ಚಂಪತ್ ನಾರಾಯಣ್ ಜಂಗ್ಲೆ ಸತ್ತು ಬಿದ್ದ ಸ್ಥಳವು ಕಲ್ಲುಗಳಿಂದ ಕೂಡಿದ್ದ ಸಡಿಲ ಮಣ್ಣಿನ ಸಣ್ಣ ಹತ್ತಿಯ ಹೊಲವಾಗಿತ್ತು.
ಮಹಾರಾಷ್ಟ್ರದ ಈ ಭಾಗಗಳಲ್ಲಿ ಇಂತಹ ಹೊಲಗಳನ್ನು ಹಲ್ಕಿ ಜಮೀನ್ ಅಥವಾ ಹೆಚ್ಚು ಘಾತವಿಲ್ಲದ ಭೂಮಿಯೆಂದು ಕರೆಯುತ್ತಾರೆ. ಸೊಂಪಾದ ಹಸಿರು ಗುಡ್ಡವು ಹಳ್ಳಿಯಿಂದ ದೂರವಿರುವ ಕೃಷಿಭೂಮಿಯ ಪ್ರತ್ಯೇಕ ಪ್ರದೇಶವಾದ ಆಂಧ್ ಕುಲಕ್ಕೆ ಸೇರಿದ ಭೂಮಿಯ ಈ ಏರಿಳಿತದ ಕ್ಯಾನ್ವಾಸಿನಂತಹ ಸುಂದರವಾದ ಹಿನ್ನೆಲೆಯನ್ನು ಒದಗಿಸುತ್ತದೆ.
ಚಂಪತ್ ಅವರ ಅವರ ಸಣ್ಣ ಹುಲ್ಲಿನ ಗುಡಿಸಲು ಅದೇ ಹೊಲದಲ್ಲಿ ನಿಂತಿದೆ. ಇದು ಅವರಿಗೆ ಸುಡುವ ಬಿಸಿಲು ಮತ್ತು ಸುರಿಯುವ ಮಳೆಯಿಂದ ರಕ್ಷಣೆ ನೀಡುತ್ತಿತ್ತು. ತನ್ನ ಹೊಲಕ್ಕೆ ಬರುವ ಕಾಡು ಹಂದಿಗಳನ್ನು ಕಾಯುವ ಸಲುವಾಗಿಯೂ ಅವರು ಇದೇ ಗುಡಿಸಲಿನಲ್ಲಿ ತಂಗುತ್ತಿದ್ದರು. ಅವರು ಹೆಚ್ಚು ಕಾಲ ಇದೇ ಗುಡಿಸಲಿನಲ್ಲಿರುತ್ತಿದ್ದರು ಎಂದು ಅವರ ಅಕ್ಕಪಕ್ಕದವರು ನೆನಪಿಸಿಕೊಳ್ಳುತ್ತಾರೆ.
40ರ ದಶಕದಲ್ಲಿದ್ದ ಅಂಧ ಕುಲದ ರೈತ ಚಂಪತ್ ಅವರಿಗೆ ಈ ಗುಡಿಸಲಿನಿಂದ ಇಡೀ ಹೊಲ ಕಾಣಬೇಕಿತ್ತು. ಕೊನೆಯಿಲ್ಲದ ನಷ್ಟಕ್ಕೆ ಈಡು ಮಾಡುವ, ಮಳೆಯಿಂದಾಗಿ ಹಾನಿಗೀಡಾಗಿದ್ದ ತೊಗರಿ ಗಿಡಗಳು ಆ ಹೊಲದಲ್ಲಿದ್ದವು.
ಬಹುಶಃ ಕೊಯ್ಲು ಆರಂಭಗೊಂಡಿದ್ದ ಎರಡು ತಿಂಗಳಿನಲ್ಲಿ ತನ್ನ ಹೊಲದ ಗಿಡಗಳು ಯಾವುದೇ ಇಳುವರಿ ನೀಡುವುದು ಸಾಧ್ಯವಿಲ್ಲವೆನ್ನುವುದು ಅವರಿಗೆ ತಿಳಿದಿತ್ತು ಎನ್ನಿಸುತ್ತದೆ. ಚಂಪತ್ ಬಾಕಿ ಸಾಲಕ್ಕೆ ಮತ್ತು ಕುಟುಂಬದ ದೈನಂದಿನ ಖರ್ಚುಗಳನ್ನು ನಿಭಾಯಿಸಲು ಹಣವನ್ನು ಹೊಂದಿಸಿಕೊಳ್ಳಬೇಕಿತ್ತು, ಅವರ ಬಳಿ ಒಂದು ರೂಪಾಯಿಯೂ ಇದ್ದಿರಲಿಲ್ಲ.
















