“ಮೊದಲು ನಾನು ಯಾರನ್ನಾದರೂ ಕರೆಯಿಸಿ ಹಾಡನ್ನು ಓದುವಂತೆ ಹೇಳುತ್ತೇನೆ, ನಂತರ ಅದಕ್ಕೆ ಸಂಗೀತ ಸಂಯೋಜಿಸಿ ನಿಮಗಾಗಿ ಹಾಡುತ್ತೇನೆ” ಎನ್ನುತ್ತಾರೆ ದಾದೂ ಸಾಳ್ವೆ.

ಬದುಕಿನ ಏಳನೇ ದಶಕದಲ್ಲಿರುವ ಅವರಿಗೆ ವಯಸ್ಸಾಗಿದೆಯಾದರೂ ಈಗಲೂ ಅವರು ಅಂಬೇಡ್ಕರ್‌ ಚಳವಳಿಯನ್ನು ಪಸರಿಸುವ ಸಲುವಾಗಿ ಹಾರ್ಮೋನಿಯಂ ಹಿಡಿದು ಹಾಡಲು ಸದಾ ಸಿದ್ಧವಿರುವ ಸೈನಿಕ.

ಅಹ್ಮದ್‌ ನಗರದಲ್ಲಿನ ಅವರ ಒಂದು ಕೋಣೆಯ ಮನೆ ನಮ್ಮೆದುರು ಅಂಬೇಡ್ಕರ್‌ ಅವರಿಗೆ ಅರ್ಪಿಸಲಾದ ಜೀವಮಾನದ ಸಂಗೀತ ಗೌರವದ ಜಗತ್ತು ತೆರೆದುಕೊಳ್ಳುತ್ತದೆ. ಅವರ ಮನೆಯ ಗೋಡೆಗೆ ಭೀಮ ಸಂಗೀತದ ಲೆಜೆಂಡ್, ಗುರು ವಾಮನ್‌ ದಾದ ಅವರ ಚೌಕಟ್ಟು ಕಟ್ಟಿಸಿದ ಫೋಟೊವನ್ನು ಅಲಂಕರಿಸಲಾಗಿದೆ. ಪಕ್ಕದಲ್ಲಿನ ಕಪಾಟಿನಲ್ಲಿ ಅವರ ನಂಬಿಕಸ್ಥ ಸಂಗಾತಿಗಳಾದ ಹಾರ್ಮೋನಿಯಂ, ತಬಲಾ ಮತ್ತು ಧೋಲಕಿಯನ್ನು ಇರಿಸಲಾಗಿದೆ.

ಅಲ್ಲೇ ಕುಳಿತುಕೊಂಡ ದಾದೂ ಸಾಳ್ವೆ ತಮ್ಮ ಬದುಕಿನ ಪ್ರಯಾಣದ ಕತೆಯನ್ನು ನಮ್ಮೆದುರು ನಿರೂಪಿಸತೊಡಗಿದರು. ಅವರು ಕಳೆದ ಆರು ದಶಕಗಳಿಂದ ಭೀಮ ಗೀತೆಗಳನ್ನು ಹಾಡುತ್ತಿದ್ದಾರೆ.

ಸಾಳ್ವೆ ಅವರು ಜನವರಿ 9, 1952 ರಂದು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ನಲೆಗಾಂವ್ನಲ್ಲಿ (ಗೌತಮ್ನಗರ ಎಂದೂ ಕರೆಯುತ್ತಾರೆ) ಜನಿಸಿದರು. ಅವರ ತಂದೆ ನಾನಾ ಯಾದವ್ ಸಾಲ್ವೆ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ತಾಯಿ ತುಳಸಬಾಯಿ ಮನೆಯನ್ನು ನೋಡಿಕೊಳ್ಳುತ್ತಿದ್ದರು ಮತ್ತು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

In Dadu Salve's home in Ahmednagar is a framed photo of his guru, the legendary Bhim Shahir Wamandada Kardak , and his musical instruments: a harmonium, tabla and dholaki.
PHOTO • Amandeep Singh
Salve was born in Nalegaon in Ahmadnagar district of Maharashtra
PHOTO • Raitesh Ghate

ದಾದೂ ಸಾಳ್ವೆಯವರ ಮನೆಯ ಗೋಡೆಗೆ ಭೀಮ ಸಂಗೀತದ ಲೆಜೆಂಡ್, ಗುರು ವಾಮನ್‌ ದಾದ ಅವರ ಚೌಕಟ್ಟು ಕಟ್ಟಿಸಿದ ಫೋಟೊವನ್ನು ಅಲಂಕರಿಸಲಾಗಿದೆ. ಪಕ್ಕದಲ್ಲಿನ ಕಪಾಟಿನಲ್ಲಿ ಅವರ ನಂಬಿಕಸ್ಥ ಸಂಗಾತಿಗಳಾದ ಹಾರ್ಮೋನಿಯಂ, ತಬಲಾ ಮತ್ತು ಧೋಲಕಿಯನ್ನು ಇರಿಸಲಾಗಿದೆ. ಸಾಳ್ವೆ ಅವರು ಜನವರಿ 9, 1952 ರಂದು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ನಲೆಗಾಂವ್ನಲ್ಲಿ (ಗೌತಮ್ನಗರ ಎಂದೂ ಕರೆಯುತ್ತಾರೆ) ಜನಿಸಿದರು

ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರ ತಂದೆಯಂತಹ ಪುರುಷರು ದಲಿತರ ಮನಸ್ಥಿತಿಯಲ್ಲಿ ಬದಲಾವಣೆಯನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸುರಕ್ಷಿತ ವೇತನ ಮತ್ತು ಸರಿಯಾದ ಆಹಾರದೊಡನೆ ಸ್ಥಿರವಾದ ಸಿಗುತ್ತಿದ್ದ ಕೆಲಸವು ಜಗತ್ತನ್ನು ಕಾಣುವ ಕಿಟಕಿಯಾಗಿ ಕಾರ್ಯನಿರ್ವಹಿಸಿದ ಔಪಚಾರಿಕ ಶಿಕ್ಷಣಕ್ಕೆ ಪ್ರವೇಶವನ್ನು ನೀಡಿತು. ಇದು ಅವರ ದೃಷ್ಟಿಕೋನವನ್ನು ಬದಲಾಯಿಸಿತು, ಮತ್ತು ದಬ್ಬಾಳಿಕೆಯ ವಿರುದ್ಧ ಹೋರಾಡಲು ಮತ್ತು ಅದನ್ನು ಪ್ರತಿರೋಧಿಸಲು ಅವರು ಉತ್ತಮವಾಗಿ ಸಂಘಟಿತರಾದರು ಮತ್ತು ಪ್ರೇರಿತರಾದರು.

ದಾದೂ ಅವರ ತಂದೆ ಸೈನ್ಯದಿಂದ ನಿವೃತ್ತರಾದ ನಂತರ ಭಾರತೀಯ ಅಂಚೆ ಸೇವೆಗೆ ಪೋಸ್ಟ್ ಮ್ಯಾನ್ ಆಗಿ ಸೇರಿದರು. ಜೊತೆಗೆ ಆ ದಿನಗಳಲ್ಲಿ ಉತ್ತುಂಗದಲ್ಲಿದ್ದ ಅಂಬೇಡ್ಕರ್ ವಾದಿ ಚಳವಳಿಯಲ್ಲಿ ಅವರು ಸಾಕಷ್ಟು ಸಕ್ರಿಯರಾಗಿದ್ದರು. ತಂದೆಯವರ ಹೋರಾಟದ ಒಡನಾಟದಿಂದಾಗಿ ದಾದೂ ಅವರಿಗೂ ಚಳವಳಿಯ ಸಂಪರ್ಕ ಬೆಳೆಯಿತು ಅದರ ಒಳ-ಹೊರಗುಗಳು ಅರ್ಥವಾಗತೊಡಗಿತು.

ದಾದೂ ಅವರಿಗೆ ಪೋಷಕರಲ್ಲದೆ ಇನ್ನೊಬ್ಬರು ಸ್ಫೂರ್ತಿ ತುಂಬಿದ್ದಾರೆ. ಅದು ಅವರ ತಾತ ಯಾದವ್‌ ಸಾಳ್ವೆ. ಇವರು ಕಾಡೂಬಾಬಾ ಎಂದೆ ಖ್ಯಾತರು.

ಅವರು ನಮಗೆ 80 ವರ್ಷದ ಉದ್ದನೆಯ ಗಡ್ಡ ಬಿಟ್ಟ ಬಿಟ್ಟ ಹಿರಿಯರೊಬ್ಬರ ಕತೆಯನ್ನು ಹೇಳತೊಡಗಿದರು. ಆ ಹಿರಿಯರನ್ನು ಒಮ್ಮೆ ವಿದೇಶಿ ಸಂಶೋದಕರೊಬ್ಬರು “ನೀವು ಇಷ್ಟು ಉದ್ದದ ಗಡ್ಡವನ್ನು ಏಕೆ ಬೆಳೆಸಿದ್ದೀರಿ?” ಎಂದು ಕೇಳಿದ್ದರು. ಆಗ ಆ 80 ವರ್ಷದ ಹಿರಿಯ ವ್ಯಕ್ತಿ ಇದ್ದಕ್ಕಿದ್ದಂತೆ ಅಳತೊಡಗಿದರು. ನಂತರ ಸಮಾಧಾನಗೊಂಡ ಅವರು ಆಕೆಗೆ ತನ್ನ ಕತೆಯನ್ನು ನಿರೂಪಿಸತೊಡಗಿದರು.

"ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಹ್ಮದ್ ನಗರ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ನಮ್ಮ ಹಳ್ಳಿಯಾದ ಹರೇಗಾಂವ್ ಗೆ ಬಂದು ಭೇಟಿ ನೀಡುವಂತೆ ನಾನು ಅವರನ್ನು ವಿನಂತಿಸಿದೆ, ಅಲ್ಲಿ ಅವರನ್ನು ನೋಡಲು ದೊಡ್ಡ ಜನಸಮೂಹವು ಕುತೂಹಲದಿಂದ ಕಾಯುತ್ತಿತ್ತು." ಆದರೆ ಬಾಬಾಸಾಹೇಬರಿಗೆ ಸಮಯವಿರಲಿಲ್ಲ, ಹೀಗಾಗಿ ಅವರು ಮತ್ತೊಂದು ಬಾರಿ ತಮ್ಮ ಗ್ರಾಮಕ್ಕೆ ಭೇಟಿ ನೀಡುವುದಾಗಿ ಅವರಿಗೆ ಭರವಸೆ ನೀಡಿದರು. ಬಾಬಾಸಾಹೇಬರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದ ನಂತರವೇ ಗಡ್ಡ ಬೋಳಿಸಿಕೊಳ್ಳುವುದಾಗಿ ಅಂದು ಆ ವ್ಯಕ್ತಿ ಪ್ರತಿಜ್ಞೆ ಮಾಡಿದರು.

ಅವರು ಹಲವು ವರ್ಷಗಳ ಕಾಯ್ದರು. ಅವರ ಗಡ್ಡ ಬೆಳೆಯುತ್ತಲೇ ಇತ್ತು. 1956ರಲ್ಲಿ ಬಾಬಾಸಾಹೇಬರು ನಿಧನ ಹೊಂದಿದರು. “ಗಡ್ಡ ಬೆಳೆಯುತ್ತಲೇ ಇತ್ತು. ಇದು ನಾನು ಸಾಯುವ ತನಕವೂ ಬೆಳೆಯುತ್ತಲೇ ಇರುತ್ತದೆ” ಎಂದು ಆ ಹಿರಿಯರು ಹೇಳಿದರು. ಆ ಸಂಶೋಧಕರ ಹೆಸರು ಎಲೀನರ್‌ ಜೆಲ್ಲಿಯಟ್‌ ಮತ್ತು ಆ ಹಿರಿಯರ ಹೆಸರು ಕಾಡೂ ಬಾಬಾ. ದಾದೂ ಸಾಳ್ವೆಯವರು ತಾತ.

*****

ದಾದೂ ಹುಟ್ಟಿದ ಐದನೇ ದಿನದಂದು ಕಣ್ಣಿನ ದೃಷ್ಟಿ ಕಳೆದುಕೊಂಡರು. ಯಾರೋ ಅವರ ಕಣ್ಣಿಗೆ ಹಾಕಿದ ಹನಿಯಿಂದಾಗಿ ಅವರ ಕಣ್ಣಿನ ದೃಷ್ಟಿಗೆ ಹಾನಿಯಾಗಿತ್ತು. ನೀಡಿದ ಚಿಕಿತ್ಸೆಗಳು ಫಲಿಸದ ಕಾರಣ ಅವರ ದೃಷ್ಟಿ ಮರಳಲಿಲ್ಲ. ಮನೆಗೆ ಸೀಮಿತರಾಗಿದ್ದ ಅವರ ಪಾಲಿಗೆ ಶಿಕ್ಷಣವೆನ್ನುವುದು ಕನಸಿನ ಮಾತಾಗಿತ್ತು.

ಅವರು ಊರಿನ ಏಕತಾರಿ ಭಜನೆಯವರೊಡನೆ ತಿರುಗಾಟ ಮಾಡತೊಡಗಿದರು. ಅಲ್ಲಿ ಅವರು ದಿಮ್ಡಿ ಎನ್ನುವ ಮರ, ಚರ್ಮ ಮತ್ತು ಲೋಹದಿಂದ ತಯಾರಿಸಿದ ವಾದ್ಯವನ್ನು ನುಡಿಸುತ್ತಿದ್ದರು.

“ಅಂಬೇಡ್ಕರ್‌ ತೀರಿಕೊಂಡರು ಎಂದು ಒಬ್ಬರು ಬಂದು ಘೋಷಿಸಿದ್ದು ನೆನಪಿದೆ. ಅವರು ಯಾರೆಂದು ನನಗೆ ಗೊತ್ತಿರಲಿಲ್ಲ. ಆದರೆ ನನಗೆ ಜನರು ಅಳುವುದು ಕೇಳುತ್ತಿತ್ತು. ಆಗ ನನಗೆ ಅವರು ಯಾರೋ ದೊಡ್ಡ ಮನುಷ್ಯರೇ ಇರಬಹುದು ಎನ್ನಿಸಿತು” ಎಂದು ದಾದೂ ನೆನಪಿಸಿಕೊಳ್ಳುತ್ತಾರೆ.

'ನಾನು ಐದು ದಿನಗಳ ಮಗುವಾಗಿದ್ದಾಗ ನನ್ನ ದೃಷ್ಟಿಯನ್ನು ಕಳೆದುಕೊಂಡೆ' ಎಂದು ದಾದು ಸಾಳ್ವೆ ತಮ್ಮ ಬದುಕಿನ ಬಗ್ಗೆ ಮಾತನಾಡುವುದನ್ನು ನೋಡಿ

ಬಾಬಾಸಾಹೇಬ್ ದೀಕ್ಷಿತ್ ಎನ್ನುವವರು ಅಹ್ಮದ್ ನಗರದಲ್ಲಿ ದತ್ತ ಗಾಯನ್ ಮಂದಿರ್ ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದರು, ಆದರೆ ದಾದೂ ಅವರಿಗೆ ಶುಲ್ಕವನ್ನು ಭರಿಸಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ, ರಿಪಬ್ಲಿಕನ್ ಪಕ್ಷದ ಶಾಸಕ ಆರ್.ಡಿ. ಪವಾರ್ ಆರ್ಥಿಕ ಸಹಾಯವನ್ನು ನೀಡಿದರು. ದಾದೂ ಆ ಮೂಲಕ ಸಂಗೀತ ಶಾಲೆಗೆ ಸೇರಿದರು. ಪವಾರ್ ದಾದೂವಿಗೆ ಹೊಚ್ಚ ಹೊಸ ಹಾರ್ಮೋನಿಯಂ ಕೊಡಿಸಿದರು ಮತ್ತು ದಾದೂ 1971ರಲ್ಲಿ ಸಂಗೀತ್ ವಿಶಾರದ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ನಂತರ ಅವರು ಆ ಕಾಲದ ಪ್ರಸಿದ್ಧ ಖವ್ವಾಲಿ ಸಂಗೀತಗಾರ ಮೆಹಮೂದ್ ಖವ್ವಾಲ್ ನಿಜಾಮಿ ಅವರೊಂದಿಗೆ ಸೇರಿದರು. ಅವರು ನಿಜಾಮಿಯವರ ಕಾರ್ಯಕ್ರಮಗಳಲ್ಲಿ ಹಾಡಲು ಪ್ರಾರಂಭಿಸಿದರು. ಆಗ ದಾದೂವಿಗೆ ಇದ್ದಿದ್ದು ಅದೊಂದೇ ಆದಾಯ ಮೂಲ. ನಂತರ ಅವರು ಸಂಗಮ್ನರ್‌ ಎನ್ನುವಲ್ಲಿದ್ದ ಕಾಮ್ರೇಡ್ ದತ್ತಾ ದೇಶ್ಮುಖ್ ಪ್ರಾರಂಭಿಸಿದ ಕಲಾ ಪಾಠಕ್ ಎಂಬ ಮತ್ತೊಂದು ಗುಂಪಿಗೆ ತೆರಳಿದರು. ನಂತರ ಮತ್ತೊಬ್ಬ ಒಡನಾಡಿ ಭಾಸ್ಕರ್ ಜಾಧವ್ ನಿರ್ದೇಶಿಸಿದ ವಾಸುದೇವಾಚ ದೌರಾ ನಾಟಕಕ್ಕೂ ಅವರು ಹಾಡುಗಳನ್ನು ಸಂಯೋಜಿಸಿದರು.

ಲೋಕಕವಿ ಅಥವಾ ಜನರ ಕವಿ ಎಂದು ಕರೆಯಲ್ಪಡುವ ಕೇಶವ ಸುಖಾ ಅಹೇರ್ ಅವರ ಹಾಡುಗಳನ್ನೂ  ದಾದೂ ಕೇಳುತ್ತಿದ್ದರು. ನಾಸಿಕ್ ಕಲಾರಾಮ್ ಮಂದಿರಕ್ಕೆ ಪ್ರವೇಶ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಗುಂಪಿನೊಂದಿಗೆ ಅಹೆರ್ ಕೂಡ ಇದ್ದರು. ಅವರು ತಮ್ಮ ಹಾಡುಗಳ ಮೂಲಕ ಅಂಬೇಡ್ಕರ್ ಚಳವಳಿಯನ್ನು ಬೆಂಬಲಿಸಿದರು ಮತ್ತು ಭೀಮರಾವ್ ಕರ್ದಕ್ ಅವರ ಜಲ್ಸಾ ಗಳಿಂದ ಸ್ಫೂರ್ತಿ ಪಡೆದು ಕೆಲವು ಹಾಡುಗಳನ್ನು ಬರೆದರು.

ನಂತರ, ಅಹೆರ್ ತನ್ನ  ಹಾಡುಗಳ ಮೂಲಕ ದಲಿತ ಪ್ರಜ್ಞೆಯನ್ನು ಬೆಳೆಸಲು ಮತ್ತು ಜಲ್ಸಾ ಮಾದರಿಗೆ ಪೂರ್ಣ ಸಮಯವನ್ನು ಮುಡಿಪಾಗಿಟ್ಟರು.

1952ರಲ್ಲಿ, ಅಂಬೇಡ್ಕರ್ ಪರಿಶಿಷ್ಟ ಜಾತಿ ಒಕ್ಕೂಟದ ಅಭ್ಯರ್ಥಿಯಾಗಿ ಮುಂಬೈನಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅಹೆರ್ 'ನವ ಭಾರತ್ ಜಲ್ಸಾ ಮಂಡಲ್' ಅನ್ನು ಪ್ರಾರಂಭಿಸಿದರು, ಜಲ್ಸಾ ಕ್ಕಾಗಿ ಹೊಸ ಹಾಡುಗಳನ್ನು ಬರೆದರು  ಮತ್ತು ಡಾ. ಅಂಬೇಡ್ಕರ್ ಅವರ ಪರವಾಗಿ ಪ್ರಚಾರ ಮಾಡಿದರು. ಈ ಮಂಡಲ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ದಾದೂ ಸಾಳ್ವೆ ಆಲಿಸಿದರು.

ಸ್ವಾತಂತ್ರ್ಯ ಸಿಗುವ ಸಮಯದ ಆಸುಪಾಸಿನಲ್ಲಿ ಅಹಮದನಗರ ಎಡಪಂಥೀಯ ಚಳವಳಿಗಳ ತೊಟ್ಟಿಲಾಗಿತ್ತು. ದಾದೂ ಸಾಳ್ವೆ ಹೇಳುತ್ತಾರೆ, “ಆಗ ನಮ್ಮ ಮನೆಗೆ ಸಾಕಷ್ಟು ನಾಯಕರು ಬರುತ್ತಿದ್ದರು. ನಮ್ಮ ತಂದೆ ಅವರುಗಳೊಡನೆ ಕೆಲಸ ಮಾಡುತ್ತಿದ್ದರು. ದಾದಾಸಾಹೇಬ್‌ ರೂಪಾವಟೆ, ಆರ್‌.ಡಿ. ಪವಾರ್‌ ಆಗ ಇಲ್ಲಿನ ಅಂಬೇಡ್ಕರ್‌ ಚಳವಳಿಯಲ್ಲಿ ಬಹಳ ಸಕ್ರಿಯರಾಗಿದ್ದರು.  ಅವರು ಅಹ್ಮದನಗರದ ಚಳವಳಿ ನಾಯಕತ್ವವನ್ನು ವಹಿಸಿದ್ದರು.

Madhavrao Gaikwad and his wife Sumitra collect material around Wamandada Kardak. The couple  have collected more than 5,000 songs written by hand by Wamandada himself. Madhavrao is the one who took Dadu Salve to meet Wamandada
PHOTO • Amandeep Singh

ಮಾಧವರಾವ್ ಗಾಯಕ್ವಾಡ್ ಮತ್ತು ಅವರ ಪತ್ನಿ ಸುಮಿತ್ರಾ ವಾಮನದಾದಾ ಕರ್ದಕ್ ಅವರಿಗೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸುತ್ತಾರೆ. ವಾಮನದಾದಾ ಅವರೇ ಬರೆದ 5,000ಕ್ಕೂ ಹೆಚ್ಚು ಹಾಡುಗಳನ್ನು ದಂಪತಿಗಳು ಸಂಗ್ರಹಿಸಿದ್ದಾರೆ. ವಾಮನದಾದಾ ಅವರನ್ನು ಭೇಟಿಯಾಗಲು ದಾದೂ ಸಾಳ್ವೆಯವರನ್ನು ಕರೆದೊಯ್ದವರು ಮಾಧವರಾವ್

ದಾದೂ ಬಿ. ಸಿ. ಕಾಂಬ್ಳೆ ಮತ್ತು ದಾದಾಸಾಹೇಬ್‌ ರೂಪಾವಟೆ ಭಾಷಣ ಮಾಡುತ್ತಿದ್ದ ಸಭೆಗಳಲ್ಲಿ ಭಾಗವಹಿಸಿ ಅವರ ಮಾತುಗಳನ್ನು ಕೇಳುತ್ತಿದ್ದರು. ನಂತರ ದಿನಗಳಲ್ಲಿ ಇವರಿಬ್ಬರ ನಡುವೆ ಬಿರುಕು ಮೂಡಿದ ಕಾರಣ ಅಂಬೇಡ್ಕರ್‌ ಚಳವಳಿಯ ಎರಡೆರಡು ಬಣಗಳು ಹುಟ್ಟಿಕೊಂಡವು. ಈ ರಾಜಕೀಯ ಚಳವಳಿಯು ಹಲವು ಹಾಡುಗಳ ಹುಟ್ಟಿಗೆ ಕಾರಣವಾಯಿತು. ದಾದೂ ಹೇಳುತ್ತಾರೆ, “ಎರಡೂ ಬಣಗಳು ಕಲ್ಗಿ-ತುರ [ಈ ಮಾದರಿಯಲ್ಲಿ ಎರಡು ಗಾಯಕರ ಎರಡು ತಂಡಗಳು ಪರಸ್ಪರ ಪ್ರಶ್ನೆಗಳನ್ನು ಎಸೆಯುತ್ತಾ ಅದಕ್ಕೆ ಮಾರುತ್ತರ ನೀಡುತ್ತಾ ಹಾಡುತ್ತಾರೆ] ಹಾಡುವುದರಲ್ಲಿ ಪರಿಣತಿ ಹೊಂದಿದ್ದರು.”

नार म्हातारपणी फसली!

लालजीच्या घरात घुसली!!

ಹಣ್ಣು ಹಣ್ಣು ಮದುಕಿಗೆ ದಾರಿ ತಪ್ಪಿದೆ
ಅವಳೀಗ ಲಾಲ್‌ ಜೀಯವರ ಮನೆಯ ಹೊಕ್ಕಳು

ಇದು ದಾದಾ ಸಾಹೇಬ್‌ ತಮ್ಮ ಮತಿ ಕಳೆದುಕೊಂಡು ಕಮ್ಯುನಿಸ್ಟರ ಜೊತೆ ಕೈ ಜೋಡಿಸಿದ್ದನ್ನು ಹೇಳುತ್ತದೆ.

ಇದಕ್ಕೆ ದಾದಾಸಾಹೇಬ್‌ ಬಣ ಹೀಗೆ ಉತ್ತರಿಸುತ್ತಿತ್ತು:

तू पण असली कसली?
पिवळी टिकली लावून बसली!

ಅಯ್ಯೋ ನಿನ್ನನ್ನು ನೋಡು ಹೆಣ್ಣೇ
ಮತ್ತೆ ಆ ಹಣೆಯ ಹಳದಿ ಬೊಟ್ಟು ನೋಡು

ದಾದೂ ಇದನ್ನು ಹೀಗೆ ವಿವರಿಸುತ್ತಾರೆ: “ಬಿ. ಸಿ. ಕಾಂಬ್ಳೆಯವರು ತಮ್ಮ ಪಕ್ಷದ ಬಾವುಟದ ಮೇಲಿದ್ದ ನೀಲಿ ಅಶೋಕ ಚಕ್ರವನ್ನು ತೆಗೆದು ಹಳದಿ ಹುಣ್ಣಿಮೆ ಚಂದಿರನ ಚಿತ್ರವನ್ನು ಹಾಕಿದ್ದರು. ಇದು ಆ ಕುರಿತು ಹೇಳುತ್ತದೆ.”

ದಾದಾಸಾಹೇಬ್ ರೂಪಾವಟೆ ಅವರು ಬಿ.ಸಿ.ಕಾಂಬ್ಳೆ ಬಣದಲ್ಲಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಅವರನ್ನೂ ಹಾಡಿನ ಮೂಲಕ ಟೀಕಿಸಲಾಗಿತ್ತು,

अशी होती एक नार गुलजार
अहमदनगर गाव तिचे मशहूर
टोप्या बदलण्याचा छंद तिला फार
काय वर्तमान घडलं म्होरं S....S....S
ध्यान देऊन ऐका सारं

ಇಲ್ಲೊಬ್ಬಳು ಹೂವಿನಂತಹ ಸುಂದರ ಹೆಣ್ಣಿದ್ದಾಳೆ
ಅವಳು ಹೆಸರುವಾಸಿ ಅಹಮದನಗರಕ್ಕೆ ಸೇರಿದವಳು
ಅವಳಿಗೆ ಬಿಡಾರ ಬದಲಾಯಿಸುವುದೆಂದರೆ ಇಷ್ಟ
ಮುಂದೇನಾಯಿತು ಎನ್ನುವ ಕುತೂಹಲವೆ?
ಅವಳ ಕಡೆ ಗಮನವಿಟ್ಟರೆ ಎಲ್ಲವೂ ತಿಳಿಯುತ್ತದೆ…

“ನಾನು ಅಂಬೇಡ್ಕರ್‌ ಚಳವಳಿಯ ಈ ಕಲ್ಗಿ-ತುರವನ್ನು ಕೇಳಿಕೊಂಡೇ ಬೆಳೆದವನು” ಎನ್ನುತ್ತಾರೆ ದಾದೂ.

Dadu Salve and his wife Devbai manage on the meagre pension given by the state government to folk artists. Despite these hardships, his commitment to the Ambedkarite movement and his music are still the same
PHOTO • Amandeep Singh
Dadu Salve and his wife Devbai manage on the meagre pension given by the state government to folk artists. Despite these hardships, his commitment to the Ambedkarite movement and his music are still the same
PHOTO • Labani Jangi

ದಾದೂ ಸಾಳ್ವೆ ಮತ್ತು ಅವರ ಪತ್ನಿ ಜಾನಪದ ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಅಲ್ಪ ಪಿಂಚಣಿಯಿಂದ ಬದುಕು ನಡೆಸುತ್ತಿದ್ದಾರೆ. ಈ ಕಷ್ಟಗಳ ಹೊರತಾಗಿಯೂ, ಅಂಬೇಡ್ಕರ್‌ ವಾದಿ ಚಳುವಳಿಗೆ ಅವರ ಬದ್ಧತೆ ಮತ್ತು ಅವರ ಸಂಗೀತ ಇನ್ನೂ ಹಾಗೆಯೇ ಇದೆ

*****

1970ನೇ ಇಸವಿಯು ದಾದೂ ಸಾಳ್ವೆಯವರು ಬದುಕಿನಲ್ಲಿ ಮಹತ್ತರ ತಿರುವೊಂದನ್ನುತಂದಿತು. ಈ ವರ್ಷ ಅವರು, ಡಾ. ಅಂಬೇಡ್ಕರ್ ಅವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚಳವಳಿಯನ್ನು ಮಹಾರಾಷ್ಟ್ರದ ಮೂಲೆಮೂಲೆಗಳಿಗೆ ಮತ್ತು ಅದರಾಚೆಗೆ ಕೊಂಡೊಯ್ಯುತ್ತಿದ್ದ ಗಾಯಕ ವಾಮನದಾದ ಕರ್ದಕ್ ಅವರನ್ನು ಭೇಟಿಯಾದರು. ವಾಮನದಾದ ತಮ್ಮ ಕೊನೆಯುಸಿರಿರುವ ತನಕವೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.

75 ವರ್ಷದ ಮಾಧವರಾವ್‌ ಗಾಯಕವಾಡ್‌ ಅವರ ವಾಮನದಾದ ಅವರಿಗೆ ಸಂಬಂಧಿಸಿದ ಹಾಡುಗಳನ್ನು ಸಂಗ್ರಹಿಸುತ್ತಾರೆ. ದಾದೂ ಸಾಳ್ವೆಯವರನ್ನು ವಾಮನದಾದ, ಮಾಧವರಾವ್‌ ಮತ್ತು ಅವರ ಪತ್ನಿ ಸುಮಿತ್ರ (61) ಇವರುಗಳಿಗೆ ಪರಿಚಯಿಸಿದ್ದು ಇವರೇ. ಅವರು ವಾಮನದಾದ ತಮ್ಮ ಕೈಯಾರೆ ಬರೆದ 5,000 ಹಾಡುಗಳನ್ನು ಇವರು ಸಂಗ್ರಹಿಸಿದ್ದಾರೆ.

ಮಾಧವರಾವ್‌ ಹೇಳುವಂತೆ, “ಅವರು 1970ರಲ್ಲಿ ನಗರಕ್ಕೆ ಬಂದರು ಅವರು ಅಂಬೇಡ್ಕರ್‌ ಅವರ ಕೆಲಸಗಳು ಮತ್ತು ಸಂದೇಶವನ್ನು ಪಸರಿಸುವ ಉದ್ದೇಶದಿಂದ ಗಾಯನ ಪಾರ್ಟಿ ಪ್ರಾರಂಭಿಸಲು ಉತ್ಸುಕರಾಗಿದ್ದರು. ದಾದೂ ಸಾಳ್ವೆ ಅಂಬೇಡ್ಕರ್‌ ಕುರಿತಾಗಿ ಹಾಡುತ್ತಿದ್ದರಾದರೂ ಅವರ ಬಳಿ ಹೆಚ್ಚು ಉತ್ತಮ ಹಾಡುಗಳಿರಲಿಲ್ಲ. ಹೀಗಾಗಿ ನಾವು ಹೋಗಿ ವಾಮನ್‌ ದಾದಾ ಅವರನ್ನು ಭೇಟಿಯಾಗಿ ʼನಮಗೆ ನಿಮ್ಮ ಹಾಡುಗಳು ಬೇಕುʼ ಎಂದು ಕೇಳಿದೆವು.”

ಆಗ ವಾಮನ ದಾದಾ ಹಾಡುಗಳು ತಾನು ಒಂದು ಸ್ಥಳದಲ್ಲಿ ಸಂಗ್ರಹಿಸಿ ಇಟ್ಟಿಲ್ಲವೆಂದು ಹೇಳಿದರು. “ನಾನು ಹಾಡು ಬರೆದು ಹಾಡಿದ ನಂತರ ಅದನ್ನು ಅಲ್ಲೇ ಬಿಟ್ಟು ಬರುತ್ತೇನೆ” ಎಂದು ಹೇಳಿದರು.

ಮಾಧವರಾವ್‌ ಹೇಳುತ್ತಾರೆ, “ಅಷ್ಟು ಒಳ್ಳೆಯ ಹಾಡುಗಳು ವ್ಯರ್ಥವಾಗುತ್ತಿರುವುದನ್ನು ಕೇಳಿ ನಮ್ಮ ಮನಸ್ಸಿಗೆ ಬಹಳ ನೋವಾಯಿತು. ಅವರು [ವಾಮನದಾದಾ] ತನ್ನ ಇಡೀ ಬದುಕನ್ನು ಅಂಬೇಡ್ಕರ್‌ ಚಳವಳಿಗಾಗಿ ಮುಡಿಪಿಟ್ಟಿದ್ದರು.”

ಅವರ ಹಾಡುಗಳನ್ನು ಸಂಗ್ರಹಿಸುವ ಕುತೂಹಲದಲ್ಲಿ ಮಾಧವರಾವ್‌ ದಾದೂ ಸಾಳ್ವೆಯವರನ್ನು ವಾಮನದಾದಾ ಅವರ ಕಾರ್ಯಕ್ರಮ ಇರುವೆಲ್ಲೆಡೆ ಕರೆದುಕೊಂಡು ಹೋಗತೊಡಗಿದರು. “ಅವರಿಗೆ ದಾದೂ ಹಾರ್ಮೋನಿಯಂ ನುಡಿಸುವ ಮೂಲಕ ಸಾಥ್‌ ನೀಡುತ್ತಿದ್ದರು. ದಾದಾ ಹಾಡತೊಡಗಿದಂತೆ ನಾನು ಅವುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ.  ಅದು ಅವರು ಅಲ್ಲೇ ಕಟ್ಟುತ್ತಿದ್ದ ಹಾಡುಗಳಾಗಿದ್ದವು.”

ಅವರು ಹಾಡುತ್ತಾ ಹಾಡುತ್ತಾ ಸುಮಾರು 5,000 ಹಾಡುಗಳನ್ನು ಪ್ರಕಟಿಸಿದರು. ಅವುಗಳ ಹೊರತಾಗಿಯೂ ಹೊರಜಗತ್ತನ್ನು ಕಾಣದ ಸುಮಾರು 3,000 ಹಾಡುಗಳು ಇಲ್ಲವಾಗಿವೆ. “ಹಣಕಾಸಿನ ಸಮಸ್ಯೆಗಳಿಂದಾಗಿ ನನಗೆ ಈ ಹಾಡುಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ವಿಚಾರವನ್ನು ನಾನು ಹೇಳಲೇಬೇಕು. ಅಂಬೇಡ್ಕರ್‌ ಚಳವಳಿಯ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಂಗ್ರಹಿಸಿ ಉಳಿಸಲು ನನಗೆ ಸಾಧ್ಯವಾಗಿದ್ದು ದಾದೂ ಸಾಳ್ವೆಯವರ ಕಾರಣದಿಂದಲೇ.

ದಾದೂ ಸಾಳ್ವೆ ವಾಮನ್‌ ದಾದಾರ ಕೆಲಸದಿಂದ ಎಷ್ಟರಮಟ್ಟಿಗೆ ಪ್ರೇರಿತರಾಗಿದ್ದರೆಂದರೆ ಅವರು ಹೊಸದೊಂದು ತಂಡವನ್ನೇ ಕಟ್ಟಿದರು. ಇದನ್ನು ಕಲಾ ಪಾಠಕ್‌ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಅವರು ಇದಕ್ಕಾಗಿ ಶಂಕರ ತಾಬಾಜಿ ಗಾಯಕವಾಡ್‌, ಸಂಜಯ ನಾಥ ಜಾಧವ್‌, ರಘೂ ಗಂಗಾರಾಮ್ ಸಾಳ್ವೆ, ಮತ್ತು ಮಿಲಿಂದ್‌ ಶಿಂಧೆಯವರನ್ನು ಒಂದೇ ವೇದಿಕೆಯಡಿ ತಂದರು. ಈ ಗುಂಪನ್ನು ಭೀಮ ಸಂದೇಶ್‌ ಗಾಯನ್‌ ಪಾರ್ಟಿ ಎಂದು ಕರೆಯಲಾಗುತ್ತಿತ್ತು. ಇದರರ್ಥ, ಅಂಬೇಡ್ಕರ್‌ ಅವರ ಸಂದೇಶಗಳನ್ನು ಹರಡು ಸಂಗೀತ ತಂಡ.

ಅವರು ಒಂದು ಧ್ಯೇಯ ಸಾಧನೆಗಾಗಿ ಹಾಡುತ್ತಿದ್ದರು. ಅವರ ಪ್ರದರ್ಶನಗಳು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿರದೆ ನೇರವಾಗಿರುತ್ತಿದ್ದವು.

ದಾದೂ ನಮಗಾಗಿ ಈ ಹಾಡನ್ನು ಹಾಡಿದರು.

ಈ ವೀಡಿಯೋದಲ್ಲಿ ದಾದೂ ತನ್ನ ಗುರುವಿನ ಕುರಿತು ತನಗಿರುವ ಗೌರವವನ್ನು ಹಾಡು ಮತ್ತು ಮಾತಿನ ಮೂಲಕ ವಿವರಿಸಿದ್ದಾರೆ,: 'ನಾನು ವಾಮನದಾದಾರ ಅನುಯಾಯಿ'

उभ्या विश्वास ह्या सांगू तुझा संदेश भिमराया
तुझ्या तत्वाकडे वळवू आता हा देश भिमराया || धृ ||
जळूनी विश्व उजळीले असा तू भक्त भूमीचा
आम्ही चढवीला आता तुझा गणवेश भिमराया || १ ||
मनुने माणसाला माणसाचा द्वेष शिकविला
तयाचा ना ठेवू आता लवलेश भिमराया || २ ||
दिला तू मंत्र बुद्धाचा पवित्र बंधुप्रेमाचा
आणू समता हरू दीनांचे क्लेश भिमराया || ३ ||
कुणी होऊ इथे बघती पुन्हा सुलतान ह्या भूचे
तयासी झुंजते राहू आणुनी त्वेष भिमराया || ४ ||
कुणाच्या रागलोभाची आम्हाला ना तमा काही
खऱ्यास्तव आज पत्करला तयांचा रोष भिमराया || ५ ||
करील उत्कर्ष सर्वांचा अशा ह्या लोकशाहीचा
सदा कोटी मुखांनी ह्या करू जयघोष भिमराया || ६ ||
कुणाच्या कच्छपी लागून तुझा वामन खुळा होता
तयाला दाखवित राहू तयाचे दोष भिमराया || ७ ||

ನಿನ್ನ ಸಂದೇಶವನ್ನು ಜಗತ್ತಿಗೆ ಹರಡೋಣ ಭೀಮರಾಯ
ಅವೆಲ್ಲವನ್ನೂ ನಿನ್ನ ತತ್ವಗಳನ್ನಾಗಿಸೋಣ ಭೀಮರಾಯ ||1||
ನೀನು ಸುಟ್ಟುಕೊಂಡು ಜಗವ ಬೆಳಗಿದೆ, ಓ ಮಣ್ಣಿನ ಮಗನೇ
ನಾವೂ ನಿನ್ನನ್ನು ಅನುಸರಿಸುವೆವು ನಿನ್ನ ಉಡುಪ ಧರಿಸುವೆವು [ಶಿಷ್ಯತ್ವ] ಭೀಮರಾಯ ||2||
ಇನ್ನೊಬ್ಬರ ದ್ವೇಷಿಸುವುದ ಕಲಿಸಿದನು ಮನು ನಮಗೆ
ಈಗ ನಾವು ಪ್ರತಿಜ್ಞೆ ಮಾಡುವೆವು ಅವನ ಓಡಿಸುವೆವು ಎಂದು ಭೀಮರಾಯ ||3||
ಬುದ್ಧನ ಸಹೋದರತ್ವವ ನಮಗೆ ಕಲಿಸಿದಿರಿ ನೀವು
ಸಮಾನತೆಯ ತರುವೆವು ನಾವು, ಬಡವರ ನೋವ ಹೋಗಲಾಡಿಸುವೆವು ನಾವು ಭೀಮರಾಯ ||4||
ಈ ನೆಲವನ್ನು ಆಳ ಬಯಸುತ್ತಿರುವರು ಕೆಲವು ಜನ
ನಾವು ನಮ್ಮೆಲ್ಲ ಶಕ್ತಿ ಹಾಕಿ ಹೋರಾಡುತ್ತೇವೆ ಭೀಮರಾಯ ||5||
ಅವರಿಗೆ ಸಿಟ್ಟು ಬರಲಿ, ಸಂತೋಷವೇ ಆಗಲಿ ನಮಗಿಲ್ಲ ಕಾಳಜಿ
ಸತ್ಯದ ಸ್ಥಾಪನೆಗೆ ಬರುವುದೆಲ್ಲವನ್ನೂ ಎದುರಿಸಲು ಸಿದ್ಧ ಭೀಮರಾಯ ||6||
ಅವರ ನಯವಾದ ಮಾತುಗಳಿಗೆ ಬಲಿಯಾಗಲು ವಾಮನದಾದಾ [ಕಾರ್ದಕ್] ಮೂರ್ಖನೇ?‌
ನಾವು ಅವರ ಮುಖಕ್ಕೆ ಕನ್ನಡಿ ಹಿಡಿಯುತ್ತಲೇ ಇರುತ್ತೇವೆ ಭೀಮರಾಯ ||7||

ದಾದು ಅವರಿಗೆ ಕರೆ ಬಂದಾಗಲೆಲ್ಲ ಅವರು ಹಾಡುತ್ತಿದ್ದದ್ದು ವಾಮನದಾದಾ ಅವರ ಹಾಡುಗಳನ್ನು. ಮಗು ಹುಟ್ಟಿದ ಖುಷಿಗೆ, ವೃದ್ಧರು ಅಥವಾ ದುರ್ಬಲರು ನಿಧನರಾದಾಗ ಅಂಬೇಡ್ಕರ್‌ ಚಳವಳಿಯ ಹಾಡುಗಳನ್ನು ಹಾಡಲು ಜನರು ಅವರ ಕಲಾ ಪಾಠಕ್‌ ತಂಡವನ್ನು ಕರೆಯುತ್ತಿದ್ದರು.

ದಾದೂ ಅವರಂತಹ ಗಾಯಕರು ಅಂಬೇಡ್ಕರ್‌ ಚಳವಳಿಗೆ ಶಕ್ತಿ ತುಂಬುವ ಸಲುವಾಗಿ ಹಾಡಿದರು. ಈ ಹಾಡುಗಾರರ ತಂಡ ಹಣವನ್ನು ನಿರೀಕ್ಷಿಸುತ್ತಿರಲಿಲ್ಲ. ಗೌರವದ ಪ್ರತೀಕವಾಗಿ ಜನರು ಮುಖ್ಯ ಗಾಯಕನಿಗೆ ತೆಂಗಿನಕಾಯಿಯನ್ನು ನೀಡುತ್ತಿದ್ದರು. ಮತ್ತು ತಂಡದ ಎಲ್ಲಾ ಸದಸ್ಯರಿಗೆ ಕುಡಿಯಲು ಚಹಾ ನೀಡುತ್ತಿದ್ದರು. ಅವರಿಗೆ ಸಿಗುತ್ತಿದ್ದದ್ದು ಅಷ್ಟೇ. “ನನಗೆ ಹಾಡಲು ಬರುತ್ತಿತ್ತು ಹೀಗಾಗಿ ಚಳವಳಿಗೆ ನಾನು ಅದನ್ನೇ ಕೊಡುಗೆಯಾಗಿ ಕೊಟ್ಟೆ. ನಾನು ವಾಮನದಾದಾ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ನನ್ನಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತೇನೆ.” ಎನ್ನುತ್ತಾರೆ ದಾದೂ.

*****

ದಾದೂ ಅವರು ಅಂಬೇಡ್ಕರ್‌ ಅವರ ಕುರಿತು ಹಾಡುವುದನ್ನು ಮತ್ತು ಅವರ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವುದನ್ನು ನೋಡಿ: ನೀನು ಹುಟ್ಟಿದ ದಿನವದು ಓ ಭೀಮಾ!

ವಾಮನದಾದಾ ಅನೇಕರ ಪಾಲಿಗೆ ಗುರು. ಆದರೆ ದಾದೂ ಅವರ ಬದುಕಿನಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಅವರಿಗೆ ಕಣ್ಣು ಕಾಣದ ಕಾರಣ ಅವರು ಹಾಡುಗಳನ್ನು ಕೇಳಿಸಿಕೊಂಡು ಬಾಯಿಪಾಠ ಮಾಡಿಕೊಳ್ಳಬೇಕಿತ್ತು. ಅವರಿಗೆ ಇಂತಹ 2,000 ಹಾಡುಗಳು ಬಾಯಿಪಾಠವಾಗಿವೆ. ಬರೀ ಹಾಡಷ್ಟೇ ಅಲ್ಲ ಈ ಹಾಡುಗಳ ಕುರಿತು ಎಲ್ಲವೂ ಗೊತ್ತು. ಅದನ್ನು ಬರೆದ ಕಾಲ, ಸಂದರ್ಭ, ಮೂಲ ರಾಗ ಹೀಗೆ ಎಲ್ಲವನ್ನೂ ಅವರು ನಿಮಗೆ ವಿವರಿಸಬಲ್ಲರು. ವಾಮನದಾದಾರ ಜಾತಿ ವಿರೋಧಿ ಹಾಡುಗಳಿಗೂ ಅವರು ರಾಗ ಸಂಯೋಜಿಸಿದ್ದಾರೆ.

ಸಂಗೀತ ತರಬೇತಿ ಪಡೆದಿದ್ದ ಕಾರಣ ದಾದೂ ವಾಮನದಾದಾರಿಂದ ಒಂದು ಹೆಜ್ಜೆ ಮುಂದಿದ್ದರು. ಅವರಿಗೆ ಕವಿತೆ ಅಥವಾ ಹಾಡಿನ ಲಯ, ರಾಗ ಇತ್ಯಾದಿ ವಿವರಗಳು ತಿಳಿದಿದ್ದವು. ಅವರು ಇವುಗಳ ಕುರಿತು ಆಗಾಗ ತಮ್ಮ ಗುರುಗಳೊಡನೆಯೂ ಚರ್ಚಿಸುತ್ತಿದ್ದರು. ಗುರುವಿನ ಮರಣದ ನಂತರವೂ ಅವರು ಹಲವು ಹಾಡುಗಳಿಗೆ ರಾಗ ಸಂಯೋಜಿಸಿದರು. ಹಾಗೂ ಕೆಲವು ಹಳೆಯ ರಾಗಗಳನ್ನು ಮರು ರೂಪಿಸಿದರು.

ಅವರು ನಮಗೆ ವಾಮನದಾದಾ ಅವರ ಒಂದು ಹಾಡನ್ನು ಅದರ ಮೂಲ ರಾಗ ಮತ್ತು ತಾನು ಸಂಯೋಜಿಸಿದ ರಾಗಗಳಲ್ಲಿ ಹಾಡಿ ತೋರಿಸಿದರು ಅವುಗಳಲ್ಲಿನ ವ್ಯತ್ಯಾಸವನ್ನು ತೋರಿಸಿದರು.

भीमा तुझ्या मताचे जरी पाच लोक असते
तलवारीचे तयांच्या न्यारेच टोक असते

ಓ ಭೀಮ! ನಿನ್ನನ್ನು ಐದೇ ಜನರು ಒಪ್ಪಿದರೂ
ಅವರ ಯೋಚನೆಗಳು ಖಡ್ಗದಂತೆ ಹರಿತವಿರಬಲ್ಲವು

ಅವರು ತನ್ನ ಗುರುವಿನ ನಂಬಿಕೆಯನ್ನು ಎಷ್ಟರಮಟ್ಟಿಗೆ ಗಳಿಸಿದ್ದರೆಂದರೆ ವಾಮನದಾದಾ ತಮ್ಮ ಸಾವಿನ ಕುರಿತಾದ ಹಾಡನ್ನೂ ಅವರಿಗೆ ಬರೆದುಕೊಟ್ಟಿದ್ದರು.

राहील विश्व सारे, जाईन मी उद्याला
निर्वाण गौतमाचे, पाहीन मी उद्याला

ಜಗತ್ತು ಉಳಿಯುವುದು, ನಾನು ಹೋಗುವೆ
ಅಂದು ಗೌತಮನ ನಿರ್ವಾಣವನ್ನು ಕಾಣುವೆ

ದಾದೂ ಈ ಹಾಡನ್ನು ಮಧುರವಾದ ಸಂಗೀತದೊಡನೆ ಸಂಯೋಜಿಸಿದ್ದು ಇದನ್ನು ತಮ್ಮ ಜಲ್ಸಾದಲ್ಲಿ ಪ್ರಸ್ತುತಪಡಿಸುತ್ತಾರೆ.

*****

ಸಂಗೀತವೆನ್ನುವುದು ದಾದೂ ಅವರ ಬದುಕು ಮತ್ತು ರಾಜಕೀಯದೊಡನೆ ಮಿಳಿತಗೊಂಡಿದೆ.

ಜನಪ್ರಿಯ ಜಾನಪದ ಮತ್ತು ಅಂಬೇಡ್ಕರ್ ಕುರಿತ ಹಾಡುಗಳು ಬಲಗೊಳ್ಳುತ್ತಿದ್ದ ಸಮಯದಲ್ಲಿ ಅವರು ಹಾಡಿದರು. ಭೀಮರಾವ್ ಕಾರ್ದಕ್, ಲೋಕಕವಿ ಅರ್ಜುನ್ ಭಲೇರಾವ್, ಬುಲ್ದಾನಾದ ಕೇದಾರ್ ಸಹೋದರರು, ಪುಣೆಯ ರಾಜಾನಂದ್ ಗಡ್ಪಯಲೆ, ಶ್ರವಣ್ ಯಶ್ವಂತೆ ಮತ್ತು ವಾಮನದಾದಾ ಕಾರ್ದಕ್ ಈ ಜನಪ್ರಿಯ ಹಾಡುಗಳಲ್ಲಿ ನಿಪುಣರಾಗಿದ್ದರು.

ದಾದು ತನ್ನ ಸಂಗೀತ ಪ್ರತಿಭೆ ಮತ್ತು ಧ್ವನಿಯನ್ನು ಈ ಅನೇಕ ಹಾಡುಗಳಿಗೆ ನೀಡಿದರು ಮತ್ತು ಈ ಸಂಗೀತ ನಿಧಿಯೊಂದಿಗೆ ಗ್ರಾಮೀಣ ಪ್ರದೇಶಗಳಾದ್ಯಂತ ಪ್ರವಾಸ ಮಾಡಿದರು. ಅಂಬೇಡ್ಕರ್ ಅವರ ನಿಧನದ ನಂತರ ಹುಟ್ಟಿದ ಪೀಳಿಗೆಯು ಅವರ ಜೀವನ, ಅವರ ಕೆಲಸ ಮತ್ತು ಅವರ ಸಂದೇಶದ ಬಗ್ಗೆ ಈ ಹಾಡುಗಳ ಮೂಲಕವೇ ತಿಳಿದುಕೊಂಡಿತು. ಈ ಪೀಳಿಗೆಯ ನಡುವೆ ಚಳುವಳಿಯನ್ನು ಪೋಷಿಸುವಲ್ಲಿ ಮತ್ತು ಅವರ ಬದ್ಧತೆಯನ್ನು ಬೆಳೆಸುವಲ್ಲಿ ದಾದೂ ಮಹತ್ವದ ಪಾತ್ರ ವಹಿಸಿದ್ದಾರೆ.

ಅನೇಕ ಕವಿಗಳು ಹೊಲಗಳಲ್ಲಿ ದುಡಿಯುವ ರೈತರ ಹೋರಾಟದ ಬದುಕನ್ನು ಮತ್ತು ಘನತೆಯ ಬದುಕಿಗಾಗಿ ಹೋರಾಡುವ ದಲಿತರ ಹೋರಾಟಗಳನ್ನು ಮೌಖಿಕ ಕಾವ್ಯಗಳಲ್ಲಿ ದಾಖಲಿಸಿದ್ದಾರೆ. ಅವರು ತಥಾಗತ ಬುದ್ಧ, ಕಬೀರ್‌, ಜ್ಯೋತಿಬಾ ಫುಲೆ ಮತ್ತು ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಬದುಕು ಮತ್ತು ವ್ಯಕ್ತಿತ್ವದ ಸಂದೇಶವನ್ನು ದಾಖಲಿಸಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಓದು ಬರಹ ತಿಳಿಯದ ಜನರಿಗೆ ಇಂತಹ ವಿಚಾರ ತಿಳಿಸಬಲ್ಲ ಶಿಕ್ಷಣ ಸಾಧನವಾಗಿ ಈ ಕವಿತೆಗಳು ಕೆಲಸ ಮಾಡುತ್ತವೆ. ದಾದ್ ಸಾಳ್ವೆ ತಮ್ಮ ಸಂಗೀತ ಮತ್ತು ಹಾರ್ಮೋನಿಯಂ ಬಳಸಿ ಈ ವಿಚಾರಗಳನ್ನು ಮೂಲೆ ಮೂಲೆಗೂ ತಲುಪಿಸಿದ್ದಾರೆ. ಈಗ ಈ ಹಾಡುಗಳು ಇಲ್ಲಿನ ಜನರ ಆತ್ಮಪ್ರಜ್ಞೆಯ ಭಾಗವಾಗಿ ಉಳಿದಿವೆ.

ಈ ಹಾಡುಗಳಲ್ಲಿನ ಸಂದೇಶಗಳು ಮತ್ತು ಸಾಹಿರ್‌ಗಳ ಶಕ್ತಿಶಾಲಿ ನಿರೂಪಣೆಯು ಜಾತಿವಿರೋಧಿ ಹೋರಾಟವನ್ನು ಹಳ್ಳಿಗಳಿಗೆ ಒಯ್ಯಲು ಸಹಾಯ ಮಾಡಿವೆ. ಈ ಹಾಡುಗಳು ಅಂಬೇಡ್ಕರ್‌ ಚಳವಳಿಯ ಸಕಾರಾತ್ಮಕ ಜೀವನ ಸೆಲೆಯಾಗಿವೆ ಮತ್ತು ದಾದೂ ತಮ್ಮನ್ನು ಈ ಧಾರೆಯ ಸಣ್ಣ ಧಾರೆಯೆಂದು ಪರಿಗಣಿಸುತ್ತಾರೆ.

ವಿದ್ವಾಂಸ ಮೆಹಬೂಬ ಶೇಖ್‌ ʼದಾದೂ ಸಾಳ್ವೆಯವರ ಧ್ವನಿ ಮತ್ತು ದೃಷ್ಟಿಯʼ ಕುರಿತು ಮಾತನಾಡುವುದನ್ನು ನೋಡಿ

ಅವರೂ ಎಂದಿಗೂ ಈ ಹಾಡುಗಳನ್ನು ಹಣ ಗಳಿಸುವ ಮಾರ್ಗವನ್ನಾಗಿ ನೋಡಿಲ್ಲ. ಅವರ ಪಾಲಿಗೆ ಇದೊಂದು ಬದುಕಿನ ಧ್ಯೇಯ. ಆದರೆ ಈಗ ಅವರ ಇಳಿ ವಯಸ್ಸಿನಲ್ಲಿ ಆ ಹುರುಪು ಮತ್ತು ಚುರುಕನ್ನು ಕಳೆದುಕೊಂಡಿದ್ದಾರೆ. ಅವರಿಗೀಗ 72 ವರ್ಷ ವಯಸ್ಸು. 2005ರಲ್ಲಿ ಅವರಿಗಿದ್ದ ಒಬ್ಬನೇ ಮಗ ಅಪಘಾತದಲ್ಲಿ ತೀರಿಕೊಂಡು. ಅಂದಿನಿಂದ ಅವರು ತಮ್ಮ ಸೊಸೆ ಹಾಗೂ ಮೂರು ಮೊಮ್ಮಕ್ಕಳ ಕಾಳಜಿಯನ್ನು ಮಾಡುತ್ತಿದ್ದಾರೆ. ಸೊಸೆ ಮರು ಮದುವೆಯಾಗಲು ನಿರ್ಧರಿಸಿದಾಗ ಅವರು ತನ್ನ ಸೊಸೆಯ ನಿರ್ಧಾರವನ್ನು ಗೌರವಿಸಿದರು. ಅವರು ಅವರ ಪತ್ನಿ ದೇವಬಾಯಿ (65) ಸಣ್ಣ ಒಂದು ಕೋಣೆಯ ಮನೆಗೆ ಸ್ಥಳಾಂತರಗೊಂಡರು. ಪ್ರಸ್ತುತ ದೇವಬಾಯಿಯವರು ಅನಾರೋಗ್ಯದಿಂದ ಹಾಸಿಗೆ ಹಿಡಿದ್ದಾರೆ. ಜಾನಪದ ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಅಲ್ಪ ಮೊತ್ತದ ಪಿಂಚಣಿಯ ಸಹಾಯದಿಂದ ಬದುಕು ನಡೆಸುತ್ತಿದ್ದಾರೆ. ಈ ಕಷ್ಟಗಳ ಹೊರತಾಗಿಯೂ ಅಂಬೇಡ್ಕರ್‌ ವಾದಿ ಚಳವಳಿ ಮತ್ತು ಸಂಗೀತದ ಕುರಿತಾದ ಬದ್ಧತೆ ಹಾಗೇ ಇದೆ.

ದಾದೂ ಈಗಿನ ಕಾಲದ ಹಾಡುಗಳನ್ನು ಒಪ್ಪುವುದಿಲ್ಲ. “ಇಂದು ಕಲಾವಿದರು ಈ ಹಾಡುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಅವರಿ ಅವರ ಬಿದಗಿ [ಗೌರವಧನ] ಮತ್ತು ಖ್ಯಾತಿಯ ಕುರಿತೇ ಹೆಚ್ಚು ಆಸಕ್ತಿ. ಇದನ್ನು ನೋಡುವಾಗ ನೋವಾಗುತ್ತದೆ.” ಎಂದು ವಿಷಾದದಿಂದ ಹೇಳುತ್ತಾರೆ.

ದಾದ್ ಸಾಳ್ವೆ ಹಾಡುಗಳನ್ನು ಬಾಯಿಪಾಠ ಮಾಡಿ ಅದನ್ನು ಹಾರ್ಮೋನಿಯಂ ನುಡಿಸುತ್ತಾ ಹಾಡುವುದನ್ನು ನೋಡಿದಾಗ, ಅವರು ಅಂಬೇಡ್ಕರ್‌ ಮತ್ತು ವಾಮನದಾದಾ ಅವರು ಕುರಿತು ಮಾತನಾಡುವುದನ್ನು ಕೇಳಿದಾಗ ನಮ್ಮಲ್ಲಿ ಒಂದಷ್ಟು ಭರವಸೆ ಹುಟ್ಟುತ್ತದೆ. ಈ ಮೂಲಕ ಅವರು ನಮಗೆ ಅಂಧಕಾರ ಮತ್ತು ಹತಾಶೆಯಿಂದ ಹೊರಬರಲು ಸಹಾಯ ಮಾಡುತ್ತಾರೆ.

ಶಾಹಿರ್‌ಗಳ ಅಮರ ಮಾತುಗಳು ಮತ್ತು ತಮ್ಮದೇ ಆದ ರಾಗಗಳ ಮೂಲಕ ಬಾಬಾ ಸಾಹೇಬರು ಪರಿಚಯಿಸಿದ ಹೊಸ ಪ್ರಜ್ಞೆಯನ್ನು ಎಲ್ಲೆಡೆ ಹಂಚಿದರು. ನಂತರ ಇದೇ ದಲಿತ ಶಾಹಿರಿಗಳನ್ನು ಬಳಸಿಕೊಂಡು ಅನೇಕ ಸಾಮಾಜಿಕ ದುಷ್ಕೃತ್ಯಗಳು, ಅನ್ಯಾಯ, ಅಕ್ರಮಗಳ ವಿರುದ್ಧ ದನಿಯೆತ್ತಿ ಹೋರಾಡಿದರು. ದಾದೂವಿನ ದನಿ ಈಗ ಎಲ್ಲೆಡೆ ಮೊಳಗುತ್ತಿದೆ.

ನಾವು ನಮ್ಮ ಸಂದರ್ಶನದ ಅಂತ್ಯಕ್ಕೆ ಬರುತ್ತಿದ್ದಂತೆ, ದಾದೂ ದಣಿದಂತೆ ಕಾಣುತ್ತಿದ್ದರು. ಅವರು ಹಾಗೆಯೇ ತನ್ನ ಹಾಸಿಗೆಯ ಮೇಲೆ ಹಿಂದಕ್ಕೆ ಬಾಗಿದರು. ಹೊಸ ಹಾಡುಗಳ ಯೋಜನೆಗಳೇನಾದರೂ ಇವೆಯೇ ಎಂದು ನಾನು ಕೇಳಿದಾಗ ಅವರು, “ಈ ಹಾಡುಗಳನ್ನು ಯಾರಿಂದಲಾದರೂ ಓದಿಸಿ, ಅವುಗಳಿಗೆ ರಾಗ ಸಂಯೋಜಿಸಿ ನಿಮ್ಮ ಮುಂದೆ ಹಾಡುತ್ತೇನೆ” ಎಂದು ಉತ್ಸಾಹದಿಂದ ಹೇಳಿದರು.

ಅಂಬೇಡ್ಕರ್‌ ವಾದಿ ಚಳವಳಿಯ ಈ ಸೈನಿಕ ಅಸಮಾನತೆಯ ವಿರುದ್ಧ ಹೋರಾಡಲು ಮತ್ತು ಶಾಶ್ವತ ಬದಲಾವಣೆ ತರುವ ನಿಟ್ಟಿನಲ್ಲಿ ಹೋರಾಡುವ ಸಲುವಾಗಿ ತನ್ನ ದನಿ ಮತ್ತು ಹಾರ್ಮೋನಿಯಂ ಬಳಸಲು ಈಗಲೂ ಸನ್ನದ್ಧರಾಗಿದ್ದಾರೆ.


ಈ ಬರೆಹ ಮೂಲದಲ್ಲಿ ಮರಾಠಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.

ಈ ವಿಡಿಯೋ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ ಸಹಯೋಗದೊಂದಿಗೆ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ತಮ್ಮ ಆರ್ಕೈವ್ಸ್ ಅಂಡ್ ಮ್ಯೂಸಿಯಂಸ್ ಪ್ರೋಗ್ರಾಂ ಅಡಿಯಲ್ಲಿ ಜಾರಿಗೆ ತಂದ 'ಮರಾಠಾವಾಡಾದ ಪ್ರಭಾವಶಾಲಿ ಶಾಹಿರ್‌ಗಳು, ನಿರೂಪಣೆಗಳು' ಎಂಬ ಸಂಗ್ರಹದ ಭಾಗವಾಗಿದೆ. ನವದೆಹಲಿಯ ಗೋಥೆ-ಇನ್ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನದ ಭಾಗಶಃ ಬೆಂಬಲದಿಂದ ಇದು ಸಾಧ್ಯವಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Keshav Waghmare

Keshav Waghmare is a writer and researcher based in Pune, Maharashtra. He is a founder member of the Dalit Adivasi Adhikar Andolan (DAAA), formed in 2012, and has been documenting the Marathwada communities for several years.

Other stories by Keshav Waghmare
Editor : Medha Kale

Medha Kale is based in Pune and has worked in the field of women and health. She is the Translations Editor, Marathi, at the People’s Archive of Rural India.

Other stories by Medha Kale
Illustration : Labani Jangi

Labani Jangi is a 2020 PARI Fellow, and a self-taught painter based in West Bengal's Nadia district. She is working towards a PhD on labour migrations at the Centre for Studies in Social Sciences, Kolkata.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru