70 ವರ್ಷ ಬಲದೇವ್ ಕೌರ್ ಅವರು ಒಂದು ಕಾಲದಲ್ಲಿ ತಮ್ಮ ಕುಟುಂಬವು ನಿರ್ಮಿಸಿದ್ದ ಮನೆಯ ಅವಶೇಷಗಳನ್ನು ಬದಿಗೆ ಸರಿಸುತ್ತಾ ದಾರಿ ಮಾಡಿಕೊಂಡರು. ಅಳಿದುಳಿದು ಬೀಳದೆ ನಿಂತ ಕೋಣೆಗಳ ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಕಾಣುತ್ತಿದ್ದವು.
“ಜೋರು ಮಳೆ ಮತ್ತು ಆಲಿಕಲ್ಲು ಮನೆಯ ಛಾವಣಿಗೆ ಅಪ್ಪಳಿಸಿದ ದಿನ ನಾವೆಲ್ಲ ರಾತ್ರಿಯಿಡೀ ಎದ್ದು ಕುಳಿತಿದ್ದೆವು. ಹೊರಗೆ ಏನಾಗುತ್ತಿಯೆನ್ನುವುದರ ಕುರಿತು ನಮಗೆ ಸ್ಪಷ್ಟತೆ ಇದ್ದಿರಲಿಲ್ಲ.” ಎನ್ನುತ್ತಾರೆ ಬಲದೇವ್. ಬದುಕಿನ ದಾರಿಯಲ್ಲಿ ನಡೆದು ತಲೆ ಕೂದಲು ಬೆಳ್ಳಗಾಗಿರುವ ಈ ಹಿರಿಯ ಮಹಿಳೆ ಅಂದು ತನ್ನ ಕಾಟನ್ ದುಪ್ಪಟ್ಟಾವನ್ನು ತನ್ನ ತಲೆ ಹೊದ್ದು ನಮ್ಮೊಡನೆ ಮಾತನಾಡುತ್ತಿದ್ದರು. “ಆಮೇಲೆ ಬೆಳಗ್ಗೆ ಛಾವಣಿಯಿಂದ ನೀರು ಸೋರುತ್ತಿರುವುದನ್ನು ನೋಡಿ ನಾವೆಲ್ಲ ಹೊರಗೆ ಓಡಿದೆವು.”
ಸೂರ್ಯ ಮೇಲೇಳುತ್ತಿದ್ದ ಹಾಗೆ ಮನೆ ಕುಸಿಯಲು ಆರಂಭಿಸಿತು ಎಂದು ಅವರ ಕಿರಿಯ ಸೊಸೆ 26 ವರ್ಷದ ಅಮನ್ ದೀಪ್ ಕೌರ್ ಹೇಳಿದರು. “ಸಾರೆ ಪಾಸೆ ಘರ್ ಹೀ ಪಾಟ್ ಗಯಾ. [ನಮ್ಮ ಕಣ್ಣೆದುರೇ ಮನೆ ಕುಸಿದುಬಿತ್ತು]” ಎಂದರು ಬಲದೇವ್ ಅವರ ಹಿರಿಯ ಮಗನಾದ 36 ವರ್ಷ ಪ್ರಾಯದ ಬಲ್ಜಿಂದರ್ ಸಿಂಗ್.
ಬಲದೇವ್ ಕೌರ್ ಮತ್ತು ಅವರ ಮೂರು ಮಕ್ಕಳು ಸೇರಿದಂತೆ ಅವರ ಏಳು ಜನರ ಕುಟುಂಬವು ಹಿಂದೆಂದೂ ಇಂತಹ ದುರಂತವನ್ನು ಕಂಡಿರಲಿಲ್ಲ. 2023ರ ಮಾರ್ಚ್ ತಿಂಗಳಿನ ಕೊನೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಗಿದ್ದರ್‌ಬಾಹಾ ಬ್ಲಾಕ್ ಭಲಾಹಿ ಆಣಾ ಗ್ರಾಮದಲ್ಲಿ ಬೆಳೆಗಳು ಮತ್ತು ಮನೆಗಳು ನಾಶವಾದವು. ನೈಋತ್ಯ ಪಂಜಾಬಿನ ಈ ಪ್ರದೇಶವು ದಕ್ಷಿಣದಲ್ಲಿ ರಾಜಸ್ಥಾನ ಮತ್ತು ಪೂರ್ವದಲ್ಲಿ ಹರಿಯಾಣದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಬಲ್ಜಿಂದರ್ ಅವರು ಅಂದು ಮೂರು ದಿನಗಳ ಕಾಲ ಸುರಿದ ಆಲಿಕಲ್ಲು ಮಳೆಯ ಸಂತ್ರಸ್ಥ. ಕುಟುಂಬದ ಒಡೆತನದ ಐದು ಎಕರೆ ಜಮೀನಿನಲ್ಲಿ ಕೃಷಿ ಮಾಡುವುದರೊಂಧಿಗೆ ಅವರು 10 ಎಕರೆ ಕೃಷಿಭೂಮಿಯನ್ನು ಗೇಣಿಗೆ ಪಡೆದಿದ್ದು, ಇದರ ಸಲುವಾಗಿ ಅವರು ಆರ್ಥಿಯಾ (ಕೃಷಿ ಉತ್ಪನ್ನ ದಲ್ಲಾಳಿ) ಒಬ್ಬರಿಂದ 6.5 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದರು. ಅವರಿಗೆ ಅವರು ಬೆಳೆದಿದ್ದ ಗೋಧಿ ಬೆಳೆಯ ಹೊರತಾಗಿ ಬೇರೆ ಯಾವುದೇ ಆದಾಯ ಮೂಲವಿರಲಿಲ್ಲ. ಸಾಲ ತೀರಿಸುವುದಕ್ಕೂ ಇದೇ ಬೆಳೆಯನ್ನು ನಂಬಿದ್ದರು.
“ಇನ್ನೇನು ಕೈಗೆ ಬರಲಿದ್ದ ಫಸಲನ್ನು ಮೊದಲಿಗೆ ಬಿದ್ದ ಆಲಿಕಲ್ಲು ಹಾನಿ ಮಾಡಿತು. ಅದರ ನಂತರ ಬಿದ್ದ ಮಳೆಗೆ ಗದ್ದೆಯ ತುಂಬಾ ನೀರು ತುಂಬಿಕೊಂಡು ಗದ್ದೆಯಲ್ಲಿದ್ದ ಬೆಳೆ ಕೊಳೆಯಲಾರಂಭಿಸಿತು. ನೀರು ಹೊರ ಹೋಗಲು ಜಾಗವಿಲ್ಲದ ಕಾರಣ ಗದ್ದೆಯಲ್ಲೇ ಬೆಳೆ ಕೊಳೆಯಲಾರಂಭಿಸಿತು” ಎಂದರು ಬಲ್ಜಿಂದರ್. “ಇಂದು ಕೂಡಾ ಬೆಳೆ 15 ಎಕರೆ ಗದ್ದೆಯಲ್ಲಿ ಹಾಗೇ ಅಡ್ಡಡ್ಡ ಬಿದ್ದಿವೆ” ಎಂದು ಬಲ್ಜಿಂದರ್ ಎಪ್ರಿಲ್ ತಿಂಗಳ ಮಧ್ಯದಲ್ಲಿ ತಿಳಿಸಿದರು.
ಈ ಭಾಗಗಳಲ್ಲಿ ಗೋಧಿಯನ್ನು ರಬಿ ಬೆಳೆಯಾಗಿ ಬೆಳೆಯಲಾಗುತ್ತದೆ ಮತ್ತು ಅಕ್ಟೋಬರ್ - ಡಿಸೆಂಬರ್ ತಿಂಗಳ ನಡುವೆ ಬಿತ್ತನೆ ಕಾರ್ಯ ನಡೆಸಲಾಗುತ್ತದೆ. ತೆನೆಯಲ್ಲಿ ಪಿಷ್ಟ ಮತ್ತು ಪ್ರೋಟೀನ್ ಕೆನೆಗಟ್ಟಲು ಆರಂಭಗೊಳ್ಳುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳು ಈ ಬೆಳೆಯ ಬೆಳವಣಿಗೆ ನಿರ್ಣಾಯಕ ತಿಂಗಳುಗಳಾಗಿವೆ.
ಮಾರ್ಚ್ ತಿಂಗಳ 24ರಿಂದ 30ರ ತನಕ ಪಂಜಾಬಿನಲ್ಲಿ ಒಟ್ಟು 33.8 ಮಿ.ಮೀ ಮಳೆಯಾಗಿದೆ. ಆ ತಿಂಗಳ ಮಾಸಿಕ ಸಾಮಾನ್ಯ ಮಳೆ 22.2 ಎಂದು ಚಂಡೀಗಢದ ಭಾರತೀಯ ಹವಾಮಾನ ಇಲಾಖೆ ಹೇಳುತ್ತದೆ. ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ , ಮಾರ್ಚ್ 24ರಂದು ಸುಮಾರು 30 ಮಿ.ಮೀ ಮಳೆಯಾಗಿದೆ.
ಬೆಳೆನಷ್ಟವಾಗಿರುವುದು ದೊಡ್ಡ ನಷ್ಟವಾದರೂ, ಬಲದೇವ್ ಅವರನ್ನು ಕಂಗಾಲು ಮಾಡಿದ್ದು ಅವರ ಮನೆ ಕುಸಿದು ಬಿದ್ದಿರುವುದು. ಅವರ ಕುಟುಂಬ ಅದನ್ನು ಇತ್ತೀಚಿನ ವರ್ಷಗಳ ಹಿಂದೆ ನಿರ್ಮಿಸಿತ್ತು. ಮನೆ ಕುಸಿದಿದ್ದು ಬೆಳೆನಾಶದ ಜೊತೆಗೆ ನಡೆದ ಇನ್ನೊಂದು ದುರಂತ.
“ಮನೆಯಿಂದ ಹೊರಬಂದಾಗಲೆಲ್ಲ ಕುಸಿದ ಮನೆ ನೋಡಿ ನನ್ನ ಮನಸ್ಸು ಹಿಂಡಿದಂತಾಗುತ್ತದೆ. ಜೀ ಘಬ್ರಾಂದಾ ಹೈ [ಜೀವ ಚಿಂತಿಯಿಂದ ನಡುಗುತ್ತದೆ]” ಎಂದು ಬಲದೇವ್ ಹೇಳಿದರು.
ಕುಟುಂಬವು 6 ಲಕ್ಷಕ್ಕೂ ಮಿಕ್ಕಿ ಕೃಷಿ ನಷ್ಟವಾಗಿರುವುದಾಗಿ ಅಂದಾಜಿಸುತ್ತದೆ. ಅವರ ಲೆಕ್ಕಚಾರದ ಪ್ರಕಾರ ಒಂದು ಎಕರೆಯಲ್ಲಿ 60 ಮಣ್ (ಒಂದು ಮಣ್ ಎಂದರೆ 37 ಕೇಜಿ) ಗೋಧಿ ಬೆಳೆಯುತ್ತದೆ. ಅವರು ಈಗ ಎಕರೆಗೆ 20 ಮಣ್ ಕೊಯ್ಲು ಮಾಡುತ್ತಾರೆ. ಇದರೊಂದಿಗೆ ಮನೆ ನಿರ್ಮಾಣದ ಖರ್ಚು ಬೇರೆಯಿದೆ. ಬೇಸಗೆ ಸದ್ಯದಲ್ಲೇ ಬರಲಿದೆಯಾದ್ದರಿಂದ ಅದನ್ನು ಕೂಡಾ ಆರಂಭಿಸಬೇಕಿದೆ.
“ಕುದ್ರತ್ ಕರ್ಕೆ [ಇದೆಲ್ಲ ಆಗಿದ್ದು ಪ್ರಕೃತಿಯಿಂದ]” ಎನ್ನುತ್ತಾರೆ ಬಲ್ಜಿಂದರ್.
ಅನಿರೀಕ್ಷಿತ ಹವಾಮಾನ ಮಾದರಿಗಳು ರೈತರ ಭಯದ ಮೂಲವಾಗಿದೆ ಎಂದು ಭಲೈಯಾನಾ ಗ್ರಾಮದ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ-ಉಗ್ರಾಹಃ) ಕಾರ್ಯಕರ್ತ 64 ವರ್ಷದ ಗುರುಭಕ್ತ್ ಸಿಂಗ್ ಹೇಳಿದರು. "ಸರ್ಕಾರದ ತಪ್ಪು ನೀತಿಗಳಿಂದಾಗಿ ಇದು ನಡೆಯುತ್ತಿದೆ. ಸರ್ಕಾರವು ಇತರ ಬೆಳೆಗಳಿಗೆ ದರವನ್ನು ನಿಗದಿಪಡಿಸಿದರೆ, ಭತ್ತದಂತಹ ನೀರಿನ ಅವಶ್ಯಕತೆಯ ಬೆಳೆಗಳ ಬದಲು ನಾವು ಅವುಗಳನ್ನು ಸಹ ಬೆಳೆಯುತ್ತೇವೆ" ಎಂದು ಅವರು ಹೇಳಿದರು.
ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಕೃಷಿ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಪಂಜಾಬಿನ ರೈತ ಸಂಘಗಳು ಮಾರ್ಚ್ 2023ರಲ್ಲಿ ದೆಹಲಿಯಲ್ಲಿ ಇಂತಹ ಕಾನೂನನ್ನು ತರುವಂತೆ ಒತ್ತಾಯಿಸಲು ಪ್ರದರ್ಶನವನ್ನು ನಡೆಸಿದವು.
ಗುರುಭಕ್ತ್ ಅವರ ಕಿರಿಯ ಮಗ ಲಖ್ವಿಂದರ್ ಸಿಂಗ್, ತಮ್ಮ ಬೆಳೆಯ ಜೊತೆಗೆ, ಗೋಧಿ ಹುಲ್ಲಿನಿಂದ ತಯಾರಿಸಿದ ಒಣ ಜಾನುವಾರು ಮೇವು ತುರಿ ಕೂಡ ಹಾಳಾಗಿದೆ ಎಂದು ಹೇಳಿದರು. ಗುರುಭಕ್ತ್ ಸಿಂಗ್ ಅವರ ಕುಟುಂಬಕ್ಕೆ 6 ಲಕ್ಷದಿಂದ 7 ಲಕ್ಷ ರೂ.ಗಳವರೆಗೆ ನಷ್ಟವಾಗಿದೆ. ಅವರೂ ಸಹ ಪ್ರತಿ ಬೆಳೆ ಋತುವಿಗೆ ಪ್ರತಿ 100 ರೂ.ಗೆ 1.5 ರೂ.ಗಳ ಬಡ್ಡಿದರದಂತೆ ಆರ್ಥಿಯಾ ಒಬ್ಬರಿಂದ 7 ಲಕ್ಷ ರೂ.ಗಳ ಸಾಲವನ್ನು ಪಡೆದಿದ್ದಾರೆ. ಕುಟುಂಬದ ಭೂಮಿಯನ್ನು ಅಡವಿಟ್ಟು ಈ ಹಿಂದೆ ಬ್ಯಾಂಕಿನಿಂದ 12 ಲಕ್ಷ ರೂ.ಗಳ ಸಾಲವನ್ನು ಶೇಕಡಾ 9ರ ಬಡ್ಡಿದರದಲ್ಲಿ ತೆಗೆದುಕೊಳ್ಳಲಾಗಿತ್ತು.
ಅವರು ರಬಿ ಬೆಳೆಯಿಂದ ಬರುವ ಆದಾಯದಿಂದ ಒಂದಷ್ಟು ಸಾಲವನ್ನು ತೀರಿಸಬಹುದೆನ್ನುವ ಭರವಸೆ ಹೊಂದಿದ್ದರು. ಆದರೆ ಈ ಅಕಾಲಿಕ ಮಳೆ ಅದೆಲ್ಲವನ್ನೂ ಸುಳ್ಳಾಗಿಸಿತು. “ಆಲಿಕಲ್ಲು ಗಾತ್ರದಲ್ಲಿ ಪೆಂದು ಬೇರ್ [ಬುಗುರಿ ಹಣ್ಣು] ಇದ್ದ ಹಾಗಿತ್ತು” ಎಂದು ಗುರುಭಕ್ತ್ ಹೇಳಿದರು.
*****
ಏಪ್ರಿಲ್ 2023ರಲ್ಲಿ ಬುಟ್ಟರ್ ಬಖುವಾ ಗ್ರಾಮದ ಬೂಟಾ ಸಿಂಗ್ (28) ಅವರನ್ನು ಪರಿ ಭೇಟಿಯಾದಾಗ, ಅವರು ಅಕಾಲಿಕ ಮತ್ತು ಅತಿಯಾದ ಮಳೆಯಿಂದಾಗಿ ಉಂಟಾದ ತೀವ್ರ ನಿದ್ರಾಹೀನತೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದರು.
ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ರೈತನಾದ ಅವರು ಕುಟುಂಬದ ಏಳು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದು, ಜೊತೆಗೆ 38 ಎಕರೆ ಭೂಮಿಯನ್ನು ಗೇಣಿಗೆ ಪಡೆದು ಗೋಧಿ ಬೆಳೆಯುತ್ತಿದ್ದಾರೆ. ಪ್ರಸ್ತುತ 45 ಎಕರೆ ಭೂಮಿಯೂ ಜಲಾವೃತವಾಗಿದ್ದು, ಗ್ರಾಮದ ಕನಿಷ್ಠ 200 ಎಕರೆ ತಗ್ಗು ಕೃಷಿ ಭೂಮಿ ಜಲಾವೃತವಾಗಿದೆ. ಬೂಟಾ ಸಿಂಗ್ ಅವರು ಅರ್ಥಿಯಾ ಒಬ್ಬರಿಂದ 18 ಲಕ್ಷ ರೂಪಾಯಿಗಳ್ನು ಪ್ರತಿ ನೂರು ರೂಪಾಯಿಗೆ 1.5 ರೂಪಾಯಿ ಬಡ್ಡಿ ದರದಲ್ಲಿ ಸಾಲವಾಗಿ ಪಡೆದಿದ್ದಾರೆ.
ಅವರ ಪೋಷಕರು, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಆರು ಜನರ ಕುಟುಂಬವು ಅವರ ಕೃಷಿ ಆದಾಯವನ್ನು ಅವಲಂಬಿಸಿದೆ.
“ಬಿಸಿಲು ಹೆಚ್ಚಾಗುತ್ತಿದ್ದ ಹಾಗೆ, ಹೊಲವು ಒಣಗುತ್ತದೆ ಹಾಗೂ ನಾವು ಬೆಳೆ ಕೊಯ್ಲು ಮಾಡಬಹುದು ಎನ್ನುವುದು ನಮ್ಮ ಯೋಚನೆಯಾಗಿತ್ತು” ಎಂದು ಅವರು ಹೇಳಿದರು. ಕೊಯ್ಲು ಯಂತ್ರ ಬಳಸಿ ಕೊಯ್ಲು ಮಾಡಲು ಗದ್ದೆ ಒಣಗಿರಬೇಕು. ಗದ್ದೆ ತೇವವಿದ್ದರೆ ಕಟಾವು ಮಾಡಲು ಸಾಧ್ಯವಿಲ್ಲ. ಹೊಲಗಳು ಒಣಗುವ ಹೊತ್ತಿಗೆ ಬೆಳೆಗಳು ಬಹುತೇಕ ನಾಶಗೊಂಡಿದ್ದವು.
ಅಲ್ಲದೆ ಗದ್ದೆಯಲ್ಲಿ ಅಡ್ಡ ಬಿದ್ದ ಬೆಳೆಯನ್ನು ಕಟಾವು ಮಾಡಲು ಹೆಚ್ಚು ಹಣ ವೆಚ್ಚವಾಗುತ್ತದೆ. ಕೊಯಿಲು ಯಂತ್ರದವರು ನಿಂತಿರುವ ಬೆಳೆಗೆ ಎಕರೆಗೆ 1,300 ರೂಪಾಯಿಗಳಷ್ಟು ಬಾಡಿಗೆ ವಿಧಿಸಿದರೆ, ಮಲಗಿರುವ ಬೆಳೆಗಳಿಗೆ ಎಕರೆಗೆ 2,000 ಸಾವಿರ ರೂಪಾಯಿಗಳಂತೆ ಬಾಡಿಗೆ ವಿಧಿಸುತ್ತಾರೆ.
ಈ ಒತ್ತಡಗಳು ಬೂಟಾ ಸಿಂಗ್ ಅವರ ಪಾಲಿಗೆ ರಾತ್ರಿ ನಿದ್ರೆ ಇಲ್ಲದಂತೆ ಮಾಡಿವೆ. ಎಪ್ರಿಲ್ 17ರಂದು ಅವರು ಸಮಸ್ಯೆಗೊಂದು ಪರಿಹಾರ ಹುಡುಕಲೆಂದು ಗಿದ್ದರ್‌ಬಾಹದ ಡಾಕ್ಟರ್ ಒಬ್ಬರ ಬಳಿ ಹೋದರು. ಅಲ್ಲಿನ ಡಾಕ್ಟರ್ ಅವರಿಗೆ ಅಧಿಕ ರಕ್ತದೊತ್ತಡ ಇರುವುದಾಗಿ ತಿಳಿಸಿ ಕೆಲವು ಔಷಧಿಗಳನ್ನು ಬರೆದುಕೊಟ್ಟರು.
'ಉದ್ವೇಗ' ಮತ್ತು 'ಖಿನ್ನತೆ' ಮುಂತಾದ ಪದಗಳು ಈ ಪ್ರದೇಶದ ರೈತರ ನಡುವೆ ಸಾಮಾನ್ಯವಾಗಿದ್ದವು.
“ಡಿಪ್ರೆಷನ್ ತಾಹ್ ಪಾಯೆಂದ ಹೀ ಹೈ. ಅಪ್ಸೆಟ್ ವಾಲಾ ಕಾಮ್ ಹುಂದಾ ಹೈ [ಇದು ಒಬ್ಬರಲ್ಲಿ ಖಿನ್ನತೆ ಮತ್ತು ಆತಂಕವನ್ನು ಹುಟ್ಟಿಸುತ್ತದೆ]” ಎಂದು ಗುರುಪಾಲ್ ಸಿಂಗ್ ಹೇಳಿದರು. 40 ವರ್ಷದ ಈ ರೈತ ಬುಟ್ಟರ್ ಬಖುವಾ ತಮ್ಮ ಆರು ಎಕರೆ ಕೃಷಿ ಜಮೀನಿನಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಹಾಕುತ್ತಾ ನಮ್ಮೊಡನೆ ಮಾತನಾಡುತ್ತಿದ್ದರು. ಆರು ತಿಂಗಳ ಬೇಸಾಯ ಕೆಲಸ ಮಾಡಿ ಕೊನೆಯಲ್ಲಿ ಏನೂ ಕೈಗೆ ಬರದಿದ್ದಾಗ ಮಾನಸಿಕ ಸಮಸ್ಯೆಗಳು ಕಾಡುವುದು ಸಾಮಾನ್ಯ ಎಂದು ಗುರುಪಾಲ್ ಹೇಳಿದರು.
ಪಂಜಾಬಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಹಾಯವಾಗಿ ನಿಲ್ಲಲು ಕಿಸಾನ್ ಮಜ್ದೂರ್ ಖುದ್ಕುಶಿ ಪೀಡಿತ್ ಪರಿವಾರ್ ಸಮಿತಿಯನ್ನು ಸ್ಥಾಪಿಸಿದ ಸಾಮಾಜಿಕ ಕಾರ್ಯಕರ್ತೆ ಕಿರಣ್ಜಿತ್ ಕೌರ್ (27) ಮಾತನಾಡಿ, ಹೆಚ್ಚಿನ ಸಂಖ್ಯೆಯ ರೈತರು ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಎಂದರು. "ಬೆಳೆ ವಿಫಲವಾದರೆ 5 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರದ ಸಣ್ಣ ಪ್ರಮಾಣದ ರೈತನ ಪಾಲಿಗೆ ಇದು ಸರ್ವನಾಶವಾಗಿರುತ್ತದೆ. ಇಂತಹ ರೈತರು ಮತ್ತು ಅವರ ಕುಟುಂಬಗಳು ಸಾಲ ಮತ್ತು ಬಡ್ಡಿಯನ್ನು ಕಟ್ಟಬೇಕಿರುತ್ತದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿಯೇ ನಾವು ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡುತ್ತೇವೆ. ರೈತರು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಆರೋಗ್ಯ ಬೆಂಬಲದ ಅವಶ್ಯಕತೆಯಿದೆ, ಅವರು ಮಾದಕ ದ್ರವ್ಯ ಸೇವನೆ ಅಥವಾ ಹಾನಿಕಾರಕ ನಿರ್ಧಾರಗಳತ್ತ ಆಕರ್ಷಿತರಾಗುವುದನ್ನು ತಡೆಯಬೇಕು ಎಂದು ಕಿರಣ್ಜಿತ್ ಹೇಳಿದರು.
ಕೆಲವು ರೈತರು ಹಿಂದಿನ ಕಟಾವು ಸಮಯದಲ್ಲೂ ಹವಾಮಾನದ ವೈಪರೀತ್ಯಗಳನ್ನು ಅನುಭವಿಸಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಸೆಪ್ಟೆಂಬರ್ 2022ರಲ್ಲಿ ಭತ್ತವನ್ನು ಬಹಳ ಕಷ್ಟಪಟ್ಟು ಕೊಯ್ಲು ಮಾಡಲಾಯಿತು ಎಂದು ಬೂಟಾ ಹೇಳಿದರು. ಹಿಂದಿನ ರಬಿ ಋತುವಿನಲ್ಲಿ ತುಂಬಾ ಬಿಸಿಲಿತ್ತು, ಇದು ಗೋಧಿ ಧಾನ್ಯವು ಬಾಡಲು ಕಾರಣವಾಯಿತು.
ಈ ಬಾರಿಯೂ, "ವದ್ದಿ ದಿ ಆಸ್ ಘಾಟ್ ಹೈ [ಬೆಳೆ ಕೈಗೆ ಸಿಗುವ ಭರವಸೆಯಿಲ್ಲ]. ಮುಂದಿನ ದಿನಗಳಲ್ಲಿ ನಾವು ಅದನ್ನು ಕೊಯ್ಲು ಮಾಡಿದರೂ, ಆ ಹೊತ್ತಿಗೆ ಧಾನ್ಯವು ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಯಾರೂ ಅದನ್ನು ಖರೀದಿಸುವುದಿಲ್ಲ."
ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಪ್ರಧಾನ ವಿಜ್ಞಾನಿ (ಕೃಷಿ ಹವಾಮಾನಶಾಸ್ತ್ರ) ಡಾ.ಪ್ರಭ್ಯೋಜೋತ್ ಕೌರ್ ಸಿಧು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಸಾಮಾನ್ಯ ಅಥವಾ ಸಾಮಾನ್ಯ ತಾಪಮಾನಕ್ಕಿಂತಲೂ ಕಡಿಮೆ ತಾಪಮಾನವಿದ್ದರೆ ಗೋಧಿ ಧಾನ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.
ಈ ತಿಂಗಳುಗಳಲ್ಲಿ ಹೆಚ್ಚಿನ ತಾಪಮಾನದಿಂದಾಗಿ 2022ರ ರಬಿ ಋತುವಿನಲ್ಲಿ ಗೋಧಿ ಉತ್ಪಾದನೆ ಕಡಿಮೆಯಾಗಿದ್ದರೆ, ಮಾರ್ಚ್ ಮತ್ತು ಏಪ್ರಿಲ್ 2023ರಲ್ಲಿ ಸುರಿದ ಮಳೆ ಮತ್ತು ಗಂಟೆಗೆ 30-40 ಕಿಮೀ ವೇಗದಲ್ಲಿ ಬೀಸಿದ ಗಾಳಿಯು ಮತ್ತೆ ಕಡಿಮೆ ಉತ್ಪಾದಕತೆಗೆ ಕಾರಣವಾಯಿತು. "ಹೆಚ್ಚಿನ ವೇಗದ ಗಾಳಿಯೊಂದಿಗೆ ಮಳೆ ಬಂದಾಗ, ಗೋಧಿ ಗಿಡಗಳು ಕೆಳಗೆ ಬೀಳುತ್ತವೆ, ಈ ಪ್ರಕ್ರಿಯೆಯನ್ನು ಲಾಡ್ಜಿಂಗ್ (ಬೆಳೆ ಬಾಗುವಿಕೆ) ಎಂದು ಕರೆಯಲಾಗುತ್ತದೆ. ತಾಪಮಾನ ಹೆಚ್ಚಿದಂತೆ ಗಿಡ ಮತ್ತೆ ಎದ್ದು ನಿಲ್ಲುತ್ತದೆ, ಆದರೆ ಅದು ಎಪ್ರಿಲ್ ತಿಂಗಳಿನಲ್ಲಿ ನಡೆಯಲಿಲ್ಲ" ಎಂದು ಡಾ. ಪ್ರಭ್ಯೋಜೋತ್ ಕೌರ್ ಸಿಧು ಹೇಳುತ್ತಾರೆ. "ಇದರಿಂದಾಗಿ ಧಾನ್ಯ ಬೆಳವಣಿಗೆಯಾಗಲಿಲ್ಲ, ಜೊತೆಗೆ ಎಪ್ರಿಲ್ ತಿಂಗಳಿನಲ್ಲಿ ಬೆಳೆ ಕಟಾವು ಕೂಡಾ ಸಾಧ್ಯವಾಗಲಿಲ್ಲ. ಇದು ಮತ್ತೆ ಗೋಧಿ ಉತ್ಪಾದನೆಯ ಕೊರತೆಗೆ ಕಾರಣವಾಯಿತು. ಪಂಜಾಬಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆಯಾದರೂ ಗಾಳಿಯಿಲ್ಲದ ಕಾರಣ ಒಳ್ಳೆಯ ಫಸಲು ದೊರಕಿದೆ.”
ಮಾರ್ಚ್ ಅಂತ್ಯದಲ್ಲಿ ಸುರಿದ ಅಕಾಲಿಕ ಮಳೆಯನ್ನು ಹವಾಮಾನ ವೈಪರೀತ್ಯದ ಭಾಗವೆಂದು ಪರಿಗಣಿಸಬೇಕು ಎಂದು ಡಾ.ಸಿಧು ಹೇಳಿದ್ದಾರೆ.
ಮೇ ವೇಳೆಗೆ, ಬೂಟಾ ಪ್ರತಿ ಎಕರೆ ಭೂಮಿಗೆ 20-25 ಕ್ವಿಂಟಾಲ್ ಗೋಧಿಯ ಬದಲು 20 ಮಣ್ (ಅಥವಾ 7.4 ಕ್ವಿಂಟಾಲ್) ಗೋಧಿಯನ್ನು ಕೊಯ್ಲು ಮಾಡುವಲ್ಲಿ ಯಶಸ್ವಿಯಾದರು. ಗುರುಭಕ್ತ್ ಸಿಂಗ್ ಅವರ ಹೊಲದಲ್ಲಿ ಇಳುವರಿ ಎಕರೆಗೆ 20ರಿಂದ 40 ಮಣ್ ನಡುವೆ ಇದ್ದರೆ, ಬಲ್ಜಿಂದರ್ ಸಿಂಗ್ ತಮ್ಮ ಹೊಲದಲ್ಲಿ ಎಕರೆಗೆ 25ರಿಂದ 28 ಮಣ್ ಇಳುವರಿ ಸಿಕ್ಕಿತು ಎನ್ನುತ್ತಾರೆ.
ಬೂಟಾ ಅವರ ಫಸಲಿನ ಗುಣಮಟ್ಟವನ್ನು ಅವಲಂಬಿಸಿ, ಪ್ರತಿ ಕ್ವಿಂಟಾಲಿಗೆ 1,400ರಿಂದ 2,000 ರೂ.ಗಳ ಬೆಲೆಯನ್ನು ಪಡೆಯಿತು, ಭಾರತೀಯ ಆಹಾರ ನಿಗಮದ ಪ್ರಕಾರ 2023ರಲ್ಲಿ ಪ್ರತಿ ಕ್ವಿಂಟಾಲ್ ಗೋಧಿಗೆ 2,125 ರೂ.ಗಳ ಎಂಎಸ್‌ಪಿ ಇತ್ತು. ಗುರುಭಕ್ತ್ ಮತ್ತು ಬಲ್ಜಿಂದರ್ ತಮ್ಮ ಗೋಧಿಯನ್ನು ಎಂಎಸ್ಪಿ ಬೆಲೆಗೆ ಮಾರಾಟ ಮಾಡಿದರು.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ನಿಗದಿಪಡಿಸಿದ 'ಮೌಲ್ಯ ಕಡಿತ'ದ ನಂತರ ಅವರಿಗೆ ಈ ಬೆಲೆಗಳು ದೊರೆತಿವೆ. ಪೀಚಲು ಅಥವಾ ಒಡೆದ ಧಾನ್ಯಗಳಿಗೆ ಕ್ವಿಂಟಾಲ್ ಒಂದಕ್ಕೆ 5.31ರಿಂದ 31.87 ರೂಪಾಯಿಗಳ ತನಕ ಬೆಲೆ ಕಡಿತ ಮಾಡಲಾಗುತ್ತದೆ. ಇದಲ್ಲದೆ, ಹೊಳಪು ಕಳೆದುಕೊಂಡ ಧಾನ್ಯಗಳ ಮೇಲೆ ಪ್ರತಿ ಕ್ವಿಂಟಾಲಿಗೆ 5.31 ರೂ.ಗಳ ಮೌಲ್ಯ ಕಡಿತವನ್ನು ವಿಧಿಸಲಾಗುತ್ತದೆ.
ಕನಿಷ್ಠ ಶೇ.75ರಷ್ಟು ಬೆಳೆ ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 15,000 ರೂ.ಗಳ ಪರಿಹಾರವನ್ನು ಪಂಜಾಬ್ ಸರ್ಕಾರ ಘೋಷಿಸಿದೆ. ಶೇ.33ರಿಂದ ಶೇ.75ರಷ್ಟು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 6,800 ರೂ. ದೊರೆಯುತ್ತದೆ.
ಬೂಟಾ ಅವರಿಗೆ 2 ಲಕ್ಷ ರೂಪಾಯಿಗಳ ಪರಿಹಾರ ದೊರಕಿದೆ. “ಇದೊಂದು ಬಹಳ ನಿಧಾನಗತಿಯ ಪ್ರತಿಕ್ರಿಯೆಯಾಗಿದ್ದು ನನಗೆ ಇನ್ನೂ ಪರಿಹಾರ ಪೂರ್ತಿಯಾಗಿ ದೊರೆತಿಲ್ಲ” ಎಂದು ಅವರು ಹೇಳಿದರು. ಅವರು ಹೇಳುವಂತೆ ಅವರ ಸಾಲ ತೀರಿಸಲು ಸರಕಾರ 7 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು.
ಗುರುಭಕ್ತ ಮತ್ತು ಬಲ್ಜಿಂದರ್ ಅವರಿಗೆ ಇದುವರೆಗೆ ಯಾವುದೇ ಪರಿಹಾರ ದೊರೆತಿಲ್ಲ.
ಬುಟ್ಟರ್ ಬಖುವಾ ಗ್ರಾಮದ ಬಲದೇವ್ ಸಿಂಗ್ (64) 15 ಎಕರೆ ಜಮೀನಿನ ಮಾಲೀಕರಾಗಿದ್ದು, 9 ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆಯಲು ಆರ್ಥಿಯಾ ಒಬ್ಬರಿಂದ 5 ಲಕ್ಷ ರೂ.ಗಳ ಸಾಲವನ್ನು ಪಡೆದಿದ್ದರು. ಅವರು ಸುಮಾರು ಒಂದು ತಿಂಗಳ ಕಾಲ ಹೊಲದಿಂದ ನೀರನ್ನು ಪಂಪ್ ಮಾಡಿದರು, ಇದಕ್ಕಾಗಿ ಪ್ರತಿದಿನ 15 ಲೀಟರ್ ಡೀಸೆಲ್ ಸುಡುತ್ತಿದ್ದರು.
ದೀರ್ಘಕಾಲದ ಪ್ರವಾಹದ ನಂತರ, ಶಿಲೀಂಧ್ರ ತಾಕಿ ಕೊಳೆತ ಕಾರಣ ಬಲದೇವ್ ಸಿಂಗ್ ಗೋಧಿ ಹೊಲಗಳು ಕಪ್ಪು ಮತ್ತು ಕಂದು ಬಣ್ಣಕ್ಕೆ ತಿರುಗಿದವು,. ಅದನ್ನು ಉಳುಮೆ ಮಾಡುವುದರಿಂದ ದುರ್ವಾಸನೆ ಹೊರಬರುತ್ತದೆ, ಅದು ಜನರನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ಅವರು ಹೇಳಿದರು.
"ಮಾತಮ್ ವರ್ಗಾ ಮಹೌಲ್ ಸಿ [ಮನೆಯಲ್ಲಿನ ವಾತಾವರಣವು ಸಾವಿನ ಮನೆಯಂತಿದೆ]" ಎಂದು ಬಲದೇವ್ ತಮ್ಮ 10 ಸದಸ್ಯರ ಕುಟುಂಬದ ಬಗ್ಗೆ ಹೇಳಿದರು. ಈ ಬಾರಿಯ ಹೊಸ ವರ್ಷದ ಆರಂಭವನ್ನು ಸೂಚಿಸುವ ಸುಗ್ಗಿ ಹಬ್ಬ ಬೈಸಾಖಿ ಯಾವುದೇ ಆಚರಣೆಗಳಿಲ್ಲದೆ ಕಳೆದುಹೋಯಿತು.
ಬೆಳನಷ್ಟ ಉಂಟಾಗಿರುವುದು ಬಲದೇವ್ ಅವರ ಪಾಲಿಗೆ ಅವರ ಬದುಕಿನ ಬೇರನ್ನೇ ಬುಡಮೇಲು ಮಾಡಿದಂತಾಗಿದೆ. ”ನನಗೆ ಈ ಹೊಲವನ್ನು ಹೀಗೆಯೇ ಬಿಟ್ಟುಬಿಡುವುದು ಸಾಧ್ಯವಿಲ್ಲ” ಎಂದರು ಅವರು. “ಇದು ನಮ್ಮ ಮಕ್ಕಳು ಶಿಕ್ಷಣ ಮುಗಿಸಿ ಕೆಲಸ ಹುಡುಕಿದಂತಲ್ಲ.” ಇಂತಹ ಪರಿಸ್ಥಿತಿಗಳು ರೈತರನ್ನು ತಮ್ಮ ಪ್ರಾಣವನ್ನು ಬಿಡುವಂತೆ ಅಥವಾ ದೇಶವನ್ನು ಬಿಡುವಂತೆ ಪ್ರೇರೇಪಿಸುತ್ತದೆ ಎಂದು ಹೇಳುತ್ತಾರೆ.
ಸದ್ಯಕ್ಕೆ, ಬಲದೇವ್ ಸಿಂಗ್ ವಿಸ್ತೃತ ಕುಟುಂಬದ ರೈತರನ್ನು ಬೆಂಬಲಕ್ಕಾಗಿ ಸಂಪರ್ಕಿಸಿದ್ದು, ಅವರು ಜಾನುವಾರು ತುರು ಮತ್ತು ಕುಟುಂಬಕ್ಕೆ ಅಗತ್ಯವಿರುವ ಆಹಾರ ಧಾನ್ಯವನ್ನು ಅವರಿಂದ ಪಡೆದಿದ್ದಾರೆ.
“ಈಗ ನಾವು ಹೆಸರಿಗಷ್ಟೇ ಜಮೀನ್ದಾರರು” ಎಂದು ಅವರು ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು