ಅದು ಮಹಾರಾಷ್ಟ್ರದ ಉಲ್ಲಾಸ ನಗರ ತಾಲ್ಲೂಕು, ಅಲ್ಲಿ ಅಂದಿನ ಮಧ್ಯಾಹ್ನ ಆಗಷ್ಟೇ ಹನಿ ಮಳೆ ಬಂದು ನಿಂತಿತ್ತು.
ಥಾಣೆ ಜಿಲ್ಲೆಯ ಉಲ್ಲಾಸ್ ನಗರದ ಸೆಂಟ್ರಲ್ ಆಸ್ಪತ್ರೆಯ ಪ್ರವೇಶದ್ವಾರದವರೆಗೆ ಆಟೋ ರಿಕ್ಷಾ ಮೂಲಕ ಬಂದ ಜ್ಞಾನೇಶ್ವರ ಅಲ್ಲಿ ಕೆಂಪು ಬೆತ್ತದ ಸಹಾಯದಿಂದ ರಿಕ್ಷಾ ಬಿಟ್ಟು ಇಳಿಯುತ್ತಾರೆ. ಅವರ ಪತ್ನಿ ಅರ್ಚನ ಗಂಡನ ಹಿಂದೆಯೇ ಬಂದು ಅವರ ಭುಜವನ್ನು ಹಿಡಿದು ನಡೆಯಲು ಆಸರೆಯಾದರು.ನಂತರ ಮೆಲ್ಲನೆ ಚಪ್ಪಲಿ ಕಾಲಿನಲ್ಲಿ ಕಾಲಡಿಯಿದ್ದ ಕೆಸರು ನೀರನ್ನು ಚಿಮ್ಮತ್ತಾ ಮುಂದೆ ನಡೆಯತೊಡಗಿದರು.
ಅಲ್ಲಿಂದ ಹೊರಡುವ ಮೊದಲು ಜ್ಞಾನೇಶ್ವರ ತನ್ನ ಕಿಸೆಯಿಂದ 500 ರೂಪಾಯಿಗಳ ಎರಡು ನೋಟನ್ನು ಹೊರತೆಗೆದು ಅದರಲ್ಲಿ ಒಂದನ್ನು ಆಟೋರಿಕ್ಷಾದವನಿಗೆ ಕೊಟ್ಟರು. ಆತ ತನ್ನ ಕಿಸೆಯಿಂದ ಚಿಲ್ಲರೆ ತೆಗದುಕೊಟ್ಟ. ಅದನ್ನು ಮುಟ್ಟಿ ನೋಡಿದ ಜ್ಞಾನೇಶ್ವರ “ಐದು ರೂಪಾಯಿ,” ಎನ್ನುತ್ತಾ ಅದು ಬೀಳದಂತೆ ಜಾಗ್ರತೆ ವಹಿಸುತ್ತಾ ಜೇಬಿಗಿಳಿಸಿದರು. ಈ 33 ವರ್ಷದ ವ್ಯಕ್ತಿ ಅವರ ಮೂರನೇ ವರ್ಷದಲ್ಲಿ ಕಾರ್ನಿಯಲ್ ಹುಣ್ಣಿನಿಂದ ದೃಷ್ಟಿ ಕಳೆದುಕೊಂಡರು.
ಅಂಬರನಾಥ ತಾಲ್ಲೂಕಿನ ವಂಗನಿ ಪಟ್ಟಣದಲ್ಲಿರುವ ಅವರ ಮನೆಯಿಂದ 25 ಕಿಲೋಮೀಟರ್ ದೂರದಲ್ಲಿರುವ ಉಲ್ಲಾಸ್ ನಗರ್ ಆಸ್ಪತ್ರೆಗೆ ತಲುಪಲು ಅವರಿಗೆ ಒಂದು ಬದಿಯ ದಾರಿಗೆ ರಿಕ್ಷಾ ಬಾಡಿಗೆ 480-520 ರೂ. ತಗಲುತ್ತದೆ. ಈ ಆಸ್ಪತ್ರೆಗೆ ಅವರು ಅರ್ಚನಾ ಅವರಿಗೆ ಡಯಾಲಿಸಿಸ್ ಮಾಡಿಸುವ ಸಲುವಾಗಿ ಬರುತ್ತಾರೆ. “ಈ ಬಾರಿ ಆಸ್ಪತ್ರೆಗೆ ಬರುವ ದಾರಿ ಖರ್ಚಿಗಾಗಿ ಸ್ನೇಹಿತನೊಬ್ಬನಿಂದ 1,000 ರೂಪಾಯಿಗಳನ್ನು ಸಾಲವಾಗಿ ಪಡೆದೆ,” ಎನ್ನುತ್ತಾರೆ ಜ್ಞಾನೇಶ್ವರ್. “ಪ್ರತಿ ಬಾರಿಯೂ (ಆಸ್ಪತ್ರೆಗೆ ಬರಲು ಹೀಗೆ ಸಾಲ ಮಾಡಬೇಕಾಗುತ್ತದೆ.” ಎಂದ ಜ್ಞಾನೇಶ್ವರ್ ಪತ್ನಿಯೊಡನೆ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಡಯಾಲಿಸಿಸ್ ಕೊಠಡಿಯ ಕಡೆಗೆ ಜಾಗರೂಕತೆಯಿಂದ ನಡೆಯಲು ಪ್ರಾರಂಭಿಸಿದರು.
ಭಾಗಶಃ ಅಂಧರಾಗಿರುವ ಅರ್ಚನಾ ಈ ವರ್ಷದ ಮೇ ತಿಂಗಳಲ್ಲಿ ಮುಂಬೈನ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯಲ್ಲಿ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಯಿತು. "ಅವಳ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ" ಎಂದು ಜ್ಞಾನೇಶ್ವರ್ ಹೇಳುತ್ತಾರೆ; 28 ವರ್ಷದ ಅರ್ಚನಾರಿಗೆ ವಾರಕ್ಕೆ ಮೂರು ಬಾರಿ ಹಿಮೋಡಯಾಲಿಸಿಸ್ ಮಾಡಿಸಬೇಕು.
"ಮೂತ್ರಪಿಂಡಗಳು ದೇಹದ ಅತ್ಯಗತ್ಯ ಅಂಗಗಳಾಗಿವೆ - ಅವು ನಿಮ್ಮ ದೇಹದಿಂದ ತ್ಯಾಜ್ಯ ಮತ್ತು ದೇಹದಲ್ಲಿನ ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ಅವು ವಿಫಲವಾದಾಗ, ಒಬ್ಬ ವ್ಯಕ್ತಿಯು ಜೀವಂತವಾಗಿರಲು ಡಯಾಲಿಸಿಸ್ ಅಥವಾ ಕಸಿಯ ಅಗತ್ಯವಿದೆ," ಎಂದು ಉಲ್ಲಾಸನಗರದ ಕೇಂದ್ರೀಯ ಆಸ್ಪತ್ರೆಯ ನೆಫ್ರಾಲಜಿಸ್ಟ್ ಡಾ. ಹಾರ್ದಿಕ್ ಶಾ ಹೇಳುತ್ತಾರೆ. ಪ್ರತಿ ವರ್ಷ, ಭಾರತವು ಕೊನೆಯ ಹಂತದ ಮೂತ್ರಪಿಂಡ ಕಾಯಿಲೆ (ಇಎಸ್ಆರ್‌ಡಿ) ಯ ಸುಮಾರು 2.2 ಲಕ್ಷ ಹೊಸ ರೋಗಿಗಳನ್ನು ವರದಿ ಮಾಡುತ್ತದೆ, ಇದು 3.4 ಕೋಟಿ ಡಯಾಲಿಸಿಸ್ ಪ್ರಕ್ರಿಯೆಗಳಿಗೆ ಹೆಚ್ಚುವರಿ ಬೇಡಿಕೆಯನ್ನು ಸೃಷ್ಟಿಸುತ್ತದೆ.









