ಬಲ: ಪರಮೇಶ್ವರಿ ತನ್ನ ಅತ್ತೆಯ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದು ಮತ್ತು ಸಾಲವನ್ನು ಮರುಪಾವತಿಸಲು ದೈನಂದಿನ ಕೂಲಿ ಕೆಲಸ ಮಾಡುತ್ತಿರುವುದು

“ನನ್ನ ಪತಿಯನ್ನು [ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ] ನಾನು ದೂಷಿಸುವುದಿಲ್ಲ. ನಾನು ಅರ್ಥಮಾಡಿಕೊಂಡಿದ್ದೇನೆ,” ಎಂದು ಪರಮೇಶ್ವರಿ ಹೇಳುತ್ತಾರೆ, “ನಾನು ಕೆಲವೊಮ್ಮೆ ಅವರಂತೆ ಮಾಡಿಕೊಳ್ಳಲು ಯೋಚಿಸುತ್ತೇನೆ; ಆದರೆ ನಾನು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ.” ಎಂದು ಅವರು ಹೇಳುತ್ತಾರೆ.

ಕೆಲವೊಮ್ಮೆ ಒತ್ತಡವು ತುಂಬಾ ಹೆಚ್ಚಾಗುತ್ತದೆ, ಆದರೆ ಅವರು ಮಕ್ಕಳ ಬಗ್ಗೆ ಯೋಚಿಸುವಾಗ ಅದು ಕಡಿಮೆಯಾಗುತ್ತದೆ. "ಸಾಲ ನೀಡಿದವರು ನನ್ನ ಮಕ್ಕಳನ್ನು ಸಾಲ ತೀರಿಸುವಂತೆ ಕೇಳುತ್ತಾರೆ," ಎಂದು ಅವರು ದುಃಖದಿಂದ ಹೇಳುತ್ತಾರೆ. "ಅವರು ಏಕೆ ತೀರಿಸಬೇಕು? ಅವರು ದೊಡ್ಡ ನಗರಗಳಲ್ಲಿ ಅಧ್ಯಯನ ಮಾಡುವುದನ್ನು ಮತ್ತು ಗೌರವಾನ್ವಿತ ಸ್ಥಾನಗಳಲ್ಲಿ ಕೆಲಸ ಮಾಡುವುದನ್ನು ನಾನು ನೋಡಬೇಕು,” ಎನ್ನುತ್ತಾರೆ.

*****

ಪರಮೇಶ್ವರಿ ಅವರ ದಿನ ಬೆಳಿಗ್ಗೆ 5 ಗಂಟೆಗೆ ಆರಂಭವಾಗುತ್ತದೆ, “ಮನೆಯಲ್ಲಿ ಅಕ್ಕಿ ಇದ್ದರೆ, ನಾನು ಅದನ್ನು ಬೇಯಿಸುತ್ತೇನೆ. ಇಲ್ಲದಿದ್ದರೆ, ನಾನು ಗಂಜಿ ತಯಾರಿಸುತ್ತೇನೆ,” ಎಂದು ಅವರು ಹೇಳುತ್ತಾರೆ. ಅವರು ಕೆಲಸಕ್ಕೆ ಹೋಗಬೇಕಾದ ದಿನಗಳಲ್ಲಿ ತನ್ನ ಊಟವನ್ನು ಪ್ಯಾಕ್ ಮಾಡಿ 8 ಗಂಟೆಗೆ ಮನೆಯಿಂದ ಹೊರಡುತ್ತಾರೆ.

ಇತರ ದಿನಗಳಲ್ಲಿ ಅವರು ಮನೆಕೆಲಸಗಳನ್ನು ಮಾಡುತ್ತಾ ಹಾಗೂ ಸಣ್ಣ ಟೆಲಿವಿಷನ್ ಸೆಟ್‌ನಲ್ಲಿ ಹಳೆಯ, ಕಪ್ಪು-ಬಿಳುಪು ತೆಲುಗು ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ವೀಕ್ಷಿಸುತ್ತಾ ಬಿಡುವಿನ ಸಮಯವನ್ನು ಕಳೆಯುತ್ತಾರೆ. “ನನಗೆ ಸಿನಿಮಾ ನೋಡುವುದು ಇಷ್ಟ. ಆದರೆ ಕೆಲವೊಮ್ಮೆ ನಾನು ಅದನ್ನು ನಿಲ್ಲಿಸಲು ಯೋಚಿಸುತ್ತೇನೆ [ಕೇಬಲ್ ಸಂಪರ್ಕಕ್ಕೆ ಚಂದಾದಾರಿಕೆ ಹಣ ನೀಡಬೇಕಾದ ಕಾರಣ]. ಆದರೆ ಕೇಬಲ್ ಸಂಪರ್ಕಕ್ಕೆ 250 ರುಪಾಯಿ ನೀಡಿದರೂ ಅವರಿಗೆ ತುಂಬಾ ಸಂಕಟ ಎನಿಸಿದಾಗ ಅವರ ಗಮನವನ್ನು ಅದು ಬೇರೆ ಕಡೆ ಸೆಳೆಯಲು ಸಹಾಯ ಮಾಡುತ್ತದೆ.

PHOTO • Amrutha Kosuru
PHOTO • Amrutha Kosuru

ಪರಮೇಶ್ವರಿ ಅವರು ತಮ್ಮ ಟಿವಿಯಲ್ಲಿ ಹಳೆಯ ಕಪ್ಪು-ಬಿಳುಪು ತೆಲುಗು ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ನೋಡುವುದನ್ನು ಇಷ್ಟಪಡುತ್ತಾರೆ. ತನ್ನ ಸಮಸ್ಯೆಗಳ ಬಗ್ಗೆ ಯಾರೊಂದಿಗಾದರೂ ಮಾತನಾಡುವುದು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ

ಅಕ್ಟೋಬರ್ 2022ರಲ್ಲಿ ಇವರ ಸಂಬಂಧಿಕರೊಬ್ಬರು ಗ್ರಾಮೀಣ ಜನರ ಸಂಕಷ್ಟಕ್ಕೆ ನೆರವಾಗುವ ಸಹಾಯವಾಣಿಯಾದ ಕಿಸಾನ್‌ಮಿತ್ರವನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. “ಫೋನ್‌ನಲ್ಲಿ ನನ್ನೊಂದಿಗೆ ಮಾತನಾಡಿದ ಮಹಿಳೆಯೊಂದಿಗೆ ನಡೆಸಿದ ಮಾತುಕತೆ ನನಗೆ ಇಷ್ಟವಾಗಿತ್ತು. ಎಲ್ಲಾ ಸರಿಯಾಗುತ್ತದೆ ಎಂದು ಅವರು ಹೇಳಿದರು,” ಎಂದು ಪರಮೇಶ್ವರಿ ನೆನಪಿಸಿಕೊಳ್ಳುತ್ತಾರೆ. ಸಹಾಯವಾಣಿಯನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ರೂರಲ್ ಡೆವಲಪ್‌ಮೆಂಟ್ ಸರ್ವಿಸ್ ಸೊಸೈಟಿ ನಿರ್ವಹಿಸುತ್ತಿದೆ. ಕರೆ ಮಾಡಿದ ಕೂಡಲೇ ಕಿಸಾನಮಿತ್ರದ ಕ್ಷೇತ್ರ ಸಮನ್ವಯಾಧಿಕಾರಿ ಜೆ.ನರ್ಸಿಮುಲು ಅವರ ಮನೆಗೆ ಭೇಟಿ ನೀಡಿದರು. “ಅವರು [ನರ್ಸಿಮುಲು] ನನ್ನ ಪತಿ, ಮಕ್ಕಳು ಮತ್ತು ಹಣಕಾಸಿನ ತೊಂದರೆಗಳ ಬಗ್ಗೆ ಕೇಳಿದರು. ನಮ್ಮ ಕಷ್ಟವನ್ನು ಆಲಿಸಿದ್ದರಿಂದ ನನಗೆ ಒಂದು ರೀತಿಯ ನೆಮ್ಮದಿ ಎನಿಸಿತ್ತು,” ಎಂದು ಅವರು ಹೇಳುತ್ತಾರೆ.

ಆದಾಯ ಹೆಚ್ಚಿಸಲು ಪರಮೇಶ್ವರಿಯವರು ಒಂದು ಹಸು ಖರೀದಿಸುತ್ತಿದ್ದಾರೆ. "ಅದು [ಹಸು] ನನ್ನ ಒಂಟಿತನವನ್ನು ಕಡಿಮೆ ಮಾಡಬಹುದು," ಎನ್ನುತ್ತಾರೆ. ಅದನ್ನು ಖರೀದಿಸಲು ಮೊದಲಿಗೆ 10,000 ರುಪಾಯಿ ನೀಡಬೇಕು. "ಹಸು ಇನ್ನೂ ಮನೆಗೆ ಬಂದಿಲ್ಲ, ಕಾಯುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.

ನೀವು ಆತ್ಮಹತ್ಯೆಯ ಯೋಚನೆಯಲ್ಲಿದ್ದರೆ ಅಥವಾ ಅಂತಹ ಸಂಕಷ್ಟದಲ್ಲಿರುವವರ ಕುರಿತು ನಿಮಗೆ ತಿಳಿದಿದ್ದರೆ ದಯವಿಟ್ಟು ದಯವಿಟ್ಟು ರಾಷ್ಟ್ರೀಯ ಸಹಾಯವಾಣಿ ಯಾದ ಕಿರಣ್ ‌ ಅನ್ನು 1800-599-0019 (24/7 ಟೋಲ್ ಫ್ರೀ ) ಸಂಖ್ಯೆಯ ಮೂಲಕ ತಲುಪಿ ಅಥವಾ ನಿಮ್ಮ ಹತ್ತಿರದ ಯಾವುದಾದರೂ ಸಹಾಯವಾಣಿಗೆ ಕರೆ ಮಾಡಿ . ಮಾನಸಿಕ ಆರೋಗ್ಯ ವೃತ್ತಿಪರರು ಮತ್ತು ಸೇವೆಗಳ ಬಗ್ಗೆ ಮಾಹಿತಿ ಪಡೆಯಲು , ದಯವಿಟ್ಟು SPIF ನ ಮಾನಸಿಕ ಆರೋಗ್ಯ ಡೈರೆಕ್ಟರಿಗೆ ಭೇಟಿ ನೀಡಿ .

ಈ ಕಥೆಯನ್ನು ರಂಗ್ ದೇ ಅನುದಾನದ ಸಹಯೋಗದಿಂದ ಮಾಡಲಾಗಿದೆ.

ಅನುವಾದ: ಚರಣ್‌ ಐವರ್ನಾಡು

Amrutha Kosuru

Amrutha Kosuru is a 2022 PARI Fellow. She is a graduate of the Asian College of Journalism and lives in Visakhapatnam.

Other stories by Amrutha Kosuru
Editor : Sanviti Iyer

Sanviti Iyer is Assistant Editor at the People's Archive of Rural India. She also works with students to help them document and report issues on rural India.

Other stories by Sanviti Iyer
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad