ಅಂದು ಸೈಯದ್ ಘನಿ ಖಾನ್ ಬಹುತೇಕ ಕುಸಿದೇಹೋಗಿದ್ದರು. ಗದ್ದೆಯ ಕೆಲಸದಲ್ಲಿ ನಿರತರಾಗಿದ್ದ ಅವರಿಗೆ ಅದೇಕೋ ಸಂಕಟವಾಗುತ್ತಿರುವ ಅನುಭವ. ಬೆಳೆಗಳಿಗೆ ಸಿಂಪಡಿಸುತ್ತಿದ್ದ ಕೀಟನಾಶಕದ ಹೊಗೆಯು ಅಂದು ತನ್ನನ್ನು ಪ್ರಜ್ಞಾಹೀನನನ್ನಾಗಿ ಮಾಡುತ್ತಿರುವಂತೆ ಖಾನ್ ಗೆ ಅನುಭವವಾಗಿತ್ತು. ''ಆಗಲೇ ನಾನು ಯೋಚಿಸಿದ್ದೆ: ಇದೇನು ಮಾಡುತ್ತಿದ್ದೇನೆ ನಾನು? ನನಗೇ ಇಂಥಾ ಅನುಭವವಾಗುತ್ತಿದ್ದರೆ ಬೆಳೆಗಳಿಗೆ ಕೀಟನಾಶಕಗಳನ್ನು ಬೆರೆಸುತ್ತಿರುವ ನಾನು ಸ್ವತಃ ಇದನ್ನು ತಿನ್ನಲಿರುವ ಜನರಿಗೆ ವಿಷವನ್ನುಣಿಸುತ್ತಿದ್ದೇನೆ ಎಂಬುದು ನನಗೆ ಖಚಿತವಾಗಿತ್ತು. ಇದಕ್ಕೊಂದು ಅಂತ್ಯ ಹಾಡಬೇಕೆಂದು ನಾನು ನಿರ್ಧರಿಸಿದ್ದೆ'', ಎನ್ನುತ್ತಿದ್ದಾರೆ ಖಾನ್.

ಹೀಗೆ ಇಂಥದ್ದೊಂದು ಮಹತ್ವದ ತಿರುವನ್ನು ತಂದ ಘಟನೆಗೆ ಕಾರಣವಾದ ಎರಡು ದಶಕಗಳಿಂದ, ಅಂದರೆ 1998 ರಿಂದ, ಬೆಳೆಗಳಿಗೆ ಯಾವುದೇ ಬಗೆಯ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರಗಳನ್ನು ಬಳಸುವುದನ್ನು ಖಾನ್ ಸಂಪೂರ್ಣವಾಗಿ ನಿಲ್ಲಿಸಿದ್ದರು. ದೇಸಿ ಭತ್ತವು ಇವರ ಕೈಯಿಂದ ಜನ್ಮತಾಳಿದ್ದು ಹೀಗೆ. ''ನಮ್ಮಪ್ಪನೋ, ಕುಟುಂಬದ ಇತರ ಹಿರಿಯರೋ ಗದ್ದೆಗೆ ಹೋದರೆ ನಾನು ಅವರ ಜೊತೆಜೊತೆಗೇ ಹೋಗುತ್ತಿದ್ದೆ. ಅವರು ಬೆಳೆಯುತ್ತಿದ್ದ ತರಹೇವಾರಿ ಬೆಳೆಗಳಿಗೆ ಹೋಲಿಸಿದರೆ ದೇಸಿ ಭತ್ತದ ಪ್ರಮಾಣ ತೀರಾ ಕಮ್ಮಿಯಿತ್ತು'', ಎಂದು ಖಾನ್ ತನ್ನ ಕಳೆದುಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

42 ರ ಪ್ರಾಯದ ಖಾನ್ ಹೇಳುವ ಪ್ರಕಾರ 79961 ಹೆಕ್ಟೇರ್ ವಿಸ್ತೀರ್ಣ ಪ್ರದೇಶದಷ್ಟಿನ ಭತ್ತ ಬೆಳೆಯುವ ಮಂಡ್ಯದಲ್ಲಿ ಸಾವಯವ ವಿಧಾನಗಳನ್ನು ಬಳಸಿ ದೇಸಿ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯು 10 ಕ್ಕೂ ಕಮ್ಮಿ. ಖಾನ್ ಕರ್ನಾಟಕದ ಮಂಡ್ಯ ಜಿಲ್ಲೆಯ ಕಿರುಗವಳು ಪ್ರದೇಶದ ಮೂಲದವರು. ''ತಮ್ಮ ನಿಧಾನಗತಿಯ ಬೆಳವಣಿಗೆಯಿಂದ ಮತ್ತು ದೀರ್ಘ ಕಾಯುವಿಕೆಯ ನಂತರವೂ [ಕೆಲಬಾರಿಯ] ಕಡಿಮೆ ಇಳುವರಿಯಿಂದಾಗಿ ಸ್ಥಳೀಯ ಭತ್ತತಳಿಯ ಪ್ರಭೇದಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು. ಬಹಳಷ್ಟು ಬಾರಿ ಇಲ್ಲಿ ಬೆಳೆಗಿಂತ ಕಳೆಯೇ ಹೆಚ್ಚು ಕಾಣಸಿಗುತ್ತಿತ್ತು'', ಎನ್ನುತ್ತಾರೆ ಖಾನ್.

Ghani working in field
PHOTO • Manjula Masthikatte

ಕಿರುಗವಳು ಹಳ್ಳಿಯ ಸೈಯದ್ ಘನಿ ಖಾನ್ ಹೇಳುವ ಪ್ರಕಾರ ಮಂಡ್ಯದಲ್ಲಿ ಸಾವಯವ ವಿಧಾನಗಳನ್ನು ಬಳಸಿ ದೇಸಿ ಬೆಳೆಗಳನ್ನು ಬೆಳೆಯುವವರ ಸಂಖ್ಯೆಯು 10 ಕ್ಕೂ ಕಮ್ಮಿ.

ಹೈಬ್ರಿಡ್ ತಳಿಗಳು ಕಡಿಮೆ ಅವಧಿಯಲ್ಲಿ ಸತತವಾಗಿ ಒಳ್ಳೆಯ ಇಳುವರಿ ನೀಡುತ್ತವೆಂಬುದನ್ನು ರೈತರು ಒಪ್ಪಿಕೊಂಡಾಗಿದೆ. ಕೆಲಕಾಲದ ಮಟ್ಟಿಗೆ ಅದು ನಿಜವಾಗಿದ್ದೂ ಹೌದು. ದೇಸಿ ಪ್ರಭೇದಗಳ ಪ್ರತಿಪಾದಕರು ಹೇಳುವ ಪ್ರಕಾರ ಇದಕ್ಕಾಗಿ ಬೇಕಾಗಿರುವ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ನೀರಿನ ಅವಶ್ಯಕತೆಯು ಹೆಚ್ಚಿತ್ತು. ಅಲ್ಲದೆ ಫಸಲು ನಿಂತ ನಂತರವೂ ಕೂಡ ಖರ್ಚಿನ ಪ್ರಮಾಣವು ಏರಿಕೆಯಾಗುತ್ತಿದ್ದರೆ, ಆರೋಗ್ಯದ ಮೇಲಾಗುತ್ತಿದ್ದ ದುಷ್ಪರಿಣಾಮಗಳೂ ಕೂಡ ಇಲ್ಲಿ ಗಮನಾರ್ಹವಾಗಿತ್ತು.

ಇತ್ತ ಸ್ಥಳೀಯ ಭತ್ತ ಪ್ರಭೇದಗಳು ಗಣನೀಯ ಮಟ್ಟದಲ್ಲಿ ಕಾಣುತ್ತಿರುವ ಅವನತಿಯನ್ನು ಗಮನಿಸಿದ ಖಾನ್ 1996 ರಲ್ಲಿ 40 ಬಗೆಯ ಬೀಜಗಳ ಸಂಗ್ರಹದೊಂದಿಗೆ ದೇಸಿ ಪ್ರಬೇಧಗಳ ಸಂಗ್ರಹ ಮತ್ತು ಸಂರಕ್ಷಣೆಯನ್ನಾರಂಭಿಸಿದ್ದರು. ಕ್ರಮೇಣ ಬೀಜಸಂರಕ್ಷಣೆಯ ಈ ಆಸಕ್ತಿಯು ಹೆಚ್ಚುತ್ತಾ ದೇಶದ ಹಲವು ಕಡೆಗಳಿಂದ ಸಂಗ್ರಹಿಸಿದ ಸುಮಾರು 700 ಕ್ಕೂ ಹೆಚ್ಚಿನ ಸ್ಥಳೀಯ ಬೀಜತಳಿಗಳು ಪ್ರಸ್ತುತ ಇವರ ಸಂಗ್ರಹದಲ್ಲಿವೆ. ಹೀಗೆ ಬೀಜಗಳನ್ನು ತರಿಸಿಕೊಳ್ಳಲು ಇವರು ಹಲವು ರಾಜ್ಯಗಳ ರೈತರೊಂದಿಗೆ ಒಂದು ಬಗೆಯ ವಿನಿಮಯ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಛತ್ತೀಸ್ ಗಢ್, ಕೇರಳ, ಒರಿಸ್ಸಾ, ಪಂಜಾಬ್, ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳೂ ಕೂಡ ಇವುಗಳಲ್ಲಿ ಸೇರುತ್ತವೆ.

ಖಾನ್ ರವರ 'ಬಡಾ ಬಾಘ್' (ದೊಡ್ಡ ಉದ್ಯಾನ) ಎಂಬ ಹೆಸರಿನ ಮನೆಬಾಗಿಲ ಬಳಿ ಬಂದ ಕೂಡಲೇ ಬೀಜಗಳ ಬಗ್ಗೆ ಅವರಿಗಿರುವ ಒಲವು ಢಾಳಾಗಿ ಗೋಚರಿಸುತ್ತದೆ. ಪತ್ನಿ, ಮೂರು ಮಕ್ಕಳು ಮತ್ತು ತನ್ನ ಸಹೋದರರ ಕುಟುಂಬವನ್ನು ಹೊಂದಿರುವ ತುಂಬುಕುಟುಂಬವು ಈ ಸೂರಿನಡಿಯಲ್ಲಿ ನೆಲೆಸುತ್ತಿದೆ. ಈ ಮನೆಯ ಗೋಡೆಗಳಲ್ಲಿ ಅಂದವಾಗಿ ಜೋಡಿಸಿಡಲಾಗಿರುವ ಸಾಲುಗಳು ಬೀಜಗಳನ್ನಿಟ್ಟಿರುವ ಗಾಜಿನ ಜಾರುಗಳಿಂದ ಮತ್ತು ಭತ್ತದ ಹೂಗಳಿಂದ ತುಂಬಿದೆ. ಇವುಗಳ ಪಕ್ಕದಲ್ಲೇ ಆಯಾ ಬೀಜತಳಿಗಳ ಬಗೆಗಿನ ಮಾಹಿತಿಯನ್ನೂ ಇಲ್ಲಿ ಕಾಣಬಹುದು. ಈ ಅಪರೂಪದ ಮಾಹಿತಿಗಳು ಆಸಕ್ತ ರೈತರಿಗೆ, ರಾಜ್ಯದ ವಿವಿಧ ಭಾಗಗಳಿಂದ ಬರುವ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ಬಡಾ ಬಾಘ್ ಗೆ ಭೇಟಿ ನೀಡುವ ಅದೆಷ್ಟೋ ಜನರಿಗೆ ಅಪರೂಪದ ಮಾಹಿತಿಯ ಸೆಲೆಯಾಗಿದೆ. ಒಂದು ರೀತಿಯಲ್ಲಿ ಬಡಾ ಬಾಘ್ ಗೆ ಭೇಟಿ ನೀಡುವುದೆಂದರೆ ಭಾರತದ ಭತ್ತ ತಳಿ ವೈವಿಧ್ಯಗಳ ಬಗ್ಗೆ ತಿಳಿದುಕೊಳ್ಳಲು ಮಾಡುವ ಪುಟ್ಟ ಕಾಲ್ನಡಿಗೆಯ ಪ್ರವಾಸವೇ ಸರಿ.

''ನನ್ನ ಮುಖ್ಯ ಗುರಿಯು ತರಹೇವಾರಿ ಬೀಜಪ್ರಭೇದಗಳ ಸಂರಕ್ಷಣೆಯೇ ಹೊರತು ಅವುಗಳನ್ನು ಮಾರಿ ಲಾಭ ಮಾಡಿಕೊಳ್ಳುವುದಲ್ಲ'', ಎನ್ನುತ್ತಾರೆ ಖಾನ್. ಯಾರಾದರೂ ಈ ಬೀಜಗಳನ್ನು ಬಳಸಿ ಸಾವಯವ ವಿಧಾನದಲ್ಲಿ ಕೃಷಿ ಮಾಡುವ ಆಸಕ್ತಿಯನ್ನು ತೋರಿದರೆ ಅಂಥವರಿಗೆ ಖಾನ್ ಬೀಜಗಳನ್ನು ತಕ್ಕಮಟ್ಟಿನ ಬೆಲೆಯಲ್ಲಿ ಮಾರುತ್ತಾರೆ

Ghani preserves desi paddy in glass bottle, along with the paddy name label outside
PHOTO • Manjula Masthikatte
Desi paddy ready to harvest in Ghani field
PHOTO • Manjula Masthikatte

1996 ರಲ್ಲಿ ದೇಸಿ ತಳಿಯ ಬೀಜಗಳನ್ನು ಸಂಗ್ರಹಿಸಲಾರಂಭಿಸಿದ ಖಾನ್ ರವರ ಸಂಗ್ರಹದಲ್ಲಿಂದು ದೇಶದ ಹಲವೆಡೆಗಳಿಂದ ಸಂಗ್ರಹಿಸಿದ 700 ಕ್ಕೂ ಹೆಚ್ಚು ಬಗೆಯ ಬೀಜಗಳಿವೆ.

ಖಾನ್ ಹೇಳುವ ಪ್ರಕಾರ ಎಕರೆಯೊಂದರಲ್ಲಿ ಭತ್ತ ಬೆಳೆಯಲು ವ್ಯಯಿಸಬೇಕಾಗಿರುವ ಮೊತ್ತವು ಸುಮಾರು 8000 - 10000 ರೂಪಾಯಿಗಳಷ್ಟಾಗುತ್ತವೆ. ಹೈಬ್ರಿಡ್ ತಳಿಗಳಿಗೆ ಹೋಲಿಸಿದರೆ ಫಸಲು ಕಮ್ಮಿಯಾದರೂ ಇಲ್ಲಿ ರೈತರಿಗೆ ನಷ್ಟವಾಗುವ ಸಾಧ್ಯತೆಗಳೇನೂ ಇಲ್ಲ. ''ಕೀಟನಾಶಕಗಳನ್ನು ಬಳಸಿ ಬೆಳೆಸಿದ ಇತರ ಬಗೆಯ ಭತ್ತಗಳಿಗಿಂತಲೂ ಸಾವಯವ ವಿಧಾನದಲ್ಲಿ ಬೆಳೆದ ಭತ್ತವು 20-40 ಪ್ರತಿಶತದಷ್ಟಿನ ಮಾರುಕಟ್ಟೆಯನ್ನು ಹೊಂದಿದೆ'', ಎನ್ನುತ್ತಾರೆ ಇವರು.

ಇವರು ಹೇಳುವ ಪ್ರಕಾರ ಸ್ಥಳೀಯ ಭತ್ತದ ತಳಿಗಳಿಗೆ ವೈದ್ಯಕೀಯ ಗುಣಗಳೂ ಇವೆ. ಉದಾಹರಣೆಗೆ 'ನವಾರಾ' ತಳಿಯ ಭತ್ತವು ಆರ್ಥೈಟಿಸ್ ಮತ್ತು ಕೀಲುನೋವುಗಳಿಗೆ ಲಾಭದಾಯಕವಾದರೆ, 'ಕರಿಗಿಜಿವಿಲಿ ಅಂಬೆಮೊಹರ್' ತಳಿಯನ್ನು ತಾಯಂದಿರ ಮೊಲೆಹಾಲನ್ನು ಉದ್ದೀಪನಗೊಳಿಸುವುದಕ್ಕಾಗಿ ಬಳಸಲಾಗುತ್ತದೆ. ಇವುಗಳಂತೆಯೇ ಮಕ್ಕಳನ್ನು ಕಾಡುವ ಅತಿಸಾರದ ಪರಿಹಾರಕ್ಕಾಗಿ 'ಸಣ್ಣಕ್ಕಿ' ಮತ್ತು ಜಾನುವಾರುಗಳಿಗಾಗುವ ಮೂಳೆ ಮುರಿತಗಳ ಚಿಕಿತ್ಸೆಗಳಿಗಾಗಿ 'ಮಹದಿ' ಬಗೆಯ ಭತ್ತ ತಳಿಗಳು (ಸೇವನೆಯು) ಉಪಕಾರಿ.

ಅಂದಹಾಗೆ ಖಾನ್ ಹೇಳುವ ಪ್ರಕಾರ ತಮಿಳುನಾಡಿನಲ್ಲಿ ಮದುವೆಯ ಗಂಡಿನ ಶಕ್ತಿವರ್ಧನೆಗಾಗಿ 'ಮಪ್ಪಿಲ್ಲೈ ಸಂಬಾ' ಎಂಬ ಭತ್ತದ ಬಗೆಯೊಂದನ್ನು ನೀಡಲಾಗುತ್ತದಂತೆ. ಭತ್ತದ ಮೂಟೆಯನ್ನೆತ್ತುವ ಮೂಲಕ ತನ್ನ ಶಕ್ತಿಪ್ರದರ್ಶನವನ್ನು ಮದುವೆಯ ಗಂಡು ಮಾಡಬೇಕಿರುವ ಸಂಪ್ರದಾಯವು ರಾಜ್ಯದ ಕೆಲ ಭಾಗಗಳಲ್ಲಿವೆ. ಈ ಬಗೆಯ ಭತ್ತದ ಸೇವನೆಯು ಇಂಥದ್ದೊಂದು ಸಾಹಸವನ್ನು ಮಾಡಲು ಆತನಿಗೆ ಶಕ್ತಿಯನ್ನು ನೀಡಬಲ್ಲದ್ದಂತೆ.

ಭತ್ತದ ತಳಿಯು ಬೆಳೆಲಾಗುವ ಪ್ರದೇಶಗಳು, ರುಚಿಯ ವ್ಯತ್ಯಾಸಗಳು, ವೈದ್ಯಕೀಯ ಗುಣಗಳು - ಹೀಗೆ ಭತ್ತತಳಿಗಳ ಬಗೆಗಿನ ವಿವಿಧ ಮಾಹಿತಿಗಳನ್ನು ಆಯಾ ಧಾನ್ಯಗಳ ಪಕ್ಕದಲ್ಲೇ ನಾವು ಬಡಾ ಬಾಘ್ ಮನೆಯಲ್ಲಿ ಕಾಣಬಹುದು. ''ದೇಸಿ ತಳಿಗಳಿಗಿರುವ ಗುಣವೈಶಿಷ್ಟ್ಯಗಳು ನಿಜಕ್ಕೂ ವಿಶೇಷವಾಗಿರುವಂಥವುಗಳು. ಅವುಗಳು ವಿವಿಧ ಗಾತ್ರ, ಬಣ್ಣ ಮತ್ತು ಆಕಾರಗಳಲ್ಲಿರುತ್ತವೆ'', ಎನ್ನುತ್ತಾರೆ ಖಾನ್.

Desi paddy varieties and their names
PHOTO • Manjula Masthikatte
Ghani explains the variety of desi paddy seeds and their uses
PHOTO • Manjula Masthikatte

ಘನಿಯ ಮನೆಯೆಂದರೆ ಭಾರತದ ಭತ್ತವೈವಿಧ್ಯಗಳ ಲೋಕದಲ್ಲಿ ಅಲೆದಾಡಿದಂತೆ - ಗಾಜಿನ ಜಾರುಗಳಲ್ಲಿಡಲಾಗಿರುವ ಬೀಜಗಳು ಮತ್ತು ಭತ್ತದ ಹೂಗಳನ್ನು ಅವುಗಳ ಸವಿವರ ಮಾಹಿತಿಗಳ ಸಹಿತವಾಗಿ ಭೇಟಿ ನೀಡುವ ಆಸಕ್ತರಿಗಾಗಿ ಪ್ರಸ್ತುತಪಡಿಸಲಾಗಿದೆ.

ಖಾನ್ ರವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಬಡಾ ಭಾಘ್ ಮಂಡ್ಯದ 16 ಎಕರೆಯ ಜಮೀನೊಂದರಲ್ಲಿದೆ. ಜಾನುವಾರುಗಳ ಪಾಲನೆಯ ಜೊತೆಗೇ ಭತ್ತ, ಮಾವು ಮತ್ತು ತರಕಾರಿಗಳ ವ್ಯವಸಾಯವನ್ನು ಇಲ್ಲಿ ಮಾಡಲಾಗುತ್ತದೆ. ಬೀಜಗಳ ಸಂರಕ್ಷಣೆಯ ಇವರ ಕೆಲಸದಲ್ಲಿ ಘನಿಯ ಪತ್ನಿಯಾದ 36 ರ ಪ್ರಾಯದ ಸಯೇದಾ ಫಿರ್ದೋಸಾರ ಕೊಡುಗೆಯೂ ಸಾಕಷ್ಟಿದೆ. ಆಕೆ ಗೋಡೆಯ ಮೇಲಿನ ಚಿತ್ರಾಲಂಕಾರಗಳಿಂದ ಹಿಡಿದು ಕೃಷಿತ್ಯಾಜ್ಯಗಳನ್ನು ಬಳಸಿ ಮಾಲೆ ಮತ್ತು ಆಲಂಕಾರಿಕ ಆಭರಣಗಳನ್ನೂ ಸಿದ್ಧಪಡಿಸಿ ಇಲ್ಲಿ ಭೇಟಿ ನೀಡುವ ಆಸಕ್ತರಿಗೆ ಅಥವಾ ಸ್ಥಳೀಯ ಅಂಗಡಿಗಳಿಗೆ ಈ ಉತ್ಪನ್ನಗಳನ್ನು ತಕ್ಕಮಟ್ಟಿನ ಬೆಲೆಯಲ್ಲಿ ಮಾರುತ್ತಾರೆ.

ಬೀಜತಳಿ ಸಂರಕ್ಷಣಾ ಕೇಂದ್ರವಲ್ಲದೆ ಈ ಸ್ಥಳವು ಭತ್ತದ ಲೋಕದ ಅದ್ಭುತಗಳನ್ನು ಅರಿಯಬಯಸುವ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಮಾಹಿತಿಯನ್ನು ನೀಡುವ ಅನೌಪಚಾರಿಕ ನೆಲೆಯೂ ಹೌದು. ಕೃಷಿಯ ಬಗೆಗಿನ ಘನಿಯ ಅಪಾರವಾದ ಜ್ಞಾನವು ಅವರಿಗೆ ಸ್ಥಳೀಯ ವಲಯದಲ್ಲಿ 'ರೈತ ವಿಜ್ಞಾನಿ' ಎಂಬ ಬಿರುದನ್ನು ನೀಡಿರುವುದಲ್ಲದೆ ಕೃಷಿ ಸಂಬಂಧಿ ವಿಷಯಗಳ ಬಗ್ಗೆ ಆಸಕ್ತರಿಗೆ ಇವರು ಸಲಹೆಯನ್ನೂ ನೀಡುತ್ತಾರೆ. ಈ ನಿಟ್ಟಿನಲ್ಲಿ ಸಹಜಕೃಷಿ ಮತ್ತು ಬೀಜ ಸಂರಕ್ಷಣೆಯ ಬಗ್ಗೆ ಅದೆಷ್ಟೋ ನಗರಗಳ ಶಾಲಾ ಕಾಲೇಜುಗಳಲ್ಲಿ, ಕೃಷಿ ವೈಜ್ಞಾನಿಕ ಕೇಂದ್ರಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಇವರು ಉಪನ್ಯಾಸಗಳನ್ನೂ ನೀಡಿದ್ದಾರೆ.

ಹಲವು ಪ್ರಶಸ್ತಿ-ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡ ಮತ್ತು ಸತತ ಪ್ರಯತ್ನಗಳ ಹೊರತಾಗಿಯೂ ಸರಕಾರದಿಂದ ಸಿಗಬೇಕಾದ ಸಹಾಯವನ್ನು ಪಡೆಯುವಲ್ಲಿ ಇವರು ಯಶಸ್ವಿಯಾಗಿಲ್ಲ. 2007 ರಲ್ಲಿ ಮಂಡ್ಯದ ಸಂಸ್ಥೆಯೊಂದು ಕೃಷಿ ಕ್ಷೇತ್ರದಲ್ಲಿ ಇವರು ನಡೆಸಿದ ಆವಿಷ್ಕಾರವನ್ನು ಗುರುತಿಸಿ 'ಅರಸಮ ಮೆಣಸೇಗೌಡ ಪ್ರಶಸ್ತಿ'ಯನ್ನು ನೀಡಿ ಇವರನ್ನು ಗೌರವಿಸಿತು. ಇದರ ಹೊರತಾಗಿ ಕರ್ನಾಟಕ ಸರ್ಕಾರದಿಂದ ನೀಡಲಾಗುವ 2008-09 ರ 'ಕೃಷಿ ಪಂಡಿತ ಪ್ರಶಸ್ತಿ' (ರೂ. 25,000 ನಗದು ಬಹುಮಾನ) ಮತ್ತು 2010 ರ 'ಜೀವವೈವಿಧ್ಯ ಪ್ರಶಸ್ತಿ' ಗಳೂ (ರೂ. 10000 ನಗದು ಬಹುಮಾನ) ಇವರಿಗೆ ಸಂದಿವೆ.

''ಸ್ಥಳೀಯ ಬೀಜತಳಿಗಳ ಸಂರಕ್ಷಣೆ ಮತ್ತು ಅವುಗಳನ್ನು ಹೆಚ್ಚಿನ ಜನರನ್ನು ತಲುಪಿಸುವುದು ಸದ್ಯದ ಆದ್ಯತೆಗಳಲ್ಲೊಂದು. ನಮ್ಮಲ್ಲಿ ಲಭ್ಯವಿರುವ ವಿವಿಧ ಬಗೆಯ ಭತ್ತಗಳನ್ನು ಗುರುತಿಸುವುದರಿಂದಲೇ ಇದನ್ನು ಆರಂಭಿಸಬಹುದು'', ಎನ್ನುತ್ತಾರೆ ಸೈಯದ್ ಘನಿ ಖಾನ್.

ಅನುವಾದ: ಪ್ರಸಾದ್ ನಾಯ್ಕ್

Manjula Masthikatte

Manjula Masthikatte is a 2019 PARI fellow based in Bengaluru. She was previously a news presenter at various Kannada news channels.

Other stories by Manjula Masthikatte
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected] This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

Other stories by Prasad Naik