ಆ ರಾಜನ ಆಸ್ಥಾನದಲ್ಲಿ ಶ್ರೀಮಂತರಾಗಿರಲಿ ಬಡವರಾಗಿರಲಿ, ಯುವಕರಾಗಿರಲಿ, ವೃದ್ಧರಾಗಿರಲಿ, ಎಲ್ಲರೂ ತಮ್ಮ ಚಪ್ಪಲಿಗಳನ್ನು ತೆಗೆದು ಮಹಾರಾಜರ ಪಾದಗಳನ್ನು ಮುಟ್ಟಿ ನಮಸ್ಕರಿಸಬೇಕಿತ್ತು. ಆದರೆ ಬಡಕಲು ಯುವಕನೊಬ್ಬ ಹಾಗೆ ಮಾಡಲು ನಿರಾಕರಿಸಿ ನೇರವಾಗಿ ನಿಂತು ರಾಜನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದನು. ಆದರೆ ಯಾವುದೇ ಭಿನ್ನಾಭಿಪ್ರಾಯವನ್ನು ನಿರ್ದಯವಾಗಿ ಹತ್ತಿಕ್ಕುವ ವಿಷಯದಲ್ಲಿ ಖ್ಯಾತನಾಗಿದ್ದ ರಾಜನ ಆಸ್ಥಾನದಲ್ಲಿ ನಡೆದ ಈ ಘಟನೆಯಿಂದ ಪಂಜಾಬಿನ ಜೋಗ ಗ್ರಾಮದ ಹಿರಿಯರು ಹೆದರಿಹೋದರು. ಮತ್ತು ಇದರಿಂದ ರಾಜಮನೆತನ ಕೆರಳಿ ನಿಂತಿತು.
ಆ ಯುವಕನ ಹೆಸರು ಜಾಗೀರ್ ಸಿಂಗ್ ಜೋಗಾ. ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಕಾನ್ಸ್ಟೇಬಲ್ ಕುಲ್ವಿಂದರ್ ಕೌರ್ ಬಾಲಿವುಡ್ ಸೆಲೆಬ್ರಿಟಿ ಮತ್ತು ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡುವ ಒಂಬತ್ತು ದಶಕಗಳ ಮೊದಲು ಈ ಯುವಕನ ಧೈರ್ಯಶಾಲಿ, ವೈಯಕ್ತಿಕ ಪ್ರತಿಭಟನೆ ನಡೆದಿತ್ತು. ಜೋಗಾ ತಾನು ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್ ಅವರ ವಿರುದ್ಧ ಪ್ರತಿಭಟಿಸಿ ನಿಂತಿದ್ದರು, ಇದರಿಂದ ಕೆರಳಿದ ಅವರ ಊಳಿಗಮಾನ್ಯ ಗೂಂಡಾಗಳು ಊರಿನ ಬಡ ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ಇದು ನಡೆದಿದ್ದು 1930ರ ದಶಕದಲ್ಲಿ. ಮುಂದೇನಾಯಿತು ಎನ್ನುವ ವಿವರ ಜಾನಪದ ಮತ್ತು ಪರಿಶೀಲಿಸಬಹುದಾದ ಇತಿಹಾಸದ ನಡುವೆ ಕಳೆದುಹೋಗಿದೆ. ನಂತರ ಜೋಗಾ ಇನ್ನೊಂದು ಹೋರಾಟವನ್ನೂ ಮಾಡಿದ್ದರು.
ಇದಾಗಿ ಒಂದು ದಶಕದ ನಂತರ ಜೋಗಾ ಮತ್ತು ಆಗಿನ ಲಾಲ್ ಪಕ್ಷದ ಸಹಚರರು ಸೇರಿ ಕಿಶನ್‌ಗಡ (ಪ್ರಸ್ತುತ ಸಂಗ್ರೂರ್ ಜಿಲ್ಲೆಗೆ ಸೇರಿದೆ) ಎನ್ನುವ ಪ್ರದೇಶದಲ್ಲಿ ಭೂ ಹೋರಾಟವನ್ನು ಸಂಘಟಿಸಿದರು. ಈ ಹೋರಾಟದ ಮೂಲಕ ಅವರು ಭೂಪಿಂದರ್ ಸಿಂಗ್ ಅವರ ಮಗನ ವಶದಲ್ಲಿದ್ದ 784 ಹಳ್ಳಿಗಳ ಸಾವಿರಾರು ಎಕರೆ ಭೂಮಿಯನ್ನು ಕಸಿದು ಅಲ್ಲಿನ ಭೂ ರಹಿತ ರೈತರಿಗೆ ಕೊಡಿಸಿದರು. ಈ ಭೂಪಿಂದರ್ ಸಿಂಗ್ ಪಟಿಯಾಲದ ಹಿಂದಿನ ರಾಜ ಮತ್ತು ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಜ್ಜ.
ಆ ಭೂಮಿ ಹೋರಾಟವೂ ಸೇರಿದಂತೆ ಹಲವು ಹೋರಾಟಗಳ ಕಾರಣಕ್ಕಾಗಿ 1954ರಲ್ಲಿ ಜೋಗಾ ಜೈಲು ಸೇರಿದ್ದರು. ಅವರು ಜೈಲಿನಲ್ಲಿರುವಾಗ ಚುನಾವಣೆಯಲ್ಲಿ ಸ್ಪರ್ಧಿಸಿ ಜನರಿಂದ ಆಯ್ಕೆಯಾಗಿದ್ದರು. ಜನರು ಅವರನ್ನು ರಾಜ್ಯ ವಿಧಾನಸಭೆಗೆ ಮತ ಚಲಾಯಿಸಿದರು. 1962, 1967 ಮತ್ತು 1972ರಲ್ಲಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು.
“ಪಂಜಾಬಿನಲ್ಲಿ ಪ್ರತಿಭಟನೆಯೆನ್ನುವುದು ನಾವು ಉಸಿರಾಡುವ ಗಾಳಿಯಲ್ಲೇ ಇದೆ. ಕುಲ್ವಿಂದರ್ ಕೌರ್ ಈ ಪ್ರತಿಭಟನಾ ಪರಂಪರೆಯ ಒಂದು ಕೊಂಡಿ ಮಾತ್ರ – ಇದು ನಿರಂತರವಾದುದು – ಇದು ಜೋಗಾ ಅವರೊಂದಿಗೆ ಆರಂಭವಾದದ್ದೂ ಅಲ್ಲ, ಕುಲ್ವಿಂದರ್ ಕೌರ್ ಅವರೊಂದಿಗೆ ಮುಗಿಯುವಂತಹದ್ದೂ ಅಲ್ಲ” ಎಂದು ಜೋಗಾ ಅವರ ಜೀವನಚರಿತ್ರೆಕಾರ ಜಗ್ತಾರ್ ಸಿಂಗ್ ಹೇಳುತ್ತಾರೆ. ನಿವೃತ್ತ ಕಾಲೇಜು ಶಿಕ್ಷಕರಾದ ಜಗ್ತಾರ್ ಸಿಂಗ್ ಅವರು ಇಂಕ್ವಿಲಾಬಿ ಯೋಧಾ: ಜಾಗೀರ್ ಸಿಂಗ್ ಜೋಗಾ (ಕ್ರಾಂತಿಕಾರಿ ಯೋಧ: ಜಾಗೀರ್ ಸಿಂಗ್ ಜೋಗಾ) ಕೃತಿಯ ಲೇಖಕರಾಗಿದ್ದಾರೆ.
ಬಹುತೇಕ ಇಂತಹ ಸ್ವಯಂಪ್ರೇರಿತ ಪ್ರತಿಭಟನೆಗಳು ಸಾಧಾರಣ ಹಿನ್ನೆಲೆಯ ಬಡ ಕುಟುಂಬಗಳ ನಾಗರಿಕರಿಂದಲೇ ಎದುರಾಗಿವೆ. ಸಿಐಎಸ್ಎಫ್ ಕಾನ್ಸ್ಟೇಬಲ್ ಆಗಿರುವ ಕುಲ್ವಿಂದರ್, ಕಪುರ್ಥಾಲಾ ಜಿಲ್ಲೆಯ ಮಹಿವಾಲ್ ಗ್ರಾಮದ ಸಣ್ಣ ರೈತ ಕುಟುಂಬದಿಂದ ಬಂದವರು. ಕಂಗನಾ ರಣಾವತ್ ಅವರಿಂದ ಅಪಮಾನಿತರಾಗಿರುವ ಮತ್ತು ಅಪಪ್ರಚಾರಕ್ಕೆ ಒಳಗಾಗಿರುವ ಕುಲ್ವಿಂದರ್ ಅವರ ತಾಯಿ ವೀರ್ ಕೌರ್ ಈಗಲೂ ರೈತ ಮಹಿಳೆ.
ಜೋಗಾ ಅವರಿಗಿಂತ ಮೊದಲು ಸಿಂಗ್ ಮತ್ತು ಅವರ ಸಹಚರರ ವಿರುದ್ಧದ ಲಾಹೋರ್ ಪಿತೂರಿ ಪ್ರಕರಣದ ವಿಚಾರಣೆಯ ಸಮಯದಲ್ಲಿ (1929-30) ನ್ಯಾಯಾಲಯದ ಒಳಗೆ ಸಹ ಅಪರಾಧಿ ಮತ್ತು ಮತ್ತು ಅಪ್ರೂವರ್ ಜೈ ಗೋಪಾಲ್ ಅವರ ಮೇಲೆ ಪ್ರೇಮದತ್ತ ವರ್ಮಾ ಚಪ್ಪಲಿ ಎಸೆದಿದ್ದರು. “ಇದು ಕೂಡಾ ಯೋಜಿತ ತಂತ್ರವಾಗಿರಲಿಲ್ಲ. ಅದು ಆ ಕ್ಷಣಕ್ಕೆ ಹುಟ್ಟಿದ ಪ್ರತಿರೋಧವಾಗಿತ್ತು. ವಿಚಾರಣೆಯ ಸಮಯದಲ್ಲಿ, ಅವರು ಮತ್ತು ಇತರ ಆರೋಪಿಗಳನ್ನು ಚಿತ್ರಹಿಂಸೆಗೆ ಒಳಪಡಿಸಲಾಯಿತು" ಎಂದು ಭಗತ್ ಸಿಂಗ್ ರೀಡರ್ ಲೇಖಕ ಪ್ರೊಫೆಸರ್ ಚಮನ್ ಲಾಲ್ ಹೇಳುತ್ತಾರೆ.
ವಿಚಾರಣೆಯೆನ್ನುವ ಪೇಲವ ಪ್ರಹಸನದ ನಂತರ, ಭಗತ್ ಸಿಂಗ್ ಮತ್ತು ಅವರ ಇಬ್ಬರು ಸಹಚರರನ್ನು ಮಾರ್ಚ್ 23, 1931ರಂದು ಗಲ್ಲಿಗೇರಿಸಲಾಯಿತು. (ಅವರಲ್ಲಿ ಕಿರಿಯವರಾದ ವರ್ಮಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು). ಸರಿಯಾಗಿ ಒಂದು ವರ್ಷದ ನಂತರ, ಹುತಾತ್ಮರಾದವರ ನೆನಪಿನ ಮೊದಲ ವಾರ್ಷಿಕೋತ್ಸವದಂದು, 16 ವರ್ಷದ ಹರ್ಕಿಶನ್ ಸಿಂಗ್ ಸುರ್ಜೀತ್ ಕಂಡಲ್ಲಿ ಗುಂಡು ಆದೇಶವನ್ನು ನಿರ್ಲಕ್ಷಿಸಿ ಹೋಶಿಯಾರಪುರದ ಜಿಲ್ಲಾ ನ್ಯಾಯಾಲಯದ ಮೇಲಿದ್ದ ಬ್ರಿಟಿಷ್ ಧ್ವಜವನ್ನು ಹರಿದು ತ್ರಿವರ್ಣ ಧ್ವಜವನ್ನು ಹಾರಿಸಿದರು.
"ಮೂಲತಃ ಯೂನಿಯನ್ ಜಾಕ್ ಬಾವುಟವನ್ನು ಕೆಳಗಿಳಿಸಲು ಕರೆ ನೀಡಿದ್ದು ಕಾಂಗ್ರೆಸ್ ಪಕ್ಷ. ಆದರೆ ಆ ಪಕ್ಷದ ಕಾರ್ಯಕರ್ತರು ಹಿಂಜರಿದರು. ಅಂದು ಸುರ್ಜೀತ್ ಸ್ವತಃ ಧೈರ್ಯ ಮಾಡಿ ಮುಂದುವರೆದರು. ಮುಂದಿನದು ಈಗ ಇತಿಹಾಸ" ಎಂದು ಸ್ಥಳೀಯ ಇತಿಹಾಸಕಾರ ಅಜ್ಮೀರ್ ಸಿಧು ಪರಿಗೆ ತಿಳಿಸಿದರು. ಇದೆಲ್ಲ ನಡೆದು ದಶಕಗಳು ಕಳೆದಿವೆ. ಆ ದಿನದ ನೆನಪಿನ ಓಣಿಯಲ್ಲಿ ನಡೆದ ಸುರ್ಜೀತ್ ಹೇಳುತ್ತಾರೆ: "ಆ ದಿನ ಮಾಡಿದ ಕೆಲಸದ ಬಗ್ಗೆ ನನಗೆ ಈಗಲೂ ಹೆಮ್ಮೆಯಿದೆ." ಧ್ವಜಾರೋಹಣ ಪ್ರಹಸನದ ಸುಮಾರು ಆರು ದಶಕಗಳ ನಂತರ, ಸುರ್ಜೀತ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿಯಾಗಲಿದ್ದಾರೆ.
1932ರ ಈ ಬಾವುಟ ಹಾರಿಸಿದ ಘಟನೆಯ ಕೆಲವು ವರ್ಷಗಳ ನಂತರ ಸುರ್ಜೀತ್ ಅವರ ಕಿರಿಯ ಸಹವರ್ತಿ ಕಾಮ್ರೆಡ್ ಭಗತ್ ಸಿಂಗ್ ಜುಗ್ಗಿಂಯಾ ಅವರು ತಮ್ಮ 11ನೇ ವಯಸ್ಸಿನಲ್ಲಿ ಒಂದು ನಾಟಕೀಯವಾದ ಪ್ರತಿರೋಧವೊಂದನ್ನು ಪ್ರದರ್ಶಿಸಿದರು. ಅಂದು ಜುಗ್ಗಿಂಯಾ 3 ನೇ ತರಗತಿಯ ಬಹುಮಾನ ವಿಜೇತ ವಿದ್ಯಾರ್ಥಿಯಾಗಿದ್ದರು. ಅವರು ಮೊದಲ ಸ್ಥಾನ ಪಡೆದಿದ್ದರು. ಬಹುಮಾನಗಳನ್ನು ವಿತರಿಸಿದ ಶಿಕ್ಷಣ ಇಲಾಖೆಯ ಗಣ್ಯರು ವೇದಿಕೆಯಲ್ಲಿ ಅವರನ್ನು ಅಭಿನಂದಿಸಿದರು ಮತ್ತು 'ಬ್ರಿಟಾನಿಯಾ ಜಿಂದಾಬಾದ್, ಹಿಟ್ಲರ್ ಮುರ್ದಾಬಾದ್' ಎಂದು ಕೂಗುವಂತೆ ಹೇಳಿದರು. ಆದರೆ ಝುಗ್ಗಿಂಯಾ ಪ್ರೇಕ್ಷಕರೆದುರು ನಿಂತು "ಬ್ರಿಟಾನಿಯಾ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್" ಎಂದು ಕೂಗಿದರು.
ಅಂದು ಅವರನ್ನು ಥಳಿಸಿ ಅಲ್ಲಿಂದ ಹೊರಗೆ ಕಳುಹಿಸಲಾಯಿತು ಮತ್ತು ಅವರಿಗೆ ತನ್ನ ವಿದ್ಯೆಯನ್ನು ಮುಂದುವರೆಸುವ ಅವಕಾಶ ಸಿಗಲಿಲ್ಲ. ಆದರೆ ಅವರು ಈ ಕುರಿತು ತನ್ನ ಬದುಕಿನುದ್ದಕ್ಕೂ ಹೆಮ್ಮೆಯನ್ನು ಅನುಭವಿಸಿದ್ದಾರೆ. ನೀವು ಅವರ ಬದುಕಿನ ಕತೆಯನ್ನು ಇಲ್ಲಿ ಓದಬಹುದು. ಝುಗ್ಗಿಂಯಾ ತಾನು ಸಾಯುವ ಒಂದು ವರ್ಷದ ಮೊದಲು ಪರಿ ಸ್ಥಾಪಕ-ಸಂಪಾದಕ ಪಿ ಸಾಯಿನಾಥ್ ಅವರೊಂದಿಗೆ ಮಾತನಾಡಿದರು. ಅವರು ತಮ್ಮ 95ನೇ ವಯಸ್ಸಿಗೆ ಎಂದರೆ 2022ರಲ್ಲಿ ನಿಧನರಾದರು.
ಆರು ಎಕರೆ ಭೂಮಿಯನ್ನು ಹೊಂದಿರುವ ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ಮಹಿವಾಲ್ ಅವರು ಮೊಹಾಲಿಯಲ್ಲಿ ತಮ್ಮ ಸಹೋದರಿಯನ್ನು ಭೇಟಿಯಾದ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗಲೂ ಅದೇ ಹೆಮ್ಮೆಯ ಭಾವ ಅವರ ಮಾತುಗಳಲ್ಲಿತ್ತು. “ಅವಳು ಮಾಡಿದ ಕೃತ್ಯದ ಬಗ್ಗೆ ಅವಳಾಗಲಿ ಅಥವಾ ನಾವಾಗಲಿ ಯಾವುದೇ ವಿಷಾದವನ್ನು ವ್ಯಕ್ತಪಡಿಸುವುದಿಲ್ಲ. ಆದ್ದರಿಂದ, ಈ ವಿಷಯದ ಕುರಿತು ಕ್ಷಮೆಯಾಚಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.
ಪಂಜಾಬ್ ರಾಜ್ಯದ ಇತ್ತೀಚಿನ ಇತಿಹಾಸವು ಸಹ ಇಂತಹ ವೈಯಕ್ತಿಕ ಪ್ರತಿಭಟನೆಯ ಕಥನಗಳನ್ನು ಹೊಂದಿವೆ. ರೈತರ ಆತ್ಮಹತ್ಯೆಗಳು, ಮಾದಕ ವ್ಯಸನ ಮತ್ತು ವ್ಯಾಪಕ ನಿರುದ್ಯೋಗದ ಅಲೆಯ ನಡುವೆ, 2014ರಲ್ಲಿ ಇಲ್ಲಿನ ಇಲ್ಲಿನ ಹತ್ತಿ ಬೆಳಯುವ ಪ್ರದೇಶದಲ್ಲಿ ಪ್ರಕ್ಷುಬ್ದತೆ ತಾಂಡವವಾಡುತ್ತಿತ್ತು. 2014ರ ಆಗಸ್ಟ್ 15ರಂದು ಆಗಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಖನ್ನಾ ಪಟ್ಟಣದಲ್ಲಿ ತ್ರಿವರ್ಣ ದ್ವಜ ಹಾರಿಸುವವರಿದ್ದರು. ಅಂದು ವಿಕ್ರಮ್ ಸಿಂಗ್ ಧನೌಲಾ ಕೂಡಾ ತಮ್ಮ ಗ್ರಾಮದಿಂದ ಖನ್ನಾ ಪಟ್ಟಣಕ್ಕೆ ಸುಮಾರು 100 ಕಿ.ಮೀ ಪ್ರಯಾಣಿಸಿದ್ದರು.
ಆ ದಿನ ಬಾದಲ್ ಆಗಷ್ಟೇ ಭಾಷಣ ಶುರು ಮಾಡಿದ್ದರು. ಇತ್ತ ಧನೌಲಾ ಅವರತ್ತ ಶೂ ಎಸೆದರು. "ನಾನು ಸುಲಭವಾಗಿ ಅವರ ಮುಖಕ್ಕೆ ಹೊಡೆಯಬಹುದಾಗಿತ್ತು ಆದರೆ ಉದ್ದೇಶಪೂರ್ವಕವಾಗಿ ಅದನ್ನು ವೇದಿಕೆಯ ಕಡೆಗೆ ಎಸೆದೆ. ನಕಲಿ ಬೀಜಗಳು ಮತ್ತು ಕೀಟನಾಶಕಗಳ ಮಾರಾಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರು ಮತ್ತು ನಿರುದ್ಯೋಗಿ ಯುವಕರ ಬೇಡಿಕೆಗಳಿಗೆ ಕಿವಿಗೊಡುವಂತೆ ಮಾಡಲು ಬಯಸಿದ್ದೆ.”
ಘಟನೆಯ ನಂತರ, ಈಗಲೂ ಬರ್ನಾಲಾ ಜಿಲ್ಲೆಯ ಧನೌಲಾ ಗ್ರಾಮದಲ್ಲಿ ವಾಸಿಸುತ್ತಿರುವ ಧನೌಲಾ 26 ದಿನಗಳನ್ನು ಜೈಲಿನಲ್ಲಿ ಕಳೆದರು. ಅವರಿಗೆ ತಾನು ಮಾಡಿದ ಕೃತ್ಯದ ಕುರಿತು ಪಶ್ಚತ್ತಾಪವಿದೆಯೇ? “ಕುಲ್ವಿಂದರ್ ಅವರ ಕೃತ್ಯವಿರಲಿ ಅಥವಾ 10 ವರ್ಷಗಳ ಹಿಂದೆ ನಾನು ಮಾಡಿದ ಕೃತ್ಯವಿರಲಿ ಅವು ನಮ್ಮ ದನಿಯನ್ನು ಯಾರೂ ಆಲಿಸದಿದ್ದಾಗ ಹುಟ್ಟುವಂತಹ ಪ್ರತಿಕ್ರಿಯೆಗಳು” ಎಂದು ಅವರು ಹೇಳಿದರು. ಬ್ರಿಟಿಷ್ ಸರ್ಕಾರದಿಂದ ಹಿಡಿದು ಇಂದಿನ ಬಿಜೆಪಿ ಸರ್ಕಾರದ ತನಕ ಪ್ರತಿ ಸಮಯದಲ್ಲೂ ಏಕಾಂಗಿ ದನಿಗಳು ಮುನ್ನೆಲೆಗೆ ಬಂದಿವೆ. ಮತ್ತು ಅವು ತನ್ನದೇ ಆದ ಪ್ರತಿಧ್ವನಿಯನ್ನೂ ಹೊಂದಿವೆ. ಈ ದನಿಗಳು ಪರಿಣಾಮಗಳನ್ನು ಲೆಕ್ಕಿಸದೆ ತಮ್ಮ ನೆಲೆಯಲ್ಲಿ ದೃಢವಾಗಿ ನಿಂತಿವೆ.
ಕಂಗನಾ ರಣಾವತ್ ಅವರ ಪಂಜಾಬಿನೊಂದಿಗಿನ ಸಂಬಂಧ 2020ರಲ್ಲಿ ಬಿಗಡಾಯಿಸಿತು. ರೈತ ಪ್ರತಿಭಟನೆ ಉತ್ತುಂಗದಲ್ಲಿದ್ದ ಸಮಯದಲ್ಲಿ ಕಂಗನಾ ನೀಡಿದ ಅವಹೇಳನಕಾರಿ ಹೇಳಿಕೆ ಪಂಜಾಬಿಗರನ್ನು ಕೆರಳಿಸಿತ್ತು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ (ನಂತರ 2021ರ ನವೆಂಬರ್ 19ರಂದು ಈ ಕಾನೂನುಗಳನ್ನು ಸರ್ಕಾರ ಹಿಂಪಡೆಯಿತು) ಹೋರಾಟ ನಡೆಸುತ್ತಿದ್ದ ಮಹಿಳೆಯರ ವಿರುದ್ಧ ಕಂಗನಾ ನಾಲಗೆ ಹರಿಯಬಿಟ್ಟಿದ್ದರು. “ಹ ಹ ಹ ಇದು ಟೈಮ್ ನಿಯತಕಾಲಿಕದಲ್ಲಿ ಅತ್ಯಂತ ಶಕ್ತಿಶಾಲಿ ಭಾರತೀಯಳಾಗಿ ಕಾಣಿಸಿಕೊಂಡಿದ್ದ ಅಜ್ಜಿ. ಆಕೆಗೆ 100 ರೂಪಾಯಿ ಕೊಟ್ಟರೆ ಪ್ರತಿಭಟನೆಗೆ ಬರುತ್ತಾಳೆ” ಎಂದು ಕಂಗನಾ ಗೇಲಿ ಮಾಡಿ ಟ್ವೀಟ್ ಮಾಡಿದ್ದರು.
ಪಂಜಾಬಿನ ಜನರು ಕಂಗನಾ ಆಡಿದ ಈ ಮಾತನ್ನು ಮರೆತಂತಿಲ್ಲ. ಆ ಮಾತು ಜೂನ್ 6ರಂದು ಮತ್ತೆ ಪ್ರತಿಧ್ವನಿಸಿತು. ಅಂದು “ರೈತರು 100, 200 ರೂಪಾಯಿಗಳ ಆಸೆಗಾಗಿ ದೆಹಲಿಯಲ್ಲಿ ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ಆಕೆ [ಕಂಗನಾ] ಹೇಳಿದ್ದರು. ಆ ಸಮಯದಲ್ಲಿ ನನ್ನ ತಾಯಿಯೂ ಅಲ್ಲಿದ್ದ ಹೋರಾಟಗಾರರ ನಡುವೆ ಇದ್ದರು” ಎಂದು ಕುಲ್ವಿಂದರ್ ಹೇಳಿದ್ದರು. ತಮಾಷೆಯೆಂದರೆ ಕಂಗನಾ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋವನ್ನು ಇದುವರೆಗೆ ಯಾರೂ ನೋಡಿಲ್ಲ. ಆದರೆ ಅಂದು ಏನೇ ನಡೆದಿದ್ದರೂ ಅದು ಜೂನ್ 6ರಂದು ಆರಂಭವಾಗಿದ್ದಲ್ಲ.
ಪಂಜಾಬಿನ ಇಂತಹ ವೈಯಕ್ತಿಕ ಪ್ರತಿರೋಧಗಳು ಬಹುತೇಕ ಜನಸಾಮನ್ಯ ಕುಟುಂಬಗಳಿಂದಲೇ ಎದುರಾಗಿವೆ
ಜೂನ್ 6ರಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ 'ಕಪಾಳಮೋಕ್ಷ' ವಿವಾದಕ್ಕೆ ಮೊದಲೇ, ಡಿಸೆಂಬರ್ 3, 2021ರಂದು, ಕಂಗನಾ ರಣಾವತ್ ಮನಾಲಿಯಿಂದ ಹಿಂದಿರುಗುತ್ತಿದ್ದಾಗ, ಅವರ ಕಾರು ಪಂಜಾಬ್ ಪ್ರವೇಶಿಸುತ್ತಿದ್ದಂತೆ ಮಹಿಳಾ ರೈತರು ಅವರನ್ನು ತಡೆದಿದ್ದರು. ಅಂದು ಕಂಗನಾಗೆ ತನ್ನ ಹೇಳಿಕೆಗೆ ಕ್ಷಮೆಯಾಚಿಸುವುದನ್ನು ಬಿಟ್ಟು ಬೇರೆ ಆಯ್ಕೆ ಉಳಿದಿರಲಿಲ್ಲ. ನಡೆಯುತ್ತಿರುವ ಈ ಸಂಘರ್ಷದಲ್ಲಿ, ಕುಲ್ವಿಂದರ್, ಅವರ ಸಹೋದರ ಶೇರ್ ಸಿಂಗ್ ಮಹಿವಾಲ್ ಮತ್ತು ಅವರ ಸಂಬಂಧಿಕರಿಗೆ, ಕುಟುಂಬದ ಪ್ರತಿಷ್ಠೆ ಮತ್ತು ಘನತೆಯಂತಹ ಗಂಭೀರ ಸಮಸ್ಯೆಗಳೂ ಇವೆ.
"ನಾವು ಹಲವಾರು ತಲೆಮಾರುಗಳಿಂದ ಭದ್ರತಾ ಪಡೆಗಳಿಗೆ ಸೇವೆ ಸಲ್ಲಿಸುತ್ತಿದ್ದೇವೆ" ಎಂದು ಮಹಿವಾಲ್ ಹೇಳಿದರು. "ಕುಲ್ವಿಂದರ್‌ಗೂ ಮೊದಲು ನನ್ನ ಅಜ್ಜನ ಕುಟುಂಬದ ಐವರು ಸದಸ್ಯರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅದರಲ್ಲಿ ನನ್ನ ಅಜ್ಜನೂ ಸೇರಿದ್ದರು. ಮತ್ತು ಅವರ ಐದು ಪುತ್ರರಲ್ಲಿ ಮೂವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಅವರು ಈ ರಾಷ್ಟ್ರಕ್ಕಾಗಿ 1965 ಮತ್ತು 1971ರ ಯುದ್ಧಗಳಲ್ಲಿ ಹೋರಾಡಿದ್ದರು. ನಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಕಂಗನಾ ಅವರಂತಹ ವ್ಯಕ್ತಿಗಳಿಂದ ನಮಗೆ ದೇಶಭಕ್ತಿಯ ಪ್ರಮಾಣಪತ್ರಗಳು ಬೇಕೆ?" ಎಂದು ಶೇರ್ ಸಿಂಗ್ ಮಹಿವಾಲ್ ಕೇಳುತ್ತಾರೆ.
ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ. ಸಿಐಎಸ್ಎಫ್ ಕಾನ್ಸ್ಟೇಬಲ್ ಹುದ್ದೆಯಲ್ಲಿ ಇರುವವರನ್ನೇ ಮದುವೆಯಾಗಿರುವ 35 ವರ್ಷದ ಈ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ, ಐದು ವರ್ಷದ ಹುಡುಗ ಮತ್ತು ಒಂಬತ್ತು ವರ್ಷದ ಬಾಲಕಿ. ಪ್ರಸ್ತುತ ಕುಲ್ವಿಂದರ್ ಸಿಐಎಸ್ಎಫ್ ಕೆಲಸವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಆದರೂ, ಪಂಜಾಬನ್ನು ಬಲ್ಲವರು ಹೇಳುವಂತೆ, ಇಂತಹ ವ್ಯಕ್ತಿಗತ ಪ್ರತಿಭಟನೆಯನ್ನು ತೋರಿದ ವ್ಯಕ್ತಿಗಳು ತಮ್ಮ ಕ್ರಿಯೆಯ ಪರಿಣಾಮದ ಭಾರವನ್ನು ಹೊತ್ತಿದ್ದಾರೆ. ಆದರೆ ಅವರ ಈ ವ್ಯಕ್ತಿಗತ ಧೈರ್ಯ ಜನರ ನಾಳೆಗಳ ಕುರಿತು ಭರವಸೆಯನ್ನು ಹುಟ್ಟಿಸಿವೆ. "ಜೋಗಾ ಮತ್ತು ಕೌರ್ ಇಬ್ಬರೂ ನಮ್ಮ ಕನಸುಗಳು ಇನ್ನೂ ಜೀವಂತವಾಗಿವೆ ಎನ್ನುವುದರ ಸಂಕೇತ" ಎಂದು ಆರು ದಶಕಗಳ ಹಿಂದೆ ಜಾಗೀರ್ ಸಿಂಗ್ ಜೋಗಾ ಅವರೊಂದಿಗೆ ಸೇರಿ ಕೆಲಸ ಮಾಡಿದ್ದ ಮಾಜಿ ಸಿಪಿಐ ಶಾಸಕರಾದ ಹರ್ದೇವ್ ಸಿಂಗ್ ಅರ್ಶಿ ಹೇಳುತ್ತಾರೆ. ಅರ್ಶಿ ಜಾಗೀರ್ ಸಿಂಗ್ ಅವರ ಜೋಗಾ ಗ್ರಾಮದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ದಾತೇವಾಸ್ ಗ್ರಾಮದವರು. ಇವೆರಡೂ ಇಂದಿನ ಮಾನ್ಸಾ ಜಿಲ್ಲೆಗೆ ಸೇರಿವೆ.
ನಭಾ ಜೈಲಿನಿಂದಲೇ ಜೋಗಾ 1954ರಲ್ಲಿ ಪಂಜಾಬ್ ವಿಧಾನಸಭೆಗೆ ಆಯ್ಕೆಯಾದರು. ಸುರ್ಜೀತ್, ಭಗತ್ ಸಿಂಗ್ ಝುಗ್ಗಿಂಯಾ ಮತ್ತು ಪ್ರೇಮ್ ದತ್ತ ವರ್ಮಾ ಅವರು ಪಂಜಾಬಿನ ವೈಯಕ್ತಿಕ ಪ್ರತಿಭಟನೆ ಮತ್ತು ಅದರ ಹೋರಾಟದ ಜಾನಪದದ ಭಾಗವಾಗಿದ್ದಾರೆ.
ಪ್ರತಿಯೊಬ್ಬ ಏಕಾಂಗಿ ಪ್ರತಿಭಟನೆಕಾರರೂ ತಮ್ಮ ಕ್ರಿಯೆಯ ಪರಿಣಾಮವನ್ನು ಎದುರಿಸಿದ್ದಾರೆ, ಆದರೆ ಅವರ ಈ ವೈಯಕ್ತಿಕ ಧೈರ್ಯ ಸಮಾಜಕ್ಕೆ ಬೆಳಕನ್ನು ನೀಡಿದೆ
ಕುಲ್ವಿಂದರ್ ಕೌರ್ ಅವರನ್ನು ಬೆಂಬಲಿಸಿ ಪಂಜಾಬ್ ಮತ್ತು ಚಂಡೀಗಢ ಪ್ರದೇಶಗಳಲ್ಲಿ ಮೆರವಣಿಗೆಗಳು ಮತ್ತು ಸಭೆಗಳು ನಡೆಯುತ್ತಿವೆ ಮತ್ತು ಅವು ಮುಂದುವರಿಯುತ್ತಿವೆ. ಇಲ್ಲಿನ ಬಹುಪಾಲು ಜನರು ಕಪಾಳಮೋಕ್ಷದ ಘಟನೆಯನ್ನು ಆಚರಿಸಿಲ್ಲ ಅಥವಾ ಇದು ಸರಿಯಾದ ಕೆಲಸ ಎಂದು ಸಮರ್ಥಿಸಿಕೊಂಡಿಲ್ಲ. ಪಂಜಾಬಿನ ರೈತರ ಘನತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಓರ್ವ ಮಹಿಳಾ ಕಾನ್ಸ್ಟೇಬಲ್ ಪ್ರಬಲ ಸೆಲೆಬ್ರಿಟಿ ಮತ್ತು ಸಂಸದರ ಎದುರು ನಿಂತು ಧೈರ್ಯವಾಗಿ ಪ್ರತಿರೋಧ ತೋರಿದ್ದನ್ನು ಜನರು ಹೊಗಳುತ್ತಿದ್ದಾರೆ. ಸರಳವಾಗಿ ಹೇಳುವುದಾದರೆ, ಕುಲ್ವಿಂದರ್ ಅವರ ಕ್ರಿಯೆಯನ್ನು ಇಲ್ಲಿನ ಜನರು ತಮ್ಮ ರಾಜ್ಯದ ಪ್ರತಿರೋಧದ ಇತಿಹಾಸದ ಮುಂದುವರಿಕೆಯಾಗಿ ನೋಡುತ್ತಾರೆ.
ಈ ಇಡೀ ಎಪಿಸೋಡ್ ರಾಜ್ಯಾದ್ಯಂತ ಕವಿತೆಗಳು, ಹಾಡುಗಳು, ಮೀಮ್ ಮತ್ತು ವ್ಯಂಗ್ಯಚಿತ್ರಗಳ ಸುರಿಮಳೆಯನ್ನು ಹುಟ್ಟುಹಾಕಿದೆ. ಇಂದು, ಪರಿ ಆ ಕವಿತೆಗಳಲ್ಲಿ ಒಂದನ್ನು ಈ ವರದಿಯೊಂದಿಗೆ ಪ್ರಕಟಿಸುತ್ತಿದೆ: ಕವಿ ಸ್ವರಾಜ್‌ಬೀರ್ ಸಿಂಗ್, ಪ್ರಸಿದ್ಧ ನಾಟಕಕಾರ ಮತ್ತು ಪಂಜಾಬಿ ಟ್ರಿಬ್ಯೂನ್ ಪತ್ರಿಕೆಯ ಮಾಜಿ ಸಂಪಾದಕ
ಕುಲ್ವಿಂದರ್ ಕೌರ್ ಅವರು ಭದ್ರತಾ ಪಡೆಯಲ್ಲಿನ ಕೆಲಸ ಕಳೆದುಕೊಳ್ಳಬಹುದು - ಬಹುಮಾನಗಳು, ಕಾನೂನು ನೆರವು ಮತ್ತು ಅವರ ಬೆಂಬಲಕ್ಕೆ ಪ್ರತಿಭಟನೆಗಳ ಪ್ರವಾಹದ ನಡುವೆಯೂ. ಆದರೆ, ಜೋಗಾ ಅವರಂತೆ, ಇವರಿಗೂ ಪಂಜಾಬ್ ವಿಧಾನಸಭೆಯಲ್ಲಿ ಇನ್ನೂ ದೊಡ್ಡ ಕೆಲಸ ಕಾದಿರಬಹುದು – ಏಕೆಂದರೆ ಈ ರಾಜ್ಯದಲ್ಲಿ ಐದು ಕ್ಷೇತ್ರಗಳ ಉಪಚುನಾವಣೆಗಳು ಹತ್ತಿರದಲ್ಲಿವೆ. ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಆಶಯ ಪಂಜಾಬಿನ ಜನರದ್ದು.
___________________________________________________
ಹೇಳು ಅಮ್ಮ
(ಸ್ವರಾಜ್‌ಬೀರ್)
ಹೇಳು ತಾಯಿ ಹೇಳು
ಪ್ರಶ್ನೆಗಳು ಏಳುತ್ತವೆ ನನ್ನೆದೆಯಲ್ಲಿ
ನಿನ್ನ ಮನಸ್ಸಿನೊಳಗೆ ಏನಿರಬಹುದು
ಎನ್ನುವುದ ನೆನದು
ಜ್ವಾಲಾಮುಖಿ ಏಳುತ್ತದೆ ನನ್ನೆದೆಯಲ್ಲಿ.
ಹೇಳು ತಾಯಿ ಹೇಳು
ನಮ್ಮ ಬೀದಿಗಳಲ್ಲಿ ದರ್ಬಾರು ನಡೆಸುವವರು ಯಾರು?
ದಿನ ದಿನವೂ ಇಲ್ಲಿ ಕಪಾಳಕ್ಕೆ ಬಾರಿಸುವವರು ಯಾರು?
ಟಿವಿ ಪರದೆಗಳ ಮೇಲೆ ಕಿರುಚುವವರು ಯಾರು?
ನಾವು ಧನವಂತರ ಹೊಡೆತಗಳನ್ನು ಸಹಿಸುತ್ತೇವೆ
ನೆಲಕ್ಕೆ ಕುಸಿದು, ಹಲ್ಲು ಕಚ್ಚಿ ನೋವು ಸಹಿಸುತ್ತೇವೆ.
ಸರ್ಕಾರ ಸುಳ್ಳೇ ನ್ಯಾಯದ ಭರವಸೆ ನೀಡುತ್ತದೆ.
ಆದರೆ ಕೆಲವೊಮ್ಮೆ,
ಹೌದು ಬಹಳ ಅಪರೂಪಕ್ಕೆಂಬಂತೆ,
ಬಡ ಹುಡುಗಿಯೊಬ್ಬಳು ಸಿಡಿದು ನಿಲ್ಲುತ್ತಾಳೆ
ತನ್ನೆದೆಯೊಳಗಿನ ಆಕ್ರೋಶ ಉಕ್ಕಿ ಹರಿದು.
ಅವಳು ತನ್ನ ಕೈ ಎತ್ತುತ್ತಾಳೆ
ಎತ್ತಿದ ಕೈಯನ್ನು ಬೀಸುತ್ತಾಳೆ
ದುರಹಂಕಾರಿ ಪ್ರಭುತ್ವದ ಕೆನ್ನೆಗೆ.
ಅಮ್ಮಾ, ಇದು ಇದೊಂದು ಹೊಡೆತವಲ್ಲ
ಇದು ನನ್ನೊಳಗಿನ ಹತಾಶೆಯ ರೂಪ
ನನ್ನೊಳಗಿನ ನೋವಿನ ಪ್ರತಿರೂಪ.
ಕೆಲವರು ಇದನ್ನು ಸರಿಯೆನ್ನುತ್ತಾರೆ,
ಇನ್ನೂ ಕೆಲವರು ತಪ್ಪೆನ್ನುತ್ತಾರೆ.
ಕೆಲವರು ಪ್ರತಿರೋಧವೆನ್ನುತ್ತಾರೆ,
ಇನ್ನೂ ಕೆಲವರು ಅವಿಧೇಯತೆಯೆನ್ನುತ್ತಾರೆ
ಆದರೆ, ನನ್ನ ಹೃದಯ ನಿನಗಾಗಿ ಹಂಬಲಿಸುತ್ತಿದೆ.
ಬಲಾಢ್ಯರು ಬೆದರಿಸಿದರು ನಿನ್ನನ್ನು ಮತ್ತು ನಿನ್ನ ಜನರನ್ನು.
ಬಲಾಢ್ಯರು ನಿನಗೆ ಸವಾಲೆಸೆದರು.
ಅದೇ ಬಲಾಢ್ಯರು ನನಗೂ ನೋವು ಕೊಟ್ಟರು.
ಅಮ್ಮಾ, ನಾನು ಕಾಯುತ್ತಿರುವುದು ನಿನಗಾಗಿ ಮಾತ್ರ
ನಿನ್ನ ದನಿಗಾಗಿ ಮಾತ್ರ
ಇದನ್ನು ಸಭ್ಯತೆಯೆನ್ನು ಅಥವಾ ಅಸಭ್ಯತೆಯೆನ್ನು
ನನ್ನ ಹೃದಯ ಮಿಡಿಯುವುದು ನಿನಗಾಗಿ ಮಾತ್ರ
ಕೆಲವರು ಇದನ್ನು ತಪ್ಪೆನ್ನುತ್ತಾರೆ
ಇನ್ನೂ ಕೆಲವರು ಸರಿಯೆನ್ನುತ್ತಾರೆ.
ಅಮ್ಮಾ, ಯಾರು ಏನೆಂದರೂ
ಈ ನನ್ನ ಪುಟ್ಟ ಹೃದಯ
ಪ್ರತಿರೋಧದಿಂದ ತುಂಬಿದ ಹೃದಯ
ಮಿಡಿಯುವುದೇನಿದ್ದರೂ ನಿನಗಾಗಿ ಮಾತ್ರ
ಓ ಅಮ್ಮಾ, ಅದು ನಿನಗಾಗಿ ಮಾತ್ರ.
(ಇಂಗ್ಲಿಷ್ ಅನುವಾದ: ಚರಣ್‌ಜಿತ್ ಸೋಹಲ್)
ಸ್ವರಾಜ್‌ಬೀರ್ ಓರ್ವ ನಾಟಕಕಾರ, ಪತ್ರಕರ್ತ ಮತ್ತು ಪಂಜಾಬಿ ಟ್ರಿಬ್ಯೂನ್ ಪತ್ರಿಕೆಯ ಮಾಜಿ ಸಂಪಾದಕ
ಅನುವಾದ: ಶಂಕರ. ಎನ್. ಕೆಂಚನೂರು