"ಏಥೆ ರೋಟಿ ಕಥ್ ಮಿಲ್ದಿ ಹೈ, ಚಿಟ್ಟಾ ಸಾರೆ ಆಮ್ ಮಿಲ್ದಾ ಹೈ [ಇಲ್ಲಿ, ತಿನ್ನಲು ಊಟ ಸಿಗದೇ ಇದ್ದರೂ, ಹೆರಾಯಿನ್ ಸುಲಭವಾಗಿ ಸಿಗುತ್ತದೆ]."

ಹರ್ವನ್ಸ್ ಕೌರ್ ಅವರಿಗೆ ಇರುವ ಒಬ್ಬನೇ ಒಬ್ಬ ಮಗ ಕೂಡ ಮಾದಕ ವ್ಯಸನಿ. "ನಾವು ಅವನನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಅವನು ಇನ್ನೂ ತನ್ನದೇ ದಾರಿಯಲ್ಲಿ ಹೋಗುತ್ತಿದ್ದಾನೆ, ಇರುವ ಎಲ್ಲಾ ಹಣ ತೆಗೆದುಕೊಂಡು ಡ್ರಗ್ಸ್‌ಗೆ ಖರ್ಚು ಮಾಡುತ್ತಾನೆ," ಎಂದು 25 ವರ್ಷದ ಯುವಕನ ತಾಯಿ ನೋವಿನಿಂದ ಹೇಳುತ್ತಾರೆ. ಅವರ ಮಗ ಆಗಷ್ಟೇ ಮಗುವಿನ ತಂದೆಯಾಗಿದ್ದ. ಚಿಟ್ಟಾ (ಹೆರಾಯಿನ್), ಚುಚ್ಚುಮದ್ದು ಮತ್ತು ಸೈಕೋಟ್ರೋಪಿಕ್ ಮಾದಕ ಗುಳಿಗೆಗಳು ತಮ್ಮ ಹಳ್ಳಿಯಲ್ಲಿ ಸುಲಭವಾಗಿ ಸಿಗುತ್ತವೆ ಎಂದು ಅವರು ಹೇಳುತ್ತಾರೆ.

“ಸರ್ಕಾರ ಮನಸ್ಸು ಮಾಡಿದರೆ ಮಾದಕ ವ್ಯಸನವನ್ನು ತಡೆಯಬಹುದು. ಇಲ್ಲವಾದರೆ ನಮ್ಮ ಮಕ್ಕಳು ಸಾಯುತ್ತಾರೆ." ಹರ್ವನ್ಸ್ ಕೌರ್ ಅವರು ರಾವೋಕೆ ಕಲನ್ ಗ್ರಾಮದ ಆಲೂಗಡ್ಡೆ ಶೇಖರಣಾ ಘಟಕದಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಪ್ಯಾಕ್ ಮಾಡುವ ಕೆಲಸದಲ್ಲಿ ಪ್ರತಿ ಚೀಲಕ್ಕೆ ಅವರಿಗೆ 15 ರುಪಾಯಿ ಸಿಗುತ್ತದೆ. ಒಂದು ದಿನಕ್ಕೆ ಸುಮಾರು 12 ಪ್ಯಾಕ್ ಮಾಡುವ ಇವರಿಗೆ 180 ರುಪಾಯಿ ಸಂಪಾದನೆಯಾಗುತ್ತದೆ. 45 ವರ್ಷ ಪ್ರಾಯದ ಇವರ ಪತಿ, ಸುಖದೇವ್ ಸಿಂಗ್, ತಮ್ಮ ಗ್ರಾಮ ನಂಗಲ್‌ನಿಂದ ನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ನಿಹಾಲ್ ಸಿಂಗ್ ವಾಲಾದ ಗೋದಾಮೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಾರೆ. ಗೋಧಿ ಅಥವಾ ಅಕ್ಕಿ ಚೀಲಗಳನ್ನು ಪ್ಯಾಕ್ ಮಾಡುವ ಇವರು, ಕೆಲಸ ಇದ್ದಾಗ ದಿನಕ್ಕೆ 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಇವರ ಸಂಪಾದನೆಯಲ್ಲಿಯೇ ಕುಟುಂಬ ನಡೆಯುತ್ತದೆ.

ವಿಷಯಕ್ಕೆ ಬರುತ್ತಾ, ಪಂಜಾಬ್‌ನ ಮೋಗಾ ಜಿಲ್ಲೆಯ ಈ ಹಳ್ಳಿಯಲ್ಲಿರುವ ಹರ್ವನ್ಸ್ ಕೌರ್ ಅವರ ನೆರೆಮನೆಯ ಕಿರಣ್ ಕೌರ್, "ನಮ್ಮ ಹಳ್ಳಿಯಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡುವ ಭರವಸೆ ಯಾರು ಕೊಡುತ್ತಾರೋ, ಅವರಿಗೆ ನಮ್ಮ ವೋಟು," ಎಂದು ಹೇಳುತ್ತಾರೆ.

ಕಿರಣ್ ಅವರ ಈ ಸ್ಪಷ್ಟ ಮಾತುಗಳಲ್ಲಿ ಅವರ ಪತಿ ಕೂಡ ಮಾದಕ ವ್ಯಸನಿಯಾಗಿರುವ ನೋವು ಕಂಡುಬರುತ್ತದೆ. ಮೂರು ವರ್ಷದ ಮಗಳು ಮತ್ತು ಆರು ತಿಂಗಳ ಮಗನ ತಾಯಿಯಾಗಿರುವ ಇವರು, “ನನ್ನ ಪತಿ ಸಾಮಾನ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಅವರು ಒಬ್ಬ ಮಾದಕ ವ್ಯಸನಿ. ಕಳೆದ ಮೂರು ವರ್ಷಗಳಿಂದ ಅವರು ಹಾಗೆಯೇ ಇದ್ದಾರೆ. ಅವರು ತಾವು ಸಂಪಾದನೆ ಮಾಡಿದ ಎಲ್ಲವನ್ನೂ ಡ್ರಗ್ಸ್‌ಗೆ ಖರ್ಚು ಮಾಡುತ್ತಾರೆ," ಎಂದು ಹೇಳುತ್ತಾರೆ.

ಎಂಟು ಮಂದಿ ವಾಸಿಸುವ ತಮ್ಮ ಮನೆಯ ಗೋಡೆಗಳ ಮೇಲಿನ ದೊಡ್ಡ ದೊಡ್ಡ ಬಿರುಕುಗಳನ್ನು ನೋಡುತ್ತಾ, "ಮನೆ ರಿಪೇರಿ ಮಾಡಲು ಮಾಡಲು ಹಣ ಎಲ್ಲಿಂದ ಬರಬೇಕು?" ಎಂದು ಹೇಳುತ್ತಾರೆ.

PHOTO • Sanskriti Talwar

ಪಂಜಾಬ್‌ನ ಮೋಗಾ ಜಿಲ್ಲೆಯ ನಂಗಲ್ ಗ್ರಾಮದ ಹರ್ವನ್ಸ್ ಕೌರ್ ಮತ್ತು ಅವರ ಪತಿ ಸುಖದೇವ್ ಸಿಂಗ್ ಅವರು ತಮ್ಮ ಮಗನನ್ನು ಮಾದಕ ವ್ಯಸನದಿಂದ ಬಿಡಿಸಲು ಹೆಣಗಾಡುತ್ತಿದ್ದಾರೆ

ಜೂನ್ 1 ರಂದು ಮೊಗಾ ಜಿಲ್ಲೆಯ ನಂಗಲ್ ಗ್ರಾಮವು ಫರೀದ್‌ಕೋಟ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಆರು ತಿಂಗಳ ಹಿಂದೆ, ನಂಗಲ್‌ನಲ್ಲಿ 24 ವರ್ಷದ ಯುವಕ ವ್ಯಕ್ತಿಯೋರ್ವರು ಮಾದಕ ದ್ರವ್ಯ ಸೇವಿಸಿ ಸಾವನ್ನಪ್ಪಿದ್ದರು. ಹದಿಹರೆಯದ ಯುವಕನೊಬ್ಬನ ಮರಣ ಇಂದಿಗೂ ಗ್ರಾಮದ ಜನರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. "ಬೆರೋಜ್‌ಗಾರಿ [ನಿರುದ್ಯೋಗ] ಸಮಸ್ಯೆ ಇದೆ, ಹೆಚ್ಚಿನ ಯುವಕರು ಕೆಲಸವಿಲ್ಲದೆ ಕುಳಿತಿದ್ದಾರೆ ಮತ್ತು ಅವರು ಕೆಟ್ಟವರ ಸಂಗಕ್ಕೆ ಬೀಳುತ್ತಿದ್ದಾರೆ," ಎಂದು 2008 ರಿಂದ ನಂಗಲ್ ಗ್ರಾಮದಲ್ಲಿ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಆಗಿ ಕೆಲಸ ಮಾಡುತ್ತಿರುವ ಪರಮ್‌ಜಿತ್ ಕೌರ್ ಹೇಳುತ್ತಾರೆ.

"ಸರ್ಕಾರ ಮಾತ್ರ ಈ [ಡ್ರಗ್ಸ್] ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯ," ಎನ್ನುತ್ತಾರೆ ಅವರು. 2022 ರಲ್ಲಿ, ಪಂಜಾಬ್‌ನಲ್ಲಿ 144 ಜನ (ಎಲ್ಲರೂ ಪುರುಷರು) ಮಿತಿಮೀರಿ ಮಾದಕ ದ್ರವ್ಯ ಸೇವಿಸಿ ಸಾವನ್ನಪ್ಪಿದರು (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ).

2022 ರ ಅಸೆಂಬ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ, ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೂರು ತಿಂಗಳೊಳಗೆ ಪಂಜಾಬ್ ರಾಜ್ಯವನ್ನು ಮಾದಕ ವ್ಯಸನ ಮುಕ್ತ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಇದಾದ ಮೇಲೆ, ರಾಜ್ಯದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಆಗಸ್ಟ್ 15, 2023 ರಂದು ಪಟಿಯಾಲಾದಲ್ಲಿ ಮಾಡಿದ ಸ್ವಾತಂತ್ರ್ಯ ದಿನಾಚಾರಣೆಯ ಭಾಷಣದಲ್ಲಿ ಕೂಡ ರಾಜ್ಯವನ್ನು ಒಂದು ವರ್ಷದೊಳಗೆ ಡ್ರಗ್ಸ್ ಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

ರಾಜ್ಯ ಸರ್ಕಾರಗಳು ಅಬಕಾರಿ ಇಲಾಖೆ ಮೂಲಕ ಕೆಲವು ಬಗೆಯ ಮಾದಕ ವಸ್ತುಗಳ ಮಾರಾಟ, ಬಳಕೆ, ಸೇವನೆ ಮತ್ತು ಚಲಾವಣೆಯನ್ನು ನಿಯಂತ್ರಿಸುತ್ತವೆ . ಆದರೆ ಮಾದಕ ವಸ್ತುಗಳ ಮಾರಾಟ ಮತ್ತು ದಂಧೆಯ ಹಿಂದೆ ಒಂದು ವ್ಯವಸ್ಥಿತ ಮಾಫಿಯಾ ಇದೆ ಎಂದು ಸ್ಥಳೀಯರು ಹೇಳುತ್ತಾರೆ. "ನಮ್ಮ ಗ್ರಾಮದ ಹೊರಗಿನವರು, ಮೊಗಾ, ಲೂಧಿಯಾನ, ಬರ್ನಾಲಾ ಮತ್ತು ಇತರ ಸ್ಥಳಗಳ ಸಂಪರ್ಕ ಹೊಂದಿರುವವರು ಈ ಮಾದಕ ವಸ್ತುಗಳನ್ನು ನಮ್ಮ ಗ್ರಾಮಕ್ಕೆ ತರುತ್ತಾರೆ," ಎಂದು ನಂಗಲ್‌ನ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯ ಬುಟ್ಟಾ ನಂಗಲ್ ಹೇಳುತ್ತಾರೆ.

PHOTO • Sanskriti Talwar
PHOTO • Sanskriti Talwar

ರಾಜ್ಯ ಸರ್ಕಾರಗಳು ಕೆಲವು ಬಗೆಯ ಮಾದಕ ವಸ್ತುಗಳ ಮಾರಾಟ, ಬಳಕೆ, ಸೇವನೆ ಮತ್ತು ಚಲಾವಣೆಯನ್ನು ನಿಯಂತ್ರಿಸುತ್ತವೆ. ಮಾದಕ ವಸ್ತುಗಳ ಮಾರಾಟ ಮತ್ತು ದಂಧೆಯ ಹಿಂದೆ ಒಂದು ವ್ಯವಸ್ಥಿತ ಮಾಫಿಯಾ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ತಮ್ಮ ಕುಟುಂಬದೊಂದಿಗೆ ಇರುವ ಮಜ್ದೂರ್ ಸಂಘರ್ಷ್ ಸಮಿತಿಯ ಸದಸ್ಯ (ನೀಲಿ ಕುರ್ತಾ) ಬುಟ್ಟಾ ನಂಗಲ್ (ಎಡ). ಅಮನ್‌ದೀಪ್ ಕೌರ್ ಮತ್ತು ಕಿರಣ್ ಕೌರ್ ವಾಸಿಸುವ ನಂಗಲ್ ಗ್ರಾಮ (ಬಲ)

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯಿದೆ , 1985 ರ ಪ್ರಕಾರ, ಭಾರತದಲ್ಲಿ ಡ್ರಗ್ಸ್ ಸೇವನೆ ಮತ್ತು ಡ್ರಗ್ಸ್‌ ಹೊಂದಿರುವುದು ಕ್ರಿಮಿನಲ್ ಅಪರಾಧ. "ಆದರೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಪೊಲೀಸರ ಮೇಲೂ ದಬಾವ್ [ಒತ್ತಡ] ಹೇರಲಾಗುತ್ತಿದೆ," ಎಂದು ಸಮಿತಿಯ ಸದಸ್ಯರಾದ ಸುಖ್‌ಚೈನ್ ಸಿಂಗ್ ಹೇಳುತ್ತಾರೆ. "ಶಾಸಕರು [ವಿಧಾನಸಭಾ ಸದಸ್ಯರು] ಮನಸ್ಸು ಮಾಡಿದರೆ ಅವರು ನಮ್ಮ ಹಳ್ಳಿಯೊಳಗೆ ಡ್ರಗ್ಸ್ ಬರದಂತೆ ತಡೆಯಬಹುದು," ಎಂದು ಅವರು ಹೇಳುತ್ತಾರೆ. ಸದ್ಯ ಕಾಂಗ್ರೆಸ್ ಪಕ್ಷದೊಂದಿಗೆ ಇರುವ ಮಾಜಿ ಸರಪಂಚ್ (ಮುಖ್ಯಸ್ಥ) ಲಖ್ವೀರ್ ಸಿಂಗ್, "ಪಿಚೆ ​​ತೋ ಸರ್ಕಾರ್ ರೋಕೆ ಟೇ ರುಕುಗಾ [ಸರ್ಕಾರ ಮಧ್ಯಪ್ರವೇಶಿಸಿದರೆ ಮಾತ್ರ ಅದು ನಿಲ್ಲುತ್ತದೆ]" ಎಂದು ಹೇಳುತ್ತಾರೆ.

ಆದರೆ ರಾಜಕಾರಣಿಗಳು ಈ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ ಎಂದು ನಂಗಲ್ ನಿವಾಸಿ ಕಮಲ್‌ಜಿತ್ ಕೌರ್ ಹೇಳುತ್ತಾರೆ. ಫರೀದ್‌ಕೋಟ್‌ನ ಎಎಪಿ ಅಭ್ಯರ್ಥಿ ಕರಮ್‌ಜಿತ್ ಅನ್ಮೋಲ್ ಅವರು ತಮ್ಮ ಚುನಾವಣಾ ರ್ಯಾಲಿಯಲ್ಲಿ ಮಾದಕ ದ್ರವ್ಯ ಸೇವನೆಯ ಬಗ್ಗೆ ಮಾತನಾಡಲೇ ಇಲ್ಲ ಎಂದು ಅವರು ಹೇಳುತ್ತಾರೆ. ದಲಿತ ಮಜಾಬಿ ಸಿಖ್ ಸಮುದಾಯಕ್ಕೆ ಸೇರಿರುವ 40 ವರ್ಷ ಪ್ರಾಯದ ಇವರು, "ಮಹಿಳಾ ಮತದಾರರಿಗೆ ಸೌಲಭ್ಯಗಳನ್ನು ನೀಡುವ ಭರವಸೆಯನ್ನು ನೀಡಿ ಅವರು ತಮಗೆ ಮತ ನೀಡುವಂತೆ ಕೇಳಿಕೊಂಡರು. ದುರದೃಷ್ಟವೆಂದರೆ, ಯಾವುದೇ [ರಾಜಕೀಯ] ಪಕ್ಷಗಳೂ ಈ ಬಗ್ಗೆ ಮಾತನಾಡಲಿಲ್ಲ," ಎಂದು ಹೇಳುತ್ತಾರೆ. ಮೇ ತಿಂಗಳಲ್ಲಿ ತಮ್ಮ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕರೆದ ಬಹಿರಂಗ ಸಭೆಗೆ ಹೋಗುತ್ತಾ ಈ ಬಗ್ಗೆ ಮಾತನಾಡುತ್ತಾರೆ.

*****

ಪತಿಯ ಚಟ ಕಡಿಮೆಯಾಗುವಂತೆ ಕಾಣದೇ ಇರುವುದರಿಂದ, ಜಮೀನುದಾರರ ಹೊಲಗಳಲ್ಲಿ ದುಡಿಯುವ ಕಿರಣ್‌ ಅವರ ಮೇಲೆಯೇ ಇಡೀ ಕುಟುಂಬದ ಖರ್ಚುವೆಚ್ಚಗಳ ಹೊರೆ ಬೀಳುತ್ತಿದೆ. 23 ವರ್ಷ ಪ್ರಾಯದ ಇವರು ಕೊನೆಯ ಬಾರಿಗೆ ಸಂಬಳವನ್ನು ನೋಡಿದ್ದು ಫೆಬ್ರವರಿ 2024 ರಲ್ಲಿ ಆಲೂಗಡ್ಡೆಗಳನ್ನು ಆರಿಸುವ ಕೆಲಸದಲ್ಲಿ. ಆ ಕೆಲಸ ಮಾಡುವಾಗ ಅವರ ನವಜಾತ ಶಿಶು ಪ್ಲಾಸ್ಟಿಕ್ ಚೀಲದ ಮೇಲೆ ಮರದ ನೆರಳಿನಲ್ಲಿ ಮಲಗಿದ್ದಳು. ಸುಮಾರು 20 ದಿನಗಳ ಕಾಲ ಆ ಕೆಲಸ ನಡೆಯಿತು. ದಿನಕ್ಕೆ 400 ರುಪಾಯಿ ಸಂಬಳ ನೀಡುವಂತೆ ಕೇಳಿಕೊಂಡರೂ, ಕೊನೆಗೆ ಸಿಕ್ಕಿದ್ದು 300 ರುಪಾಯಿ ಮಾತ್ರ.

ಇವರ ಜೊತೆಯಲ್ಲಿ ಕೆಲಸ ಮಾಡುವ ಸ್ನೇಹಿತೆ, ನೆರೆಮನೆಯ ಅಮನ್‌ದೀಪ್ ಕೌರ್, [ಮೇಲ್ವರ್ಗದ] ರೈತರು ಅವರನ್ನು ಪ್ರತಿಭಟನೆಗೆ ಕರೆದುಕೊಂಡು ಹೋಗುತ್ತಾರೆ, ಆದರೆ ಇವರಂತಹ ರೈತ ಕಾರ್ಮಿಕರಿಗೆ ನ್ಯಾಯಯುತವಾದ ಕೂಲಿ ಸಿಗುವುದಿಲ್ಲ ಎಂದು ಹೇಳುತ್ತಾರೆ. "ನಮ್ಮೊಂದಿಗೆ ಯಾರು ಇದ್ದಾರೆ? ಯಾರೂ ಇಲ್ಲ. ಪರಿಶಿಷ್ಟ ಜಾತಿಗೆ ಸೇರಿರುವ ನಮ್ಮನ್ನು ಹಿಂದೆ ಉಳಿಯಲು ಹೇಳುತ್ತಾರೆ, ಆದರೂ ನಾವು ಎಲ್ಲರೆಲ್ಲರಿಗಿಂತ ಹೆಚ್ಚು ದುಡಿಯುತ್ತೇವೆ,” ಎನ್ನುತ್ತಾರೆ ಅವರು.

PHOTO • Sanskriti Talwar
PHOTO • Sanskriti Talwar

ಉದ್ಯೋಗ ಹುಡುಕಿಕೊಂಡು ಯುನೈಟೆಡ್ ಕಿಂಗ್‌ಡಮ್‌ಗೆ ಹೊರಟಿರುವ ಸರಬ್ಜಿತ್ ಕೌರ್ ಅವರನ್ನು ಭೇಟಿಯಾಗಲು ಬಂದಿರುವ ಸಂಬಂಧಿಕರಿಗೆ ಅಡುಗೆ ಮಾಡುತ್ತಿರುವ ಅಮನ್‌ದೀಪ್ ಕೌರ್ ಮತ್ತು ಕಿರಣ್ ಕೌರ್ (ಗುಲಾಬಿ ಬಣ್ಣದಲ್ಲಿ). ಪಂಜಾಬ್‌ನ ನಂಗಲ್‌ನ ತಮ್ಮ ಹಳ್ಳಿಯಲ್ಲಿರುವ ಕಿರಣ್ ಅವರ ಅತ್ತೆ, ಬಲ್ಜಿತ್ ಕೌರ್ (ಹಳದಿ ಬಣ್ಣದಲ್ಲಿ)

ಪಂಜಾಬ್‌ನ ಜನಸಂಖ್ಯೆಯಲ್ಲಿ ಶೇಕಡಾ 31.94 ರಷ್ಟು ಕಿರಣ್ ಮತ್ತು ಅಮನ್‌ದೀಪ್ ಅವರಂತಹ ದಲಿತರು ಇದ್ದಾರೆ. ದೇಶದ ಬೇರೆ ಯಾವುದೇ ರಾಜ್ಯಕ್ಕೆ (ಜನಗಣತಿ 2011) ಹೋಲಿಸಿದರೂ ದಲಿತರ ಸಂಖ್ಯೆ ಈ ರಾಜ್ಯದಲ್ಲಿಯೇ ಹೆಚ್ಚು. ದಿನಗೂಲಿಯನ್ನು ಕನಿಷ್ಠ 700-1000 ರುಪಾಯಿಗೆ ಹೆಚ್ಚಿಸಬೇಕು ಎಂಬುದು ಪ್ರತಿಭಟನಾ ಸ್ಥಳದಲ್ಲಿ ದಲಿತ ಕೂಲಿಕಾರರು ಇಟ್ಟ ಪ್ರಮುಖ ಬೇಡಿಕೆಯಾಗಿತ್ತು.

ಮಹಿಳಾ ಕೃಷಿ ಕಾರ್ಮಿಕರಿಗೆ ಮುಂದಿನ ಕೆಲಸ ಸಿಗುವುದು ಜೂನ್‌ನಲ್ಲಿ ಬರುವ ಖಾರಿಫ್ ಸೀಸನ್‌ ಆರಂಭವಾದಾಗ ಎಂದು ಅಮನ್‌ದೀಪ್ ಹೇಳುತ್ತಾರೆ. ಆಗ ಅವರಿಗೆ ಭತ್ತ ನಾಟಿ ಮಾಡುವ ಕೆಲಸ ಸಿಗುತ್ತದೆ. ನಾಟಿ ಮಾಡುವ ಪ್ರತಿ ಎಕರೆಗೆ 4,000 ರುಪಾಯಿ. ಆಗ ದಿನಕ್ಕೆ 400 ರುಪಾಯಿ ಸಂಬಳ ಸಿಗುತ್ತದೆ. "ಅದರ ನಂತರ, ನಾವು ಇಡೀ ಚಳಿಗಾಲದಲ್ಲಿ ಯಾವುದೇ ಕೆಲಸವಿಲ್ಲದೆ ದಿನದೂಡಬೇಕು," ಎಂದು ಅವರು ಹೇಳುತ್ತಾರೆ.

ಇವರಿಗೆ ಇರುವ ಇನ್ನೊಂದು ಆಯ್ಕೆಯೆಂದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ. ಈ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ಸಿಗುತ್ತದೆ. ಹಾಗಿದ್ದೂ, ಕಿರಣ್ ಅವರ ಅತ್ತೆ, 50 ವರ್ಷ ಪ್ರಾಯದ ಬಲ್ಜಿತ್ ಕೌರ್ ಅವರು ತಮ್ಮ ಗ್ರಾಮದಲ್ಲಿ ಈ ಯೋಜನೆಯಡಿ 10 ದಿನಗಳಿಗಿಂತ ಹೆಚ್ಚು ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಾರೆ.

ದಿನದ ಖರ್ಚನ್ನು ನಿಭಾಯಿಸಲು ಬಲ್ಜಿತ್ ಅವರು ಮೇಲ್ಜಾತಿಯವರ ಮನೆಯಲ್ಲಿ ದಿನಕ್ಕೆ 200 ರುಪಾಯಿಗೆ ಕೆಲಸ ಮಾಡುತ್ತಾರೆ. ಅಮನ್‌ದೀಪ್ ಅವರು ಪಠ್ಯಪುಸ್ತಕಗಳಿಗೆ ಪ್ಲಾಸ್ಟಿಕ್‌ ಕವರ್ ಹಾಕುವ ಕೆಲಸ ಮಾಡಿ ಪ್ರತೀ ಪುಸ್ತಕಕ್ಕೆ 20 ರುಪಾಯಿ ಸಂಪಾದಿಸುತ್ತಾರೆ. 2022 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರದ ಭರವಸೆ ನೀಡಿದಂತೆ ತಿಂಗಳಿಗೆ ಸಿಗುವ 1,000 ರೂಪಾಯಿ ಸಹಾಯಧನ ಸಿಕ್ಕಿದರೆ ನಿಜವಾಗಿಯೂ ನೆರವಿಗೆ ಬರಬಹುದು ಎಂದು ಮಹಿಳೆಯರು ಹೇಳುತ್ತಾರೆ. “ನಾವು ಕಷ್ಟಪಟ್ಟು ದುಡಿದ 200 ರುಪಾಯಿ ಹಣದಿಂದ ಆ ಫಾರ್ಮ್ ಅನ್ನು ಭರ್ತಿ ಮಾಡಿದೆವು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ,” ಎಂದು ಬಲ್ಜಿತ್ ಕೌರ್ ಹೇಳುತ್ತಾರೆ.

PHOTO • Sanskriti Talwar
PHOTO • Sanskriti Talwar

ಮೊಗಾ ಜಿಲ್ಲೆಯ ನಂಗಲ್ ಗ್ರಾಮದಲ್ಲಿರುವ ಬಲ್ಜಿತ್ ಮತ್ತು ಕಿರಣ್ ಅವರ ಮನೆ. ಸರಬ್ಜಿತ್ ಕೌರ್ ಉದ್ಯೋಗ ಹುಡುಕಿಕೊಂಡು ಯುನೈಟೆಡ್ ಕಿಂಗ್‌ಡಮ್‌ಗೆ ತೆರಳಲು ಪ್ಯಾಕಿಂಗ್ ಮಾಡುತ್ತಿದ್ದಾರೆ. ʼಪಂಜಾಬ್‌ನಲ್ಲಿ ಉದ್ಯೋಗವಿಲ್ಲದಿರುವಾಗ ನಮ್ಮ ಸಮಯವನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇಲ್ಲಿ ಮಾದಕ ದ್ರವ್ಯ ಸೇವನೆ [ನಶೆ] ಮಾತ್ರ ಇದೆ,' ಎಂದು ಅವರು ಹೇಳುತ್ತಾರೆ

ಆರ್ಥಿಕ ಸಂಕಷ್ಟದಲ್ಲಿರುವ ಬಲ್ಜಿತ್ ಅವರು ತಮ್ಮ ಕಿರಿಯ ಮಗಳು ಸರಬ್ಜಿತ್ ಕೌರ್ (24) ಅವರನ್ನು ಉದ್ಯೋಗಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಇದಕ್ಕೆ ಬೇಕಾದ 13 ಲಕ್ಷ ರುಪಾಯಿಯನ್ನು ತಮ್ಮ ಕಾರು ಮತ್ತು ಮೋಟಾರ್‌ಸೈಕಲ್ ಮಾರಾಟ ಮಾಡಿ, ಆ ನಂತರ ಲೇವಾದೇವಿದಾರಿಂದ ಸಾಲ ಪಡೆದು ಹೊಂದಿಸಿದರು.

ಸರಬ್ಜಿತ್ ಅವರು ಎರಡು ವರ್ಷಗಳ ಹಿಂದೆ ಪದವಿ ಶಿಕ್ಷಣ ಪೂರ್ತಿಗೊಳಿಸಿದ್ದರು. ಆದರೆ ಅಂದಿನಿಂದ ಅವರು ಯಾವುದೇ ಕೆಲಸವಿಲ್ಲದೆ ಕುಳಿತಿದ್ದಾರೆ. “ಪಂಜಾಬ್‌ನಲ್ಲಿ ಯಾವುದೇ ಉದ್ಯೋಗವಿಲ್ಲದಿರುವಾಗ ನಮ್ಮ ಸಮಯವನ್ನು ವ್ಯರ್ಥ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇಲ್ಲಿ ಮಾದಕ ದ್ರವ್ಯ ಸೇವನೆ [ನಶೆ] ಮಾತ್ರ ಇದೆ," ಎಂದು ಅವರು ಹೇಳುತ್ತಾರೆ.

24 ವರ್ಷ ಹರೆಯದ ಈ ಯುವತಿ ಕೆಲಸ ಸಿಗುವವರೆಗೂ ತಮ್ಮ ಸ್ನೇಹಿತರೊಂದಿಗೆ ಉಳಿದುಕೊಳ್ಳುತ್ತಾರೆ. “ವಿದೇಶಕ್ಕೆ ಹೋಗುವುದು ನನ್ನ ಬಾಲ್ಯದ ಕನಸಾಗಿತ್ತು. ಈಗ ಇದು ಅನಿವಾರ್ಯವಾಗಿದೆ,” ಎಂದು ಅವರು ಹೇಳುತ್ತಾರೆ. ಈ  ಕುಟುಂಬವು ಸುತ್ತಮುತ್ತಲಿನ ಹಳ್ಳಿಗಳಿಗೆ ದಿನಕ್ಕೆ ಎರಡು ಬಾರಿ ಹಾಲು ಮಾರಾಟ ಮಾಡಿ ಸುಮಾರು 1,000 ರುಪಾಯಿ ಸಂಪಾದಿಸುತ್ತದೆ. ಈ ಹಣ ಸಾಲ ಮರುಪಾವತಿ ಮತ್ತು ಮನೆಯ ಖರ್ಚಿಗೇ ಸರಿಹೋಗುತ್ತದೆ.

“ಪೋಷಕರಾಗಿ, ನಾವು ಅವಳನ್ನು ಮದುವೆ ಮಾಡಿ ಕಳಿಸಬೇಕಿತ್ತು, ಆದರೆ ಈಗ ನಾವು ಇವಳನ್ನು ವಿದೇಶಕ್ಕೆ ಕಳಿಸುತ್ತಿದ್ದೇವೆ. ಕನಿಷ್ಠ ಪಕ್ಷ ಇವಳು ಏನಾದರೂ ಸಾಧಿಸಿ ತನಗೆ ಇಷ್ಟವಾದ ವ್ಯಕ್ತಿಯನ್ನು ಮದುವೆಯಾಗುತ್ತಾಳೆ ಎಂಬ ನಂಬಿಕೆ,” ಎಂದು ಬಲ್ಜಿತ್ ಕೆ ಹೇಳುತ್ತಾರೆ.

ಅನುವಾದ: ಚರಣ್‌ ಐವರ್ನಾಡು

Sanskriti Talwar

সংস্কৃতি তলওয়ার নয়া দিল্লি-ভিত্তিক স্বতন্ত্র সাংবাদিক এবং ২০২৩ সালের পারি-এমএমএফ ফেলোশিপ প্রাপক রিপোর্টার।

Other stories by Sanskriti Talwar
Editor : Priti David

প্রীতি ডেভিড পারি-র কার্যনির্বাহী সম্পাদক। তিনি জঙ্গল, আদিবাসী জীবন, এবং জীবিকাসন্ধান বিষয়ে লেখেন। প্রীতি পারি-র শিক্ষা বিভাগের পুরোভাগে আছেন, এবং নানা স্কুল-কলেজের সঙ্গে যৌথ উদ্যোগে শ্রেণিকক্ষ ও পাঠক্রমে গ্রামীণ জীবন ও সমস্যা তুলে আনার কাজ করেন।

Other stories by Priti David
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad