ಪ್ರಕಾಶ್ ಬುಂದಿವಾಲ್ ತಮ್ಮ ಪನ್ವಾರಿಯಲ್ಲಿ ನಿಂತು ನಮ್ಮೊಡನೆ ಮಾತನಾಡುತ್ತಿದ್ದಾರೆ. ಅವರ ವೀಳ್ಯದೆಲೆ ತೋಟದಲ್ಲಿನ ಪಾನ್ (ವೀಳ್ಯದೆಲೆಗಳು) ಬಿದಿರಿನ ಗಳಗಳ ಮೇಲೆ ದಟ್ಟವಾಗಿ ಹರಡಿದ್ದವು. ಅವುಗಳನ್ನು ಜೋರು ಬಿಸಿಲು ಮತ್ತು ಗಾಳಿಯಿಂದ ರಕ್ಷಿಸುವ ಸಲುವಾಗಿ ಅವುಗಳ ಮೇಲೆ ಸಿಂಥೆಟಿಕ್ ಬಲೆಯನ್ನು ಹೊದೆಸಲಾಗಿದೆ.
ಭಾರತದಲ್ಲಿ ಊಟದ ನಂತರ ಎಲೆಯಡಿಕೆ ತಿನ್ನುವ ಹವ್ಯಾಸ ಸರ್ವೇ ಸಾಮಾನ್ಯ. ಈ ಎಲೆಯಡಿಕೆಯಲ್ಲಿ ತಯಾರಿಸಲು ಪಾನ್ ಅಥವಾ ಎಲೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಬೀಡಾ ಅಥವಾ ಪಾನ್ ಮೊದಲಿಗೆ ವೀಳ್ಯದೆಲೆಯ ಮೇಲೆ ಸುಣ್ಣು ಮತ್ತು ಕಾಚನ್ನು ಹಚ್ಚಲಾಗುತ್ತದೆ. ನಂತರ ಅದರ ಹಲವು ಬಗೆಯ ಬೀಜಗಳು, ಸೋಂಪು, ಅಡಿಕೆ, ಗುಲ್ಕಂದ್ ಬಳಸಲಾಗುತ್ತದೆ. ಇವೆಲ್ಲವೂ ಸೇರಿ ಬೀಡಾಕ್ಕೆ ರಸಭರಿತ ರುಚಿ ಮತ್ತು ಪರಿಮಳವನ್ನು ಒದಗಿಸುತ್ತವೆ.
11,956 ಜನರಿರುವ ಈ ಗ್ರಾಮವು ಉತ್ತಮ ಗುಣಮಟ್ಟದ ವೀಳ್ಯದೆಲೆಗೆ ಹೆಸರುವಾಸಿಯಾಗಿದೆ. ಪ್ರಕಾಶ್ ಅವರ ಕುಟುಂಬವೂ ಕುಕ್ಕಡೇಶ್ವರದ ಇತರ ಅನೇಕರಂತೆ, ತಮಗೆ ನೆನಪಿರುವ ಕಾಲದಿಂದಲೂ ವೀಳ್ಯದೆಲೆ ಬೇಸಾಯದಲ್ಲಿ ತೊಡಗಿಕೊಂಡಿದೆ. ಅವರು ಮಧ್ಯಪ್ರದೇಶದಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗ) ಎಂದು ಪಟ್ಟಿ ಮಾಡಲಾಗಿರುವ ತಂಬೋಲಿ ಸಮುದಾಯಕ್ಕೆ ಸೇರಿದವರು. ಪ್ರಸ್ತುತ ಬದುಕಿನ ಅರವತ್ತು ವಸಂತಗಳನ್ನು ದಾಟಿರುವ ಪ್ರಕಾಶ್ ಅವರು ತಮ್ಮ ಒಂಬತ್ತನೇ ವಯಸ್ಸಿನಿಂದ ಪನ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆದರೆ ಬುಂದಿವಾಲ್ ಅವರ 0.2 ಎಕರೆ ವಿಸ್ತೀರ್ಣದ ಹೊಲದಲ್ಲಿ ಪರಿಸ್ಥಿತಿ ಒಂದಿಷ್ಟೂ ಸರಿಯಿಲ್ಲ. 2023ರ ಮೇ ತಿಂಗಳಿಲ್ಲ ಬೀಸಿದ ಬಿಪರ್ಜಾಯ್ ಚಂಡಮಾರುತವು ಅವರ ತೋಟದಲ್ಲಿ ವಿನಾಶವನ್ನೇ ಸೃಷ್ಟಿಸಿ ಹೋಗಿದೆ. “ನಮಗೆ ಯಾವುದೇ ವಿಮೆಯ ರಕ್ಷಣೆ ಲಭ್ಯವಿಲ್ಲ. ಚಂಡಮಾರುತದಿಂದಾಗಿ ಇರುವುದೆಲ್ಲವನ್ನೂ ಕಳೆದುಕೊಂಡು ಕುಳಿತಿದ್ದರೂ ಸರ್ಕಾರ ನಮಗೆ ಯಾವುದೇ ಸಹಾಯ ನೀಡಿಲ್ಲ” ಎಂದು ಅವರು ಹೇಳುತ್ತಾರೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎನ್ಎಐಎಸ್) ಅಡಿಯಲ್ಲಿ ಹಲವಾರು ಕೃಷಿ ಉತ್ಪನ್ನಗಳಿಗೆ ಹವಾಮಾನ ಸಂಬಂಧಿತ ವಿಮೆಯನ್ನು ಒದಗಿಸುತ್ತದೆ, ಆದರೆ ಈ ಯೋಜನೆಯ ವ್ಯಾಪ್ತಿಯಡಿ ವೀಳ್ಯದೆಲೆ ಬರುವುದಿಲ್ಲ.
ವೀಳ್ಯದೆಲೆ ಸಾಕಷ್ಟು ಶ್ರಮವನ್ನು ಬೇಡುವ ಬೆಳೆ: ”ಪನ್ವಾರಿಯಲ್ಲಿ ಕೆಲಸ ಬಹಳವಿರುತ್ತದೆ. ದಿನವಿಡೀ ಮಾಡಿದರೂ ಮುಗಿಯುವುದಿಲ್ಲ. ಎಂದು ಪ್ರಕಾಶ್ ಅವರ ಪತ್ನಿ ಆಶಾಬಾಯಿ ಬುಂದಿವಾಲ್ ಹೇಳುತ್ತಾರೆ. ದಂಪತಿಗಳು ಪ್ರತಿ ಮೂರು ದಿನಕ್ಕೊಮ್ಮೆ ಬೆಳೆಗೆ ನೀರು ಹಾಯಿಸುತ್ತಾರೆ. ಪ್ರಕಾಶ್ ಹೇಳುತ್ತಾರೆ, "ಕೆಲವು ರೈತರು [ಹೊಲಗಳಿಗೆ ನೀರಾವರಿ ಮಾಡಲು] ಹೊಸ ತಾಂತ್ರಿಕವಾಗಿ ಮುಂದುವರಿದ ಯಂತ್ರಗಳನ್ನು ಬಳಸುತ್ತಾರೆ, ಆದರೆ ನಮ್ಮಲ್ಲಿ ಹೆಚ್ಚಿನವರು ಇನ್ನೂ ಸಾಂಪ್ರದಾಯಿಕ ಮಡಕೆಯನ್ನು ಅವಲಂಬಿಸಿದ್ದಾರೆ."
ಪ್ರತಿ ವರ್ಷದ ಮಾರ್ಚ್ ತಿಂಗಳಿನಲ್ಲಿ ವೀಳ್ಯದ ಬಳ್ಳಿಗಳನ್ನು ನೆಡಲಾಗುತ್ತದೆ. “ಈ ಮಣ್ಣಿಗೆ ಮನೆಯಲ್ಲೇ ಸಿಗುವ ವಸ್ತುಗಳಾದ ಮಜ್ಜಿಗೆ, ಉದ್ದಿನ ಬೇಳೆ ಮತ್ತು ಸೋಯಾಬೀನ್ ಹಿಟ್ಟನ್ನು ಮಿಶ್ರಣ ಮಾಡಲಾಗುತ್ತದೆ. ಮೊದಲು ತುಪ್ಪವನ್ನು ಸಹ ಬಳಸುತ್ತಿದ್ದೆವು. ಆದರೆ ಈಗ ಅದರ ಬೆಲೆ ದುಬಾರಿಯಾಗಿರುವುದರಿಂದಾಗಿ ಬಳಸಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಪ್ರಕಾಶ್.
ಪನ್ವಾರಿಯಲ್ಲಿ ಬೇಲ್ (ಬಳ್ಳಿ) ಕತ್ತರಿಸುವುದು ಮತ್ತು ದಿನಾಲು ಸುಮಾರು 5,000 ಎಲೆಗಳನ್ನು ಕೀಳುವುದು ಬಹುತೇಕ ಮಹಿಳೆಯರ ಕೆಲಸ. ಇದರೊಂದಿಗೆ ಸಿಂಥೆಟಿಕ್ ಬಲೆಗಳನ್ನು ಹೊಲಿಯುವುದು ಮತ್ತು ಬಿದಿರಿನ ಗಳಗಳನ್ನು ಬಳ್ಳಿಗೆ ಬೆಂಬಲವಾಗಿ ಕೊಡುವ ಕೆಲಸವನ್ನು ಸಹ ಮಾಡುತ್ತಾರೆ.
“ಇದರಲ್ಲಿ ಹೆಂಗಸರಿಗೆ ಗಂಡಸರು ಮಾಡುವುದರ ಎರಡು ಪಟ್ಟು ಕೆಲಸವಿರುತ್ತದೆ” ಎನ್ನುತ್ತಾರೆ ದಂಪತಿಯ ಸೊಸೆ ರಾನು ಬುಂದಿವಾಲ್. 30 ವರ್ಷ ಪ್ರಾಯದ ಈ ಮಹಿಳೆ ತಾನು ಹನ್ನೊಂದು ವರ್ಷದವರಿದ್ದಾಗಿನಿಂದ ಪನ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾವು ಬೆಳಗಿನ ಜಾವ 4 ಗಂಟೆಗೆ ಎದ್ದು ಮನೆಗೆಲಸಗಳನ್ನು ಮುಗಿಸಿಕೊಳ್ಳಬೇಕು. ಇದರಲ್ಲಿ ಮನೆ ಸ್ವಚ್ಛ ಮಾಡುವುದು ಮತ್ತು ಅಡುಗೆ ಮಾಡುವುದು ಕೂಡಾ ಸೇರಿದೆ.” ಜೊತೆಗೆ ಹೊಲಕ್ಕೆ ಊಟವನ್ನು ಸಹ ಒಯ್ಯಬೇಕು.
2000ದ ದಶಕದ ಆರಂಭದಲ್ಲಿ ಪನ್ವಾರಿಯನ್ನು "ನೀರು ಮತ್ತು ಗುಣಮಟ್ಟದ ಮಣ್ಣಿನ ಕೊರತೆಯಿಂದಾಗಿ, ಮನೆಯಿಂದ 6-7 ಕಿ.ಮೀ ದೂರದಲ್ಲಿರುವ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಿದೆವು" ಎಂದು ಪ್ರಕಾಶ್ ಹೇಳುತ್ತಾರೆ.
ಅವರು ಬೀಜಗಳು, ನೀರಾವರಿ ಮತ್ತು ಸಾಂದರ್ಭಿಕವಾಗಿ ಕೂಲಿಗಾಗಿ ಎರಡು ಲಕ್ಷದವರೆಗೆ ಖರ್ಚು ಮಾಡುತ್ತಾರೆ. "ಕೆಲವೊಮ್ಮೆ, ಅದರ ನಂತರ [ಒಂದು ವರ್ಷದಲ್ಲಿ] 50,000 ರೂಪಾಯಿಗಳನ್ನು ಗಳಿಸುವುದು ಕೂಡಾ ಕಷ್ಟವಾಗುತ್ತಿದೆ" ಎಂದು ಪ್ರಕಾಶ್ ಹೇಳುತ್ತಾರೆ. ಅವರು ಹೆಚ್ಚುವರಿಯಾಗಿ 0.1 ಎಕರೆ ಭೂಮಿಯನ್ನು ಹೊಂದಿದ್ದಾರೆ, ಅಲ್ಲಿ ಅವರು ತಮ್ಮ ಆದಾಯಕ್ಕೆ ಪೂರಕವಾಗಿ ಗೋಧಿ ಮತ್ತು ಕೆಲವು ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ.
ಮಂಡಿಯಲ್ಲಿ ಮಾರಾಟ ಮಾಡಲು ಕುಟುಂಬವು ಹಾನಿಗೊಳಗಾದ ಎಲೆಗಳ ರಾಶಿಯಿಂದ ಉತ್ತಮ ಎಲೆಗಳನ್ನು ಬೇರ್ಪಡಿಸಿ ಜೋಡಿಸಿಡುತ್ತದೆ ಎಂದು ರಾನು ಹೇಳುತ್ತಾರೆ. "ಎಲೆಯನ್ನು ವಿಂಗಡಿಸುವ ಕೆಲಸ ಸಾಮಾನ್ಯವಾಗಿ ಪ್ರತಿದಿನ ಮಧ್ಯರಾತ್ರಿಯವರೆಗೆ ನಡೆಯುತ್ತದೆ, ಮತ್ತು ಕೆಲವೊಮ್ಮೆ ನಾವು ಮುಂಜಾನೆ 2 ಗಂಟೆಯವರೆಗೆ ಕೆಲಸ ಮಾಡುತ್ತೇವೆ" ಎಂದು ಆಶಾಬಾಯಿ ಹೇಳುತ್ತಾರೆ.
ಪ್ರತಿದಿನ ಬೆಳಿಗ್ಗೆ 6:30 ರಿಂದ 7:30 ರವರೆಗೆ ನಡೆಯುವ ಮಂಡಿಯಲ್ಲಿ ಎಲೆಗಳನ್ನು 100ರ ಕಟ್ಟುಗಳಲ್ಲಿ ಮಾರಲಾಗುತ್ತದೆ. “ಮಂಡಿಗೆ ಸುಮಾರು 100 ಮಾರಾಟಗಾರರು ಬರುತ್ತಾರೆ. ಆದರೆ ಖರೀದಿದಾರರು ಇರುವುದು 8-10 ಜನ ಮಾತ್ರ” ಎಂದು ಮಂಡಿಗೆ ಎಲೆ ಮಾರಲು ಬಂದಿದ್ದ ಸುನಿಲ್ ಮೋದಿ ಮಾಹಿತಿ ನೀಡಿದರು. ಎಲೆಗಳು ಸಾಮಾನ್ಯವಾಗಿ 2-3 ದಿನಗಳ ನಂತರ ಬಾಡಿ ಹೋಗುತ್ತವೆ, ಹೀಗಾಗಿ “ನಾವು ಅವುಗಳನ್ನು ಆ ಕೂಡಲೇ ಮಾರಲೇಬೇಕಾದ ಸ್ಥಿತಿಯಲ್ಲಿರುತ್ತೇವೆ” ಎಂದು 32 ವರ್ಷದ ಅವರು ಹೇಳುತ್ತಾರೆ.
“ಇಂದು ಬೆಲೆ ಸ್ವಲ್ಪ ಪರವಾಗಿಲ್ಲ. ಕಟ್ಟಿಗೆ 50 ರೂಪಾಯಿಯಷ್ಟಿತ್ತು. ಇದು ಸಾಮಾನ್ಯ ಬೆಲೆಗಿಂತ ಹೆಚ್ಚು” ಎಂದು ಸುನಿಲ್ ಹೇಳುತ್ತಾರೆ. “ಮದುವೆ ಹಂಗಾಮಿನಲ್ಲಿ ಈ ಕಸುಬು ಹೆಚ್ಚು ಲಾಭದಾಯಕವಾಗಿರುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸುವ ಕಾರಣ ಪೂಜೆಗಳಲ್ಲೂ ಬಳಸಲಾಗುತ್ತದೆ. ಜನರು ಮದುವೆಗಳಲ್ಲಿ ಪಾನ್ ಸ್ಟಾಲ್ ಕೂಡಾ ವ್ಯವಸ್ಥೆ ಮಾಡುವುದರಿಂದಾಗಿ ಈ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಆದರೆ ಇದು ಅಲ್ಪಾವಧಿಯ ಅವಕಾಶ. ಉಳಿದಂತೆ ಇದರ ವ್ಯವಹಾರ ನೀರಸವಾಗಿರುತ್ತದೆ” ಹೇಳುತ್ತಾರೆ ಸುನಿಲ್. ಇದೆಲ್ಲದರ ಜೊತೆಗೆ ಇದು ಹಂಗಾಮಿನ ಮೇಲೆ ಅವಲಂಬಿತವಾಗಿರುವ ಬೆಳೆಯೂ ಹೌದು.
ಈಗ ತಂಬಾಕು ಪ್ಯಾಕೇಟುಗಳು ಸುಲಭವಾಗಿ ಲಭ್ಯವಾಗುತ್ತಿರುವುದರಿಂದಾಗಿ “ಅಷ್ಟಾಗಿ ಯಾರೂ ಪಾನ್ ಖರಿದಿಸಬಯಸುವುದಿಲ್ಲ” ಎನ್ನುತ್ತಾರೆ ಪ್ರಕಾಶ್. ಒಂದು ಪಾನ್ ಬೆಲೆ 25-30 ರೂಪಾಯಿಗಳಷ್ಟಿದ್ದು, ಈ ಮೊತ್ತದಲ್ಲಿ ಐದು ತಂಬಾಕಿನ ಪ್ಯಾಕೇಟುಗಳನ್ನು ಖರೀದಿಸಬಹುದು. “ಪಾನ್ ಬಹಳಷ್ಟು ಆರೋಗ್ಯ ಸಂಬಂಧಿ ಪ್ರಯೋಜನಗಳನ್ನು ಹೊಂದಿದೆಯಾದರೂ ಜನರು ತಂಬಾಕಿನತ್ತಲೇ ಹೆಚ್ಚು ಸೆಳೆಯಲ್ಪಡುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ.
ಸೌರಭ್ ತೋಡಾವಾಲ್ ಈ ಹಿಂದೆ ವೀಳ್ಯದೆಲೆ ಕೃಷಿಕರಾಗಿದ್ದರು ಆದರೆ ಅಸ್ಥಿರ ಆದಾಯದಿಂದ ನಿರಾಶೆಗೊಂಡು 2011ರಲ್ಲಿ ವೃತ್ತಿಯನ್ನು ತೊರೆದು ಈಗ ಸಣ್ಣ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅದರಿಂದ ಅವರು ವರ್ಷಕ್ಕೆ 1.5 ಲಕ್ಷ ರೂ.ಗಳವರೆಗೆ ಗಳಿಸುತ್ತಾರೆ, ಇದು ಅವರು ಓರ್ವ ವೀಳ್ಯದೆಲೆ ರೈತನಾಗಿ ಗಳಿಸುತ್ತಿದ್ದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು.
ವಿಷ್ಣು ಪ್ರಸಾದ್ ಮೋದಿ 10 ವರ್ಷಗಳ ಹಿಂದೆ ವೀಳ್ಯದೆಲೆ ಕೃಷಿ ಬಿಟ್ಟು ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಸೇರಿಕೊಂಡರು. ವೀಳ್ಯದೆಲೆ ಕೃಷಿ ಲಾಭದಾಯಕವಲ್ಲ ಎಂದು ಅವರು ಹೇಳುತ್ತಾರೆ: "[ವೀಳ್ಯದೆಲೆ] ಕೃಷಿಗೆ ಸೂಕ್ತ ಸಮಯವಿಲ್ಲ. ಬೇಸಿಗೆಯಲ್ಲಿ, ಎಲೆಗಳು [ಬಿಸಿ ಗಾಳಿ] ಯಿಂದ ಬಳಲುತ್ತವೆ, ಮತ್ತು ಚಳಿಗಾಲದಲ್ಲಿ, [ಬಳ್ಳಿ] ಕನಿಷ್ಠ ಬೆಳವಣಿಗೆ ಹೊಂದಿರುತ್ತದೆ. ಮಾನ್ಸೂನ್ ಸಮಯದಲ್ಲಿ, ಭಾರಿ ಮಳೆ ಮತ್ತು ಬಿರುಗಾಳಿಯಿಂದ ಎಲೆಗಳು ಹಾನಿಗೊಳಗಾಗುವ ಸಂಭವ ಸದಾ ಇರುತ್ತದೆ.
ಏಪ್ರಿಲ್ 2023ರಲ್ಲಿ ಬನಾರಸಿ ವೀಳ್ಯದೆಲೆ ಜಿಐ (ಭೌಗೋಳಿಕ ಗುರುತಿಸುವಿಕೆ) ಟ್ಯಾಗ್ ಪಡೆದ ವಿಷಯದತ್ತ ಗಮನ ಸೆಳೆಯುತ್ತಾ, ಪ್ರಕಾಶ್ ಅವರ ಮಗ ಪ್ರದೀಪ್, "ಸರ್ಕಾರ ನಮ್ಮೂರಿನ ವೀಳ್ಯದೆಲೆಗೂ ಜಿಐ ಟ್ಯಾಗ್ ನೀಡಿದರೆ ನಮ್ಮ ವ್ಯವಹಾರದಲ್ಲಿ ಗಮನಾರ್ಹ ಬದಲಾವಣೆ ಕಂಡು ಬರುತ್ತದೆ" ಎನ್ನುತ್ತಾರೆ. ಅವರು ಸಹ ವೀಳ್ಯದೆಲೆ ಬೆಳೆಗಾರರಾಗಿ ತೊಡಗಿಸಿಕೊಂಡಿದ್ದಾರೆ.
ಅನುವಾದಕರು: ಶಂಕರ ಎನ್ ಕೆಂಚನೂರು