ಸುನೀತಾ ದೇವಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಗಡ್ಡೆಯ ಕುರಿತು ಚಿಂತಿತರಾಗಿದ್ದರು. ಆ ಸಮಯದಲ್ಲಿ ಅವರಿಗೆ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಹೊಟ್ಟೆ ಉಬ್ಬರಿಸದ ಅನುಭವವಾಗುತ್ತಿತ್ತು. ಎರಡು ತಿಂಗಳ ಕಾಲ ಅದನ್ನು ನಿರ್ಲಕ್ಷಿಸಿದ ನಂತರ, ತನ್ನ ಮನೆಯ ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರನ್ನು ನೋಡಲು ಹೋದರು. ಡಾಕ್ಟರು ಹೇಳಿದ್ದನ್ನು ನಂಬಲು ಅವರಿಗೆ ಸಾಧ್ಯವಾಗಲಿಲ್ಲ: "ಆಪ್ಕೋ ಬಚ್ಚಾ ಠಹರ್ ಗಯಾ ಹೈ [ನೀವು ಗರ್ಭಿಣಿಯಾಗಿದ್ದೀರಿ]."
ಅವರಿಗೆ ಅದು ಹೇಗೆ ಸಾಧ್ಯ ಎಂದು ಅರ್ಥವಾಗಲಿಲ್ಲ - ಗರ್ಭಧಾರಣೆಯನ್ನು ತಡೆಯಲು ಕಾಪರ್-ಟಿ ಹಾಕಿಸಿಕೊಂಡು ಆರು ಕೂಡಾ ತಿಂಗಳು ಕಳೆದಿರಲಿಲ್ಲ.
2019 ರ ಘಟನೆಯನ್ನು ಈಗ ನೆನಪಿಸಿಕೊಳ್ಳುತ್ತಾ, ಅವರ ಕಳಾಹೀನ, ತೆಳ್ಳಗಿನ ಮುಖವು ಇನ್ನಷ್ಟು ಕಳೆಗುಂದಿತು. ತಲೆಗೂದಲನ್ನು ನೀಟಾಗಿ ತುರುಬು ಕಟ್ಟಿದ್ದ ಅವರ ಆಳಕ್ಕಿಳಿದ ಕಣ್ಣುಗಳು ಬಹಳ ದಣಿದಿದ್ದವು. ಹಣೆಯ ಮೇಲಿನ ಕೆಂಪು ಬಿಂದಿ ಮಾತ್ರ ಪ್ರಕಾಶಮಾನವಾದ ಚುಕ್ಕೆಯಾಗಿತ್ತು.
ಸುನೀತಾ (ಹೆಸರು ಬದಲಾಯಿಸಲಾಗಿದೆ) 30 ವರ್ಷದ ನಾಲ್ಕು ಮಕ್ಕಳ ತಾಯಿ. ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು, ಅವರು 4 ರಿಂದ 10 ವರ್ಷ ವಯಸ್ಸಿನವರು. ಮೇ 2019ರಲ್ಲಿ, ತನ್ನ ಕಿರಿಯ ಮಗು 2 ವರ್ಷದವಳಿದ್ದಾಗ, ಸುನೀತಾ ಇನ್ನು ಮುಂದೆ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದರು. ಆ ಪ್ರದೇಶಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆಯಿಂದ ಅವರು ಕುಟುಂಬ ಯೋಜನಾ ವಿಧಾನಗಳ ಕುರಿತು ತಿಳಿದುಕೊಂಡರು. ಆಯ್ಕೆಗಳನ್ನು ಪರಿಗಣಿಸಿದ ನಂತರ, ಅವರು ಮೂರು ತಿಂಗಳವರೆಗೆ ಗರ್ಭಧಾರಣೆಯನ್ನು ತಡೆಗಟ್ಟುವುದಾಗಿ ಹೇಳಿಕೊಳ್ಳುವ ಚುಚ್ಚುಮದ್ದು ನೀಡುವ ಗರ್ಭನಿರೋಧಕ ಅಂತರಾವನ್ನು ಆಯ್ಕೆ ಮಾಡಿದ್ದರು. "ನಾನು ಇಂಜೆಕ್ಷನ್ ಪ್ರಯತ್ನಿಸಬೇಕೆಂದು ಅಂದುಕೊಂಡಿದ್ದೆ" ಎಂದು ಅವರು ಹೇಳುತ್ತಾರೆ.
ನಾವು ಅವರ 8*10 ಅಡಿ ಕೋಣೆಯ ನೆಲದ ಮೇಲೆ ಚಾಪೆಯ ಮೇಲೆ ಕುಳಿತಿದ್ದೇವೆ, ಮತ್ತು ಒಂದು ಮೂಲೆಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ಮೇಲೆ ಹೆಚ್ಚು ಚಾಪೆಗಳನ್ನು ಜೋಡಿಸಲಾಗಿದೆ. ಸುನೀತಾರ ಮೈದುನನ ಕುಟುಂಬವು ಪಕ್ಕದ ಕೋಣೆಯಲ್ಲಿ ವಾಸಿಸುತ್ತದೆ, ಮತ್ತು ಇನ್ನೊಬ್ಬ ಮೈದುನನಿಗೆ ಸೇರಿದ ಮೂರನೇ ಕೋಣೆಯನ್ನು ಸಹ ನೋಡಬಹುದು. ನೈಋತ್ಯ ದೆಹಲಿ ಜಿಲ್ಲೆಯ ನಜಫ್ ಗಢದ ಮಹೇಶ್ ಗಾರ್ಡನ್ ಪ್ರದೇಶದಲ್ಲಿ ಈ ಮನೆಯಿದೆ.
ಗೋಪಾಲ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು (ಪಿಎಚ್ಸಿ) ಸುನೀತಾ ಅವರ ಮನೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಯೇ ಆಶಾ ಕಾರ್ಯಕರ್ತೆಯೊಂದಿಗೆ ಅಂತರಾ ಚುಚ್ಚುಮದ್ದನ್ನು ಪಡೆಯಲು ಹೋಗಿದ್ದರು. ಆದರೆ ಅಲ್ಲಿ ಪಿ.ಎಚ್.ಸಿ.ಯ ವೈದ್ಯರು ಬೇರೆಯೇ ಯೋಜನೆಯನ್ನು ಸೂಚಿಸಿದರು. "ವೈದ್ಯರು ನನಗೆ ಕಾಪರ್-ಟಿ ಬಗ್ಗೆ ಹೇಳಲು ಪ್ರಾರಂಭಿಸಿದರು. ಅದು ಸುರಕ್ಷಿತವಾಗಿರುವುದರಿಂದ ಅದನ್ನು ಹಾಕಿಸಿಕೊಳ್ಳುವಂತೆ ಆಕೆ ಹೇಳಿದರು" ಎಂದು ಸುನೀತಾ ಹೇಳುತ್ತಾರೆ. "ನಾನು ಎಂದಿಗೂ ಕಾಪರ್-ಟಿ ಬೇಕೆಂದು ವೈದ್ಯರನ್ನು ಕೇಳಿರಲಿಲ್ಲ" ಎಂದು ಅವರು ಹೇಳುತ್ತಾಳೆ, ಅವರ ಧ್ವನಿ ದೃಢವಾಗಿತ್ತು. "ಆದರೆ ಡಾಕ್ಟರರು ಅದು ಸರಿಹೋಗುತ್ತದೆ ಎಂದು ಒತ್ತಾಯಿಸುತ್ತಲೇ ಇದ್ದರು." ನೀವು ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿಲ್ಲಿಸಲು ಬಯಸುವುದಿಲ್ಲವೇ?' ಎಂದು ವೈದ್ಯೆ ನನ್ನನ್ನು ಕೇಳಿದ್ದರು."








