ಭಾನು ಗುಡ್ಡದ ತುದಿಯಲ್ಲಿರುವ ಸ್ಲಮ್‌ ಕಾಲೋನಿಯ ತನ್ನ ಮನೆಯತ್ತ ಇಕ್ಕಟ್ಟಾದ ದಾರಿಗುಂಟ ನಡೆಯುತ್ತಿದ್ದಾನೆ. ತನ್ನ ಮುಖಕ್ಕೆ ಕರ್ಛೀಫ್‌ ಅನ್ನು ಮಾಸ್ಕ್‌ನಂತೆ ಕಟ್ಟಿಕೊಂಡ ಅವನು ದಾರಿಯಲ್ಲಿ ಯಾರೋ ಉಚಿತವಾಗಿ ನೀಡಿದ ಅರ್ಧ ಕಿಲೋ ಅಕ್ಕಿ ಮತ್ತು ಬೇಳೆಗಳನ್ನು ಕೈಯಲ್ಲಿ ಹಿಡಿದಿದ್ದಾನೆ. ಎದುರಿನಿಂದ ಒಂದಿಷ್ಟು ಜನರು ಬರುತ್ತಿರುವುದನ್ನು ನೋಡಿದ ಭಾನು ಅಲ್ಲೇ ಒಂದು ಮನೆಯ ಬದಿಯಲ್ಲಿ ಮರೆಯಾಗಿ ನಿಲ್ಲುತ್ತಾನೆ. ಅವರೆಲ್ಲರೂ ತಲೆಯ ಮೇಲೆ ಬಟ್ಟೆಯ ಗಂಟು ಮನೆಯ ಪಾತ್ರೆ ಪಗಡಗಳ ಚೀಲವನ್ನು ಹೊತ್ತು ಹೊರಟಿದ್ದರು, ಭಾನು ಅವರಲ್ಲಿ ತನಗೆ ಪರಿಚಯದ ಮುಖಗಳು ಯಾವುದಾದರೂ ಇವೆಯೇ ಎಂದು ಕಣ್ಣು ಕಿರಿದಾಗಿಸಿಕೊಂಡು ನೋಡಿದ.

ಭಾನು ಸಣ್ಣ ಚರಂಡಿಯನ್ನು ದಾಟಿ ಮುನ್ನಡೆದ. ಕಾಲೋನಿಯ ಬೀದಿ ಗುಂಟ 10x10 ಅಳತೆಯ ಎಲ್ಲ ಕೋಣೆಗಳ ಬಾಗಿಲು ಮುಚ್ಚಿಕೊಂಡಿತ್ತು. ಆ ಎಲ್ಲ ಕೋಣೆಯ ಹಿಂದೆ ಒಂದು ಅಸಹನೀಯ ಮತ್ತು ಅಸಹಜವಾದ ಮೌನ ಮನೆಮಾಡಿತ್ತು. ಅಲ್ಲಿ ಯಾರೂ ಎಂದಿನಂತೆ ಮಾತುಗಳನ್ನಾಡುತ್ತಿಲ್ಲ, ಜಗಳವಾಡುತ್ತಿಲ್ಲ, ಗಹಗಹಿಸಿ ನಗುತ್ತಿಲ್ಲ, ತಮ್ಮ ಫೋನ್‌ಗಳಲ್ಲಿ ಜೋರಾಗಿ ಕಿರುಚುತ್ತಾ ಮಾತನಾಡುತ್ತಿಲ್ಲ, ದೊಡ್ಡ ದನಿ ಹೊರಡಿಸುತ್ತಿದ್ದ ಟಿವಿಗಳದ್ದು ಸದ್ದೇ ಇಲ್ಲ. ಬಗೆಬಗೆಯ ಅಡುಗೆ ಪರಿಮಳ ಮೂಗಿಗೆ ಅಡರುತ್ತಿಲ್ಲ, ಒಲೆಗಳು ತಣ್ಣಗಾಗಿವೆ.

ಭಾನುವಿನ ಕೋಣೆ ಗುಡ್ಡದ ತುದಿಯಲ್ಲಿದೆ. ಅತ್ತ ಮನೆಯಲ್ಲಿ, ಅವನ ಹೆಂಡತಿ ಸರಿತಾ ಬಾಗಿಲಿನೆಡೆಗೆ ಸುಮ್ಮನೆ ನೋಡುತ್ತಾ ಗ್ಯಾಸ್‌ ಒಲೆಯ ಪಕ್ಕ ಕುಳಿತಿದ್ದಾಳೆ. ಆರು ತಿಂಗಳ ಬಸುರಿಯಾದ ಅವಳ ಕೈಗಳು ಹೊಟ್ಟೆಯ ಮೇಲಾಡುತ್ತಿವೆ. ಅವಳ ಒಂಭತ್ತು ವರ್ಷದ ಮಗ ರಾಹುಲ್‌ ತನ್ನ ಆಟಿಕೆ ಕಾರನ್ನು ಸಿಮೆಂಟ್‌ ನೆಲದ ಮೇಲೆ ಓಡಿಸುತ್ತಾ ಆಗಾಗ ಅಮ್ಮನ ಬಳಿ ತಿನ್ನಲು ಏನಾದರೂ ಕೊಡುವಂತೆ ಪೀಡಿಸುತ್ತಿದ್ದಾನೆ.

“ಅಮ್ಮಾ… ನಂಗೆ ಹೊಟ್ಟೆ ಹಸೀತಿದೆ… ಬೆಳಿಗ್ಗೆಯಿಂದ ಏನೂ ತಿಂದಿಲ್ಲ ನಾನು… ನೀನು ಇವತ್ತು ಬೆಳಿಗ್ಗೆ ಹಾಲು, ಕ್ರೀಮ್‌ ಬಿಸ್ಕೆಟ್‌ ಕೂಡ ಕೊಟ್ಟಿಲ್ಲ, ಅಮ್ಮಾ….”

ಸರಿತಾ ಮಗನಿಗೆ ತಿಳಿಯದಂತೆ ನಿಟ್ಟುಸಿರಿಡುತ್ತಾ, ಮಗನನ್ನು ತನ್ನೆಡೆಗೆ ಸೆಳೆದುಕೊಂಡು “ಹೌದು, ಮಗೂ, ನಂಗೂ ಗೊತ್ತು. ಈಗ ಅಪ್ಪ ಬರ್ತಾರೆ ಬರುವಾಗ ಏನೆಲ್ಲ ತರ್ತಾರೆ ಅವರು ಬಂದ ತಕ್ಷಣ ನಾವೆಲ್ಲ ತಿನ್ನೋಣ. ಅಲ್ಲಿಯ ತನಕ ಹೊರಗೆ ಆಟ ಆಡ್ತೀಯಾ..?”

“ನನ್ನ ಜೊತೆ ಆಟ ಆಡೋಕೆ ಯಾರೂ ಇಲ್ಲಮ್ಮ” ರಾಹುಲ್‌ ಬೇಸರದಿಂದ ಹೇಳುತ್ತಾನೆ. “ಅಮ್ಮಾ, ವಿಕ್ಕಿ ಮತ್ತೆ ಬಂಟಿ ಎಲ್ಲೋದ್ರು?”

“ಅವರ ಊರಿಗೆ ಹೋಗಿರಬಹುದು, ಕಳೆದ ವರ್ಷ ಹೋಗಿದ್ರಲ್ವ ಹಾಗೇನೆ. ಬರ್ತಾರೆ ಸ್ವಲ್ಪ ದಿನ ಬಿಟ್ಟು”

“ಇಲ್ಲಮ್ಮ, ಸ್ಕೂಲ್‌ ನಡೀತಿರುವಾಗ್ಲೇ ಹೋಗಿದ್ದಾರೆ ಅವರು. ನಂಗನ್ಸತ್ತೆ ಅವ್ರು ಮತ್ತೆ ಬರಲ್ಲ. ನಾವು ದೊಡ್ಡೋರಾದ್ಮೇಲೆ ಮೂರೂ ಜನ ಇಂಜಿನಿಯರ್‌ ಆಗಿ ಗ್ಯಾರೇಜ್‌ ತೆಗ್ದು ಕಾರು ರಿಪೇರಿ ಮಾಡಬೇಕು ಅಂದುಕೊಂಡಿದ್ವಿ. ಆದ್ರೆ… ಅವ್ರು ಇನ್ನು  ಸ್ಕೂಲ್‌ಗೆ ಬರೋದೂ ಡೌಟು…”

“ನೀನೂ ಮತ್ತೆ ನಿನ್ನ ಕಾರು!, ಹೋಗ್ಲಿ ಬಿಡು ಬೇಜಾರು ಮಾಡ್ಕೊಬೇಡ. ನೀನು ದೊಡ್ಡವ ಆದ ಮೇಲೆ ನಿಂದೇ ಕಾರ್‌ ಗ್ಯಾರೇಜ್‌ ಮಾಡುವಿಯಂತೆ. ನೀನು ದೊಡ್ಡ ಮನುಷ್ಯ ಆಗ್ತೀಯ!” ಎನ್ನುತ್ತಾ ಸರಿತಾ ಎದ್ದು ನಿಂತು ಗ್ಯಾಸ್‌ ಒಲೆಯ ಹಿಂದಿದ್ದ ಮೂರು ಹಲಗೆಗಳಿರುವ ಶೆಲ್ಫ್‌ನತ್ತ ನೋಡುತ್ತಾಳೆ. ಅಲ್ಲಿ ಕೆಲವು ಖಾಲಿ ಪಾತ್ರೆಗಳು, ಒಂದು ಸಣ್ಣ ಬಾಣಲಿ, ಲೋಟಗಳು, ಚಮಚೆಗಳು, ನಾಲ್ಕು ತಟ್ಟೆ, ಕೆಲವು ಬಟ್ಟಲುಗಳಿವೆ. ಇನ್ನೊಂದು ಹಲಗೆಯ ಮೇಲೆ ಬೇಳೆ ಕಾಳುಗಳನ್ನು ಹಾಕಿಡುವ ಪ್ಲಾಸ್ಟಿಕ್‌ ಡಬ್ಬಿಗಳಿವೆ. ಎಲ್ಲ ಡಬ್ಬಿಗಳೂ ಖಾಲಿ ಬಿದ್ದಿವೆ. ಅವಳು ಅದರಲ್ಲಿ ರಾಹುಲ್‌ ಎದುರು ಅವನಿಗಾಗಿ ಏನೋ ತಿಂಡಿ ಹುಡುಕುತ್ತಿರುವಂತೆ ನಟಿಸುತ್ತಾ ಒಂದೊಂದೇ ಡಬ್ಬಿಯ ಮುಚ್ಚಳ ತೆಗೆದು ಮುಚ್ಚಿಡುತ್ತಿದ್ದಾಳೆ. ಒಂದು ಡಬ್ಬಿಯಲ್ಲಿ ಕ್ರೀಮ್‌ ಬಿಸ್ಕೆಟ್‌ನ ಖಾಲಿ ಪ್ಯಾಕ್‌ ಇತ್ತು. ಅವಳು ಆ ಪ್ಯಾಕನ್ನು ಮುಷ್ಟಿಯಲ್ಲಿ ಮುದುರುತ್ತಾ ರಾಹುಲ್‌ ಕಡೆ ನೋಡುವಷ್ಟರಲ್ಲಿ ಭಾನು ಬಾಗಿಲಿನಲ್ಲಿದ್ದ. ಅವನು ಮುಖಕ್ಕೆ ಕಟ್ಟಿದ್ದ ಕರವಸ್ತ್ರ ಬಿಚ್ಚುತ್ತಾ ಅಲ್ಲೇ ನಿಟ್ಟುಸಿರು ಬಿಡುತ್ತಾ ಕುಸಿದು ಹೊಸಿಲಿನ ಮೇಲೆ ಕುಳಿತ. ರಾಹುಲ್‌ ಉತ್ಸಾಹದಿಂದ ಬ್ಯಾಗ್‌ ತೆಗೆದುಕೊಳ್ಳಲು ಅಪ್ಪನತ್ತ ಓಡಿದ.

“ಬಂದ್ರಾ?! ರಾಹುಲ್‌ ಅಪ್ಪನಿಗೆ ನೀರು ಕೊಡು ಮಗನೇ.”

ಭಾನು ಇಂದು ಭೇಟಿಯಾದ ತನ್ನ ಗುತ್ತಿಗೆದಾರನಿಗೆ ಮನಸಿನಲ್ಲಿಯೇ ಅದೆಷ್ಟನೆಯ ಸಲವೋ ಉತ್ತರಿಸುತ್ತಿದ್ದ.

“ಅಪ್ಪಾ, ನೀರು… ಅಪ್ಪಾ.. ತಗೋ ನೀರು ಕುಡಿ. ನೀನು ಬಿಸ್ಕೆಟ್‌ ತಂದಿಲ್ಲ ಅಲ್ವಾ? ರಾಹುಲ್‌ ಅಪ್ಪನ ಭುಜ ಅಲ್ಲಾಡಿಸುತ್ತಾ ಕೇಳಿದ.

ಭಾನು ಏನೂ ಮಾತಾಡದೆ ಮಗನ ಕೈಯಿಂದ ನೀರು ತೆಗೆದುಕೊಂಡು ಕುಡಿಯುತ್ತಾನೆ.

ಭಾನು ಸರಿತಾಳತ್ತ ನೋಡುತ್ತಾ “ಮೇಸ್ತ್ರಿ ದುಡ್ಡು ಕೊಡ್ಲಿಲ್ಲ, ಮತ್ತೆ ಇನ್ನೂ ಒಂದು ತಿಂಗಳು ಕೆಲಸ ಶುರುವಾಗಲ್ಲ ಅಂತ ಹೇಳಿದ”

ಸರಿತಾ ಮತ್ತೆ ತನ್ನ ಕೈಗಳನ್ನು ಹೊಟ್ಟೆಯ ಮೇಲೆ ತಂದುಕೊಂಡಳು. ಅವಳು ಹೊಟೆಯಲ್ಲಿದ್ದ ಮಗುವನ್ನು ಸಂತೈಸುತ್ತಿದ್ದಳೋ ಅಥವಾ ಆ ಮಗುವಿನಿಂದ ಅವಳು ಸಾಂತ್ವನ ಪಡೆಯುತ್ತಿದ್ದಾಳೋ ಎಂದು ಗುರುತಿಸುವುದು ಕಷ್ಟವಿತ್ತು.

“ಗವರ್ಮೆಂಟ್‌ ಎಲ್ಲಾನೂ ಕ್ಲೋಸ್‌ ಮಾಡಿದೆ,” ಭಾನು ಮಾತು ಮುಂದುವರೆಸುತ್ತಾನೆ, “ಈಗ ಏನೋ ಖಾಯಿಲೆ ಶುರುವಾಗಿದೆ, ಇನ್ನು ಕೆಲಸ ಮತ್ತೆ ಯಾವಾಗ ಶುರು ಅಂತ ಸರ್ಕಾರನೇ ಹೇಳ್ಬೇಕು.”

“ಕೈಯಲ್ಲಿ ಒಂದು ಕಾಸಿಲ್ದೆ ಒಂದೂವರೆ ತಿಂಗ್ಳಾಯ್ತು. ಅಕ್ಕಿ ಬೇಳೆ ಎಲ್ಲ ಖಾಲಿ… ಇನ್ನೂ ಎಷ್ಟು ದಿನ ಇನ್ನೊಬ್ರು ಕೊಟ್ಟಿದ್ದನ್ನ ತಿನ್ನುತ್ತಾ ಬದುಕು ಕಳೆಯೋದು?”

“ನಾನು ನಿನ್ನನ್ನ ಇಲ್ಲಿಗೆ ಕರ್ಕೊಂಡು ಬರ್ಬಾರ್ದಿತ್ತು,” ಭಾನುವಿಗೆ ತನ್ನ ದನಿಯಲ್ಲಿನ ಪಾಪಪ್ರಜ್ಞೆಯನ್ನು ಮುಚ್ಚಿಡಲು ಸಾಧ್ಯವಾಗಲಿಲ್ಲ. “ಈಗ ನೀನಿರೋ ಸ್ಥಿತಿಯಲ್ಲಿ… ಹೊಟ್ಟೆ ತುಂಬಿಸುವಷ್ಟು ದುಡಿದು ತರೋದಕ್ಕೆ ನನ್ನಿಂದ ಆಗ್ತಿಲ್ಲ.. ಹೀಗೇ ಇನ್ನೂ ಕೆಲವು ತಿಂಗಳು ಇದ್ರೆ ಏನು ಮಾಡೋದು?”

ಭಾನು ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತಾನೆ. ಅವನ ಕುಟುಂಬ ಒಂದೂವರೆ ತಿಂಗಳಿನಿಂದ ದಿನಕ್ಕೆ ಬೇಳೆ - ಅನ್ನದ ಕೇವಲ ಒಂದು ಊಟವನ್ನು ಮಾಡುತ್ತಿದೆ. ಅದೂ ಕೂಡ ಅಲ್ಲಿನ ಕೆಲವು ಸಂಘ ಸಂಸ್ಥೆಗಳು ಕೊಟ್ಟ ದಾನದಿಂದ. ಇದೆಲ್ಲ ಶುರುವಾಗುವ ಮೊದಲು ಅವರ ಕುಟುಂಬವು ಹಸಿರು ತರಕಾರಿ, ಹಾಲು ಮತ್ತು ಸಾಧ್ಯವಿರುವಾಗಲೆಲ್ಲ ಮೊಸರು, ಆರೆಂಜ್‌, ಆಪಲ್‌ ಇತ್ಯಾದಿ ಹಣ್ಣು-ಹಂಪಲುಗಳನ್ನೂ ತಿನ್ನುತ್ತಿದ್ದರು.

ಇಲ್ಲಸ್ಟ್ರೇಷನ್:‌ ಅಂತರಾ ರಾಮನ್

ಆದರೆ ಸರಕಾರವು ಕೊರೋನಾ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಹಠಾತ್ ಲಾಕ್‌ಡೌನ್‌ ಹೇರಿದಾಗಿನಿಂದ ಎಲ್ಲ ಉದ್ಯಮಗಳೂ ಮುಚ್ಚಿವೆ. ಸುಮಾರು 8 ವರ್ಷಗಳಿಂದೀಚೆ ಭಾನು ಇಷ್ಟು ದಿನ ಖಾಲಿ ಕುಳಿತಿದ್ದು ಇದೇ ಮೊದಲು. ಅವನು ಕಟ್ಟಡ ನಿರ್ಮಾಣದ ಸೈಟಿನಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುತ್ತಾನೆ. ತಿಂಗಳಿಗೆ ಸುಮಾರು 25 ದಿನ 400 ರೂಪಾಯಿ ದಿನಗೂಲಿಗೆ ಕೆಲಸ ಮಾಡುತ್ತಿದ್ದ. ಅದು ಅವನ ಮನೆ ಖರ್ಚಿಗೆ ಸಾಕಾಗಿ ಉತ್ತರ ಪ್ರದೇಶದ ಊರಲ್ಲಿರುವ ವಯಸ್ಸಾದ ತಂದೆ ತಾಯಿಗಳಿಗೆ ಕಳಿಸಲು ಒಂದಿಷ್ಟು ಉಳಿಯುತ್ತಿತ್ತು.

ಯುವ ದಂಪತಿಗಳು ಮಾತನಾಡುತ್ತಿರುವಾಗ ಭಾನುವಿನ ಗೆಳೆಯರಾದ ಸೂರ್ಯ ಮತ್ತು ಅಭಯ್‌ ಅಲ್ಲಿಗೆ ಬಂದರು. ಅವರೆಲ್ಲರೂ ಹತ್ತಿರದ ಸರ್ಕಲ್ಲಿನಲ್ಲಿ ದಿನಾ ಬೆಳಿಗ್ಗೆ ಕೆಲಸಕ್ಕಾಗಿ ನಿಲ್ಲುತ್ತಿದ್ದರು. ಅವರಿಗೆ ಅಲ್ಲಿಂದಲೇ ನಿರ್ಮಾಣ ಸ್ಥಳಗಳಿಗೆ ಕೆಲಸಕ್ಕೆ ಕರೆ ಬರುತ್ತಿತ್ತು. ಈಗ ಅವರಿಗೂ ಕೆಲಸವಿಲ್ಲ. ಸೂರ್ಯ ತನ್ನೊಡನೆ ತಂದಿದ್ದ ನಾಲ್ಕು ಬಾಳೆ ಹಣ್ಣನ್ನು ಭಾನುವಿನ ಕೈಗಿತ್ತ.

ಅಭಯ್‌ ಅವುಗಳನ್ನು ತಿನ್ನುವಂತೆ ಸರಿತಾಳಿಗೆ ಒತ್ತಾಯಿಸಿದ “ಏನ್‌ ಮಾಡ್ತಿದ್ದೀರಾ ಅತ್ತಿಗೆ? ಮೊದಲು ಬಾಳೆ ಹಣ್ಣು ತಿನ್ನಿ… ನಿನ್ನೆಯಿಂದ ಏನೂ ತಿಂದಿಲ್ಲ ನೀವು.”

ಸೂರ್ಯ ಭಾನುವಿನ ಬಳಿ ಕೇಳಿದ “ಮೇಸ್ತ್ರಿ ನಿನಗೆ ಸಂಬಳ ಕೊಟ್ನಾ? ಏನು ಹೇಳಿದ ಅವನು?ʼ

“ಅವನು ಏನು ಹೇಳ್ತಾನೆ? ಅವ್ನು ತುಂಬಾ ದಿನದಿಂದ ನನ್ನ ಫೋನ್‌ ಕೂಡಾ ತೆಗಿತಾ ಇರಲಿಲ್ಲ. ನಾನು ಅವನ ಕಟ್ಟಡದ ಹೊರಗೆ ನಿಂತು ಅವನಿಗಾಗಿ ಕಾಯ್ದೆ. ಒಂದು ಗಂಟೆ ಬಿಟ್ಟು ಎಲ್ಲೋ ಹೊರಗೆ ಹೋಗಿದ್ದವನು ಬಂದ. ಅವನ ಕೈಯಲ್ಲಿ ಪೇಪರಲ್ಲಿ ಸುತ್ತಿದ್ದ ಮದ್ಯ ಇತ್ತು. ಅವನು ಅದನ್ನು ನನ್ನಿಂದ ಮರೆಮಾಡಲು ಪ್ರಯತ್ನ ಮಾಡ್ತಿದ್ದ. ನಾನು ಕಳೆದ ತಿಂಗಳ ಸಂಬಳ ಕೇಳಿದೆ. ಎರಡು ವಾರ ಕೆಲಸ ಮಾಡಿದ್ದೆ. ಆದರೆ ಅವನು ಅವನ ಹತ್ರ ಹಣವೇ ಇಲ್ಲ ಎಂದು ಬಿಟ್ಟ. ಈ ಐನೂರು ಕೊಟ್ಟು ʼನೀನೇ ಏನಾದರೂ ವ್ಯವಸ್ಥೆ ಮಾಡಿಕೋʼ ಎಂದ.

ಸೂರ್ಯ ಹೇಳುತ್ತಾನೆ “ಓಹ್‌, ಮದ್ಯವಾ? ವಾಹ್! ಅಗತ್ಯ ವಸ್ತು ಅಣ್ಣ ಅದು”‌

ಸರಿತಾ ಇಬ್ಬರಿಗೂ ಕುಡಿಯಲು ಎರಡು ಲೋಟ ನೀರು ಕೊಟ್ಟು ಕೇಳಿದಳು, “ಅಣ್ಣಾ, ಯಾವ್ದಾದ್ರೂ ಗಾಡಿ ಬಗ್ಗೆ ಗೊತ್ತಾಯ್ತಾ?”

“ಇಲ್ಲ ಅತ್ತಿಗೆ, ಏನೂ ಸಿಕ್ಕಿಲ್ಲ,” ಎನ್ನುತ್ತಾನೆ ಅಭಯ್.‌ “ಎಲ್ಲಿ ಹೋದ್ರೂ ಜನ ಕ್ಯೂನಲ್ಲಿ ನಿಂತಿದ್ದಾರೆ. ರೋಡಲ್ಲೇ ಕುಳಿತು ತಮ್ಮ ಸರದಿ ಕಾಯ್ತಿದ್ದಾರೆ.”

“ಆದ್ರೆ ನಾವು ಅರ್ಜಿ ಕೊಟ್ಟಿದ್ವಿ, ಟೆಸ್ಟ್‌ ಕೂಡ ಮಾಡಿಸಿಕೊಂಡಿದ್ವಿ. ಅದರ ಕತೆ ಏನಾಯ್ತು?”

“ಮೊಬೈಲ್‌ನಲ್ಲಿ ಚೆಕ್‌ ಮಾಡ್ದೆ, ಕ್ಯಾನ್ಸಲ್‌ ಆಗಿದೆ ಅದು. ನಾವು ಅದರ ಬಗ್ಗೆ ವಿಚಾರಿಸೋದಕ್ಕೆ ಸ್ಟೇಷನ್‌ ಹತ್ರ ಹೋದ್ರೆ ಪೋಲಿಸಿನವನು ಓಡಿಸಿಬಿಟ್ಟ” ಸೂರ್ಯ ಹೇಳಿದ.

ಸರಿತಾ “ಕೆಳಗಿನ ಮನೆ ಗೀತಾಬಾಯಿ ಕುಟುಂಬ ನಿನ್ನೆ ಪ್ರೈವೇಟ್‌ ಕಾರ್‌ ಮಾಡ್ಕೊಂಡು ಅವರ ಊರಿಗೆ ಹೋದ್ರು. ಕಾರಿನವನು ಒಬ್ಬೊಬ್ಬರಿಗೆ 3-4,000 ಸಾವಿರ ದುಡ್ಡು ತಗೊಂಡ್ನಂತೆ.” ಅವರಿಗೆ ಹೇಳಿದಳು.

“ಬ್ಯಾಂಕಲ್ಲಿ ಒಂದು 10,000 ಇದೆ ಈಗ 500 ಕೈಯಲ್ಲಿ ಇದೆ…, ತುಂಬಾ ಜನ ನಡ್ಕೊಂಡೇ ಊರಿಗೆ ಹೋಗ್ತಿದ್ದಾರೆ ಅಂತ ಕೇಳ್ಪಟ್ಟೆ.” ಎಂದು ಭಾನು ಹೇಳಿದ.

ಸೂರ್ಯ ಅಲ್ಲೇ ಭಾನುವಿನೆದುರು ಅವನ ಚಿಲಕ ಹಾಕಿದ್ದ ಕೋಣೆಯ ಹೊಸ್ತಿಲ ಮೇಲೆ ಕುಳಿತು ಆತಂಕದಿಂದ ಹೇಳತೊಡಗಿದ. “ನನಗೆ ಒಂದೂ ಗೊತ್ತಾಗ್ತಿಲ್ಲ. ಮನೆ ಓನರ್‌ ಎರಡು ತಿಂಗಳ ಬಾಡಿಗೆ ಕೊಟ್ಟಿಲ್ಲ ಅಂತ ಫೋನ್‌ ಮಾಡ್ತಾನೇ ಇದ್ದಾನೆ. ಆದರೆ ಎಲ್ಲಿಂದ ತರೋದು ಹಣ?” ಅಭಯ್‌ ಅಲ್ಲೇ ಗೋಡೆಗೆ ಒರಗಿದ. ಸರಿತಾ ಭಾನುವಿನ ಹಿಂದೆ ಬಾಗಿಲ ಬಳಿ ನಿಂತಳು. “ಎಲ್ಲ ಕಡೆಯೂ ಪರಿಸ್ಥಿತಿ ಹೀಗೇ ಇದೆ. ನಾವು ಕೆಲಸಗಾರರದು ಎಲ್ಲರದೂ ಒಂದೇ ಕತೆ. ನಾನು ಎರಡು ತಿಂಗಳಿಂದ ಮನೆಗೆ ಒಂದು ಪೈಸೆ ಕಳಿಸಿಲ್ಲ. ಅಪ್ಪನ ಔಷಧಿಗೂ ಹಣ ಕಳಿಸಿಲ್ಲ…” ಅವನ ತಂದೆಗೆ ಅಸ್ತಮಾ ತೊಂದರೆಯಿದೆ. ಅವನ ತಾಯಿ ಎರಡು ವರ್ಷಗಳ ಹಿಂದೆ ಮಲೇರಿಯಾ ಜ್ವರಕ್ಕೆ ಬಲಿಯಾಗಿದ್ದಾರೆ. ಅವನ ತಂಗಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಒಂದು ಕ್ಷಣ ಅವನು ತನ್ನ ಮನೆಯವರ ನೆನಪಿನಲ್ಲೇ ಕಳೆದುಹೋದ. ನಂತರ ಅವನು ರಾಹುಲ್‌ನೊಂದಿಗೆ ಮಾತನಾಡತೊಡಗಿದ. “ಓಯ್‌ ರಾಹುಲ್, ಏನು ಮಾಡ್ತಿದ್ದೀಯಾ?”

“ನಾನು ನನ್ನ ಆಡಿ ಕಾರ್‌ ಓಡಿಸ್ತಿದ್ದೀನಿ ಅಂಕಲ್.”‌

ಸೂರ್ಯ ಆ ಹುಡುಗನನ್ನು ಕೇಳಿದ “ಆಡಿನಾ..? ನಿನ್ನ ಆಡಿ ಕಾರ್‌ ನಮ್ಮನ್ನು ನಮ್ಮ …. ಪ್ರದೇಶಕ್ಕೆ ಕರ್ಕೊಂಡು ಹೋಗುತ್ತಾ…?

“ಹೌದು, ಖಂಡಿತಾ ಹೋಗುತ್ತೆ, ಇದು ನನ್ನ ಕಾರ್‌, ಎಲ್ಲಿ ಬೇಕಾದ್ರೂ ಹೋಗುತ್ತೆ, ವ್ರೂಮ್….‌ ವ್ರೂಮ್….‌ ವ್ರೂಮ್ ವ್ರೂಮ್….” ಹೊಸ್ತಿಲ ಮೇಲೆ ಕುಳಿತಿದ್ದ ತಂದೆಯನ್ನು ತಳ್ಳಿ ಹೊರಗೆ ಹೋಗಿ ಮತ್ತೆ ಜೋರಾಗಿ ಕಾರಿನ ಸದ್ದು ಮಾಡುತ್ತಾ ಆ ಇಕ್ಕಟ್ಟಾದ ಓಣಿಯಲ್ಲಿ ಓಡಿದ. ಅಭಯ್‌ ಮತ್ತು ಸೂರ್ಯ ಅವನ ಆಟವನ್ನು ಸಂತೋಷದಿಂದ ನೋಡುತ್ತಿದ್ದರು.

“ಅತ್ತಿಗೆ ನಾವೆಲ್ಲ ಹೋಗೋಣ. ನಮ್ಮ ಮನೆಗೆ ಹೋಗೋಣ” ಸೂರ್ಯ ನಿರ್ಧಾರದ ದನಿಯಲ್ಲಿ ಹೇಳಿದ.

ಅದೇ ರಾತ್ರಿ ಅವರು ತಮ್ಮ ಪಾತ್ರೆ ಬಟ್ಟೆಬರೆಗಳನ್ನು ಪ್ಯಾಕ್‌ ಮಾಡಿಕೊಂಡು. ಮರುದಿನ ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕೂ ಮೊದಲೇ ತಮ್ಮ ಊರಿಗೆ ಹೋಗಬಹುದಾದ ರಸ್ತೆಯಂಚಿನಲ್ಲಿ ನಡೆಯತೊಡಗಿದರು.

*****

ನಗರದಿಂದ ಸುಮಾರು 50 ಕಿಲೋಮೀಟರ್‌ ದೂರದಲ್ಲಿ ಒಂದು ಹುಲ್ಲಿನಿಂದ ಕೂಡಿದ ರಸ್ತೆ ಪಕ್ಕದಲ್ಲಿದ್ದ ಮೈದಾನದಲ್ಲಿ ಮಲಗಿದ್ದ ಪಿತ್ಯಾ ಮತ್ತು ಅವನ ಕುಟುಂಬ ಬೆಳಗಿನ ನಾಲ್ಕು ಗಂಟೆಯ ಹೊತ್ತಿಗೆ ಎದ್ದಿತು. ಅವರು ನೆಲಕ್ಕೆ ಹಾಸಿದ್ದ ತಮ್ಮ ಕೌದಿಯನ್ನು ಮಡಚಿ ಮತ್ತೆ ನಡೆಯಲಾರಂಭಿಸಿದರು. ಅವರು ಬುದುರ್ಜ್‌ ಗ್ರಾಮದಲ್ಲಿನ ಇಟ್ಟಿಗೆ ಗೂಡಿನಿಂದ ಹಿಂದಿನ ದಿನ ನಡೆಯಲು ಪ್ರಾರಂಭಿಸಿದ್ದರು. ಅವರ ಮನೆ ಅಲ್ಲಿಂದ 150 ಕಿಲೋಮೀಟರ್‌ ದೂರದ ಗರ್ದೆಪಾಡದಲ್ಲಿತ್ತು. ಅವರು ಇಟ್ಟಿಗೆ ಗೂಡಿನ ಕೆಲಸ ಹುಡುಕಿ ಅಲ್ಲಿಗೆ ಬಂದಿದ್ದರು.

ಪಿತ್ಯಾ ತನ್ನ ಹೆಗಲ ಮೇಲೆ ಭಾರವಿರುವ ಜೋಳದ ಜೋಳದ ಹಿಟ್ಟಿನ ಚೀಲ ಇಟ್ಟುಕೊಂಡಿದ್ದರೆ ತಲೆ ಮೇಲೆ ಅಕ್ಕಿ ಇರಿಸಿಕೊಂಡಿದ್ದಾನೆ ಮತ್ತೆ ಕೈಯಲ್ಲಿ ಪಾತ್ರೆಗಳು. ಝೂಲಾ ತಲೆಯ ಮೇಲೆ ಬಟ್ಟೆಗಳ ಕಟ್ಟನ್ನು ಇರಿಸಿಕೊಂಡು ಅವನ ಹಿಂದೆ ನಡೆಯುತ್ತಿದ್ದಾಳೆ. ಎಂಟು ತಿಂಗಳ ಪುಟ್ಟ ಮಗು ನಂದುವನ್ನು ಬಟ್ಟೆ ತುಂಡು ಬಳಸಿ ತನ್ನ ಹೆಗಲಿಗೆ ಕಟ್ಟಿಕೊಂಡಿದ್ದಾಳೆ. ಮಗು ನಿದ್ರಿಸುತ್ತಿದೆ. ಅವನು ಅತ್ತು ಒಣಗಿದ್ದ ಕಣ್ಣೀರಿನ ಕರೆ ಧೂಳು ಕುಳಿತ ಮುಖದಲ್ಲಿ ಎದ್ದು ಕಾಣುತ್ತಿತ್ತು. 13 ವರ್ಷ ಪ್ರಾಯದ ಕಲ್ಪನ ಬಟ್ಟೆಯ ಕಟ್ಟೊಂದನ್ನು ತಲೆಯ ಮೇಲಿರಿಸಿಕೊಂಡಿದ್ದಾಳೆ. ಅವಳ ಹಿಂದೆ 6 ವರ್ಷದ ಗೀತಾ ಅಕ್ಕನ ಲಂಗದ ತುದಿ ಹಿಡಿದು ನಡೆಯುತ್ತಿದ್ದಾಳೆ.

ಹಿಂದಕ್ಕೆ ತಿರುಗದೆ ಮುಂದಿನಿಂದಲೇ ಝೂಲಾ ಮಕ್ಕಳಿಗೆ: “ಮಕ್ಕಳೇ ಜೋಪಾನವಾಗಿ ನಡೆಯಿರಿ”

ಪಿತ್ಯಾ ಅವರಿಬ್ಬರನ್ನೂ ತಮ್ಮಿಬ್ಬರ ನಡುವೆ ನಡೆಯುವಂತೆ ಹೇಳುತ್ತಾನೆ. “ಅವ್ರಿಬ್ರೂ ನಮ್ಮ ಮಧ್ಯೆ ಇರ್ಲಿ ಹಿಂದೆ ಬೇಡ. ಆಗ ನಾವು ಅವರ ಕಡೆ ಗಮನ ಇಡಬಹುದು”

ಕಲ್ಪನಾ ಮತ್ತು ಗೀತಾ ಪಿತ್ಯಾ ಮತ್ತು ಝೂಲಾ ನಡುವೆ ನಡೆಯಲು ಪ್ರಾರಂಭಿಸುತ್ತಾರೆ. ಕೆಲವು ಗಂಟೆಗಳ ನಂತರ ಸೂರ್ಯ ನೆತ್ತಿಯ ಮೇಲೆ ಬಂದಿದ್ದರಿಂದ ನೆತ್ತಿ ಸುಡುತ್ತಿತ್ತು. ನೆಲ ಕಾದಿದ್ದರಿಂದ ಅವರ ಹರಿದ ಚಪ್ಪಲಿ ಧರಿಸಿದ್ದ ಕಾಲು ಸುಡುತ್ತಿತ್ತು. ಝೂಲಾಳ ಎದೆ ಜೋರಾಗಿ ಹೊಡೆದುಕೊಳ್ಳುತ್ತಿದೆ. ಉಸಿರಾಡುವುದು ಕಷ್ಟವಾಗುತ್ತಿತ್ತು.

“ಒಂದ್ನಿಮಿಷ ಇರಿ… ಸ್ವಲ್ಪ ಹೊತ್ತು ನಿಲ್ಲೋಣ. ನಡೆಯೋಕೆ ಆಗ್ತಿಲ್ಲ ಬಾಯಾರಿಕೆ ಕೂಡ ಆಗ್ತಿದೆ.”

“ಮುಂದೆ ಒಂದು ಹಳ್ಳಿ ಇದೆ ಅಲ್ಲಿ ನಿಲ್ಲೋಣ.” ಪಿತ್ಯಾ ಹೇಳಿದ

ದೂರದಲ್ಲಿ ಒಂದು ಅರಳಿ ಮರ ಕಾಣುತ್ತಿತ್ತು. ಅದರ ಎಡಭಾಗದಲ್ಲಿ ಆದರ್ಸ್‌ವಾಡಿ ಊರಿಗೆ ಹೋಗುವ ದಾರಿಯಿತ್ತು. ಆ ಮರದ ಕೊಂಬೆಗೆ ಊರಿನ ದಾರಿಯ ಬೋರ್ಡ್‌ ನೇತು ಹಾಕಲಾಗಿತ್ತು. ಪಿತ್ಯಾ ಮತ್ತು ಕುಟುಂಬ ಆ ಮರದ ಕಟ್ಟೆಯ ಮೇಲೆ ತಮ್ಮ ಲಗೇಜುಗಳನ್ನು ಇರಿಸಿ ಸುಧಾರಿಸಿಕೊಂಡರು. ದಟ್ಟವಾಗಿ ಬೆಳೆದ ಅರಳಿ ಮರದ ತಣ್ಣನೆ ನೆರಳು ಬಹಳ ಹಿತವಾಗಿತ್ತು. ಝೂಲಾ ಮಗುವನ್ನು ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಸೆರಗನ್ನು ಮರೆ ಮಾಡಿಕೊಂಡು ಎದೆ ಹಾಲುಣಿಸತೊಡಗಿದಳು.

ಪಿತ್ಯಾ ಸ್ವಲ್ಪ ಸುಧಾರಿಸಿಕೊಂಡು ಅವರ ಲಗೇಜುಗಳ ಕಟ್ಟಿನಿಂದ ಮೂರು ಪ್ಲಾಸ್ಟಿಕ್‌ ಬಾಟಲ್‌ ಹೊರತೆಗೆದು ನೀರು ತರಲು ಹೊರಟ. “ಇಲ್ಲೇ ಇರಿ ನಾನು ಹೋಗಿ ನೀರು ತರ್ತೀನಿ.”

ಸ್ವಲ್ಪ ದೂರ ಮಣ್ಣಿನ ದಾರಿಯಲ್ಲಿ ನಡೆದವನಿಗೆ ಅಲ್ಲಿ ಬ್ಯಾರಿಕೇಡ್‌ಗಳು ಮತ್ತು ಮುಳ್ಳಿನ ಬೇಲಿ ಎದುರಾದವು. ಅದರ ಮೇಲೊಂದು ದೊಡ್ಡ ಅಕ್ಷರಗಳಲ್ಲಿ ಬರೆದ ಬೋರ್ಡ್‌ ಇತ್ತು: ಹೊರಗಿನವರು ಹಳ್ಳಿ ಪ್ರವೇಶಿಸುವುದನ್ನು ಕೊರೋನಾ ವೈರಸ್‌ ಸುರಕ್ಷತೆಯ ಕಾರಣದಿಂದ ನಿಷೇಧಿಸಲಾಗಿದೆ.

“ನಿಷೇಧ? ಕರೋನಾ…” ಪಿತ್ಯಾ ನಿಧಾನವಾಗಿ ಬೋರ್ಡ್‌ ಓದಿದವನು ಊರಿನ ಯಾರಿಗಾದರೂ ಕೇಳಬಹುದೆಂದು ಜೋರಾಗಿ ಕರೆಯತೊಡಗಿದ.

“ಯಾರಾದರೂ ಇದ್ದೀರಾ? ಅಣ್ಣಾ… ಅಕ್ಕಾ… ಯಾರಾದರೂ ಇದ್ದೀರಾ? ಸ್ವಲ್ಪ ಕುಡಿಯುವ ನೀರು ಬೇಕಿತ್ತು… ಯಾರಾದ್ರೂ ಇದ್ದೀರಾ?

ಹೀಗೆ ಬಹಳ ಹೊತ್ತು ಕರೆದ, ಆದರೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಅಲ್ಲಿಂದ ಬೇಸರದಿಂದ ಹೊರಟ. ಅವನು ಬರುತ್ತಿರುವುದನ್ನು ನೋಡಿದ ಝೂಲಾಳ ಮುಖದಲ್ಲಿ ನಗು ಮೂಡಿತು.

“ಎಲ್ಲಿ ನೀರು”

“ದಾರಿ ಬಂದ್‌ ಮಾಡಿದ್ದಾರೆ. ನಾನು ಊರಿನವರನ್ನ ಕರೆದೆ ಆದ್ರೆ ಯಾರೂ ಬರಲಿಲ್ಲ. ಕಾಯಿಲೆ ಇಲ್ಲೂ ಇದೆ. ಮುಂದೆ ನೋಡೋಣ ಏನಾದರೂ ಸಿಗಬಹುದು.

ಝೂಲಾ ಭರವಸೆಯಿರುವವಳು. “ಮುಂದೆ ಎಲ್ಲಾದ್ರೂ ಖಾಲಿ ಮೈದಾನ ಕಂಡರೆ ಅಲ್ಲೇ ಒಲೆ ಹೂಡೋಣ”

ಗೀತಾ ದೈನ್ಯವಾಗಿ ಹೇಳಿದಳು “ಅಪ್ಪಾ ತುಂಬಾ ಹೊಟ್ಟೆ ಹಸೀತಿದೆ”

ಅಪ್ಪ ಅವಳನ್ನು ಸಮಾಧಾನಗೊಳಿಸುತ್ತಾ, “ಬಾ ಮಗಳೇ, ನನ್ನ ಹೆಗಲ ಮೇಲೆ ಕೂತ್ಕೋ. ಮೇಲಿಂದ ಏನೆಲ್ಲ ಕಾಣುತ್ತೆ ಅಂತ ನಮಗೆಲ್ಲ ಹೇಳು.”

ಗೀತಾ ಅವನ ಹೆಗಲೇರಿ ಅವನ ತಲೆಯನ್ನು ಹಿಡಿದುಕೊಂಡು ಕುಳಿತಳು. ಪಿತ್ಯಾ ಅಕ್ಕಿ ಮತ್ತು ಜೋಳದ ಚೀಲವನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಪಾತ್ರೆಗಳನ್ನು ಹಿಡಿದು ನಡೆಯತೊಡಗಿದನು. ಸುಮಾರು 2-3 ಕಿಲೋಮೀಟರ್‌ ನಡೆದ ನಂತರ, ಅವರು ರಸ್ತೆ ಬದಿಯಲ್ಲಿದ್ದ ಒಂದು ಟಿನ್‌ ಶೀಟಿನಿಂದ ಮಾಡಿದ ಗುಡಿಸಲಿನ ಬಳಿ ಬಂದರು. ಝೂಲಾಗೆ ಅಲ್ಲಿ ಯಾರೋ ಇರುವುದು ಕಾಣಿಸಿತು.

“ಇಲ್ಲಿ ಕೇಳಿ! ಅಲ್ಲಿ ಯಾರೋ ಬಿದ್ದಿರೋ ಹಾಗಿದೆ”

ಪಿತ್ಯಾ ಎಚ್ಚರಿಕೆಯಿಂದ ಗಮನಿಸಿ “ಯಾರೋ ಮಲಗಿರಬೇಕು.”

“ಮೈದಾನದಲ್ಲಿ ಆ ರೀತಿ ಯಾರು ಮಲಗ್ತಾರೆ? ಸರಿಯಾಗಿ ನೋಡಿ. ಬಹುಶಃ ಆಕೆ ಜ್ಞಾನ ತಪ್ಪಿ ಬಿದ್ದಿರಬಹುದು.”

ಪಿತ್ಯಾ ಗುಡಿಸಲಿನ ಹತ್ತಿರ ಹೋಗಿ ತನ್ನ ಕೈಯಲ್ಲಿದ್ದ ವಸ್ತುಗಳನ್ನು ಕೆಳಗಿರಿಸಿ ಗೀತಾಳನ್ನೂ ಕೆಳಗಿಳಿಸಿದ. ಒಬ್ಬ ವಯಸ್ಸಾದ ಮಹಿಳೆ ಅಲ್ಲಿ ಕುಸಿದು ಬಿದ್ದಿದ್ದಳು.

“ಝೂಲಾ, ಬಾ ಇಲ್ಲಿ”

ಝೂಲಾ ಗುಡಿಸಲಿನ ಕಡೆ ಓಡುತ್ತಾಳೆ, ಕಲ್ಪನಾ ಕೂಡ ಅವಳ ಹಿಂದೆಯೇ ಓಡುತ್ತಾಳೆ. ಅವರು ಆ ಮಹಿಳೆಯನ್ನು ಎಬ್ಬಿಸಲು ನೋಡುತ್ತಾರೆ. ಝೂಲಾ ಕಲ್ಪನಾ ಬಳಿ ಒಳಗಿನಿಂದ ನೀರು ತರಲು ಹೇಳುತ್ತಾಳೆ.

“ಅಜ್ಜಿ…” ಎಂದು ಕರೆದ ಪಿತ್ಯಾ ಆಕೆಯ ಮುಖದ ಮೇಲೆ ನೀರು ಸಿಂಪಡಿಸುತ್ತಾನೆ.

ಅವಳನ್ನು ಎತ್ತಿ ಅಲ್ಲೇ ಇದ್ದ ಹಗ್ಗದ ಮಂಚದ ಮೇಲೆ ಮಲಗಿಸಿದ ಪಿತ್ಯಾ ಮಗುವನ್ನೆತ್ತಿಕೊಂಡು ಹುಲ್ಲಿನ ಮೇಲೆ ಕುಳಿತುಕೊಳ್ಳುತ್ತಾನೆ.

ಝೂಲಾ ತಡ ಮಾಡದೆ, ಅಲ್ಲೇ ಇದ್ದ ಕಲ್ಲುಗಳನ್ನು ಒಟ್ಟುಗೂಡಿಸಿ ಒಲೆ ಹೂಡಿ ಬೆಂಕಿ ಮಾಡಿ ಗುಡಿಸಲಿನ ಹೊರಗೆ ಅಡುಗೆಗೆ ತಯಾರಿ ಮಾಡುತ್ತಾಳೆ. ರೊಟ್ಟಿ ತಯಾರಾಗುವ ವೇಳೆಗೆ ಅಜ್ಜಿಗೆ ಪ್ರಜ್ಞೆ ಬಂತು.

ಪಿತ್ಯಾ “ಎದ್ರಾ ಅಜ್ಜಿ? ನಿಮ್ಮ ಹೊಟ್ಟೆಯೊಳಗಿಂದ ಸಿಕ್ಕಾಪಟ್ಟೆ ಸದ್ದು ಬರ್ತಿದೆ. ಏನೂ ತಿಂದಿಲ್ವಾ?

“ನಾನು ಅಜ್ಜಿ ಅಲ್ಲ! ನನ್ನ ಹೆಸರು ಲಕ್ಷ್ಮಿ ಬಾಯಿ. ಮತ್ತೆ ಅದು ಹೇಗೆ ಇನ್ನೊಬ್ಬರ ಮನೆಯೊಳಗೆ ಹೀಗೆ ನುಗ್ಗುತ್ತೀರಿ? ನಿಮಗೆ ನಾಚಿಕೆ ಆಗಲ್ವ?”

ಕಲ್ಪನಾ ರೊಟ್ಟಿ ಮತ್ತು ಎಳ್ಳಿನ ಚಟ್ನಿಯನ್ನು ಅವಳ ಕೈಯಲ್ಲಿಟ್ಟು “ತಗೊಳ್ಳಿ ಅಜ್ಜಿ, ತಿನ್ನಿ.”

ರೊಟ್ಟಿಯನ್ನು ನೋಡುತ್ತಿದ್ದಂತೆ ಅಜ್ಜಿಯ ಕೋಪ ಹಾರಿ ಹೋಯಿತು. ಅಜ್ಜಿ ಒಂದು ರೊಟ್ಟಿಯನ್ನು ತಿಂದು ಮುಗಿಸುತ್ತಿದ್ದಂತೆ ಝೂಲಾ ಇನ್ನೊಂದು ರೊಟ್ಟಿ ಚಟ್ನಿ ನೀಡಿದಳು ಲಕ್ಷ್ಮಿಬಾಯಿ ಅವಳತ್ತ ನೋಡಿ ನಗು ಬೀರಿದಳು.

“ಯಾವ ಕಡೆ ಹೊರಟಿದ್ದೀರಿ?”

“ಇಟ್ಟಿಗೆ ಗೂಡಿನ ಕೆಲಸಕ್ಕೆಂದು ಹೋಗಿದ್ವಿ ಆದ್ರೆ ಅರ್ಧಕ್ಕೆ ವಾಪಸ್‌ ಬಂದ್ವಿ.”

“ಹ್ಮ್... ಏನೋ ಕಾಯಿಲೆಯಂತೆ, ನಾನೂ ಕೇಳ್ಪಟ್ಟೆ. ಹಳ್ಳಿಯವರು ನನ್ನನ್ನೂ ಒಳಗೆ ಬಿಡುತ್ತಿಲ್ಲ. ನಾನು ಭಿಕ್ಷೆ ಬೇಡಿ ಬದುಕು ನಡೆಸ್ತೀನಿ. ನಾಲ್ಕು ದಿನ ಕಳೆದ ಮೇಲೆ ಇವತ್ತೇ ನನ್ನ ಬಾಯಿ ರೊಟ್ಟಿ ಅನ್ನೋದನ್ನ ನೋಡಿದ್ದು.” ಅವರು ಮಾತನಾಡುತ್ತ ಊಟ ಮುಗಿಸಿದರು. ಝೂಲಾ ಐದು ರೊಟ್ಟಿಗಳನ್ನು ಬಟ್ಟೆಯಲ್ಲಿ ಸುತ್ತಿಟ್ಟು ಲಕ್ಷ್ಮಿಬಾಯಿಯಿಂದ ಬೀಳ್ಕೊಂಡಳು. ಪಿತ್ಯಾ ನೀರಿನ ಬಾಟಲಿಗಳನ್ನು ತುಂಬಿಸಿಕೊಂಡು ಹೊರಡಲು ಅನುವಾದನು.

ಲಕ್ಷ್ಮಿ ಬಾಯಿ ಮಂಚದ ಮೇಲೆ ಕುಳಿತುಕೊಂಡೇ ಅವರಿಗೆ ಕೈಬೀಸಿದಳು “ಹುಷಾರಾಗಿ ಹೋಗಿ ಮಕ್ಕಳೇ” ಎನ್ನುತ್ತಾ ತುಂಬಾ ಹೊತ್ತು ಅವರು ಹೋಗುತ್ತಿದ್ದ ದಾರಿಯನ್ನೇ ನೋಡುತ್ತಾ ಕುಳಿತಿದ್ದಳು. ನಂತರ ಒಂದು ದೀರ್ಘ ನಿಟ್ಟುಸಿರಿಟ್ಟು ಗುಡಿಸಲಿನ ಒಳಗಿದ್ದ ಮಡಕೆಯಿಂದ ನೀರು ಕುಡಿಯಲೆಂದು ಹೋದಳು. ಅಲ್ಲಿ ಮಡಕೆಯ ಪಕ್ಕದಲ್ಲಿ ಪ್ಲಾಸ್ಟಿಕ್‌ ಕವರ್‌ ಒಂದರಲ್ಲಿ ಒಂದಿಷ್ಟು ಜೋಳದ ಹಿಟ್ಟು ಮತ್ತು ಎಳ್ಳಿನ ಚಟ್ನಿ ಇತ್ತು. ಅವಳು ಅವರನ್ನು ಕರೆಯಲೆಂದು ಓಡಿದಳಾದರೂ ಅವರು ಹೋಗಿಯಾಗಿತ್ತು!

ಅವರು ಸುಮಾರು ಹತ್ತು ಕಿಲೋಮೀಟರ್‌ ನಡೆದ ನಂತರ ದಾರಿಯಲ್ಲಿ ಬದನೆ ಮತ್ತು ಟೊಮ್ಯಾಟೋ ಚೆಲ್ಲಾಡಿರುವುದನ್ನು ನೋಡಿ ಅಲ್ಲಿ ನಿಂತರು. ರೈತನೊಬ್ಬ ತರಕಾರಿಗಳನ್ನು ರಸ್ತೆಗೆ ಎಸೆದಿದ್ದ. “ಅವು ಹೇಗಿದ್ದರೂ ಹಾಳಾಗುತ್ತವೆ, ಇದನ್ನು ಸಿಟಿಗೆ ಕೊಂಡೊಯ್ಯುವುದಾದರೂ ಹೇಗೆ? ಎಷ್ಟು ಅಂತ ನಾವು ತಿನ್ನೋಕೆ ಸಾಧ್ಯ ಎಸೆದುಬಿಡು.” ಪಿತ್ಯಾನಿಗೆ ರೈತ ಹೇಳುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ಅವರ ಮಾತುಗಳನ್ನು ಕೇಳಿ ಪಿತ್ಯಾನಿಗೆ ತನ್ನ ಊರಿನಲ್ಲಿ ಸರಿಯಾದ ಮಳೆಯಿಲ್ಲದ ಕಳೆದ ವರ್ಷ ತನ್ನ ಹೊಲದಲ್ಲಿ ಭತ್ತದ ಬೆಳೆ ನಾಶವಾಗಿದ್ದು ನೆನಪಾಯಿತು,

“ಝೂಲಾ, ಬಹುಶಃ ಎಲ್ಲ ಸಮಯದಲ್ಲೂ ರೈತ ನಷ್ಟ ಹೊಂದುತ್ತಲೇ ಇರಬೇಕು ಅನ್ಸತ್ತೆ” ಎಂದ ಪಿತ್ಯಾ. “ಮಳೆ ಆದ್ರೂ ಅಷ್ಟೇ ಕಾಯಿಲೆ ಆದ್ರೂ ಅಷ್ಟೇ”

ಅವರು ಮನೆ ತಲುಪುವ ಭರವಸೆಯಲ್ಲಿ ಗುರಿಯಿಲ್ಲದೆ ನಡೆಯುತ್ತಲೇ ಹೋದರು. ಮುಂದೆ ಹೋದಂತೆ ದೊಡ್ಡ ಜನಸಂದಣಿ ನೋಡಿ ಅಲ್ಲಿಯೇ ನಿಂತರು. ಖಾಕಿ ತೊಟ್ಟಿದ್ದ ಪೋಲಿಸರು ರಸ್ತೆಯ ನಡುವೆ ಅರಿಷಿನ ಬಣ್ಣದ ಬ್ಯಾರಿಕೇಡ್‌ಗಳನ್ನು ಹಾಕಿ ಜನರನ್ನು ಮರದ ಗುರಾಣಿಯಿಂದ ಹಿಂದಕ್ಕೆ ತಳ್ಳುತ್ತಿದ್ದರು. ಕೆಲವರು ಪೋಲಿಸರನ್ನು ತಳ್ಳಾಡುತ್ತಿದ್ದರು. ಸಾಕಷ್ಟು ಜನ ಅಲ್ಲೇ ಬೀದಿಯಲ್ಲಿ ಕುಳಿತಿದ್ದರು. ಹೆಂಗಸರು, ಮಕ್ಕಳು, ಪುರುಷರು ಹೀಗೆ ಎಲ್ಲರೂ ಅಲ್ಲಿದ್ದರು. ಪಿತ್ಯಾ, ಝೂಲಾ ಮತ್ತು ಮಕ್ಕಳು ಆ ಗುಂಪನ್ನು ಸೇರಿಕೊಂಡರು.

*****

“ಸಾಹೇಬ್ರೆ, ನಮ್ಮನ್ನು ಹೋಗಲು ಬಿಡಿ ಬೆಳಿಗ್ಗೆಯಿಂದ ನಡೆದಿದ್ದೀವಿ. ಏನನ್ನೂ ತಿಂದಿಲ್ಲ” ಸೂರ್ಯ ಫೋಲಿಸರ ಬಳಿ ಬೇಡಿಕೊಂಡನು.

“ಅದಕ್ಕೆ ನಾನೇನು ಮಾಡ್ಲಿ? ನಾನು ನಡೆಯೋಕೆ ಹೇಳಿದ್ನಾ? ಮೇಲಿಂದ ಆರ್ಡರ್‌ ಇದೆ. ಗಡಿ ದಾಟುವ ಹಾಗಿಲ್ಲ. ಹಿಂದೆ ಹೋಗಿ. ದಯವಿಟ್ಟು ಹೇಳೋದು ಕೇಳಿ ಹಿಂದಕ್ಕೆ ಹೋಗಿ ಅಣ್ಣ.”

“ಎಲ್ಲಿಗೆ ಹೋಗೋದು ಸಾಹೇಬ್ರೆ? ನೋಡಿ ಇಲ್ಲಿ ನಿಮ್ಮವರು ಹೇಗೆ ಕಾಲಿಗೆ ಹೊಡೆದಿದ್ದಾರೆ. ಔಷಧಿ ಏನಾದರೂ ಕೊಡಿ ತುಂಬಾ ನೋಯ್ತಿದೆ.”

ನಮ್ಮವರಾ? ಸುಮ್ನೆ ಹೋಗು ಇಲ್ಲಿಂದ. ಓಡು.” ಎಂದ ಪೋಲಿಸ್‌ ದೊಣ್ಣೆಯನ್ನು ಹೊಡೆಯಲೆಂದು ಮೇಲಕ್ಕೆತ್ತಿದನು. ಸೂರ್ಯ ಕೈಯನ್ನು ತಲೆಗೆ ಪೆಟ್ಟು ಬೀಳದಂತೆ ಅಡ್ಡ ಹಿಡಿಯುತ್ತಾ ಹೆಜ್ಜೆ ಹಿಂದಕ್ಕಿಟ್ಟನು. ಭಾನು, ಸರಿತಾ ಮತ್ತು ಪುಟ್ಟ ಮರದಡಿಯಲ್ಲಿ ಕುಳಿತಿದ್ದರು. ಸೂರ್ಯ ಅದೇ ಮರದ ಕೊಂಬೆಗೆ ಒರಗಿ ನಿಂತನು.

“ಅಲ್ಲಿಗೆ ಹೋಗ್ಬೇಡ ಅಂತ ಹೇಳಿಲ್ವ ನಾನು ನಿಂಗೆ?” ಎಂದು ಅಭಯ್‌ ಸೂರ್ಯನನ್ನು ಬಯ್ದನು.

“ನಾವು ಒಂದೂವರೆ ಗಂಟೆಯಿಂದ ಇಲ್ಲಿ ಕುಳಿತಿದ್ದೀವಿ. ಅವರು ಹೊಡೀಲಿ, ಬಡೀಲಿ ಏನೇ ಮಾಡ್ಲಿ ನಾನು ಮನೆಗೆ ಹೋಗಲೇಬೇಕು.”

“ಮನೆ! ಇಷ್ಟು ವರ್ಷಗಳಲ್ಲಿ ದೊಡ್ಡ ಮನುಷ್ಯರಿಗಾಗಿ ಎಷ್ಟು ದೊಡ್ಡ ಮನೆಗಳನ್ನು ಕಟ್ಟಿರಬಹುದು ನಾವು? ಎಷ್ಟು ಕಟ್ಟಡಗಳನ್ನು ಕಟ್ಟಿರಬಹುದು? ನಾವು ನಡೆದು ಬರುವಾಗ ಅದೆಲ್ಲವನ್ನೂ ನೋಡಿಲ್ಲವೆ?”

“ಯಾರೂ ಕಿಟಕಿಯಿಂದ ಹೊರಗೆ ನೋಡಲಿಲ್ಲ ಯಾರೂ ನಿನಗೆ ತ್ಯಾಂಕ್ಸ್‌ ಹೇಳಲಿಲ್ಲ” ಎಂದು ಸೂರ್ಯ ಕಹಿಯಾಗಿ ನಕ್ಕನು.

“ಅವರು ಖಂಡಿತ ರಸ್ತೆಯಲ್ಲಿ ಜನರು ಸಾಲಾಗಿ ನಡೆಯುತ್ತಿರುವುದನ್ನು ಕಿಟಕಿಯಿಂದ ನೋಡಿರುತ್ತಾರೆ.. ಖಂಡಿತ ನೋಡಿರುತ್ತಾರೆ.” ಭಾನು ಪಿತ್ಯಾ ಮಾತನಾಡಿಸಿದ್ದರಿಂದಾಗಿ ತನ್ನ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದ. “ಅಣ್ಣಾ ಪೋಲಿಸರು ರೋಡಿನಲ್ಲಿ ಯಾಕೆ ಎಲ್ಲರನ್ನೂ ಹೀಗೆ ತಡೆದು ನಿಲ್ಲಿಸುತ್ತಿದ್ದಾರೆ?” ಎಂದು ಕೇಳಿದ ಪಿತ್ಯಾ.

ಸೂರ್ಯ ಅವನನ್ನು ಹಿಂದಿಯಲ್ಲಿ “ನೀನು ಮರಾಠಿ ಮಾತಾಡ್ತೀಯಾ”

ಪಿತ್ಯಾ ಅವನ ಭಾಷೆಯಲ್ಲೇ ತನ್ನ ಮಾತನ್ನು ಮುಂದುವರಿಸಿದ. “ಅಣ್ಣಾ, ನಾವು ನಮ್ಮ ಊರಿಗೆ ಹೋಗಬೇಕು. ಇಟ್ಟಿಗೆ ಗೂಡಿನ ಕೆಲಸ ನಿಂತು ಹೋಗಿದೆ.ಯಾವುದೇ ಗಾಡಿಗಳು ಓಡಾಡ್ತಿಲ್ಲ ಹೀಗಾಗಿ ನಾವು ನಡೆದೇ ಹೊರಟೆವು.”

ಸೂರ್ಯ ಮ್ತತು ಇತರರು ಪಿತ್ಯಾನ ಕಡೆ ಏನೂ ಅರ್ಥವಾಗದವರಂತೆ ನೋಡಿದರು. ಅಭಯ್‌ ಅವನಿಗೆ ಅರ್ಥವಾಗುವಂತೆ ವಿವರಿಸಲು ಮುಂದಾದನು. ನೀನು ಏನು ಹೇಳ್ತಿದ್ದೀಯಾ ಅಂತ ಗೊತ್ತಾಗ್ತಿಲ್ಲ. ಆದ್ರೆ ನೀನು ರೋಡ್‌ ಅಂದ್ಯಲ್ಲ. ಆ ರೋಡ್‌ ಕ್ಲೋಸ್‌ ಆಗಿದೆ”

“ಅಪ್ಪ ಏನ್‌ ಹೇಳ್ತಿದ್ದಾರಂತ ನಾನು ಹೇಳ್ತೀನಿ” ಎಂದು ಕಲ್ಪನಾ ಅವರ ಮಧ್ಯೆ ಪ್ರವೇಶಿಸಿದಳು. ತಾನು ಶಾಲೆಯಲ್ಲಿ ಕಲಿತ ಹಿಂದಿಯ ಸಹಾಯದಿಂದ ಅವರೊಡನೆ  ಹಿಂದಿಯಲ್ಲಿ ಮಾತನಾಡಿದಳು. “ನಾವು ನಮ್ಮ ಊರಿಗೆ ಹೋಗಬೇಕಿದೆ ಮತ್ತು ಅಪ್ಪ ಪೋಲೀಸ್‌ ಯಾಕೆ ಇಲ್ಲಿ ಎಲ್ಲರನ್ನೂ ತಡೆಯುತ್ತಿದ್ದಾರೆ ಎಂದು ಕೇಳ್ತಿದ್ದಾರೆ.”

ಸೂರ್ಯ ನಗುತ್ತಾ, “ನಿಮ್ಮ ಅಪ್ಪನ ಮರಾಠಿ ನಮಗೆ ಅರ್ಥವಾಗಲಿಲ್ಲ. ಅದು ಪೇಟೆಯ ಮರಾಠಿಗಿಂತ ಬೇರೆ ರೀತಿಯಿತ್ತು.”

ಕಲ್ಪನಾ ಮಾತು ಮುಂದುವರಿಸುತ್ತಾ, “ಮರಾಠಿ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ರೀತಿ ಮಾತನಾಡುತ್ತಾರೆ. ಎಲ್ಲೂ ಒಂದೇ ತರಹ ಇರಲ್ಲ”

ಭಾನು ತನಗೆ ಗೊತ್ತಿರುವ ಒಂದಿಷ್ಟು ಮರಾಠಿಯಲ್ಲಿ ಪಿತ್ಯಾನನಿಗೆ ಕುಳಿತುಕೊಳ್ಳಲು ಹೇಳುತ್ತಾ, “ಈಗ ನೀನು ಭಾಷೆಯ ಕ್ಲಾಸ್‌ ತಗೋತೀಯಾ?” ಎಂದು ಕಲ್ಪನಾ ಕಡೆ ನಗುತ್ತಾ ಕೇಳಿದ. “ಜಾಣ ಹುಡುಗಿ ನೀನು.”

ಅವರು ತಮ್ಮ ತಮ್ಮ ಭಾಷೆಗಳಲ್ಲೇ ತುಂಬಾ ಹೊತ್ತು ಮಾತನಾಡಿದರು. ಆಗ ಗುಂಪಿನಿಂದ ಅಸ್ಪಷ್ಟ ಮಾತುಗಳು ಕೇಳತೊಡಗಿದವು.

“ಇನ್ನೂ ಎಷ್ಟು ಹೊತ್ತು ಇಲ್ಲೇ ಕುಳಿತಿರುವುದು?” ಒಬ್ಬ ಹೇಳಿದ “ಈ ಮಣ್ಣಿನ ರಸ್ತೆಯಲ್ಲಿ ರೈಲ್ವೇ ಹಳಿಗಳ ಕಡೆ ನಡೆದು ಹೋಗೋಣ ಹೇಗಿದ್ದರೂ ರೈಲುಗಳನ್ನು ಅವರು ಬಿಡುವುದಿಲ್ಲ. ಅದರ ಮೇಲೆ ನಡೆದು ಊರು ತಲುಪಬಹುದು. ಬನ್ನಿ ಹೋಗೋ ಎಲ್ಲ ಬನ್ನಿ!”

ಎಲ್ಲರೂ ಆ ಮಣ್ಣಿನ ರಸ್ತೆಯಲ್ಲಿ ನಡೆಯಲು ತೊಡಗುವರು. ಎರಡು ಕುಟುಂಬಗಳು ನಡೆಯಲು ಅವರ ಹಿಂದೆ ತೀರ್ಮಾನಿಸುವವು. ಅವರು ಕತ್ತಲೆಯಾಗುವ ತನಕ ನಡೆದರು.ಪಿತ್ಯಾ ಮತ್ತು ಇತರರು ಇನ್ನೊಂದು 40 ಕಿಲೋಮೀಟರ್‌ ನಡೆದರು. ಅವರೀಗ ರೈಲ್ವೇ ಹಳಿಯ ಮೇಲೆ ನಡೆಯುತ್ತಿದ್ದಾರೆ. ಸೂರ್ಯ ತನ್ನ ಕಾಲು ನೋವಿನಿಂದಾಗಿ ಎಲ್ಲರಿಗಿಂತ ಹಿಂದೆ ಉಳಿಯುತ್ತಾನೆ. ಗೀತಾ ಮತ್ತು ಕಲ್ಪನಾ ಅವನ ಜೊತೆ ನಡೆಯುತ್ತಾರೆ.

ಭಾನು ಪಿತ್ಯಾನ ಬಳಿ ಸೂರ್ಯ ಮತ್ತು ಹುಡುಗಿಯರು ಬರುವ ತನಕ ಕಾಯೋಣ ಎಂದು ಸಲಹೆ ಕೊಡುತ್ತಾನೆ. “ಸ್ವಲ್ಪ ಹೊತ್ತು ನಿಲ್ಲೋಣ. ಅವರು ಬರುವ ತನಕಕ ಇಲ್ಲಿ ಕುಳಿತಿರೋಣ.”

ಸರಿತಾ ಭಾನುವಿನ ಬಳಿ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡುತ್ತಾಳೆ. “ಈಗಾಗಲೇ ರಾತ್ರಿಯಾಗಿದೆ. ರಾಹುಲ್‌ಗೆ ಹಸಿವಾಗಿದೆ ನಿದ್ರೆ ಕೂಡ ಬರ್ತಿದೆ.

ಝೂಲಾ ರೊಟ್ಟಿಯ ಕಟ್ಟನ್ನು ತೆಗೆದು ಹಳಿಯ ಮೇಲೆ ಕಾಲು ಚಾಚಿ ಕುಳಿತಿದ್ದ ಎಲ್ಲರಿಗೂ ಕೊಡುತ್ತಾಳೆ “ಎಲ್ಲರೂ ಸ್ವಲ್ಪ ಸ್ವಲ್ಪ ತಿನ್ನೋಣ”

ಅಭಯ್‌ “ಮಕ್ಕಳು ಮತ್ತು ಸೂರ್ಯ ಬರಲಿ” ಎನ್ನುತ್ತಾನೆ.

ಹಾಗೆ ಅವರು ಕಾಯುತ್ತಿರುವಾಗಲೇ ಅವರನ್ನು ನಿದ್ರೆ ಆವರಿಸಲಾರಂಭಿಸಿತು. ಪಿತ್ಯಾ ಒಂದಿಷ್ಟು ಹೊತ್ತು ಎಚ್ಚರವಿರಲು ಪ್ರಯತ್ನಿಸಿ ನಂತರ ಅಲ್ಲೇ ನಿದ್ರೆ ಹೋದ. ಅಷ್ಟು ಹೊತ್ತಿಗೆ ಎಲ್ಲರಿಗೂ ನಿದ್ರೆ ಬಂದಿತ್ತು.

ದೂರದಲ್ಲಿ ಬರುತ್ತಿದ್ದ ರೈಲಿನ ಜೋರಾದ ಹಾರ್ನ್‌ ಅವರ ದಣಿದ ಕಿವಿಗಳಿಗೆ ಕೇಳಲೇ ಇಲ್ಲ. ರೈಲು ಇಂಜಿನ್‌ನ ದೊಡ್ಡ ಬೆಳಕಿಗೆ ಅವರನ್ನು ಮನೆಯ ಕನಸಿನಿಂದ ಎಚ್ಚರಗೊಳಿಸಲು ಸಾಧ್ಯವಾಗಲಿಲ್ಲ.

ಇಲ್ಲಸ್ಟ್ರೇಷನ್: ಅಂತರಾ ರಾಮನ್. ಅವರು ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಸಂಸ್ಥೆಯಿಂದ ವಿಷುಯಲ್ ಕಮ್ಯುನಿಕೇಷನ್‌ನಲ್ಲಿ ಇತ್ತೀಚಿಗೆ ಪದವಿಯನ್ನು ಪಡೆದಿದ್ದಾರೆ. ಪರಿಕಲ್ಪನಾ ಕಲೆ ಮತ್ತು ಅದರ ಎಲ್ಲಾ ಪ್ರಕಾರಗಳಲ್ಲಿ ಕಥೆ ಹೇಳುವಿಕೆಯು ಅವರ ಇಲ್ಲಸ್ಟ್ರೇಷನ್ ಮತ್ತು ಡಿಸೈನ್ ಪ್ರಾಕ್ಟೀಸ್ ಮೇಲೆ ದೊಡ್ಡ ಪ್ರಭಾವ ಬೀರಿದೆ.

ಅನುವಾದ: ಶಂಕರ ಎನ್. ಕೆಂಚನೂರು

Jyoti is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

Other stories by Jyoti
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru