ಶ್ರೀರಂಗನ್ ಅವರು ಮನೆಗೆ ಮರಳಿದಾಗ ಮೊದಲಿಗೆ, ತಮ್ಮ ಕೈಗಳಿಗೆ ಮೆತ್ತಿಕೊಂಡ ಒಣಗಿದ ಗಟ್ಟಿಯಾದ ಸೊನೆಯನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ. 55ರ ವಯಸ್ಸಿನ ಇವರು ತಮ್ಮ ಹದಿಹರೆಯದ ವಯಸ್ಸಿನಿಂದಲೂ ರಬ್ಬರ್ ಮರಗಳ ಸೊನೆಯನ್ನು ಸಂಗ್ರಹಿಸುತ್ತಿದ್ದು, ಒಣಗಿದ ನಂತರ ಗಟ್ಟಿಯಾಗಿ, ಕಂದು ಬಣ್ಣಕ್ಕೆ ತಿರುಗುವ ಹಾಲು ಬಿಳುಪಿನ ಸೊನೆಯ ಬಗ್ಗೆ ಹೆಚ್ಚು ಪರಿಚಿತರಾಗಿದ್ದಾರೆ. ಮನೆಗೆ ಮರಳುತ್ತಿದ್ದಂತೆಯೇ, ಕೈಗಳಿಗೆ ಮೆತ್ತಿಕೊಂಡ ರಬ್ಬರ್‌ನ ಸೊನೆಯನ್ನು ಸ್ವಚ್ಛಗೊಳಿಸುವುದು ಮುಖ್ಯವಾದ ಕೆಲಸ.
ಸುರುಲಕೋಡ್ ಹಳ್ಳಿಯಲ್ಲಿ ಆರು ಗಂಟೆಯ ಹೊತ್ತಿಗೆ, ರಬ್ಬರನ್ನು ಸಂಗ್ರಹಿಸುವ 6-7 ಇಂಚಿನಷ್ಟು ಉದ್ದದ ಕೊಕ್ಕೆಯ ಆಕಾರದ ಕತ್ತಿಯೊಂದಿಗೆ ತಮ್ಮ ರಬ್ಬರ್ ತೋಟಕ್ಕೆ ತೆರಳುವುದರೊಂದಿಗೆ ಇವರ ದಿನವು ಆರಂಭವಾಗುತ್ತದೆ. ಮನೆಯಿಂದ ಹೊರಟು ಐದು ನಿಮಿಷಗಳಲ್ಲಿ ತಲುಪಬಹುದಾದ, ಸರ್ಕಾರದಿಂದ ಇವರ ತಂದೆಗೆ ದೊರೆತ ಐದು ಎಕರೆಯ ತೋಟದಲ್ಲಿ ಇವರು ರಬ್ಬರ್, ಮೆಣಸು ಮತ್ತು ಲವಂಗವನ್ನು ಬೆಳೆಯುತ್ತಾರೆ.
ಇಪ್ಪತ್ತೇಳು ವರ್ಷಗಳ ಕೆಳಗೆ ತಾವು ವಿವಾಹವಾದ ಲೀಲ ಶ್ರೀರಂಗನ್ ಅವರೊಂದಿಗೆ ರಬ್ಬರ್ ಮರಗಳ ಕೆಲಸದಲ್ಲಿ ತೊಡಗುವ ಇವರು ಕನಿಕರನ್ ಆದಿವಾಸಿ ಸಮುದಾಯದವರು.
ಶ್ರೀರಂಗನ್ (ಇವರು ತಮ್ಮ ಮೊದಲ ಹೆಸರನ್ನು ಮಾತ್ರವೇ ಬಳಸುತ್ತಾರೆ), ಹಿಂದಿನ ದಿನದಂದು ಮರಕ್ಕೆ ಕಟ್ಟಿದ ಕಪ್ಪು ಬಟ್ಟಲಿನಲ್ಲಿ ಬಸಿದಿದ್ದ ಒಣಗಿದ ಸೊನೆಯನ್ನು ಸಂಗ್ರಹಿಸುವುದರೊಂದಿಗೆ ಕೆಲಸವನ್ನು ಪ್ರಾರಂಭಿಸುತ್ತಾರೆ. “ಅಂದಿನ ತಾಜಾ ಸೊನೆಯನ್ನು ಸಂಗ್ರಹಿಸಿದ ನಂತರ ಸೊನೆಯ ಅವಶೇಷವು ಬಟ್ಟಲಿಗೆ ಹರಿದು, ಇಡೀ ರಾತ್ರಿ ಒಣಗುತ್ತದೆ. ಇದನ್ನು ಒಟ್ಟುಕರ” ಎನ್ನುತ್ತಾರೆ ಎಂದು ಅವರು ತಿಳಿಸಿದರು.
ಒಣಗಿದ ಸೊನೆಯ ಮಾರಾಟವು ಹೆಚ್ಚುವರಿ ಆದಾಯವಾಗಿದ್ದು, ಒಂದು ಕೆ.ಜಿ.ಗೆ ಇವರಿಗೆ ಅರವತ್ತರಿಂದ ಎಂಭತ್ತು ರೂ.ಗಳು ದೊರೆಯುತ್ತವೆ. ಎರಡು ವಾರಗಳ ಮಟ್ಟಿಗೆ ಸಂಗ್ರಹಿಸಿದ ‘ಒಟ್ಟುಕರ’ವನ್ನು ಇವರು ಮಾರುಕಟ್ಟೆಯಲ್ಲಿ ಮಾರುತ್ತಾರೆ.
ಬಟ್ಟಲುಗಳನ್ನು ಖಾಲಿಮಾಡಿದ ನಂತರ ಇವರು ತಾಜಾ ಸೊನೆಯು ಬಟ್ಟಲಿನಲ್ಲಿ ಹರಿಯುವಂತೆ ಒಂದು ಇಂಚಿನಷ್ಟು ಉದ್ದದ ಮರದ ತೊಗಟೆಯ ಪಟ್ಟಿಯೊಂದನ್ನು ಕತ್ತರಿಸುತ್ತಾರೆ. ಉಳಿದ 299 ಮರಗಳಿಗೂ ಇದೇ ಪ್ರಕ್ರಿಯೆಯನ್ನು ಇವರು ಪುನರಾವರ್ತಿಸುತ್ತಾರೆ.
ಶ್ರೀರಂಗನ್, ರಬ್ಬರ ಮರಗಳ ಕೆಲಸಕ್ಕೆ ತೆರಳಿರುವಾಗ, ಲೀಲ, ಮನೆಗೆಲಸವನ್ನು ಪೂರೈಸಿ, ಉಪಹಾರವನ್ನು ತಯಾರಿಸುತ್ತಾರೆ. ಮೂರು ಗಂಟೆಗಳ ರಬ್ಬರ್ ಸಂಗ್ರಹದ ನಂತರ ಶ್ರೀರಂಗನ್, ಊಟಕ್ಕೆಂದು ಮನೆಗೆ ಬರುತ್ತಾರೆ. ಈ ದಂಪತಿಗಳು ಥೊಟ್ಟಮಲೈ ಪರ್ವತದ ಬಳಿ ವಾಸಿಸುತ್ತಾರೆ; ಕೊಡೈಯಾರ್ ನದಿಯು ಇದರ ಸಮೀಪದಲ್ಲಿ ಹರಿಯುತ್ತದೆ. ಇವರ ಇಬ್ಬರು ವಿವಾಹಿತ ಪುತ್ರಿಯರು ತಮ್ಮ ಪತಿಯೊಂದಿಗೆ ನೆಲೆಸಿದ್ದು, ಇಲ್ಲಿ ವಾಸಿಸುತ್ತಿರುವುದು ಈ ಇಬ್ಬರೇ.
ಮುಂಜಾನೆ ಸುಮಾರು ಹತ್ತು ಗಂಟೆಯ ಹೊತ್ತಿಗೆ ಬಟ್ಟಲುಗಳಿಗೆ ಹರಿದಿರುವ ಹಾಲು ಬಿಳುಪಿನ ಸೊನೆಯನ್ನು ಸಂಗ್ರಹಿಸಲು ತಲಾ ಒಂದು ಬಕೆಟ್ ಅನ್ನು ಹಿಡಿದು ಇವರು ತೋಟಕ್ಕೆ ಮರಳುತ್ತಾರೆ. ಈ ಪ್ರಕ್ರಿಯೆಗೆ ಒಂದೂವರೆ ಗಂಟೆ ಹಿಡಿಯುತ್ತದೆ. ಮಧ್ಯಾಹ್ನದ ಹೊತ್ತಿಗೆ ಅವರು ಮನೆಗೆ ಮರಳುತ್ತಾರೆ. ವಿಶ್ರಾಂತಿಗೆ ಸಮಯವಿರುವುದಿಲ್ಲ. ರಬ್ಬರ್ ಹಾಳೆಯನ್ನು ತಯಾರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸತಕ್ಕದ್ದು. ಇಲ್ಲವಾದರೆ ಸೊನೆಯು ಒಣಗಲಾರಂಭಿಸುತ್ತದೆ.
ಲೀಲ, ಸೊನೆಯನ್ನು ನೀರಿನೊಂದಿಗೆ ಬೆರೆಸಲು ಪ್ರಾರಂಭಿಸುತ್ತಾರೆ. 50ರ ಲೀಲ ಹೀಗೆಂದರು: “ಸೊನೆಯು ದಪ್ಪವಾಗಿದ್ದರೆ, ನಾವು ಹೆಚ್ಚು ನೀರನ್ನು ಸುರಿಯಬಹುದಾದರೂ, ಹಾಳೆಯಾಗಿ ಮಾರ್ಪಾಡು ಹೊಂದಲು ಅದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ.”
ಶ್ರೀರಂಗನ್, ಆಯತಾಕಾರದ ಪಾತ್ರೆಯಲ್ಲಿ ಮಿಶ್ರಣವನ್ನು ಸುರಿಯುತ್ತಿದ್ದಂತೆ, ಲೀಲ, ಅವನ್ನು ಅಣಿಗೊಳಿಸುತ್ತಾರೆ. ತಮ್ಮ ಪತಿಯು ಅಚ್ಚುಗಳಲ್ಲಿ ಸೊನೆಯನ್ನು ಸುರಿಯುವುದನ್ನು ಮುಗಿಸುತ್ತಿದ್ದಂತೆಯೇ ಲೀಲ, “ನಾವು ಈ ಪಾತ್ರೆಯಲ್ಲಿ ಎರಡು ಲೀಟರ್ ಸೊನೆ ಮತ್ತು ಸ್ವಲ್ಪ ಪ್ರಮಾಣದ ಆಸಿಡ್ ಅನ್ನು ತುಂಬಿಸುತ್ತೇವೆ. ಬಳಸಿದ ನೀರಿನ ಪ್ರಮಾಣಕ್ಕೆ ತಕ್ಕಂತೆ ಆಸಿಡ್ ಅನ್ನು ತುಂಬಿಸಲಾಗುತ್ತದೆ. ಅದನ್ನು ಅಳತೆಮಾಡುವುದಿಲ್ಲ” ಎಂಬುದಾಗಿ ತಿಳಿಸಿದರು.
ʼಪರಿʼಯು ಅವರನ್ನು ಮೇ ತಿಂಗಳಿನಲ್ಲಿ ಭೇಟಿಮಾಡಿದಾಗ, ರಬ್ಬರಿನ ಋತುವು ಆರಂಭವಾಗುತ್ತಿದ್ದು, ದಿನಂಪ್ರತಿ ಅವರಿಗೆ ಕೇವಲ ಆರು ಹಾಳೆಗಳು ದೊರೆಯುತ್ತಿದ್ದವಷ್ಟೇ. ಮಾರ್ಚ್‌ವರಗೆ ಋತುವು ಮುಂದುವರಿಯುತ್ತಿದ್ದಂತೆ, ವರ್ಷಕ್ಕೆ ಅವರು 1,300 ಹಾಳೆಗಳನ್ನು ತಯಾರಿಸಬಲ್ಲರು.
“ಒಂದು ಹಾಳೆಯು 800-900 ಗ್ರಾಂ ಸೊನೆಯನ್ನು ಹೊಂದಿರುತ್ತದೆ” ಎಂಬುದಾಗಿ ಶ್ರೀರಂಗನ್ ವಿವರಿಸಿದರು. ಲೀಲ, ಜಾಗರೂಕತೆಯಿಂದ ಆಸಿಡ್ ಅನ್ನು ಮಿಶ್ರಗೊಳಿಸಲು ಆರಂಭಿಸುತ್ತಾರೆ.
ಹದಿನೈದು ನಿಮಿಷಗಳ ನಂತರ ಸೊನೆಯು ಹೆಪ್ಪುಗಟ್ಟಿ, ಅದನ್ನು ರಬ್ಬರ್ ಹಾಳೆಗಳಾಗಿ ಮಾರ್ಪಡಿಸುವ ಪ್ರಕ್ರಿಯೆಯು ಆರಂಭವಾಗುತ್ತದೆ. ಸೊನೆಯನ್ನು ಎರಡು ರೀತಿಯ ರೋಲರ್ ಯಂತ್ರದಲ್ಲಿ ಅಳವಡಿಸಲಾಗುತ್ತದೆ. ಹಾಳೆಯೊಂದನ್ನು ಸಮತಟ್ಟಾಗಿ ತೆಳುಗೊಳಿಸಲು ಮೊದಲ ಯಂತ್ರವನ್ನು ನಾಲ್ಕು ಬಾರಿ ಬಳಸುತ್ತಾರೆ. ಅದಕ್ಕೆ ಆಕಾರವನ್ನು ನೀಡಲು ಎರಡನೆಯ ಯಂತ್ರವನ್ನು ಒಂದು ಬಾರಿ ಬಳಸಲಾಗುತ್ತದೆ. ನಂತರ ಹಾಳೆಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸುತ್ತಾರೆ. “ಸಾಮಾನ್ಯವಾಗಿ ಕೆಲವರು ಕೂಲಿಯವನನ್ನು ನೇಮಿಸಿಕೊಂಡು, ಹಾಳೆಯೊಂದಕ್ಕೆ (ಅವರು ತಯಾರಿಸುವ) ಎರಡು ರೂ.ಗಳನ್ನು ಪಾವತಿಸುತ್ತಾರೆ. ಆದರೆ ನಾವೇ ಸ್ವತಃ ಈ ರಬ್ಬರ್ ಹಾಳೆಗಳನ್ನು ತಯಾರಿಸುತ್ತೇವೆ” ಎಂದರು ಲೀಲ.
ಅಚ್ಚುಮಾಡಿದ ರಬ್ಬರ್ ಹಾಳೆಗಳನ್ನು ಮೊದಲು ಬಿಸಿಲಿನಲ್ಲಿ ಒಣಗಿಸುತ್ತಾರೆ. ಶ್ರೀರಂಗನ್ ಮತ್ತು ಲೀಲ, ಕೆಲವೊಮ್ಮೆ ತಮ್ಮ ಬಟ್ಟೆಗಳನ್ನು ಒಣಗಿಸುವ ಹಗ್ಗದ ಮೇಲೆ ರಬ್ಬರ್ ಹಾಳೆಗಳನ್ನು ತೂಗುಹಾಕುತ್ತಾರೆ. ಮಾರನೆಯ ದಿನ, ಅವರು ತಮ್ಮ ಅಡಿಗೆ ಮನೆಗೆ ಹಾಳೆಗಳನ್ನು ಒಯ್ಯುತ್ತಾರೆ.
ಉರುವಲಿನ ಮೇಲೆ ತೂಗುಹಾಕಿರುವ ರಬ್ಬರ್ ಹಾಳೆಗಳ ಕಂತೆಯನ್ನು ತೋರಿಸಲು ಲೀಲ, ಸಣ್ಣ ಪರದೆಯೊಂದನ್ನು ತೆಗೆದರು. ಕಂತೆಯಿಂದ ರಬ್ಬರ್ ಹಾಳೆಯೊಂದನ್ನು ಹೊರ ತೆಗೆಯುತ್ತ, “ಬೆಂಕಿಯ ಶಾಖವು ಹಾಳೆಗಳನ್ನು ಒಣಗಿಸುತ್ತದೆ. ಹಾಳೆಯು ಕಂದುಬಣ್ಣಕ್ಕೆ ತಿರುಗಿದಾಗ, ಅದು ಸಂಪೂರ್ಣವಾಗಿ ಒಣಗಿದೆಯೆಂದು ನಮಗೆ ಅರಿವಾಗುತ್ತದೆ” ಎಂದು ತಿಳಿಸಿದರು.
ಹಣದ ಅವಶ್ಯಕತೆಯಿದ್ದಾಗ ದಂಪತಿಗಳು ಹಾಳೆಗಳನ್ನು ಕಲೆಹಾಕಿ, ಎಂಟು ಕಿ.ಮೀ. ದೂರದ ರಬ್ಬರ ಹಾಳೆಯ ಅಂಗಡಿಗೆ ಮಾರುತ್ತಾರೆ. ಮಾರುಕಟ್ಟೆಯ ದರಕ್ಕೆ ಅನುಸಾರವಾಗಿ ಇವರಿಗೆ ದೊರೆಯುವ ಆದಾಯವು ಬದಲಾಗುತ್ತಿರುತ್ತದೆ. “ಯಾವುದೇ ನಿಗದಿತ ಬೆಲೆಯೆಂಬುದಿಲ್ಲ. ಈಗ ಕೆ.ಜಿ.ಯೊಂದಕ್ಕೆ 130 ರೂ.ಗಳಿವೆ” ಎಂದರು ಶ್ರೀರಂಗನ್.
ಲೀಲ, “ಕಳೆದ ವರ್ಷ ನಮಗೆ ಸುಮಾರು ಅರವತ್ತು ಸಾವಿರ ರೂ.ಗಳು ದೊರೆಯಿತು (ರಬ್ಬರ್ ಹಾಳೆಗಳಿಂದ). ಮಳೆಯಿದ್ದಾಗ ಅಥವಾ ಹೆಚ್ಚಿನ ಬಿಸಿಲಿದ್ದಾಗ, ನಮಗೆ ರಬ್ಬರ್ ಸಂಗ್ರಹಿಸುವ ಕೆಲಸಕ್ಕೆ ಹೋಗಲು ಸಾಧ್ಯವಾಗದು” ಎಂದರವರು. ಅಂತಹ ದಿನಗಳಲ್ಲಿ ಅವರು ಕಾಯಬೇಕಷ್ಟೇ.
ಕಾಲಕಳೆದಂತೆ, ರಬ್ಬರಿನ ಉತ್ಪಾದನೆಯು ಕಡಿಮೆಯಾಗುವ ಕಾರಣ ಸಾಮಾನ್ಯವಾಗಿ ಇಪ್ಪತ್ತು ವರ್ಷಗಳ ನಂತರ ರಬ್ಬರ್ ಮರಗಳನ್ನು ಕಡಿಯಲಾಗುತ್ತದೆ. ಅದರ ಜಾಗದಲ್ಲಿ ಹೊಸ ಸಸಿಗಳನ್ನು ನೆಡುತ್ತಾರೆ. ಅಗತ್ಯವಿರುವ ಸೊನೆಯನ್ನು ಉತ್ಪತ್ತಿಮಾಡಲು ಹೊಸದಾಗಿ ನೆಟ್ಟ ರಬ್ಬರ್ ಮರಕ್ಕೆ ಏಳು ವರ್ಷಗಳು ಅವಶ್ಯ. “ಕೆಲವೊಮ್ಮೆ ಮೂವತ್ತು ಅಥವಾ ಹದಿನೈದು ವರ್ಷಗಳ ನಂತರವೂ ಸಹ ಜನರು ಮರಗಳನ್ನು ಕಡಿಯುತ್ತಾರೆ. ಮರವು ಉತ್ಪತ್ತಿಮಾಡಬಲ್ಲ ಸೊನೆಯ ಪ್ರಮಾಣವನ್ನು ಇದು ಅವಲಂಬಿಸಿರುತ್ತದೆ” ಎಂದರು ಶ್ರೀರಂಗನ್.
ಭಾರತ ಸರ್ಕಾರದ ರಬ್ಬರ್ ಬೋರ್ಡ್‌ನ ದತ್ತಾಂಶದ ಅನುಸಾರ , ಕಳೆದ ಹದಿನೈದು ವರ್ಷಗಳಲ್ಲಿ ರಬ್ಬರ್ ಕೃಷಿಯನ್ನು ಕೈಗೊಂಡಿರುವ ಪ್ರದೇಶವು ಸುಮಾರು ಶೇ. 39ರಷ್ಟು ವೃದ್ಧಿಸಿದ್ದು, ಅದೇ ಸಮಯದಲ್ಲಿ ಇಳುವರಿಯು ಶೇ. 18ರಷ್ಟು ಕಡಿಮೆಯಾಗಿದೆ.
“ಋತುಮಾನಕ್ಕೆ ಅನುಗುಣವಾಗಿ ನಮ್ಮ ಕೆಲಸದಿಂದ ದೊರೆಯುವ ಲಾಭವು ಬದಲಾಗುತ್ತದೆ” ಎನ್ನುತ್ತಾರೆ ಶ್ರೀರಂಗನ್. ಹೀಗಾಗಿ ಇವರಿಗೆ ಆದಾಯದ ಇತರೆ ಮೂಲಗಳಿವೆ – ವರ್ಷಕ್ಕೊಮ್ಮೆ ಅವರು ಮೆಣಸು ಮತ್ತು ಲವಂಗವನ್ನು ಕಟಾವುಮಾಡುತ್ತಾರೆ.
“ಮೆಣಸಿನ ಋತುವಿನಲ್ಲಿ, ಲಾಭವು ಮಾರುಕಟ್ಟೆಯಲ್ಲಿ ಬಿಕರಿಯಾದ ಮೆಣಸಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ಇದೂ ಸಹ ಹತ್ತಿಯಂತಹ ಇತರೆ ಬೆಳೆಗಳಂತೆಯೇ. ನಮಗೆ ಈ ಸಮಯದ ಸುಮಾರಿಗೆ (ಮೇ) ಒಂದು ಕೆ.ಜಿ. ಹಸಿರು ಮೆಣಸಿಗೆ 120 ರೂ.ಗಳು ದೊರೆಯುತ್ತವೆ. ಒಂದು ಲವಂಗಕ್ಕೆ 1.50 ರೂ.ಗಳನ್ನು ಪಡೆಯುತ್ತೇವೆ” ಎಂಬುದಾಗಿ ಶ್ರೀರಂಗನ್ ತಿಳಿಸಿದರು. ಉತ್ತಮ ಋತುವಿನಲ್ಲಿ, 2,000-2,5000 ಲವಂಗಗಳ ಸಂಗ್ರಹವನ್ನು ಅವರು ನಿಭಾಯಿಸಬಲ್ಲರು.
ಕಳೆದ ಹದಿನೈದು ವರ್ಷಗಳಿಂದ ಶ್ರೀರಂಗನ್, ಊರ್ ತಲೈವರ್ (ಕೊಪ್ಪಲಿನ ಮುಖ್ಯಸ್ಥ) ಸಹ ಆಗಿದ್ದಾರೆ. “ನನ್ನ ಉತ್ತಮ ವಾಕ್ಪಟುತ್ವದಿಂದಾಗಿ ಜನರು ನನ್ನನ್ನು ಆರಿಸುತ್ತಾರೆ. ಆದರೆ ನನ್ನ ವೃದ್ಧಾಪ್ಯದಿಂದಾಗಿ ಇನ್ನು ನನಗೆ ಪ್ರತಿಯೊಂದರ ಕಾಳಜಿವಹಿಸಲು ಸಾಧ್ಯವಾಗುವುದಿಲ್ಲ” ಎನ್ನುತ್ತಾರವರು.
ಸಂತೋಷದಿಂದ ಅವರು ಹೀಗೆಂದರು: “ಹಳ್ಳಿಗೆ ಪ್ರಾಥಮಿಕ ಶಾಲೆಯು (ಜಿಪಿಎಸ್-ಥೊಟ್ಟಮಲೈ) ಲಭ್ಯವಾಗುವಂತೆ ಮಾಡಿದೆನಲ್ಲದೆ, ರಸ್ತೆಯ ನಿರ್ಮಾಣವನ್ನು ಪ್ರೋತ್ಸಾಹಿಸಿದೆ.”
ಅನುವಾದ: ಶಂಕರ. ಎನ್. ಕೆಂಚನೂರು