ಕಾರ್ಗಿಲ್ಲಿನ ಮುಖ್ಯ ಮಾರುಕಟ್ಟೆಯ ರಸ್ತೆಯಲ್ಲಿ ನೀವು ನಡೆದುಕೊಂಡು ಹೋಗಿದ್ದಾದರೆ ಕಿರಿದಾದ ಅಂಕುಡೊಂಕಿನ ಓಣಿಯೊಂದು ಮುಖ್ಯ ರಸ್ತೆಯಿಂದ ಬೇರ್ಪಟ್ಟು ಸಾಗಿರುವುದನ್ನು ಕಾಣಬಹುದು. ಈ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲೂ ಪುಟ್ಟ ಅಂಗಡಿಗಳಿವೆ. ಈ ಅಂಗಡಿಗಳ ಹೊರಭಾಗದಲ್ಲಿ ಪ್ರದರ್ಶನಕ್ಕಿಟ್ಟಿರುವ ಬಣ್ಣಬಣ್ಣದ ಸ್ಕಾರ್ಫ್ಗಳು ಮತ್ತು ದುಪ್ಪಟ್ಟಾಗಳು ಗಾಳಿಗೆ ಪಟಪಟನೆ ಬೀಸುತ್ತಾ ದಾರಿಹೋಕರನ್ನು ತಮ್ಮತ್ತ ಸೆಳೆಯುತ್ತಿದ್ದರೆ ಅಂಗಡಿಯ ಒಳಭಾಗದಲ್ಲಿ ಸಲ್ವಾರ್ ಕಮೀಝ್, ಸ್ವೆಟರ್, ಪಾದರಕ್ಷೆಗಳು, ಮಕ್ಕಳ ಉಡುಗೆಗಳು ಮತ್ತು ಇತರೆ ವಸ್ತುಗಳ ಉತ್ತಮ ಸಂಗ್ರಹವನ್ನೇ ನೀವು ಕಾಣಬಹುದು.
ಈ ಮಾರುಕಟ್ಟೆಯ ಪ್ರದೇಶವನ್ನು `ಕಮಾಂಡರ್ ಮಾರುಕಟ್ಟೆ'ಯೆಂದು ಕರೆಯಲಾಗುತ್ತದೆ. ಚಿಕ್ಕಪುಟ್ಟ ಅಂಗಡಿಗಳಿರುವ ಈ ಭೂಮಿಯ ಮಾಲೀಕನು ಒಬ್ಬ `ಕಮಾಂಡರ್' ಆಗಿರುವುದರಿಂದ ಈ ಮಾರುಕಟ್ಟೆಗೆ ಅದೇ ಹೆಸರು ಬಂದಿದೆ ಎನ್ನುತ್ತಾರೆ ಸ್ಥಳೀಯರು. ಅಂದಹಾಗೆ ಇಲ್ಲಿ ಅಂಗಡಿಗಳನ್ನು ನಡೆಸುತ್ತಿರುವ ಎಲ್ಲರೂ ಕೂಡ ಶಿಯಾ ಪಂಗಡಕ್ಕೆ ಸೇರಿದ ಮಹಿಳೆಯರು.
ಲಡಾಖ್ ನಲ್ಲಿರುವ ಸರಹದ್ದಿನ ಪಕ್ಕದಲ್ಲಿದ್ದು ಹಿಮಾಲಯ ಪರ್ವತಗಳಿಂದ ಸುತ್ತುವರೆದಿರುವ ಪ್ರದೇಶವೇ ಕಾರ್ಗಿಲ್. 1947 ರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸರಹದ್ದಿನ ರೇಖೆಯನ್ನು ಎಳೆಯುವವರೆಗೂ ಮಧ್ಯ ಏಷ್ಯಾದ ರೇಷ್ಮೆ ವ್ಯಾಪಾರಿ ಮಾರ್ಗಗಳಿಗೆ ಇದೊಂದು ದಕ್ಷಿಣ ಭಾಗದ ಪ್ರಮುಖ ನೋಡ್ ಆಗಿತ್ತು. ಸುಮಾರು 16,000 ದಷ್ಟಿರುವ ಪ್ರದೇಶದ ಜನಸಂಖ್ಯೆಯಲ್ಲಿ (2011 ರ ಜನಗಣತಿಯಂತೆ) ಹೆಚ್ಚಿನವರು ಮುಸಲ್ಮಾನರಾದರೆ ಉಳಿದವರು ಬೌದ್ಧರು ಮತ್ತು ಕೆಲ ಸಿಖ್ ಕುಟುಂಬಗಳು. 1999 ರಲ್ಲಿ ನಡೆದ ಕೊನೆಯ ಯುದ್ಧವೂ ಸೇರಿದಂತೆ ಇಲ್ಲಿ ನೆಲೆಸಿರುವ ಕಳೆದ ಕೆಲವು ಪೀಳಿಗೆಗಳು ಬರೋಬ್ಬರಿ ಮೂರು ಯುದ್ಧಗಳನ್ನು ಕಂಡಿವೆ.
ಮಹಿಳೆಯೊಬ್ಬರಿಂದ ಶುರುವಾದ ಅಂಗಡಿಯೊಂದು ಮೊಟ್ಟಮೊದಲು ತಲೆಯೆತ್ತಿದ್ದು ಈ ಕಮಾಂಡರ್ ಮಾರ್ಕೆಟ್ಟಿನಲ್ಲೇ (ಮಾರುಕಟ್ಟೆಗೆ ಈ ಹೆಸರು ಬಂದಿದ್ದು ಮಾತ್ರ ನಂತರವೆಂದು ಹೇಳಲಾಗುತ್ತದೆ. ಮೂರು ದಶಕಗಳ ಹಿಂದಿನ ಮಾತಿದು). ಹೀಗೆ ಈಕೆ ಆ ಕಾಲದಲ್ಲಿ ಅಂಗಡಿಯೊಂದನ್ನು ತೆರೆದಾಗ ಸಮಾಜದಿಂದ ಎದುರಾದ ವಿರೋಧ ಮತ್ತು ಕಿರುಕುಳಗಳು ಅಷ್ಟಿಷ್ಟಲ್ಲ ಎನ್ನುತ್ತಾರೆ ಈ ಅಂಗಡಿಯ ಸದ್ಯದ ಮಾಲೀಕರು. ಈ ಕಾರಣದಿಂದಾಗಿಯೇ ಆತ ಈ ಮಹಿಳೆಯ ಹೆಸರನ್ನು ಗೌಪ್ಯವಾಗಿಟ್ಟಿದ್ದರು. ಆದರೆ ಇವೆಲ್ಲಾ ವಿರೋಧಗಳ ಹೊರತಾಗಿಯೂ ಆಕೆಯ ಧೈರ್ಯ ಮತ್ತು ಛಲವನ್ನು ಕಂಡು ಪ್ರೇರಿತರಾದ 2-3 ಮಹಿಳೆಯರು ಅದೇ ಸ್ಥಳದಲ್ಲಿ ಕೆಲ ಜಾಗಗಳನ್ನು ಬಾಡಿಗೆ ಪಡೆದು ತಮ್ಮ ಅಂಗಡಿಗಳನ್ನು ಆರಂಭಿಸಿದ್ದರಂತೆ. ಈಗ ಈ ಪ್ರದೇಶದಲ್ಲಿ ಸುಮಾರು ಮೂವತ್ತು ಅಂಗಡಿಗಳಿದ್ದು ಅವುಗಳಲ್ಲಿ ಕೇವಲ 3 ಅಂಗಡಿಗಳು ಮಾತ್ರ ಪುರುಷರಿಂದ ನಡೆಸಲ್ಪಡುತ್ತಿದೆ.
ಕಳೆದ ದಶಕದವರೆಗೂ ಕಾರ್ಗಿಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಕಾಣಸಿಗುವುದೇ ದುಃಸಾಧ್ಯವೆಂಬಂತಿದ್ದ ಸಂದರ್ಭವು ಕಳೆದುಹೋದರೂ ಕಮಾಂಡರ್ ಮಾರುಕಟ್ಟೆಯು ಅಷ್ಟಾಗಿಯೇನೂ ಸುದ್ದಿಯಾಗದ ಒಂದು ಭೂಭಾಗ. ಇಲ್ಲಿಯ ಕೆಲ ಕಿರಿ ವಯಸ್ಸಿನ ಅಂಗಡಿ ಮಾಲೀಕರು ಹೇಳುವ ಪ್ರಕಾರ ಸ್ಥಳೀಯ ಮಹಿಳೆಯರಲ್ಲಿ ಹೆಚ್ಚಾದ ಸಾಕ್ಷರತೆಯೇ ಈ ಬೆಳವಣಿಗೆಗೆ ಕಾರಣವಂತೆ (2011 ರಲ್ಲಿದ್ದ 41 ಪ್ರತಿಶತದಿಂದ 2011 ರ 56 ಪ್ರತಿಶತದವರೆಗೆ). ಅಲ್ಲದೆ ಹಿರಿಯ ವ್ಯಾಪಾರಿಗಳ ಪ್ರಕಾರ ಈ ಯಶಸ್ವಿ ಮಹಿಳೆಯರ ಆರ್ಥಿಕ ಸ್ವಾವಲಂಬನೆಯು ಮತ್ತಷ್ಟು ಮಹಿಳೆಯರನ್ನು ಇಂಥಾ ಜಾಗಗಳತ್ತ ಕರೆತಂದಿದೆ. ಇವರುಗಳಲ್ಲಿ ಹಲವರು ಸಂಪಾದನೆಯ ಆಸೆಯನ್ನಿಟ್ಟುಕೊಂಡು ಬಂದರೆ ಉಳಿದವರು ತಮ್ಮ ಹಿಂದಿನವರಿಂದ ಪ್ರೇರಿತರಾಗಿ ಬಂದಿರುವಂಥವರು. ಕಾಲಾನುಕ್ರಮದಲ್ಲಿ ಕಾರ್ಗಿಲ್ ಕೂಡ ಈ ಬದಲಾವಣೆಯನ್ನು ಒಪ್ಪಿಕೊಂಡುಬಿಟ್ಟಿದೆ ಎನ್ನುತ್ತಾರವರು.
ಈ ಫೋಟೋ ಪ್ರಬಂಧಕ್ಕಾಗಿ ನಾನು ಕ್ಯಾಮೆರಾ ಹಿಡಿದುಕೊಂಡು ಕಮಾಂಡರ್ ಮಾರುಕಟ್ಟೆಗೆ ಬಂದಿಳಿದಾಗ ಕೆಲವು ಮಹಿಳೆಯರು ಕ್ಯಾಮೆರಾ ಫ್ರೇಮಿನಲ್ಲಿ ಬರಲೊಪ್ಪಲಿಲ್ಲ. ಈ ಚಿತ್ರಗಳು ಎಲ್ಲಾದರೂ ಪ್ರಕಟವಾಗುತ್ತವೆ ಎಂಬ ಆತಂಕವು ಕೆಲ ಮಹಿಳೆಯರಿಗಿದ್ದರೆ ಇನ್ನು ಕೆಲವರಿಗೆ ತಮ್ಮ ಪೂರ್ಣ ನಾಮಧೇಯವನ್ನು ಬಳಸುವ ಬಗ್ಗೆ ತಕರಾರಿತ್ತು. ಆದರೂ ಬಹಳಷ್ಟು ಮಹಿಳೆಯರು ತಮ್ಮ ಕಥೆಗಳನ್ನು ಹೇಳಲು ಹೆಮ್ಮೆಪಟ್ಟರು ಮತ್ತು ಉತ್ಸುಕರಾಗಿದ್ದರು ಅನ್ನುವುದಂತೂ ನಿಜ.
![](/media/images/02-Pic_2-SS-The_Commander_Heights_of_Kargils_.width-1440.jpg)
ರಮಾದಾನ್ ತಿಂಗಳಿನಲ್ಲಿ ಅಪರಾಹ್ನದ ಬಿಡುವಿಲ್ಲದ ಅವಧಿಯಲ್ಲಿ ಕಾಣಸಿಕ್ಕ ಕಮಾಂಡರ್ ಮಾರುಕಟ್ಟೆಯ ಒಂದು ನೋಟ.
![](/media/images/03-Pic_3-SS-The_Commander_Heights_of_Kargils_.width-1440.jpg)
``ನಾನು ದೂರಶಿಕ್ಷಣ ಸೌಲಭ್ಯವನ್ನು ಬಳಸಿಕೊಂಡು ಬಿ.ಎ ಓದುತ್ತಿರುವ ಹಿಂದಿನ ಮುಖ್ಯ ಕಾರಣವೆಂದರೆ ಆರ್ಥಿಕವಾಗಿ ಸ್ವಾವಲಂಬಿಯಾಗುವ ಬಯಕೆ. ಇದು ನನ್ನ ಸಂಬಂಧಿಯೊಬ್ಬರ ಅಂಗಡಿ. ನಾನು ಮತ್ತು ಶಹೀದಾ ಸಹಾಯಕರಾಗಿ ಅವರೊಂದಿಗೆ ದುಡಿಯುತ್ತಿದ್ದೇವೆ. ನನಗೆ ತಿಂಗಳಿಗೆ 7000-8000 ರೂಪಾಯಿಗಳಷ್ಟು ಸಂಬಳವನ್ನು ನನ್ನ ಆಂಟಿ ನೀಡುತ್ತಾರೆ. ಅಲ್ಲದೆ ನಾವಿಬ್ಬರೂ ಜೊತೆಯಲ್ಲಿ ಕೆಲಸ ಮಾಡುವುದೆಂದರೆ ನಮಗೆ ಖುಷಿ'', ಎನ್ನುತ್ತಾರೆ 28 ರ ಹರೆಯದ ಅಬೀದಾ ಖನಾಮ್ (ಬಲ).
![](/media/images/04-Pic_4-Crop-SS-The_Commander_Heights_of_Kar.width-1440.jpg)
``ಉತ್ಪನ್ನಗಳನ್ನು ಖರೀದಿಸಲು ನಾವು ಜಮ್ಮು, ಶ್ರೀನಗರ, ಲುಧಿಯಾನ, ದೆಹಲಿಗಳಿಗೆ ಪ್ರಯಾಣಿಸುತ್ತಿರುತ್ತೇವೆ. ಕಾರ್ಗಿಲ್ಲಿನ ಮೈಕೊರೆಯುವ ಚಳಿಯಿಂದ ಹೊರತಾಗಿರುವ ಚಳಿಗಾಲದ ಆಫ್ ಸೀಸನ್ನುಗಳಲ್ಲಷ್ಟೇ ಇವರುಗಳು ಬಟ್ಟೆಗಳನ್ನು ಖರೀದಿಸಲು ಹೋಗುತ್ತಾರಂತೆ. ಮೇ ತಿಂಗಳಿನಲ್ಲಿ ಶ್ರೀನಗರ-ಲೇಹ್ ಹೆದ್ದಾರಿಯು ತೆರೆದುಕೊಂಡಾಗ ಮುನ್ನವೇ ಆರ್ಡರ್ ಮಾಡಿದ್ದ ಉತ್ಪನ್ನಗಳು ಇವರುಗಳಿಗೆ ತಲುಪುತ್ತವೆ. ಹೊಸ ಸ್ಟಾಕ್ ಗಳು ಬರುವವರೆಗೂ ಹಿಂದಿನ ವರ್ಷದ ಸ್ಟಾಕ್ ಗಳು ತುಂಬಿರುತ್ತವೆಯಾದ್ದರಿಂದ ವ್ಯಾಪಾರವೂ ಸರಾಗವಾಗಿ ನಡೆಯುತ್ತಿರುತ್ತದೆ .
![](/media/images/05-Pic_5-SS-The_Commander_Heights_of_Kargils_.width-1440.jpg)
ಅಂಗಡಿಯನ್ನು ಸದ್ಯ ಮನ್ಸೂರ್ ಎಂಬವರು ನಡೆಸುತ್ತಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮನ್ಸೂರರ ತಾಯಿ ಈ ಅಂಗಡಿಯನ್ನು ಆರಂಭಿಸಿದ್ದರಂತೆ. ``ಈ ಪ್ರದೇಶದಲ್ಲಿರುವ ಬೆರಳೆಣಿಕೆಯ ಪುರುಷ ವ್ಯಾಪಾರಿಗಳಲ್ಲಿ ನಾನೂ ಒಬ್ಬ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ. ಜೊತೆಗೇ ವೃದ್ಧ ಪೋಷಕರನ್ನು ನೋಡಿಕೊಳ್ಳುತ್ತಾ ಕುಟುಂಬಕ್ಕೆ ಆಧಾರವಾಗಿರುವುದೆಂದರೆ ನನಗೆ ಸಂತಸದ ವಿಚಾರ'', ಎನ್ನುತ್ತಿದ್ದಾರೆ ಮನ್ಸೂರ್.
![](/media/images/06-Pic_6Crop-SS-The_Commander_Heights_of_Karg.width-1440.jpg)
ತನ್ನ ಸಹೋದರಿಯ ಸಹಯೋಗದೊಂದಿಗೆ ವ್ಯಾಪಾರದ ಕ್ಷೇತ್ರದಲ್ಲಿ ಇದೇ ಮೊದಲಬಾರಿಗೆ ಕಾಲೂರುತ್ತಿರುವ 32 ರ ಪ್ರಾಯದ ಸಾರಾ ತನ್ನ ಹೊಸ ಸಾಹಸದ ಬಗ್ಗೆ ಸಹಜವಾಗಿಯೇ ಉತ್ಸುಕರಾಗಿದ್ದಾರೆ. ``ಮಹಿಳೆಯರನ್ನು ಇಸ್ಲಾಂ ಧರ್ಮದಲ್ಲಿ ಪ್ರೋತ್ಸಾಹಿಸಲಾಗುವುದಿಲ್ಲ, ಅವರನ್ನು ಕಡೆಗಣಿಸಲಾಗುತ್ತಿದೆ ಎಂಬುದೆಲ್ಲಾ ದೊಡ್ಡ ಸುಳ್ಳು. ನನ್ನ ಈ ಹೆಜ್ಜೆಯಲ್ಲಿ ಕುಟುಂಬವು ನನ್ನ ಜೊತೆಗಿದೆ. ಈ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆದ ಹಲವು ಮಹಿಳೆಯರನ್ನು ಆದರ್ಶದಂತೆ ಕಂಡು ಪ್ರೇರಿತಳಾಗಿರುವ ನನಗೆ ನನಗಾಗಿಯೂ ಮತ್ತು ನನ್ನ ಕುಟುಂಬಕ್ಕಾಗಿಯೂ ಸಂಪಾದನೆಯನ್ನು ಮಾಡುವ ಆಸೆಯಿದೆ'', ಎನ್ನುತ್ತಾರೆ ಸಾರಾ
![](/media/images/07-Pic_7-SS-The_Commander_Heights_of_Kargils_.width-1440.jpg)
``ನನಗೆ ಸುಸ್ತಾಗಿದೆ. ಉಪವಾಸವನ್ನು ಮುರಿದು ಏನನ್ನಾದರೂ ತಿನ್ನೋಣವೆಂದು ಇಫ್ತಾರ್ ಸಮಯಕ್ಕಾಗಿ ಕಾಯುತ್ತಿದ್ದೇನೆ'', ಎನ್ನುತ್ತಿದ್ದಾರೆ ಕ್ಯಾಮೆರಾದೆದುರು ಬರಲು ಸಂಕೋಚಪಡುತ್ತಿರುವ ಬಾನೋ .
![](/media/images/08-Pic_8-SS-The_Commander_Heights_of_Kargils_.width-1440.jpg)
``ಹತ್ತಿಯ `ಇನ್ಫಿನಿಟಿ ಲೂಪ್' ಆಗಿರುವ ಈ ಸುಂದರ ಸ್ಕಾರ್ಫ್ (ಸ್ಕಾರ್ಫ್ ಅನ್ನು ತನ್ನ ಕತ್ತಿನ ಸುತ್ತ ಸುತ್ತಿಕೊಂಡು ಈ ಚಿತ್ರದಲ್ಲಿ ನಮಗಾಗಿ ತೋರಿಸಿದ್ದಾರೆ) ಸದ್ಯದ ಟ್ರೆಂಡ್ ಗಳಲ್ಲೊಂದು. ಅದರಲ್ಲೂ ಕಾರ್ಗಿಲ್ಲಿಗೆ ಭೇಟಿ ಕೊಡುವ ವಿದೇಶಿ ಪ್ರವಾಸಿಗರಿಗೆ ಇದು ಭಾರೀ ಇಷ್ಟ. ನಾನು ಹಲವು ಹಳ್ಳಿಗಳ ಮಹಿಳೆಯರನ್ನೂ ಕೂಡ ನನ್ನ ಈ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಿಂದಾಗಿ ಅವರಿಗೊಂದಿಷ್ಟು ಸಹಾಯವಾಗಲಿ ಎಂಬುದು ನನ್ನ ಕಳಕಳಿ. ಈ ಮಹಿಳೆಯರು ತಮ್ಮ ಕೈಯಾರೆ ತಯಾರಿಸಿದ ಉತ್ಪನ್ನಗಳನ್ನು ನನ್ನ ಈ ಅಂಗಡಿಯಲ್ಲಿ ಮತ್ತು ಕಾರ್ಗಿಲ್ಲಿನ ಕೆಲ ಹೋಟೇಲುಗಳಲ್ಲಿ ಮಾರಿ ಅವರ ಆದಾಯಕ್ಕೂ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ವ್ಯಾಪಾರವು ನಿಜಕ್ಕೂ ಬಹಳ ಚೆನ್ನಾಗಿ ನಡೆಯುತ್ತಿದೆ, ಅದರಲ್ಲೂ ಬೇಸಿಗೆಯಲ್ಲಂತೂ 40,000 ರೂಪಾಯಿಗಳ ಅಥವಾ ಅದಕ್ಕಿಂತ ಹೆಚ್ಚಿನ ಆದಾಯವೇ ನನ್ನ ಕೈಸೇರುತ್ತಿದೆ'', ಎನ್ನುತ್ತಿದ್ದಾರೆ ಹಾಜಿ ಅಖ್ತರ್
![](/media/images/09-Pic_9-SS-The_Commander_Heights_of_Kargils_.width-1440.jpg)
25 ರ ಹರೆಯದ ಕನೀಝ್ ಫಾತಿಮಾ ಅಂಗಡಿಯಲ್ಲಿ ತನ್ನ ತಾಯಿಗೆ ನೆರವಾಗುತ್ತಿದ್ದಾರೆ. ಸುಮಾರು ಎರಡು ದಶಕಗಳ ಹಿಂದೆ ಈ ಪ್ರದೇಶದಲ್ಲಿ ಅಂಗಡಿಯೊಂದನ್ನು ತೆರೆದಿದ್ದ ಬೆರಳೆಣಿಕೆಯ ಮಹಿಳೆಯರಲ್ಲಿ ಇವರ ತಾಯಿಯೂ ಕೂಡ ಒಬ್ಬರು
![](/media/images/10-Pic_10-Crop-SS-The_Commander_Heights_of_Ka.width-1440.jpg)
ಕಳೆದ 6 ವರ್ಷಗಳಿಂದ ಫಾತಿಮಾ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಫಾತಿಮಾಳ ಬಗಲಲ್ಲಿ ಕುಳಿತಿರುವ ಆಕೆಯ ಪತಿ ಮೊಹಮ್ಮದ್ ಇಸಾ ಈ ಪುಟ್ಟ ವ್ಯಾಪಾರವನ್ನು ಆರಂಭಿಸಲು ತನ್ನ ಮಡದಿಗೆ ನೆರವಾಗಿದ್ದ.``ಇಂದಿಗೂ ಇವರು ದೊಡ್ಡ ಶಕ್ತಿಯಂತೆ ನನ್ನ ಜೊತೆಗಿದ್ದಾರೆ. ನನ್ನ ಬಗ್ಗೆ ಇವರಿಗೆ ಹೆಮ್ಮೆಯಿದೆ. ನನ್ನ ಜೀವನದುದ್ದಕ್ಕೂ ಸಹಕಾರ ಮತ್ತು ಪ್ರೇರಣೆಯ ಶಕ್ತಿಯಾಗಿ ಇವರು ನನ್ನೊಂದಿಗೆ ನಿಂತಿದ್ದಾರೆ'', ಎನ್ನುತ್ತಾರೆ ಫಾತಿಮಾ.
![](/media/images/11-Pic_11-Crop-SS-The_Commander_Heights_of_Ka.width-1440.jpg)
ಅಚೇ (ಅಕ್ಕಾ), ನಮ್ಮ ಚಿತ್ರಗಳನ್ನೇಕೆ ನೀವು ತೆಗೆಯುತ್ತಿಲ್ಲ?'', ಎಂದು ಅಂಗಡಿಗೆ ಭೇಟಿಯಿತ್ತ ಕೆಲ ಯುವಕರು ಕೇಳುತ್ತಿದ್ದಾರೆ.