ದೀಪಾವಳಿಗೆ 10 ದಿನಗಳ ಮೊದಲು ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮುಖೇಶ್ ರಾಮ್ ತಮ್ಮ ಗ್ರಾಮ ಮೊಹಮ್ಮದ್‌ಪುರಕ್ಕೆ ಮರಳಿದ್ದರು.

ನಲವತ್ತು ವರ್ಷದ ಮುಕೇಶ್ ಪ್ರತಿ ವರ್ಷ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿರುವ ತನ್ನ ಮನೆಗೆ ಛತ್ ಪೂಜೆಯನ್ನು ಆಚರಿಸಲು ಬರುತ್ತಿದ್ದರು. ಗಮನಾರ್ಹವಾಗಿ, ಛತ್ ಹಬ್ಬದಲ್ಲಿ, ದೀಪಾವಳಿಯ ನಂತರ ಆರನೇ ದಿನದಂದು ಉದಯಿಸುವ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲಾಗುತ್ತದೆ.

ಊರಿಗೆ ಮರಳಿದ ನಂತರ, ಅವರು ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಮಂಗಳಪುರ ಪುರಾಣ ಬಜಾರ್‌ನ ನಿರ್ಮಾಣ ಸ್ಥಳದಲ್ಲಿ ಕೂಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬೆಳಗ್ಗೆ 8ಕ್ಕೆ ಮನೆಯಿಂದ ಹೊರಟು ಸಂಜೆ 6ಕ್ಕೆ ಮನೆಗೆ ಮರಳುತ್ತಿದ್ದರು.

ಆದರೆ ನವೆಂಬರ್ 2, 2021ರಂದು, ಅವರು ತಡವಾಗಿ ಹಿಂತಿರುಗಿದರು ಮತ್ತು ಸ್ವಲ್ಪ ಸಮಯದ ನಂತರ ತೀವ್ರವಾಗಿ ತಲೆನೋಯುತ್ತಿರುವುದಾಗಿ ಹೇಳತೊಡಗಿದರು.

ಬೆಳಗಿನವರೆಗೂ ನೋವಿನಲ್ಲೇ ಇದ್ದ ಅವರಿಗೆ ಕಣ್ಣುಗಳು ಕೂಡ ಮುಚ್ಚತೊಡಗಿದ್ದವು. ಆದರೆ, ಬೆಳಗ್ಗೆ ಒಮ್ಮೆಲೇ ಮುಕೇಶ್ ಕೆಲಸಕ್ಕೆ ಹೋಗಲು ರೆಡಿಯಾದರು, ಆದರೆ ನೋವಿನ ಕಾರಣ ಹೋಗಲಾಗಲಿಲ್ಲ.

ಅವರ ಸ್ಥಿತಿಯನ್ನು ಕಂಡ ಪ್ರಭಾವತಿ ಖಾಸಗಿ ವಾಹನವನ್ನು ಬಾಡಿಗೆಗೆ ಪಡೆದು 35 ಕಿ.ಮೀ ದೂರದ ಗೋಪಾಲಗಂಜ್ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. "ಸುಬೆರೇ ಲೇ ಜಾತ್‌, 11 ಬಜೆ ಮೊವ್‌ಗಾತ್‌ ಹೊ ಗಯೀಲ್ [ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದೆವು, 11 ಗಂಟೆಗೆ ನಿಧನರಾದರು]."

ಪ್ರಭಾವತಿ (35) ಪತಿಯ ಮೃತದೇಹದೊಂದಿಗೆ ಸಂಜೆ ಮನೆಗೆ ಹಿಂದಿರುಗುವ ವೇಳೆಗೆ ಅವರ ಪಕ್ಕಾ ಮನೆಗೆ ಸೀಲ್‌ ಹಾಕಲಾಗಿತ್ತು. ಮೊಹಮ್ಮದ್‌ಪುರ ಠಾಣೆಯ ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದ್ದರು.

The police sealed Mukesh and Prabhabati's house after filing an FIR, accusing him of selling illicit liquor.
PHOTO • Umesh Kumar Ray
Prabhabati was widowed by illegal hooch and made homeless by prohibition laws
PHOTO • Umesh Kumar Ray

ಎಡ: ಮುಖೇಶ್ ಸಾವಿನ ನಂತರ, ಪೊಲೀಸರು ಅಕ್ರಮ ಮದ್ಯ ಮಾರಾಟದ ಆರೋಪದ ಮೇಲೆ ಅವರ ಮನೆಗೆ ಸೀಲ್ ಮಾಡಿದರು. ಬಲ: ನಕಲಿ ಮದ್ಯವು ಪತಿಯನ್ನು ಬಲಿ ತೆಗೆದುಕೊಂಡಿತು ಮತ್ತು ನಿಷೇಧ ಕಾನೂನು ಅವರನ್ನು ನಿರಾಶ್ರಿತರನ್ನಾಗಿ ಮಾಡಿತು

“ಮನೆಗೆ ಮರಳಿ ಬಂದು ನೋಡಿದಾಗ ಬಾಗಿಲನ್ನು ಸೀಲ್‌ ಮಾಡಲಾಗಿತ್ತು. ಅನಿವಾರ್ಯವಾಗಿ ಗಂಡನ ಶವವನ್ನು ಮನೆಯ ಹೊರಗೆ ಇಟ್ಟುಕೊಳ್ಳಬೇಕಾಯಿತು. ನಾನು ಮತ್ತು ನನ್ನ ಮಕ್ಕಳು ಒಂದಷ್ಟು ಪುರಾ [ಹುಲ್ಲು] ಸುಡುವ ಮೂಲಕ ರಾತ್ರಿ ಕಳೆದೆವು.” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

“ಘರ್ಭೋ ಸೇ ಗೈನಿ, ಆ ಮಾರ್ದೋ ಸೆ ಗೈನಿ? ಈ ತಾ ಕೋನೋ ಬಾತ್‌ ನೈಖೆ ಭೈಲ್‌ ನಾ. ಕೊನೋ ತಾ ಆಧಾರದ ಕರೆ ಕೆ ಚಾಹಿ [ಮನೆ ಕಳೆದುಕೊಂಡೆ. ಗಂಡನನ್ನು ಕಳೆದುಕೊಂಡೆ. ಹೀಗೆಲ್ಲ ಸುಮ್ಮನೆ ಮಾಡಲಾಗದು. ಅದಕ್ಕೆ ಏನಾದರೂ ಆಧಾರವಿರಬೇಕು.]” ಎನ್ನುತ್ತಾರವರು.

*****

ಈ ವರದಿಯನ್ನು ಪ್ರಕಟಿಸಿದ ದಿನದಂದು ಬಿಹಾರ ಪೊಲೀಸರು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಏಪ್ರಿಲ್ 14, 2023 ರಂದು ಪೂರ್ವ ಚಂಪಾರಣ್‌ನ ವಿವಿಧ ಗ್ರಾಮಗಳಲ್ಲಿ ನಕಲಿ ಮದ್ಯ ಸೇವನೆಯಿಂದ 26 ಸಾವುಗಳು ದಾಖಲಾಗಿವೆ ಮತ್ತು ಇನ್ನೂ ಅನೇಕರು ಅಸ್ವಸ್ಥರಾಗಿದ್ದಾರೆ.

ಬಿಹಾರದಲ್ಲಿ ಅನ್ವಯವಾಗುವ ಮದ್ಯ ನಿಷೇಧ ಮತ್ತು ಅಬಕಾರಿ ಕಾಯಿದೆ, 2016ರ ಅಡಿಯಲ್ಲಿ , ದೇಶೀಯ ಮತ್ತು ವಿದೇಶಿ ಮದ್ಯ ಸೇರಿದಂತೆ ಮದ್ಯ ಮತ್ತು ಶೇಂದಿ ಉತ್ಪಾದನೆ, ಮಾರಾಟ ಮತ್ತು ಸೇವನೆಯ ಮೇಲೆ ನಿಷೇಧವಿದೆ.

ನಕಲಿ ಮದ್ಯವು ಪತಿಯನ್ನು ಕಿತ್ತುಕೊಂಡರೆ, ನಿಷೇಧ ಕಾನೂನು ಅವರನ್ನು ನಿರಾಶ್ರಿತರನ್ನಾಗಿ ಮಾಡಿತು.

ಸ್ಥಳೀಯ ಜನರ ಹೇಳಿಕೆಗಳ ಆಧಾರದ ಮೇಲೆ ದಾಖಲಿಸಿದ ಎಫ್‌ಐಆರ್‌ನಲ್ಲಿ, ಮಹ್ಮದಪುರ ಪೊಲೀಸ್ ಠಾಣೆಯ ಪೊಲೀಸರು ಮುಕೇಶ್ ಮದ್ಯ ಮಾರಾಟ ಮಾಡುತ್ತಿದ್ದ ಎಂದು ಬರೆದಿದ್ದಾರೆ ಮತ್ತು ಆತನ ಮನೆಯಿಂದ 1.2 ಲೀಟರ್ ದೇಶೀಯ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಎಫ್‌ಐಆರ್ ಪ್ರಕಾರ, ಮಾಹಿತಿ ಪಡೆದ ಪೊಲೀಸರು ಮುಖೇಶ್ ರಾಮ್ ಮನೆಗೆ ತಲುಪಿ ಅಲ್ಲಿಂದ ತಲಾ 200 ಎಂಎಲ್‌ನ 6 ಪಾಲಿಥಿನ್ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ ಮೂರು ಖಾಲಿ ಪಾಲಿಥಿನ್ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

Prabhabati shows a photo of her and Mukesh.
PHOTO • Umesh Kumar Ray
PHOTO • Umesh Kumar Ray

ಎಡ: ಪ್ರಭಾವತಿ ತನ್ನ ಮತ್ತು ಮುಖೇಶ್ ಅವರ ಫೋಟೋವನ್ನು ತೋರಿಸುತ್ತಿರುವುದು. ಬಲ: ಅವರ ಮರಣದ ನಂತರ, ಪ್ರಭಾವತಿ ದೇವಿ ಮತ್ತು ಅವರ ನಾಲ್ವರು ಮಕ್ಕಳು ಈಗ ಮೊಹಮ್ಮದ್ಪುರ ಗ್ರಾಮದ ತಮ್ಮ ಹಳೆಯ ಮನೆಯ ಬಳಿಯ ಈ ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ

ಪರಿಯೊಂದಿಗೆ ಮಾತನಾಡುತ್ತಾ, ಈ ಆರೋಪಗಳನ್ನು ತಳ್ಳಿಹಾಕಿದ ಪ್ರಭಾವತಿ  ಸಿಮೆಂಟ್‌ ಶೀಟಿನ ಚಾವಣಿ ಹೊಂದಿರುವ ತನ್ನ ಪಕ್ಕಾ ಮನೆಯನ್ನು ತೋರಿಸುತ್ತಾ, “ಮದ್ಯ ಮಾರುವವನ ಮನೆಗೆ ಹೋಗಿ ನೋಡಿ. ಮದ್ಯ ಮಾರಿದ್ದರೆ ನಮ್ಮ ಮನೆ ಹೀಗಿರುತ್ತಿತ್ತಾ?" ಎಂದು ಕೇಳಿದರು.

ತನ್ನ ಮನೆಯಲ್ಲಿ ಮದ್ಯದ ವ್ಯಾಪಾರ ನಡೆಯುತ್ತಿತ್ತು ಎಂದು ಎಫ್‌ಐಆರ್‌ನಲ್ಲಿ ಪೊಲೀಸರು ಮಾಡಿರುವ ಹೇಳಿಕೆಗಳನ್ನು ಆಕೆ ಸಾರಾಸಗಟಾಗಿ ಅಲ್ಲಗಳೆಯುತ್ತಾರೆ. ಅವರು ಮುಂದುವರೆದು ಹೇಳುತ್ತಾರೆ, “ಹಮ್ರೆ ಮಾಲಿಕ್ ಸಾಹಿಬ್ [ಅವರ ಪತಿ] ದಾರೂ ಬೇಚತೆ , ತಾಸ್ ಹಮ್ ಖಿ ಕಹತೀ ಹೋತಿ ಕಿ ಹಮ್ರಾ ಕೆ ಲೇ ಚಲಿ [ನನ್ನ ಗಂಡ ಮದ್ಯದ ವ್ಯಾಪಾರವನ್ನು ನಡೆಸುತ್ತಿದ್ದರೆ, ನಮ್ಮನ್ನು ಕರೆದುಕೊಂಡು ಹೋಗುವಂತೆ ನಾನೇ ಪೊಲೀಸರಿಗೆ ಹೇಳುತ್ತಿದ್ದೆ].”

"ಗ್ರಾಮಸ್ಥರನ್ನು ಕೇಳಿ. ಮಾಲಿಕ್ ಸಾಹೇಬ್ ಮೇಸ್ತ್ರಿ ಕೆಲಸ ಮಾಡುತ್ತಿದ್ದರು ಎಂದು ಜನರೇ ಹೇಳುತ್ತಾರೆ." ಆದರೆ, ಆಕೆ ಮುಕೇಶ್ ಕುಡಿತವನ್ನು ಅಲ್ಲಗಳೆಯುವುದಿಲ್ಲ, ಆದರೆ ಅವನು ಕುಡುಕನಲ್ಲ ಎಂದು ಹೇಳುತ್ತಾರೆ. “ಯಾರಾದರೂ ಕುಡಿಯಲು ಕೊಟ್ಟಾಗ ಮಾತ್ರ ಅವರು ಕುಡಿಯುತ್ತಿದ್ದರು. ತಲೆ ನೋವು ಬಂದ ದಿನ ಕುಡಿದು ಬಂದಿದ್ದನ್ನು ನಮಗೆ ಹೇಳಿರಲಿಲ್ಲ."

ಅವರ ಸಾವಿಗೆ ನಕಲಿ ಮದ್ಯ ಸೇವಿಸಿದ್ದೇ ಕಾರಣವೋ ಇಲ್ಲವೋ ಎಂಬುದನ್ನು ಮರಣೋತ್ತರ ಪರೀಕ್ಷೆಯಿಂದ ದೃಢಪಡಿಸಬಹುದಾಗಿತ್ತು, ಆದರೆ ಮುಕೇಶ್ ಮೃತದೇಹವನ್ನು ಪರೀಕ್ಷೆಗೆ ಕಳುಹಿಸಿಲ್ಲ.

*****

ಉತ್ತರ ಪ್ರದೇಶದ ಗಡಿಯಲ್ಲಿರುವ ಗೋಪಾಲ್‌ಗಂಜ್‌ನ ಸಿದ್ವಾಲಿಯಾ ಬ್ಲಾಕ್‌ನಲ್ಲಿರುವ ಮಹಮದ್‌ಪುರ ಗ್ರಾಮವು 7,273 ಜನಸಂಖ್ಯೆಯನ್ನು ಹೊಂದಿದೆ (ಜನಗಣತಿ 2011) ಪರಿಶಿಷ್ಟ ಜಾತಿಗೆ ಸೇರಿದ 628 ಜನರನ್ನು ಹೊಂದಿದೆ. ಇಲ್ಲಿನ ಹೆಚ್ಚಿನ ಜನರು ಜೀವನೋಪಾಯಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ; ಹೋಗಲು ಸಾಧ್ಯವಾಗದವರು ಗ್ರಾಮದಲ್ಲಿಯೇ ಇದ್ದು ದಿನಗೂಲಿ ಮಾಡುತ್ತಿದ್ದಾರೆ.

ಮುಖೇಶ್ ಸಾವನ್ನಪ್ಪಿದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ನಡೆದ ಹೂಚ್ ದುರಂತದಲ್ಲಿ ಒಟ್ಟು 18 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮುಖೇಶ್ ಸೇರಿದಂತೆ 10 ಜನರು ಬಿಹಾರದ ಮಹಾದಲಿತ ವರ್ಗಕ್ಕೆ ಸೇರಿದ ಚಮರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಅಂಚಿನಲ್ಲಿರುವ ಸಮುದಾಯವು ಸಾಂಪ್ರದಾಯಿಕವಾಗಿ ಸತ್ತ ದನಗಳ ಚರ್ಮವನ್ನು ಸುಲಿದು ಮಾರಾಟ ಮಾಡುತ್ತದೆ.

After Mukesh's death, the family is struggling to managing their expenses.
PHOTO • Umesh Kumar Ray
Prabhabati with her children, Preeti, Sanju and Anshu (from left to right)
PHOTO • Umesh Kumar Ray

ಮುಖೇಶ್ ಸಾವಿನ ನಂತರ, ಕುಟುಂಬವು ತಮ್ಮ ಖರ್ಚುಗಳನ್ನು ನಿರ್ವಹಿಸಲು ಹೆಣಗಾಡುತ್ತಿದೆ. ಪ್ರಭಾವತಿ ತನ್ನ ಮಕ್ಕಳಾದ ಪ್ರೀತಿ, ಸಂಜು ಮತ್ತು ಅಂಶು ಜೊತೆ (ಎಡದಿಂದ ಬಲಕ್ಕೆ)

ಬಿಹಾರದಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳೊಂದರಲ್ಲೇ ನಕಲಿ ಮದ್ಯ ಸೇವಿಸಿ 72 ಮಂದಿ ಸಾವನ್ನಪ್ಪಿದ್ದರು. ಅದೇ ಸಮಯದಲ್ಲಿ, 2016 ರಿಂದ, ನಕಲಿ ಮದ್ಯ ಸೇವಿಸಿ 200 ಜನರು ಸಾವನ್ನಪ್ಪಿದ್ದಾರೆ ಮತ್ತು ಅವರ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಸಾಮಾನ್ಯವಾಗಿ ಪೊಲೀಸರು ಅಥವಾ ಸರ್ಕಾರವು ಈ ಸಾವುಗಳಿಗೆ ನಕಲಿ ಮದ್ಯ ಕಾರಣವೆಂದು ಬರೆಯುವುದಿಲ್ಲ, ಆದ್ದರಿಂದ ಈ ಅಂಕಿಅಂಶಗಳು ದಾರಿತಪ್ಪಿಸುವಂತಿರಬಹುದು. ಹೆಚ್ಚಿನ ಪ್ರಕರಣಗಳಲ್ಲಿ, ಪೊಲೀಸರು ಸಾವಿಗೆ ನಕಲಿ ಮದ್ಯವನ್ನು ಕಾರಣವೆಂದು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ.

*****

ಪ್ರಭಾವತಿ ಅವರ ಮನೆಗೆ ಏಕಾಏಕಿ ಸೀಲ್ ಹಾಕಲಾಗಿದ್ದು, ಇದರಿಂದಾಗಿ ಅವರಿಗೆ ತಮ್ಮ ಮನೆಯಲ್ಲಿದ್ದ ಬಟ್ಟೆ, ಚೌಕಿ (ಮರದ ಮಂಚ), ಧಾನ್ಯಗಳಂತಹ ಅಗತ್ಯ ವಸ್ತುಗಳನ್ನು ಹೊರತೆಗೆಯಲು ಸಾಧ್ಯವಾಗುತ್ತಿಲ್ಲ. ಆ ಸಮಯದಲ್ಲಿ ಸ್ಥಳೀಯರು ಮತ್ತು ಆಕೆಯ ಅತ್ತಿಗೆ ಆಕೆಗೆ ಸಹಾಯ ಮಾಡಿದರು.

ಮುಖೇಶ್ ಶಿಮ್ಲಾದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರತಿ ತಿಂಗಳು 5ರಿಂದ 10 ಸಾವಿರ ರೂಪಾಯಿ ಕಳುಹಿಸುತ್ತಿದ್ದರು. ಈಗ ಅವರ ಸಾವಿನ ನಂತರ ಪ್ರಭಾವತಿ ತನ್ನ ನಾಲ್ಕು ಮಕ್ಕಳಾದ ಸಂಜು (15), ಪ್ರೀತಿ (11), ದೀಪಕ್ (7) ಮತ್ತು ಅಂಶು (5) ಪೋಷಣೆಗಾಗಿ ಕೃಷಿ ಕೂಲಿಯನ್ನು ಅವಲಂಬಿಸಿದ್ದಾರೆ. ಆದರೆ ವರ್ಷಕ್ಕೆ ಎರಡು ತಿಂಗಳು ಈ ಕೆಲಸ ಸಿಗುವುದೇ ಇಲ್ಲ, ಪ್ರತಿ ತಿಂಗಳು ವಿಧವಾ ಪಿಂಚಣಿಯಾಗಿ ಸಿಗುವ 400 ರೂ.ನಲ್ಲಿಯೇ ಜೀವನ ಸಾಗಿಸಬೇಕಾಗಿದೆ.

ಕಳೆದ ವರ್ಷ ಪಾಲು ಆಧಾರದಲ್ಲಿ 10 ಕತ್ತಾ (ಸುಮಾರು 0.1 ಎಕರೆ) ಜಮೀನು ಪಡೆದು ಭತ್ತ ಕೃಷಿ ಮಾಡಿದ್ದು, ಇದರಿಂದ ಸುಮಾರು 250 ಕೆ.ಜಿ. ಭತ್ತ ಸಿಕ್ಕಿದೆ, ಗೊಬ್ಬರ, ನೀರಿಗೆ ತಗಲುವ 3,000 ರೂ.ಗಳ ಖರ್ಚನ್ನು ಅವರ ಸಹೋದರಿಯೇ ಭರಿಸಿದ್ದಾರೆ.

ಪ್ರಭಾವತಿಯ ಸಹೋದರಿ, ಮುಖೇಶ್ ಮತ್ತು ಪ್ರಭಾವತಿಯವರ ಹಿರಿಯ ಮಗ ದೀಪಕ್‌ಗೆ ಕಲಿಸುವ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ಅವನು ಅವರ ಬಳಿಯಲ್ಲೇ ಇದ್ದಾನೆ. ಪ್ರಭಾವತಿ ಇದುವರೆಗೆ 10 ಸಾವಿರ ರೂ.ಸಾಲ ಮಾಡಿದ್ದಾರೆ. ಬಡ್ಡಿಗೆ ಸಾಲ ಪಡೆದು ಮರುಪಾವತಿ ಮಾಡಲು ಸಾಧ್ಯವಾಗದ ಕಾರಣ ಅವರು ಅಲ್ಲಿ ಇಲ್ಲಿ 500-1,000 ಸಾಲವಾಗಿ ಪಡೆದು ಮರುಪಾವತಿಸುತ್ತಾರೆ. ಈ ರೀತಿಯಾಗಿ ಪಡೆಯು ʼಹಾತ್‌ ಉಟಾಯ್‌ʼ (ಕೈಸಾಲ) ಸಾಲಕ್ಕೆ ಬಡ್ಡಿ ಇರುವುದಿಲ್ಲ. “ನಾನು ಹೀಗೇ ಯಾರದ್ದದಾರೂ ಬಳಿ 500-1,000 ಕೈಸಾಲವಾಗಿ ಪಡೆದು ಕೆಲವೇ ದಿನಗಳಲ್ಲಿ ಹಿಂತಿರುಗಿಸುತ್ತೇನೆ. ಇಂತಹ ಸಾಲಗಳಿಗೆ ಬಡ್ಡಿ ಇರುವುದಿಲ್ಲ” ಎಂದು ಅವರು ಹೇಳುತ್ತಾರೆ.

Prabhabati has leased 10 kattha of land to cultivate paddy.
PHOTO • Umesh Kumar Ray
She stands next to small shop she was given by the Bihar government as part of a poverty alleviation scheme
PHOTO • Umesh Kumar Ray

ಎಡ: ಪ್ರಭಾವತಿ 10 ಕಟ್ಟಾ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಬಲ: ಬಡತನ ನಿರ್ಮೂಲನಾ ಯೋಜನೆಯಡಿ ಬಿಹಾರ ಸರ್ಕಾರವು ತನಗೆ ನೀಡಿದ ಸಣ್ಣ ಅಂಗಡಿಯ ಪಕ್ಕ ನಿಂತಿರುವ ಪ್ರಭಾವತಿ

ಮುಕೇಶ್‌ ಮರಣದ ಮೂರು ತಿಂಗಳ ನಂತರ, ಬಿಹಾರ ಸರ್ಕಾರವು ಬಡತನ ನಿರ್ಮೂಲನೆ ಯೋಜನೆಯ ಭಾಗವಾಗಿ ಪ್ರಭಾವತಿಯವರಿಗೆ ಗುಮ್ಟಿ (ಒಂದು ಸಣ್ಣ ಮರದ ಹಲಗೆಯಿಂದ ಮಾಡಿದ ಪೆಟ್ಟಿಗೆ ಅಂಗಡಿ) ಮತ್ತು 20,000 ರೂ ಮೌಲ್ಯದ ಸರಕುಗಳನ್ನು ನೀಡಿತು.

ಅವರು ವಿವರಿಸುವಂತೆ, “ಸರ್ಫ್, ಸೋಪ್, ಕುರ್ಕುರೆ, ಬಿಸ್ಕತ್ತುಗಳು. ಇದೆಲ್ಲವನ್ನು ಮಾರಾಟ ಮಾಡಲು ನೀಡಲಾಯಿತು. ಆದರೆ ಸಂಪಾದನೆ ತೀರಾ ಕಡಿಮೆ, ಕೇವಲ 10 ರೂಪಾಯಿ ಉಳಿಯುತ್ತಿತ್ತು.ಆ ಹತ್ತು ರೂಪಾಯಿಗೆ ನನ್ನ ಮಗ ತಿನ್ನುತ್ತಿದ್ದ ತಿಂಡಿಗೇ ಹೋಗುತ್ತಿದ್ದ ಕಾರಣ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ನನ್ನ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಅಂಗಡಿಯ ಬಂಡವಾಳವೇ ಚಿಕಿತ್ಸೆಗೆ ಖರ್ಚಾಯಿತು."

ಪ್ರಭಾವತಿ ಈಗ ಭವಿಷ್ಯದ ಚಿಂತೆಯಲ್ಲಿದ್ದಾರೆ. "ಮಕ್ಕಳನ್ನು ಹೇಗೆ ಬೆಳೆಸುವುದು? ಇಬ್ಬರು ಹೆಣ್ಣು ಮಕ್ಕಳ ಮದುವೆ ಹೇಗೆ ಮಾಡುವುದು? ಇದನ್ನೆಲ್ಲ ಯೋಚಿಸುವಾಗ ತಲೆಸಿಡಿಯುತ್ತದೆ. ಅತ್ತು ಅತ್ತು ಅನಾರೋಗ್ಯಕ್ಕೆ ಒಳಗಾಗುತ್ತೇನೆ. ನಾಲ್ಕು ರೂಪಾಯಿ ಸಂಪಾದಿಸಿ ಮಕ್ಕಳನ್ನು ನೋಡಿಕೊಳ್ಳಲು ಎಲ್ಲಿ ಹೋಗಬೇಕು, ಏನು ಕೆಲಸ ಮಾಡಬೇಕು ಎನ್ನುವ ಚಿಂತೆ ಕಾಡುತ್ತಿರುತ್ತದೆ."

ಆಕೆಯ ಗಂಡನ ಸಾವು ಕುಟುಂಬವನ್ನು ಬಡತನಕ್ಕೆ ತಳ್ಳಿದೆ. "ಮಾಲಿಕ್ ಸಾಹೇಬ್ ಬದುಕಿದ್ದಾಗ ನಾವು ಮಾಂಸ ಮತ್ತು ಮೀನು ತಿನ್ನುತ್ತಿದ್ದೆವು. ಆದರೆ ಅವರು ತೀರಿಕೊಂಡಾಗಿನಿಂದ ನಮಗೆ ತರಕಾರಿ ತಿನ್ನುವುದು ಕೂಡಾ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಸರಕಾರ ನಮಗೆ ಏನಾದರೂ ಸಹಾಯ ಮಾಡುವ ರೀತಿ ಒತ್ತಾಯಿಸಿ ಬರೆಯಿರಿ. ಆ ಮೂಲಕವಾದರೂ ನನ್ನ ಕೈಯಲ್ಲಿ ಒಂದಿಷ್ಟು ಹಣ ಸೇರಬಹುದು.” ಎಂದು ಅವರು ಹತಾಶೆಯಿಂದ ಹೇಳುತ್ತಾರೆ.

ಈ ವರದಿಯು ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನಿಸ್ಟ್ ಸ್ಮರಣಾರ್ಥ ಫೆಲೋಶಿಪ್ ಸಹಾಯವನ್ನು ಪಡೆದಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Umesh Kumar Ray

Umesh Kumar Ray is a PARI Fellow (2022). A freelance journalist, he is based in Bihar and covers marginalised communities.

Other stories by Umesh Kumar Ray
Editor : Devesh

Devesh is a poet, journalist, filmmaker and translator. He is the Translations Editor, Hindi, at the People’s Archive of Rural India.

Other stories by Devesh
Editor : Sanviti Iyer

Sanviti Iyer is Assistant Editor at the People's Archive of Rural India. She also works with students to help them document and report issues on rural India.

Other stories by Sanviti Iyer
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru