"ಮನೆಯಲ್ಲಿ ಇರಿಸಲಾದ ಹತ್ತಿ ಬಣ್ಣ ಮತ್ತು ತೂಕವನ್ನು ಕಳೆದುಕೊಳ್ಳುತ್ತಿದೆ. ಹತ್ತಿಯ ಬಣ್ಣ ಹಗುರವಾದಷ್ಟೂ ವ್ಯಾಪಾರಿಗಳು ನಮಗೆ ಕಡಿಮೆ ಬೆಲೆಯನ್ನು ನೀಡುತ್ತಾರೆ" ಎಂದು ರೈತ ಸಂದೀಪ್ ಯಾದವ್ ಆತಂಕದ ಧ್ವನಿಯಲ್ಲಿ ಹೇಳುತ್ತಾರೆ. ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಗೋಗವಾನ್ ತಹಸಿಲ್ನ ಸಂದೀಪ್, 2022ರ ಅಕ್ಟೋಬರಿನಲ್ಲಿ ಕಟಾವು ಮಾಡಿದಾಗಿನಿಂದ ಹತ್ತಿಯ ಬೆಲೆ ಹೆಚ್ಚಾಗಬಹುದೆಂದು ಎಂದು ಕಾಯುತ್ತಿದ್ದರು.
ಖಾರ್ಗೋನ್ ಜಿಲ್ಲೆಯು 2,15,000 ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಕೃಷಿಯನ್ನು ಹೊಂದಿದ್ದು ಇದು ಮಧ್ಯಪ್ರದೇಶದ ಅತಿದೊಡ್ಡ ಹತ್ತಿ ಉತ್ಪಾದಿಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಹತ್ತಿ ಬಿತ್ತನೆ ಪ್ರತಿ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಗಿ ಜುಲೈ ಮೊದಲ ವಾರದವರೆಗೆ ಇರುತ್ತದೆ. ಇದರ ನಂತರ, ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ಎರಡನೇ ವಾರದವರೆಗೆ ಕೊಯ್ಲು ಮಾಡಲಾಗುತ್ತದೆ. ಖಾರ್ಗೋನ್ ಹತ್ತಿ ಮಾರುಕಟ್ಟೆಯು ದಿನಕ್ಕೆ ಸುಮಾರು 6 ಕೋಟಿ ರೂ.ಗಳ ಮೌಲ್ಯದ ಹತ್ತಿಯನ್ನು ಖರೀದಿಸುತ್ತದೆ, ಮತ್ತು ಖರೀದಿ ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗಿ ಮುಂದಿನ ವರ್ಷದ ಮೇ ತನಕ ಮುಂದುವರಿಯುತ್ತದೆ. ಸಂದೀಪ್ ಕೂಡ ಮಧ್ಯಪ್ರದೇಶದ ಬಹರಾಂಪುರ ಗ್ರಾಮದ ತನ್ನ 18 ಎಕರೆ ಜಮೀನಿನಲ್ಲಿ 10 ಎಕರೆಯಲ್ಲಿ ಹತ್ತಿ ಬೆಳೆಯುತ್ತಾರೆ.
2022ರ ಅಕ್ಟೋಬರ್ ತಿಂಗಳಿನ ಮೊದಲ ಕೊಯ್ಲಿನಲ್ಲಿ ಸುಮಾರು 30 ಕ್ವಿಂಟಾಲ್ ಹತ್ತಿ ದೊರಕಿದ್ದರಿಂದ ಸಂದೀಪ್ ಖುಷಿಯಾಗಿದ್ದರು. ಇದು ಬಹರಾಂಪುರದ ಅವರ ಜಮೀನಿನಲ್ಲಿ ಮೊದಲ ಸುತ್ತಿನ ಕೊಯ್ಲಿನಲ್ಲಿ ದೊರೆತ ಹತ್ತಿಯಾಗಿತ್ತು. ಅವರು ಎರಡನೇ ಸುತ್ತಿನ ಕೊಯ್ಲಿನಲ್ಲೂ ಅಷ್ಟೇ ಇಳುವರಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಸಿಕ್ಕಿದ್ದು 26 ಕ್ವಿಂಟಾಲ್ ಮಾತ್ರ.
ಈ ನಡುವೆ, ಮಾರುಕಟ್ಟೆ ತೆರಿಗೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ವ್ಯಾಪಾರಿಗಳ ಮುಷ್ಕರದಿಂದಾಗಿ ಮಧ್ಯಪ್ರದೇಶದ ಎಲ್ಲಾ ಹತ್ತಿ ಮಂಡಿಗಳು 2022ರ ಅಕ್ಟೋಬರ್ 11ರಿಂದ ಮುಚ್ಚಲ್ಪಟ್ಟಿದ್ದರಿಂದ ಅವರು ತಮ್ಮ 30 ಕ್ವಿಂಟಾಲ್ ಉತ್ಪನ್ನವನ್ನು ಖಾರ್ಗೋನ್ ಹತ್ತಿ ಮಾರುಕಟ್ಟೆಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ವ್ಯಾಪಾರಿಗಳಿಗೆ ಪ್ರತಿ 100 ರೂ. ಖರೀದಿಗೆ 1.7 ರೂ.ಗಳ ತೆರಿಗೆ ವಿಧಿಸಲಾಗುತ್ತಿದೆ. ಇದು ದೇಶದ ಹೆಚ್ಚಿನ ರಾಜ್ಯಗಳಿಗಿಂತ ಹೆಚ್ಚಾಗಿದೆ. ಇದನ್ನು ಕಡಿಮೆಗೊಳಿಸುವಂತೆ ಆಗ್ರಹಿಸಿ ಪ್ರಾರಂಭಿಸಿದ ಹತ್ತಿ ವ್ಯಾಪಾರಿಗಳ ಮುಷ್ಕರವು ಎಂಟು ದಿನಗಳವರೆಗೆ ಮುಂದುವರಿಯಿತು.
ಅಕ್ಟೋಬರ್ 10ರಂದು, ಮುಷ್ಕರ ಪ್ರಾರಂಭವಾಗುವ ಒಂದು ದಿನ ಮೊದಲು, ಖಾರ್ಗೋನ್ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿಯನ್ನು ಕ್ವಿಂಟಾಲ್ ಒಂದಕ್ಕೆ 8,740 ರೂ.ಗೆ ಖರೀದಿಸಲಾಗುತ್ತಿತ್ತು. ಮುಷ್ಕರ ಕೊನೆಗೊಂಡ ನಂತರ ಹತ್ತಿಯ ಬೆಲೆ ಕ್ವಿಂಟಾಲಿಗೆ 890 ರೂ. ಕಡಿಮೆಯಾಗುವುದರೊಂದಿಗೆ 7,850 ರೂ.ಗೆ ಇಳಿಯಿತು. ಅಕ್ಟೋಬರ್ 19ರಂದು ಮಂಡಿಗಳು ಮತ್ತೆ ತೆರೆದಾಗ, ಸಂದೀಪ್ ಯಾದವ್ ಬೆಲೆ ಕುಸಿತದಿಂದಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿಲ್ಲ. ಅಕ್ಟೋಬರ್ 2022ರಲ್ಲಿ ಪರಿಯೊಂದಿಗೆ ಮಾತನಾಡಿದ ಈ 34 ವರ್ಷದ ರೈತ, "ಈಗ ಸರಕುಗಳನ್ನು ಮಾರಿದರೆ ನನಗೆ ಏನೂ ಸಿಗುವುದಿಲ್ಲ" ಎಂದು ಹೇಳಿದರು.
ಹೀಗೆ ತಮ್ಮ ಬೆಳೆಯನ್ನು ಅವರು ಮನೆಯಲ್ಲೇ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಅವರ ಪಾಲಿಗೆ ಬಂದಿದ್ದು ಇದೇ ಮೊದಲಲ್ಲ. ಕೊವಿಡ್ ಸಮಯದಲ್ಲೂ ಮಂಡಿಗಳು ಮುಚ್ಚಿದ್ದವು. ಅಲ್ಲದೆ, “[2021ರಲ್ಲಿ] ಬೆಳೆಗೆ ಕೀಟಬಾಧೆ ತಗುಲಿದ್ದ ಕಾರಣ ಅರ್ಧಕ್ಕಿಂತಲೂ ಹೆಚ್ಚಿನ ಬೆಳೆ ನಾಶವಾಗಿತ್ತು” ಎನ್ನುತ್ತಾರವರು.
ಕನಿಷ್ಟ 2022ರ ಬೆಳೆಯಾದರೂ ಕೈಗೆ ಹತ್ತಿ ಎರಡು ವರ್ಷಗಳ ನಷ್ಟವನ್ನು ಸರಿದೂಗಿಸಬಹುದೆನ್ನುವ ನಿರೀಕ್ಷೆಯಲ್ಲಿ ಸಂದೀಪ್ ಇದ್ದರು. ಆ ಮೂಲಕ 15 ಲಕ್ಷ ರೂಪಾಯಿಗಳ ಸಾಲವನ್ನು ತೀರಿಸಲು ಬಯಸಿದ್ದರು. "ಈ ವರ್ಷ [2022] ಸಾಲದ ಕಂತುಗಳನ್ನು ಪಾವತಿಸಿದ ನಂತರ ಏನೂ ಉಳಿಯುವುದಿಲ್ಲ" ಎಂದು ಅವರು ಹೇಳುತ್ತಾರೆ.
ಕಿಸಾನ್ ಪೋರ್ಟಲ್ ಅಂಕಿ-ಅಂಶಗಳು ಹೇಳುವಂತೆ 2022-23ರಲ್ಲಿ ಹತ್ತಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಕೇಂದ್ರ ಸರ್ಕಾರ 6,380 ರೂ. ನಿಗದಿಪಡಿಸಿತ್ತು. 2021-22ನೇ ವರ್ಷಕ್ಕೆ ಹೋಲಿಸಿದರೆ ಬೆಲೆಯನ್ನು 355 ರೂ. ಹೆಚ್ಚಿಸಲಾಗಿತ್ತು. ಆದರೆ ಭಾರತೀಯ ಕಿಸಾನ್ ಯೂನಿಯನ್ ಇದರ ಇಂದೋರ್ ವಿಭಾಗದ ಅಧ್ಯಕ್ಷ ಶ್ಯಾಮ್ ಸಿಂಗ್ ಪನ್ವಾರ್ ಅಭಿಪ್ರಾಯದಂತೆ, "ಕನಿಷ್ಠ ಬೆಂಬಲ ಬೆಲೆ ಕನಿಷ್ಠ 8,500 ರೂ.ಗಳಷ್ಟಿರಬೇಕು ಮತ್ತು ವ್ಯಾಪಾರಿಗಳು ಇದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಾಗದಂತೆ ಸರಕಾರ ಕಾನೂನನ್ನು ತರಬೇಕು.”
ಬರ್ವಾಹ ತಹಸಿಲ್ ನವಲ್ಪುರ ಗ್ರಾಮದ ರೈತ ಸಂಜಯ್ ಯಾದವ್ ಪ್ರಕಾರ ಪ್ರತಿ ಕ್ವಿಂಟಾಲ್ ಹತ್ತಿಗೆ ರೂ. 7,405 ತುಂಬಾ ಕಡಿಮೆ ಬೆಲೆ. ಅವರು ಕೇವಲ 12 ಕ್ವಿಂಟಾಲ್ ಹತ್ತಿಯನ್ನು ಮಾರಾಟ ಮಾಡಿದರು, ಇದು ಅವರ ಒಟ್ಟು ಇಳುವರಿಯ ಸಣ್ಣ ಭಾಗವಾಗಿದೆ. 20ರ ಹರೆಯದ ಯುವಕನಾಗಿರುವ ಅವರು ಹತ್ತಿಯ ಬೆಲೆ ಕ್ವಿಂಟಾಲಿಗೆ ಕನಿಷ್ಠ 10,000 ರೂ.ಗಳಾಗಿರಬೇಕು ಎನ್ನುತ್ತಾರೆ. ಇದು ಅಂದಿನ ಬೆಲೆಗಿಂತಲೂ ಸುಮಾರು 2,595 ರೂ.ಗಳಷ್ಟು ಹೆಚ್ಚು.
"ನಾವು [ರೈತರು] [ಕನಿಷ್ಠ ಬೆಂಬಲ ಬೆಲೆಯ ಬಗ್ಗೆ] ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ. ನಮ್ಮ ಬೆಳೆ ವೆಚ್ಚವೂ ನಮ್ಮ ಕೈಯಲ್ಲಿಲ್ಲ" ಎಂದು ಸಂದೀಪ್ ಬೇಸರದಿಂದ ಹೇಳುತ್ತಾರೆ.
ಸಂದೀಪ್ ಅವರ ಪ್ರಕಾರ, "ಬೀಜಗಳಂತಹ ಮೂಲಭೂತ ವೆಚ್ಚಗಳನ್ನು ಹೊರತುಪಡಿಸಿ, ಒಂದು ಎಕರೆಗೆ 1,400 ರೂ.ಗಳ ಡಿಎಪಿ [ಡೈಅಮೋನಿಯಂ ಫಾಸ್ಫೇಟ್] ರಸಗೊಬ್ಬರದ ಅಗತ್ಯವಿದೆ. ದಿನಕ್ಕೆ ಸುಮಾರು 1,500 ರೂ.ಗಳನ್ನು ಕೂಲಿಯಾಗಿ ಎತ್ತಿಡಬೇಕು. ಇದಲ್ಲದೆ, ಕಂಬಳಿಹುಳ ಕೊಲ್ಲಲು 1,000 ರೂ.ಗಳ ಮೌಲ್ಯದ ಮೂರು ಸ್ಪ್ರೇಗಳು ಬೇಕಾಗುತ್ತವೆ. ಈ ರೀತಿಯಾಗಿ, ಎಲ್ಲಾ ವಸ್ತುಗಳನ್ನು ಖರೀದಿಸಲು ಒಟ್ಟಾಗಿ ಒಂದು ಎಕರೆಗೆ 15,000 ರೂ.ಗಳಷ್ಟು ಬೇಕು.
ಅಕ್ಟೋಬರ್ 2022ರಲ್ಲಿ, ಸಂದೀಪ್ ಹತ್ತಿ ಕೊಯ್ಲಿನ ಕೂಲಿ ಕೊಡಲೆಂದು 30,000 ರೂ.ಗಳ ಸಾಲವನ್ನು ತೆಗೆದುಕೊಳ್ಳಬೇಕಾಯಿತು. "ದೀಪಾವಳಿಗೆ ಎಲ್ಲರೂ ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಈ ಸಮಯದಲ್ಲಿ ನಾವು ಅವರಿಗೆ ಬಟವಾಡೆ ಮಾಡದೇ ಹೋದರೆ ಅವರು ತಮ್ಮ ಖರ್ಚುಗಳನ್ನು ನಿಭಾಯಿಸುವುದು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.
ಬಹರಾಂಪುರ ಗ್ರಾಮದಲ್ಲಿ ಹೊಸ ಮನೆ ನಿರ್ಮಿಸಲು ಸಂದೀಪ್ ಲೇವಾದೇವಿಗಾರರ (ಸಾಹುಕಾರ್) ಬಳಿ 9 ಲಕ್ಷ ರೂ.ಗಳ ಸಾಲ ಮಾಡಿದ್ದಾರೆ. ಈ ಪ್ರದೇಶದಲ್ಲಿ ಉತ್ತಮ ಸರ್ಕಾರಿ ಶಾಲೆಯಿಲ್ಲದ ಕಾರಣ ಅವರು ಕೊವಿಡ್ ಬರುವ ಮೊದಲೇ ತಮ್ಮ ಮಕ್ಕಳನ್ನು ಹತ್ತಿರದ ಖಾಸಗಿ ಶಾಲೆಗೆ ದಾಖಲಿಸಿದ್ದರು ಮತ್ತು ಆ ಶಾಲೆಗೆ ದೊಡ್ಡ ಮೊತ್ತದ ಶುಲ್ಕವನ್ನು ಸಹ ಭರಿಸಿದ್ದರು. ಈ ಕಾರಣದಿಂದಾಗಿ, ಅವರ ಮೇಲಿನ ಆರ್ಥಿಕ ಹೊರೆ ಹೆಚ್ಚಾಯಿತು.
ಕಸರಾವಾಡ್ ತಹಸಿಲ್ ಸಬ್ದಾ ಗ್ರಾಮದ ರೈತ ರಾಧೇಶ್ಯಾಮ್ ಪಟೇಲ್ ಕೂಡ ಹತ್ತಿಯನ್ನು ದುಬಾರಿ ಬೆಳೆಯೆಂದು ಹೇಳುತ್ತಾರೆ. ಸುಮಾರು 47 ವರ್ಷದ ರಾಧೇಶ್ಯಾಮ್ ಹೇಳುವಂತೆ, "ಈಗ ಹಿಂಗಾರು (ರಬಿ) ಬೆಳೆಯನ್ನು ಬಿತ್ತನೆ ಮಾಡಿದರೆ, ಅದಕ್ಕೆ ವೆಚ್ಚವೂ ಆಗುತ್ತದೆ. ಬಡ್ಡಿಯ ಮೇಲೆ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಇದರ ನಂತರ, ಮುಂದಿನ ಬೆಳೆಯೂ ನಾಶವಾದರೆ, ನಷ್ಟವು ರೈತನಿಗೆ ಮಾತ್ರ. ಇದರಿಂದಾಗಿಯೇ ರೈತ ವಿಷ ಕುಡಿಯುವುದು ಅಥವಾ ಸಾಲದ ಸುಳಿಯಲ್ಲಿ ಸಿಲುಕಿ ಭೂಮಿ ಮಾರುವುದರಂತಹ ಅನಿವಾರ್ಯತೆಗೆ ಒಳಗಾಗುತ್ತಾನೆ."
"ಒಬ್ಬ ರೈತನಿಗೆ ಮಾತ್ರ ತನ್ನ ಬೆಳೆಯ ಮೌಲ್ಯ ಎಷ್ಟು ಎನ್ನುವುದು ತಿಳಿದಿರುತ್ತದೆ. ಕನಿಷ್ಠ ಪಕ್ಷ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯಾದರೂ ದೊರಕುವಂತೆ ಸರ್ಕಾರ ನೋಡಿಕೊಳ್ಳಬೇಕು" ಎಂದು ಕೃಷಿ ತಜ್ಞ ದೇವೇಂದ್ರ ಶರ್ಮಾ ಹೇಳುತ್ತಾರೆ.
2023ರ ಜನವರಿ ಹೊತ್ತಿಗೆ, ಸಂದೀಪ್ ಅವರ ಮನೆಯ ಖರ್ಚುಗಳು ಹೆಚ್ಚಾಗುತ್ತಿದ್ದವು. ಅವರ ತಮ್ಮನಿಗೆ ಫೆಬ್ರವರಿ ಮೊದಲ ವಾರದಲ್ಲಿ ಮದುವೆಯಾಯಿತು. ಜನವರಿಯಲ್ಲಿ ಸುಮಾರು 30 ಕ್ವಿಂಟಾಲ್ ಹತ್ತಿಯನ್ನು ಕ್ವಿಂಟಾಲ್ ಒಂದಕ್ಕೆ 8,900 ರೂ.ಗಳಂತೆ ಮಾರಾಟ ಮಾಡಿದ್ದೇನೆ ಎಂದು ಅವರು ಪರಿಗೆ ತಿಳಿಸಿದರು.
ಇದು ಉತ್ತಮ ಬೆಲೆಯಾಗಿದ್ದರೂ, ಖರ್ಚುಗಳನ್ನೆಲ್ಲ ಕಳೆದ ನಂತರ ಏನೂ ಉಳಿಯುವುದಿಲ್ಲವೆಂದು ಅವರು ಹೇಳಿದ್ದರು.
ಫಸಲಿನ ಬೆಲೆ ಕುಸಿತದಿಂದ ಬೇಸರದಲ್ಲಿದ್ದ ಅವರು “ರೈತರ ಕಷ್ಟ ಸುಖ ಕೇಳುವುದು ಯಾರಿಗೂ ಬೇಕಿಲ್ಲ” ಎಂದರು.
ಅನುವಾದ: ಶಂಕರ. ಎನ್. ಕೆಂಚನೂರು