ಎಪ್ರಿಲ್ 1, 2022ರ ಶುಕ್ರವಾರದ ಬೆಳಗು ರಮಾ ಅವರ ಪಾಲಿಗೆ ಎಂದಿನಂತೆಯೇ ಇತ್ತು. ಅಂದು 4:30ರ ಸುಮಾರಿಗೆ ಎಚ್ಚರಗೊಂಡು, ಹತ್ತಿರದ ಊರಿನ ಬಾವಿಯಿಂದ ನೀರು ತಂದು, ಬಟ್ಟೆ ಒಗೆದು, ಮನೆಯನ್ನು ಸ್ವಚ್ಛಗೊಳಿಸಿ, ನಂತರ ತನ್ನ ತಾಯಿಯೊಂದಿಗೆ ಕುಳಿತು ಕಂಜಿ ಸೇವಿಸಿದ್ದರು. ನಂತರ ತನ್ನ ಊರಿನಿಂದ 25 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ಜಿಲ್ಲೆಯ ವೇದಸಂದೂರು ತಾಲೂಕಿನ ನಾಚಿ ಅಪಾರೆಲ್ಸ್ ಸಂಸ್ಥೆಗೆ ಕೆಲಸಕ್ಕೆಂದು ತೆರಳಿದರು. ಆದರೆ ಅಂದು ಮಧ್ಯಾಹ್ನದ ವೇಳೆಗೆ, 27 ವರ್ಷದ ಯುವತಿ ಮತ್ತು ಆಕೆಯ ಸಹ ಕಾರ್ಮಿಕರು ತಮ್ಮ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಲೈಂಗಿಕ ಕಿರುಕುಳವನ್ನು ಕೊನೆಗೊಳಿಸಲು ವರ್ಷಕ್ಕೂ ಹೆಚ್ಚು ಕಾಲ ನಡೆಸಿದ್ದ ಹೋರಾಟದಲ್ಲಿ ಜಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅಸಾಧ್ಯವಾದುದನ್ನು ಸಾಧಿಸಿದ ಭಾವ ಮೂಡುತ್ತಿದೆ" ಎಂದು ದಿಂಡಿಗಲ್ ಒಪ್ಪಂದದ ಕುರಿತಾಗಿ ರಮ್ಯಾ ಹೇಳುತ್ತಾರೆ. ಆ ದಿನ ಈಸ್ಟ್ಮನ್ ಎಕ್ಸ್ಪೋರ್ಟ್ಸ್ ಗ್ಲೋಬಲ್ ಕ್ಲೋಥಿಂಗ್ (ತಿರುಪ್ಪೂರ್ ಮೂಲದ ನಾಚಿ ಅಪಾರೆಲ್ನ ಮೂಲ ಕಂಪನಿ) ಮತ್ತು ತಮಿಳುನಾಡು ಟೆಕ್ಸ್ಟೈಲ್ ಮತ್ತು ಕಾಮನ್ ಲೇಬರ್ ಯೂನಿಯನ್ (ಟಿಟಿಸಿಯು) - ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಈಸ್ಟ್ಮನ್ ಎಕ್ಸ್ಪೋರ್ಟ್ಸ್ ನಿರ್ವಹಿಸುತ್ತಿರುವ ಕಾರ್ಖಾನೆಗಳಲ್ಲಿ ಲಿಂಗಾಧಾರಿತ ಹಿಂಸಾಚಾರ ಮತ್ತು ಕಿರುಕುಳವನ್ನು ಕೊನೆಗೊಳಿಸಲು ಸಹಿ ಹಾಕಿತ್ತು.
ಈ ಮಹತ್ವದ ಒಪ್ಪಂದದ ಭಾಗವಾಗಿ, ಟಿಟಿಸಿಯು- ಈಸ್ಟ್ಮನ್ ಎಕ್ಸ್ಪೋರ್ಟ್ಸ್ ಒಪ್ಪಂದವನ್ನು ಬೆಂಬಲಿಸಲು ಮತ್ತು ಜಾರಿಗೊಳಿಸಲು ಬಹುರಾಷ್ಟ್ರೀಯ ಫ್ಯಾಷನ್ ಬ್ರಾಂಡ್ ಎಚ್&ಎಂ ಮೂಲಕ 'ಜಾರಿಗೊಳಿಸಬಹುದಾದ ಬ್ರಾಂಡ್ ಒಪ್ಪಂದ', ಅಥವಾ ಇಬಿಎಗೆ ಸಹಿ ಹಾಕಲಾಯಿತು. ಈಸ್ಟ್ಮನ್ ಎಕ್ಸ್ಪೋರ್ಟ್ಸ್ ನಾಚಿ ಅಪೆರಲ್ ಸ್ವೀಡನ್ ದೇಶದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಟ್ಟೆ ಕಂಪನಿಗಾಗಿ ಬಟ್ಟೆಗಳನ್ನು ಉತ್ಪಾದಿಸುತ್ತದೆ. ಎಚ್&ಎಂ ಸಹಿ ಮಾಡಿದ ಒಪ್ಪಂದವು ಫ್ಯಾಷನ್ ಉದ್ಯಮದಲ್ಲಿ ಲಿಂಗಾಧಾರಿತ ಹಿಂಸಾಚಾರವನ್ನು ನಿಭಾಯಿಸುವ ವಿಶ್ವದಾದ್ಯಂತ ಅಂತಹ ಎರಡನೇ ಉದ್ಯಮ ಒಪ್ಪಂದವಾಗಿದೆ.
ದಲಿತ ಮಹಿಳಾ ನೇತೃತ್ವದ ಜವಳಿ ಕಾರ್ಮಿಕರ ಟ್ರೇಡ್ ಯೂನಿಯನ್ ಟಿಟಿಸಿಯು ಸದಸ್ಯರಾಗಿರುವ ರಮಾ, ನಾಲ್ಕು ವರ್ಷಗಳಿಂದ ನಾಚಿ ಅಪೆರೆಲ್ನಲ್ಲಿ ಉದ್ಯೋಗಿಯಾಗಿದ್ದಾರೆ. "ನಿರ್ವಹಣೆ ಮತ್ತು ಬ್ರ್ಯಾಂಡ್ [ಎಚ್&ಎಮ್] ದಲಿತ ಮಹಿಳಾ ಟ್ರೇಡ್ ಯೂನಿಯನ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ" ಎಂದು ಅವರು ಹೇಳುತ್ತಾರೆ. "ಕೆಲವು ತಪ್ಪು ಕ್ರಮಗಳ ನಂತರ ಅವರು ಇದೀಗ ಸರಿಯಾದ ಹೆಜ್ಜೆಯನ್ನು ಇರಿಸಿದ್ದಾರೆ." ಯೂನಿಯನ್ನೊಂದಿಗೆ ಎಚ್&ಎಮ್ ಒಪ್ಪಂದವು ಭಾರತದಲ್ಲಿ ಸಹಿ ಮಾಡಿದ ಮೊದಲ ಇಬಿಎ. ಇದು ಕಾನೂನುಬದ್ಧವಾಗಿ ಬದ್ಧತೆಯ ಒಪ್ಪಂದವಾಗಿದ್ದು, ಪೂರೈಕೆದಾರರು ಟಿಟಿಸಿಯು ಒಕ್ಕೂಟಕ್ಕೆ ತನ್ನ ಬದ್ಧತೆಯನ್ನು ಉಲ್ಲಂಘಿಸಿದರೆ ಈಸ್ಟ್ಮನ್ ರಫ್ತುಗಳ ಮೇಲೆ ದಂಡವನ್ನು ವಿಧಿಸಲು ಎಚ್&ಎಮ್ ಬಾಧ್ಯತೆ ಹೊಂದಿರುತ್ತದೆ.
ಆದರೆ ಈಸ್ಟ್ಮ್ಯಾನ್ ಸಂಸ್ಥೆಯು ಈ ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಂಡಿದ್ದು ನಾಚಿ ಅಪಾರೆಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಯಶ್ರೀ ಕದಿರವೇಲ್ ಎನ್ನುವ 20 ವರ್ಷದ ದಲಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ನಡೆದ ಒಂದು ವರ್ಷದ ನಂತರ. 2021ರಲ್ಲಿ ಕೊಲೆಯಾಗುವ ಮೊದಲು ಜಯಶ್ರೀ ತಾನು ಕೆಲಸ ಮಾಡುವ ಸಂಸ್ಥೆಯ ಮೇಲ್ವಿಚಾರಕನಿಂದ ತಿಂಗಳುಗಳ ಕಾಲ ಲೈಂಗಿಕ ದೌರ್ಜನ್ಯವನ್ನು ಎದುರಿಸಿದ್ದರು. ಈತ ಪ್ರಬಲ ಜಾತಿಗೆ ಸೇರಿದವನಾಗಿದ್ದು, ಪ್ರಸ್ತುತ ಈ ಮೇಲ್ವಿಚಾರಕನ ಮೇಲೆ ಅಪರಾಧದ ಆರೋಪ ಹೊರಿಸಲಾಗಿದೆ.
ಜಯಶ್ರೀಯವರ ಹತ್ಯೆಯು ಭಾರತದ ಅತಿದೊಡ್ಡ ಬಟ್ಟೆ ತಯಾರಕರು ಮತ್ತು ರಫ್ತುದಾರರಲ್ಲಿ ಒಂದಾದ ಗಾರ್ಮೆಂಟ್ಸ್ ಕಾರ್ಖಾನೆ ಮತ್ತು ಅದರ ಮಾತೃಸಂಸ್ಥೆ ಈಸ್ಟ್ಮನ್ ಎಕ್ಸ್ಪೋರ್ಟ್ಸ್ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿತು, ಇದು ಬಹುರಾಷ್ಟ್ರೀಯ ಬಟ್ಟೆ ಕಂಪನಿಗಳಾದ ಎಚ್&ಎಂ, ಗ್ಯಾಪ್ ಮತ್ತು ಪಿವಿಎಚ್ ಕಂಪನಿಗಳಿಗೆ ಉತ್ಪನ್ನಗಳನ್ನು ಸರಬರಾಜು ಮಾಡುತ್ತದೆ. ಜಯಶ್ರೀಗೆ ನ್ಯಾಯ ದೊರಕಿಸುವ ಅಭಿಯಾನದ ಭಾಗವಾಗಿ, ಒಕ್ಕೂಟಗಳು, ಕಾರ್ಮಿಕ ಗುಂಪುಗಳು ಮತ್ತು ಮಹಿಳಾ ಸಂಘಟನೆಗಳ ಜಾಗತಿಕ ಒಕ್ಕೂಟವು ಫ್ಯಾಷನ್ ಬ್ರಾಂಡ್ಗಳು "ಶ್ರೀಮತಿ ಕದಿರವೇಲ್ ಅವರ ಕುಟುಂಬದ ವಿರುದ್ಧ ಈಸ್ಟ್ಮನ್ ಎಕ್ಸ್ಪೋರ್ಟ್ಸ್ನ ಹೆಚ್ಚುತ್ತಿರುವ ಬಲವಂತದ ಕ್ರಮಗಳ ಮೇಲೆ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿತ್ತು.







