“ಛೇದನ, ಮುಚ್ಚುವಿಕೆ ಹಾಗೂ ಲ್ಯಾಪರೊಸ್ಕೊಪಿಕ್ ಸಲಕರಣೆಯೊಂದಿಗೆ ಅಂಡಾಣುವಾಹಿ ನಾಳಗಳ ನಿರ್ವಹಣೆಗೆ ಸೂಕ್ತ ಬೆಳಕು ಅವಶ್ಯ”, ಎನ್ನುತ್ತಾರೆ ಗೋಸ್ವಾಮಿ. ಕೊಠಡಿಯಲ್ಲಿನ ಬೆಳಕು ಸಾಲುತ್ತಿರಲಿಲ್ಲ. ಆದರೆ ಯಾರೊಬ್ಬರೂ ತುರ್ತುಪರಿಸ್ಥಿತಿಗೆಂದು ಲಭ್ಯವಿದ್ದ ಲೈಟುಗಳನ್ನು ಹಾಕಲಿಲ್ಲ.
ಐದು ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಒಂದು ಪ್ರಕ್ರಿಯೆಯು ಮುಕ್ತಾಯಗೊಂಡು, ವೈದ್ಯರು ಮುಂದಿನ ಮೇಜಿಗೆ ತೆರಳುತ್ತ “ಹೋ ಗಯಾ, ಮುಗಿಯಿತು” ಎಂದರು. ಸಹಾಯಕ ಮತ್ತು ಆಶಾ ಕಾರ್ಯಕರ್ತರು ಮಹಿಳೆಗೆ ಮೇಜಿನಿಂದ ಇಳಿಯಲು ಸಹಕರಿಸಿ, ಮುಂದಿನ ಗುಂಪನ್ನು ಸಿದ್ಧಪಡಿಸಲು ಇದು ಸೂಚನೆ ನೀಡಿತು.
ಪಕ್ಕದಲ್ಲಿನ ಕೊಠಡಿಯೊಂದರಲ್ಲಿ ಹಾಸಿಗೆಗಳನ್ನು ಹಾಸಲಾಗಿತ್ತು. ಹಳದಿ ಗೋಡೆಗಳು ತೇವ ಹಾಗೂ ಪಾಚಿಯ ಕಲೆಗಳಿಂದ ತುಂಬಿತ್ತು. ಪಕ್ಕದ ಶೌಚಾಲಯದ ಬಾಗಿಲಿನಿಂದ ದುರ್ವಾಸನೆಯು ಹೊರಸೂಸುತ್ತಿತ್ತು. ಪ್ರಕ್ರಿಯೆಯು ಮುಕ್ತಾಯಗೊಳ್ಳುತ್ತಿದ್ದಂತೆಯೇ, ಅಂಬುಲೆನ್ಸಿನಲ್ಲಿ ನೇಹಾ ಹಾಗೂ ಇತರರನ್ನು ಮನೆಗೆ ತಲುಪಿಸುವ ಮೊದಲು ಮಲಗಿ ವಿಶ್ರಾಂತಿ ಪಡೆಯಲು ಕರೆತರಲಾಯಿತು. ಇದೆಲ್ಲವೂ ಬಹಳ ತ್ವರಿತವಾಗಿ ನಡೆದುಹೋಯಿತಲ್ಲದೆ ಆಕೆಗೆ ಅರಿವಳಿಕೆಯು ಸಂಪೂರ್ಣವಾಗಿ ಪ್ರಭಾವ ಬೀರಿರಲಿಲ್ಲ. ಬಹುಶಃ ಈ ಕಾರಣಗಳಿಂದಾಗಿ, ಅರ್ಧ ಗಂಟೆಯ ತರುವಾಯ ಆಂಬುಲೆನ್ಸ್ ಹತ್ತುವಾಗ ನೇಹಾ ಭ್ರಮನಿರಸನಕ್ಕೊಳಗಾದವಳಂತೆ ಕಾಣುತ್ತಿದ್ದಳು.
ಅವರು ಮನೆ ತಲುಪಿದಾಗ ಆಕೆಯ ಅತ್ತೆಯ ಜೊತೆಗೆ ಆಕಾಶನೂ ಅವರಿಗಾಗಿ ಕಾಯುತ್ತಿದ್ದನು. “ಪುರುಷರು ತಾವು ಬಂದಾಗ ತಾಯಿ, ಹೆಂಡತಿ, ಮಕ್ಕಳು ಹಾಗೂ ತಮ್ಮ ನಾಯಿ ನಮಗಾಗಿ ಕಾಯುತ್ತಿರಬೇಕೆಂದು ಬಯಸುತ್ತಾರೆಯೇ ಹೊರತು ಬೇರೇನನ್ನೋ ಅಲ್ಲ”, ಎಂಬ ಟೀಕೆಯೊಂದಿಗೆ ಆಕೆ, ನೇಹಾಳಿಗೆ ಚಹಾ ತಯಾರಿಸಲೆಂದು ಮನೆಯ ಚಿಕ್ಕ ಮೂಲೆಗೆ ಅರ್ಥಾತ್ ಅಡಿಗೆ ಕೋಣೆಗೆ ನಡೆದಳು.
ಚೌಕಾಕಾರದ ಬ್ಯಾಂಡೇಜಿನ ತುಂಡಿನಿಂದ ಛೇದನವನ್ನು ಮುಚ್ಚಿದ್ದ ಹೊಟ್ಟೆಯನ್ನು ಹಿಡಿದುಕೊಂಡು, “ಚುಚ್ಚುಮದ್ದಿನ ನಂತರವೂ ನೋವಾಗುತ್ತಿತ್ತು” ಎಂದು ಆಕೆ ತಿಳಿಸಿದಳು.
ಎರಡು ದಿನಗಳ ತರುವಾಯ ಅಡಿಗೆ ಕೋಣೆಗೆ ವಾಪಸ್ಸಾದ ನೇಹಾ, ನಡು ಬಗ್ಗಿಸಿ ಕುಳಿತು ಅಡಿಗೆ ಕೆಲಸಗಳಲ್ಲಿ ತೊಡಗಿದಳು. ಬ್ಯಾಂಡೇಜು ಇನ್ನೂ ಅದರ ಜಾಗದಲ್ಲೇ ಇತ್ತಲ್ಲದೆ, ಆಕೆಯ ಮುಖದಲ್ಲಿ ಅಸ್ವಸ್ಥತೆಯನ್ನು ಕಾಣಬಹುದಾಗಿತ್ತು. ಹೊಲಿಗೆಗಳು ಇನ್ನೂ ಒಣಗುವುದರಲ್ಲಿದ್ದವು. “ಪರ್ ಝಂಝಟ್ ಖತಂ (ಆದರೆ ಸಮಸ್ಯೆ ಬಗೆಹರಿಯಿತು)”, ಎಂದಳು ನೇಹ.
ಮುಖಪುಟ ಸಚಿತ್ರ ವಿವರಣೆ: ಅರ್ಥ ಮತ್ತು ಅಭಿವ್ಯಕ್ತಿಯ ಹೊಸ ರೂಪಗಳನ್ನು ಅನ್ವೇಷಿಸಲು ತಂತ್ರಜ್ಞಾನದೊಂದಿಗೆ ಪ್ರಯೋಗದಲ್ಲಿ ತೊಡಗಿರುವ, ನೂತನ ಮಾಧ್ಯಮದ (new media) ಕಲಾಕಾರರಾದ ಪ್ರಿಯಾಂಕ ಬೊರರ್, ಕಲಿಕೆ ಹಾಗೂ ಕ್ರೀಡೆಗಳಿಗಾಗಿ ಅನುಭವಗಳನ್ನು ವಿನ್ಯಾಸಗೊಳಿಸುತ್ತಾರೆ. ಸಂವಾದಾತ್ಮಕ ಮಾಧ್ಯಮದೊಂದಿಗೆ ಕೈಜೋಡಿಸುವ ಇವರು, ಪಾರಂಪರಿಕ ಲೇಖನಿ ಹಾಗೂ ಕಾಗದಗಳೊಂದಿಗೆ ಸಹಜತೆಯನ್ನು ಕಾಣುತ್ತಾರೆ.
ಪರಿ ಹಾಗೂ ಕೌಂಟರ್ ಮೀಡಿಯ ಟ್ರಸ್ಟ್ನ ವತಿಯಿಂದ, ದೇಶಾದ್ಯಂತ ಗ್ರಾಮೀಣ ಭಾರತದ ಕಿಶೋರಿಯರು ಹಾಗೂ ಯುವತಿಯರ ಪರಿಸ್ಥಿತಿಗಳನ್ನು ಕುರಿತಂತೆ ವರದಿಯನ್ನು ತಯಾರಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. ಸದರಿ ಯೋಜನೆಯು, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯ ಬೆಂಬಲಿತ ಉಪಕ್ರಮದ (initiative) ಒಂದು ಭಾಗವಾಗಿದ್ದು, ಅಂಚಿಗೆ ತಳ್ಳಲ್ಪಟ್ಟ ಈ ಪ್ರಮುಖ ಸಮುದಾಯಗಳ ಪರಿಸ್ಥಿತಿಗಳನ್ನು, ಸಾಮಾನ್ಯ ಜನರ ಅನುಭವ ಹಾಗೂ ಹೇಳಿಕೆಗಳ ಹಿನ್ನೆಲೆಯಲ್ಲಿ ಅನ್ವೇಷಿಸಲಾಗುತ್ತಿದೆ.
ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.ಅನುವಾದ: ಶೈಲಜ ಜಿ. ಪಿ.