ಬುಧಿರಾಮ್‌ ಚಿಂಡಾ ಅವರು ಭಯದಿಂದ ನಡುಗುತ್ತಿದ್ದರು. ಅವರು ತಿಂಗಳ ಬೆಳಕಿನಲ್ಲಿ ಕಾಣುತ್ತಿದ್ದ ಆ ಕಪ್ಪು ಆಕೃತಿಗಳಿಂದ ಕೆಲವೇ ಗಜಗಳ ಅಂತರದಲ್ಲಿ ನಿಂತಿದ್ದರು.  60 ವರ್ಷದ, ರೈತರಾದ ಭುಂಜಿಯಾ ಆದಿವಾಸಿ ಅರ್ಧ ತೆರೆದ ಬಾಗಿಲಿನ ಹಿಂದಿನಿಂದ ಇದೆಲ್ಲವನ್ನು ನೋಡುತ್ತಿದ್ದರು.

ಈ ದೊಡ್ಡ ಸಸ್ತನಿಗಳನ್ನು ಈ ಪ್ರದೇಶದಲ್ಲಿ ಕಾಣುವುದು ತೀರಾ ಅಪರೂಪ ದೃಶ್ಯವೇನಲ್ಲ. ಏಕೆಂದರೆ ಈ 52 ಮನೆಗಳಿಗೆ ನೆಲೆಯಾಗಿರುವ ಈ ಕುಗ್ರಾಮವು ಇರುವುದು ಸುನಾಬೇಡ ವನ್ಯಜೀವಿ ಅಭಯಾರಣ್ಯದ ಕೇಂದ್ರ ಮತ್ತು ಬಫರ್ ಪ್ರದೇಶಗಳಲ್ಲಿ.

ವಿಷಯ ಹೀಗಿದ್ದರೂ, “ಅವು ನನ್ನ ಕಚ್ಚಾ ಮನೆಯನ್ನು ಕೆಲವು ನಿಮಿಷಗಳಲ್ಲಿ ತುಳಿದು ನೆಲಸಮ ಮಾಡಿಬಿಡಬಹುದೆನ್ನುವ ಭಯ ನನ್ನನ್ನು ಕಾಡುತ್ತಿತ್ತು.” ನಂತರ ಅವರು ಹಿತ್ತಲಿಗೆ ಹೋಗಿ ತುಳಸಿ ಗಿಡದ ಬಳಿ ನಿಂತರು: “ನಾನು ಲಕ್ಷ್ಮಿ ದೇವರು ಮತ್ತು ಆ ದೊಡ್ಡ ಸಸ್ತನಿಗಳನ್ನು ಪ್ರಾರ್ಥಿಸಿದೆ. ಬಹುಶಃ ಆ ಗುಂಪು ಅಂದು ನನ್ನನ್ನು ನೋಡಿತ್ತು.”

ಬುಧುರಾಮ್‌ ಅವರ ಪತ್ನಿ ಸುಲಕ್ಷ್ಮಿ ಚಿಂಡಾ ಕೂಡಾ ಅಂದು ಆನೆಗಳ ಕೂಗಿನ ಸದ್ದನ್ನು ಕೇಳಿಸಿಕೊಂಡಿದ್ದರು. ಅಲ್ಲಿಂದ ಒಂದು ಕಿಲೋಮೀಟರ್‌ ದೂರದಲ್ಲಿರುವ ಊರಿನಲ್ಲಿನ ತಮ್ಮ ಮನೆಯಲ್ಲಿದ್ದರು. ಅಲ್ಲಿ ಅವರು ತಮ್ಮ ಗಂಡುಮಕ್ಕಳು ಮತ್ತು ಅವರ ಸಂಸಾರಗಳೊಡನೆ ವಾಸಿಸುತ್ತಾರೆ.

ಈ ಆನೆಗಳು ಸುಮಾರು ಒಂದು ಗಂಟೆಯ ನಂತರ ಅಲ್ಲಿಂದ ಹೊರಟವು.

ಅಂದಿನ, ಅಂದರೆ 2020ರ ಘಟನೆಯನ್ನು ನೆನಪಿಸಿಕೊಳ್ಳುವ ಈ ರೈತನ ಪ್ರಕಾರ ಅಂದು ಅವರಿಗೆ ಸಹಾಯ ಮಾಡಿದ್ದು ಅವರ ಪ್ರಾರ್ಥನೆ.

ಹೀಗೆ 2022ರಲ್ಲಿ ಆನೆಗಳು ತಮ್ಮ ದಾರಿಯನ್ನು ಬದಲಾಯಿಸಿದಾಗ ನಿಟ್ಟುಸಿರಿಟ್ಟವರು ಕೇವಲ ಬುಧುರಾಮ್‌ ಮಾತ್ರವಲ್ಲ. ಆ ಊರಿನ ಇತರ ರಥರು ಕೂಡಾ.

PHOTO • Ajit Panda
PHOTO • Ajit Panda

ಒಡಿಶಾದ ಸುನಾಬೆಡಾ ವನ್ಯಜೀವಿ ಅಭಯಾರಣ್ಯದ ಬಳಿಯ ಕಥಾಫರ್ ನಲ್ಲಿರುವ ಮನೆ, ಇಲ್ಲಿ ಬುಧುರಾಮ್ ಮತ್ತು ಸುಲಕ್ಷ್ಮಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ

ಬುಧುರಾಮ್‌ ಮತ್ತು ಸುಲಕ್ಮಿ ದಂಪತಿಗಳಿಗೆ ಒಟ್ಟು ಆರು ಮಕ್ಕಳಿದ್ದು ಅವರಲ್ಲಿ ಐದು ಗಂಡು ಮತ್ತು ಒಂದು ಹೆಣ್ಣು. ಇಡೀ ಕುಟುಂಬವು ತಮಗಿರುವ 10 ಎಕರೆ ಭೂಮಿಯ ಬೇಸಾಯದಲ್ಲಿ ತೊಡಗಿಸಿಕೊಂಡಿದೆ. ಇಬ್ಬರು ದೊಡ್ಡ ಗಂಡುಮಕ್ಕಳಿಗೆ ಮದುವೆಯಾಗಿದ್ದು ಅವರು ಕಥಾಫರ್‌ ಗ್ರಾಮದಲ್ಲಿ ತಮ್ಮ ಹೆಂಡತಿ ಮಕ್ಕಳೊಡನೆ ವಾಸಿಸುತ್ತಿದ್ದು; ಬುಧುರಾಮ್‌ ಮತ್ತು ಸುಲಕ್ಮಿ ಹತ್ತು ವರ್ಷಗಳ ಹಿಂದೆ ಹೊಲದ ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದಾರೆ.

ಅಲ್ಲಿಯೇ ಆನೆಗಳು ಆಹಾರ ಹುಡುಕುತ್ತಾ ಬಂದಿದ್ದು.

ಮರುದಿನ ಬೆಳಗ್ಗೆ ತನ್ನ ಹೊಲಗಳನ್ನು ನೋಡಲು ಹೋದ ಬುಧುರಾಮ್‌ ಅವರಿಗೆ ಆಘಾತ ಕಾದಿತ್ತು. ಸುಮಾರು ಅರ್ಧ ಎಕರೆಯಷ್ಟು ಬೆಳೆದು ನಿಂತಿದ್ದ ಭತ್ತದ ಬೆಳೆ ಆನೆಗಳ ತುಳಿತಕ್ಕೆ ನಾಶವಾಗಿತ್ತು. ಅವರು ಬೆಳೆ ಬೆಳೆದಿದ್ದ ಗದ್ದೆಯನ್ನು ಸ್ಥಳೀಯವಾಗಿ ಖಮುಂಡಾ ಎನ್ನುತ್ತಾರೆ. (ಋತುಮಾನಕ್ಕೆ ಅನುಗುಣವಾಗಿ ಹರಿಯುವ ನದಿಗೆ ದಂಡೆ ಕಟ್ಟಿ ಕೆತ್ತಿ ಬೆಳೆ ಬೆಳೆಯುವುದು.) ಅವರ ಪಾಲಿಗೆ ಈ ಗದ್ದೆಯು ಅವರ ಬಳಿಯಿದ್ದ ಗದ್ದೆಗಳಲ್ಲಿ ಪ್ರಮುಖವಾಗಿತ್ತು. ಈ ಗದ್ದೆಯು ವರ್ಷಕ್ಕೆ ಸರಿಸುಮಾರು 20 ಚೀಲ ಭತ್ತವನ್ನು (ಅಜಮಾಸು ಒಂದು ಟನ್) ನೀಡುತ್ತಿತ್ತು.‌ “ನನ್ನ ಐದು ತಿಂಗಳ ಶ್ರಮದ ಭತ್ತದ ಗದ್ದೆ ಹಾಳಾಗಿತ್ತು. ನಾನು ಯಾರಿಗೆ ದೂರು ನೀಡುವುದು?”

ಇಲ್ಲಿಯೇ ಅವರ ಕತೆಯ ತಿರುವು ಇರುವುದು. ಬುಧುರಾಮ್ ತನ್ನದು ಎಂದು ಹೇಳುವ ಮತ್ತು ಪತ್ನಿ ಸುಲಕ್ಷ್ಮಿಯೊಂದಿಗೆ ಸೇರಿ ಕೃಷಿ ಮಾಡುವ ಭೂಮಿ ಅವರ ಹೆಸರಿನಲ್ಲಿಲ್ಲ. 600 ಚದರ ಕಿಲೋಮೀಟರ್ ಅಭಯಾರಣ್ಯದ ಬಫರ್ ಮತ್ತು ಮುಖ್ಯ ಪ್ರದೇಶದಲ್ಲಿ ಭೂಮಿಯನ್ನು ಸಾಗುವಳಿ ಮಾಡುವ ಅವರು ಮತ್ತು ಅವರಂತಹ ಇತರ ಅನೇಕ ರೈತರು ತಮ್ಮ ಹೆಸರಿನಲ್ಲಿ ಭೂ ದಾಖಲೆಗಳನ್ನು ಹೊಂದಿಲ್ಲ ಮತ್ತು ಅದಕ್ಕೆ ಯಾವುದೇ ಬಾಡಿಗೆಯನ್ನು ಸಹ ಪಾವತಿಸುವುದಿಲ್ಲ. "ನಾನು ಕೃಷಿ ಮಾಡುವ ಹೆಚ್ಚಿನ ಭೂಮಿ ವನ್ಯಜೀವಿ ಇಲಾಖೆಗೆ ಸೇರಿದೆ. ನನಗೆ ಅರಣ್ಯ ಹಕ್ಕುಗಳ ಕಾಯ್ದೆ [ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಗುರುತಿಸುವಿಕೆ) ಹಕ್ಕುಗಳ ಕಾಯ್ದೆ ] ಪಟ್ಟಾ [ಅಧಿಕೃತ ಭೂ ಪತ್ರ] ಮಂಜೂರು ಮಾಡಿಲ್ಲ" ಎಂದು ಅವರು ನಮಗೆ ಅರಿವು ಮಾಡಿಕೊಟ್ಟರು.

ಬುಧುರಾಮ್ ಮತ್ತು ಸುಲಕ್ಷ್ಮಿ ಭುಂಜಿಯಾ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಊರಾದ ಕಥಾಫರಿನಲ್ಲಿ ಈ ಸಮುದಾಯದ 30 ಕುಟುಂಬಗಳಿವೆ (ಜನಗಣತಿ 2011). ಇಲ್ಲಿ ವಾಸಿಸುವ ಇತರ ಆದಿವಾಸಿ ಸಮುದಾಯಗಳೆಂದರೆ ಗೊಂಡ್ ಮತ್ತು ಪಹಾರಿಯಾ. ಒಡಿಶಾದ ನುವಾಪಾಡಾ ಜಿಲ್ಲೆಯ ಬೋಡೆನ್ ವಿಭಾಗದಲ್ಲಿರುವ ಅವರ ಊರು ಸುನಾಬೆಡಾ ಪ್ರಸ್ಥಭೂಮಿಯ ದಕ್ಷಿಣ ಅಂಚಿನಲ್ಲಿದೆ, ಇದು ನೆರೆಯ ಇದು ನೆರೆಯ ಛತ್ತೀಸಗಢ ರಾಜ್ಯಕ್ಕೆ ಹತ್ತಿರದಲ್ಲಿದೆ.

ಆನೆಗಳು ಈ ಮಾರ್ಗವಾಗಿ ಹಾದುಹೋಗುತ್ತವೆ.

PHOTO • Ajit Panda
PHOTO • Ajit Panda

ಎಡ: ತನ್ನ ಹೊಲದ ಪಕ್ಕದ ಮನೆಯಲ್ಲಿ ಬುಧುರಾಮ್ ಮತ್ತು ಅವರ ಪತ್ನಿ ಸುಲಕ್ಷ್ಮಿ (ಬಲ)

ಪರಿಸರ ಮತ್ತು ಅರಣ್ಯ ಸಚಿವಾಲಯದ 2008-2009ರ ವಾರ್ಷಿಕ ವರದಿಯಲ್ಲಿ, ಸುನಾಬೆಡಾವನ್ನು ನಾಲ್ಕು ಹೊಸ ಹುಲಿ ಮೀಸಲುಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಹುಲಿಯನ್ನು ಹೊರತುಪಡಿಸಿ, ಇದು ಚಿರತೆಗಳು, ಆನೆಗಳು, ಕರಡಿ, ಭಾರತೀಯ ತೋಳ, ಹಂದಿಗಳು, ಗೌರ್ ಮತ್ತು ಕಾಡು ನಾಯಿಗಳನ್ನು ಹೊಂದಿದೆ.

ವನ್ಯಜೀವಿ ಇಲಾಖೆಯ ಅಧಿಕಾರಿಗಳು ಕಥಾಫರ್ ಸೇರಿದಂತೆ ಸುನಬೆಡಾ ಮತ್ತು ಪಟ್ಧಾರ ಪ್ರಸ್ಥಭೂಮಿ ಪ್ರದೇಶಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಲವಾರು ಅನೌಪಚಾರಿಕ ಸಭೆಗಳನ್ನು ನಡೆಸಿ, ಪ್ರಮುಖ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರನ್ನು ಸ್ಥಳಾಂತರಿಸಲು ಮನವೊಲಿಸಲು ಪ್ರಯತ್ನಿಸಿದರು. 2022ರಲ್ಲಿ, ಧೆಕುನ್ಪಾನಿ ಮತ್ತು ಗತಿಬೆಡಾ ಎಂಬ ಎರಡು ಗ್ರಾಮಗಳ ಜನರು ಸ್ಥಳಾಂತರಕ್ಕೆ ಒಪ್ಪಿಕೊಂಡರು.

ಹೀಗೆ ಒಕ್ಕಲು ತೆರವುಗೊಳಿಸಲು ಒಪ್ಪದವರು ಈಗ ಆನೆಗಳ ದಾಳಿಯನ್ನು ಸಹಿಸಿಕೊಳ್ಳಬೇಕಾಗಿದೆ.

ಒಡಿಶಾದಲ್ಲಿ 1976 ಆನೆಗಳಿವೆ ಎಂದು 2016-17ರ ವನ್ಯಜೀವಿ ಗಣತಿ ಹೇಳುತ್ತದೆ. ಸುಮಾರು 34 ಪ್ರತಿಶತದಷ್ಟು ಅರಣ್ಯ ಪ್ರದೇಶವು ಅವುಗಳ ಪಾಲಿಗೆ ರಸಭರಿತ ಆಕರ್ಷಣೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಸುನಾಬೆಡಾ ಅಭಯಾರಣ್ಯದಲ್ಲಿರುವ ಬಿದಿರು ಗಮನಾರ್ಹವಾಗಿ ಲಭ್ಯವಿದೆ ಎಂದು ಮಾಯಾಧರ್ ಸರಾಫ್ ಹೇಳುತ್ತಾರೆ: "ಅವು ಬಿದಿರು ಹೇರಳವಾಗಿರುವ ಸುನಾಬೆಡಾ-ಪಟ್ದಾರ್ಹ ಪ್ರಸ್ಥಭೂಮಿಯಲ್ಲಿ ಹಾದುಹೋಗುತ್ತವೆ." ಮಾಜಿ ವನ್ಯಜೀವಿ ವಾರ್ಡನ್ ಆಗಿರುವ ಅವರು ಹೇಳುತ್ತಾರೆ, "ಅವು ನುವಾಪಾಡಾವನ್ನು ಪ್ರವೇಶಿಸಿ ಅಲ್ಲಿಂದ ಪಶ್ಚಿಮಕ್ಕೆ ಛತ್ತೀಸ್ಗಢಕ್ಕೆ ನಿರ್ಗಮಿಸುವ ಮೊದಲು ಜಿಲ್ಲೆಯೊಳಗೆ ಸುಮಾರು 150 ಕಿ.ಮೀ ಕ್ರಮಿಸುತ್ತವೆ."

ಒಮ್ಮೆ ಮೇವು ತಿಂದ ಒಂದು ತಿಂಗಳ ನಂತರ ಅವು ಬಲಂಗೀರ್‌ಗೆ ಹೆಚ್ಚು ಕಡಿಮೆ ಅದೇ ದಾರಿಯಲ್ಲಿ ಮರಳುತ್ತವೆ.

ವರ್ಷದಲ್ಲಿ ಎರಡು ಬಾರಿ ನಡೆಯುವ ಈ ಪ್ರಯಾಣದ ಹಾದಿಯಲ್ಲಿ ಗೊಂಡ್ ಮತ್ತು ಪಹಾರಿಯಾ ಆದಿವಾಸಿ ರೈತರ ಹೊಲಗಳಿವೆ. ಇಲ್ಲಿನ ಸುನಾಬೆಡಾ ಅಭಯಾರಣ್ಯದ ಒಳಗೆ ಮತ್ತು ಪಕ್ಕದ ಸಣ್ಣ ಭಾಗಗಳಲ್ಲಿ ಈ ರೈತರು ಮಳೆಯಾಧಾರಿತ ಕೃಷಿಯನ್ನು ಮಾಡುತ್ತಾರೆ. ಒಡಿಶಾದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಆದಿವಾಸಿ ಕುಟುಂಬಗಳಲ್ಲಿ, ಶೇಕಡಾ 14.5ರಷ್ಟು ಭೂರಹಿತರು ಮತ್ತು ಶೇಕಡಾ 69.7ರಷ್ಟು ಜನರು ಅಂಚಿನಲ್ಲಿರುವವರು ಎಂದು ಆದಿವಾಸಿ ಜೀವನೋಪಾಯದ ಪರಿಸ್ಥಿತಿ ವರದಿ 2021 ಹೇಳುತ್ತದೆ.

PHOTO • Ajit Panda
PHOTO • Ajit Panda

ಬುಧುರಾಮ್ ಮತ್ತು ಸುಲಕ್ಷ್ಮಿ ತಮ್ಮ ಮನೆಯ ಮುಂದೆ (ಎಡ) ತರಕಾರಿಗಳನ್ನು ಮತ್ತು ಹಿತ್ತಲಿನಲ್ಲಿ (ಬಲ) ಬಾಳೆ ಬೆಳೆಯನ್ನು ಬೆಳೆಯುತ್ತಾರೆ

ಕೋಮ್ನಾ ಶ್ರೇಣಿಯ ಉಪ ರೇಂಜರ್ ಆಗಿರುವ ಸಿಬಾ ಪ್ರಸಾದ್ ಖಮರಿ ಹೇಳುವಂತೆ, ಆನೆಗಳು ವರ್ಷಕ್ಕೆ ಎರಡು ಬಾರಿ ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ - ಒಮ್ಮೆ ಮೊದಲ ಮಾನ್ಸೂನ್ ಮಳೆಯ ಸಮಯದಲ್ಲಿ [ಜುಲೈ] ಮತ್ತು ಮತ್ತೆ ಡಿಸೆಂಬರ್‌ ತಿಂಗಳಿನಲ್ಲಿ. ಅವರು ಈ ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಾರೆ ಮತ್ತು ಅವುಗಳ ಉಪಸ್ಥಿತಿಯ ಬಗ್ಗೆ ಬಹಳಷ್ಟು ಜ್ಞಾನವನ್ನು ಹೊಂದಿದ್ದಾರೆ. ದಾರಿಯಲ್ಲಿ, ಈ ಪ್ರಾಣಿಗಳು ವಿವಿಧ ಜಾತಿಯ ಹುಲ್ಲು ಮತ್ತು ಕೃಷಿ ಬೆಳೆಗಳನ್ನು, ಮುಖ್ಯವಾಗಿ ಖಾರಿಫ್ ಭತ್ತದ ಬೆಳೆಯನ್ನು ಮೇಯುತ್ತವೆ ಎಂದು ಅವರು ಹೇಳುತ್ತಾರೆ. "ಆನೆಗಳು ಪ್ರತಿವರ್ಷ ವಿವಿಧ ಹಳ್ಳಿಗಳಲ್ಲಿ ಬೆಳೆಗಳು ಮತ್ತು ಮನೆಗಳನ್ನು ನಾಶಪಡಿಸುತ್ತವೆ" ಎಂದು ಅವರು ಡಿಸೆಂಬರ್ 2020 ರ ಘಟನೆಗಳನ್ನು ಉಲ್ಲೇಖಿಸಿ ಹೇಳಿದರು.

ಹೀಗಾಗಿ ಬುಧುರಾಮ್‌ ಅವರ ಬೆಳೆದು ನಿಂತಿದ್ದ ಬೆಳೆ ನಷ್ಟ ತೀರಾ ಅನಿರೀಕ್ಷಿತವೇನಲ್ಲ.

ಯಾವುದೇ ಕಾಡು ಪ್ರಾಣಿಗಳ ಕಾರಣದಿಂದ ರೈತರು ಬೆಳೆ ಹಾನಿ ಅನುಭವಿಸಿದಲ್ಲಿ ಅವರು ವಾಣಿಜ್ಯ ಬೆಳೆಗಳಿಗೆ ಎಕರೆಗೆ 12,000 ರೂ., ಭತ್ತ ಮತ್ತು ಏಕದಳ ಧಾನ್ಯಗಳಿಗೆ 10,000 ರೂ.ಗೆ ಅರ್ಹರಾಗಿರುತ್ತಾರೆ ಎಂದು ಪಿಸಿಸಿಎಫ್ (ವನ್ಯಜೀವಿ) ಮತ್ತು ಒಡಿಶಾದ ಮುಖ್ಯ ವನ್ಯಜೀವಿ ವಾರ್ಡನ್ ಅವರ ಅಧಿಕೃತ ವೆಬ್ಸೈಟ್ ಹೇಳುತ್ತದೆ. ಇದು ವನ್ಯಜೀವಿ (ಸಂರಕ್ಷಣೆ) (ಒಡಿಶಾ) ನಿಯಮಗಳು 1974 ಅನ್ನು ಉಲ್ಲೇಖಿಸುತ್ತದೆ.

ಆದರೆ ಭೂ ಮಾಲೀಕತ್ವದ ಯಾವುದೇ ದಾಖಲೆಗಳಿಲ್ಲದೆ, ಬುಧುರಾಮ್ ಈ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ.

“ಈ ಭೂಮಿ ನನಗೆ ನನ್ನ ಪೂರ್ವಜರಿಂದ ಅನುವಂಶಿಕವಾಗಿ ದೊರಕಿದೆ. ಆದರೆ 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಯ ಕಾನೂನಿನ ಪ್ರಕಾರ, ಎಲ್ಲವೂ ಸರ್ಕಾರಕ್ಕೆ ಸೇರಿದೆ" ಎಂದು ಬುಧುರಾಮ್ ಹೇಳುತ್ತಾರೆ. "ವನ್ಯಜೀವಿ ಇಲಾಖೆ ನಮ್ಮ ಚಲನವಲನಗಳ ಮೇಲೆ ಮತ್ತು ನಮ್ಮ ಭೂಮಿ ಮತ್ತು ಕೃಷಿಯನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ" ಎಂದು ಅವರು ಹೇಳಿದರು.

ಇಲ್ಲಿ ಅವರು ಉಲ್ಲೇಖಿಸುತ್ತಿರುವುದು ಕಾಡಿನಲ್ಲಿ ವಾಸಿಸುವ ಜನರ ಪಾಲಿಗೆ ಸ್ಥಿರವಾದ ಆದಾಯದ ಮೂಲವಾಗಿರುವ ಕೆಂಡು ಎಲೆಗಳ ಸಂಗ್ರಹದ ಕುರಿತು. "ಸಣ್ಣ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು, ಬಳಸಲು ಮತ್ತು ವಿಲೇವಾರಿ ಮಾಡಲು ಮಾಲೀಕತ್ವದ ಹಕ್ಕು, ಪ್ರವೇಶವನ್ನು" ಅರಣ್ಯ ಹಕ್ಕುಗಳ ಕಾಯ್ದೆ (ಎಫ್ಆರ್‌ಎ), 2006ರ ಅಡಿಯಲ್ಲಿ ಅನುಮತಿಸಲಾಗಿದೆ. ಆದಾಗ್ಯೂ, ಈ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಈ ಅರಣ್ಯವಾಸಿ ಹೇಳುತ್ತಾರೆ.

ಮಹುವಾ ಹೂವುಗಳು ಮತ್ತು ಹಣ್ಣುಗಳು, ಚಾರ್, ಹರಿದಾ ಮತ್ತು ಆನ್ಲಾ ಮುಂತಾದ ಅರಣ್ಯ ಉತ್ಪನ್ನಗಳು ಅವರ ಊರಿನಿಂದ 22 ಕಿ.ಮೀ ದೂರದಲ್ಲಿರುವ ಬೊಡೆನ್‌ನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆಯುತ್ತವೆ. ಸಾರಿಗೆ ಸೌಲಭ್ಯಗಳ ಕೊರತೆಯ ಕಾರಣ ಬುಧುರಾಮ್‌ ಅವರಿಗೆ ಪ್ರತಿಬಾರಿಯೂ ಮಾರುಕಟ್ಟೆಗೆ ಹೋಗಲು ಸಾಧ್ಯವಾಗುವುದಿಲ್ಲ. ಇದರ ಲಾಭವನ್ನು ಪಡೆಯುವ ವ್ಯಾಪಾರಿಗಳು ಗ್ರಾಮಸ್ಥರಿಗೆ ಮುಂಗಡ ಕೊಟ್ಟು ಅವರು ಉತ್ಪನ್ನಗಳನ್ನು ತಮಗೆ ನೀಡುವಂತೆ ಮಾಡುತ್ತಾರೆ. ಆದರೆ ಈ ಮೊತ್ತವು ಸ್ವತಃ ಹೋಗಿ ಮಾರುಕಟ್ಟೆಯಲ್ಲಿ ಹೋಗಿ ಮಾರಿದರೆ ಸಿಗುವುದಕ್ಕಿಂತಲೂ ಕಡಿಮೆ. “ಆದರೆ ಬೇರೆ ದಾರಿಯಿಲ್ಲ” ಎಂದು ಅವರು ಹೇಳುತ್ತಾರೆ.

*****

PHOTO • Ajit Panda
PHOTO • Ajit Panda

ಎಡಭಾಗ: ಕಳ್ಳ ಕೋಳಿಗಳಿಂದ ರಕ್ಷಿಸಲು ಸೊಳ್ಳೆ ಪರದೆಯಿಂದ ಮುಚ್ಚಲ್ಪಟ್ಟ ಮೆಣಸಿನಕಾಯಿ ಸಸಿಗಳು. ಬಲ: ಬುಧುರಾಮ್ ಮತ್ತು ಅವರ ಕುಟುಂಬವು 50 ದನಗಳು ಮತ್ತು ಕೆಲವು ಆಡುಗಳನ್ನು ಹೊಂದಿದೆ

ಬುಧುರಾಮ್ ಮತ್ತು ಸುಲಕ್ಷ್ಮಿ ತಮ್ಮ ತೋಟದ ಮನೆಯ ಮುಂಭಾಗದ ಆಟ್ (ಮೇಲು ಭೂಮಿ) ಯಲ್ಲಿ ಮೆಕ್ಕೆಜೋಳ, ಬದನೆಕಾಯಿ, ಮೆಣಸಿನಕಾಯಿ, ಅಲ್ಪಾವಧಿಯ ಭತ್ತ ಮತ್ತು ದ್ವಿದಳ ಧಾನ್ಯಗಳಾದ ಕುಲೋತ್ (ಹುರುಳಿಕಾಳು) ಮತ್ತು ಅರ್ಹರ್ ಗಳನ್ನು ಬೆಳೆಯುತ್ತಾರೆ. ಮಧ್ಯ ಮತ್ತು ತಗ್ಗು ಪ್ರದೇಶಗಳಲ್ಲಿ (ಸ್ಥಳೀಯವಾಗಿ ಬಹಲ್ ಎಂದು ಕರೆಯಲಾಗುತ್ತದೆ), ಅವರು ಮಧ್ಯಮ ಮತ್ತು ದೀರ್ಘಾವಧಿಯ ಭತ್ತದ ತಳಿಗಳನ್ನು ಬೆಳೆಯುತ್ತಾರೆ.

ಖಾರಿಫ್ ಋತುವಿನಲ್ಲಿ, ಸುಲಕ್ಷ್ಮಿ ಪಟದರ್ಹಾ ಅರಣ್ಯ ಪ್ರದೇಶದ ಬಳಿಯ ತಮ್ಮ ಹೊಲಗಳಲ್ಲಿ ಕೆಲಸ ಮಾಡುತ್ತಾರೆ - ಕಳೆ ಕೀಳುವುದು, ಸಸ್ಯಗಳನ್ನು ನೋಡಿಕೊಳ್ಳುವುದು, ಹಸಿರು ಎಲೆಗಳು ಮತ್ತು ಗೆಡ್ಡೆಗಳನ್ನು ಸಂಗ್ರಹಿಸುವುದು. "ಮೂರು ವರ್ಷಗಳ ಹಿಂದೆ ನನ್ನ ಹಿರಿಯ ಮಗ ಮದುವೆಯಾದಾಗಿನಿಂದ ನಾನು ಅಡುಗೆ ಮಾಡುವ ಕೆಲಸದಿಂದ ಮುಕ್ತಳಾಗಿದ್ದೇನೆ. ಈಗ ನನ್ನ ಸೊಸೆಯೇ ಅದರ ಜವಬ್ದಾರಿ ಹೊತ್ತಿದ್ದಾಳೆ" ಎಂದು ಅವರು ಹೇಳಿದರು.

ಕುಟುಂಬವು ಮೂರು ಜೋಡಿ ಎತ್ತುಗಳು ಮತ್ತು ಒಂದು ಜೋಡಿ ಎಮ್ಮೆಗಳು ಸೇರಿದಂತೆ ಸುಮಾರು 50 ಜಾನುವಾರುಗಳನ್ನು ಹೊಂದಿದೆ. ಎತ್ತುಗಳು ಭೂಮಿಯನ್ನು ಉಳುಮೆ ಮಾಡಲು ಸಹಾಯ ಮಾಡುತ್ತವೆ - ಕುಟುಂಬವು ಯಾಂತ್ರಿಕ ಕೃಷಿ ಉಪಕರಣಗಳನ್ನು ಹೊಂದಿಲ್ಲ.

ಹಸುಗಳಿಗೆ ಹಾಲು ಕರೆಯುವುದು ಮತ್ತು ಮೇಕೆ ಮತ್ತು ಕುರಿಗಳನ್ನು ಮೇಯಿಸಲು ಕರೆದೊಯ್ಯುವುದು ಬುಧುರಾಮ್ ಅವರ ಕೆಲಸ. ಅವರು ತಮ್ಮ ಸ್ವಂತ ಬಳಕೆಗಾಗಿ ಕೆಲವು ಆಡುಗಳನ್ನು ಸಹ ಸಾಕುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕುಟುಂಬವು ಕಾಡು ಪ್ರಾಣಿಗಳಿಂದಾಗಿ ಒಂಬತ್ತು ಆಡುಗಳನ್ನು ಕಳೆದುಕೊಂಡಿದ್ದರೂ, ಮೇಕೆ ಸಾಕಾಣಿಕೆಯನ್ನು ಬಿಡಲು ಬಯಸುವುದಿಲ್ಲ.

ಕಳೆದ ಖಾರಿಫ್ ಋತುವಿನಲ್ಲಿ, ಬುಧುರಾಮ್ ಐದು ಎಕರೆ ಭೂಮಿಯಲ್ಲಿ ಭತ್ತವನ್ನು ಬೆಳೆದರು. ಅವರು ಪ್ರಯತ್ನಿಸಿದ ಇತರ ಬೆಳೆಗಳೆಂದರೆ ಬೀನ್ಸ್, ಹೆಸರು ಕಾಳು, ಬಿರಿ (ಉದ್ದು), ಕುಲೋತ್ (ಹುರುಳಿ ಕಾಳು), ನೆಲಗಡಲೆ, ಮೆಣಸಿನಕಾಯಿ, ಮೆಕ್ಕೆಜೋಳ ಮತ್ತು ಬಾಳೆ. "ಕಳೆದ ವರ್ಷ ತೀವ್ರ ಚಳಿಯಿಂದಾಗಿ ಬೆಳೆ ವಿಫಲವಾದ ಕಾರಣ ನನಗೆ ಹೆಸರು ಬೆಳೆಯಿಂದ ಒಂದೇ ಒಂದು ಕಾಳೂ ಸಿಗಲಿಲ್ಲ, ಆದರೆ ಅದನ್ನು ಇತರ ದ್ವಿದಳ ಧಾನ್ಯಗಳು ಸರಿದೂಗಿಸಿದವು" ಎಂದು ಅವರು ಹೇಳಿದರು.

"ಸುಮಾರು ಎರಡು ಟನ್ ಭತ್ತ ಮತ್ತು ಸಾಕಷ್ಟು ಬೇಳೆಕಾಳುಗಳು, ರಾಗಿ, ತರಕಾರಿಗಳು ಮತ್ತು ಎಣ್ಣೆಕಾಳುಗಳನ್ನು ಸ್ವಯಂ ಬಳಕೆಗೆ ಬೇಕಾಗುತ್ತದೆ" ಎಂದು ಸುಲಕ್ಷ್ಮಿ ಹೇಳುತ್ತಾರೆ. ದಂಪತಿಗಳು ತಾವು ಯಾವುದೇ ರಾಸಾಯನಿಕ ಗೊಬ್ಬರಗಳು ಅಥವಾ ಕೀಟನಾಶಕಗಳನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ; ದನದ ಸಗಣಿ ಮತ್ತು ಮೂತ್ರ ಮತ್ತು ಬೆಳೆ ಅವಶೇಷಗಳು ಸಾಕು. "ನಮಗೆ ಸಮಸ್ಯೆಗಳಿವೆ ಅಥವಾ ಆಹಾರದ ಕೊರತೆಯಿದೆ ಎಂದು ನಾವು ಹೇಳಿದರೆ, ಅದು ಭೂಮಿಯನ್ನು ದೂಷಿಸಿದಂತೆ" ಎಂದು ಬುಧುರಾಮ್ ಹೇಳಿದರು.  "ನೀವು ಭೂಮಿಯ ಒಂದು ಭಾಗವಾಗದೆ ಭೂಮಾತೆ ಹೇಗೆ ಆಹಾರ ಒದಗಿಸುತ್ತಾಳೆ?" ಎಂದು ಸುಲಕ್ಷ್ಮಿ ಕೇಳುತ್ತಾರೆ.

ನಾಟಿ, ಕಳೆ ತೆಗೆಯುವುದು ಮತ್ತು ಕೊಯ್ಲು ಮಾಡುವ ಬಿಡುವಿಲ್ಲದ ಕೆಲಸಗಳ ಸಮಯದಲ್ಲಿ, ಇಡೀ ಕುಟುಂಬವು ಕೆಲಸ ಮಾಡುತ್ತದೆ, ಮತ್ತು ಅವರು ಇತರರ ಭೂಮಿಯಲ್ಲಿಯೂ ಕೆಲಸ ಮಾಡುತ್ತಾರೆ; ಹೆಚ್ಚಿನ ಪಾವತಿಗಳನ್ನು ಭತ್ತದ ಮುಖೇನ ಮಾಡಲಾಗುತ್ತದೆ.

PHOTO • Ajit Panda

2020ರಲ್ಲಿ ಆನೆಗಳಿಂದ ನಾಶವಾದ ಭತ್ತದ ಗದ್ದೆಗಳು. ಮುಂದಿನ ವರ್ಷ, 2021ರಲ್ಲಿ, ಭತ್ತವು ಯಾವುದೇ ಬಿತ್ತನೆಯಿಲ್ಲದೆ ಬೆಳೆಯಿತು. 'ಆನೆಗಳ ತುಳಿಯುವಿಕೆಯಿಂದಾಗಿ ಬೀಜಗಳು ನೆಲಕ್ಕೆ ಬಿದ್ದಿರುವುದನ್ನು ನಾನು ನೋಡಿದ್ದೆ. ಅವು ಮೊಳಕೆಯೊಡೆಯುತ್ತವೆ ಎಂದು ನನಗೆ ಖಾತರಿಯಿತ್ತು' ಬುಧುರಾಮ್ ಹೇಳುತ್ತಾರೆ

2020ರಲ್ಲಿ ಆನೆಗಳಿಂದ ನಾಶವಾದ ಭತ್ತದ ಗದ್ದೆಗಳು. ಮುಂದಿನ ವರ್ಷ, 2021ರಲ್ಲಿ, ಭತ್ತವು ಯಾವುದೇ ಬಿತ್ತನೆಯಿಲ್ಲದೆ ಬೆಳೆಯಿತು. 'ಆನೆಗಳ ತುಳಿಯುವಿಕೆಯಿಂದಾಗಿ ಬೀಜಗಳು ನೆಲಕ್ಕೆ ಬಿದ್ದಿರುವುದನ್ನು ನಾನು ನೋಡಿದ್ದೆ. ಅವು ಮೊಳಕೆಯೊಡೆಯುತ್ತವೆ ಎಂದು ನನಗೆ ಖಾತರಿಯಿತ್ತು, 'ಬುಧುರಾಮ್ ಹೇಳುತ್ತಾರೆ. "ಮುಂಗಾರಿನ ಮೊದಲ ಮಳೆಗೆ ಬೀಜಗಳು ಮೊಳಕೆಯೊಡೆದವು, ಮತ್ತು ನಾನು ಅವುಗಳನ್ನು ನೋಡಿಕೊಂಡೆ. ಯಾವುದೇ [ವಿತ್ತೀಯ] ಹೂಡಿಕೆಯಿಲ್ಲದೆ ನನಗೆ 20 ಚೀಲಗಳಷ್ಟು [ಒಂದು ಟನ್] ಭತ್ತ ಸಿಕ್ಕಿತು."

“ನಮ್ಮ ಬದುಕು ಹೇಗೆ ಪ್ರಕೃತಿಯೊಂದಿಗೆ ಬೇರ್ಪಡಿಸಲಾಗದಂತೆ ಬೆಸೆದುಕೊಂಡಿದೆ ಎನ್ನುವುದನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತಿಲ್ಲ” ಎನ್ನುವುದು ಈ ಆದಿವಾಸಿ ರೈತನ ಅಭಿಮತ. ಈ ಮಣ್ಣು, ನೀರು ಮತ್ತು ಮರಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಕೀಟಗಳು - ಅವು ಅಸ್ತಿತ್ವದಲ್ಲಿರಲು ಪರಸ್ಪರ ಸಹಾಯ ಮಾಡುತ್ತವೆ."

*****

ಆನೆಗಳ ಚಲನೆಯು ಈ ಪ್ರದೇಶದಲ್ಲಿ ಮತ್ತೊಂದು ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಆನೆಗಳು ತೆರೆದ ವಿದ್ಯುತ್‌ ತಂತಿಗಳನ್ನು ಕೆಳಗೆ ಎಳೆದು ಹಾಕುತ್ತವೆ. ಇದರಿಂದಾಗಿ ಮತ್ತು ಜಿಲ್ಲೆಯ ಕೊಮ್ನಾ ಮತ್ತು ಬೋಡೆನ್ ವಿಭಾಗಗಳಲ್ಲಿನ ಗ್ರಾಮಗಳು ದುರಸ್ತಿಯಾಗುವವರೆಗೆ ವಿದ್ಯುತ್ ಇಲ್ಲದೆ ಒದ್ದಾಡಬೇಕಾಗುತ್ತದೆ.

2021ರಲ್ಲಿ, 30 ಆನೆಗಳ ಹಿಂಡು ಒಡಿಶಾದ ಗಂಧಮರ್ದನ್ ಅರಣ್ಯ ವಲಯದಿಂದ ಸೀತಾನದಿ ಅಭಯಾರಣ್ಯದ ಮೂಲಕ ನೆರೆಯ ಛತ್ತೀಸಗಢಕ್ಕೆ ಹೋಗಿತ್ತು. ಅರಣ್ಯ ಇಲಾಖೆಯು ಮ್ಯಾಪ್ ಮಾಡಿದಂತೆ ಈಶಾನ್ಯಕ್ಕೆ ಹೋಗುವ ಅವುಗಳ ಮಾರ್ಗವು ಬೋಲಾಂಗೀರ್ ಜಿಲ್ಲೆಯ ಮೂಲಕ ನುವಾಪಾಡಾ ಜಿಲ್ಲೆಯ ಖೋಲಿ ಗ್ರಾಮದ ಕಡೆಗೆ ಹೋಗುತ್ತಿತ್ತು. ಅವುಗಳಲ್ಲಿ ಎರಡು ಆನೆಗಳು ಡಿಸೆಂಬರ್ 2022ರಲ್ಲಿ ಅದೇ ಮಾರ್ಗದಲ್ಲಿ ಮರಳಿದವು.

ತಮ್ಮ ವಾರ್ಷಿಕ ಪ್ರಯಾಣದಲ್ಲಿ ಸುನಾಬೆಡಾ ಪಂಚಾಯತಿಗೆ ಸೇರಿದ 30 ಹಳ್ಳಿಗಳ ಮೂಲಕ ಪ್ರಯಾಣಿಸುವ ಬದಲು, ನೇರವಾಗಿ ಸುನಾಬೆಡಾ ವನ್ಯಜೀವಿ ಅಭಯಾರಣ್ಯವನ್ನು ಪ್ರವೇಶಿಸಿ ಅದೇ ದಾರಿಯಲ್ಲಿ ಹೊರಟವು.

ಇದರಿಂದ ಜನರು ನಿರಾಳರಾಗಿ ಉಸಿರು ಬಿಟ್ಟರು.

ಅನುವಾದ: ಶಂಕರ. ಎನ್. ಕೆಂಚನೂರು

Ajit Panda

Ajit Panda is based in Khariar town, Odisha. He is the Nuapada district correspondent of the Bhubaneswar edition of 'The Pioneer’. He writes for various publications on sustainable agriculture, land and forest rights of Adivasis, folk songs and festivals.

Other stories by Ajit Panda
Editor : Sarbajaya Bhattacharya

Sarbajaya Bhattacharya is a Senior Assistant Editor at PARI. She is an experienced Bangla translator. Based in Kolkata, she is interested in the history of the city and travel literature.

Other stories by Sarbajaya Bhattacharya
Editor : Priti David

Priti David is the Executive Editor of PARI. She writes on forests, Adivasis and livelihoods. Priti also leads the Education section of PARI and works with schools and colleges to bring rural issues into the classroom and curriculum.

Other stories by Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru