"ಓಹ್, ಆಕೆ ನಮ್ಮ ‘ಗೆಸ್ಟ್ ಹೌಸ್ ಬಗ್ಗೆ‘’ ವಿಚಾರಿಸಲು ಬಂದಿದ್ದಾರಷ್ಟೇ", ಎಂಬುದಾಗಿ ರಾಣಿ ಆ ಕೋಣೆಯಲ್ಲಿ ತನ್ನೊಂದಿಗಿರುವ ‘ರೂಂಮೇಟ್’ ಲಾವಣ್ಯಳಿಗೆ ತಿಳಿಸಿದಳು. ನಮ್ಮ ಭೇಟಿಯ ಉದ್ದೇಶವನ್ನು ತಿಳಿದ ಈ ಇಬ್ಬರಿಗೂ ನಿರಾಳವೆನಿಸಿತು.
ಜನವರಿ ತಿಂಗಳ ಪ್ರಾರಂಭದಲ್ಲಿ, ಮಧುರೈ ಜಿಲ್ಲೆಯ ಟಿ. ಕೊಲ್ಲುಪಟ್ಟಿ ಕ್ಷೇತ್ರದ ಕೂವಲಪುರಂ ಹಳ್ಳಿಗೆ ಭೇಟಿಯಿತ್ತ ನಾವು, ಮೊದಲ ಬಾರಿಗೆ ಗೆಸ್ಟ್ ಹೌಸ್ ಬಗ್ಗೆ ವಿಚಾರಿಸತೊಡಗಿದಾಗ ಅಲ್ಲಿನ ಬೀದಿಗಳಲ್ಲಿ ಆತಂಕ ಮನೆಮಾಡಿತು. ಪುರುಷರು ತಗ್ಗಿದ ದನಿಯಲ್ಲಿ ಸ್ವಲ್ಪ ದೂರದಲ್ಲಿ ಕೈಸಾಲೆಯಲ್ಲಿ (porch) ಕುಳಿತ ಇಬ್ಬರು ಹೆಂಗಸರನ್ನು ನಮಗೆ ತೋರಿಸಿದರು.
"ಅದು ಆ ಕಡೆಗಿದೆ. ನಡೆಯಿರಿ, ಹೋಗೋಣ", ಎಂದ ಹೆಂಗಸರು ಅರ್ಧ ಕಿ.ಮೀ. ದೂರದ ಹಳ್ಳಿಯ ಮೂಲೆಯೊಂದಕ್ಕೆ ನಮ್ಮನ್ನು ಕರೆದೊಯ್ದರು. ‘ಗೆಸ್ಟ್ ಹೌಸ್’ ಎಂದು ಕರೆಯಲಾಗುವ ಎರಡು ಪ್ರತ್ಯೇಕ ಕೊಠಡಿಗಳು ನಾವು ಅಲ್ಲಿಗೆ ತಲುಪಿದಾಗ ಪರಿತ್ಯಕ್ತ ಸ್ಥಿತಿಯಲ್ಲಿದ್ದವು. ಎರಡು ಚಿಕ್ಕ ಸಂಕೀರ್ಣಗಳ ನಡುವಿನ ಬೇವಿನ ಮರವು ತನ್ನ ಟೊಂಗೆಗಳಿಗೆ ನೇತುಹಾಕಿದ್ದ ಚೀಲಗಳ ಭಾರವನ್ನು ಹೊತ್ತು ನಿಂತ ನೋಟವು ಕುತೂಹಲ ಕೆರಳಿಸುವಂತಿತ್ತು.
ಋತುಮತಿಯಾದ ಹೆಂಗಸರು ಗೆಸ್ಟ್ ಹೌಸ್ ‘ಅತಿಥಿಗಳು’. ಯಾವುದೇ ಆಹ್ವಾನಕ್ಕೆ ಓಗೊಟ್ಟು ಅಥವ ತಮ್ಮ ಸ್ವಂತ ಇಚ್ಚೆಯಿಂದ ಅವರು ಇಲ್ಲಿಗೆ ಬಂದಿರುವುದಿಲ್ಲ. ಮಧುರೈ ಜಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದ ಈ ಊರಿನ 3,000 ನಿವಾಸಿಗಳ ನಿಷ್ಠುರ ಸಾಮುದಾಯಿಕ ಪದ್ಧತಿಯಿಂದಾಗಿ ಅವರು ಇಲ್ಲಿ ಬಲವಂತವಾಗಿ ಸಮಯ ಕಳೆಯುವಂತಾಗಿದೆ. ನಾವು ಗೆಸ್ಟ್ ಹೌಸಿನಲ್ಲಿ ಸಂಧಿಸಿದ ಇಬ್ಬರು ಹೆಂಗಸರಾದ ರಾಣಿ ಮತ್ತು ಲಾವಣ್ಯ (ಇದು ಅವರ ಮೂಲ ಹೆಸರಲ್ಲ) ಐದು ದಿನಗಳವರೆಗೆ ಇಲ್ಲಿರಬೇಕಾಗುತ್ತದೆ. ಆದಾಗ್ಯೂ ಮೈನೆರೆದ ಹುಡುಗಿಯರನ್ನು ಇಡೀ ತಿಂಗಳವರೆಗೂ ಇಲ್ಲಿರಿಸಲಾಗುತ್ತದೆ. ಪ್ರಸವದ ನಂತರ ಸ್ತ್ರೀಯರು ನವಜಾತ ಶಿಶುವಿನೊಂದಿಗೆ ನೆಲೆಸತಕ್ಕದ್ದು.
"ಕೊಠಡಿಯಲ್ಲಿ ನಮ್ಮೊಂದಿಗೆ ಚೀಲಗಳನ್ನು ಇರಿಸಿಕೊಳ್ಳುತ್ತೇವೆ", ಎಂದು ರಾಣಿ ವಿವರಿಸಿದರು. ಚೀಲದಲ್ಲಿ ಋತುಮತಿಯಾದ ಸಮಯದಲ್ಲಿ ಹೆಂಗಸರು ಬಳಸತಕ್ಕ ಪ್ರತ್ಯೇಕ ಪಾತ್ರೆಗಳಿವೆ. ಇಲ್ಲಿ ಯಾವುದೇ ಅಡುಗೆ ಮಾಡುವುದಿಲ್ಲ. ಅವರ ಮನೆಗಳಲ್ಲಿ ಅಥವ ನೆರೆಹೊರೆಯವರು ಮಾಡಿದ ಅಡುಗೆಯನ್ನು ಹೆಂಗಸರಿಗೆ ಈ ಪಾತ್ರೆಗಳಲ್ಲಿ ನೀಡಲಾಗುತ್ತದೆ. ಶಾರೀರಿಕ ಸಂಪರ್ಕವನ್ನು ತಪ್ಪಿಸಲು ಬೇವಿನ ಮರಕ್ಕೆ ಚೀಲಗಳನ್ನು ತೂಗುಹಾಕಲಾಗುತ್ತದೆ. ಒಂದೇ ಕುಟುಂಬದವರಾದಾಗ್ಯೂ ಪ್ರತಿಯೊಬ್ಬ ‘ಅತಿಥಿಗೂ’ ಪ್ರತ್ಯೇಕ ಪಾತ್ರೆಗಳ ಕಟ್ಟುಗಳಿವೆ (set). ಆದರೆ ಅಲ್ಲಿ ಕೇವಲ ಎರಡು ಕೊಠಡಿಗಳಿದ್ದು ಅವನ್ನೇ ಹಂಚಿಕೊಳ್ಳತಕ್ಕದ್ದು.











