ಗುರ್ಪ್ರತಾಪ್ ಸಿಂಗ್ 11ನೇ ತರಗತಿಯ ವಿದ್ಯಾರ್ಥಿ ಮತ್ತು ಅವನ ಸೋದರಸಂಬಂಧಿ 13 ವರ್ಷದ ಸುಖ್ಬೀರ್ 7ನೇ ತರಗತಿಯಲ್ಲಿದ್ದಾನೆ. ಇಬ್ಬರೂ ಪಂಜಾಬ್ನ ಅಮೃತಸರ ಜಿಲ್ಲೆಯವರು. ಅವರು ಇದೀಗ ಶಾಲೆಯಿಂದ ದೂರವಾಗಿದ್ದಾರೆ, ಆದರೆ ವಿಭಿನ್ನ ರೀತಿಯ ಶಿಕ್ಷಣವೊಂದನ್ನು ಕಲಿಯುತ್ತಿದ್ದಾರೆ.
"ನಾವು ಇಲ್ಲಿ ರೈತರು ತಂಗಿರುವ ಪ್ರದೇಶವನ್ನು ರಾತ್ರಿಯಲ್ಲಿ ಕಾಯುತ್ತೇವೆ, ಮತ್ತು ನಾವು ಅದನ್ನು ಮುಂದುವರಿಸುತ್ತೇವೆ" ಎಂದು ಸಿಂಘು-ದೆಹಲಿ ಗಡಿಯಲ್ಲಿರುವ ಹರಿಯಾಣದ ಸೋನಿಪತ್ನಲ್ಲಿ 17 ವರ್ಷದ ಗುರ್ಪ್ರತಾಪ್ ಹೇಳುತ್ತಾನೆ.
ದೆಹಲಿಯ ವಿವಿಧ ಗಡಿಗಳಲ್ಲಿ ಜಮಾಯಿಸಿರುವ ಲಕ್ಷಾಂತರ ರೈತರಲ್ಲಿ ಗುರುಪ್ರತಾಪ್ ಕೂಡ ಒಬ್ಬ. ಕೆಲವು ರೈತರು ಕೆಲವು ವಾರಗಳ ಹಿಂದೆ ರಾಜಧಾನಿಯನ್ನು ಪ್ರವೇಶಿಸಿ ಉತ್ತರ ದೆಹಲಿಯ ಬುರಾರಿ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ.
ಎಲ್ಲಾ ತಾಣಗಳಲ್ಲಿ, ಈ ವರ್ಷದ ಸೆಪ್ಟೆಂಬರ್ನಲ್ಲಿ ಸಂಸತ್ತಿನ ಮೂಲಕ ಅಂಗೀಕರಿಸಲ್ಪಟ್ಟ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅವರ ಬೃಹತ್ ಮತ್ತು ಶಾಂತಿಯುತ ಪ್ರತಿಭಟನೆಗಳು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮತ್ತು ಈ ರೈತರು ಮುಂದೆ ನಡೆಯುವ ದೀರ್ಘ ಯುದ್ಧವನ್ನು ಎದುರಿಸಲು ಸಿದ್ಧರಾಗಿದ್ದಾರೆ, ಅವರ ಬೇಡಿಕೆಗಳ ಕುರಿತು ಅವರಿಗೆ ಸ್ಪಷ್ಟತೆಯಿದೆ, ಅವರ ಉದ್ದೇಶಕ್ಕೆ ಬದ್ಧರಾಗಿದ್ದಾರೆ.
ನಾನು ಸಿಂಘು ಮತ್ತು ಬುರಾರಿಯಲ್ಲಿ ಕ್ಯಾಂಪ್ಗಳನ್ನು ಸ್ಥಾಪಿಸಲಾಗಿರುವ ಸ್ಥಳಗಳಿಗೆ ಹೋದಾಗ ಸಂಜೆಗತ್ತಲೆಯಾಗಿ ಮಲಗುವ ಸಮಯವಾಗಿತ್ತು. ಅಲ್ಲಿ ಕೆಲವು ರೈತರು ತಮ್ಮ ಟ್ರಕ್ಗಳಲ್ಲಿ ತಂಗಿದ್ದರೆ, ಕೆಲವರು ಪೆಟ್ರೋಲ್ ಪಂಪ್ಗಳಲ್ಲಿ ಮಲಗಿದ್ದರು, ಇನ್ನೂ ಕೆಲವರು ಗುಂಪುಗೂಡಿ ಹಾಡುಗಳನ್ನು ಹಾಡುತ್ತಿದ್ದರು. ಈ ಎಲ್ಲ ಸ್ಥಳಗಳ ವಾತಾವರಣದಲ್ಲೂ ಆಪ್ತತೆ, ಸೌಹಾರ್ದತೆ ಮತ್ತು ಸಂಕಲ್ಪ ಹಾಗೂ ಪ್ರತಿರೋಧದ ಭಾವನೆಯಿತ್ತು.
ಈ ಮೂರು ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ: ರೈತ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಸಂವರ್ಧನೆ ಮತ್ತು ಸರಳೀಕರಣ) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020 ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 .
ಈ ಕಾನೂನುಗಳನ್ನು ಮೂಲಭೂತವಾಗಿ ತಮ್ಮ ಹಕ್ಕುಗಳು ಮತ್ತು ಕೃಷಿಯಲ್ಲಿನ ಪಾಲನ್ನು ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಿಗೆ ಹಸ್ತಾಂತರಿಸಿ, ಈ ದೊಡ್ಡ ಉದ್ಯಮಿಗಳ ಕರುಣೆಯಲ್ಲಿ ಬದುಕಲು ಒತ್ತಾಯಿಸುತ್ತದೆಂದು ಅವರು ಹೇಳುತ್ತಾರೆ. "ಇದು ದ್ರೋಹವಲ್ಲದಿದ್ದರೆ, ಇನ್ಯಾವುದು?" ಎಂದು ಒಂದು ಧ್ವನಿ ಕತ್ತಲೆಯಲ್ಲಿ ಕೇಳುತ್ತದೆ.
"ನಾವು ರೈತರು ಈ ಕಂಪನಿಗಳೊಂದಿಗೆ ಈ ಮೊದಲೇ ವ್ಯವಹಾರದ ಅನುಭವವನ್ನು ಹೊಂದಿದ್ದೇವೆ - ಮತ್ತು ನಾವು ಅವರನ್ನು ನಂಬುವುದಿಲ್ಲ. ಅವರು ಮೊದಲು ನಮಗೆ ಮೋಸ ಮಾಡಿದ್ದಾರೆ, ಅವರನ್ನು ಮ್ತತೆ ನಂಬಲು ನಾವು ಮೂರ್ಖರಲ್ಲ. ನಮ್ಮ ಹಕ್ಕುಗಳು ನಮಗೆ ತಿಳಿದಿವೆ," ನಾನು ಆ ತಡ ಸಂಜೆ ಸಿಂಘುವಿನಲ್ಲಿರುವ ಶಿಬಿರಗಳ ಮೂಲಕ ಹಾದುಹೋಗುವಾಗ ಕೇಳಿದ ಅನೇಕ ಧ್ವನಿಗಳಲ್ಲಿ ಇದೂ ಒಂದಾಗಿತ್ತು.
ಯಾವುದೇ ರೀತಿಯಲ್ಲಿ ಕಾನೂನುಗಳನ್ನು ರದ್ದುಗೊಳಿಸುವ ಸಾಧ್ಯತೆಯನ್ನು ಸರ್ಕಾರ ನಿರಾಕರಿಸುತ್ತಿರುವಾಗ ಅವರು ಈ ಅಸ್ತವ್ಯಸ್ತತೆಯ ಬಗ್ಗೆ ಚಿಂತಿಸುತ್ತಿಲ್ಲವೇ? ಅವರು ದೃಢವಾಗಿ ನಿಲ್ಲುತ್ತಾರೆಯೇ?
"ನಾವು ಬಲಶಾಲಿಗಳು ನಾವು ನಮ್ಮದೇ ಆದ ಆಹಾರವನ್ನು ತಯಾರಿಸುತ್ತಿದ್ದೇವೆ ಮತ್ತು ಅದನ್ನು ಇತರರಿಗೂ ವಿತರಿಸುತ್ತಿದ್ದೇವೆ. ನಾವು ರೈತರು, ಸದೃಢವಾಗಿರುವುದು ಹೇಗೆ ಎಂದು ನಮಗೆ ತಿಳಿದಿದೆ." ಎಂದು ಪಂಜಾಬ್ನ ಮತ್ತೊಬ್ಬ ರೈತ ಹೇಳುತ್ತಾರೆ.
![](/media/images/02-IMG_7078-01-SF.width-1440.jpg)
ಅಮೃತಸರ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಾದ, 17 ವರ್ಷದ ಗುರ್ಪ್ರತಾಪ್ ಸಿಂಗ್ ಮತ್ತು 13 ವರ್ಷದ ಸುಖಬೀರ್ ಸಿಂಗ್ ಸಿಂಗ್ ಅವರು, 'ಪ್ರತಿದಿನ ರಾತ್ರಿ ಇಲ್ಲಿನ ರೈತರ ನೆಲೆಗಳನ್ನು ಕಾವಲು ಕಾಯುತ್ತೇವೆ' ಎಂದು ಹೇಳುತ್ತಾರೆ
ಮತ್ತು ಹರಿಯಾಣದಿಂದ ಬಂದಿರುವ ಅನೇಕರು ಇದ್ದಾರೆ, ಅವರು ಪ್ರತಿಭಟನಾಕಾರರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೈತಾಲ್ ಜಿಲ್ಲೆಯ 50 ವರ್ಷದ ಶಿವ ಕುಮಾರ್ ಬಾಬಾದ್ ಹೇಳುವಂತೆ: “ನಮ್ಮ ರೈತ ಸಹೋದರರು ತಮ್ಮ ಮನೆಗಳ ಸೌಕರ್ಯವನ್ನು ತೊರೆದು ಈ ದೆಹಲಿಯ ಗಡಿಗೆ ಬಂದಿದ್ದಾರೆ. ನಾವು ಅವರಿಗೆ ನಮ್ಮಿಂದ ಸಾಧ್ಯವಿರುವುದನ್ನು ಒದಗಿಸುತ್ತಿದ್ದೇವೆ."
ಸಿಂಘು ಮತ್ತು ಬುರಾರಿಯಲ್ಲಿನ ಈ ರೈತರು ಸಹ ನಾಗರಿಕರಿಂದ ಪಡೆಯುತ್ತಿರುವ ಅಭಿಮಾನ ಮತ್ತು ಕಾಳಜಿಯನ್ನು ಉಲ್ಲೇಖಿಸುತ್ತಾರೆ. "ಜನರು ನಮ್ಮ ಸಹಾಯಕ್ಕೆ ಬರುತ್ತಿದ್ದಾರೆ. ಗಡಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ವೈದ್ಯರು ಶಿಬಿರಗಳನ್ನು ಸ್ಥಾಪಿಸಿದ್ದಾರೆ, ಅದರಿಂದ ನಾವು ವೈದ್ಯಕೀಯ ನೆರವು ಪಡೆಯುತ್ತಿದ್ದೇವೆ ”ಎಂದು ಪ್ರತಿಭಟನಾಕಾರರೊಬ್ಬರು ಹೇಳುತ್ತಾರೆ.
"ನಾವು ಸಾಕಷ್ಟು ಬಟ್ಟೆಗಳನ್ನು ತಂದಿದ್ದೇವೆ," ಇನ್ನೊಬ್ಬರು ನನಗೆ ಹೇಳಿದರು, "ಆದರೂ ಜನರು ಹೆಚ್ಚು ಹೆಚ್ಚು ಬಟ್ಟೆ ಮತ್ತು ಕಂಬಳಿಗಳನ್ನು ದಾನ ಮಾಡುತ್ತಿದ್ದಾರೆ. ಇದು ಕಾರವಾನ್, ಆದರೆ ಮನೆಯಂತಹ ಅನುಭವ ನೀಡುತ್ತದೆ."
ಇಲ್ಲಿ ಸರ್ಕಾರ ಮತ್ತು ಕಾರ್ಪೊರೇಟ್ ಜಗತ್ತಿನ ಕಡೆಗೆ, ತೀವ್ರ ಕೋಪ ಮತ್ತು ತೀಕ್ಷ್ಣವಾದ ಅಸಮಾಧಾನವಿದೆ. "ಸರ್ಕಾರ ರೈತರಿಗೆ ದ್ರೋಹ ಮಾಡಿದೆ" ಎಂದು ಪ್ರತಿಭಟನಾಕಾರರು ಹೇಳುತ್ತಾರೆ. "ನಾವು ಈ ದೇಶಕ್ಕೆ ಆಹಾರವನ್ನು ನೀಡುತ್ತೇವೆ ಮತ್ತು ಪ್ರತಿಯಾಗಿ ನಮಗೆ ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ನೀಡಲಾಗಿದೆ."
"ಚಳಿಗಾಲದ ಶೀತದಲ್ಲಿ ರೈತರು ತಮ್ಮ ಹೊಲಗಳಿಗೆ ನೀರು ಹಾಯಿಸುವ ಸಮಯದಲ್ಲಿ, ಈ ಕಾರ್ಪೋರೇಟ್ಗಳು, ಈ ರಾಜಕಾರಣಿಗಳು ತಮ್ಮ ಹಾಸಿಗೆಯಲ್ಲಿ ಮಲಗಿರುತ್ತಾರೆ" ಎಂದು ಮತ್ತೊಬ್ಬರು ಹೇಳುತ್ತಾರೆ.
ಆದರೆ ಪ್ರತಿರೋಧದ ಸಂಕಲ್ಪವೂ ದೃಢವಾಗಿದೆ: "ನಾವು ಪ್ರತಿವರ್ಷ ಶೀತ ಮಾರುತ ಎದುರಿಸಿ ಬದುಕುತ್ತೇವೆ, ಆದರೆ ಈ ಚಳಿಗಾಲದಲ್ಲಿ, ನಮ್ಮ ಹೃದಯಗಳು ಸುಡುವ ಕೆಂಡವಾಗಿವೆ" ಎಂದು ಕೋಪದಿಂದ ರೈತರೊಬ್ಬರು ಹೇಳುತ್ತಾರೆ.
"ಈ ಟ್ರಾಕ್ಟರುಗಳನ್ನು ನೋಡಿದಿರಾ?" ಅವರಲ್ಲಿ ಒಬ್ಬರು ಕೇಳುತ್ತಾರೆ. “ಅವು ಕೂಡ ನಮ್ಮ ಆಯುಧಗಳಾಗಿವೆ. ನಾವು ಅವುಗಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇವೆ." ದೆಹಲಿಯ ಗಡಿಯಲ್ಲಿ ಸಾವಿರಾರು ಟ್ರಾಕ್ಟರುಗಳಿವೆ ಮತ್ತು ಅಸಂಖ್ಯಾತ ಜನರು ಅವುಗಳಿಗೆ ಜೋಡಿಸಿದ ಟ್ರಾಲಿಗಳಲ್ಲಿ ಕುಳಿತು ಇಲ್ಲಿಗೆ ಬಂದಿದ್ದಾರೆ.
ಇನ್ನೊಬ್ಬ ವ್ಯಕ್ತಿ ಹೇಳುತ್ತಾರೆ: "ನಾನು ವೃತ್ತಿಯಲ್ಲಿ ಮೆಕ್ಯಾನಿಕ್, ಮತ್ತು ಪ್ರತಿ ರೈತನ ಟ್ರಾಕ್ಟರನ್ನು ಉಚಿತವಾಗಿ ರಿಪೇರಿ ಮಾಡುತ್ತೇನೆಂದು ಎಂದು ನನಗೆ ನಾನೇ ಭರವಸೆ ಕೊಟ್ಟುಕೊಂಡಿದ್ದೇನೆ."
ಪ್ರತಿಯೊಬ್ಬರೂ ತಾವು ಸುದೀರ್ಘ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿದಿದ್ದಾರೆ. ಈ ಪ್ರತಿರೋಧ ತಿಂಗಳುಗಳವರೆಗೆ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಆದರೆ ಯಾರೂ ಸೋಲನ್ನೊಪ್ಪಲು ಸಿದ್ಧರಿಲ್ಲ.
ಅವರಲ್ಲಿ ಒಬ್ಬರು ಒಟ್ಟಾರೆಯಾಗಿ ಹೀಗೆ ಹೇಳುತ್ತಾರೆ: “ಈ ಮೂರು ಕಾನೂನುಗಳನ್ನು ರದ್ದುಗೊಳಿಸುವವರೆಗೆ ಅಥವಾ ಸಾವು ಬರುವವರೆಗೆ ನಾವು ಇಲ್ಲಿಯೇ ಇರುತ್ತೇವೆ.”
![](/media/images/03-IMG_20201128_132101_570-SF.width-1440.jpg)
ಉತ್ತರ ದೆಹಲಿಯ ಬುರಾರಿ ಮೈದಾನದಲ್ಲಿ 70 ವರ್ಷದ ಈ ಪ್ರತಿಭಟನಾಕಾರರು ಕೇಂದ್ರ ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸುತ್ತಾರೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸದೆ ನಾವು ಇಲ್ಲಿಂದ ಕದಲುವುದಿಲ್ಲ, 'ಸಾವು ಬರುವವರೆಗೂ ಇಲ್ಲಿಯೇ ಇರುತ್ತೇವೆ' ಎಂದು ಅವರು ಹೇಳುತ್ತಾರೆ.
![](/media/images/04-IMG_6969-01-01-SF.width-1440.jpg)
ರಾತ್ರಿಯಲ್ಲಿ, ಉತ್ತರ ದೆಹಲಿಯ ಬುರಾರಿ ಮೈದಾನದಲ್ಲೊಬ್ಬ ಯುವ ಪ್ರತಿಭಟನಾಕಾರ.
![](/media/images/05-IMG_7158-01-SF.width-1440.jpg)
ಹರಿಯಾಣದ ಸಿಂಘು ಗಡಿಯಲ್ಲಿರುವ ಸೋನಿಪತ್ನಲ್ಲಿ ಸಂಜೆ ರೈತರು ಪ್ರಾರ್ಥನೆ ಸಲ್ಲಿಸುತ್ತಿರುವುದು. ಅನೇಕ ಗುರುದ್ವಾರಗಳು ಲಂಗರ್ (ಸಿಖ್ ಸಮುದಾಯದ ಅಡುಗೆ ಮನೆ ಆಹಾರ) ಆಯೋಜಿಸಿದ್ದಾರೆ, ಅಲ್ಲಿ ಕೆಲವು ಪೊಲೀಸರಿಗೆ ಸಹ ಆಹಾರವನ್ನು ನೀಡಲಾಗುತ್ತದೆ.
![](/media/images/06-IMG_7118-01-SF.width-1440.jpg)
ಸಿಂಘು ಗಡಿಯಲ್ಲಿರುವ ರೈತರ ಗುಂಪೊಂದು ತಮ್ಮ ಪ್ರತಿಭಟನಾಕಾರರ ತಂಡಕ್ಕೆ ಆಹಾರವನ್ನು ಬೇಯಿಸಲು ತಯಾರಿ ನಡೆಸುತ್ತಿದೆ, ಇದು ಸಿಂಘು ಮತ್ತು ಬುರಾರಿ ಎರಡೂ ಸ್ಥಳಗಳಲ್ಲಿ ನಡೆಯುತ್ತಿರುವ ಹಲವಾರು ಕೆಲಸಗಳಲ್ಲಿ ಒಂದಾಗಿದೆ.
![](/media/images/07-IMG_7113-01-SF.width-1440.jpg)
ಮತ್ತು ಸಿಂಘು ಗಡಿಯಲ್ಲಿರುವ ಈ ಶಿಬಿರದಲ್ಲಿ ರಾತ್ರಿ ಲಂಗರ್ (ಸಿಖ್ ಸಮುದಾಯದ ಅಡಿಗೆ ಮನೆ) ನಡೆಯುತ್ತಿರುವುದು.
![](/media/images/8-IMG_6977-01-01-01-SF.width-1440.jpg)
ಬುರಾರಿ ಮೈದಾನದಲ್ಲಿ ಟ್ರಕ್ ಹತ್ತುತ್ತಿರುವ ವೃದ್ಧ ರೈತ. ಪ್ರತಿಭಟನೆ ವೇಳೆ ಕೆಲವು ರೈತರು ತಮ್ಮ ಟ್ರಕ್ಗಳಲ್ಲಿ ಮಲಗಿದ್ದಾರೆ.
![](/media/images/9-IMG_7038-01-01-SF.width-1440.jpg)
ಸಿಂಘು ಗಡಿಯಲ್ಲಿ ರೈತರು ತಮ್ಮ ಟ್ರಕ್ನಲ್ಲಿ ವಿಶ್ರಾಂತಿ ಪಡೆಯುತ್ತಿರುವುದು
![](/media/images/10-IMG_7062-01-SF.width-1440.jpg)
ಸಿಂಗು ಗಡಿಯಲ್ಲಿರುವ ಪೆಟ್ರೋಲ್ ಪಂಪ್ನಲ್ಲಿ ಮಲಗಿರುವ ಪ್ರತಿಭಟನಾಕಾರರ ಗುಂಪು.
![](/media/images/11-IMG_7026-01-01-SF.width-1440.jpg)
ಪ್ರತಿಭಟನಾಕಾರರು ಸಾವಿರಾರು ಟ್ರಾಕ್ಟರುಗಳನ್ನು ತಂದಿದ್ದಾರೆ, ಅವರಿಗೆ ಅದು ಸಾರಿಗೆ ವಾಹನಕ್ಕಿಂತ ಹೆಚ್ಚು. ಬುರಾರಿಯಲ್ಲಿ ಅವರಲ್ಲಿ ಒಬ್ಬರು ಹೇಳುವಂತೆ, 'ಈ ಟ್ರಾಕ್ಟರುಗಳು ಸಹ ನಮ್ಮ ಆಯುಧಗಳು'.
![](/media/images/012-IMG_20201128_132101_653-01-SF.width-1440.jpg)
'ನನಗೆ ನಿದ್ದೆ ಬರುವುದಿಲ್ಲ, ಸರ್ಕಾರ ನನ್ನ ನಿದ್ರೆಯನ್ನು ಕದ್ದಿದೆ' ಎಂದು ಉತ್ತರ ದೆಹಲಿಯ ಬುರಾರಿ ಪ್ರತಿಭಟನಾ ಸ್ಥಳದಲ್ಲಿದ್ದ ಈ ರೈತ ಹೇಳುತ್ತಾರೆ.
ಅನುವಾದ: ಶಂಕರ ಎನ್. ಕೆಂಚನೂರು