ಸುಮಾರು ಒಂದು ತಿಂಗಳಿನಿಂದಲೂ ನಿಶಾ ಯಾದವ್‌ ತನ್ನ ಕುಟುಂಬದ ಪಡಿತರಕ್ಕಾಗಿ ಹೆಚ್ಚುವರಿ ಒಂದು ಕಿ.ಮೀ. ದೂರವನ್ನು ಕ್ರಮಿಸುತ್ತಿದ್ದಾರೆ. ನೆರೆಯಲ್ಲಿನ ಕಿರಾಣಿ ಅಂಗಡಿಯು ಅವರಿಗೆ ಯಾವುದೇ ದಿನಸಿಯನ್ನು ಮಾರುತ್ತಿಲ್ಲ. “ಪಾಪಾ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ರಾಜನ್‌ವಾಲಾ, ನಮ್ಮನ್ನು ಆತನ ಅಂಗಡಿಗೆ ಬಿಟ್ಟುಕೊಳ್ಳುತ್ತಿಲ್ಲ”, ಎಂದು ಆಕೆ ತಿಳಿಸಿದರು.

“ನಮ್ಮ ತಂದೆ ಜೂನ್‌ ಕೊನೆಯ ಭಾಗದಲ್ಲಿ ಕೋವಿಡ್-‌೧೯ ರೋಗದಿಂದ ಬಾಧಿತರಾಗಿದ್ದಾಗ್ಯೂ, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ನಾವು ಎರಡು ವಾರಗಳವರೆಗೆ ಸ್ವತಃ ಇತರರಿಂದ ಪ್ರತ್ಯೇಕವಾಗಿದ್ದೆವು. ಪಾಪಾ ಒಂದು ತಿಂಗಳ ಮೊದಲೇ ಗುಣಮುಖರಾಗಿದ್ದರೂ ಅಂಗಡಿಯ ಮಾಲೀಕನು, ನಾವು ಆತನ ಅಂಗಡಿಯನ್ನು ಪ್ರವೇಶಿಸಿದಲ್ಲಿ ವೈರಸ್‌ ಅನ್ನು ಹರಡುತ್ತೇವೆ ಎಂಬುದಾಗಿ ಈಗಲೂ ಹೇಳುತ್ತಿದ್ದಾನೆ. ಹೀಗಾಗಿ ಮಂಡಿಯವರೆಗೂ ಇರುವ ಈ ಮಳೆ ಹಾಗೂ ಪ್ರವಾಹದ ಕಲುಷಿತ ನೀರಿನಲ್ಲಿ ನಮ್ಮಲ್ಲೊಬ್ಬರು ನಡೆದುಕೊಂಡು ಹೋಗಿ, ಸುಮಾರು ಒಂದು ಮೈಲು ದೂರದಲ್ಲಿರುವ ಸಂಬಂಧಿಕರ ಮನೆಯಿಂದ ದಿನಸಿಗಳನ್ನು ತರಬೇಕಾಗಿದೆ”, ಎಂದರು ನಿಶಾ.

ಆರು ವರ್ಷಗಳ ಹಿಂದೆ, ೧೧ನೇ ತರಗತಿಯ ನಂತರ ಶಾಲೆಯನ್ನು ತೊರೆದ 24ರ ವಯಸ್ಸಿನ ನಿಶಾ, ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯ ಹಟ ಬ್ಲಾಕ್‌ನಲ್ಲಿನ ಸೊಹ್ಸ ಮಠಿಯ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಗೋರಖ್‌ಪುರ್‌ ನಗರದಿಂದ ಇದು ಕೇವಲ ೬೦ ಕಿ.ಮೀ. ದೂರದಲ್ಲಿದೆ. ಆಕೆಯ ಹಳ್ಳಿಯು ಮಾನ್ಸೂನ್‌ ಹಾಗೂ ಪ್ರವಾಹದಿಂದ ಹೆಚ್ಚಿನ ತೊಂದರೆಗೀಡಾಗಿದೆ.

“ನಮ್ಮ ಬುಅ-ಫೂಫ (ಚಿಕ್ಕಮ್ಮ-ಚಿಕ್ಕಪ್ಪ) ನಮಗೆಂದು ಆಹಾರ ಸಾಮಗ್ರಿಗಳನ್ನು ಕೊಳ್ಳುತ್ತಾರೆ. ನಂತರದಲ್ಲಿ ನಾವು ಅವರಿಗೆ ಹಣವನ್ನು ಪಾವತಿಸುತ್ತೇವೆ”, ಎಂದು ತಿಳಿಸುವಾಗಲೂ ನಿಶಾ, ಮೂರು-ನಾಲ್ಕು ಬಾರಿ ಸಲ್ವಾರ್‌ನ ಕೆಳಭಾಗವನ್ನು ಮಡಿಸುತ್ತಿದ್ದರು. ಆಕೆಯು ಪ್ರವಾಹದ ನೀರಿನಲ್ಲೇ ಅವರ ಮನೆಗೆ ತೆರಳುತ್ತಿದ್ದರು. ಮನೆಯಲ್ಲಿ ಸಂಜೆಯ ಚಹಾ ತಯಾರಿಸಲು ಸಕ್ಕರೆ ಮುಗಿದುಹೋಗಿತ್ತು.

PHOTO • Jigyasa Mishra

'ಇನ್ನು ನಾವೆಂದಿಗೂ ವ್ಯಾಸಂಗವನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದಿಲ್ಲʼ, ಎನ್ನುತ್ತಾರೆ ಅನುರಾಗ್‌ ಯಾದವ್‌

ಜೂನ್‌ ತಿಂಗಳಲ್ಲಿ ದೆಹಲಿಯಿಂದ ಹಿಂದಿರುಗಿದ ೪೭ರ ವಯಸ್ಸಿನ ಬ್ರಜ್‌ಕಿಶೋರ್‌ ಯಾದವ್‌, ಈ ಕುಟುಂಬದ ಏಕೈಕ ದುಡಿಯುವ ವ್ಯಕ್ತಿ. ಇವರು ಜೀನ್ಸ್‌ಗಳನ್ನು ತಯಾರಿಸುವ ಕಾರ್ಖಾನೆಯ ಉದ್ಯೋಗದಲ್ಲಿದ್ದು, ಮಾಹೆಯಾನ ೨೦,೦೦೦ ರೂ.ಗಳನ್ನು ಗಳಿಸುತ್ತಿದ್ದರು. ನಿಶಾ ಅವರ ಹಿರಿಯ ಮಗಳು. ಹಾವು ಕಚ್ಚಿದ ಕಾರಣ ನಿಶಾಳ ತಾಯಿ ಆರು ವರ್ಷದ ಹಿಂದೆ ಸಾವಿಗೀಡಾದರು. ಆಗಿನಿಂದಲೂ ಆಕೆ ತನ್ನ ಇಬ್ಬರು ಚಿಕ್ಕ ಸಹೋದರರ ನಿಗಾ ವಹಿಸುತ್ತಿದ್ದಾಳೆ. ೧೪ ವರ್ಷ ವಯಸ್ಸಿನ ಪ್ರಿಯಾಂಶು ೮ನೇ ತರಗತಿಯಲ್ಲಿದ್ದು, ೨೦ರ ವಯಸ್ಸಿನ ಅನುರಾಗ್‌ ಎರಡನೇ ವರ್ಷದ ಬಿ.ಎ ವ್ಯಾಸಂಗದಲ್ಲಿ ತೊಡಗಿದ್ದಾರೆ.

ಇವರಿಬ್ಬರೂ ಲಾಕ್‌ಡೌನ್‌ ನಿಂದಾಗಿ ತೊಂದರೆಗೀಡಾಗಿದ್ದಾರೆ. ಎರಡು ಹೊತ್ತಿನ ಊಟವೂ ಖಾತರಿಯಿಲ್ಲದ ಕುಟುಂಬದಲ್ಲಿ ಇವರಿಗೆ ಸ್ಮಾರ್ಟ್‌ಫೋನ್‌ ಮತ್ತು ಆನ್‌ಲೈನ್‌ ಶಿಕ್ಷಣಕ್ಕೆ ಇರುವ ಅವಕಾಶ ಕಡಿಮೆ. ವಲಸೆ ಕಾರ್ಮಿಕರಾದ ಇವರ ತಂದೆಯ ಬಳಿ ಸಾಧಾರಣವಾದ ಸೆಲ್‌ಫೋನ್‌ ಇದೆ. ಇವರಿಬ್ಬರಿಗೂ ಮುಂಬರುವ ಹೊಸ ಶೈಕ್ಷಣಿಕ ದವರ್ಷದ ಶುಲ್ಕವನ್ನು ಪಾವತಿಸುವುದು ಶಕ್ಯವಿಲ್ಲ.

“ಈ ವರ್ಷ ನಾವು ವ್ಯಾಸಂಗ ಮಾಡುವುದಿಲ್ಲ. ನಾವಿನ್ನು ಅದಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯೋಚಿಸುವುದೇ ಇಲ್ಲ. ಬಹುಶಃ ಮುಂದಿನ ವರ್ಷ ಇದು ನಮಗೆ ಸಾಧ್ಯವಾಗಬಹುದು”, ಎನ್ನುತ್ತಾರೆ ಅನುರಾಗ್‌.

“ಪಾಪಾ ಒಂದು ತಿಂಗಳಿಗೆ ನಮಗೆ ೧೨,೦೦೦-೧೩,೦೦೦ ರೂ.ಗಳನ್ನು ಕಳುಹಿಸುತ್ತಿದ್ದರು. ಆದರೆ ಏಪ್ರಿಲ್‌ ನಂತರ ನಾವು ಹೇಗೆ ಬುದುಕುತ್ತಿದ್ದೇವೆಂಬುದನ್ನು ನಾನು ನಿಮಗೆ ವಿವರಿಸಲಾರೆ, ದಿನಕ್ಕೆ ಕೇವಲ ಒಂದು ಹೊತ್ತು ಮಾತ್ರವೇ ಉಣ್ಣುತ್ತಿದ್ದೇವೆ”, ಎನ್ನುತ್ತಾರೆ ನಿಶಾ.

“ಜೂನ್‌ ಕೊನೆಯ ಭಾಗದಲ್ಲಿ ಹಿಂದಿರುಗಿದ ಪಾಪಾ, ವಾಪಸ್ಸು ಬರುವ ವಲಸಿಗರಿಗೆಂದೇ ನಿಗದಿಯಾಗಿದ್ದ  ಪ್ರತ್ಯೇಕ ವಾಸದ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಂಡರು. ಅದು ತ್ವರಿತ (rapid antigen) ತಪಾಸಣೆಯಾಗಿದ್ದು ಪಾಸಿಟಿವ್‌ ಎಂಬುದಾಗಿ ತಿಳಿದುಬಂದಿತು. ಹಾಗಾಗಿ ಅವರನ್ನು ಅಲ್ಲಿಯೇ ಉಳಿಸಿಕೊಳ್ಳಲಾಯಿತು. ಒಂದು ವಾರದ ನಂತರ ನಡೆಸಲಾದ ವಿಸ್ತೃತ [(ಆರ್‌ಟಿಪಿಸಿಆರ್‌ (RT-PCR – reverse transcription-polymerase chain reaction)] ತಪಾಸಣೆಯಲ್ಲಿ ನೆಗೆಟಿವ್‌ ಎಂದು ತಿಳಿದುಬಂದ ಕಾರಣ, ಅವರನ್ನು ಬೇಗನೇ ಅಲ್ಲಿಂದ ವಾಪಸ್ಸು ಕಳುಹಿಸಿದರು. ಅವರು ಈಗ ಆರೋಗ್ಯದಿಂದ ಇದ್ದಾಗ್ಯೂ ಕಳಂಕವು ನಮ್ಮನ್ನು ಬಿಟ್ಟಿಲ್ಲ.”

“ದೆಹಲಿಯಿಂದ ಗೋರಖ್‌ಪುರಕ್ಕೆ ಕರೆತರಲು ಟ್ರಕ್‌ ಚಾಲಕನಿಗೆ ನಾನು ೪,೦೦೦ ರೂ.ಗಳನ್ನು ಪಾವತಿಸಬೇಕಾಯಿತು. ನಂತರ ನನ್ನನ್ನು ಈ ಹಳ್ಳಿಗೆ ಕರೆತಂದ ಬೊಲೆರೋ ವಾಹನದವನಿಗೆ ೧,೦೦೦ ರೂ.ಗಳನ್ನು ನೀಡಿದೆ. ದೆಹಲಿಯ ಸ್ನೇಹಿತರಿಂದ ಪಡೆದಿದ್ದ ೧೦,೦೦೦ ರೂ.ಗಳಿಂದ ಈ ಖರ್ಚುಗಳನ್ನು ಭರಿಸಿದೆ. ಮಕ್ಕಳು ಕೇವಲ ದಾಲ್‌-ರೋಟಿ (ಬೇಳೆ-ರೊಟ್ಟಿ) ಅಥವ ನಮಕ್‌-ಚಾವಲ್‌ (ಉಪ್ಪು-ಅನ್ನ) ತಿನ್ನುತ್ತಿದ್ದುದರಿಂದ ನನಗೆ ಅದರ ಅವ್ಯಕತೆಯಿತ್ತು. ಆದರೆ ನನ್ನ ಬಳಿ ಉಳಿದಿದ್ದ ೫,೦೦೦ ರೂ.ಗಳೂ ಸಹ ಈ ಕೊರೊನಾ ರೋಗದಿಂದಾಗಿ ಖರ್ಚಾಗಿಹೋಯಿತು. ಔಷಧಿಗಳು ಬಹಳ ದುಬಾರಿ. ಗುಣಮುಖನಾದ ನಂತರ ಆಸ್ಪತ್ರೆಯಿಂದ ಮನೆಗೆ ಬರಲು ಆಟೋದವನಿಗೆ ೫೦೦ ರೂ.ಗಳನ್ನು ನೀಡಿದೆ. ಈಗ ನನಗೆ ಕೆಲಸವೂ ಇಲ್ಲ”, ಎಂದರು ಬ್ರಜ್‌ಕಿಶೋರ್‌.

“ನಾನು ದೆಹಲಿಗೆ ಯಾವಾಗ ವಾಪಸ್ಸು ತೆರಳಬಹುದೆಂಬುದನ್ನು ತಿಳಿಸಿ. ಇಲ್ಲಿ, ನೆರೆಹೊರೆಯವರು ನಮಗೆ ಸಹಾಯ ಹಾಗೂ ಬೆಂಬಲವನ್ನು ನೀಡುವ ಬದಲು ನಮ್ಮನ್ನು ಬಹಿಷ್ಕರಿಸಿದ್ದಾರೆ. ಇದರಲ್ಲಿ ನನ್ನ ತಪ್ಪೇನಿದೆ?”, ಎನ್ನುತ್ತಾರೆ ಆತ.

“ಈ ಜಿಲ್ಲೆ ಅಥವ ಹತ್ತಿರದಲ್ಲಿ ಯಾವುದೇ ದೊಡ್ಡ ಕಾರ್ಖಾನೆಗಳಿಲ್ಲ. ಇಲ್ಲದಿದ್ದಲ್ಲಿ ನಾವು ಕುಟುಂಬದಿಂದ ಅಷ್ಟು ದೂರಕ್ಕೆ ತೆರಳಿ, ಹೀಗೆ ಸಂಕಷ್ಟವನ್ನು ಅನುಭವಿಸಬೇಕಿರಲಿಲ್ಲ”, ಎಂದರು ಬ್ರಜ್‌ಕಿಶೋರ್.

*****

ಕೆಲವು ದಿನಗಳಿಂದ ಸೂರಜ್‌ ಕುಮಾರ್‌ ಪ್ರಜಾಪತಿ, ಎಂದಿಗಿಂತಲೂ ಕಡಿಮೆ ನೀರನ್ನು ಕುಡಿಯುತ್ತಿದ್ದಾರೆ. ಪ್ರತ್ಯೇಕ ವಾಸದ ಕೇಂದ್ರದಲ್ಲಿನ ಅನಾರೋಗ್ಯಕರ ಪರಿಸ್ಥಿತಿಗಳಿಂದಾಗಿ ಕೋವಿಡ್‌-೧೯ನಿಂದ ಗುಣಮುಖರಾದಾಗ್ಯೂ, ಇತರೆ ಖಾಯಿಲೆಗಳಿಗೀಡಾಗಬಹುದೆಂದು ಇವರು ಭಯಪಡುತ್ತಾರೆ. “ನೀರು ಕುಡಿಯಲು ಯೋಗ್ಯವಾಗಿಲ್ಲ. ತೊಳೆಮರಿಗೆ (sink) ಹಾಗೂ ನಲ್ಲಿಗಳು ಪಾನ್‌-ಗುಟ್ಕಾ ಉಗುಳಿನಿಂದ ಆವರಿಸಿವೆ. ನೀವು ಅದನ್ನು ನೋಡಿದಲ್ಲಿ ನೀರು ಕುಡಿಯುವುದಕ್ಕೆ ಬದಲಾಗಿ ಬಾಯಾರಿಕೆಯಲ್ಲೇ ಉಳಿಯಲು ಬಯಸುತ್ತೀರಿ”, ಎಂದರವರು.

ಸರ್ಕಾರಿ ವೈದ್ಯಕೀಯ ಶಿಬಿರದಲ್ಲಿನ ತಪಾಸಣೆಯಲ್ಲಿ ಕೋವಿಡ್‌-೧೯ ಪಾಸಿಟಿವ್‌ ಎಂದು ತಿಳಿದುಬಂದ ಕಾರಣ, ಸೂರಜ್‌ ಪ್ರತ್ಯೇಕ ವಾಸದಲ್ಲಿದ್ದ (quarantine) ಉತ್ತರ ಪ್ರದೇಶದ ಸಂತ ಕಬೀರ್‌ ನಗರ್‌ ಜಿಲ್ಲೆಯ ಖಲಿಯಾಬಾದ್‌ ಬ್ಲಾಕ್‌ನ ಸೇಂಟ್‌ ಥಾಮಸ್‌ ಶಾಲೆಯು ‘ಇಲ್ಲಿದೆ.’ ಬಿ.ಎ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಇವರು, ಹೆಚ್ಚಾಗಿ ಕೆಮ್ಮಲು ಆರಂಭಿಸಿದ ಕಾರಣ, ಸ್ವತಃ ತಪಾಸಣೆಗೆ ಒಳಗಾಗಿದ್ದರು.

“ನನ್ನ ತಂದೆ ತಾಯಿ, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಖಲಿಯಾಬಾದ್‌ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. (ಈತನಿಗಿಂತಲೂ ಚಿಕ್ಕ ವಯಸ್ಸಿನ ಸಹೋದರ, ಸಹೋದರಿಯರು ಸರ್ಕಾರಿ ಶಾಲೆಯಲ್ಲಿ ಓದುತ್ತಾರೆ.) ನನ್ನ ತಂದೆ ಚೌರಾಹದಲ್ಲಿ ಚಹ ಹಾಗೂ ಪಕೋಡ ಮಾರುತ್ತಾರೆ. ಕಳೆದ ಕೆಲವು ತಿಂಗಳಿನಿಂದ ಇವರ ಸಂಪಾದನೆ ಅತ್ಯಂತ ಕಡಿಮೆ. ಯಾರೂ ಬೀದಿಗಿಳಿಯುತ್ತಿಲ್ಲ. ಹಾಗಾಗಿ ಅದನ್ನು ಯಾರು ಕೊಳ್ಳುತ್ತಾರೆ? ಜುಲೈನಲ್ಲಿ ಸ್ವಲ್ಪಮಟ್ಟಿನ ಮಾರಾಟವು ಪ್ರಾರಂಭವಾಗಿತ್ತಾದರೂ, ಬಹಳ ಕಡಿಮೆ ಪ್ರಮಾಣದಲ್ಲಿತ್ತು. ಲಾಕ್‌ಡೌನ್‌ ದೆಸೆಯಿಂದಾಗಿ, ಶನಿವಾರ ಮತ್ತು ಭಾನುವಾರಗಳಂದು ಮಾರಾಟವಿಲ್ಲ. (ಆ ದಿನಗಳಂದು ಅವಶ್ಯಕವಲ್ಲದ ವಸ್ತುಗಳ ವ್ಯಾಪಾರವನ್ನು ನಿಲ್ಲಿಸಲು ಸರ್ಕಾರವು ಆದೇಶಿಸಿದೆ.) ಪ್ರತಿದಿನ ಖನಿಜಯುಕ್ತ ನೀರಿನ (ಮಿನರಲ್‌ ವಾಟರ್‌) ಬಾಟಲಿಯನ್ನು ಕಳುಹಿಸುವಂತೆ ನಾನು ತಂದೆಯನ್ನು ಕೇಳಲಾರೆ”, ಎನ್ನುತ್ತಾರೆ ಸೂರಜ್.

Sooraj Prajapati (left), in happier times. Now, he says, 'Food is not a problem here [at the government medical centre], but cleanliness definitely is'
PHOTO • Courtesy: Sooraj Prajapati
Sooraj Prajapati (left), in happier times. Now, he says, 'Food is not a problem here [at the government medical centre], but cleanliness definitely is'
PHOTO • Sooraj Prajapati
Sooraj Prajapati (left), in happier times. Now, he says, 'Food is not a problem here [at the government medical centre], but cleanliness definitely is'
PHOTO • Sooraj Prajapati

ನೆಮ್ಮದಿಯ ದಿನಗಳಲ್ಲಿ ಪ್ರಜಾಪತಿ (ಎಡಕ್ಕೆ). ಈಗ ಇಲ್ಲಿ (ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ) ಊಟಕ್ಕೆ ಕೊರತೆಯಿಲ್ಲ. ಆದರೆ ನಿಜಕ್ಕೂ ಸ್ವಚ್ಛತೆಯ ಸಮಸ್ಯೆಯಿದೆ ಎನ್ನುತ್ತಾರವರು

ಕೋವಿಡ್‌-೧೯ರ ‘ತ್ವರಿತʼ (rapid antigen) ತಪಾಸಣೆಯಲ್ಲಿ ಪಾಸಿಟಿವ್‌ ಎಂದು ತಿಳಿದುಬಂದ ಕಾರಣ, ಸೂರಜ್‌ ಹಾಗೂ ಇತರೆ ೮೦ ಜನರು ಶಾಲೆಯಲ್ಲಿ ಪ್ರತ್ಯೇಕ ವಾಸಕ್ಕೆ ಒಳಗಾದರು. ಇತರೆ ಏಳು ಜನರೊಂದಿಗೆ ಇವರು ೨೫ ಅಡಿ ಉದ್ದ ಹಾಗೂ ೧೧ ಅಡಿ ಅಗಲವಿರುವ ರೂಮನ್ನು ಹಂಚಿಕೊಂಡಿದ್ದಾರೆ.

“ಮುಂಜಾನೆ ೭ ಗಂಟೆಗೆ ಉಪಹಾರಕ್ಕೆಂದು ನಮಗೆ ಚಹ ಹಾಗೂ ಬ್ರೆಡ್‌ ಪಕೋಡ ನೀಡಲಾಗುತ್ತದೆ. ನಂತರ ಮಧ್ಯಾಹ್ನ ೧ ಗಂಟೆಗೆ ದಾಲ್‌-ರೋಟಿ ಅಥವ ಅನ್ನವನ್ನು ನೀಡುತ್ತಾರೆ. ನಾವಿನ್ನೂ ತರುಣರಾದ ಕಾರಣ, ನಮಗೆ ಇದಕ್ಕೂ ಮೊದಲೇ ಹಸಿವಾಗುತ್ತದೆ ಎಂದು ನಕ್ಕ ಅವರು, ಮತ್ತೆ, ಸಂಜೆಯ ಸಮಯಕ್ಕೆ ನಮಗೆ ಚಹ ಮತ್ತು ೭ ಗಂಟೆಗೆ ರಾತ್ರಿಯ ಊಟಕ್ಕೆ ದಾಲ್‌ ರೋಟಿ ದೊರೆಯುತ್ತದೆ. ಊಟಕ್ಕೆ ಇಲ್ಲಿ ಸಮಸ್ಯೆಯಿಲ್ಲ. ಸ್ವಚ್ಛತೆಯ ಸಮಸ್ಯೆಯಂತೂ ಖಂಡಿತವಾಗಿಯೂ ಇದೆ”, ಎಂದು ತಿಳಿಸಿದರು.

ಶಾಲೆಯ ಬಹುತೇಕ ಕೊಠಡಿಗಳ ಹೊರಗೆ ಕಸದ ರಾಶಿಯಿದೆ. ಓಣಿಯು; ಅಲ್ಲಿನ ಜನರಿಗೆ ನೀಡಿದ ಆಹಾರದ ಪೆಟ್ಟಿಗೆಗಳು, ಮಿಕ್ಕ ಪದಾರ್ಥಗಳು, ಅನುಪಯುಕ್ತ ವಸ್ತುಗಳು, ಕಧಾ (ಗಿಡಮೂಲಿಕೆ-ಮಸಾಲೆಯೊಂದಿಗೆ ಕುದಿಸಿದ ನೀರು) ನೀಡಲು ಬಳಸಲಾದ ಬಿಸಾಡುವ (disposable) ಲೋಟಗಳು ಹಾಗೂ ಚಹದಿಂದ ತುಂಬಿರುತ್ತದೆ. ಕಳೆದ ಎಂಟು ದಿನಗಳಲ್ಲಿ ಒಮ್ಮೆಯೂ ಯಾರಾದರೂ ಇಲ್ಲಿ ಕಸ ಗುಡಿಸಿದ್ದನ್ನು ನಾನು ನೋಡಿಲ್ಲ. ಹೊಲಸು ತುಂಬಿದ ಶೌಚಾಲಯವನ್ನು ಬಳಸುವಾಗ ನಾವು ಮೂಗು ಮುಚ್ಚಿಕೊಳ್ಳುತ್ತೇವೆ. ಈ ಇಡೀ ಪ್ರತ್ಯೇಕ ವಾಸದ ಕೇಂದ್ರದಲ್ಲಿ ೫-೬ ಮೂತ್ರಸ್ಥಾನಗಳನ್ನೊಳಗೊಂಡ ಕೇವಲ ಒಂದು ಶೌಚಾಲಯವಿದೆ. ಇಲ್ಲಿ ಹೆಂಗಸರಿಲ್ಲದ ಕಾರಣ, ಅವರ ಶೌಚಾಲಯವನ್ನು ಮುಚ್ಚಲಾಗಿದೆ. ಕೆಲವೊಮ್ಮೆ ನನಗೆ ವಾಂತಿಮಾಡುವಂತಾಗುತ್ತದೆ ಎನ್ನುತ್ತಾರೆ ಆತ.

“ಸಹಾಯಕರಿಗೆ ನಾವು ದೂರು ಸಲ್ಲಿಸುತ್ತೇವಾದರೂ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಅವರನ್ನು ರೇಗಿಸುತ್ತಿದ್ದೇವೆಯೋ ಎಂದು ಭಯವಾಗುತ್ತದೆ. ದೂರುತ್ತೇವೆಂಬ ಕಾರಣಕ್ಕೆ ನಮಗೆ ಕೊಡುವ ಆಹಾರವನ್ನು ಅವರು ನಿಲ್ಲಿಸಿದರೆ? ಜೈಲುಗಳು ಹೀಗೆಯೇ ಇರಬಹುದೆಂಬುದು ನನ್ನ ಊಹೆ. ನಾವು ಯಾವುದೇ ಅಪರಾಧವನ್ನೆಸಗಿಲ್ಲ”, ಎನ್ನುತ್ತಾರೆ ಸೂರಜ್‌.

******

ಕಾನ್ಪುರ್‌ ಜಿಲ್ಲೆಯ ಘಾಟಂಪುರ್‌ ಬ್ಲಾಕ್‌ನ ತನ್ನ ಮನೆಯ ಮುಂದೆ ನಿಂತ ಇಡ್ಡನ್‌, ತನ್ನ ಕೋವಿಡ್‌-೧೯ ತಪಾಸಣೆಯ ವೈದ್ಯಕೀಯ ವರದಿಯಲ್ಲಿ ನೆಗೆಟಿವ್‌ ಎಂದಿರುವುದನ್ನು ಕೋಪದಿಂದ ತೋರಿಸುತ್ತಾರೆ.

ಏಪ್ರಲ್‌ ೨೭ರಂದು ೫೦ ವರ್ಷದ ತನ್ನ ಪತಿ ಹಾಗೂ ೩೦ ವರ್ಷದ ತನ್ನ ಮಗನೊಂದಿಗೆ ಈಕೆಯು  ಗುಜರಾತ್‌ನ ಸೂರತ್‌ನಿಂದ ಪಾದ್ರಿ ಲಾಲ್‌ಪುರ್‌ ಎಂಬ ಸಣ್ಣ ಹಳ್ಳಿಯಲ್ಲಿನ ತಮ್ಮ ಮನೆಗೆ ಹಿಂದಿರುಗಿದರು. ಆಗಿನಿಂದಲೂ ಆಕೆಗೆ ಒಂದು ರೂಪಾಯಿಯನ್ನೂ ಸಂಪಾದಿಸಲು ಸಾಧ್ಯವಾಗಿಲ್ಲ. “ಮೂರು ದಿನಗಳು ಹಾಗೂ ಎರಡು ರಾತ್ರಿಗಳನ್ನೊಳಗೊಂಡ ಸುಮಾರು ೧,೨೦೦ ಕಿ.,ಮೀ ದೂರದ ಮರು ಪ್ರಯಾಣವು ಬಹಳ ತ್ರಾಸದಾಯಕವಾಗಿತ್ತು. ತೆರೆದ ಟ್ರಕ್‌ವೊಂದರಲ್ಲಿ ೪೫ ಜನರು ಕಿಕ್ಕಿರಿದು ತುಂಬಿದ್ದರು. ಆದರೆ, ವಾಪಸ್ಸು ಬರಲು ನಾವು ತೆಗೆದುಕೊಂಡ ನಿರ್ಧಾರವು ಕೆಟ್ಟ ನಿರ್ಧಾರವಾಗಿತ್ತು. ಒಂಭತ್ತು ವರ್ಷಗಳಿಂದಲೂ ನಾವು ನೂಲಿನ ಕಾರ್ಖಾನೆಯೊಂದರ ಉದ್ಯೋಗದಲ್ಲಿದ್ದೆವು. ಉತ್ತರ ಪ್ರದೇಶದಲ್ಲಿ ಕೃಷಿ ಕಾರ್ಮಿಕರಾಗಿ ಅವರ ಸಂಪಾದನೆಯು ಬಹಳ ಕಡಿಮೆಯಿದ್ದ ಕಾರಣ, ಇವರು ಅಲ್ಲಿಂದ ತೆರಳಿದ್ದರು.”

ಬಹುಶಃ ಹೊರಗಿನ ಗೋಡೆಗಳಿಗೆಂದಿಗೂ ಗಾರೆಯ ಲೇಪವನ್ನೇ ಕಾಣದ ತಿಳಿ ನೀಲಿ ಬಣ್ಣದ ಮನೆಯ ಹೊರಗೆ ಆಕೆ ನಿಂತಿದ್ದರು. ಆವೇಶ ಹಾಗೂ ವ್ಯಥೆಯಿಂದ ಕೂಡಿದ ಇಡ್ಡನ್‌ ಅವರ ಧ್ವನಿಯನ್ನು ಕೇಳಿದ An angry Iddan waves her medical reports outside her home
ಕೆಲವು ಮಕ್ಕಳು ನಮ್ಮನ್ನು ಸುತ್ತುವರಿದಿದ್ದರು.

An angry Iddan waves her medical reports outside her home
PHOTO • Jigyasa Mishra

ಕೋಪಗೊಂಡಿದ್ದ ಇಡ್ಡನ್‌, ಮನೆಯ ಹೊರಗಡೆ ಆಕೆಯ ವೈದ್ಯಕೀಯ ವರದಿಗಳನ್ನು ತೋರಿಸುತ್ತಾ

‘ನಾವು ಮುಸ್ಲಿಮರು, ಹೀಗಾಗಿ ನಮ್ಮನ್ನು ವಾಪಸ್ಸು ಕಳುಹಿಸಲಾಗುತ್ತಿದೆ. ನಮ್ಮ ಧರ್ಮದವರಲ್ಲದ ಇತರರಿಗೆ ಕೆಲಸವು ದೊರೆಯುತ್ತಿದೆ. ಇತ್ತೀಚೆಗೆ ನನ್ನ ಮಗನಿಗೆ ಕ್ಷೌರದ ಅಂಗಡಿಯಲ್ಲಿ ಕ್ಷೌರವನ್ನು ನಿರಾಕರಿಸಲಾಯಿತು. ‘ನಿಮ್ಮಂಥ ಜನರೇ’ ಕೊರೊನಾ ವೈರಸ್‌ಗಳನ್ನು ಹರಡುತ್ತಿರುವುದು ಎಂಬುದಾಗಿ ಆತನಿಗೆ ಹೇಳಲಾಯಿತು.

“ಸೂರತ್‌ನಲ್ಲಿ ಒಂದು ಕೋಣೆಯ ವ್ಯವಸ್ಥೆಯಿದ್ದ ವಸತಿಯೊಂದನ್ನು ನಾವು ೪,೦೦೦ ರೂ.ಗಳ ಬಾಡಿಗೆಗೆ ಪಡೆದಿದ್ದೆವು. ಕಾರ್ಖಾನೆಯಲ್ಲಿ ನಾವು ತಲಾ ೮,೦೦೦ ರೂ.ಗಳನ್ನು ಗಳಿಸುತ್ತಿದ್ದು, ಒಟ್ಟಾರೆ ೨೪,೦೦೦ ರೂ.ಗಳನ್ನು ಸಂಪಾದಿಸುತ್ತಿದ್ದೆವು. ವಾಪಸ್ಸು ಬಂದ ನಂತರ ೨,೪೦೦ ರೂ.ಗಳ ಸಂಪಾದನೆಯೂ ಇಲ್ಲವಾಗಿದೆ”, ಎಂದರಾಕೆ.

“ಈ ಋತುವಿನ ಸೂಕ್ತ ದಿನಗಳಲ್ಲಿ ಕೃಷಿ ಕೆಲಸಕ್ಕೆ ೧೭೫-೨೦೦ ರೂ.ಗಳು ದೊರೆಯುತ್ತವೆ. ಆದರೆ ಈ ಕೆಲಸವು ೩೬೫ ದಿನಗಳಲ್ಲೂ ಲಭ್ಯವಿರುವುದಿಲ್ಲ. ಹೀಗಾಗಿ ಕೂಲಿಯು ಇನ್ನೂ ಕಡಿಮೆಯಿದ್ದ ಸಂದರ್ಭದಲ್ಲಿ ನಾವು ಹಲವು ವರ್ಷಗಳ ಹಿಂದೆ ಸೂರತ್‌ಗೆ ತೆರಳಿದ್ದೆವು.”

೫೦ರ ಮಧ್ಯವಯಸ್ಸಿನ ಆತ್ಮವಿಶ್ವಾಸದಿಂದ ಕೂಡಿದ ಇಡ್ಡನ್‌, “ತನಗೆ ಯಾವುದೇ ಕೊನೆಯ ಹೆಸರಿಲ್ಲವೆಂದೂ (last name), ಎಲ್ಲ ದಾಖಲಾತಿಗಳಲ್ಲೂ ತನ್ನ ಹೆಸರನ್ನು ಇಡ್ಡನ್‌ ಎಂತಲೇ ಬರೆಯುತ್ತಿರುವುದಾಗಿಯೂ ತಿಳಿಸಿದರು.”

ಮೇ ಮೊದಲ ವಾರದಲ್ಲಿ ವಾಪಸ್ಸಾಗುತ್ತಿರುವ ವಲಸೆಗಾರರಿಗೆ ಸರ್ಕಾರಿ ಶಾಲೆಯೊಂದರಲ್ಲಿ ಕಡ್ಡಾಯವಾಗಿ ನಡೆಸಲಾದ ತಪಾಸಣೆಯ ನಂತರ ತನ್ನ ಪತಿಯು ಕೋವಿಡ್‌-೧೯ ರೋಗಕ್ಕೀಡಾಗಿರುವುದಾಗಿ ತಿಳಿದುಬಂದಿತೆಂದು ತಿಳಿಸಿದ ಆಕೆ, ಆತನ ಹೆಸರನ್ನು ಹೇಳಲಿಚ್ಛಿಸಲಿಲ್ಲ. “ಆಗಿನಿಂದಲೂ ಜೀವನವು ನರಕವೆನಿಸಿಬಿಟ್ಟಿದೆ”, ಎಂದು ಆಕೆ ನಿಡುಸುಯ್ದರು.

“ಅವರು ವೈರಸ್‌ನಿಂದ ಬಾಧಿತರಾಗಿರುವುದು ನಮ್ಮನ್ನು ಒತ್ತಡಕ್ಕೀಡುಮಾಡಿತ್ತಾದರೂ, ನಿಜವಾದ ಸಮಸ್ಯೆಯು ಪ್ರಾರಂಭವಾಗಿದ್ದು ಅವರು ಗುಣಮುಖರಾದ ನಂತರ. ನನ್ನ ಮಗ ಹಾಗೂ ಪತಿಯು ಕೃಷಿ ಕಾರ್ಮಿಕರಾಗಿ ಕೆಲಸವನ್ನು ಅರಸಿ ಹೋದಾಗ, ಭೂಮಾಲೀಕರು ವೈರಸ್ಸನ್ನು ಹರಡುತ್ತಿದ್ದೀರೆಂಬುದಾಗಿ ಬೆದರಿಸಿದರು. ಒಬ್ಬ ಮಾಲೀಕನಂತೂ ಆತನ ಹೊಲಕ್ಕೆ ನಾವು ಕಾಲಿಡಬಾರದೆಂದು ಎಚ್ಚರಿಸಿದ್ದಲ್ಲದೆ, ಇತರೆ ಭೂಮಾಲೀಕರಿಗೆ ನಮಗೆ ಯಾವುದೇ ಕೆಲಸವನ್ನು ನೀಡಬಾರದೆಂತಲೂ ತಿಳಿಸಿದನು.

“ನಾವು ಮುಸ್ಲಿಮರು. ಹಾಗಾಗಿ ನಮ್ಮನ್ನು ಹೊರಗೆ ಕಳುಹಿಸಲಾಗುತ್ತಿದೆ. ನಮ್ಮ ಧರ್ಮದವರಲ್ಲದವರಿಗೆ ಕೆಲಸವು ದೊರೆಯುತ್ತಿದೆ. ಇತ್ತೀಚೆಗೆ ನನ್ನ ಮಗನಿಗೆ ಕ್ಷೌರದ ಅಂಗಡಿಯಲ್ಲಿ ಕ್ಷೌರವನ್ನು ನಿರಾಕರಿಸಲಾಯಿತು. ‘ನೀವುಗಳುʼ ಕೊರೊನಾ ವೈರಸ್‌ನ ವಾಹಕರು ಎಂಬುದಾಗಿ ಆತನಿಗೆ ತಿಳಿಸಲಾಯಿತು”, ಎಂದರು ಆಕೆ.

ಇಡ್ಡನ್‌ ಅವರ ಪತಿಗೆ ಸರ್ಕಾರಿ ಶಿಬಿರವೊಂದರಲ್ಲಿ ಮತ್ತೊಮ್ಮೆ ನಡೆಸಲಾದ ತಪಾಸಣೆಯಲ್ಲಿ ನೆಗೆಟಿವ್‌ ಎಂಬುದಾಗಿ ತಿಳಿದುಬಂದಿತು. ಆಕೆ ದಾಖಲೆಯೊಂದನ್ನು ತೋರಿಸುತ್ತ, “ನೋಡಿ, ಈ ಹೆಸರುಗಳನ್ನು ಓದಿರಿ. ನನಗೆ ಇಂಗ್ಲಿಷ್‌ ಬರುವುದಿಲ್ಲ. ಆದರೆ ವೈದ್ಯರು ನಾವೆಲ್ಲರೂ ಈಗ ಆರೋಗ್ಯದಿಂದಿರುವುದಾಗಿ ಹೇಳಿದರೆಂಬುದು ನನಗೆ ತಿಳಿದಿದೆ. ಹಾಗಿದ್ದಲ್ಲಿ ಈ ತಾರತಮ್ಯವೇಕೆ?”, ಎಂದರು.

ಈ ಕಠಿಣ ಸಂದರ್ಭವನ್ನು ನಿಭಾಯಿಸಲು ಇಡ್ಡನ್‌, ತನ್ನ ನಾದಿನಿ/ಅತ್ತಿಗೆಯಿಂದ ೨೦,೦೦೦ ರೂ.ಗಳನ್ನು ಪಡೆದಿದ್ದರು. “ಆಕೆಯು ಸ್ಥಿತಿವಂತರ ಮನೆಯಲ್ಲಿ ಮದುವೆಯಾಗಿದ್ದಾಳೆ. ಆದರೆ ನಾನು ಈ ಹಣವನ್ನು ಯಾವಾಗ ವಾಪಸ್ಸು ನೀಡುತ್ತೇನೆಂಬುದು ತಿಳಿಯದಾಗಿದೆ. ಬಹುಶಃ ನಾವು ನೂಲಿನ ಕಾರ್ಖಾನೆಗೆ ಮರಳಿ ಕೆಲಸಕ್ಕೆ ತೆರಳಿದಾಗ ಇದು ಸಾಧ್ಯವಾಗಬಹುದು.”

ಆ ಸಾಲಕ್ಕೆ ಬಡ್ಡಿಯೆಷ್ಟು? “ಬಡ್ಡಿ? ನನಗೆ ಗೊತ್ತಿಲ್ಲ. ನಾನು ಆಕೆಗೆ ೨೫,೦೦೦ ರೂ.ಗಳನ್ನು ವಾಪಸ್ಸು ನೀಡಬೇಕು.”

ಇಡ್ಡನ್‌ ಸೂರತ್‌ಗೆ ವಾಪಸ್ಸು ತೆರಳಲು ಇನ್ನಷ್ಟು ದಿನ ಕಾಯಲಾರರು.

ಸ್ವತಂತ್ರ ಪತ್ರಿಕೋದ್ಯಮಕ್ಕೆ ಥಾಕುರ್‌ ಫ್ಯಾಮಿಲಿ ಫೌಂಡೇಶನ್‌ ವತಿಯಿಂದ ನೀಡಲಾಗುವ ಅನುದಾನದ ಸಹಾಯದಿಂದ, ಜಿಗ್ಯಸ ಮಿಶ್ರ ಅವರು, ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕರ ಸ್ವಾತಂತ್ರ್ಯವನ್ನು ಕುರಿತ ವರದಿಗಳನ್ನು ನೀಡುತ್ತಾರೆ. ಈ ವರದಿಯು ಒಳಗೊಂಡಿರುವ ವಿಷಯಗಳನ್ನು ಕುರಿತಂತೆ ಥಾಕುರ್‌ ಫ್ಯಾಮಿಲಿ ಫೌಂಡೇಶನ್‌ಗೆ ಯಾವುದೇ ಸಂಪಾದಕೀಯ ನಿಯಂತ್ರಣವಿರುವುದಿಲ್ಲ.

ಅನುವಾದ: ಶೈಲಜ ಜಿ. ಪಿ.

Jigyasa Mishra

Jigyasa Mishra is an independent journalist based in Chitrakoot, Uttar Pradesh.

Other stories by Jigyasa Mishra
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.