ನಮ್ಮ ಕಣ್ಣುಗಳೇನೂ ಮೋಸ ಹೋಗಿರಲಿಲ್ಲ. ನಿಜಕ್ಕೂ ಅಲ್ಲಿ ಆನೆಯೊಂದು ನಿಂತಿತ್ತು. ಆ ಆನೆಯ ಮೇಲೊಬ್ಬ ಕುಳಿತಂತೆಯೂ ನಮಗೆ ಕಾಣುತ್ತಿತ್ತು. ಸುರ್ಗುಜ-ಪಲಮು ಗಡಿಭಾಗದ ನಿರ್ಜನ ಪ್ರದೇಶವನ್ನು ನಾವು ದಾಟುತ್ತಿರುವಂತೆಯೇ ಈ ಆನೆ ಮತ್ತು ಮನುಷ್ಯನಂತೆ ಕಾಣುವ ಆಕೃತಿಯೊಂದು ನಮ್ಮ ಕಣ್ಣಿಗೆ ಬಿದ್ದಿದ್ದವು. ಮೊದಲು ಕಣ್ಕಟ್ಟೇನೋ ಎಂದೆನಿಸಿ ನಾವುಗಳು ಪರಸ್ಪರರ ಮುಖವನ್ನು ಗೊಂದಲದಲ್ಲಿ ನೋಡಿದ್ದರೂ ಕೂಡ ಹಾಗೇನೂ ಇರಲಿಲ್ಲ. ಆನೆಯೂ ಇತ್ತು. ಮನುಷ್ಯನೂ ಇದ್ದಂತಿತ್ತು. ಇನ್ನು ನಾವು ಮೂವರೂ ಆ ದೃಶ್ಯವನ್ನು ತದೇಕಚಿತ್ತದಿಂದ ನೋಡುತ್ತಿದ್ದರೂ ಹತ್ತಿರಕ್ಕೆ ಹೋಗಿ ಅದೇನೆಂದು ತಿಳಿದುಕೊಳ್ಳುವ ಪ್ರಯತ್ನವನ್ನಂತೂ ಯಾವೊಬ್ಬನೂ ಮಾಡಿರಲಿಲ್ಲ. ವಿಚಿತ್ರವೆಂದರೆ ಆ ಅವಸರವೂ ನಮ್ಮಲ್ಲಿದ್ದಂತೆ ಕಾಣಬರಲಿಲ್ಲ.
ನಮ್ಮ ಈ ಆಲಸ್ಯಭರಿತ ಕುತೂಹಲದಿಂದಾಗಿ ರೇಗಿದವನೆಂದರೆ ನಮ್ಮ ತಂಡದ ಸದಸ್ಯನಾಗಿದ್ದ ದಲೀಪ್ ಕುಮಾರ್. ದಲೀಪ್ ನನ್ನನ್ನು ಭೇಟಿ ಮಾಡಲು ಝಾರ್ಖಂಡ್ ರಾಜ್ಯದ ಚಂಡ್ವಾದಿಂದ ಬಂದಿದ್ದ. ನಮ್ಮ ನಡೆಗಳು ಅವನಿಗೆ ಮೂರ್ಖತನದಂತೆ ಕಂಡವೋ ಏನೋ. ``ಪಟ್ನಾದಲ್ಲೋ, ರಾಂಚಿಯಲ್ಲೋ ಅಥವಾ ಇನ್ಯಾವುದೋ ಶಹರದಲ್ಲಿ ಇಂಥದ್ದೊಂದು ದೃಶ್ಯವನ್ನು ನಾವು ನೋಡಿದ್ದರೆ ಕಂಡೂ ಕಾಣದಂತೆ ನಡೆದು ಹೋಗುತ್ತಿದ್ದೆವು. ಅದರಲ್ಲೂ ಇದು ಅರಣ್ಯ ಪ್ರದೇಶ. ಆನೆಗಳು ಇರುವುದೇ ಇಂಥಾ ಜಾಗಗಳಲ್ಲಿ. ನಾವುಗಳು ಪೆದ್ದರಂತೆ ಬಾಯಿಬಿಟ್ಟುಕೊಂಡು ಏಕೆ ನೋಡುತ್ತಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ'', ಎಂದು ಅಸಮಾಧಾನದಿಂದ ಗೊಣಗಿದ್ದ ದಲೀಪ್.
ಅಸಲಿಗೆ ಮಬ್ಬಾಗಿ ಕಾಣುತ್ತಿದ್ದ
ಆ ಆನೆ ಮತ್ತು ಮಾನವಾಕೃತಿಯೊಂದನ್ನು ನಾವು ಪೆದ್ದರಂತೆ ನೋಡುವುದಕ್ಕೆ ಕಾರಣಗಳೂ ಇದ್ದವು ಅನ್ನಿ.
ನಾವು ನಡೆದಾಡುತ್ತಿದ್ದ ಪ್ರದೇಶವು ಕಾಡಿನಂತಿತ್ತು ಎನ್ನುವುದರಲ್ಲಿ ಸಂಶಯವೇನಿಲ್ಲ. ದಲೀಪನ ಮಾತು
ಒಪ್ಪಿಕೊಳ್ಳುವಂಥದ್ದೇ. ಆದರೆ ಅದು ದಟ್ಟ ಕಾನನವೇನೂ ಆಗಿರಲಿಲ್ಲ. ಅಂಥಾ ಕಾಡುಗಳು ಆ ಭಾಗದಲ್ಲಿ
ಹಿಂದೆ ಇದ್ದಿದ್ದೇನೋ ನಿಜವೇ. ಆದರೆ ಈಗ ಎಲ್ಲವೂ ಬದಲಾಗಿದೆ. ಅವನೇ ನಂತರ ಒಪ್ಪಿಕೊಂಡಂತೆ ಆ ಒಂದು
ಕ್ಷಣ ಉತ್ಸಾಹವೇ ಬತ್ತಿಹೋದಂತೆ ದಲೀಪನು ವರ್ತಿಸಿದ್ದಂತೂ ಹೌದು. ಆದರೆ ನಮ್ಮ ಗೊಂದಲವು ನಿಜಕ್ಕೂ
ಪರಿಹಾರವಾಗಿರಲಿಲ್ಲ. ನಾವುಗಳು ಆ ಆನೆಯಿಂದ ಸಾಕಷ್ಟು ದೂರವಿದ್ದೆವು. ಅಷ್ಟಕ್ಕೂ ಆನೆಯ ಮೇಲೆ ಮನುಷ್ಯನೊಬ್ಬನು
ನಿಜಕ್ಕೂ ಕುಳಿತಿರುವನೇ ಎಂಬುದು ನಮಗೆ ಖಾತ್ರಿಯೂ ಆಗಿರಲಿಲ್ಲ.
ಆದರೆ ಆನೆಯ ಮೇಲೆ ಕುಳಿತಿದ್ದ
ಆ ಮಾನವಾಕೃತಿಯು ಬಹುಷಃ ನಮ್ಮನ್ನು ನೋಡಿತ್ತು ಅನ್ನಿಸುತ್ತೆ. ಸಂತಸದಿಂದ ಕೈ ಬೀಸುವಂತೆ ತನ್ನ ಕೈಗಳನ್ನು
ಬೀಸುತ್ತಾ ಆನೆಯನ್ನು ನಮ್ಮತ್ತಲೇ ನಿಧಾನವಾಗಿ ತರುತ್ತಿದ್ದ ಆತ. ನಂತರ ವಿಚಾರಿಸಿದಾಗ ಆನೆಯ ಹೆಸರು
ಪಾರ್ವತಿಯೆಂದೂ ಆತನ ಹೆಸರು ಪ್ರಭು
*
ವೆಂದೂ ತಿಳಿದುಬಂತು. ಸ್ಥಳೀಯ ಉಚ್ಚಾರಣೆಯ ಧಾಟಿಯಲ್ಲಿ
ಹೇಳುವುದಾದರೆ ಅವನ ಹೆಸರು `ಪರ್ಬು' ಎಂದಾಗಿತ್ತು. ನಾವು ಈ ಮುನ್ನ ಕೇಳಿಯೇ ಇರದಿದ್ದ ಹೆಸರಿನ ಹಳ್ಳಿಯ
ದೇವಾಲಯವೊಂದಕ್ಕೆ ಪ್ರಭು ತನ್ನ ಆನೆಯನ್ನು ಕರೆದೊಯ್ಯುತ್ತಿದ್ದ. ಸುತ್ತಮುತ್ತಲ ಹಳ್ಳಿಗಳ ದೇವಾಲಯಗಳಿಗೆ
ಸುತ್ತುಹಾಕುವುದೇ ಇವರಿಬ್ಬರ ಕೆಲಸವಂತೆ. ಹಬ್ಬ ಹರಿದಿನಗಳೇನಾದರೂ ಇದ್ದರೆ ಕೊಂಚ ಹೆಚ್ಚಿನ ಸಂಪಾದನೆಯ
ಜೊತೆಗೇ ಊರಲ್ಲಿರುವ ಕೆಲ ಪುಣ್ಯಾತ್ಮರ ನೆರವಿನಿಂದ ಸ್ವಲ್ಪ ಆಹಾರವೂ ಸಿಗುತ್ತದೆಯೆಂದೂ ಆತ ನಮಗೆ
ಹೇಳಿದ.
ಮಧ್ಯಪ್ರದೇಶದಲ್ಲಿರುವ
ಸುರ್ಗುಜ ಪ್ರದೇಶದ ನಿವಾಸಿಯಂತೆ ಈ ಪ್ರಭು. ಸುರ್ಗುಜದ ಬಗಲಲ್ಲೇ ಇರುವ ಪಲುಮು ಮತ್ತು ಆಸುಪಾಸಿನ
ಜಾಗಗಳಲ್ಲಿ ಅಡ್ಡಾಡುವುದು ಪ್ರಭು ಮತ್ತು ಪಾರ್ವತಿಯರಿಗೆ ನಿತ್ಯದ ಸಂಗತಿಯಾಗಿತ್ತು. ಭೌಗೋಳಿಕವಾಗಿ
ನೋಡಿದರೆ ಸುರ್ಗುಜ ನಿಜಕ್ಕೂ ದೊಡ್ಡ ಜಿಲ್ಲೆ. ದೆಹಲಿ, ಗೋವಾ ಮತ್ತು ನಾಗಾಲ್ಯಾಂಡ್ ಗಳನ್ನು ಜೊತೆಗೂಡಿಸಿದರೂ
ಕೂಡ ವಿಸ್ತೀರ್ಣದಲ್ಲಿ ಸುರ್ಗುಜದಷ್ಟು ಆಗಲಾರದು. ಪಕ್ಕದಲ್ಲೇ ಇರುವ ಪಲಾಮು ಬಿಹಾರ
**
ದ
ವ್ಯಾಪ್ತಿಗೆ ಬರುವಂಥದ್ದು. ಅಂದಹಾಗೆ ಸುರ್ಗುಜ ಮತ್ತು ಪಲಮು ಜಿಲ್ಲೆಗಳು ದೇಶದ ಅತ್ಯಂತ ಬಡಜಿಲ್ಲೆಗಳ
ಪಟ್ಟಿಯಲ್ಲಿ ಬರುವ ಪ್ರದೇಶಗಳು. ಇನ್ನು ಬಡತನವೆಂದರೆ ಅತ್ಯಂತ ಬಡಜನರು ಈ ಜಿಲ್ಲೆಗಳಲ್ಲಿ ನೆಲೆಸಿದ್ದಾರೆಯೇ
ಹೊರತು ಈ ಭೂಭಾಗಗಳಲ್ಲಿ ಸಂಪನ್ಮೂಲಗಳಿಗೇನೂ ಕೊರತೆಯಿಲ್ಲ.
![](/media/images/Surguja_1.width-1440.png)
ಅಸಲಿಗೆ ಪ್ರಭುವಿನ ಬಗ್ಗೆ ಇದ್ದಷ್ಟೇ ಆಸಕ್ತಿಯು ಪಾರ್ವತಿಯ ಬಗ್ಗೆಯೂ ನಮಗಿತ್ತು. ಪಾರ್ವತಿ ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಆನೆಗಳಂತಿರದೆ ಕೊಂಚ ಭಿನ್ನವಾಗಿದ್ದಳು. ಸುರ್ಗುಜದ ಆನೆಗಳು ಯುದ್ಧ ಪ್ರಾವೀಣ್ಯತೆಗಾಗಿ ಇತಿಹಾಸದಲ್ಲಿ ಖ್ಯಾತಿಯನ್ನು ಪಡೆದಂಥವುಗಳು. ಇನ್ನು ಜಿಲ್ಲೆಯ ಐತಿಹಾಸಿಕ ದಾಖಲೆಗಳಲ್ಲಿ ಕಣ್ಣಾಡಿಸಿದರೆ ಮತ್ತಷ್ಟು ಸ್ವಾರಸ್ಯಕರವಾದ ಸಂಗತಿಗಳು ನಮಗೆ ಸಿಕ್ಕುತ್ತವೆ. ``ಮಿಡೀವಲ್ ಪೀರಿಯಡ್ ಎಂದು ಕರೆಯಲಾಗುವ ಮಧ್ಯಯುಗದ ಯುದ್ಧಗಳಲ್ಲಿ ಆನೆಗಳು ಸೈನ್ಯದ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದವು. ಹೀಗಾಗಿ ಸುರ್ಗುಜ ಪ್ರದೇಶದ ಆನೆಗಳಿಗೆ ಆ ಅವಧಿಯಲ್ಲಿ ಭಾರೀ ಬೇಡಿಕೆಯಿತ್ತು. ಅತ್ಯುತ್ತಮ ಆನೆಗಳ ಕೇಂದ್ರವೆಂದೇ ಖ್ಯಾತಿಯನ್ನು ಪಡೆದಿದ್ದ ಸುರ್ಗುಜದಿಂದಲೇ ಯುದ್ಧಕ್ಕಾಗಿ ಆನೆಗಳನ್ನು ತರಿಸಿಕೊಳ್ಳಲಾಗುತ್ತಿತ್ತು. ಮಾಲ್ವಾದ ಸುಲ್ತಾನ ಮತ್ತು ಸುರ್ಗುಜದ ಸಾಮಂತರುಗಳ ಸಂಬಂಧದ ಭದ್ರ ತಳಹದಿಯೂ ಇಲ್ಲಿಯ ಆನೆಗಳೇ ಆಗಿದ್ದವು. ಮಾಲ್ವಾದ ಸುಲ್ತಾನರಿಗೆ ಆನೆಗಳನ್ನು ನಿಯಮಿತವಾಗಿ ಸರಬರಾಜು ಮಾಡುವಂತಹ ಪರಿಪಾಠವನ್ನು ಸುರ್ಗುಜದ ರಾಜರುಗಳು ಪರಿಪಾಲಿಸಿಕೊಂಡು ಬಂದಿದ್ದರು'', ಎಂದೇ ಈ ಹೊತ್ತಗೆಗಳಲ್ಲಿ ದಾಖಲಿಸಲಾಗಿದೆ.
ಈ ಒಂದು ಕಾರಣಕ್ಕಾಗಿಯೇ ಮಾಲ್ವಾದ ಸುಲ್ತಾನ ಸುರ್ಗುಜದ ಮೇಲಿದ್ದ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಂಡೇ ಬಂದಿದ್ದ. ಆದರೆ ಪ್ರಭು ಮತ್ತು ಪಾರ್ವತಿಯರನ್ನು ನೋಡುತ್ತಲಿದ್ದರೆ ಇವರ ಪೂರ್ವಜರೆಲ್ಲಾ ಒಂದು ಕಾಲದಲ್ಲಿ ನಿಜಕ್ಕೂ ಯುದ್ಧದಲ್ಲಿ ಕಾದಾಡುತ್ತಿದ್ದರೇ ಎಂದು ಅಚ್ಚರಿಯಿಂದ ಕೇಳುವವರಂತಿದ್ದರು. ಪ್ರಭುವಿನ ಪೂರ್ವಜರ ಕಥೆಗಳಲ್ಲಿ ಕೇಳಿ ತಿಳಿದಂತೆ ಅಂಥಾ ಕ್ಷಾತ್ರಕಳೆಯೇನೂ ಅವನ ಮುಖದಲ್ಲಿ ನಮಗೆ ಕಂಡುಬರಲಿಲ್ಲ. ಪಾರ್ವತಿಯಂತೂ ಆನೆಯ ಪ್ರಭೇದಕ್ಕೆ ತಕ್ಕಂತೆ ಗಾತ್ರದಲ್ಲಿ ದೊಡ್ಡದಾಗಿರುವುದನ್ನು ಬಿಟ್ಟರೆ ಸೌಮ್ಯ ಸ್ವಭಾವದ ಮೊಲದ ಮರಿಯಂತಿದ್ದಳು.
ಅಲೆಮಾರಿಗಳೊಂದಿಗಿನ
ಅಲೆದಾಟ
:
ಅಷ್ಟಕ್ಕೂ ನಾನು ಮತ್ತು ದಲೀಪ್ ಕುಮಾರ್ ಓಬೀರಾಯನ ಕಾಲದ ಪಳೆಯುಳಿಕೆಯಂತಿದ್ದ ಆ ಜೀಪಿನಲ್ಲಿ ಚಾಲಕನೊಂದಿಗೆ ತೆರಳುತ್ತಿದ್ದಿದ್ದು ಹಳ್ಳಿಯೊಂದರ ಕಡೆ. ಪ್ರಸ್ತುತ ಛತ್ತೀಸ್ ಗಢ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಅಂಬಿಕಾಪುರ
***
ದಲ್ಲಿ ಬಾಡಿಗೆಗೆಂದು ಪಡೆದುಕೊಂಡಿದ್ದ ನಮ್ಮ ಜೀಪು ಸಾಗುತ್ತಲೇ ಇದ್ದರೂ ಕೂಡ ತಲುಪಬೇಕಾದ ಜಾಗವನ್ನು ನಾವುಗಳು ಇನ್ನೂ ತಲುಪಿರಲಿಲ್ಲ. ಈ ಮಧ್ಯೆ ವಿಶ್ರಾಂತಿಗೆಂದು ಬಿರ್ಹರ್ ಕಾಲೋನಿಯೆಂದು ಕರೆಯಲಾಗುತ್ತಿದ್ದ ಚಿಕ್ಕ ಜಾಗವೊಂದರಲ್ಲಿ ನಾವು ಜೀಪನ್ನು ನಿಲ್ಲಿಸಿದ್ದೆವು. ಹೋ, ಸಂತಾಲ್, ಮುಂಡಾಸ್ ಗಳಂತೆಯೇ ಪ್ರಾಚೀನ ಆಸ್ಟ್ರೋ-ಏಷ್ಯಾಟಿಕ್ ಹಿನ್ನೆಲೆಯ ಬುಡಕಟ್ಟಿನವರೇ ಬಿರ್ಹರ್ ಆದಿವಾಸಿಗಳು. ಚೋಟಾ ನಾಗಪುರ್ ಪ್ರದೇಶದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಈ ಬಿರ್ಹರ್ ಆದಿವಾಸಿಗಳು ಪಲಮು, ರಾಂಚಿ, ಲೋಹಾರ್ದಗ, ಹಝಾರಿಬಾಗ್, ಸಿಂಗ್ಭಮ್... ಇತ್ಯಾದಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಲೆಯುತ್ತಾ ಜೀವನವನ್ನು ಸಾಗಿಸುವ ಅಲೆಮಾರಿಗಳು. ಭಾರತದಲ್ಲಿ ಕಣ್ಮರೆಯಾಗುತ್ತಿರುವ ಅಸಂಖ್ಯಾತ ಆದಿವಾಸಿ ಜನಾಂಗಗಳಲ್ಲಿ ಬಿರ್ಹರ್ ಕೂಡ ಒಂದು. ಒಂದು ಲೆಕ್ಕಾಚಾರದ ಪ್ರಕಾರ ಪ್ರಸ್ತುತ ಬಿರ್ಹರ್ ಜನಾಂಗದಲ್ಲಿರುವ ಆದಿವಾಸಿಗಳ ಸಂಖ್ಯೆಯು ಎರಡು ಸಾವಿರಕ್ಕೂ ಕಮ್ಮಿ.
ಬಿರ್ಹರ್ ಆದಿವಾಸಿಗಳು ಒಂದು ಸ್ವಾರಸ್ಯಕರ ಹಳ್ಳಿಯೊಂದರ ಬಗ್ಗೆ ನಮಗೆ ಈ ಹಿಂದೆ ತಿಳಿಸಿದ್ದರು. ಇಲ್ಲೇ ಪಕ್ಕದಲ್ಲಿ ಇದೆ ಎಂದು ನಮಗೆ ದಾರಿಯನ್ನೂ ತೋರಿಸಿದ್ದರು. ಈ ಸೂಚನೆಯ ಪ್ರಕಾರವೇ ಮುನ್ನಡೆದಿದ್ದ ನಮಗೆ ಮೈಲುಗಟ್ಟಲೆ ಸಾಗಿದರೂ ನಮಗೆ ಬೇಕಾಗಿರುವ ಹಳ್ಳಿಯು ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಅಲೆಮಾರಿ ಜನಾಂಗಗಳ ``ಇಲ್ಲೇ ಪಕ್ಕದಲ್ಲಿ'' ಎನ್ನುವ ದೂರವನ್ನು ಅಳೆಯುವ ಲೆಕ್ಕಾಚಾರದ ಪರಿಣಾಮವನ್ನು ಕಣ್ಣಾರೆ ಕಂಡು, ಅನುಭವಿಸಿ ನಮಗೆ ಭ್ರಮನಿರಸನವಾಗಿತ್ತು. ಇವೆಲ್ಲವೂ ಕಮ್ಮಿಯೆಂಬಂತೆ ನಮ್ಮ ಜೀಪೂ ಕೂಡ ಕಾಟವನ್ನು ಕೊಡುತ್ತಿದ್ದುದರಿಂದ ಆ ಹಳೆಯ ಜೀಪನ್ನು ಬಿರ್ಹರ್ ಜನರ ಸಮೀಪವೇ ಬಿಟ್ಟು ಕಾಲ್ನಡಿಗೆಯಲ್ಲೇ ಮುಂದುವರಿಯುವ ಸ್ಥಿತಿಯು ಬೇರೆ ನಮಗೆ ಬಂದೊದಗಿತ್ತು.
ಅಂದಹಾಗೆ ಜೀಪಿನ ಚಾಲಕನೂ ಕೂಡ ನಮ್ಮೊಡನೆ ಕಾಲ್ನಡಿಗೆಯಲ್ಲಿ ಬರುವ ನಿರ್ಧಾರವನ್ನು ಮಾಡಿದ್ದ. ಆದರೆ ಬಿರ್ಹರ್ ಗಳ ರೂಪವು ಅವನಲ್ಲಿ ಭಯವನ್ನು ಹುಟ್ಟಿಸಿತ್ತು. ಏನೋ ವಿಚಿತ್ರವಾಗಿ ಕಾಣುತ್ತಾರಪ್ಪಾ ಎಂದು ಬಿರ್ಹರ್ ಗಳ ಬಗ್ಗೆ ಗೊಣಗಿದ್ದ ಆತ. ಈಗ ಪಾರ್ವತಿಯನ್ನು ಕಂಡ ನಂತರವಂತೂ ಅವನ ಭಯವು ಮತ್ತಷ್ಟು ಹೆಚ್ಚಾಗಿತ್ತು. ನನಗಂತೂ ನಮ್ಮ ಜೀಪು ಚಾಲಕನೇ ಎಲ್ಲರಿಗಿಂತ ಭಯಾನಕವಾಗಿ ಕಾಣಿಸುತ್ತಿದ್ದಾನೆ ಎಂದು ತಮಾಷೆಯಾಗಿ ನನ್ನಲ್ಲಿ ಹೇಳಿ ನಕ್ಕಿದ್ದ ದಲೀಪ್. ಕೊನೆಗೂ ಆತ ನಮ್ಮೊಂದಿಗೆ ಬರಲು ಒಪ್ಪಿಕೊಂಡಿದ್ದೇ ಒಂದು ದೊಡ್ಡ ವಿಷಯ.
ಮಾತುಮಾತಲ್ಲೇ ನಮ್ಮೊಂದಿಗೆ ಆತ್ಮೀಯನಂತೆ ಬೆರೆತಿದ್ದ ಪ್ರಭು ``ಬನ್ನಿ, ಒಂದು ರೌಂಡಿಗೆ ಹೋಗೋಣವಂತೆ'' ಎನ್ನುವ ಧಾಟಿಯಲ್ಲಿ ನಮಗೆ ಆಹ್ವಾನವನ್ನು ನೀಡಿದ್ದ. ಆನೆ ಸವಾರಿಯೆಂದು ನಾವೂ ತಕ್ಷಣ ಒಪ್ಪಿಕೊಂಡೆವು. 1993 ರ ಮಧ್ಯಭಾಗದಿಂದ ಶುರುವಾಗಿರುವ ನನ್ನ ಈ ಪ್ರಾಜೆಕ್ಟ್ ನನ್ನನ್ನು ಯಾವ್ಯಾವ ತರಹದ ವಾಹನಗಳಲ್ಲಿ ಕೂರಿಸಿದೆ ಎಂಬ ಯೋಚನೆಯೇ ನನ್ನನ್ನು ಪುಳಕಿತನಾಗಿಸಿತ್ತು. ದೋಣಿ, ರಾಫ್ಟ್‍ಗಳಿಂದ ಹಿಡಿದು ರೈಲುಬಂಡಿಯ ಮಾಡಿನವರೆಗೂ... ಹೀಗೆ ಎಲ್ಲೆಲ್ಲೋ ಕುಳಿತು ಅದೆಷ್ಟು ದೂರವನ್ನು ಸವೆಸಿಲ್ಲ ನಾನು! ಆದರೆ ಆನೆ ಸವಾರಿಯ ಅನುಭವವು ನನ್ನ ಮಟ್ಟಿಗೆ ಇದೇ ಮೊದಲ ಬಾರಿ. ಜುಮ್ಮನೆ ಕುಳಿತು ಕೊಂಚ ದೂರ ಸಾಗಿದ ನಾವು ನಂತರ ಕುಳಿತು ಹರಟೆ ಹೊಡೆಯುವಂತೆ ಪ್ರಭುವಿನೊಂದಿಗೆ ಮಾತಿಗಿಳಿದಿದ್ದೆವು. ನಾವು ಹೋಗಬೇಕಾಗಿದ್ದ ಹಳ್ಳಿಯು ನಮಗೆ ಬಹುತೇಕ ಮರೆತೇಹೋದಂತಾಗಿತ್ತು. ಆ ಹಳ್ಳಿಗಿಂತಲೂ ಕೌತುಕಮಯವಾದ ಹೊಸ ಸಂಗತಿಯೊಂದು ನಮಗೀಗ ಸಿಕ್ಕಿತ್ತು. ಅದೂ ಕೂಡ ``ಇಲ್ಲೇ ಪಕ್ಕದಲ್ಲೇ''. ಈ ಹೊಸ ಆಸಕ್ತಿಯ ಸಂಗತಿ `ಪ್ರಭು' ಅಲ್ಲದೆ ಇನ್ಯಾರು? ಪಾರ್ವತಿಯನ್ನು ಈತ ಹೇಗೆ ನೋಡಿಕೊಳ್ಳುತ್ತಿದ್ದಾನೆ, ಅವಳಿಗೆ ನಿತ್ಯದ ಆಹಾರವನ್ನು ಹೇಗೆ ಹೊಂದಿಸುತ್ತಾನೆ ಎಂಬಿತ್ಯಾದಿ ಪ್ರಶ್ನೆಗಳ ಹಿಂದೆ ನಾವೀಗ ಬಿದ್ದಿದ್ದೆವು.
ವ್ಯಕ್ತಿಗಳನ್ನು ಸಂದರ್ಶಿಸುವುದರಲ್ಲಿ ನಮಗಿರುವ ಪರಿಣತಿಯ ಹೊರತಾಗಿಯೂ ಸುಮಾರು ಒಂದರಿಂದ ಒಂದೂವರೆ ಘಂಟೆಗಳ ಸಂಭಾಷಣೆಯ ನಂತರವೂ ಉಪಯುಕ್ತವೆನಿಸುವಂಥಾ ಮಾಹಿತಿಗಳೇನೂ ನಮಗೆ ಸಿಗಲಿಲ್ಲ. ಪ್ರಭುವಿನ ಮಾತಿನಲ್ಲಿ ಸೌಜನ್ಯವಿತ್ತಾದರೂ ವಿಚಿತ್ರವಾದ ನಿಗೂಢತೆಯೊಂದನ್ನು ಆತ ತನ್ನಲ್ಲಿ ಉಳಿಸಿಕೊಂಡಿದ್ದ. ಸಹೃದಯಿ ಗ್ರಾಮಸ್ಥರಿಂದಲೋ, ಊರಜಾತ್ರೆಯಿಂದಾಗುವ ಸಂಪಾದನೆಯಿಂದಲೋ ಹೇಗೋ ಸುಮಾರಾಗಿ ಜೀವನವು ನಡೆಯುತ್ತಿದೆ ಎಂದಿದ್ದ ಪ್ರಭು. ದೇಶದ ಇನ್ಯಾವುದಾದರೂ ಭಾಗದಲ್ಲಿ ಇಂಥಾ ಮಾತುಗಳನ್ನು ಕೇಳಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವೋ ಏನೋ. ಆದರೆ ಪ್ರಭು ಹೇಳುವಂತೆ ಸುರ್ಗುಜದಲ್ಲಿ ಅಂಥದ್ದೇನೂ ಇರಲಿಲ್ಲ ಎಂಬುದು ನಮಗೆ ತಿಳಿದಿತ್ತು. ``ಅದ್ಯಾಕಯ್ಯಾ ಸುಳ್ಳಾಡುತ್ತೀ? ನಿನ್ನೊಂದಿಗಿರುವ ಈ ದೈತ್ಯ ಜೀವಕ್ಕೆ ಕಮ್ಮಿಯೆಂದರೂ ದಿನಕ್ಕೆ ಇನ್ನೂರು ಕಿಲೋದಷ್ಟು ಹುಲ್ಲು ಬೇಕು. ಇನ್ನು ಆಹಾರದ ಲೆಕ್ಕ ಪ್ರತ್ಯೇಕ. ನೀನೇನು ಮಾಡುತ್ತಿ ಎಂದು ನಾನು ಹೇಳುತ್ತೇನೆ ಕೇಳು. ಈ ಊರಿನ ಆಸುಪಾಸಿನಲ್ಲಿರುವ ಗದ್ದೆಗಳಿಗೆ ಪಾರ್ವತಿಯನ್ನು ಬಿಟ್ಟು ಅವಳು ಬೇಕಾದಷ್ಟು ತಿಂದುಕೊಂಡಿರಲಿ ಎಂದು ನೀನು ಬಿಟ್ಟುಬಿಡುತ್ತೀಯಾ. ಹೌದೋ ಅಲ್ಲವೋ?'', ಎಂದು ತೀಕ್ಷ್ಣವಾಗಿಯೇ ಅವನಲ್ಲಿ ಕೇಳಿದ್ದ ದಲೀಪ್.
ಅಸಲಿಗೆ ದಲೀಪನ ಮಾತುಗಳಲ್ಲಿ ಸತ್ಯಾಂಶವಿತ್ತು. ಆದರೆ ಪ್ರಭು ದಲೀಪನ ವಾದವನ್ನು ಸಾರಾಸಗಾಟಾಗಿ ತಳ್ಳಿಹಾಕಿದ್ದ. ಅಷ್ಟಕ್ಕೇ ತನ್ನ ವಾದವನ್ನು ನಿಲ್ಲಿಸದ ದಲೀಪ್ ಮುಂದುವರೆದು, ``ನಿನ್ನ ಬದಲು ಈ ಆನೆಯ ಸಂದರ್ಶನವನ್ನು ತೆಗೆದುಕೊಂಡರೆ ಅದಾದರೂ ಸತ್ಯವನ್ನು ಹೇಳಬಹುದೋ ಏನೋ! ಆಹಾರಕ್ಕಾಗಿ ಪಾರ್ವತಿಯನ್ನು ದಟ್ಟ ಕಾಡಿನೊಳಗೆ ಕರೆದುಕೊಂಡು ಹೋಗುವುದು ನಿನ್ನಿಂದಾಗುವ ಕೆಲಸವಂತೂ ಅಲ್ಲ. ಇನ್ನು ಕಾಡಿನ ಗರ್ಭದಲ್ಲಿರುವ ಗಾತ್ರದಲ್ಲೂ, ಶಕ್ತಿಯಲ್ಲೂ ಕಟ್ಟುಮಸ್ತಾಗಿರುವ ಕಾಡಾನೆಗಳೊಂದಿಗೆ ಅಥವಾ ಇತರ ಕಾಡುಪ್ರಾಣಿಗಳೊಂದಿಗೆ ಕಾದಾಡುವಷ್ಟು ತಾಕತ್ತು ಪಾರ್ವತಿಗೂ ಇಲ್ಲ. ಹೀಗಾಗಿ ಪಾರ್ವತಿಯ ಆಹಾರಕ್ಕಾಗಿ ಗದ್ದೆಗಳನ್ನು ಲೂಟಿ ಮಾಡುವುದು ಬಿಟ್ಟರೆ ಬೇರೆ ಯಾವ ಆಯ್ಕೆಗಳೂ ನಿನಗಿಲ್ಲ. ನೀನು ಸ್ವತಃ ಪಾರ್ವತಿಯನ್ನು ಕಂಡವರ ಗದ್ದೆಗಳಿಗೆ ಕರೆದುಕೊಂಡು ಹೋಗುವುದಲ್ಲದೆ ಪಾರ್ವತಿಯು ಆ ಬೆಳೆಯನ್ನು ಎಗ್ಗಿಲ್ಲದೆ ನಾಶಮಾಡುವುದನ್ನು ಬೇರೆ ಕಣ್ಣಾರೆ ನೋಡುತ್ತೀಯಾ'', ಎಂದಿದ್ದ ದಲೀಪ್. ಹೀಗೆ ಪಾರ್ವತಿಯ ಆಹಾರ, ಅವಳ ದೈನಂದಿನ ಖರ್ಚುಗಳು ಇತ್ಯಾದಿಗಳ ಬಗ್ಗೆ ನಾವು ಪ್ರಭುವಿನೊಂದಿಗೆ ಗಂಭೀರವಾಗಿ ಚರ್ಚಿಸುತ್ತಿದ್ದರೆ ಪಾರ್ವತಿ ತನ್ನ ಸೊಂಡಿಲನ್ನು ಪ್ರಭುವಿನ ತಲೆಯ ಮೇಲೆ ನೇವರಿಸಿದಂತೆ ಆಡಿಸುತ್ತಾ ಆಟವಾಡುವುದರಲ್ಲೇ ತಲ್ಲೀನಳಾಗಿದ್ದಳು. ಪಾರ್ವತಿಯ ಚೇಷ್ಟೆಗಳನ್ನು ನೋಡುತ್ತಿದ್ದರೆ ಪ್ರಭುವಿನ ಮೇಲೆ ಅವಳಿಗಿರುವ ಅಪಾರವಾದ ಪ್ರೀತಿಯಂತೂ ನಿಚ್ಚಳವಾಗಿತ್ತು. ದಲೀಪ್ ಹೇಳುವಂತೆ ಪ್ರಭು ನಿಜಕ್ಕೂ ಅಮಾಯಕರ ಗದ್ದೆಗಳನ್ನು ನಾಶಪಡಿಸಿ ಪಾರ್ವತಿಯನ್ನು ಸಾಕುತ್ತಿದ್ದಿದ್ದು ಹೌದೇ ಆಗಿದ್ದರೆ ಆತ ಈ ಕೆಲಸದಲ್ಲಿ ಚಾಣಾಕ್ಷನಾಗಿದ್ದ ಅನ್ನುವುದನ್ನಂತೂ ಒಪ್ಪಿಕೊಳ್ಳಲೇಬೇಕಿತ್ತು.
![](/media/images/01_PS_Elephant_Man_and_the_belly_of_the_beast.width-1440.jpg)
ಗ್ರಾಮದಲ್ಲಿ ``ದೊಡ್ಡವರು'' ಎಂದು ಅನ್ನಿಸಿಕೊಳ್ಳುವವರು ಪ್ರಭು ಮತ್ತು ಪಾರ್ವತಿಯನ್ನು ಅವರ ಕಾರ್ಯಕ್ರಮಗಳಲ್ಲಿ ಕರೆಸಿಕೊಳ್ಳುವ ಒಂದು ಕಾಲವೂ ಇತ್ತು ಎಂದು ಹೇಳುತ್ತಿದ್ದ ಪ್ರಭು. ಮದುವೆಗಳಲ್ಲಿ ಪಾರ್ವತಿಯನ್ನು ಕರೆಸಿ ಅವಳನ್ನು ಬಣ್ಣಬಣ್ಣದ ದಿರಿಸುಗಳೊಂದಿಗೆ ಮದುಮಗಳಂತೆ ಅಲಂಕರಿಸಿದರೆ ಅವಳೇ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿರುತ್ತಿದ್ದಳಂತೆ. ಇನ್ನು ಮದುವೆಯಂಥಾ ಸಮಾರಂಭಗಳಲ್ಲಿ ಸಂಪಾದನೆಯೂ ಕೊಂಚ ಹೆಚ್ಚು. ಆದರೆ ಇತ್ತೀಚೆಗಷ್ಟೇ ಭಾಗವಹಿಸಿದ್ದ ಮದುವೆಯೊಂದರ ಬಗ್ಗೆ ಆತನಿಗೆ ಅಸಮಾಧಾನವಿತ್ತು. ``ಮಾಲೀಕ ಕೊಡಬೇಕಾಗಿದ್ದ ಮೊತ್ತದಿಂದ ಐವತ್ತು ರೂಪಾಯಿ ಕಳೆದು ಕೊಟ್ಟಿದ್ದ. ಪಾಪ, ನನ್ನ ಪಾರ್ವತಿ ಹಸಿದಿದ್ದಳು. ಅವಳ ಆಹಾರದ ಜವಾಬ್ದಾರಿ ನನ್ನದೇ ಆಗಿದ್ದರೂ ಆ ದಿನ ಅವಳೇ ಏಕಾಂಗಿಯಾಗಿ ಆಹಾರವನ್ನು ಅರಸಿಕೊಂಡು ಹೋಗಬೇಕಾಯಿತು'', ಎಂದು ನಿಟ್ಟುಸಿರಿಟ್ಟ ಪ್ರಭು. ಹೀಗೆ ಮಾತಿನ ಮಧ್ಯದಲ್ಲೇ ಪಾರ್ವತಿಯ ಸೊಂಡಿಲಿಗೊಮ್ಮೆ ಹಿತವಾಗಿ ತಟ್ಟಿದ ಪ್ರಭು. ಪಾರ್ವತಿಯೂ ಕೂಡ ಮಂದವಾಗಿ ಹೂಂಕರಿಸಿ ಒಡೆಯನೆಡೆಗಿದ್ದ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಳು. ಮದುವೆಯ ಮೃಷ್ಟಾನ್ನ ಭೋಜನದ ನೆನಪಾಯಿತೋ ಏನೋ ಅವಳಿಗೆ!
ಪ್ರಭುವಿನ ಸ್ವಗತ ಮುಂದುವರಿದಿತ್ತು. ``ಒಮ್ಮೆ ಆಸಾಮಿಯೊಬ್ಬ ನನ್ನ ಬಳಿ ಬಂದು ಊರ ಮೆರವಣಿಗೆಯೊಂದಕ್ಕಾಗಿ ಪಾರ್ವತಿಯನ್ನು ಕಳಿಸಿಕೊಡಬೇಕೆಂದು ಕೇಳಿದ್ದ. ಅವನ ನಾಯಕನೊಬ್ಬ ಚುನಾವಣೆಗೆ ನಿಂತಿದ್ದನಂತೆ. ನಂತರ ಅದೇನಾಯಿತೋ! ಪಾರ್ವತಿಯನ್ನು ಅವನು ಕರೆದುಕೊಂಡು ಹೋಗಲೇ ಇಲ್ಲ. ನಂತರ ಬಂದು `ಪಾರ್ವತಿಯ ಬಗ್ಗೆ ಊರಜನರಿಂದ ಇಲ್ಲಸಲ್ಲದ್ದನ್ನು ಕೇಳಿದೆ. ಹಾಗಾಗಿ ಕೊನೇ ಘಳಿಗೆಯಲ್ಲಿ ನಿರ್ಧಾರವನ್ನು ಬದಲಾಯಿಸಬೇಕಾಯಿತು' ಎಂದು ಹೇಳಿಕೊಂಡಿದ್ದ. ಊರಿನಲ್ಲಿ ಇಂಥಾ ಜನರೂ ಇರುತ್ತಾರೆ ನೋಡಿ'', ಎಂದು ಸಪ್ಪೆಮೋರೆ ಹಾಕಿಕೊಂಡು ನುಡಿದ ಪ್ರಭು. ನಾವೂ ಮೌನವಾಗಿ ಅವನ ಮಾತುಗಳಿಗೆ ಕಿವಿಯಾಗುತ್ತಾ ಹೋದೆವು.
ಆನೆಯೊಂದಿಗೆ ಆತ ಗ್ರಾಮದೊಳಗೆ ಕಾಲಿಟ್ಟಾಗಲೆಲ್ಲಾ ಉಂಟಾಗುವ ಭಯ, ಆತಂಕ, ಅಚ್ಚರಿ ಮತ್ತು ಉತ್ಸಾಹದ ಕ್ಷಣಗಳು ಹೇಗಿರಬಹುದು ಎಂಬುದರ ಸುತ್ತಲೇ ನಮ್ಮ ಯೋಚನೆಗಳು ಗಿರಕಿ ಹೊಡೆಯುತ್ತಿದ್ದವು. ಈ ಬಗ್ಗೆಯೂ ಅವನಲ್ಲಿ ಕಥೆಗಳಿದ್ದವು. ``ಒಮ್ಮೆ ಏನಾಯಿತು ಗೊತ್ತಾ? ನಾಯಿಗಳ ಗುಂಪೊಂದು ಜೋರಾಗಿ ಬೊಗಳುತ್ತಾ ನನ್ನ ಪಾರ್ವತಿಯ ಮೈಮೇಲೆ ಎರಗಲು ಬಂದಿದ್ದವು. ಅವಳಿಗೋ ಪಾಪ ಭಯ. ಹೇಗೋ ತಪ್ಪಿಸಿಕೊಂಡರಾಯಿತು ಎಂಬ ಆತುರದಲ್ಲಿದ್ದ ಪಾರ್ವತಿ ಅಲ್ಲೇ ಪಕ್ಕದಲ್ಲಿದ್ದ ಮನೆಯೊಂದರ ಪಕ್ಕ ಅಡಗಿಕೊಂಡಳು. ಆಗ ಮನೆಯ ಕಟ್ಟಡಕ್ಕೆ ಕೊಂಚ ಹಾನಿಯೂ ಆಯಿತು. ಮನೆಯ ಮಾಲೀಕ ಸಿಟ್ಟಿನಿಂದ ಎಗರಾಡುತ್ತಿದ್ದ'', ಎಂದು ಕಣ್ಣರಳಿಸುತ್ತಾ ವಿವರಿಸುತ್ತಿದ್ದ ಪ್ರಭು.
ಮಾತಿಲ್ಲದೆ ತದೇಕಚಿತ್ತದಿಂದ ಪ್ರಭುವಿನ ಕಥೆಗಳನ್ನು ಕೇಳುತ್ತಿದ್ದ ನಾವು ಆ ದೃಶ್ಯವನ್ನೊಮ್ಮೆ ಕಲ್ಪನೆ ಮಾಡಿಕೊಳ್ಳಲು ಪ್ರಯತ್ನಿಸಿದೆವು. ದಿಗಿಲಾಗಿ ಓಡುತ್ತಿರುವ ಪಾರ್ವತಿಯಂತಹ ಆನೆಯೊಂದು ಪುಟ್ಟ ಮನೆಯೊಂದಕ್ಕೆ ಅಡಗಿಕೊಳ್ಳಲು ಬಂದರೆ ಆ ಮನೆಯ ಮಾಲೀಕ ಹೇಗೆ ತಾನೇ ಪ್ರತಿಕ್ರಯಿಸಬಹುದು? ಇಂಥಾ ವಿಚಿತ್ರ ಘಟನೆಯ ತರುವಾಯ ಆ ಮನೆಯ ಪರಿಸ್ಥಿತಿಯಾದರೂ ಹೇಗಾಗಿರಬೇಡ? ಮನೆಯ ಮಾಲೀಕ ನಿಜಕ್ಕೂ ಸಿಟ್ಟಿನಲ್ಲಿ ಅರಚಾಡುತ್ತಿದ್ದನೇ ಅಥವಾ ಪ್ರಾಣಭಯದಿಂದ ಕೂಗಾಡುತ್ತಿದ್ದನೇ?
ಆದರೆ ನಮ್ಮ ಯೋಚನೆಗಳು ಪ್ರಭುವಿನ ಉತ್ಸಾಹಕ್ಕೇನೂ ತಣ್ಣೀರೆರಚಲಿಲ್ಲ. ಅವನ ಕಥೆಗಳು ಮುಂದುವರಿದಿದ್ದವು. ಒಮ್ಮೆಯಂತೂ ಊರಜನಗಳು ಪಾರ್ವತಿಯತ್ತ ಕಲ್ಲುಗಳನ್ನೆಸೆಯುತ್ತಿದ್ದರಂತೆ. ``ನೀನೆಲ್ಲೋ ಅವರ ಗದ್ದೆಗಳನ್ನು ಲೂಟಿಮಾಡಲು ಹೋಗಿರಬೇಕು'', ಎಂದು ಮಾತಲ್ಲೇ ಕುಟುಕಿದ ದಲೀಪ್. ``ಅಯ್ಯೋ... ಅಂಥದ್ದೇನಿಲ್ಲ ಧಣೀ. ನಾವಿಬ್ಬರೂ ಸುಮ್ಮನೆ ಗದ್ದೆಯೊಂದರ ಪಕ್ಕದಲ್ಲಿ ಅಡ್ಡಾಡುತ್ತಿದ್ದವು. ಕಂಠಪೂರ್ತಿ ಕುಡಿದಿದ್ದ ಕೆಲ ಮೂರ್ಖರು ಆಗಲೇ ಬರಬೇಕೇ! ವಿನಾಕಾರಣ ನಮ್ಮತ್ತ ಕಲ್ಲುಗಳನ್ನೆಸೆದರು ನೋಡಿ. ನಾವು ವಿರುದ್ಧ ದಿಕ್ಕಿನತ್ತ ತೆರಳಿ ಹೇಗೋ ಬಚಾವಾದೆವು. ದುರಾದೃಷ್ಟವಶಾತ್ ಸೂರ್ಯ ಕೂಡ ಮುಳುಗುತ್ತಿದ್ದ. ಕತ್ತಲಾಗುತ್ತಿದ್ದಂತೆಯೇ ನಾವು ಪಕ್ಕದ ಬಸ್ತಿಯೊಂದನ್ನು ತಲುಪಿದೆವು. ಕೊಂಚ ವೇಗವಾಗಿಯೇ ದಾಪುಗಾಲಿಕ್ಕುತ್ತಿದ್ದ ಪಾರ್ವತಿಯನ್ನು ಕಂಡ ಗ್ರಾಮಸ್ಥರು ಹೆದರಿಕೊಂಡರೆಂದು ಅನ್ನಿಸುತ್ತೆ. ಸತ್ಯವಾಗಿಯೂ ಹೇಳುತ್ತೇನೆ, ಪಾರ್ವತಿ ಆ ದಿನ ಶಾಂತವಾಗಿದ್ದಳು. ಯಾರೂ ಹೆದರಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಜನರು ವಿನಾಕಾರಣ ಭಯಪಟ್ಟುಕೊಂಡು ದಿಕ್ಕಾಪಾಲಾಗಿ ಓಡುತ್ತಾ ಚೀರಾಡಿದ್ದೇ ಬಂತು'', ಎಂದು ಏನೂ ಆಗಿಯೇ ಇಲ್ಲವೆಂಬಂತೆ ಪ್ರಭು ಸಮಜಾಯಿಷಿಯನ್ನು ಕೊಟ್ಟಿದ್ದ. ಕತ್ತಲಾದ ನಂತರ ಅಚಾನಕ್ಕಾಗಿ ದೈತ್ಯ ಆನೆಯೊಂದು ವಠಾರದಲ್ಲಿ ಕಾಣಿಸಿಕೊಂಡರೆ ಹೇಗಿರಬಹುದು ಎಂದು ನಾವುಗಳು ಮನದಲ್ಲೇ ಲೆಕ್ಕಹಾಕಿದೆವು. ಆನೆಗೆ ನಾವು ಕಲ್ಲು ಹೊಡೆಯುವ ಹುಚ್ಚುಸಾಹಸವನ್ನು ಮಾಡುತ್ತಿರಲಿಲ್ಲ ಅನ್ನುವುದು ಸತ್ಯವಾದರೂ ಜೀವವನ್ನು ಉಳಿಸಿಕೊಳ್ಳಲು ಓಡುವುದನ್ನಂತೂ ಖಂಡಿತಾ ಮಾಡುತ್ತಿದ್ದೆವು ಎಂದು ನಮಗನ್ನಿಸಿತು.
ಓ ಆನೆ , ನಿನ್ನ ಊಟದ ಮೆನು ಏನೇ ?:
ಪ್ರಭು ಮತ್ತು ಪಾರ್ವತಿಯರ ಜೀವನವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದಷ್ಟು ಅದು ಮತ್ತಷ್ಟು ನಿಗೂಢವಾಗಿ ಸಂಕೀರ್ಣವಾಗುತ್ತಾ ಹೋಗುತ್ತಿರುವುದು ನಮ್ಮನ್ನು ಪೇಚಿಗೊಳಪಡಿಸಿತ್ತು. ಬಡತನದ ಶಾಪಕ್ಕೊಳಗಾಗಿದ್ದ ಸುರ್ಗುಜದಂತಹ ಜಿಲ್ಲೆಯಲ್ಲಿ ಜನರಿಗೇ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲ. ಆನೆಗಳನ್ನು ಹೊರತುಪಡಿಸಿದರೆ ಸುರ್ಗುಜ ಜಿಲ್ಲೆಯು (ಕು)ಖ್ಯಾತಿಯನ್ನು ಪಡೆದಿದ್ದು ಇಲ್ಲಿರುವ ಬಡತನದ ಕಾರಣದಿಂದಾಗಿಯೇ. ಪರಿಸ್ಥಿತಿಯು ಹೀಗಿರುವಾಗ ಈ ಮಹಾಶಯ ಆನೆಯನ್ನು ಹೇಗೆ ಸಾಕುತ್ತಿದ್ದಾನೆ? ಪ್ರಭು ಈ ಆನೆಯನ್ನು ಸಾಕುತ್ತಿದ್ದಾನೋ ಅಥವಾ ಆನೆಯೇ ತನ್ನ ಸಂಪಾದನೆಯಿಂದ ಈತನನ್ನು ಸಾಕುತ್ತಿದೆಯೋ? ಹೀಗೆ ತರಹೇವಾರಿ ಪ್ರಶ್ನೆಗಳ ಸುಳಿಯಲ್ಲಿ ಒದ್ದಾಡುತ್ತಾ ನಾವುಗಳು ಕಳೆದೇಹೋಗಿದ್ದೆವು.
ಸುಲ್ತಾನರಾಗಲೀ, ಮೊಘಲರಾಗಲೀ, ಮರಾಠರಾಗಲೀ ಅಥವಾ ಬ್ರಿಟಿಷರೇ ಆಗಲಿ; ಎಲ್ಲರೂ ಅತೀ ಕಡಿಮೆ ಮೊತ್ತದ ಕಂದಾಯವನ್ನು ಪಡೆಯುತ್ತಿದ್ದಿದ್ದು ಈ ಪ್ರಾಂತ್ಯದಲ್ಲೇ. ಸುಲ್ತಾನರಿಗೆ ಮತ್ತು ಮೊಘಲರಿಗೆ ಇಲ್ಲಿರುವ ಆನೆಗಳನ್ನು ಬಿಟ್ಟರೆ ಬೇರ್ಯಾವ ವಿಷಯದಲ್ಲೂ ಆಸಕ್ತಿಯಿರಲಿಲ್ಲ. 1919 ರ ಸುಮಾರಿನಲ್ಲಿ ಆಸುಪಾಸಿನ ಪ್ರಾಂತ್ಯಗಳ ಸಂಪತ್ತಿನಿಂದ ಭರ್ಜರಿ ಆದಾಯವನ್ನು ಪಡೆಯುತ್ತಿದ್ದ ಬ್ರಿಟಿಷ್ ಸರ್ಕಾರವು ಈ ಭಾಗದಲ್ಲಿ ಕವಡೆ ಕಾಸಿಗೇ ತೃಪ್ತಿಪಡಬೇಕಿತ್ತು. ಸ್ಥಳೀಯ ಸುರ್ಗುಜ, ಕುರಿಯಾ ಮತ್ತು ಚಾಂಗ್ ಬಖಾರ್ ಗಳಂತಹ ಪ್ರದೇಶಗಳ ಸಾಮಂತರಿಂದ ಬ್ರಿಟಿಷರು ವರ್ಷಕ್ಕೊಮ್ಮೆ ಕ್ರಮವಾಗಿ ಪಡೆಯುತ್ತಿದ್ದ ಚಿಲ್ಲರೆ ಮೊತ್ತವೆಂದರೆ ಎರಡು ಸಾವಿರದೈನೂರು, ಐನೂರು ಮತ್ತು ಮುನ್ನೂರಾ ಎಂಭತ್ತೇಳು ರೂಪಾಯಿಗಳು.
![](/media/images/03_PS_Elephant_Man_and_the_belly_of_the_beast.width-1440.jpg)
ಹದಿನೆಂಟನೇ ಶತಮಾನದ ಕೊನೆಯ ವರ್ಷಗಳಲ್ಲಂತೂ ಸುರ್ಗುಜ ಪ್ರದೇಶದ ಸಾಮಂತರ ಹಿಡಿತದಲ್ಲಿರುವಂತೆಯೇ ಕುರಿಯಾ ಪ್ರದೇಶವು ಮರಾಠರ ವಶವಾಗಿತ್ತು. ಇಷ್ಟಿದ್ದರೂ ಪ್ರಾಂತ್ಯದ ಮೇಲೆ ಸಂಪೂರ್ಣವಾಗಿ ತನ್ನ ಆಧಿಪತ್ಯವನ್ನು ಸ್ಥಾಪಿಸಲು ಮರಾಠರಿಗೆ ಸಾಧ್ಯವಾಗಿರಲಿಲ್ಲ. ಕುರಿಯಾ ಪ್ರಾಂತ್ಯವನ್ನು ಸಂಭಾಳಿಸುವುದು ಮರಾಠರು ಅಂದುಕೊಂಡಿದ್ದಕ್ಕಿಂತಲೂ ಕಷ್ಟದ್ದಾಗಿ ಪರಿಣಮಿಸಿತ್ತು. ಮುಂದೆ ಜುಜುಬಿ ಎರಡು ಸಾವಿರ ರೂಪಾಯಿಗಳ ಮೊತ್ತವನ್ನು ಕಾಟಾಚಾರಕ್ಕೆಂಬಂತೆ ಕುರಿಯಾ ದ ಸಾಮಂತರಿಂದ ಪಡೆದುಕೊಳ್ಳುವ ಹೊಸ ಬೇಡಿಕೆಯನ್ನು ಮರಾಠರು ಇಟ್ಟಿದ್ದರು. ಕುರಿಯಾ ಪ್ರಾಂತ್ಯದ ಸಾಮಂತರು ಎರಡು ಸಾವಿರ ರೂಪಾಯಿಗಳನ್ನೂ ನೀಡುವ ಸ್ಥಿತಿಯಲ್ಲಿಲ್ಲದಿದ್ದರಿಂದ ಈ ಮೊತ್ತವನ್ನು ವಾರ್ಷಿಕವಾಗಿ ಇನ್ನೂರು ರೂಪಾಯಿಗಳಿಗೆ ಇಳಿಸಲಾಯಿತಂತೆ. ಜೊತೆಗೇ ಇಳಿಸಿದ ಮೊತ್ತದ ಬದಲಾಗಿ ಜಾನುವಾರುಗಳನ್ನು ವಶಪಡಿಸಿಕೊಳ್ಳುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನೂ ಕುರಿಯಾ ಸಂಸ್ಥಾನಕ್ಕೆ ಮರಾಠರು ಪರೋಕ್ಷವಾಗಿ ತಲುಪಿಸುತ್ತಾರೆ. ಜಿಲ್ಲಾ ಗೆಝೆಟೀರ್ ದಾಖಲೆಗಳ ಪ್ರಕಾರ ಕುರಿಯಾ ಪ್ರದೇಶದ ಸಾಮಂತ ಇನ್ನೊಂದು ರೂಪಾಯಿಯನ್ನೂ ಹೆಚ್ಚಿಗೆ ಕೊಡುವ ಸ್ಥಿತಿಯಲ್ಲಿಲ್ಲ ಎಂದು ಮರಾಠರಿಗೆ ಆಗಲೇ ಮನವರಿಕೆಯಾಗಿತ್ತು. ಕೊನೆಗೂ ಐದು ಮರಿ ಕುದುರೆಗಳನ್ನು, ಮೂರು ಎತ್ತುಗಳನ್ನು ಮತ್ತು ಒಂದು ಹೆಣ್ಣು ಕೋಣವನ್ನು ಪಡೆದುಕೊಂಡು ಮರಾಠರು ಸಮಾಧಾನಪಟ್ಟುಕೊಳ್ಳಬೇಕಾಯಿತಂತೆ. ಈ ಕಥೆಯ ಮತ್ತಷ್ಟು ಆಳಕ್ಕಿಳಿಯುವುದಾದರೆ ಕುರಿಯಾ ಪ್ರಾಂತ್ಯದಲ್ಲಿ ವಶಪಡಿಸಿಕೊಂಡ ಬಹಳಷ್ಟು ಜಾನುವಾರುಗಳನ್ನು ನಾಲಾಯಕ್ಕೆಂದು ಮರಾಠರು ಮರಳಿ ಕುರಿಯಾದ ಜನತೆಗೇ ಮರಳಿಸಿದ್ದರು. ಕುರಿಯಾ ಪ್ರಾಂತ್ಯವನ್ನು ಗೆದ್ದಿದ್ದರೂ ಯಾವೊಂದು ಲಾಭವನ್ನೂ ಪಡೆಯಲಾಗದ ಮರಾಠರ ಕನಸು ಭಗ್ನವಾಗಿತ್ತು. ಕೊನೆಗೆ ಹಿಂಸಾಚಾರಗಳೂ ಮಿತಿಮೀರಿದಾಗ ಮರಾಠರು ಕುರಿಯಾದಿಂದಲೇ ಹಿಮ್ಮೆಟ್ಟಬೇಕಾಯಿತು.
ಇದು ಸುರ್ಗುಜ ಜಿಲ್ಲೆಯ ಕಥೆ. ಸುರ್ಗುಜ ಪ್ರದೇಶದ ಕಿತ್ತು ತಿನ್ನುವ ದಾರಿದ್ರ್ಯದ ಕಥೆ. ಈಗಲೂ ಇಲ್ಲಿಯ ಪರಿಸ್ಥಿತಿಯೇನೂ ಬದಲಾಗಿಲ್ಲ. ಹೀಗಿದ್ದಾಗ ಸುರ್ಗುಜ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಆನೆಯನ್ನು ಸಾಕುವುದೆಂದರೆ? ಅಷ್ಟು ಹೊತ್ತು ಪ್ರಭುವಿನೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರೂ ನಾವು ಉತ್ತರವನ್ನು ಪಡೆಯುವುದಿರಲಿ, ಉತ್ತರದ ಆಸುಪಾಸಿಗೂ ಸುಳಿದಿರಲಿಲ್ಲ. ಕಥೆಯ ಆರಂಭದಲ್ಲಿ ನಾವುಗಳು ಎಲ್ಲಿದ್ದೆವೋ ಈಗಲೂ ಅಲ್ಲೇ ಇದ್ದೆವು. ಆದರೆ ನಾವೂ ಕೂಡ ಅಷ್ಟು ಸುಲಭವಾಗಿ ಸೋಲೊಪ್ಪುವವರಲ್ಲ. ಛಲಬಿಡದ ತ್ರಿವಿಕ್ರಮನಂತೆ ನಮ್ಮ ಪ್ರಯತ್ನಗಳನ್ನು ನಮ್ಮದೇ ಶೈಲಿಯಲ್ಲಿ ನಾವು ಮುಂದುವರಿಸಿದ್ದೆವು. ವಿನಂತಿಸಿದ್ದಾಯಿತು, ವಾದ ಮಾಡಿದ್ದಾಯಿತು, ಆನೆಯನ್ನು ಸಾಕುವ ದುಬಾರಿ ಜೀವನಕ್ರಮದ ಅವನ ಗುಟ್ಟನ್ನು ತಿಳಿಯಲು ಪ್ರಭುವನ್ನು ಹೊಗಳಿ ಅಟ್ಟಕ್ಕೇರಿಸಿದ್ದೂ ಆಯಿತು. ಪ್ರಭು ಮಹಾಶಯ ಮಹಾಸೌಜನ್ಯದೊಂದಿಗೆ ನಮ್ಮೆಲ್ಲಾ ಪ್ರಶ್ನೆಗಳಿಗೂ ಬಲು ನಾಜೂಕಾಗಿಯೇ ಉತ್ತರಿಸಿದ. ಆದರೆ ಆತನ ನಾಜೂಕುತನ ಅದ್ಯಾವ ಮಟ್ಟಿಗಿತ್ತೆಂದರೆ ಅಷ್ಟು ಮಾತಾಡಿಯೂ ಆತ ಏನನ್ನೂ ಬಾಯಿಬಿಟ್ಟಿರಲಿಲ್ಲ. ಈ ಮಧ್ಯೆ ಪಾರ್ವತಿಯೂ ಕೂಡ ನಮ್ಮನ್ನು ತಮಾಷೆಯಿಂದ ನೋಡುತ್ತಿರುವಂತೆ ನಮಗೆ ಭಾಸವಾಗತೊಡಗಿತ್ತು. ಒಗಟು ಒಗಟಾಗಿಯೇ ಉಳಿದಿತ್ತು.
ಸುಮಾರು ಒಂದು ಘಂಟೆಯ ನಂತರ ಪ್ರಭು ಮತ್ತು ಪಾರ್ವತಿ ಎದ್ದು ಹೊರಟೇಬಿಟ್ಟರು. ನಾನು ಮತ್ತು ದಲೀಪ್ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಸುಮ್ಮನೆ ಅವರಿಬ್ಬರನ್ನೂ ನೋಡುತ್ತಲೇ ಇದ್ದೆವು. ``ಬಹುಷಃ ಯಾವುದೋ ದೇವಾಲಯಕ್ಕೆ ಹೊರಟಿರಬಹುದು'', ಎಂದು ನಾನು ಮೆಲ್ಲನೆ ಉಸುರಿದೆ. ``ಇನ್ಯಾವನ ಗದ್ದೆಯನ್ನು ಲೂಟಿ ಮಾಡಲೋ ಏನೋ'', ಎಂದು ದಲೀಪ್ ಗೊಣಗಿದ.
ಪ್ರಭು ಅದೇನು ಮಾಡುತ್ತಾನೋ ಎಂಬುದನ್ನು ದೇವರೇ ಬಲ್ಲ. ಆದರೆ ಸುಮಾರು ಇನ್ನೂರು ಕೇಜಿಯಷ್ಟು ಹುಲ್ಲು ಮತ್ತು ಪ್ರತ್ಯೇಕವಾಗಿ ಆಹಾರವನ್ನು ಪಾರ್ವತಿಗಾಗಿ ಆತ ದಿನನಿತ್ಯವೂ ಹೊಂದಿಸಬಲ್ಲ ಎಂಬುದಂತೂ ಸತ್ಯ. ಹೇಗೆಂದು ಮಾತ್ರ ಕೇಳಬೇಡಿ!
*
ಪರ್ಬು
ಅಥವಾ
ಪ್ರಭು
ತ್ರಿಮೂರ್ತಿಗಳಲ್ಲೊಬ್ಬನಾದ
ಶಿವನಿಗಿರುವ
ಮತ್ತೊಂದು
ಹೆಸರು
.
ಶಿವನ
ಅರ್ಧಾಂಗಿನಿಯೇ
ಪಾರ್ವತಿ
(
ಪಾರ್ಬತಿ
)
** ನಂತರ ಇದು ಜಾರ್ಖಂಡ್ ರಾಜ್ಯದ ಭಾಗವಾಯಿತು
*** ಸುರ್ಗುಜದ ಜಿಲ್ಲಾ ಹೆಡ್ ಕ್ವಾರ್ಟರ್ಸ್ ಪ್ರಸ್ತುತ ಛತ್ತೀಸ್ ಗಢದಲ್ಲಿದೆ
ಇಲಸ್ಟ್ರೇಷನ್ಸ್
:
ಪ್ರಿಯಾಂಕಾ
ಬೋರಾರ್
ಪ್ರಿಯಾಂಕಾ
ಬೋರಾರ್
ನವಮಾಧ್ಯಮ
ಕಲಾವಿದೆ
ಮತ್ತು
ಸಂಶೋಧಕಿ
.
ಸಂವಾದಾತ್ಮಕ
ಮಾಧ್ಯಮದೆಡೆಗೆ
ಆಸಕ್ತಿಯಿದ್ದರೂ
ಇಲಸ್ಟ್ರೇಷನ್
ಗಳೆಂದರೆ
ಇವರಿಗೆ
ಹೆಚ್ಚಿನ
ಒಲವು
.
ಪ್ರಿಯಾಂಕಾ
ಇತ್ತೀಚೆಗೆ
ಕಾಮಿಕ್ಸ್
ಗಳಲ್ಲೂ
ತನ್ನನ್ನು
ತಾನು
ತೊಡಗಿಸಿಕೊಂಡಿದ್ದಾರೆ
.
ಈ ಲೇಖನದ ಒಂದು ಭಾಗವು ಮೊಟ್ಟಮೊದಲಿಗೆ ಇಂಡಿಯಾ ಮ್ಯಾಗಝೀನಿನಲ್ಲಿ ವಿಭಿನ್ನ ಇಲಸ್ಟ್ರೇಷನ್ ಗಳೊಂದಿಗೆ ಪ್ರಕಟವಾಗಿತ್ತು (1998). ನಂತರ ಕಾಯ್ ಫ್ರೀಸ್ ಸಂಪಾದಿಸಿರುವ ಪೆಂಗ್ವಿನ್ ಪ್ರಕಾಶಕರಿಂದ ಪ್ರಕಟಿತ `ಎಲ್ಸ್ ವೇರ್: ಅನ್ ಯೂಶುವಲ್ ಟೇಕ್ಸ್ ಆನ್ ಇಂಡಿಯಾ' ಕೃತಿಯಲ್ಲೂ ಈ ಲೇಖನವು ಪ್ರಕಟವಾಗಿತ್ತು (ಅಕ್ಟೋಬರ್ 2000).