ಪೂರ್ವ ಘಟ್ಟದ ​​ಒರಟು ಪರ್ವತಗಳ ತುತ್ತ ತುದಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಪಕ್ಕದ ಕಾಡಿನಲ್ಲಿನ ಕಾಮಳ್ಳಿ (hill mynah) ಹಕ್ಕಿಗಳ ಕೂಗನ್ನು ಅರೆಸೇನಾ ಪಡೆಯ ಸೈನಿಕರ ಶೂಗಳ ಭಾರೀ ಸದ್ದು ಇಲ್ಲವಾಗಿಸುತ್ತವೆ. ಇಂದು, ಅವರು ಮತ್ತೆ ಇಲ್ಲಿನ ಹಳ್ಳಿಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಇಂತಹ ರಾತ್ರಿಗಳಲ್ಲಿ ಆಕೆಗೆ ಭಯವಾಗುವುದು ಹೆಚ್ಚು.

ಆಕೆಗೆ ತನಗೆ ದೇಮತಿಯೆಂದು ಏಕೆ ಹೆಸರಿಡಲಾಗಿದೆಯೆನ್ನುವುದು ತಿಳಿದಿರಲಿಲ್ಲ. "ಆಕೆ ನಮ್ಮ ಹಳ್ಳಿಯ ಧೈರ್ಯವಂತ ಮಹಿಳೆ, ಬ್ರಿಟಿಷ್‌ ಸೈನ್ಯವನ್ನು ಒಬ್ಬರೇ ಓಡಿಸಿಬಿಟ್ಟಿದ್ದರು" ಎಂದು ಆಕೆಯ ತಾಯಿ ದೇಮತಿಯವರ ಕುರಿತು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಅವಳಿಗೆ ದೇಮತಿಗಿದ್ದಷ್ಟು ಧೈರ್ಯವಿದ್ದಿರಲಿಲ್ಲ. ಆಕೆ ಅಂಜುಬುರುಕಿಯಾಗಿದ್ದಳು.

ಅವಳಿಗೆ ಹೊಟ್ಟೆ ನೋವು, ಹಸಿವು, ನೀರು ಸಿಗದ ದಿನಗಳು, ಹಣವಿಲ್ಲದ ಪರಿಸ್ಥಿತಿ, ಅನುಮಾನಾಸ್ಪದ ಕಣ್ಣುಗಳು, ಬೆದರಿಸುವ ಕಣ್ಣುಗಳು, ನಿಯಮಿತ ಬಂಧನಗಳು, ಚಿತ್ರಹಿಂಸೆ, ಸಾಯುತ್ತಿರುವ ಜನರ ಮಧ್ಯೆ ಬದುಕುವುದು ಇವೆಲ್ಲವನ್ನೂ ಕಲಿತಿದ್ದಳು. ಆದರೆ ಈ ಎಲ್ಲದರ ಜೊತೆಗೆ, ಅವಳ ಬಳಿ ಅರಣ್ಯ, ಮರಗಳು ಮತ್ತು ಜಲಪಾತಗಳಿದ್ದವು. ಅವಳು ತನ್ನ ತಾಯಿಯನ್ನು 'ಸಾಲ್' ಹೂವುಗಳ ಪರಿಮಳದಲ್ಲಿ ಕಾಣಬಲ್ಲವಳಾಗಿದ್ದಳು, ಅದೇ ಕಾಡಿನಲ್ಲಿ ತನ್ನ ಅಜ್ಜಿಯ ಹಾಡುಗಳು ಪ್ರತಿಧ್ವನಿಸುವುದನ್ನು ಕೇಳಬಲ್ಲವಳಾಗಿದ್ದಳು. ಇವೆಲ್ಲವೂ ತನ್ನೊಂದಿಗೆ ಇರುವವರೆಗೂ ತಾನು ಯಾವುದೇ ತೊಂದರೆಗಳನ್ನು ಎದುರಿಸಬಲ್ಲೆನೆನ್ನುವ ವಿಶ್ವಾಸವೂ ಆಕೆಗಿತ್ತು.

ಆದರೆ ಈಗ, ಅವಳು ಇಲ್ಲಿಯವಳೆಂದು ತೋರಿಸುವುವದಕ್ಕೆ  ಪುರಾವೆಯಾಗಿ ಕಾಗದದ ತುಂಡನ್ನು ತೋರಿಸುವ ತನಕ, ಅವಳು ಇಲ್ಲಿರಬಾರದೆಂದು ಅವರು ಹೇಳುತ್ತಿದ್ದಾರೆ. ಅವಳ ಗುಡಿಸಲಿನಿಂದ, ಅವಳ ಹಳ್ಳಿಯಿಂದ, ಅವಳ ಮಣ್ಣಿನಿಂದ ಅವಳು ದೂರವಿರಬೇಕು ಎನ್ನಲಾಗುತ್ತಿದೆ. ಈ ಕಾಡಿನಲ್ಲಿಯೇ ಆಕೆಯ ತಂದೆ ಅವಳಿಗೆ ವಿವಿಧ ಔಷಧೀಯ ಸಸ್ಯಗಳು, ಪೊದೆಗಳು ಮತ್ತು ಎಲೆಗಳನ್ನು ಹೆಸರಿಸಲು ಕಲಿಸಿದ್ದು. ಇದೇ ಕಾಡಿನಲ್ಲಿ ಪ್ರತಿ ಬಾರಿ ಅವಳು ತನ್ನ ತಾಯಿಯೊಂದಿಗೆ ಹಣ್ಣುಗಳು, ಕಾಯಿಗಳು ಮತ್ತು ಉರುವಲುಗಳನ್ನು ಸಂಗ್ರಹಿಸಲು ಹೋದಾಗ, ಅವಳಿಗೆ ತಾಯಿಯು ತಾನು ಇದೇ ಮರದ ಕೆಳಗೆ ಜನಿಸಿದ್ದಾಗಿ ತೋರಿಸುತ್ತಿದ್ದರು. ಆಕೆಯ ಅಜ್ಜಿ ಈ ಕಾಡಿನ ಬಗ್ಗೆ ಹಾಡುಗಳನ್ನು ಕಲಿಸಿದ್ದರು. ಇದೇ ಕಾಡಿನಲ್ಲಿ ಆಕೆ ತನ್ನ ತಮ್ಮನೊಂದಿಗೆ ಒಡಾಡುತ್ತಾ ಹಕ್ಕಿಗಳ ದನಿ ಆಲಿಸಿದ್ದಳು ಮತ್ತದನ್ನು ಅನುಕರಿಸಿ ಪ್ರತಿಧ್ವನಿಸಿದ್ದಳು.

ಆದರೆ ಅಂತಹ ಜ್ಞಾನ, ಈ ಕಥೆಗಳು, ಈ ಹಾಡುಗಳು ಮತ್ತು ಬಾಲ್ಯದ ಆಟಗಳು ಯಾವುದಕ್ಕಾದರೂ ಪುರಾವೆಯಾಗಬಹುದೇ? ಅವಳು ತನ್ನ ಹೆಸರಿನ ಅರ್ಥವನ್ನು ಹುಡುಕುತ್ತಾ ಕುಳಿತಿದ್ದಳು ಮತ್ತು ತನ್ನ ಹೆಸರಿನ  ಮಹಿಳೆಯ ಬಗ್ಗೆ ಯೋಚಿಸುತ್ತಿದ್ದಳು. ದೇಮತಿಯು ಇಂದು ಬದುಕಿದ್ದರೆ ತಾನು ಈ ಕಾಡಿನ ಭಾಗವೆಂದು ಹೇಗೆ ಸಾಬೀತುಪಡಿಸುತ್ತಿದ್ದರು? ಎನ್ನುವುದು ಆಕೆಯ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಯಾಗಿತ್ತು.

ಸುಧನ್ವ ದೇಶಪಾಂಡೆಯವರ ದನಿಯಲ್ಲಿ ಕವಿತೆಯನ್ನು ಆಲಿಸಿ

Demathi Dei Sabar is known as ‘Salihan’ after the village in Nuapada district where she was born. She was closing in on 90 when PARI met her in 2002. Her incredible courage unrewarded and – outside her village – largely forgotten, living in degrading poverty
PHOTO • P. Sainath

ದೇಮತಿ ದೇಯಿ ಸಬರ್ ಅವರು ಹುಟ್ಟಿದ ನುವಾಪಾಡಾ ಜಿಲ್ಲೆಯ ಹಳ್ಳಿಯಾದ ಸಾಲಿಹಾದಲ್ಲಿ ಜನಿಸಿದರು. ನಂತರ 'ಸಾಲಿಹಾನ್' ಎಂದು ಕರೆಯಲ್ಪಟ್ಟರು. 2002ರಲ್ಲಿ ಪಿ ಸಾಯಿನಾಥ್ ಅವರನ್ನು ಭೇಟಿಯಾದಾಗ ಅವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು (ಆ ಲೇಖನದ ಲಿಂಕ್ ಕೆಳಗೆ ನೀಡಲಾಗಿದೆ). ಆದರೆ ಅವರ ಅದ್ಭುತ ಧೈರ್ಯವನ್ನು ಇತಿಹಾಸ ಗುರುತಿಸಲೇ ಇಲ್ಲ ಮತ್ತು - ಅವ ಹಳ್ಳಿಯಾಚೆಗಿನ ಜನರಿಗೆ ಅವರು ಬಹುಮಟ್ಟಿಗೆ ನೆನಪಿಲ್ಲ, ಜೀವನದುದ್ದಕ್ಕೂ ಅತ್ಯಂತ ಬಡತನದಲ್ಲೇ ಬದುಕಿದರು

ವಿಶ್ವರೂಪ ದರ್ಶನ*

ನಗುತ್ತಾ ಕುಳಿತಿದ್ದರಾಕೆ
ಚಿತ್ರವೊಂದರಲ್ಲಿ
ತನ್ನ ಪುಟ್ಟ ಮಣ್ಣಿನ ಮನೆಯ ಹೊಸ್ತಿಲಿನಲ್ಲಿ

ಅವರು ಉಟ್ಟಿದ್ದ ಕುಂಕುಮ ಬಣ್ಣದ ಸೀರೆಗೆ
ಅವರ ನಗೆ
ಇನ್ನಷ್ಟು ಗಾಢತೆ ತಂದಿದ್ದವು

ಅದೇ ನಗು
ಅವರ ಜೋತು ಬಿದ್ದ ಚರ್ಮ
ಅವರ ರವಿಕೆಯಿಲ್ಲದ ತೋಳಿಗೆ
ಬೆಳ್ಳಿಯ ಹೊಳಪನ್ನು ನೀಡಿತ್ತು

ಅವರ ಕೈಯಲ್ಲಿ ಇದ್ದ ಹಚ್ಚೆ
ಅವರ ನಗೆಯ ಗೆರೆಗಳಿಂದ
ಇನ್ನಷ್ಟು ಚಂದವಾಗಿತ್ತು

ಅದೇ ನಗು
ಅವರ ಬಾಚಿ ಒಪ್ಪಗೊಳಿಸದ
ಹಳದಿ ಬಿಳಿಗೂದಲಿಗೆ
ಕಡಲ ಅಲೆಯಂತಹ
ಬಾಗು ಬಳುಕು ತಂದಿತ್ತು.

ಅದೇ ನಗು
ಅವರ ಕಣ್ಣ ಪಾಪೆಯ ಹಿಂದೆ ಅವಿತಿದ್ದ
ನೆನಪುಗಳನ್ನು
ಮತ್ತೆ ಜೀವಂತಗೊಳಿಸಿದ್ದು

ಅವರು ನಗುತ್ತಾ ಕುಳಿತಿದ್ದ ಚಿತ್ರ
-ವನ್ನೇ ದಿಟ್ಟಿಸುತ್ತಿದ್ದೆ ಬಹಳ ಹೊತ್ತು
ನಡುವೆ ಮುಂದಿನೆರಡು ದೊಡ್ಡ ಹಲ್ಲುಗಳು ನೇತಾಡುತ್ತಿದ್ದವು

ಹಾಗೆ ನಗುತ್ತಲೇ
ಎರಡು ಹಲ್ಲುಗಳ ನಡುವೆ
ಇದ್ದ ಬಿರುಕಿನ ನಡುವೆ
ತನ್ನ ಹಸಿದ ಸೃಷ್ಟಿ ಪೂರ್ವದ ಭೂಮಿ
-ಯಂತಿದ್ದ ಹೊಟ್ಟೆಯೊಳಗೆ ನನ್ನ ಸೆಳೆದರು

ಒಳಗೆ ಗಾಢ ಕತ್ತಲೆ
ಕಣ್ಣು ಹಾಯಿಸಿದಷ್ಟೂ
ಮತ್ತು ಅದರಾಚೆಗೂ

ಯಾವುದೇ ದೈವಿಕ ಕಿರೀಟಗಳಿರಲಿಲ್ಲ
ಮುಕುಟಗಳಿಲ್ಲ
ಕ್ಲಬ್ಬುಗಳಿಲ್ಲ
ಚರ್ಚೆಗಳಿರಲಿಲ್ಲ ಅಲ್ಲಿ

ಸಾವಿರ ಸೂರ್ಯನ ಹೊಳಪಿನ ಒಂದು ಕೋಲು
ಕಣ್ಣು ಕೋರೈಸುವಂತೆ
ದೇಮತಿಯ ಚೌಕಟ್ಟಿನ ಚಿತ್ರ
ಅದರಿಂದ ಬಂದು
ಅದರೊಳಗೆ ಮಾಯವಾಗುವ
ಹನ್ನೊಂದು ರುದ್ರರು
ಹನ್ನೆರಡು ಆದಿತ್ಯರು
ವಸುವಿನ ಎಂಟು ಮಕ್ಕಳು
ಇಬ್ಬರು ಅಶ್ವಿನಿ ಕುಮಾರರು
ನಲತ್ತೊಂಬತ್ತು ಮಾರುತಗಳು
ಗಂಧರ್ವ ಗಾನ
ಯಕ್ಷಗಾನ
ಅಸುರರು
ಮತ್ತು ಎಲ್ಲ ಸಾಧಕ ಋಷಿಗಳು

ಅವರಿಗೆ ಹುಟ್ಟಿದ ನಲವತ್ತು ಸಾಲಿಹ ಹೆಣ್ಣು ಮಕ್ಕಳು
ಎಂಟು ಮಿಲಿಯನ್ ನಾಲ್ಕು ನೂರು ಸಾವಿರ ಚರಣ ಕನ್ಯೆಯರು**
ಎಲ್ಲಾ ಉದಯೋನ್ಮುಖರು
ಎಲ್ಲಾ ಕ್ರಾಂತಿಕಾರಿಗಳು
ಕನಸುಗಳ ಕನಸುವವರು
ಆಕ್ರೋಶ ಪ್ರತಿಭಟನೆಯ ಹಲವು ದನಿಗಳು
ಎಲ್ಲಾ ಪಳಗಿಲಾಗದ ಪರ್ವತಗಳು
ಎಲ್ಲಾ ಅರಾವಳಿ ಸಾಲು
ಗಿರ್ನಾರ್ ಪರ್ವತ
ಎಲ್ಲವೂ ಅವರಿಂದಲೇ ಜನಿಸುತ್ತಿದ್ದವು
ಅವರಲ್ಲೇ ವಿಲೀನಗೊಳ್ಳುತ್ತಿದ್ದವು
ತಾಯಿ, ತಂದೆ
ನನ್ನ ಸಂಪೂರ್ಣ ಜಗತ್ತು
ಎಲ್ಲವೂ ಅಲ್ಲಿದ್ದವು...


ದೇಮತಿ ಅವರ ಕುರಿತಾದ ಲೇಖನವನ್ನು ನೀವು ಇಲ್ಲಿ ಓದಬಹುದು

ಆಡಿಯೋ: ಸುಧನ್ವ ದೇಶಪಾಂಡೆ ಜನ ನಾಟ್ಯ ಮಂಚ್ ನ ನಟ ಮತ್ತು ನಿರ್ದೇಶಕ, ಮತ್ತು ಲೆಫ್ಟ್ ವರ್ಡ್ ಬುಕ್ಸ್ ನ ಸಂಪಾದಕರು.

ಮುಖಪುಟ ಚಿತ್ರ: ಮೂಲತಃ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಸಣ್ಣ ಪಟ್ಟಣದ ಲಬಾನಿ ಜಂಗಿ, ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಬಂಗಾಳಿ ಕಾರ್ಮಿಕರ ವಲಸೆಯ ಕುರಿತು ಪಿಎಚ್‌ಡಿ ಪದವಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಭಿಜಾತ ವರ್ಣಚಿತ್ರಕಾರರು ಮತ್ತು ಪ್ರಯಾಣವೆಂದರೆ ಪ್ರೀತಿ.

* ವಿಶ್ವರೂಪ ದರ್ಶನವು ಭಗವದ್ಗೀತೆಯ 11 ನೇ ಅಧ್ಯಾಯದಲ್ಲಿ ಅರ್ಜುನನಿಗೆ ಕೃಷ್ಣನು ತೋರಿಸಿದ ತನ್ನ ಶಾಶ್ವತ ರೂಪದ ದರ್ಶನವಾಗಿದೆ. ಈ ಅಧ್ಯಾಯದಲ್ಲಿ ವಿವರಿಸಿದ ದೇವರ ರೂಪವು ಒಂದು ಮಿಲಿಯನ್ ಕಣ್ಣುಗಳು, ಬಾಯಿಗಳು ಮತ್ತು ಅನೇಕ ಆಯುಧಗಳನ್ನು ಹೊಂದಿರುವ ಕೈಗಳನ್ನು ಹೊಂದಿದೆ. ಈ ರೂಪವು ಅನಂತ ಬ್ರಹ್ಮಾಂಡವನ್ನು ಒಳಗೊಂಡಿದೆ, ಇದರಲ್ಲಿ ಎಲ್ಲಾ ದೇವರುಗಳು ಮತ್ತು ದೇವತೆಗಳು, ಎಲ್ಲಾ ಜೀವಂತ ಮತ್ತು ನಿರ್ಜೀವ ವಸ್ತುಗಳು ಸೇರಿವೆ.

** ಚರಣ ಕನ್ಯಾ ಎಂಬುದು ಜಾವರ್‌ಚಂದ್ ಮೇಘಾನಿ ಅವರ ಅತ್ಯಂತ ಪ್ರಸಿದ್ಧ ಗುಜರಾತಿ ಕವಿತೆಯ ಶೀರ್ಷಿಕೆಯಾಗಿದೆ, ಗುಜರಾತಿನ ಚರಣ್ ಬುಡಕಟ್ಟಿನ 14 ವರ್ಷದ ಹುಡುಗಿ ತನ್ನ ಹಾಡಿಗೆ ಬಂದ ಸಿಂಹವನ್ನು ಕೋಲಿನಿಂದ ಬಡಿದು ಓಡಿಸಿದ ಶೌರ್ಯದ ಕತೆಯನ್ನು ಇದು ಹೇಳುತ್ತದೆ.

ಅನುವಾದ: ಶಂಕರ ಎನ್. ಕೆಂಚನೂರು

Pratishtha Pandya

Pratishtha Pandya is a Senior Editor at PARI where she leads PARI's creative writing section. She is also a member of the PARIBhasha team and translates and edits stories in Gujarati. Pratishtha is a published poet working in Gujarati and English.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru