ಗೊಂಡಿಯಾದ ಮಹಿಳಾ ಕಾರ್ಮಿಕರ ಕುರಿತಾದ ವರದಿಯನ್ನು ಮೊದಲಿಗೆ ಜನವರಿ 27, 2007 ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು , ಆದರೆ ಅದರ ನಂತರವೂ ಅವರ ಸ್ಥಿತಿಯು ಹೆಚ್ಚು ಸುಧಾರಿಸಿಲ್ಲ . ಮೇ 1, ಅಂತರಾಷ್ಟ್ರೀಯ ಕಾರ್ಮಿಕರ ದಿನದಂದು , ನಾವು ಮಹಿಳೆಯರ ಗೌರವಾರ್ಥವಾಗಿ ಇದನ್ನು ಮರುಪ್ರಕಟಿಸುತ್ತಿದ್ದೇವೆ

ರೇವಂತಬಾಯಿ ಕಾಂಬಳೆ ತನ್ನ ಆರು ವರ್ಷದ ಮಗನ ಜೊತೆ ಹಲವು ತಿಂಗಳಿಂದ ಮಾತನಾಡಿಲ್ಲ. ಆದರೆ, ಅವರಿಬ್ಬರೂ ತಿರೋರಾದಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧಿಬಾಯಿ ನಾಗಪುರೆಯ ಕತೆಯೂ ಹೀಗೆಯೇ ಇದೆಯಾದರೂ ಅವರು ಎಚ್ಚರವಾಗಿದ್ದರೆ ಹಿರಿಯ ಮಗನನ್ನು ಭೇಟಿ ಮಾಡಬಹುದು. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಈ ಭಾಗದ ನೂರಾರು ಇಂತಹ ಮಹಿಳೆಯರಲ್ಲಿ ಈ ಇಬ್ಬರು ಮಹಿಳೆಯರು ಕೂಡಾ ಸೇರಿದ್ದಾರೆ, ಅವರು ದಿನಕ್ಕೆ ಕೇವಲ ನಾಲ್ಕು ಗಂಟೆಗಳನ್ನು ಮನೆಯಲ್ಲಿ ಕಳೆಯುತ್ತಾರೆ ಮತ್ತು ದಿನಕ್ಕೆ ಕೇವಲ 30 ರೂ ಗಳಿಸುವ ಸಲುವಾಗಿ ಪ್ರತಿ ವಾರ 1,000 ಕಿಲೋಮೀಟರ್‌ಗಳಿಗಿಂತ ಹೆಚ್ಚು ಕಾಲವನ್ನು ಪ್ರಯಾಣದಲ್ಲಿ ಕಳೆಯುತ್ತಾರೆ.

ನಾವು ಈ ಮಹಿಳೆಯರೊಂದಿಗೆ ಅವರ ಮನೆಯಿಂದ ರೈಲು ನಿಲ್ದಾಣದ ಕಡೆಗೆ ಹೋಗುವಾಗ ಬೆಳಗಿನ 6 ಗಂಟೆ. ಅವರಲ್ಲಿ ಹೆಚ್ಚಿನವರು ಈಗಾಗಲೇ ಎರಡು ಗಂಟೆಗಳ ಮೊದಲು ಎದ್ದು ತಯಾರಾಗಿ ಇಲ್ಲಿಗೆ ಬಂದಿದ್ದಾರೆ. "ನಾನು ಅಡುಗೆ, ಬಟ್ಟೆ ಒಗೆಯುವುದು, ಪೊರಕೆ ಮತ್ತು ಶುಚಿಗೊಳಿಸುವಿಕೆಯನ್ನು ಮುಗಿಸಿದ್ದೇನೆ" ಎಂದು ಬುಧಿಬಾಯಿ ಸಂತೋಷದಿಂದ ಹೇಳುತ್ತಾರೆ. "ಹಾಗಾಗಿ ಈಗ ನಾವು ಮಾತನಾಡಬಹುದು." ನಾವು ಅಲ್ಲಿಗೆ ತಲುಪಿದಾಗ, ಅವರ ಮನೆಯ ಇತರ ಸದಸ್ಯರು ಎದ್ದಿರಲಿಲ್ಲ. "ಪಾಪ, ದಣಿದಿದ್ದಾರೆ," ಅವರು ಹೇಳುತ್ತಾರೆ.  ಹಾಗಿದ್ದರೆ ಬುಧಿಬಾಯಿ ದಣಿದಿಲ್ಲವೇ? "ಹೌದು ದಣಿದಿದ್ದೇನೆ, ಆದರೆ ಏನು ಮಾಡುವುದು? ನಮಗೆ ಬೇರೆ ಆಯ್ಕೆ ಇಲ್ಲ.”

ನಿಲ್ದಾಣದಲ್ಲಿ ಇನ್ನೂ ಅನೇಕ ಮಹಿಳೆಯರು ಇದ್ದರು, ಅವರಿಗೂ ಬೇರೆ ದಾರಿಯಿಲ್ಲ. ಅವರು ಒಂದು ವಿಷಯದಲ್ಲಿ ಅಸಾಮಾನ್ಯರು: ಅವರು ಹಳ್ಳಿಯಿಂದ ನಗರಕ್ಕೆ ವಲಸೆ ಬಂದವರಲ್ಲ. ಅವರು ನಗರ ಪ್ರದೇಶಗಳ ಸ್ವತಂತ್ರ ಕಾರ್ಮಿಕರು, ಅವರು ಹಳ್ಳಿಗಳಲ್ಲಿ ಕೆಲಸ ಹುಡುಕುತ್ತಿದ್ದಾರೆ. ಈ ಆವಿಷ್ಕಾರವು ಅವರ ಜೀವನದಲ್ಲಿ ಬಹುತೇಕ ಪ್ರತಿದಿನ ಅವರನ್ನು ಕೃಷಿ ಕಾರ್ಮಿಕರಾಗಿ ಕೆಲಸ ಮಾಡಲು ತಹಸಿಲ್ ಪ್ರಧಾನ ಕಛೇರಿಯಾಗಿರುವ ಮುಫಾಸಿಲ್ ಪಟ್ಟಣದಿಂದ ತಿರೋರಾದಂತಹ ಹಳ್ಳಿಗಳಿಗೆ ಕರೆದೊಯ್ಯುತ್ತದೆ. ಏತನ್ಮಧ್ಯೆ, ಅವರು ದಿನಕ್ಕೆ 20 ಗಂಟೆಗಳ ಕಾಲದ  ಸಮಯವನ್ನು ತಮ್ಮ ಮನೆಯಿಂದ ಹೊರಗೆ ಕಳೆಯುತ್ತಾರೆ. ಇವರಿಗೆ ವಾರದ ರಜೆ ಇಲ್ಲ, ತಿರೋರದಲ್ಲಿ ಕೆಲಸವೂ ಸಿಗುವುದಿಲ್ಲ. "ಬೀಡಿ ಉದ್ಯಮವು ಇಲ್ಲವಾದರೆ, ಅವರಿಗೆ ಇಲ್ಲಿ ಕೆಲಸ ಸಿಗುವುದು ಅಸಾಧ್ಯ" ಎಂದು ಗೊಂಡಿಯಾದ ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಮಹೇಂದ್ರ ವಾಲ್ಡೆ ಹೇಳುತ್ತಾರೆ.

On the platform and in the train are more women like Buribai Nagpure (left) and Shakuntalabai Agashe (right), weary-eyed, hungry, half-asleep
PHOTO • P. Sainath
On the platform and in the train are more women like Buribai Nagpure (left) and Shakuntalabai Agashe (right), weary-eyed, hungry, half-asleep
PHOTO • P. Sainath

ಬುಧಿಬಾಯಿ ನಾಗಪುರೆ (ಎಡ) ಮತ್ತು ಶಕುಂತಲಾಬಾಯಿ ಅಗಾಶೆ (ಬಲ) ಮುಂತಾದ ಅನೇಕ ದಣಿದ, ಹಸಿದ, ಅರೆನಿದ್ದೆಯ ಮಹಿಳೆಯರು ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ರೈಲಿನಲ್ಲಿ ಇದ್ದಾರೆ

ಅನೇಕ ಮಹಿಳೆಯರು ರೈಲ್ವೆ ನಿಲ್ದಾಣದಿಂದ ಐದು ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚು ದೂರದಲ್ಲಿ ವಾಸಿಸುತ್ತಾರೆ. "ಇದರಿಂದಾಗಿ ನಾವು ಬೆಳಿಗ್ಗೆ 4 ಗಂಟೆಗೆ ಎದ್ದೇಳಬೇಕು" ಎಂದು ಬಹುಶಃ 40 ವರ್ಷ ವಯಸ್ಸಿನವರಿರಬಹುದಾದ ಬುಧಿಬಾಯಿ ಹೇಳುತ್ತಾರೆ. "ನಾವು ನಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳಿಗ್ಗೆ 7 ಗಂಟೆಗೆ ನಿಲ್ದಾಣವನ್ನು ತಲುಪುತ್ತೇವೆ." ಆಗಲೇ ರೈಲು ಬರುತ್ತದೆ ಮತ್ತು ನಾವು ಅದನ್ನು ಗುಂಪಿನೊಂದಿಗೆ ಹತ್ತುತ್ತೇವೆ, ಅದು ಗ್ರಾಮೀಣ ನಾಗ್ಪುರದ ಸಾಲ್ವಾಕ್ಕೆ ಹೋಗುತ್ತದೆ. ಈ 76 ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಲು ಎರಡು ಗಂಟೆಗಳು ಬೇಕಾಗುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ರೈಲಿನಲ್ಲಿ ದಣಿದ, ಹಸಿದ, ಅರೆನಿದ್ದೆ ಮಾಡಿಬಂದ ಮಹಿಳೆಯರಿದ್ದಾರೆ. ಹೆಚ್ಚಿನ ಮಹಿಳೆಯರು ಕಿಕ್ಕಿರಿದ ರೈಲಿನ ನೆಲದ ಮೇಲೆ ಕುಳಿತು, ಕಂಪಾರ್ಟ್‌ಮೆಂಟ್‌ನ ಗೋಡೆಗೆ ಒರಗುತ್ತಾರೆ ಮತ್ತು ತಮ್ಮ ನಿಲ್ದಾಣ ಬರುವ ಮೊದಲು ಸ್ವಲ್ಪ ಸಮಯ ಮಲಗಲು ಪ್ರಯತ್ನಿಸುತ್ತಾರೆ. ನಾಗ್ಪುರ ಜಿಲ್ಲೆಯ ಮೌಡಾ ತೆಹಸಿಲ್‌ನಲ್ಲಿರುವ ಸಾಲ್ವಾ ಕೇವಲ 105 ಕುಟುಂಬಗಳ ಮತ್ತು 500ಕ್ಕಿಂತ ಕಡಿಮೆ ನಿವಾಸಿಗಳ ಗ್ರಾಮವಾಗಿದೆ.

"ನಾವು ರಾತ್ರಿ 11 ಗಂಟೆಗೆ ಮನೆಗೆ ತಲುಪುತ್ತೇವೆ" ಎಂದು 20 ವರ್ಷದ ರೇವಂತಬಾಯಿ ಹೇಳುತ್ತಾರೆ. “ನಾವು ಮಧ್ಯರಾತ್ರಿಯಲ್ಲಿ ಮಲಗುತ್ತೇವೆ ಮತ್ತು ಮರುದಿನ ಬೆಳಿಗ್ಗೆ 4 ಗಂಟೆಗೆ ಮತ್ತೆ ಹೊರಡುತ್ತೇವೆ. ನನ್ನ ಆರು ವರ್ಷದ ಮಗನನ್ನು ಬಹಳ ಸಮಯದಿಂದ ಎಚ್ಚರವಾಗಿರುವಾಗ ನಾನು ನೋಡಿಲ್ಲ. ನಂತರ ಅವರು ನಗುತ್ತಾ ಹೇಳುತ್ತಾರೆ: "ಕೆಲವು ಚಿಕ್ಕ ಮಕ್ಕಳು ತಮ್ಮ ತಾಯಿಯನ್ನು ನೋಡಿದಾಗ ಅವರನ್ನು ಗುರುತಿಸುವುದಿಲ್ಲ." ಅವರ ಮಕ್ಕಳು ಖರ್ಚನ್ನು ಭರಿಸಲಾಗದ ಕಾರಣ ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲೆಯಲ್ಲಿರುವ ಮಕ್ಕಳೂ ಓದಿನಲ್ಲಿ ಚುರುಕಿಲ್ಲ. "ಅವರನ್ನು ನೋಡಿಕೊಳ್ಳಲು ಅಥವಾ ಸಹಾಯ ಮಾಡಲು ಮನೆಯಲ್ಲಿ ಯಾರೂ ಇಲ್ಲ" ಎಂದು ಬುಧಿಬಾಯಿ ಹೇಳುತ್ತಾರೆ. ಮತ್ತು ಕೆಲವು ಯುವಕರು ಅವರು ಏನು ಕೆಲಸ ಸಿಗುತ್ತದೋ ಅದನ್ನು ಮಾಡುತ್ತಾರೆ.

"ಸ್ವಾಭಾವಿಕವಾಗಿ, ಶಾಲೆಯಲ್ಲಿ ಅವರ ಓದಿನ ಮಟ್ಟ ತುಂಬಾ ಕಳಪೆಯಾಗಿದೆ" ಎಂದು ತಿರೋರಾ ಮೂಲದ ಶಿಕ್ಷಕಿ ಲತಾ ಪಾಪಂಕರ್ ಹೇಳುತ್ತಾರೆ. "ಅವರು ಯಾರನ್ನು ದೂಷಿಸಬಹುದು?" ಮಹಾರಾಷ್ಟ್ರ ಸರ್ಕಾರಕ್ಕೆ ಇದನ್ನು ಸರಿಪಡಿಸಲು ಸಾಧ್ಯವಾಗುವಂತೆ ತೋರುತ್ತಿದೆ. ಈ ಮಕ್ಕಳ ಓದಿನ ಕಾರ್ಯಕ್ಷಮತೆಗೆ ಶಾಲೆಗಳು ಜವಾಬ್ದಾರರಾಗಿರುತ್ತವೆ, ಅವರು ತಮ್ಮ ಹಣವನ್ನು ಕಳೆದುಕೊಳ್ಳಬಹುದು. ಮತ್ತು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಶಿಕ್ಷಕರಿದ್ದಾರೆ, ಕೆಟ್ಟ ಫಲಿತಾಂಶಗಳಿಗಾಗಿ ಅವರು ಶಿಕ್ಷೆಗೆ ಒಳಗಾಗಬಹುದು. ಇದು ಶಾಲೆಗೆ ಹೋಗುವ ಅವರ ಅವಕಾಶಗಳನ್ನು ಮತ್ತಷ್ಟು ಕಡಿಮೆ ಮಾಡುವ ವಿಧಾನ.

ಚಲಿಸುವ ರೈಲಿನ ನೆಲದ ಮೇಲೆ ಕುಳಿತು, ಸುಮಾರು 50 ವರ್ಷದ ಶಕುಂತಲಾಬಾಯಿ ಅಗಾಶೆ ಅವರು ಕಳೆದ 15 ವರ್ಷಗಳಿಂದ ಹೀಗೆ ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಹಬ್ಬಗಳು ಅಥವಾ ಮಳೆಗಾಲದಲ್ಲಿ ಮಾತ್ರ ರಜೆ ಲಭ್ಯವಿರುತ್ತದೆ. "ಕೆಲವು ಉದ್ಯೋಗಗಳಿವೆ, ಅವು ನಮಗೆ 50  ರೂಪಾಯಿ ಸಂಪಾದನೆ ತರಬಲ್ಲವು" ಎಂದು ಅವರು ಹೇಳುತ್ತಾರೆ. "ಆದರೆ ಇದು ಅಪರೂಪ. ಹೆಚ್ಚಾಗಿ ನಮಗೆ ಕೇವಲ 24-30 ರೂ. ಸಂಬಳ ದೊರೆಯುತ್ತದೆ." ತಮ್ಮ ನಗರಗಳಲ್ಲಿ ಉದ್ಯೋಗವಿಲ್ಲ ಎಂದು ಮಹಿಳೆಯರು ಹೇಳುತ್ತಾರೆ.

Revantabai Kamble (in red, left), Shakuntalabai and Buribai (right) spend just four hours a day at home and travel over 1,000 kms each week to earn a few rupees
PHOTO • P. Sainath
Revantabai Kamble (in red, left), Shakuntalabai and Buribai (right) spend just four hours a day at home and travel over 1,000 kms each week to earn a few rupees
PHOTO • P. Sainath

ರೇವಂತಾಬಾಯಿ ಕಾಂಬಳೆ (ಕೆಂಪು ಸೀರೆಯಲ್ಲಿ, ಎಡಭಾಗದಲ್ಲಿ), ಶಕುಂತಲಾಬಾಯಿ ಮತ್ತು ಬುಧಿಬಾಯಿ (ಬಲ) ಮನೆಯಲ್ಲಿ ಪ್ರತಿದಿನ ಕೇವಲ ನಾಲ್ಕು ಗಂಟೆಗಳನ್ನು ಮಾತ್ರವೇ ಕಳೆಯುತ್ತಾರೆ ಮತ್ತು ಕೆಲವು ಕಾಸುಗಳನ್ನು ಗಳಿಸಲು ಪ್ರತಿ ವಾರ 1,000 ಕಿಲೋಮೀಟರ್‌ಗಳಷ್ಟು ಪ್ರಯಾಣಿಸುತ್ತಾರೆ

ಅಲ್ಲಿನ ಹಣ ನಗರಗಳಿಗೆ ಹೋಗಿದೆ. ಅಲ್ಲಿನ ಕೈಗಾರಿಕೆಗಳು ಮುಚ್ಚಿವೆ. ಮುಫಾಸಿಲ್ ನಗರ ಕುಸಿಯುತ್ತಿದೆ. ಮೊದಲು ಇಲ್ಲಿನ ಬಹುತೇಕ ಮಹಿಳೆಯರಿಗೆ ಬೀಡಿ ಉದ್ಯಮದಲ್ಲಿ ಕೆಲಸ ಸಿಗುತ್ತಿತ್ತು. "ಅವು ಹೋದ ತಕ್ಷಣ ನಾವು ಸಂಕಷ್ಟಕ್ಕೆ ಈಡಾದೆವು" ಎಂದು ಬುಧಿಬಾಯಿ ಹೇಳುತ್ತಾರೆ. "ಬೀಡಿ ಸ್ವತಂತ್ರ ಉದ್ಯಮವಾಗಿದೆ, ಇದು ಯಾವಾಗಲೂ ಅಗ್ಗದ ಕಾರ್ಮಿಕರ ಹುಡುಕಾಟದಲ್ಲಿರುತ್ತದೆ" ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್‌ನ ಕೆ.ಕೆ. ನಾಗರಾಜ್ ಹೇಳುತ್ತಾರೆ. "ಇದು ತನ್ನ ಸ್ಥಳವನ್ನು ಬಹಳ ಬೇಗನೆ ಬದಲಾಯಿಸುತ್ತದೆ. ಅಂತಹ ಬದಲಾವಣೆಗಳ ಮಾನವ ಪರಿಣಾಮಗಳು ವಿನಾಶಕಾರಿ. ಮತ್ತು ಇದು ಕಳೆದ 15 ವರ್ಷಗಳಲ್ಲಿ ಹೆಚ್ಚಾಗಿದೆ. ಹೆಚ್ಚಿನ ಬೀಡಿ ಕೆಲಸವು "ಗೊಂಡಿಯಾದಿಂದ ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢಕ್ಕೆ ಹೋಗಿದೆ" ಎಂದು ಕಿಸಾನ್ ಸಭಾದ ಪ್ರದೀಪ್ ಪಾಪಂಕರ್ ಹೇಳುತ್ತಾರೆ.

"ನಿಸ್ಸಂಶಯವಾಗಿ, ನಾವು ರೈಲಿನಲ್ಲಿ ಪ್ರಯಾಣಿಸಲು ಟಿಕೇಟುಳನ್ನು ಖರೀದಿಸುವುದಿಲ್ಲ" ಎಂದು ಮಹಿಳೆಯರು ಹೇಳುತ್ತಾರೆ. “ಎರಡೂ ಕಡೆಯ ಟಿಕೆಟ್‌ಗಳ ಬೆಲೆ 30 ರೂಪಾಯಿ ಮೀರುತ್ತದೆ, ಇದು ನಾವು ಗಳಿಸುವುದಕ್ಕಿಂತ ಹೆಚ್ಚು. ನಮ್ಮ ವಿಧಾನವು ತುಂಬಾ ಸರಳವಾಗಿದೆ: ಸಿಕ್ಕಿಬಿದ್ದರೆ, ನಾವು ಟಿಸಿಗೆ 5 ರೂಪಾಯಿ ಲಂಚವನ್ನು ನೀಡುತ್ತೇವೆ. ಟಿಕೆಟ್ ಮೂಲಕ ಸಿಗುವ ಆದಾಯವನ್ನು ಖಾಸಗೀಕರಣಗೊಳಿಸಲಾಗಿದೆ. "ಅವರು ಅದನ್ನು ನಮ್ಮಿಂದ ವಸೂಲಿ ಮಾಡುತ್ತಾರೆ, ನಮಗೆ ಅಷ್ಟು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದರೂ.

"ಕೆಲವೊಮ್ಮೆ ನನ್ನ ಹಿರಿಯ ಮಗ ತನ್ನ ಸೈಕಲ್‌ನಲ್ಲಿ ನನ್ನನ್ನು ನಿಲ್ದಾಣಕ್ಕೆ ಬಿಡುತ್ತಾನೆ" ಎಂದು ಬುಧಿಬಾಯಿ ಹೇಳುತ್ತಾರೆ. “ಆಮೇಲೆ ಅಲ್ಲಿಯೇ ಇದ್ದು ಕೆಲಸ ಹುಡುಕುತ್ತಾನೆ, ಎಷ್ಟೇ ಹಣ ಸಿಗುವ ಕೆಲಸ ಬಂದರೂ ಸರಿ. ನನ್ನ ಮಗಳು ಮನೆಯಲ್ಲಿ ಅಡುಗೆ ಮಾಡುತ್ತಾಳೆ. ಮತ್ತು ನನ್ನ ಇನ್ನೊಬ್ಬ ಮಗ ತನ್ನ ಸಹೋದರನಿಗೆ ಆಹಾರವನ್ನು ತಂದುಕೊಡುತ್ತಾನೆ. ಸಂಕ್ಷಿಪ್ತವಾಗಿ, ವಾಲ್ಡೆ ಹೇಳುತ್ತಾರೆ, "ಒಬ್ಬ ವ್ಯಕ್ತಿಯ ಸಂಬಳಕ್ಕಾಗಿ ಮೂರು ಜನರು ಕೆಲಸ ಮಾಡುತ್ತಾರೆ." ಆದರೆ ಆಕೆಯ ಪತಿ ಸೇರಿದಂತೆ ಕುಟುಂಬದ ಎಲ್ಲಾ ಐವರು ಸದಸ್ಯರು ಸಾಮಾನ್ಯವಾಗಿ ದಿನಕ್ಕೆ 100 ರೂ. ಮಾತ್ರ ಸಂಪಾದಿಸುತ್ತಾರೆ. ಒಮ್ಮೊಮ್ಮೆ ಇಬ್ಬರಿಗೂ ಸಂಪಾದನೆಯಿಲ್ಲದ ದಿನಗಳೂ ಇರುತ್ತವೆ. ಅವರ ಬಳಿ ಬಿಪಿಎಲ್ ಪಡಿತರ ಚೀಟಿಯೂ ಇಲ್ಲ.

ದಾರಿಯುದ್ದಕ್ಕೂ ಸ್ಟೇಷನ್ನುಗಳಲ್ಲಿ ಕಾರ್ಮಿಕ ಗುತ್ತಿಗೆದಾರರು ಇರುತ್ತಾರೆ, ಅವರು ಅಗ್ಗದ ಕೂಲಿಗಾಗಿ ಕಾರ್ಮಿಕರನ್ನು ಕರೆದೊಯ್ಯಲು ಕಾಯುತ್ತಿರುತ್ತಾರೆ.

ಬೆಳಿಗ್ಗೆ 9 ಗಂಟೆಗೆ ಸಾಲ್ವಾ ತಲುಪಿದ ನಂತರ, ನಾವು ಒಂದು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಯ ಕಡೆಗೆ ಹೊರಟೆವು ಮತ್ತು ನಂತರ ಜಮೀನಿನ ಮಾಲೀಕ ಪ್ರಭಾಕರ ವಂಜರೆಯವರ ಮನೆಯಲ್ಲಿ ಸ್ವಲ್ಪ ಸಮಯ ಕಳೆದ ನಂತರ ಮೂರು ಕಿಲೋಮೀಟರ್ ದೂರದಲ್ಲಿರುವ ಹೊಲಗಳಿಗೆ ಹೋದೆವು. ಬುಧಿಬಾಯಿ ತನ್ನ ತಲೆಯ ಮೇಲೆ ನೀರಿನ ದೊಡ್ಡ ಮಡಕೆಯೊಂದಿಗೆ ಅಂತಿಮ ದೂರವನ್ನು ಕ್ರಮಿಸಿದರು, ಅಷ್ಟು ಭಾರ ಹೊತ್ತಿದ್ದರೂ ಅವರು ನಮ್ಮೆಲ್ಲರಿಂದ ಮುಂದೆ ಸಾಗಿದ್ದರು.

Shakuntalabai and Buribai: their families are asleep when the women get home, and asleep when they leave in the mornings
PHOTO • P. Sainath
Shakuntalabai and Buribai: their families are asleep when the women get home, and asleep when they leave in the mornings
PHOTO • P. Sainath

ಶಕುಂತಲಾಬಾಯಿ ಮತ್ತು ಬುಧಿಬಾಯಿ: ಈ ಮಹಿಳೆಯರು ಮನೆಗೆ ಬಂದಾಗ ಮತ್ತು ಬೆಳಿಗ್ಗೆ ಅವರು ಹೊರಡುವಾಗ ಅವರ ಕುಟುಂಬ ಸದಸ್ಯರು ಮಲಗಿರುತ್ತಾರೆ

ಯಾರ ಹೊಲಗಳಲ್ಲಿ ಈ ಮಹಿಳೆಯರು ಅಲ್ಪ ಹಣಕ್ಕೆ ದುಡಿಯುತ್ತಾರೋ ಅವರಿಗೂ ತೊಂದರೆಯಾಗಿದೆ. ಕೃಷಿ ಬಿಕ್ಕಟ್ಟು ವಂಜಾರೆ ಅವರನ್ನು ತೀವ್ರವಾಗಿ ಬಾಧಿಸಿದೆ. ಮೂರು ಎಕರೆ ಜಮೀನು ಹೊಂದಿದ್ದು, 10 ಎಕರೆ ಜಮೀನು ಗುತ್ತಿಗೆ ಪಡೆದಿದ್ದಾರೆ. "ಬೆಲೆಗಳು ತುಂಬಾ ಹೆಚ್ಚಿವೆ, ನಮಗೆ ಏನೂ ಆದಾಯ ಸಿಗುವುದಿಲ್ಲ" ಎಂದು ಅವರು ದೂರುತ್ತಾರೆ. ಹಾಗೂ ಗ್ರಾಮದಲ್ಲಿ ವಾಸವಾಗಿರುವ ಕಾರ್ಮಿಕರು ಹತಾಶರಾಗಿ ಬೇರೆಡೆ ಹೋಗಿದ್ದಾರೆ. ಅದಕ್ಕಾಗಿಯೇ ಈ ಮಹಿಳೆಯರು ಇಲ್ಲಿಗೆ ಬರುತ್ತಿದ್ದಾರೆ.

ಇದು ಪೂರ್ವ ವಿದರ್ಭ, ಸಂಕಷ್ಟದಿಂಧ ಕೂಡಿರುವ ಹತ್ತಿ ಬೆಲ್ಟ್‌ನಿಂದ ದೂರದಲ್ಲಿದೆ. ವಂಜಾರೆಯವರು ಭತ್ತ, ಮೆಣಸಿನಕಾಯಿ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ. ಇದೀಗ ಕಳೆ ಕೀಳುವ ಕೆಲಸಕ್ಕೆ ಮಾತ್ರ ಈ ಮಹಿಳೆಯರು ಬೇಕು. ಅವರು ಸಂಜೆ 5.30 ರ ತನಕ ಕೆಲಸ ಮಾಡುತ್ತಾರೆ ಮತ್ತು ಒಂದು ಗಂಟೆಯ ನಂತರ ನಿಲ್ದಾಣವನ್ನು ತಲುಪುತ್ತಾರೆ.

"ಆದರೆ ರೈಲು ರಾತ್ರಿ 8 ಗಂಟೆಗೆ ಬರುತ್ತದೆ" ಎಂದು ಬುಧಿಬಾಯಿ ಹೇಳುತ್ತಾರೆ. "ಹೀಗಾಗಿ ನಾವು 10 ಗಂಟೆಗೆ ತಿರೋರಾ ತಲುಪುತ್ತೇವೆ." ಮಹಿಳೆಯರು ಮನೆಗೆ ಬರುವ ಹೊತ್ತಿಗೆ ಅವರ ಕುಟುಂಬಗಳು ಮಲಗಿರುತ್ತವೆ. ಮತ್ತು ಬೆಳಿಗ್ಗೆ ಅವರು ಹೊರಡುವಾಗ, ಅವರು ಇನ್ನೂ ಮಲಗಿರುತ್ತಾರೆ. "ಕೌಟುಂಬಿಕ ಜೀವನ ಹೇಗೆ ಸಾಧ್ಯ?" ರೇವಂತಬಾಯಿ ಕೇಳುತ್ತಾರೆ.

ಮನೆ ತಲುಪುವಷ್ಟರಲ್ಲಿ 170 ಕಿ.ಮೀ. ಪ್ರಯಾಣಿಸಿರುತ್ತಾರೆ ಮತ್ತು ಅವರು ರೂ.30 ಗಳಿಸಲು ವಾರದ ಪ್ರತಿದಿನ ಈ ದೂರವನ್ನು ಕ್ರಮಿಸುತ್ತಾರೆ. "ನಾವು ರಾತ್ರಿ 11 ಗಂಟೆಗೆ ಮನೆಗೆ ತಲುಪುತ್ತೇವೆ" ಎಂದು ಬುಧಿಬಾಯಿ ಹೇಳುತ್ತಾರೆ, "ತಿನ್ನಲು ಮತ್ತು ಮಲಗಲು." ಅಲ್ಲಿಯವರೆಗೆ ಹೋಗುತ್ತೇವೆ, ನಾಲ್ಕು ಗಂಟೆಗಳ ನಂತರ ಮತ್ತೆ ಎದ್ದು ಅದೇ ಕೆಲಸವನ್ನು ಮತ್ತೆ ಆರಂಭಿಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

P. Sainath is Founder Editor, People's Archive of Rural India. He has been a rural reporter for decades and is the author of 'Everybody Loves a Good Drought' and 'The Last Heroes: Foot Soldiers of Indian Freedom'.

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru