23 ವರ್ಷದ ಭಾರತಿ ಕಸ್ತೆ ಅವರ ಪಾಲಿಗೆ ಬಹಳ ಮುಖ್ಯವಾದ ವಿಷಯವೆಂದರೆ ಅವರ ಕುಟುಂಬ. 10ನೇ ತರಗತಿಗೆ ಓದು ತೊರೆದ ಅವರು ತಮ್ಮ ತಂಗಿಯರನ್ನು ಓದಿಸುವ ಸಲುವಾಗಿ ಕೆಲಸಕ್ಕೆ ಸೇರಿಕೊಂಡರು. ಕಂಪನಿಯೊಂದಕ್ಕೆ ಕಚೇರಿ ಸಹಾಯಕಿಯಾಗಿ ಸೇರಿಕೊಂಡು ಒಂದಷ್ಟು ಸಂಪಾದಿಸಿದರೆ ತನ್ನ ತಂದೆ ಮತ್ತು ಅಣ್ಣನಿಗೆ ನಿರಾಳವಾಗಿ ಉಸಿರಾಡಬಹುದು ಎನ್ನುವುದು ಅವರ ಭಾವನೆಯಾಗಿತ್ತು ಮತ್ತು ಅದನ್ನು ನಿಜವಾಗಿಸುವ ಸಲುವಾಗಿ ಅವರು ಶ್ರಮವಹಿಸಿ ದುಡಿಯುತ್ತಿದ್ದರು. ಅವರ ಯೋಚನೆಯಲ್ಲಿ ಕುಟುಂಬದ ಹೊರತಾಗಿ ಇನ್ನೇನೂ ಸುಳಿಯುತ್ತಿರಲಿಲ್ಲ. ಆದರೆ ಇದೆಲ್ಲ 2021ರ ಮೇ ತಿಂಗಳ ತನಕವಷ್ಟೇ.

ಅದರ ನಂತರ ಯೋಚಿಸಲು ಅವರ ಪಾಲಿಗೆ ಕುಟುಂಬವೇ ಇದ್ದಿರಲಿಲ್ಲ.

ಮೇ 13, 2021ರಂದು, ಭಾರತಿಯವರ ಕುಟುಂಬದ ಐವರು ಸದಸ್ಯರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿರುವ ಅವರ ಗ್ರಾಮವಾದ ನೇಮಾವರ್ ಎನ್ನುವಲ್ಲಿಂದ ರಾತ್ರೋರಾತ್ರಿ ಕಾಣೆಯಾಗಿದ್ದರು. ಇದರಲ್ಲಿ ಆಕೆಯ ತಂಗಿಯರಾದ ರೂಪಾಲಿ (17), ದಿವ್ಯಾ (12), ತಾಯಿ ಮಮತಾ (45) ಮತ್ತು ಆಕೆಯ ಸೋದರಸಂಬಂಧಿಗಳಾದ ಪೂಜಾ (16) ಮತ್ತು ಪವನ್ (14) ಸೇರಿದ್ದರು. "ನಾನು ಅವರಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳುತ್ತಾರೆ. "ಒಂದು ದಿನ ಕಳೆದ ನಂತರವೂ ಅವರು ಮನೆಗೆ ಮರಳದಿದ್ದಾಗ ನಮಗೆ ಭಯವಾಗತೊಡಗಿತು."

ಭಾರತಿ ಪೊಲೀಸರ ಬಳಿ ಕಾಣೆಯಾದ ಕುರಿತು ದೂರು ದಾಖಲಿಸಿದರು, ನಂತರ ಪೊಲೀಸರು ಕಾಣೆಯಾದವರ ಬಗ್ಗೆ ತನಿಖೆ ಪ್ರಾರಂಭಿಸಿದರು.

ಒಂದು ದಿನವೆನ್ನುವುದು ಎರಡಾಗಿ, ಮೂರಾಗಿ ಬದಲಾದವು ಆದರೆ ಕುಟುಂಬ ಸದಸ್ಯರು ಮಾತ್ರ ಮರಳಲಿಲ್ಲ. ಒಂದೊಂದು ದಿನ ಕಳೆಯುತ್ತಿದ್ದ ಹಾಗೆ ಅವರ ಅನುಪಸ್ಥಿತಿ ಕುಟುಂಬದಲ್ಲಿ ಭಯವನ್ನು ಹೆಚ್ಚಿಸತೊಡಗಿತು. ಭಾರತಿಯವರ ಸಂಕಟ ಹೆಚ್ಚುತ್ತಾ ಹೋಯಿತು. ಮನೆಯಲ್ಲಿ ಭೀಕರ ಮೌನ ತುಂಬಿತ್ತು.

ಅವರ ಆತಂಕ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು.

Five of Bharti's family went missing on the night of May 13, 2021 from their village, Nemawar in Madhya Pradesh’s Dewas district.
PHOTO • Parth M.N.

ಮೇ 13, 2021ರಂದು, ಭಾರತಿಯವರ ಕುಟುಂಬದ ಐವರು ಸದಸ್ಯರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿರುವ ಅವರ ಗ್ರಾಮವಾದ ನೇಮಾವರ್ ಎನ್ನುವಲ್ಲಿಂದ ರಾತ್ರೋರಾತ್ರಿ ಕಾಣೆಯಾಗಿದ್ದರು

ಜೂನ್ 29, 2021ರಂದು, ಐವರು ಕಾಣೆಯಾದ 49 ದಿನಗಳ ನಂತರ, ಪೊಲೀಸ್ ಹುಡುಕಾಟವು ದುರಂತ ಸುದ್ದಿಯನ್ನು ಹೊತ್ತು ತಂದಿತು. ಗ್ರಾಮದ ಪ್ರಬಲ ರಜಪೂತ ಸಮುದಾಯದ ಪ್ರಭಾವಿ ಸದಸ್ಯ ಸುರೇಂದ್ರ ಚೌಹಾಣ್ ಎನ್ನುವ ವ್ಯಕ್ತಿಗೆ ಸೇರಿದ ಕೃಷಿ ಭೂಮಿಯಿಂದ ಐದು ಶವಗಳನ್ನು ಹೊರತೆಗೆಯಲಾಗಿತ್ತು. ಚೌಹಾಣ್ ಬಲಪಂಥೀಯ ಹಿಂದೂ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಆ ಕ್ಷೇತ್ರದ ಬಿಜೆಪಿ ಶಾಸಕ ಆಶಿಶ್ ಶರ್ಮಾ ಅವರಿಗೆ ಆಪ್ತ ಎಂದು ಹೇಳಲಾಗಿದೆ.

“ಇದನ್ನು ನಾವು ಎಲ್ಲೋ ಒಂದು ಕಡೆ ನಿರೀಕ್ಷಿಸಿದ್ದೆವಾದರೂ, ಅದು ನಮ್ಮ ಮನಸಿನ ಮೇಲೆ ಆಳವಾದ ಗಾಯವನ್ನೇ ಮಾಡಿತು” ಎಂದು ಗೊಂಡ್ ಬುಡಕಟ್ಟು ಜನಾಂಗಕ್ಕೆ ಸೇರಿದ ಭಾರತಿ ಹೇಳುತ್ತಾರೆ. "ಒಂದೇ ರಾತ್ರಿಯಲ್ಲಿ ಕುಟುಂಬದ ಐದು ಸದಸ್ಯರನ್ನು ಕಳೆದುಕೊಳ್ಳುವುದು ಹೇಗಿರುತ್ತದೆನ್ನುವುದನ್ನು ನನಗೆ ವಿವರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಪವಾಡದ ನಿರೀಕ್ಷೆಯಲ್ಲಿದ್ದೆವು."

ಒಂದೇ ರಾತ್ರಿ ನೇಮಾವರದ ಈ ಆದಿವಾಸಿ ಕುಟುಂಬ ತನ್ನ ಐದು ಸದಸ್ಯರನ್ನು ಕಳೆದುಕೊಂಡಿತು.

ಈ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪೊಲೀಸರು ಸುರೇಂದ್ರ ಮತ್ತು ಆತನ ಇತರ ಆರು ಸಹಚರರನ್ನು ಬಂಧಿಸಿದ್ದಾರೆ.

*****

ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದವರ ಒಟ್ಟು ಜನಸಂಖ್ಯೆ ಸುಮಾರು ಶೇಕಡಾ 21ರಷ್ಟಿದೆ ಮತ್ತು ಇದರಲ್ಲಿ ಗೊಂಡ್, ಭಿಲ್ ಮತ್ತು ಸಹರಿಯಾ ಬುಡಕಟ್ಟು ಜನಾಂಗದವರು ಸೇರಿದ್ದಾರೆ. ಅವರ ಗಮನಾರ್ಹ ಸಂಖ್ಯೆಯ ಹೊರತಾಗಿಯೂ, ಅವರು ಅಲ್ಲಿ ಸುರಕ್ಷಿತವಾಗಿಲ್ಲ: ರಾಜ್ಯವು 2019-2021ರ ನಡುವೆ ಪರಿಶಿಷ್ಟ ಪಂಗಡಗಳ ವಿರುದ್ಧ ಹೆಚ್ಚು ದೌರ್ಜನ್ಯಗಳನ್ನು ಕಂಡಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಟಿಸಿದ ಕ್ರೈಮ್ ಇನ್ ಇಂಡಿಯಾ 2021 ವರದಿ ಹೇಳುತ್ತದೆ.

2019ರಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧ 1,922 ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ದಾಖಲೆಗಳು ತಿಳಿಸುತ್ತವೆ. ಅದು ಎರಡು ವರ್ಷಗಳ ನಂತರ 2,627ಕ್ಕೆ ಏರಿದೆ. ಇದು ಶೇಕಡಾ 36ರಷ್ಟು ಏರಿಕೆಯಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿನ 16 ಶೇಕಡಾಕ್ಕೆ ಹೋಲಿಸಿದರೆ, ಈ ಸಂಖ್ಯೆ ಎರಡು ಪಟ್ಟಿಗಿಂತಲೂ ಹೆಚ್ಚು.

2021ರಲ್ಲಿ ಭಾರತದಲ್ಲಿ ಪರಿಶಿಷ್ಟ ಪಂಗಡದವರ ವಿರುದ್ಧ ಒಟ್ಟು 8,802 ದೌರ್ಜನ್ಯ ಪ್ರಕರಣಗಳು ನಡೆದಿರುವುದಾಗಿ ವರದಿಯಾಗಿದೆ. ಅದರಲ್ಲಿ ಮಧ್ಯಪ್ರದೇಶದ ಪಾಲು ಶೇಕಡಾ 30ರಷ್ಟು. ಎಂದರೆ 2,627 ದೌರ್ಜನ್ಯ ಪ್ರಕರಣಗಳು. ದೊಡ್ಡ ದೊಡ್ಡ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗುತ್ತವೆಯಾದರೂ, ಅವರು ದೈನಂದಿನ ಬದುಕಿನಲ್ಲಿ ಎದುರಿಸುವ ಬೆದರಿಕೆ ಹಾಗೂ ದಬ್ಬಾಳಿಕೆಗಳು ವರದಿಯಾಗುವುದಿಲ್ಲ.

'I can’t describe what it's like to lose five members of the family in one night,' says Bharti from a park in Indore.
PHOTO • Parth M.N.

'ಒಂದೇ ರಾತ್ರಿ ಕುಟುಂಬದ ಐದು ಸದಸ್ಯರನ್ನು ಕಳೆದುಕೊಳ್ಳುವುದು ಹೇಗಿರುತ್ತದೆ ಎನ್ನುವುದನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ' ಎಂದು ಇಂದೋರ್ ಪಾರ್ಕಿನ ಭಾರತಿ ಹೇಳುತ್ತಾರೆ

ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳ ವಿರುದ್ಧ ನಡೆಯುತ್ತಿರುವ ಅಪರಾಧಗಳ ಪ್ರಮಾಣವು ಎಷ್ಟಿದೆಯೆಂದರೆ ಅವುಗಳ ಮೇಲೆ ನಿಗಾ ಇಡಲು ನಮ್ಮ ಕಾರ್ಯಕರ್ತರಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಾಗೃತಿ ಆದಿವಾಸಿ ದಲಿತ ಸಂಘಟನೆ (ಜೆಎಡಿಎಸ್) ನಾಯಕಿ ಮಾಧುರಿ ಕೃಷ್ಣಸ್ವಾಮಿ. “ಮುಖ್ಯ ವಿಷಯವೆಂದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಾಯಕರ ರಾಜಕೀಯ ಜಾಗೀರಿನ ನಡುವಿನಿಂದ ಕೆಲವು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ” ಎಂದು ಅವರು ಹೇಳುತ್ತಾರೆ.

ಈ ವರ್ಷದ ಜುಲೈ ತಿಂಗಳಿನಲ್ಲಿ ಕುಡಿದ ಮತ್ತಿನಲ್ಲಿದ್ದ ಪರ್ವೇಶ್‌ ಶುಕ್ಲಾ ಎನ್ನುವ ಹೆಸರಿನ ಬಿಜೆಪಿ ಕಾರ್ಯಕರ್ತನೊಬ್ಬ ಆದಿವಾಸಿ ವ್ಯಕ್ತಿಯೊಬ್ಬನ ಮೇಲೆ ಮೂತ್ರ ಮಾಡುತ್ತಿರುವ ಅಮಾನವೀಯ ವಿಡಿಯೋ ಒಂದು ವೈರಲ್‌ ಆಗಿತ್ತು. ಅದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಅವನನ್ನು ಬಂಧಿಸಲಾಯಿತು.

ಆದರೆ ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಬಲ್ಲ ವಿಡಿಯೋಗಳು ಇಲ್ಲದ ಸಂದರ್ಭದಲ್ಲಿ ಪೊಲೀಸರು ಅಷ್ಟು ಚುರುಕಾಗಿ ಕಾರ್ಯಪ್ರವೃತ್ತರಾಗುವುದಿಲ್ಲ. “ಆದಿವಾಸಿಗಳನ್ನು ಆಗಾಗ ಸ್ಥಳಾಂತರಿಸುತ್ತಿರಲಾಗುತ್ತದೆ, ಅಥವಾ ಜಿಲ್ಲೆಯಿಂದ ಜಿಲ್ಲೆಗೆ ಸ್ಥಳಾಂತರಗೊಳ್ಳುತ್ತಾರೆ” ಎನ್ನುತ್ತಾರೆ ಮಾಧುರಿ ಕೃಷ್ಣಸ್ವಾಮಿ. “ಇದು ಅವರನ್ನು ಇನ್ನಷ್ಟು ದುರ್ಬಲರನ್ನಾಗಿಸುತ್ತದೆ. “ಕಾನೂನುಗಳು ಬಲಾಢ್ಯ ಮತ್ತು ಅಧಿಕಾರ ಹೊಂದಿರುವ ಸಮುದಾಯಗಳಿಗೆ ಅವರ ಮೇಲೆ ಅನಾಚಾರ ಎಸಗಲು ಅನುವು ಮಾಡಿಕೊಡುತ್ತವೆ.”

ನೇಮವಾರದಲ್ಲಿ ನಡೆದ ಭಾರತಿಯವರ ಕುಟುಂಬದ ಹತ್ಯೆಯ ಹಿಂದೆ ಆಕೆಯ ತಂಗಿಯೊಂದಿಗೆ ಸುರೇಂದ್ರನಿಗೆ ಇದ್ದ ಸಂಬಂಧದ ಕಾರಣವಿದೆ ಎನ್ನಲಾಗುತ್ತಿದೆ.

ಇಬ್ಬರೂ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸುರೇಂದ್ರ ಬೇರೊಬ್ಬ ಮಹಿಳೆಯೊಬ್ಬಳೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದು ರೂಪಾಲಿ ಅದನ್ನು ಪ್ರಶ್ನಿಸಿದ್ದಾಳೆ. "ಆಕೆಗೆ 18 ವರ್ಷ ತುಂಬಿದ ನಂತರ ಮದುವೆಯಾಗುವುದಾಗಿ ಆತ ಭರವಸೆ ನೀಡಿದ್ದ" ಎಂದು ಭಾರತಿ ಹೇಳುತ್ತಾರೆ. “ಆದರೆ ವಾಸ್ತವದಲ್ಲಿ ಅವನು ಅವಳೊಂದಿಗೆ ದೈಹಿಕ ಸಂಬಂಧ ಹೊಂದಲು ಬಯಸಿದ್ದ. ಅವಳನ್ನು ಬಳಸಿಕೊಂಡ ನಂತರ ಬೇರೆಯವಳ ಜೊತೆ ಮದುವೆಯಾಗಲು ನಿರ್ಧರಿಸಿದ.”

ಇದರಿಂದ ವ್ಯಗ್ರಳಾದ ರೂಪಾಲಿ ತಾನು ಈ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸುವುದಾಗಿ ಹೆದರಿಸಿದಳು. ಆಗ ಅವನು ಈ ವಿಷಯದ ಕುರಿತು ಒಂದು ತೀರ್ಮಾನಕ್ಕೆ ಬರೋಣವೆಂದು ಅವಳನ್ನು ಒಂದು ಸಂಜೆ ತನ್ನ ಹೊಲಕ್ಕೆ ಕರೆಸಿದ್ದಾನೆ. ಅಂದು ರೂಪಾಲಿಯೊಂದಿಗೆ ಪವನ್‌ ಕೂಡಾ ಹೋಗಿದ್ದ. ಆದರೆ ಅವನನ್ನು ಸುರೇಂದ್ರನ ಸ್ನೇಹಿತನೊಬ್ಬ ಸ್ವಲ್ಪ ದೂರದಲ್ಲೇ ತಡೆದು ನಿಲ್ಲಿಸಿದ್ದ. ಸುರೇಂದ್ರ ರೂಪಾಲಿಗಾಗಿ ಜಮೀನಿನ ನಿರ್ಜನ ಪ್ರದೇಶವೊಂದರಲ್ಲಿ ಕಾಯುತ್ತಿದ್ದ. ಅವಳು ಅಲ್ಲಿಗೆ ಬರುತ್ತಿದ್ದಂತೆ ಕಬ್ಬಿಣದ ರಾಡಿನಿಂದ ತಲೆಗೆ ಬಡಿದು ಕೊಂದಿದ್ದಾನೆ.

ನಂತರ ಸುರೇಂದ್ರ ರೂಪಾಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಅವಳನ್ನು ಆಸ್ಪತ್ರೆಗೆ ಸೇರಿಸಲು ರೂಪಾಲಿಯ ಅಮ್ಮ ಮತ್ತು ತಂಗಿಯನ್ನು ಕರೆತರುವಂತೆ ಪವನ್‌ಗೆ ಸಂದೇಶ ಕಳಿಸಿದ್ದಾನೆ. ಆದರೆ ಸುರೇಂದ್ರನ ಆಲೋಚನೆ ಏನಾಗಿತ್ತೆಂದರೆ ತಾನು ರೂಪಾಲಿಯನ್ನು ಕರೆಸಿಕೊಂಡಿರುವುದು ಅವರಿಗೆಲ್ಲ ಗೊತ್ತು ಹೀಗಾಗಿ ಅವರೆಲ್ಲರನ್ನೂ ಕೊಲ್ಲಬೇಕು ಎನ್ನುವುದು. ಹಾಗೆ ಕರೆಸಿಕೊಂಡ ಸುರೇಂದ್ರ ಕುಟುಂಬದ ಎಲ್ಲರನ್ನೂ ಕೊಂದು ಹೊಲದಲ್ಲೇ ಹೂತು ಹಾಕಿದ್ದಾನೆ. “ಒಂದಿಡೀ ಕುಟುಂಬವನ್ನು ಕೊಲ್ಲುವುದಕ್ಕೆ ಕಾರಣವಾಗಬಲ್ಲ ವಿಷಯವೇ ಇದು?” ಎಂದು ಭಾರತಿ ಕೇಳುತ್ತಾರೆ.

From 2019 to 2021, there was a 36 per cent increase in atrocities against STs in Madhya Pradesh.
PHOTO • Parth M.N.

ಎರಡು ವರ್ಷಗಳಲ್ಲಿ, ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳಲ್ಲಿ ಶೇಕಡಾ 36ರಷ್ಟು ಹೆಚ್ಚಳ ಕಂಡುಬಂದಿದೆ, ಇದು ರಾಷ್ಟ್ರೀಯ ಸರಾಸರಿ ಶೇಕಡಾ 16ಕ್ಕಿಂತ ಎರಡು ಪಟ್ಟು ಹೆಚ್ಚು

ಶವಗಳನ್ನು ಹೊರತೆಗೆದ ಸಮಯದಲ್ಲಿ ರೂಪಾಲಿ ಮತ್ತು ಪೂಜಾರ ಮೈಮೇಲೆ ಬಟ್ಟಗಳಿರಲಿಲ್ಲ. “ಕೊಲೆಗೂ ಮೊದಲು ಅವನು ಅವರ ಮೇಲೆ ಅತ್ಯಾಚಾರ ಎಸಗಿರುವ ಅನುಮಾನವಿದೆ ನಮಗೆ” ಎನ್ನುತ್ತಾರೆ ಭಾರತಿ. “ಇದು ನಮ್ಮ ಬದುಕನ್ನೇ ಸರ್ವನಾಶ ಮಾಡಿದೆ.”

ಇತ್ತೀಚಿನ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ , ಮಧ್ಯಪ್ರದೇಶವು 2021ರಲ್ಲಿ 376 ಅತ್ಯಾಚಾರ ಘಟನೆಗಳಿಗೆ ಸಾಕ್ಷಿಯಾಗಿದೆ - ದಿನಕ್ಕೆ ಒಂದಕ್ಕಿಂತ ಹೆಚ್ಚು - ಅವರಲ್ಲಿ 154 ಅಪ್ರಾಪ್ತ ವಯಸ್ಕರು.

“ಇದಕ್ಕೂ ಮೊದಲು ನಾವು ಶ್ರೀಮಂತಿಕೆಯನ್ನೇನೂ ಬದುಕಿರಲಿಲ್ಲ ಆದರೆ ಕಷ್ಟ ಸುಖದಲ್ಲಿ ಒಬ್ಬರಿಗೊಬ್ಬರು ಭಾಗಿಯಾಗುತ್ತಿದ್ದೆವು” ಎನ್ನುತ್ತಾರೆ ಭಾರತಿ. “ನಾವು ಒಬ್ಬರ ಸಲುವಾಗಿ ಒಬ್ಬರು ಬಹಳ ಕಷ್ಟಪಟ್ಟು ದುಡಿಯುತ್ತಿದ್ದೆವು.”

*****

ಪ್ರಬಲ ಸಮುದಾಯಗಳು ಬುಡಕಟ್ಟು ಸಮುದಾಯಗಳ ಮೇಲೆ ವಿವಿಧ ಕಾರಣಗಳಿಗಾಗಿ ದೌರ್ಜನ್ಯ ಎಸಗುತ್ತವೆ. ಇವುಗಳಲ್ಲಿ ಅವರಿಗೆ ಸಾಮಾನ್ಯವಾಗಿ ಸಿಗುವ ನೆಪವೆಂದರೆ ಭೂ ಸಂಘರ್ಷ. ಬುಡಕಟ್ಟು ಸಮುದಾಯದ ಜನರಿಗೆ ಸರಕಾರಿ ಭೂಮಿ ದೊರೆತಾಗ ಅವರು ಜೀವನೋಪಾಯಕ್ಕಾಗಿ ಭೂಮಾಲಿಕರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತಾರೆ. ಇದು ಈ ಬಲಾಢ್ಯರ ಪ್ರಾಬಲ್ಯಕ್ಕೆ ಬೆದರಿಕೆಯಂತೆ ಕಾಣತೊಡಗುತ್ತದೆ.

2002ರಲ್ಲಿ ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ, ಸುಮಾರು 3.5 ಲಕ್ಷ ಭೂರಹಿತ ದಲಿತರು ಮತ್ತು ಆದಿವಾಸಿಗಳಿಗೆ ಅವರನ್ನು ಸಬಲೀಕರಣಗೊಳಿಸುವ ಸಲುವಾಗಿ ಭೂ ಮಾಲೀಕತ್ವದ ಭರವಸೆ ನೀಡಲಾಗಿತ್ತು. ಮುಂದಿನ ವರ್ಷಗಳಲ್ಲಿ, ಅವರಲ್ಲಿ ಕೆಲವರು ಅಗತ್ಯವಾದ ಕಾಗದಪತ್ರಗಳನ್ನು ಸಹ ಪಡೆದರು. ಆದರೆ ಬಹುಪಾಲು ಪ್ರಕರಣಗಳಲ್ಲಿ ಭೂಮಿಯ ಸ್ವಾಧೀನವು ಪ್ರಬಲ ಜಾತಿಯ ಭೂಮಾಲೀಕರ ಬಳಿಯೇ ಉಳಿದಿದೆ.

ಕೆಲವೊಮ್ಮೆ ಅಂಚಿನಲ್ಲಿರುವ ಸಮುದಾಯಗಳು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದಾಗ ಅದಕ್ಕೆ ಅವರು ತೆರಬೇಕಾದ ಬೆಲೆ ಅವರ ಜೀವವಾಗಿರುತ್ತದೆ.

ಜೂನ್ 2022ರ ಕೊನೆಯಲ್ಲಿ, ಆಡಳಿತವು ಗುನಾ ಜಿಲ್ಲೆಯ ರಾಮಪ್ಯಾರಿ ಸೆಹರಿಯಾ ಅವರ ಧನೋರಿಯಾ ಗ್ರಾಮಕ್ಕೆ ತಲುಪಿ ಅವರಿಗೆ ಸೇರಿದ ಭೂಮಿಯನ್ನು ಗುರುತಿಸಿತು. ಆಡಳಿತವು ಕೊನೆಗೂ ಆಕೆಯ ಭೂಮಿಯ ಗಡಿಯನ್ನು ರಚಿಸಿಕೊಟ್ಟಿತು. ಈ ಸಹಾರಿಯ ಆದಿವಾಸಿ ಕುಟುಂಬ ತಮ್ಮ ಪಾಲಿನ ಜಮೀನು ಪಡೆಯಲು ಕಳೆದ ಎರಡು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು. ಮತ್ತು ರಾಮಪ್ಯಾರಿ ಅವರಿಗೆ ಈ ಭೂಮಿ ಪಡೆಯುವುದು ಅವರ ಬದುಕಿನ ಕನಸಾಗಿತ್ತು.

ಆದರೆ ಪ್ರಬಲ ಧಾಕಾಡ್ ಮತ್ತು ಬ್ರಾಹ್ಮಣ ಸಮುದಾಯಗಳ ಎರಡು ಕುಟುಂಬಗಳು ಆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದವು.

Jamnalal's family belongs to the Sahariya Adivasi tribe. He is seen here chopping soyabean in Dhanoriya.
PHOTO • Parth M.N.

ಜಮ್ನಾಲಾಲ್ ಅವರ ಕುಟುಂಬವು ಸಹರಿಯಾ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದೆ. ಚಿತ್ರದಲ್ಲಿ ಅವರು ಧನೋರಿಯಾದಲ್ಲಿ ಸೋಯಾಬೀನ್ ಕತ್ತರಿಸುತ್ತಿರುವುದನ್ನು ಕಾಣಬಹುದು

2022ರ ಜುಲೈ 2ನೇ ತಾರೀಖಿನಂದು ರಾಮಪ್ಯಾರೆ ತಾನು ಭೂಮಿಯ ಒಡತಿಯಾದ ಹೆಮ್ಮೆಯೊಂದಿಗೆ ತನ್ನ ಹೊಲವನ್ನು ನೋಡಲೆಂದು ಹೊರಟರು. ಅಲ್ಲಿ ಹೋದಾಗ ಅವರು ಕಂಡಿದ್ದು ಎರಡು ಪ್ರಬಲ ಸಮುದಾಯಗಳ ಕುಟುಂಬ ಸದಸ್ಯರು ಅವರ ಹೊಲದಲ್ಲಿ ಟ್ರ್ಯಾಕ್ಟರ್‌ ಚಲಾಯಿಸುತ್ತಿರುವುದನ್ನು. ರಾಮಪ್ಯಾರಿ ಅವರ ಬಳಿ ಹೋಗಿ ಅದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಇದು ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ಆಕೆಯನ್ನು ಥಳಿಸಿ ಬೆಂಕಿ ಹಚ್ಚಲಾಯಿತು.

“ವಿಷಯ ತಿಳಿದು ಆಕೆಯ ಗಂಡ ಅರ್ಜುನ್‌ ಹೊಲಕ್ಕೆ ಹೋಗಿ ನೋಡಿದಾಗ ತನ್ನ ಹೆಂಡತಿ ಸುಟ್ಟ ಸ್ಥಿತಿಯಲ್ಲಿರುವುದನ್ನು ಕಂಡನು” ಎಂದು ಅರ್ಜುನ್‌ ಅವರ ಚಿಕ್ಕಪ್ಪ 70 ವರ್ಷದ ಜಮ್ನಾಲಾಲ್ ಹೇಳುತ್ತಾರೆ.‌ “ನಾವು ತಕ್ಷಣ ಅವಳನ್ನು ಗುನಾ ಜಿಲ್ಲಾಸ್ಪತ್ರೆಗೆ ಕರೆದೊಯ್ದೆವು, ಅವಳ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿಂದ ಭೋಪಾಲ್‌ಗೆ ಕಳುಹಿಸಲಾಯಿತು.”

ಆರು ದಿನಗಳ ನಂತರ ಆಕೆ ಸುಟ್ಟ ಗಾಯಗಳಿಗೆ ಬಲಿಯಾದರು. ಆಗ ಅವರಿಗೆ ಕೇವಲ 46 ವರ್ಷ ವಯಸ್ಸಾಗಿತ್ತು. ಅವರು ಪತಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದರು.

ಸಹರಿಯಾ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಕುಟುಂಬವು ಕೂಲಿ ಕೆಲಸದ ಮೂಲಕ ಬದುಕು ನಡೆಸುತ್ತಿತ್ತು. ಧನೋರಿಯಾದ ಕೃಷಿ ಭೂಮಿಯಲ್ಲಿ ಸೋಯಾಬೀನ್ ಕತ್ತರಿಸುತ್ತಾ ಜಮ್ನಾಲಾಲ್ ಹೇಳುತ್ತಾರೆ, "ನಮಗೆ ಬೇರೆ ಯಾವುದೇ ಆದಾಯದ ಮೂಲವಿರಲಿಲ್ಲ. ಸ್ವಂತ ಭೂಮಿ ಸಿಕ್ಕಿದಾಗ ಕನಿಷ್ಟ ನಮ್ಮ ಮನೆ ಬಳಕೆ ಸಾಕಾಗುವಷ್ಟಾದರೂ ಬೆಳೆಗಳನ್ನು ಬೆಳೆದುಕೊಳ್ಳಬಹುದೆನ್ನುವ ಭರವಸೆಯಿತ್ತು.”

ಈ ಘಟನೆ ನಡೆದ ದಿನದಿಂದ ರಾಮಪ್ಯಾರೆಯವರ ಕುಟುಂಬವು ಭಯದಿಂದ ಧನೋರಿಯಾ ಗ್ರಾಮವನ್ನು ತೊರೆದಿದೆ. ಊರಿನಲ್ಲೇ ನೆಲೆಸಿರುವ ಜಮ್ನಾಲಾಲ್‌ ಅವರೆಲ್ಲ ಎಲ್ಲಿದ್ದಾರೆನ್ನುವ ಮಾಹಿತಿಯನ್ನು ನೀಡಲಿಲ್ಲ. “ನಾವೆಲ್ಲರೂ ಇದೇ ಊರಿನಲ್ಲಿ ಹುಟ್ಟಿ ಬೆಳೆದವರು. ಆದರೆ ನಾನೊಬ್ಬನೇ ಇಲ್ಲಿ ಸಾಯುತ್ತೇನೆ. ಅರ್ಜುನ್‌ ಮತ್ತು ಅವನ ತಂದೆ ಇಲ್ಲಿಗೆ ಮರಳುತ್ತಾರೆನ್ನುವ ಭರವಸೆ ನನಗಿಲ್ಲ” ಎಂದು ಅವರು ಹೇಳುತ್ತಾರೆ.

ರಾಮಪ್ಯಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಅಪರಾಧಿಗಳನ್ನು ಚುರುಕಾಗಿ ಬಂಧಿಸಿದರು.

Jamnalal continues to live and work there but Rampyari's family has left Dhanoriya. 'I don’t think Arjun [her husband] and his father will return,' he says
PHOTO • Parth M.N.
Jamnalal continues to live and work there but Rampyari's family has left Dhanoriya. 'I don’t think Arjun [her husband] and his father will return,' he says
PHOTO • Parth M.N.

ಜಮ್ನಾಲಾಲ್‌ ಊರಿನಲ್ಲೇ ಉಳಿದು ಕೆಲಸ ಮಾಡುತ್ತಿದ್ದಾರೆಯಾದರೂ, ರಾಮಪ್ಯಾರಿಯವರ ಕುಟುಂಬ ಧನೋರಿಯಾ ತೊರೆದಿದೆ. ʼಅರ್ಜುನ್‌ ಮತ್ತು ಅವನ ತಂದೆ ಇಲ್ಲಿಗೆ ಮರಳುತ್ತಾರೆನ್ನುವ ಭರವಸೆ ನನಗಿಲ್ಲʼ ಎಂದು ಅವರು ಹೇಳುತ್ತಾರೆ

*****

ಸಾಮಾನ್ಯವಾಗಿ ಜನರು ತಮ್ಮ ಮೇಲೆ ದೌರ್ಜನ್ಯವಾದಾಗ ಸರ್ಕಾರಿ ಯಂತ್ರದ ಮೊರೆ ಹೋಗುತ್ತಾರೆ. ಆದರೆ ಚೈನ್‌ ಸಿಂಗ್‌ ಅವರ ಪ್ರಕರಣದಲ್ಲಿ ಸರ್ಕಾರಿ ಯಂತ್ರವೇ ಅವರನ್ನು ಕೊಂದಿತು.

ಆಗಸ್ಟ್ 2022 ರಲ್ಲಿ, ಚೈನ್ ಸಿಂಗ್ ಮತ್ತು ಅವರ ತಮ್ಮ ಮಹೇಂದ್ರ ಸಿಂಗ್ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ರಾಯ್ಪುರ ಗ್ರಾಮದ ಬಳಿಯ ಕಾಡಿನ ಮೂಲಕ ಬೈಕಿನಲ್ಲಿ ಬರುತ್ತಿದ್ದರು. “ಮನೆ ಬಳಕೆಗಾಗಿ ಒಂದಷ್ಟು ಕಟ್ಟಿಗೆ ಬೇಕಿತ್ತು. ನನ್ನ ಅಣ್ಣ ಬೈಕ್‌ ಓಡಿಸುತ್ತಿದ್ದ. ನಾನು ಹಿಂದೆ ನಾವು ಸಂಗ್ರಹಿಸಿದ ಕಟ್ಟಿಗೆಯೊಂದಿಗೆ ಕುಳಿತಿದ್ದೆ” ಎಂದು 20 ವರ್ಷದ ಮಹೇಂದ್ರ ಹೇಳುತ್ತಾರೆ.

ರಾಯ್ಪುರವು ವಿದಿಶಾದ ದಟ್ಟವಾದ ಅರಣ್ಯ ಪ್ರದೇಶಗಳಿಗೆ ಹತ್ತಿರದಲ್ಲಿದೆ, ಅಂದರೆ ಸೂರ್ಯಾಸ್ತದ ನಂತರ ಈ ಪ್ರದೇಶವು ಕತ್ತಲೆಯಿಂದ ಕೂಡಿರುತ್ತದೆ. ಬೀದಿ ದೀಪಗಳಿರುವುದಿಲ್ಲ. ಏರು ತಗ್ಗಿನ ದಾರಿಯನ್ನು ಈ ಅಣ್ಣ ತಮ್ಮಂದಿರು ತಮ್ಮ ಬೈಕ್‌ ಹೆಡ್‌ ಲೈಟ್‌ ಬಳಸಿಯೇ ಸಾಗಬೇಕಿತ್ತು.

ಭಿಲ್ ಬುಡಕಟ್ಟು ಜನಾಂಗಕ್ಕೆ ಸೇರಿದ ಚೈನ್ ಸಿಂಗ್ ಮತ್ತು ಮಹೇಂದ್ರ ಅವರು ಅರಣ್ಯ ಪ್ರದೇಶದ ಮೂಲಕ ಉಬ್ಬು ತಗ್ಗಿನ ರಸ್ತೆಗಳನ್ನು ಎಚ್ಚರಿಕೆಯಿಂದ ದಾಟಿ, ಮುಖ್ಯ ರಸ್ತೆಯನ್ನು ತಲುಪಿದಾಗ ಅವರ ಮುಂದೆ ಅರಣ್ಯ ರಕ್ಷಕರಿಂದ ತುಂಬಿದ ಎರಡು ಜೀಪುಗಳು ಕಂಡುಬಂದವು. ಬೈಕಿನ ಹೆಡ್ ಲೈಟ್ ನೇರವಾಗಿ ಜೀಪುಗಳತ್ತ ಹೋಗುತ್ತಿತ್ತು.

“ಅಣ್ಣ ಅವರನ್ನು ಕಂಡ ಕೂಡಲೇ ಬೈಕ್‌ ನಿಲ್ಲಿಸಿದ. ನಾವು ಯಾವುದೇ ರೀತಿಯ ಆಕ್ರಮಣಶೀಲತೆಯನ್ನು ಪ್ರದರ್ಶಿಸಿರಲಿಲ್ಲ. ನಾವು ಕಟ್ಟಿಗೆಯನ್ನಷ್ಟೇ ಒಯ್ಯುತ್ತಿದ್ದೆವು. ಆದರೂ ಅರಣ್ಯ ರಕ್ಷಕರೊಬ್ಬರು ನಮ್ಮ ಮೇಲೆ ಗುಂಡು ಹಾರಿಸಿದರು.”

ಆಗ ಚೈನ್ ಸಿಂಗ್ (30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಬೈಕಿನ ನಿಯಂತ್ರಣ ಕಳೆದುಕೊಂಡು ಕುಸಿದುಬಿದ್ದರು. ಹಿಂಭಾಗದಲ್ಲಿದ್ದ ಮಹೇಂದ್ರ ಅವರಿಗೂ ಪೆಟ್ಟು ಬಿದ್ದಿದೆ. ಅವರು ಸಂಗ್ರಹಿಸಿದ ಕಟ್ಟಿಗೆ ಅವರ ಕೈಯಿಂದ ಬಿದ್ದಿತು ಮತ್ತು ಅವರು ತಪ್ಪಿಸಿಕೊಳ್ಳುವ ಮೊದಲೇ ಬೈಕಿನೊಂದಿಗೆ ನೆಲದ ಮೇಲೆ ಬಿದ್ದರು. "ಆ ಕ್ಷಣ ನನಗೆ ನಾನೂ ಸಾಯಲಿದ್ದೇ ಎನ್ನಿಸಿತ್ತು" ಎಂದು ಮಹೇಂದ್ರ ಹೇಳುತ್ತಾರೆ. "ಸ್ವರ್ಗದಲ್ಲಿ ತೇಲುತ್ತಿರುವಂತೆ ಭಾಸವಾಗಿತ್ತು." ಎನ್ನುವ ಅವರಿಗೆ ನಂತರ ಪ್ರಜ್ಞೆ ಬಂದಿದ್ದು ಆಸ್ಪತ್ರೆಯಲ್ಲಿ.

Mahendra's (in the photo) brother Chain Singh was shot dead by a forest guard near their village Raipura of Vidisha district
PHOTO • Parth M.N.

ಮಹೇಂದ್ರ ಅವರ ಅಣ್ಣ (ಫೋಟೊದಲ್ಲಿರುವವರು) ಚೈನ್ ಸಿಂಗ್ ಅವರನ್ನು ವಿದಿಶಾ ಜಿಲ್ಲೆಯ ರಾಯ್ಪುರ ಗ್ರಾಮದ ಬಳಿ ಅರಣ್ಯ ರಕ್ಷಕರು ಗುಂಡಿಕ್ಕಿ ಕೊಂದರು

ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದು ವಿದಿಶಾದ ಜಿಲ್ಲಾ ಅರಣ್ಯ ಅಧಿಕಾರಿ ಓಂಕಾರ್ ಮಸ್ಕೋಲೆ ಹೇಳಿದ್ದಾರೆ. "ಆರೋಪಿಯನ್ನು ಅಮಾನತುಗೊಳಿಸಲಾಗಿತ್ತು, ಆದರೆ ಪ್ರಸ್ತುತ ಅವನು ಸೇವೆಗೆ ಮರಳಿದ್ದಾನೆ" ಎಂದು ಅವರು ಹೇಳಿದರು. "ನ್ಯಾಯಾಂಗ ತನಿಖೆಯು ತನ್ನ ವರದಿಯನ್ನು ಸಲ್ಲಿಸಿದ ನಂತರ, ನಾವು ಅದಕ್ಕೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ತನ್ನ ಅಣ್ಣನಿಗೆ ಮೇಲೆ ಗುಂಡಿಕ್ಕಿ ಕೊಂದ ರೇಂಜರ್‌ ಮೇಲೆ ಆರೋಪ ಹೊರಿಸಲಾಗುತ್ತದೆಯೇ ಎನ್ನುವ ಕುರಿತು ಮಹೇಂದ್ರ ಅವರಿಗೆ ಅನುಮಾನಗಳಿವೆ. “ಅವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆಂದು ನಾನು ಭಾವಿಸುತ್ತೇನೆ. ಅದು ಹಾಗೆ ಆಗದಿದ್ದಲ್ಲಿ ನೀವು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತೀರಿ? ಆದಿವಾಸಿಯೊಬ್ಬನ ಜೀವ ಬಹಳ ಅಗ್ಗವೆಂದೇ?” ಎಂದು ಅವರು ಕೇಳುತ್ತಾರೆ.

ಈ ಘಟನೆಯು ಮನೆಯ ಕೇವಲ ಇಬ್ಬರು ದುಡಿಯುವ ಸದಸ್ಯರಲ್ಲಿ ಒಬ್ಬರಾಗಿದ್ದ ಚೈನ್ ಸಿಂಗ್ ಅವರ ಕುಟುಂಬವನ್ನು ಛಿದ್ರಗೊಳಿಸಿದೆ. ಇನ್ನೊಬ್ಬರು ಮಹೇಂದ್ರ ಅವರು ಒಂದು ವರ್ಷ ಕಳೆದರೂ ಕುಂಟುತ್ತಾ ನಡೆಯುತ್ತಿದ್ದಾರೆ. "ನನ್ನಣ್ಣ ಹೊರಟುಹೋಗಿದ್ದಾನೆ. ಗಾಯದಿಂದಾಗಿ ನನಗೆ ಹೆಚ್ಚು ಕೂಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. "ಅವರ ನಾಲ್ಕು ಚಿಕ್ಕ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ನಮಗೆ ಒಂದು ಎಕರೆ ಕೃಷಿಭೂಮಿಯಿದೆ, ಅಲ್ಲಿ ನಾವು ಮನೆ ಬಳಕೆಗಾಗಿ ಕಡಲೆ ಬೆಳೆಯುತ್ತೇವೆ. ಆದರೆ ಒಂದು ವರ್ಷದಿಂದ ನಮ್ಮ ಸಂಪಾದನೆ ಬಹುತೇಕ ಶೂನ್ಯದಲ್ಲಿದೆ.

*****

ಆ ಘಟನೆ ನಡೆದ ದಿನದಿಂದ ಭಾರತಿಯವರಿಗೂ ಒಂದು ಪೈಸೆ ಸಂಪಾದಿಸಲು ಸಾಧ್ಯವಾಗಿಲ್ಲ.

ಹತ್ಯಾಕಾಂಡ ಜರುಗಿದ ನಂತರ ಅವರು ತಂದೆ ಮೋಹನ್‌ ಲಾಲ್‌ ಮತ್ತು ಅಣ್ಣ ಸಂತೋಷ್‌ ಅವರೊಂದಿಗೆ ಊರನ್ನು ತೊರೆದರು. “ನಮಗೆ ಅಲ್ಲಿ ನಮಗೆ ಕೃಷಿ ಭೂಮಿಯೇನೂ ಇದ್ದಿರಲಿಲ್ಲ” ಎನ್ನುವ ಭಾರತಿ, “ಅಲ್ಲಿ ನಮ್ಮ ಪಾಲಿಗೆ ಇದ್ದಿದ್ದು ನಮ್‌ಮ ಕುಟುಂಬ ಮಾತ್ರ. ಅವರೇ ಇಲ್ಲವಾದ ಮೇಲೆ ಅಲ್ಲಿ ಬದುಕುವುದರಲ್ಲಿ ನಮಗೆ ಯಾವ ಅರ್ಥವೂ ಕಾಣಲಿಲ್ಲ. ಅಲ್ಲಿದ್ದರೆ ಅವರ ನೆನಪುಗಳು ಮರುಕಳಿಸುತ್ತಿರುತ್ತವೆ. ಜೊತೆಗೆ ಅಲ್ಲಿರುವುದು ಸುರಕ್ಷಿತವಲ್ಲ ಎಂದೂ ನಮಗೆ ಅನ್ನಿಸಿತು” ಎನ್ನುತ್ತಾರೆ.

Bharti's father and brother wanted to let go of the case and start afresh. 'Maybe they are scared. But I want to ensure the people who killed my family get punishment. How can I start afresh when there is no closure?' she says.
PHOTO • Parth M.N.

ಭಾರತಿಯವರ ತಂದೆ ಮತ್ತು ಅಣ್ಣ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡು ಹೊಸದಾಗಿ ಬದುಕು ಆರಂಭಿಸುವ ಕುರಿತು ಯೋಚಿಸಿದ್ದರು. ʼಬಹುಶಃ ಅವರಿಗೆ ಭಯವಾಗಿರಬಹುದು. ಆದರೆ ಆದರೆ ನನ್ನ ಕುಟುಂಬವನ್ನು ಕೊಂದ ಜನರಿಗೆ ಶಿಕ್ಷೆಯಾಗುವುದನ್ನು ನಾನು ನೋಡಬಯಸುತ್ತೇನೆ. ಇದೆಲ್ಲಾ ಮುಕ್ತಾಯವೇ ಆಗದಿರುವಾಗ ಹೊಸದಾಗಿ ಪ್ರಾರಂಭಿಸುವುದಾದರೂ ಏನನ್ನು?ʼ ಎಂದು ಆಕೆ ಕೇಳುತ್ತಾರೆ

ಅಂದಿನಿಂದ ಮೋಹನ್‌ ಲಾಲ್‌ ಮತ್ತು ಸಂತೋಷ ಅವರೊಂದಿಗೆ ಮನಸ್ತಾಪ ಉಂಟಾಯಿತು. ಹೀಗಾಗಿ ಅವರು ಈಗ ತನ್ನ ತಂದೆ ಮತ್ತು ಅಣ್ಣನೊಡನೆ ಉಳಿದಿಲ್ಲ. “ನಾನು ಇಂದೋರ್‌ನಲ್ಲಿರುವ ನನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ. “ಬಹುಶಃ ಅವರಿಗೆ ಭಯವಾಗಿರಬಹುದು. ಆದರೆ ಆದರೆ ನನ್ನ ಕುಟುಂಬವನ್ನು ಕೊಂದ ಜನರಿಗೆ ಶಿಕ್ಷೆಯಾಗುವುದನ್ನು ನಾನು ನೋಡಬಯಸುತ್ತೇನೆ. ಇದೆಲ್ಲಾ ಮುಕ್ತಾಯವೇ ಆಗದಿರುವಾಗ ಹೊಸದಾಗಿ ಪ್ರಾರಂಭಿಸುವುದಾದರೂ ಏನನ್ನು?” ಎಂದು ಆಕೆ ಕೇಳುತ್ತಾರೆ

ರೂಪಾಲಿ ಡಾಕ್ಟರ್‌ ಆಗುವ ಕನಸು ಕಂಡಿದ್ದಳು, ಪವನ್‌ ಸೈನ್ಯ ಸೇರಬಯಸಿದ್ದ. ತನ್ನ ಒಡಹುಟ್ಟಿದವರ ಹೊಟ್ಟೆ ತುಂಬಿಸುವ ಸಲುವಾಗಿ ಭಿಕ್ಷೆ ಬೇಡುವುದನ್ನು ಸಹ ಮಾಡಿದ್ದ ಭಾರತಿಯವರಿಗೆ ಈಗ ಅವರ ಸಾವಿಗೆ ನ್ಯಾಯ ಕೊಡಿಸುವುದರ ಹೊರತು ಇನ್ಯಾವ ಆಸೆಯೂ ಉಳಿದಿಲ್ಲ.

2022ರ ಜನವರಿಯಲ್ಲಿ ಅವರು ನೇಮಾವಾರ್‌ನಿಂದ ಭೋಪಾಲ್‌ ತನಕ ಕಾಲ್ನಡಿಗೆಯಲ್ಲಿ ʼನ್ಯಾಯ ಯಾತ್ರಾʼ ನಡೆಸಿದ್ದರು. ಒಂದು ವಾರಗಳ ಕಾಲ ನಡೆದ ಈ 150 ಕಿಲೋಮೀಟರ್ ದೂರದ ನಡಿಗೆಯನ್ನು ಪ್ರತಿಪಕ್ಷ ಕಾಂಗ್ರೆಸ್ ಪಕ್ಷ ಬೆಂಬಲಿಸಿತು. ಮೋಹನ್ ಲಾಲ್ ಮತ್ತು ಸಂತೋಷ್ ಅದರಲ್ಲಿ ಭಾಗವಹಿಸಲಿಲ್ಲ. "ಅವರು ನನ್ನೊಂದಿಗೆ ಹೆಚ್ಚು ಮಾತನಾಡುವುದಿಲ್ಲ" ಎಂದು ಅವರು ವಿಷಾದದಿಂದ ಹೇಳುತ್ತಾರೆ. "ನಾನು ಹೇಗಿದ್ದೇನೆ ಎಂದು ಸಹ ಅವರು ಕೇಳುವುದಿಲ್ಲ."

ಮೃತರ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 41 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ಮೊತ್ತವನ್ನು ಭಾರತಿ, ಮೋಹನ್ ಲಾಲ್ ಮತ್ತು ಸಂತೋಷ್ ಮತ್ತು ಆಕೆಯ ಚಿಕ್ಕಪ್ಪನ ಕುಟುಂಬ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವರು ಪ್ರಸ್ತುತ ಆ ಹಣದ ಮೂಲಕ ಜೀವನ ನಡೆಸುತ್ತಿದ್ದಾರೆ. ಕೆಲಸದ ಕಡೆ ಗಮನಹರಿಸಲು ಸಾಧ್ಯವಾಗದ ಕಾರಣ ಅವರು ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಅವರು ಈಗ ತನ್ನ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಮಧ್ಯದಲ್ಲೇ ಬಿಟ್ಟಿದ್ದ ಓದನ್ನು ಮತ್ತೆ ಮುಂದುವರೆಸುವ ಕುರಿತು ಯೋಚಿಸುತ್ತಿದ್ದಾರೆ. ಆದರೆ ಅದೆಲ್ಲವೂ ಈ ಪ್ರಕರಣಕ್ಕೆ ಒಂದು ಅಂತ್ಯವನ್ನು ಹಾಡಿದ ನಂತರವೇ ಎನ್ನುತ್ತಾರವರು.

ಸುರೇಂದ್ರ ಹೊಂದಿರುವ ರಾಜಕೀಯ ಸಂಪರ್ಕಗಳಿಂದಾಗಿ ಆತನ ವಿರುದ್ಧದ ಪ್ರಕರಣವು ದುರ್ಬಲಗೊಳ್ಳಬಹುದು ಎನ್ನುವ ಭಯ ಭಾರತಿಯವರಿಗಿದೆ. ಅದು ಹಾಗಾಗದಿರುವಂತೆ ನೋಡಿಕೊಳ್ಳುವ ಸಲುವಾಗಿ ಅವರು ವಿಶ್ವಾಸಾರ್ಹ ಮತ್ತು ಕೈಗೆಟುಕುವ ದರದ ವಕೀಲರೊಂದಿಗೆ ಸಭೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ಭಾರತಿಯವರ ಬದುಕಿನಲ್ಲಿ ಒಂದನ್ನು ಹೊರತುಪಡಿಸಿ ಎಲ್ಲವೂ ಪೂರ್ತಿಯಾಗಿ ಬದಲಾಗಿದೆ. ಅವರು ಕುಟುಂಬದ ಕುರಿತು ಯೋಚಿಸುವುದು ಇಂದಿಗೂ ಮುಂದುವರೆದಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

২০১৭ সালের পারি ফেলো পার্থ এম. এন. বর্তমানে স্বতন্ত্র সাংবাদিক হিসেবে ভারতের বিভিন্ন অনলাইন সংবাদ পোর্টালের জন্য প্রতিবেদন লেখেন। ক্রিকেট এবং ভ্রমণ - এই দুটো তাঁর খুব পছন্দের বিষয়।

Other stories by Parth M.N.
Editor : PARI Desk

আমাদের সম্পাদকীয় বিভাগের প্রাণকেন্দ্র পারি ডেস্ক। দেশের নানান প্রান্তে কর্মরত লেখক, প্ৰতিবেদক, গবেষক, আলোকচিত্ৰী, ফিল্ম নিৰ্মাতা তথা তর্জমা কর্মীদের সঙ্গে কাজ করে পারি ডেস্ক। টেক্সক্ট, ভিডিও, অডিও এবং গবেষণামূলক রিপোর্ট ইত্যাদির নির্মাণ তথা প্রকাশনার ব্যবস্থাপনার দায়িত্ব সামলায় পারি'র এই বিভাগ।

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru