ಸುನೀತಾ ಭುರ್ಕುಟೆ ಅವರ ಮನೆಮಾತು ಕೊಲಾಮಿ, ಆದರೆ ಈ ಹತ್ತಿ ಬೆಳೆಗಾರ ತನ್ನ ದೈನಂದಿನ ಚಟುವಟಿಕೆಯ ಹೆಚ್ಚಿನ ಸಮಯವನ್ನು ಮರಾಠಿಯಲ್ಲಿ ಮಾತನಾಡುತ್ತಾ ಕಳೆಯುತ್ತಾರೆ. "ನಾವು ಬೆಳೆದ ಹತ್ತಿಯನ್ನು ಮಾರಾಟ ಮಾಡಲು ನಮಗೆ ಮಾರುಕಟ್ಟೆ ಭಾಷೆ ತಿಳಿದಿರಬೇಕು" ಎಂದು ಅವರು ಹೇಳುತ್ತಾರೆ.
ಮಹಾರಾಷ್ಟ್ರದ ಯವತ್ ಮಳ್ ಜಿಲ್ಲೆಯಲ್ಲಿ ಬೆಳೆದ ಅವರು, ಕೊಲಾಮ್ ಆದಿವಾಸಿ ಕುಟುಂಬಕ್ಕೆ ಸೇರಿದವರು. ಮನೆಯಲ್ಲಿ ಕೊಲಾಮಿ ಭಾಷೆಯನ್ನು ಮಾತನಾಡುತ್ತಿದ್ದರು. ಸುರ್ ದೇವಿ ಪಾಡ್ (ಕುಗ್ರಾಮ) ನಲ್ಲಿರುವ ತನ್ನ ಮಹೆರ್ (ಜನ್ಮಸ್ಥಳ) ದಲ್ಲಿ ತನ್ನ ಹಿರಿಯರು ಸ್ಥಳೀಯ ಭಾಷೆಯಾದ ಮರಾಠಿಯಲ್ಲಿ ಮಾತನಾಡಲು ಕಷ್ಟಪಡುತ್ತಿದ್ದ ದಿನಗಳನ್ನು ಸುನೀತಾ ನೆನಪಿಸಿಕೊಳ್ಳುತ್ತಾರೆ. “ಅವರು ಶಾಲೆಯ ಮೆಟ್ಟಿಲು ಹತ್ತಿದವರಲ್ಲ. ಹರುಕು ಮುರುಕು ಭಾಷೆಯಲ್ಲಿ ಮರಾಠಿಯಲ್ಲಿ ಮಾತನಾಡುತ್ತಿದ್ದರು” ಎಂದು ಅವರು ಹೇಳುತ್ತಾರೆ.
ನಂತರ ಕುಟುಂಬದ ಹೆಚ್ಚಿನ ಸದಸ್ಯರು ಹತ್ತಿ ಮಾರಾಟಕ್ಕಾಗಿ ಮಾರುಕಟ್ಟೆಗೆ ಹೋಗಲು ಆರಂಭಿಸಿದ ನಂತರ ಮರಾಠಿ ಅವರಿಗೆ ಅಭ್ಯಾಸವಾಯಿತು. ಇಂದು ಅವರ ಭುಲ್ಗಡ್ ಗ್ರಾಮದಲ್ಲಿರುವ ಪಾಡದಲ್ಲಿನ ಎಲ್ಲರೂ ಬಹು ಭಾಷಿಗರು – ಎಲ್ಲರೂ ಕೊಲಾಮ್ ಆದಿವಾಸಿ ಸಮುದಾಯಕ್ಕೆ ಸೇರಿದವರು – ಮರಾಠಿ, ಕೆಲವು ಹಿಂದಿ ಶಬ್ದಗಳ ಜೊತೆಗೆ ತಮ್ಮ ಮನೆ ಮಾತಾಗಿರುವ ಕೊಲಾಮಿ ಭಾಷೆಯನ್ನು ಮಾತನಾಡಬಲ್ಲರು.
ಕೊಲಾಮಿ ದ್ರಾವಿಡ ಭಾಷೆಯಾಗಿದ್ದು, ಇದನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಛತ್ತೀಸ್ ಗಢಗಳಲ್ಲಿ ಪ್ರಧಾನವಾಗಿ ಮಾತನಾಡಲಾಗುತ್ತದೆ. ಯುನೆಸ್ಕೋದ ಅಟ್ಲಾಸ್ ಆಫ್ ದಿ ವರ್ಲ್ಡ್ಸ್ ಲ್ಯಾಂಗ್ವೇಜಸ್ ಇನ್ ಡೇಂಜರ್ ಪ್ರಕಾರ, ಇದನ್ನು 'ಖಂಡಿತವಾಗಿಯೂ ಅಳಿವಿನಂಚಿನಲ್ಲಿರುವ' ಭಾಷೆ ಎಂದು ವರ್ಗೀಕರಿಸಲಾಗಿದೆ – ಮುಂದಿನ ಜನಾಂಗದ ಮಕ್ಕಳು ಇದನ್ನು ಮಾತೃಭಾಷೆಯಾಗಿ ಕಲಿಯುವುದಿಲ್ಲ ಎಂದು ಅದು ಹೇಳುತ್ತದೆ.
“ಫಣ ಅಮ್ಚಿ ಭಾಷಾ ಕಮಿ ಹೋತ್ ನಾಹಿ, ಅಮ್ಹಿ ವಾಪರ್ತಾತ್ [ಆದರೆ ನಮ್ಮ ಭಾಷೆ ಸಾಯುತ್ತಿಲ್ಲ, ನಾವು ಅದನ್ನು ಬಳಸುತ್ತಿದ್ದೇವೆ]!” ಎಂದು 40 ವರ್ಷದ ಸುನೀತಾ ವಾದಿಸುತ್ತಾರೆ.
ಮಹಾರಾಷ್ಟ್ರದ ಕೊಲಾಮ್ ಆದಿವಾಸಿಗಳ ಜನಸಂಖ್ಯೆ 194,671 (ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಸಂಖ್ಯಾಶಾಸ್ತ್ರೀಯ ವಿವರ, 2013 ), ಆದರೆ ಅವರಲ್ಲಿ ಅರ್ಧಕ್ಕಿಂತ ಕಡಿಮೆ ಜನರು ಜನಗಣತಿ ದತ್ತಾಂಶದಲ್ಲಿ ಕೊಲಾಮಿಯನ್ನು ತಮ್ಮ ಮಾತೃಭಾಷೆಯಾಗಿ ದಾಖಲಿಸಿದ್ದಾರೆ.
“ನಮ್ಮ ಮಕ್ಕಳು ಶಾಲೆಯಲ್ಲಿ ಮರಾಠಿ ಕಲಿಯುತ್ತಾರೆ. ಅದೇನೂ ಅಷ್ಟು ಕಷ್ಟದ ಭಾಷೆಯಲ್ಲ. ಆದರೆ ಕೊಲಾಮಿ ಕಷ್ಟದ ಭಾಷೆ” ಎನ್ನುವ ಸುನೀತಾ, “ಶಾಲೆಗಳಲ್ಲಿ ನಮ್ಮ ಭಾಷೆಯನ್ನು ಬಲ್ಲ ಮೇಷ್ಟ್ರುಗಳೇ ಇಲ್ಲ” ಎಂದು ಹೇಳುತ್ತಾರೆ. ಅವರೂ 2ನೇ ತರಗತಿಯವರೆಗೆ ಮರಾಠಿ ಮಾಧ್ಯಮದಲ್ಲಿ ಓದಿದ್ದಾರೆ. ನಂತರ ಅವರ ತಂದೆ ತೀರಿಕೊಂಡ ಕಾರಣ ಅವರು ಶಾಲೆ ಬಿಟ್ಟರು.
ತನ್ನ ಮೂರು ಎಕರೆ ಜಮೀನಿನಲ್ಲಿ ಹತ್ತಿ ಕೀಳುವಲ್ಲಿ ನಿರತರಾಗಿದ್ದ ದಿನ ಸುನೀತಾ ಅವರನ್ನು ಪರಿ ಭೇಟಿಯಾಯಿತು. "ಹಂಗಾಮು ಮುಗಿಯುವ ಮೊದಲು ಕೊಯ್ಲು ಮುಗಿಸಬೇಕಾಗಿದೆ" ಎಂದು ಅವರು ಹೇಳಿದರು, ಗಿಡದಿಂದ ಬಿಳಿ ಹತ್ತಿ ಕೀಳುವಾಗ ಅವರ ಕೈಗಳು ಕೌಶಲದಿಂದ ಚಲಿಸುತ್ತಿದ್ದವು. ಕೆಲವೇ ನಿಮಿಷಗಳಲ್ಲಿ ಅವರ ಒಡ್ಡೀ ತುಂಬಿತ್ತು.
"ಇವು ಕಪಾಸ್ (ಮರಾಠಿಯಲ್ಲಿ ಹತ್ತಿ) ನ ಕೊನೆಯ ಎರಡು ತಾಸ್ (ಮರಾಠಿ ಮತ್ತು ಕೊಲಾಮಿಯಲ್ಲಿ ಸಾಲುಗಳು)" ಎಂದು ಸುನೀತಾ ಹೇಳುತ್ತಾರೆ. "ಒಣ ರೆಕ್ಕಾ (ಕೊಲಾಮಿಯಲ್ಲಿ ಹೂವಿನ ಬುಡದಲ್ಲಿನ ಹಸಿರು ಭಾಗ) ಮತ್ತು ಗಡ್ಡಿ (ಕೊಲಾಮಿಯಲ್ಲಿ ಕಳೆ) ಆಗಾಗ್ಗೆ ನನ್ನ ಸೀರೆಗೆ ಅಂಟಿಕೊಕೊಂಡು ಅದನ್ನು ಸೀರೆಯನ್ನು ಹರಿಯುತ್ತದೆ" ಎಂದು ಹೇಳುವ ಅವರು ಸೀರೆಯ ಮೇಲೆ ಟೀ ಶರ್ಟ್ ಧರಿಸಿದ್ದರು. ರೆಕ್ಕಾ ಎನ್ನುವುದು ಹೂವನ್ನು ಹಿಡಿದಿಡುವ ಹತ್ತಿಯ ಹೊರಭಾಗದ ಹಸಿರು ಭಾಗ, ಮತ್ತು ಗಡ್ಡಿ ಹತ್ತಿ ಹೊಲಗಳಲ್ಲಿ ಕಂಡುಬರುವ ಸಾಮಾನ್ಯ ರೀತಿಯ ಅನಗತ್ಯ ಕಳೆ.“
ಮಧ್ಯಾಹ್ನದ ಬಿಸಿಲು ನೆತ್ತಿಗೇರುತ್ತಿದ್ದ ಹಾಗೆ ಅವರು ತನ್ನ ಸೆಲಾಂಗವನ್ನು ಹೊರತೆಗೆದರು – ತಲೆಗೆ ಸುತ್ತಿಕೊಳ್ಳುವ ಸಣ್ಣ ಹತ್ತಿ ಬಟ್ಟೆ. ಆದರೆ ಒಡ್ಡೀ ಎನ್ನುವುದು ಅವರ ಹೊಲದ ಕೆಲಸದ ಮುಖ್ಯ ಬಟ್ಟೆ. ಇದೊಂದು ಉದ್ದನೆಯ ಬಟ್ಟೆಯಾಗಿದ್ದು ಹತ್ತಿ ಸೀರೆಯನ್ನು ಇದಕ್ಕಾಗಿ ಬಳಸಲಾಗುತ್ತದೆ. ಒಡ್ಡೀಯನ್ನು ಹೆಗಲು ಮತ್ತು ಸೊಂಟದ ಹಿಂಭಾಗದ ನಡುವೆ ಜೋಳಿಗೆಯಂತೆ ಕಟ್ಟಿಕೊಳ್ಳಲಾಗುತ್ತದೆ. ಅವರು ದಿನವಿಡೀ ಕೊಯ್ಲು ಮಾಡಿದ ಹತ್ತಿಯನ್ನು ಅದರಲ್ಲಿ ಹಾಕಿಕೊಳ್ಳುತ್ತಾರೆ. ದಿನಕ್ಕೆ ಏಳು ಗಂಟೆಗಳ ಕಾಲ ಹೊಲದಲ್ಲಿ ದುಡಿಯುವ ಅವರು ನಡುವೆ ಸಣ್ಣ ವಿರಾಮವೊಂದನ್ನು ಪಡೆಯುತ್ತಾರೆ. ಸಾಂಧರ್ಭಿಕವಾಗಿ ಒಂದಷ್ಟು ಈರ್ (ನೀರಿಗೆ ಕೊಲಾಮಿ ಪದ) ಕುಡಿಯುವ ಸಲುವಾಗಿ ಬಾವಿಯ ಬಳಿಗೂ ಹೋಗುತ್ತಾರೆ.
ಹಂಗಾಮಿನ ಅಂತ್ಯದ ವೇಳೆಗೆ (ಜನವರಿ 2024), ಸುನೀತಾ 1,500 ಕಿಲೋಗಳಷ್ಟು ಹತ್ತಿಯನ್ನು ಕೊಯ್ಲು ಮಾಡಿದ್ದರು - ಅಕ್ಟೋಬರ್ 2023ರಲ್ಲಿ ಹಂಗಾಮು ಪ್ರಾರಂಭವಾಯಿತು: "ಹತ್ತಿಯನ್ನು ಕೊಯ್ಲು ಮಾಡುವುದು ನನಗೆ ಎಂದೂ ಕಷ್ಟವೆನ್ನಿಸಿಲ್ಲ. ನಾನು ರೈತ ಕುಟುಂಬದಿಂದ ಬಂದವಳು.”
ಸುಮಾರು 20 ವರ್ಷದವರಿದ್ದಾಗ ಅವರಿಗೆ ಮದುವೆಯಾಯಿತು, ಆದರೆ ಅವರ ಪತಿ ಮದುವೆಯಾದ 15 ವರ್ಷಗಳ ನಂತರ 2014ರಲ್ಲಿ ನಿಧನರಾದರು. "ಅವರಿಗೆ ಮೂರು ದಿನಗಳಿಂದ ಜ್ವರವಿತ್ತು." ಆರೋಗ್ಯ ಮತ್ತಷ್ಟು ಹದಗೆಟ್ಟಾಗ ಸುನೀತಾ ಪತಿಯನ್ನು ಯವತ್‌ಮಳ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. "ಎಲ್ಲವೂ ಇದ್ದಕ್ಕಿದ್ದಂತೆ ಮುಗಿದುಹೋಯಿತು. ಅವರ ಸಾವಿಗೆ ಕಾರಣವೇನೆಂದು ನನಗೆ ಇಂದಿಗೂ ತಿಳಿದಿಲ್ಲ.”
ಗಂಡನ ಸಾವಿನ ನಂತರ ಇಬ್ಬರು ಮಕ್ಕಳ ಜವಾಬ್ದಾರಿಯೂ ಅವರ ಮೇಲೆ ಇತ್ತು. "ಮನುಸ್ [ಪತಿ] ತೀರಿಕೊಂಡಾಗ ಅರ್ಪಿತಾ ಮತ್ತು ಆಕಾಶ್ ಕೇವಲ 10 ವರ್ಷದವರಾಗಿದ್ದರು. ಒಬ್ಬಂಟಿಯಾಗಿ ಜಮೀನಿಗೆ ಹೋಗಲು ನನಗೆ ಭಯವಾಗುತ್ತಿದ್ದ ಸಂದರ್ಭಗಳೂ ಇದ್ದವು." ಅವರ ಮರಾಠಿ ಮೇಲಿನ ಹಿಡಿತವು ಹೊಲದಲ್ಲಿ ರೈತ ಸ್ನೇಹಿತೆಯರನ್ನು ಸಂಪಾದಿಸಲು, ಅವರ ವಿಶ್ವಾಸ ಗೆಲ್ಲಲು ಸಹಾಯ ಮಾಡಿತು. “ಹೊಲದಲ್ಲಿ ಇರುವಾಗ, ಸಂತೆಗೆ ಹೋದಾಗ ನಾವು ಅವರ ಭಾಷೆಯಲ್ಲಿಯೇ ಮಾತನಾಡಬೇಕು. ಅವರಿಗೆ ನಮ್ಮ ಭಾಷೆ ಅರ್ಥವಾಗುವುದಿಲ್ಲ ಅಲ್ಲವೇ?” ಎಂದು ಅವರು ಕೇಳುತ್ತಾರೆ.
ಅವರು ಕೃಷಿಯನ್ನು ಮುಂದುವರಿಸಿದರೂ, ಪುರುಷ ಪ್ರಾಬಲ್ಯದ ಹತ್ತಿ ಮಾರುಕಟ್ಟೆಯಲ್ಲಿ ಆಕೆ ಭಾಗವಹಿಸುವುದನ್ನು ಅನೇಕ ಜನರು ವಿರೋಧಿಸಿದರು. ಕೊನೆಗೆ ಅವರು ಅದರಿಂದ ಹೊರಗುಳಿದರು. "ಈಗ ನಾನು ಬೆಳೆಯನ್ನು ಕೊಯ್ಲು ಮಾತ್ರ ಮಾಡುತ್ತೇನೆ, ಆಕಾಶ್ [ಮಗ] ಅದನ್ನು ಮಾರಾಟ ಮಾಡುತ್ತಾನೆ."
ಸುನೀತಾ ಭುರ್ಕುಟೆ ಅವರ ಮನೆಮಾತು ಕೊಲಾಮಿ, ಆದರೆ ಅವರು ದೈನಂದಿನ ಚಟುವಟಿಕೆಯಲ್ಲಿ ಹೆಚ್ಚು ಹೆಚ್ಚು ಮರಾಠಿಯಲ್ಲಿ ಮಾತನಾಡುತ್ತಾರೆ. 'ಹತ್ತಿ ಮಾರಲು ಮಾರುಕಟ್ಟೆ ಭಾಷೆ ತಿಳಿದಿರಬೇಕು' ಎನ್ನುತ್ತಾರೆ
*****
ಕೊಲಾಮ್ ಆದಿವಾಸಿ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪು (ಪಿವಿಟಿಜಿ) ಎಂದು ಪಟ್ಟಿ ಮಾಡಲಾಗಿದೆ. ಇದು ಆ ರಾಜ್ಯ ಮೂರು ಮೂರು ಪಿವಿಟಿಜಿಗಳಲ್ಲಿ ಒಂದು. ಈ ಸಮುದಾಯದವರು ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿಯೂ ವಾಸಿಸುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ, ಸಮುದಾಯವು ತನ್ನನ್ನು 'ಕೋಲಾವರ್' ಅಥವಾ 'ಕೋಲಾ' ಎನ್ನುವ ಹೆಸರಿನಿಂದ ಗುರುತಿಸಿಕೊಳ್ಳುತ್ತದೆ, ಇದರ ಅರ್ಥ ಬಿದಿರು ಅಥವಾ ಮರದ ಕೋಲು ಎಂದಾಗುತ್ತದೆ. ಬಿದಿರಿನಿಂದ ಬುಟ್ಟಿಗಳು, ಚಾಪೆಗಳು,ಬೀಸಣಿಗೆ ಇತ್ಯಾದಿಯನ್ನು ತಯಾರಿಸುವುದು ಅವರ ಸಾಂಪ್ರದಾಯಿಕ ಉದ್ಯೋಗವಾಗಿತ್ತು.
“ನಾನು ಸಣ್ಣವಳಿದ್ದಾಗ ಮನೆಯಲ್ಲಿನ ಹಿರಿಯರು ತಮ್ಮ ಸ್ವಂತ ಬಳಕೆಗಾಗಿ ವೆದೂರ್ [ಬಿದಿರು] ಬಳಸಿ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದರು” ಎಂದು ಸುನೀತಾ ನೆನಪಿಸಿಕೊಳ್ಳುತ್ತಾರೆ. ನಂತರ ಕಾಡಿನಿಂದ ಬಯಲು ಪ್ರದೇಶದ ಕಡೆಗೆ ವಲಸೆ ಹೋಗಲು ಪ್ರಾರಂಭಿಸಿದ ನಂತರ ಕಾಡು ಮತ್ತು ಮನೆಯ ನಡುವಿನ ಅಂತರ ಬೆಳೆಯತೊಡಗಿತು. ಮತ್ತು “ಇದರಿಂದಾಗಿ ನನ್ನ ಪೋಷಕರು ಈ ಕೌಶಲಗಳನ್ನು ಕಲಿಯಲಿಲ್ಲ” ಅಲ್ಲದೆ ಅವರೂ ಕಲಿಯಲಿಲ್ಲ.
ಪ್ರಸ್ತುತ ವ್ಯವಸಾಯವೇ ಅವರ ಜೀವನೋಪಾಯ. “ನಮ್ಮ ಬಳಿ ಜಮೀನು ಇದೆಯಾದರೂ, ಇಂದಿಗೂ ಬೆಳೆ ವಿಫಲವಾದರೆ ಕೆಲಸಕ್ಕಾಗಿ ಬೇರೊಬ್ಬರ ಹೊಲಕ್ಕೆ ಹೋಗಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ, ಇದು ಅವರ ಕೊಲಾಮ್ ಆದಿವಾಸಿ ಸಮುದಾಯದ ಇತರ ರೈತರ ಸಮಸ್ಯೆಯೂ ಹೌದು. ಇಲ್ಲಿನ ಹೆಚ್ಚಿನ ರೈತರು ಕೃಷಿ ಕೂಲಿಗಳಾಗಿ ದುಡಿಯುತ್ತಾರೆ. ಜೊತೆಗೆ ತಮ್ಮ ಕೃಷಿ ಸಾಲ ತೀರಿಸಲಾಗದೆ ಪರದಾಡುತ್ತಿದ್ದಾರೆ.
“ಹತ್ತಿ ಮಾರಾಟದ ನಂತರ ಜೂನ್ ತನಕ ಯಾವುದೇ ಕೆಲಸವಿರುವುದಿಲ್ಲ. ಮೇ ಅತ್ಯಂತ ಕಷ್ಟದ ತಿಂಗಳು” ಎಂದು ಅವರು ಹೇಳುತ್ತಾರೆ. ಅವರು ಸರಿಸುಮಾರು 1,500 ಕಿಲೋಗ್ರಾಂಗಳಷ್ಟು ಹತ್ತಿ ಕೊಯ್ಲು ಮಾಡಿದ್ದಾರೆ. ಕಿಲೋಗ್ರಾಂಗೆ 62-65 ರೂ.ಗಳ ಬೆಲೆ ದೊರೆಯುತ್ತದೆ. "ಒಟ್ಟು ಸರಿಸುಮಾರು 93,000 ರೂಪಾಯಿಗಳು. ಸಾಹುಕಾರ್ (ಲೇವಾದೇವಿಗಾರ) ಬಳಿ ತೆಗೆದುಕೊಂಡಿದ್ದ 20,000 ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಿದ ನಂತರ, ಇಡೀ ವರ್ಷಕ್ಕೆ ನನ್ನ ಕೈಯಲ್ಲಿ ಕೇವಲ 35,000 ರೂಪಾಯಿ ಉಳಿದಿದೆ."
ಸ್ಥಳೀಯ ಮಾರಾಟಗಾರರು ಸಣ್ಣ ಮೊತ್ತವನ್ನು ಸಾಲವಾಗಿ ನೀಡುತ್ತಾರೆ ಆದರೆ ಪ್ರತಿ ವರ್ಷ ಮಳೆಗಾಲದ ಮೊದಲು ಅದನ್ನು ತೀರಿಸಬೇಕು. "ಇಸ್ಕಾ 500 ದೋ, ಉಸ್ಕಾ 500 ದೋ ಯೆ ಸಬ್ ಕರ್ತೇ ಕರ್ತೇ ಸಬ್ ಖತಮ್! ಕುಚ್ ಭೀ ನಹೀ ಮಿಲ್ತಾ... ಸಾರೆ ದಿನ್ ಕಾಮ್ ಕರೋ ಔರ್ ಮರೋ! [ಇದಕ್ಕೆ 500, ಅದಕ್ಕೆ 500 ಎಂದು ಎಲ್ಲ ಹಣ ಖರ್ಚಾಗುತ್ತದೆ. ಏನೂ ಉಳಿಯುವುದಿಲ್ಲ. ದುಡಿದು ಸಾಯೋದಷ್ಟೇ ನಮಗೆ ಉಳಿಯುವುದು!]" ಎಂದು ಅವರು ಆತಂಕದಿಂದ ನಗುತ್ತಾ ದೂರ ನೋಡುತ್ತಾರೆ.
ಮೂರು ವರ್ಷಗಳ ಹಿಂದೆ, ಸುನೀತಾ ರಾಸಾಯನಿಕ ಕೃಷಿ ಪದ್ಧತಿ ಬದಲು ಸಾವಯವ ಕೃಷಿ ಪದ್ಧತಿ ಪಾಲಿಸಲು ಆರಂಭಿಸಿದರು. "ನಾನು ಮಿಶ್ರಾ ಪೀಕ್ ಶೇಟಿ [ಅಂತರ ಬೆಳೆ/ಮಿಶ್ರ ಬೆಳೆ] ಆಯ್ಕೆ ಮಾಡಿಕೊಂಡೆ" ಎಂದು ಅವರು ಹೇಳುತ್ತಾರೆ. ಗ್ರಾಮದ ಮಹಿಳಾ ರೈತರು ಸ್ಥಾಪಿಸಿದ ಬೀಜದ ಬ್ಯಾಂಕಿನಿಂದ ಹೆಸರುಕಾಳು (ಹೆಸರುಕಾಳು), ಉದ್ದು, ಜೋವರ್ (ಜೋಳ), ಬಾಜ್ರಾ (ಸಜ್ಜೆ), ತಿಲ್ (ಎಳ್ಳು), ಜೋಳ ಮತ್ತು ತೊಗರಿ ಬೀಜಗಳನ್ನು ಪಡೆದರು. ತೊಗರಿ ಮತ್ತು ಹೆಸರು ಕಾಳು ಬೆಳೆ ಕಳೆದ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಕೆಲಸವಿಲ್ಲದಿದ್ದಾಗ ಸಹಾಯಕ್ಕೆ ಬಂದಿತು.
ಆದರೆ ಒಂದು ಸಮಸ್ಯೆ ಬಗೆಹರಿಯುತ್ತಿದ್ದ ಹಾಗೆ ಮತ್ತೊಂದು ಸಮಸ್ಯೆ ಎದುರಾಯಿತು. ತೊಗರಿ ಚೆನ್ನಾಗಿ ಬಂದರೂ, ಇತರ ಬೆಳೆಗಳು ಉತ್ತಮ ಫಲಿತಾಂಶ ನೀಡಲಿಲ್ಲ: "ಕಾಡು ಹಂದಿಗಳು ನಾಶಪಡಿಸಿದವು" ಎಂದು ಸುನೀತಾ ಹೇಳುತ್ತಾರೆ.
*****
ಸೂರ್ಯ ಮುಳುಗುತ್ತಿದ್ದಂತೆ, ಸುನೀತಾ ಕೊಯ್ಲು ಮಾಡಿದ ಹತ್ತಿಯನ್ನು ಮುಡಿ (ಕಟ್ಟು) ಕಟ್ಟಲು ಪ್ರಾರಂಭಿಸುತ್ತಾರೆ. ಅವರು ಆ ದಿನದ ತನ್ನ ಗುರಿಯನ್ನು ಸಾಧಿಸಿದ್ದರು. ಉಳಿದ ಕೊನೆಯ ಸಾಲುಗಳು ಸರಿಸುಮಾರು ಆರು ಕಿಲೋಗಳಷ್ಟು ಹತ್ತಿಯನ್ನು ನೀಡಿದ್ದವು.
ಆದರೆ ಈಗಾಗಲೇ ನಾಳೆಯ ದಿನಕ್ಕೆ ಗುರಿಯನ್ನು ನಿಗದಿಪಡಿಸಿದ್ದಾರೆ: ಕೇಸರ (ಕೊಲಾಮಿ ಭಾಷೆಯಲ್ಲಿ ತ್ಯಾಜ್ಯ) ಮತ್ತು ಸಂಗ್ರಹಿಸಿದ ಹತ್ತಿಯಿಂದ ಒಣ ರೆಕ್ಕಾ ತೆಗೆಯುವುದು. ಅದರ ಮರುದಿನದ ಗುರಿ: ಹತ್ತಿಯನ್ನು ಮಾರುಕಟ್ಟೆಗೆ ಸಿದ್ಧವಾಗಿಸುವುದು.
ಒಂದು ಭಾಷೆಯಾಗಿ ಅಳಿವಿನಂಚಿನಲ್ಲಿರುವ ಕೊಲಾಮಿ ಭಾಷೆಯ ಕುರಿತಾಗಿ ಕೇಳಿದಾಗ ಅವರು “[ಅವರ ಜಮೀನನ್ನು ಹೊರತುಪಡಿಸಿ] ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಸಮಯವಿಲ್ಲ” ಎಂದು ಹೇಳಿದರು. ಭಾಷೆ ಬಾರದೇ ಇದ್ದ ಸಮಯದಲ್ಲಿ ಸುನೀತಾ ಮತ್ತು ಅವರ ಸಮುದಾಯವನ್ನು “ಎಲ್ಲರೂ ʼಮರಾಠಿಯಲ್ಲಿ ಮಾತನಾಡಿ, ಮರಾಠಿಯಲ್ಲಿ ಮಾತನಾಡಿʼ ಎಂದು ಒತ್ತಾಯಿಸುತ್ತಿದ್ದರು. ಈಗ ಕೊಲಾಮಿ ಭಾಷೆ ಸಾಯುತ್ತಿರುವ ಹೊತ್ತಿನಲ್ಲಿ ಕೊಲಾಮಿ ಮಾತನಾಡಿ ಎನ್ನುತ್ತಿದ್ದಾರೆ” ಎಂದು ನಕ್ಕರು.
"ನಾವು ನಮ್ಮ ಭಾಷೆಯನ್ನು ಮಾತನಾಡುತ್ತೇವೆ. ನಮ್ಮ ಮಕ್ಕಳೂ ಸಹ" ಎಂದು ಅವರು ಪ್ರತಿಪಾದಿಸುತ್ತಾರೆ. "ನಾವು ಹೊರಗೆ ಹೋದಾಗ ಮಾತ್ರ ಮರಾಠಿಯಲ್ಲಿ ಮಾತನಾಡುತ್ತೇವೆ. ಮನೆಯಲ್ಲಿ ನಮ್ಮ ಭಾಷೆಯಲ್ಲೇ ಮಾತನಾಡುತ್ತೇವೆ."
"ಆಪ್ಲಿ ಭಾಷಾ ಆಪ್ಲಿಚ್ ರಹಿಲೀ ಪಾಹಿಜೆ [ನಮ್ಮ ಭಾಷೆ ನಮ್ಮದಾಗಿಯೇ ಉಳಿಯಬೇಕು]. ಕೊಲಾಮಿ ಕೊಲಾಮಿಯಾಗಿರಬೇಕು ಮತ್ತು ಮರಾಠಿ ಮರಾಠಿ ಆಗಿರಬೇಕು. ಅದೇ ಮುಖ್ಯ."
ವರದಿಗಾರರು ಪ್ರೇರಣಾ ಗ್ರಾಮ ವಿಕಾಸ್ ಸಂಸ್ಥೆ ಮತ್ತು ಮಾಧುರಿ ಖಾಡ್ಸೆ ಮತ್ತು ಆಶಾ ಕರೇವಾ ಮತ್ತು ಕೊಲಾಮಿ ಭಾಷೆಗೆ ಭಾಷಾಂತರ ಸಹಾಯವನ್ನು ಒದಗಿಸಿದ ಸಾಯಿಕಿರಣ್ ತೇಕಾಮ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ.
ಪರಿಯ ಅಳಿವಿನಂಚಿನಲ್ಲಿರುವ ಭಾಷೆಗಳ ಯೋಜನೆ (ಇಎಲ್‌ಪಿ) ಭಾರತದ ದುರ್ಬಲ ಭಾಷೆಗಳನ್ನು ಆ ಭಾಷೆಗಳನ್ನು ಮಾತನಾಡುವ ಜನರ ಧ್ವನಿ ಮತ್ತು ಜೀವನಾನುಭವಗಳ ಮೂಲಕವೇ ದಾಖಲಿಸುವ ಗುರಿಯನ್ನು ಹೊಂದಿದೆ.
ಅನುವಾದ: ಶಂಕರ. ಎನ್. ಕೆಂಚನೂರು