ಹತಾನಾದ ಸರ್ಕಾರಿ ಆಸ್ಪತ್ರೆಯ ಮುಖ್ಯ ದ್ವಾರದ ಮುಂದೆ ಆಟೋ ರಿಕ್ಷಾವೊಂದನ್ನು ನಿಲ್ಲಿಸಲಾಗಿತ್ತು. ಒಳಗೆ, ಒಬ್ಬ ಮಹಿಳೆ ಪ್ರಜ್ಞೆ ತಪ್ಪಿ ಮಲಗಿದ್ದರು. ಇನ್ನೊಬ್ಬರು ಅಳುತ್ತಾ: "ಮಾಜಾ ಸೋನಿಯಾ, ಮಾಜಾ ಸೋನಿಯಾ, ಕುಠೆ ಗೆಲಾ ರೇ ಮಾಜಾ ಸೋನಿಯಾ [ನನ್ನ ಚಿನ್ನಾ ಎಲ್ಲಿ ಹೊರಟು ಹೋದೆ]?” ಕೂಗುತ್ತಿರುವ ಸದ್ದು ಮಾರ್ದನಿಸುತ್ತಿತ್ತು. ಇನ್ನೂ ಕೆಲವು ಕುಟುಂಬಗಳು ಒಟ್ಟುಗೂಡಿ ದಾಖಲೆಪತ್ರಗಳನ್ನು ಒಟ್ಟುಮಾಡಲು ಪ್ರಯತ್ನಿಸುತ್ತಿದ್ದರು. ಮತ್ತೆ ಕೆಲವರು ಬೇರೆ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲು ಓಡಾಡುತ್ತಿದ್ದರು.

ಅದು ಮೇ ತಿಂಗಳ ಬಿರುಬಿಸಿಲ ಬೇಸಗೆಯ ಮಧ್ಯಾಹ್ನ, ಅಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಹತಾನೆ ಗ್ರಾಮದ ರೆವೆರಾ ಆಸ್ಪತ್ರೆಯ ಹೊರಗೆ ಗಲಿಬಿಲಿಯ ವಾತಾವರಣವಿತ್ತು.

ಗುರು ಚೌಧರಿ ಆಸ್ಪತ್ರೆಯ ಆವರಣದ ಹೊರಗಿನ ಮರದ ಕೆಳಗೆ ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ನಿರಂತರವಾಗಿ ಕೂಗುತ್ತಾರೆ. ಅವರು ತಮ್ಮ ಸೋದರ ಮಾವನ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾರೆ. "ದೇವಲಾ ಪ್ರೀತಿಯ ಝಾಲಾ ಕಲ್ ರಾತ್ [ಅವರು ಕಳೆದ ರಾತ್ರಿ ನಿಧನರಾದರು]" ಎಂದು ಅವರು ಫೋನಿನಲ್ಲಿ ಮತ್ತೆ ಮತ್ತೆ ಹೇಳುತ್ತಿದ್ದರು. "ಅವರು ನನಗೆ ಸಹೋದರನಿದ್ದಂತೆ" ಎಂದು ಅವರು ದುಃಖದಿಂದ ಹೇಳುತ್ತಾರೆ. "ಈ ವಿಡಿಯೋ ನೋಡಿ. ಆರಾಮಾಗಿದ್ದ. ನನ್ನ ಸಹೋದರಿ ಆಸ್ಪತ್ರೆಯಲ್ಲಿ ಅವನೊಂದಿಗೆ ಇದ್ದಳು. ಅವನಿಗೆ ಹಾಕಲಾಗಿದ್ದ ಆಮ್ಲಜಕನ ಬಾಟಲಿಯಿಂದ ಸೋರುತ್ತಲೇ ಇತ್ತು... ಅವಳು ವೈದ್ಯರಿಗೆ ಬಂದು ಅವನನ್ನು ನೋಡುವಂತೆ ಹೇಳುತ್ತಲೇ ಇದ್ದಳು..."

ಗುರು ಅವರ ಸೋದರ ಮಾವ 35 ವರ್ಷದ ವಾಮನ್ ದಿಘಾ ಅವರನ್ನು ಏಪ್ರಿಲ್ 23ರಂದು ಕುಟುಂಬವು ರೆವೆರಾಗೆ ಸ್ಥಳಾಂತರಗೊಳ್ಳುವ ಮೊದಲು ಹಳ್ಳಿಯ ಬಳಿಯ ಎರಡು ಸಣ್ಣ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. "ಅವರಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳವರೆಗೆ ತೀವ್ರ ಜ್ವರವೂ ಇತ್ತು, ಕೊನೆಗೆ ನಾವು ಭಯಭೀತರಾಗಿ ಟೆಸ್ಟ್‌ ಮಾಡಿಸಲು ನಿರ್ಧರಿಸಿದೆವು" ಎಂದು ಗುರು ಹೇಳುತ್ತಾರೆ. "ಅವರಿಗೆ ನ್ಯುಮೋನಿಯಾ ಇದೆ, ಕೋವಿಡ್ ಕೂಡ ಬರಬಹುದು ಎಂದು ವೈದ್ಯರು ಹೇಳಿದರು, ಆಗ ಅವರನ್ನು ತಕ್ಷಣ ದಾಖಲಿಸಬೇಕಾಯಿತು. ಹತ್ತಿರದ ಯಾವುದೇ ಆಸ್ಪತ್ರೆಯಲ್ಲಿ ಹಾಸಿಗೆಗಳು ಅಥವಾ ಆಮ್ಲಜನಕ ಇರಲಿಲ್ಲ. ”

ಪಾಲ್ಘರ್ನ ಮೊಖಡಾ ತಾಲ್ಲೂಕಿನ ತಕ್ಪಾಡಾ ಗ್ರಾಮದಿಂದ ಅದೇ ಜಿಲ್ಲೆಯ ವಿಕ್ರಮಗಡ್ ತಾಲ್ಲೂಕಿನ ಸರ್ಕಾರಿ ಸ್ವಾಮ್ಯದ ರೆವೆರಾಗೆ ಕುಟುಂಬವು ಆಂಬ್ಯುಲೆನ್ಸಿನಲ್ಲಿ ಸುಮಾರು 60 ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ಇದು ಕೋವಿಡ್ ರೋಗಿಗಳಿಗೆಂದೇ 200 ಹಾಸಿಗೆಗಳನ್ನು ಹೊಂದಿರುವ ತಾಲ್ಲೂಕಿನ ಏಕೈಕ ಕೋವಿಡ್ ಆಸ್ಪತ್ರೆ (ಅವುಗಳಲ್ಲಿ ಅರ್ಧದಷ್ಟು ಪ್ರತ್ಯೇಕ ಹಾಸಿಗೆಗಳು ಮತ್ತು ಉಳಿದವು ಆಮ್ಲಜನಕ, ವೆಂಟಿಲೇಟರ್ ಅಥವಾ ಐಸಿಯು ಸೌಲಭ್ಯ ಇರುವವು; ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಜಿಲ್ಲೆಯ ಸರ್ಕಾರಿ ವೆಬ್ಸೈಟಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.

Malati Digha, Vaman's grieving wife (left) and relatives outside ReVera Hospital in Vikramgad: 'He could have recovered...'
PHOTO • Shraddha Agarwal
Malati Digha, Vaman's grieving wife (left) and relatives outside ReVera Hospital in Vikramgad: 'He could have recovered...'
PHOTO • Shraddha Agarwal

ವಿಕ್ರಮಗಡದ ರೆವೆರಾ ಆಸ್ಪತ್ರೆಯ ಹೊರಗೆ, ವಾಮನ್ ಅವರ ದುಃಖಿತ ಪತ್ನಿ ಮಾಲತಿ ದಿಘಾ (ಎಡ) ಮತ್ತು ಅವರ ಕುಟುಂಬ: 'ಅವರು ಆರಾಮಾ ಹೊಂದಬಹುದಿತ್ತು...’

"ಕೋವಿಡ್ ಪರೀಕ್ಷೆಯಲ್ಲಿ ಮೂರು ಬಾರಿ ನೆಗೆಟಿವ್ ಬಂದಿದ್ದರೂ, ಅವರನ್ನು ಕೋವಿಡ್ ವಾರ್ಡಿಗೆ ದಾಖಲಿಸಲಾಯಿತು. ಒಳಗಿನ ಹಾಸಿಗೆಗಳ ಮೇಲೆ ಯಾವುದೇ ಹಾಸು ವಸ್ತ್ರ ಅಥವಾ ದಿಂಬುಗಳು ಇರಲಿಲ್ಲ. ಅವರಿಗೆ ಬಿಸಿನೀರು ಕೂಡ ಇರಲಿಲ್ಲ. 10 ದಿನಗಳ ಕಾಲ ವಾರ್ಡಿನಲ್ಲಿದ್ದರು. ಸಾಯುವ ಹಿಂದಿನ ದಿನ, ಅವರಿಗೆ ಮೂತ್ರ ವಿಸರ್ಜಿಸಲು ಸಾಧ್ಯವಾಗಲಿಲ್ಲ. ಅವರ ಸ್ಥಿತಿ ಇದ್ದಕ್ಕಿದ್ದಂತೆ ಹದಗೆಟ್ಟಿತು. ನನ್ನ ಸಹೋದರಿ ವೈದ್ಯರಿಗೆ ಹೇಳಲು ಪ್ರಯತ್ನಿಸುತ್ತಿದ್ದಳು ಆದರೆ ಅವರೆಲ್ಲರೂ ಕೆಲಸದ ಗಡಿಬಿಡಿಯಲ್ಲಿದ್ದರು ಮತ್ತು ಏನನ್ನೂ ಕೇಳಿಸಿಕೊಳ್ಳಲಿಲ್ಲ" ಎಂದು ಗುರು ಹೇಳುತ್ತಾರೆ.

ವಾಮನ್ ತಕ್ಪಾಡಾ ಗ್ರಾಮದ ಸ್ಥಳೀಯ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು 8 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳು ಮತ್ತು ಅವರ ಪತ್ನಿ 31 ವರ್ಷದ ಮಾಲತಿ ದಿಘಾ ಅವರನ್ನು ಅಗಲಿದ್ದಾರೆ. ಮಾಲತಿ ಈಗ ವಾಮನ್ ಅವರ ಹೆತ್ತವರೊಂದಿಗೆ, ಕುಟುಂಬದ ಎರಡು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಾರೆ, ಅಲ್ಲಿ ಮುಖ್ಯವಾಗಿ ತರಕಾರಿಗಳು, ಏಕದಳ ಧಾನ್ಯಗಳು ಮತ್ತು ಭತ್ತವನ್ನು ಬೆಳೆಯುತ್ತಾರೆ. "ವೈದ್ಯರನ್ನು ಕರೆದು ಕರೆದು ದಣಿದಿದ್ದೆ. ಆಮ್ಲಜನಕವಿದ್ದರೂ, ಅವರಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ. ಒಳಗೆ ತುಂಬಾ ಕೊಳಕಾಗಿತ್ತು. ಅವರನ್ನು ಸರಿಯಾಗಿ ನೋಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ನಾವು ಅವರನ್ನು ಕಳೆದುಕೊಂಡೆವು" ಎಂದು ಮಾಲತಿ ಕಣ್ಣೀರು ಸುರಿಸುತ್ತಾ ಹೇಳುತ್ತಾರೆ.

ಆದರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, “ರೋಗಿಗಳ ಸಂಬಂಧಿಕರು ಏನೂ ಹೇಳುತ್ತಾರೆ. ನೀವು ಅವರ ಮಾತುಗಳನ್ನು ನಂಬಬಾರದು. ಅವರಿಗೆ ಒಳಗೆ ಏನು ನಡೆಯುತ್ತಿದೆ ಎನ್ನುವುದು ತಿಳಿದಿರುವುದಿಲ್ಲ” ಎಂದು ನನ್ನ ಬಳಿ ಹೇಳಿದರು.

ಆಸ್ಪತ್ರೆಯ ಹೊರಗಿನ ಮತ್ತೊಂದು ಮೂಲೆಯಲ್ಲಿ, ಮೀನಾ ಪಾಗಿ ನೆಲದ ಮೇಲೆ ಮಲಗಿದ್ದರು. ಸುತ್ತಲೂ ಇರುವ ಕೆಲವರು ಅವರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಅವರು ಎದ್ದೇಳಲು ಪ್ರಯತ್ನಿಸಿದರೆ ಆದರೆ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ಅವರು ಚಲನೆಯಿಲ್ಲದೆ ಕುಳಿತುಕೊಂಡರು. "ಅವಳು ಇಂದು ಬೆಳಿಗ್ಗೆಯಿಂದ ಇಲ್ಲಿಂದ ಕದಲಿಲ್ಲ. ಅವಳ ಗಂಡ ತೀರಿಕೊಂಡಿದ್ದಾರೆ, ಈಗ ಅವರಿಗೆ ನಾಲ್ಕು ಹೆಣ್ಣುಮಕ್ಕಳು ಮಾತ್ರವೇ ಉಳಿದಿದ್ದಾರೆ" ಎಂದು ರೈತ ಮತ್ತು ಕುಟುಂಬದ ಆಪ್ತ ಸ್ನೇಹಿತ ಶಿವರಾಮ್ ಮುಕ್ನೆ ಹೇಳಿದರು.

ಮೇ 1ರಂದು ಮಂಗೇಶ್ (48) ಮತ್ತು ಮೀನಾ (45) ತೀವ್ರ ಎದೆನೋವು ಕಾಣಿಸಿಕೊಂಡ ನಂತರ ಆಂಬ್ಯುಲೆನ್ಸ್ ಒಂದರಲ್ಲಿ ರೆವೆರಾ ಆಸ್ಪತ್ರೆಗೆ ಬಂದಿದ್ದರು. ಅದಕ್ಕೂ ಮೊದಲು, ಅದೇ ದಿನ, ಮಂಗೇಶ್ ತನ್ನ ಮೋಟಾರುಸೈಕಲ್ಲನ್ನು ವಿಕ್ರಮಗಡ್ ತಾಲ್ಲೂಕಿನ ಖೋಸ್ಟೆ ಗ್ರಾಮದಲ್ಲಿರುವ ತನ್ನ ಮನೆಯಿಂದ ವಿಕ್ರಮಗಡ್ ಪಟ್ಟಣದ ಆಸ್ಪತ್ರೆಗೆ ಸುಮಾರು 15 ಕಿಲೋಮೀಟರ್ ಓಡಿಸಿದ್ದರು ಎಂದು ಶಿವರಾಂ ಹೇಳುತ್ತಾರೆ. ಮೀನಾ ಅವರೊಂದಿಗೆ ಬೈಕಿನಲ್ಲಿ ಬಂದಿದ್ದರು. ಅಷ್ಟೊತ್ತಿಗಾಗಲೇ ಅವರು ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಎರಡು ದಿನಗಳ ನಂತರ, ಮೇ 3ರಂದು, ಮಂಗೇಶ್ ಪ್ರಾಣ ಕಳೆದುಕೊಂಡರು.

The hospital’s Medical Superintendent told me: 'The relatives of the patients will say anything. You should not believe them'
PHOTO • Shraddha Agarwal
The hospital’s Medical Superintendent told me: 'The relatives of the patients will say anything. You should not believe them'
PHOTO • Shraddha Agarwal

ʼರೋಗಿಗಳ ಸಂಬಂಧಿಕರು ಏನೂ ಹೇಳುತ್ತಾರೆ. ನೀವು ಅವರ ಮಾತುಗಳನ್ನು ನಂಬಬಾರದು. ಅವರಿಗೆ ಒಳಗೆ ಏನು ನಡೆಯುತ್ತಿದೆ ಎನ್ನುವುದು ತಿಳಿದಿರುವುದಿಲ್ಲʼ ಆಸ್ಪತ್ರೆಯ ಅಧಿಕಾರಿಯೊಬ್ಬರು ನನ್ನ ಬಳಿ ಹೇಳಿದರು

"ಆ [ಪಟ್ಟಣದ] ಆಸ್ಪತ್ರೆಯ ವೈದ್ಯರು ಒಂದು ಪತ್ರವನ್ನು ನೀಡಿ ಅವರನ್ನು ರೆವೆರಾದಲ್ಲಿ ದಾಖಲಿಸುವಂತೆ ಹೇಳಿದರು. ಜೊತೆಗೆ ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಿದರು. ಹಲವಾರು ಗಂಟೆಗಳ ನಂತರ ರೆವೆರಾದಲ್ಲಿ ಹಾಸಿಗೆ ನೀಡಲಾಯಿತು" ಎಂದು ಶಿವರಾಂ ಹೇಳುತ್ತಾರೆ. "ಅವರಿಗೆ ಆಮ್ಲಜನಕದ ಅಗತ್ಯವಿತ್ತು ಮತ್ತು ಅದನ್ನು ನೀಡಿದ ನಂತರ ಆರಾಮಿದ್ದಾರೆ ಎಂದು ಅವರ ಪತ್ನಿ ನನಗೆ ಮಾಹಿತಿ ನೀಡಿದರು. ಆದರೆ ವೈದ್ಯರು ಪರೀಕ್ಷೆ ನಡೆಸಿ ಅವರನ್ನು ಕೋವಿಡ್ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಅವರು ಎರಡು ದಿನಗಳ ಅವಧಿಯಲ್ಲಿ 10-12 ಚುಚ್ಚುಮದ್ದುಗಳನ್ನು ನೀಡಿದರು. ಪ್ರತಿ ಚುಚ್ಚುಮದ್ದಿನ ನಂತರ ಅವರ ಸ್ಥಿತಿ ಹದಗೆಡುತ್ತಲೇ ಇತ್ತು. ಕೊನೆಗೆ ನಾವು ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಯೋಚಿಸಿದೆವು. ಆದರೆ ಮಧ್ಯರಾತ್ರಿಯ ನಂತರ [ಮೇ 3 ರಂದು] ಅವರ ಪರಿಸ್ಥಿತಿ ಗಂಭೀರವಾಯಿತು. ಕೊನೆಗೆ ಅವರನ್ನು ಅಲ್ಲಿಯೇ ಐಸಿಯು ವಾರ್ಡಿಗೆ ಹಾಕಿದರು. ಎರಡು ಗಂಟೆಗಳ ನಂತರ ಅವರು ಸತ್ತಿದ್ದಾರೆ ಎಂದು ಆಸ್ಪತ್ರೆಯವರು ಅವರ ಪತ್ನಿಗೆ ತಿಳಿಸಿದರು.”

ನಾನು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಸಾಧ್ಯವಾಗಲಿಲ್ಲ.

ಮಂಗೇಶ್ ಪಾಗಿ ಅವರು ಏಳು ಜನರ ಕುಟುಂಬವನ್ನು ಅಗಲಿದ್ದಾರೆ - ಅವರ ಪೋಷಕರು, ಮೀನಾ ಮತ್ತು 19, 17, 11 ಮತ್ತು 7 ವರ್ಷದ ಅವರ ನಾಲ್ವರು ಹೆಣ್ಣುಮಕ್ಕಳು. ಅವರು ರೈತರಾಗಿದ್ದರು ಮತ್ತು ಕುಟುಂಬದ ಒಂದು ಎಕರೆ ಕೃಷಿ ಭೂಮಿಯಲ್ಲಿ ಭತ್ತ, ಗೋಧಿ ಮತ್ತು ಏಕದಳ ಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಕುಟುಂಬವು ಕತ್ಕರಿ ಆದಿವಾಸಿ ಸಮುದಾಯಕ್ಕೆ ಸೇರಿದೆ ಮತ್ತು ಈಗ ಮೀನಾ ಅವರ ವೇತನವನ್ನು ಸಂಪೂರ್ಣವಾಗಿ ಅವಲಂಬಿಸಬೇಕಾಗಿದೆ - ಅವರು ಹತ್ತಿರದ ಹೊಲಗಳಲ್ಲಿ ದಿನಕ್ಕೆ 150-200 ರೂ.ಗಳನ್ನು ಸಂಪಾದಿಸುತ್ತಾರೆ. "ಈಗ ಎರಡು ತಿಂಗಳಿನಿಂದ [ಸಾಂಕ್ರಾಮಿಕ ಪಿಡುಗಿನ ನಿರ್ಬಂಧಗಳಿಂದಾಗಿ] ನಮ್ಮ ಹಳ್ಳಿಯಲ್ಲಿ ನಮಗೆ ಯಾವುದೇ ಕೆಲಸವಿಲ್ಲ. ಅವರು ಮೊದಲೇ ಹಣಕ್ಕಾಗಿ ಹೆಣಗಾಡುತ್ತಿದ್ದರು ಮತ್ತು ಈಗ ಅವರು ಹೇಗೆ ಬದುಕು ನಡೆಸುತ್ತಾರೋ ನಮಗೆ ತಿಳಿದಿಲ್ಲ" ಎಂದು ಶಿವರಾಂ ಹೇಳುತ್ತಾರೆ.

ವಾಮನ್ ಮತ್ತು ಮಂಗೇಶ್‌ ಅವರಿಗೆಗೆ ಕನಿಷ್ಠ ಆಸ್ಪತ್ರೆಯ ಹಾಸಿಗೆಯಾದರೂ ಸಿಕ್ಕಿತು, ಆದರೆ ಶ್ಯಾಮ್ ಮಡಿಯವರಿಗೆ ಸಮಯಕ್ಕೆ ಅದೂ ಸಿಗಲಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ 28 ವರ್ಷದ ಶ್ಯಾಮ್ ವಿಕ್ರಮಗಢ ತಾಲೂಕಿನ ಯಶವಂತ್ ನಗರ ಗ್ರಾಮದ ತನ್ನ ಮನೆಯಲ್ಲಿ ತೀವ್ರ ಜ್ವರ ಕಾಣಿಸಿಕೊಂಡಿತು. “ನಾವು ಅವರನ್ನು ಸ್ಥಳೀಯ [ಸರ್ಕಾರಿ] ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವರಿಗೆ ಔಷಧಿ ನೀಡಲಾಯಿತು ಮತ್ತು ಅಲ್ಲಿ ಅವರ ಸುಧಾರಿಸುತ್ತಿತ್ತು. ವೈದ್ಯರು ಕೆಲವು ಪರೀಕ್ಷೆಗಳನ್ನು ಹೇಳಿದರು, ಆದರೆ ವಿಕ್ರಮಗಢದಲ್ಲಿರುವ ಏಕೈಕ ರೋಗಪತ್ತೆ ಪ್ರಯೋಗಾಲಯವನ್ನು ಮುಚ್ಚಲಾಗಿತ್ತು. ಕೆಲವು ದಿನಗಳ ನಂತರ, ಒಂದು ರಾತ್ರಿ 3 ಗಂಟೆಯ ಸುಮಾರಿಗೆ, ಅವರಿಗೆ ಉಸಿರಾಡಲು ಕಷ್ಟವಾಗತೊಡಗಿತು”ಎಂದು ಮಹೇಶ್ ಮೋರ್ಗಾ ಏಪ್ರಿಲ್ 26ರ ಮುಂಜಾನೆ ಅವರ ಪತ್ನಿ ಸುಮಿತಾ ಅವರ ತಮ್ಮನಿಗೆ ಎದುರಾದ ಪರಿಸ್ಥಿತಿಯನ್ನು ವಿವರಿಸುತ್ತಿದ್ದರು.

Mangesh Pagi’s parents mourn the loss of their son outside ReVera Hospital while his wife, Mina (right) sits stunned
PHOTO • Shraddha Agarwal
Mangesh Pagi’s parents mourn the loss of their son outside ReVera Hospital while his wife, Mina (right) sits stunned
PHOTO • Shraddha Agarwal

ಮಂಗೇಶ್ ಪಾಗಿಯ ಪೋಷಕರು ರೆವೆರಾ ಆಸ್ಪತ್ರೆಯ ಹೊರಗೆ ತಮ್ಮ ಮಗನನ್ನು ಕಳೆದುಕೊಂಡು ಶೋಕಿಸುತ್ತಿದ್ದರೆ, ಅವರ ಪತ್ನಿ ಮೀನಾ (ಬಲ) ದಿಗ್ಭ್ರಮೆಗೊಂಡಿದ್ದಾರೆ

"ಆರಂಭದಲ್ಲಿ, ನಾವು ಅವರನ್ನು [ವಿಕ್ರಮಗಢದ] ಮತ್ತೊಂದು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಅವರು ಅವರನ್ನು ಕೋವಿಡ್ ಕೇಂದ್ರಕ್ಕೆ ಕರೆದೊಯ್ಯಲು ಹೇಳಿದರು. ಅವರಿಗೆ ಆಗಲೇ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಖಾಸಗಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಗೆ ಕರೆ ಮಾಡಿದೆವ ಅದರಲ್ಲಿ ಸ್ವಲ್ಪ ಆಮ್ಲಜನಕವಿತ್ತು. ಆದರೆ ರೆವೆರಾದಲ್ಲಿ ನಮಗೆ ಹಾಸಿಗೆ ಸಿಗಲಿಲ್ಲ. ನಾವು ಅವರಿಗೆ ಹಲವಾರು ಬಾರಿ ಬೇಡಿಕೊಂಡೆವು, ಆದರೆ ವೈದ್ಯರು ಸ್ಥಳವಿಲ್ಲ ಎಂದು ಹೇಳಿದರು" ಎಂದು ಮಹೇಶ್ ಹೇಳುತ್ತಾರೆ. ಅವರು ಬೆಳಿಗ್ಗೆ 8 ಗಂಟೆಯಿಂದ ರೆವೆರಾದಲ್ಲಿ ಹಾಸಿಗೆ ಹುಡುಕಲು ಹೆಣಗಾಡುತ್ತಿದ್ದರು.

ಪಾಲ್ಘರ್ ಜಿಲ್ಲೆಯಲ್ಲಿ ದಹನು, ಜವ್ಹಾರ್, ಮೊಖಡಾ, ಪಾಲ್ಘರ್, ತಲಸಾರಿ, ವಸಾಯಿ, ವಿಕ್ರಮ್ಗಡ್ ಮತ್ತು ವಾಡಾ ಎಂಬ ಎಂಟು ತಾಲ್ಲೂಕುಗಳಿವೆ. ಜಿಲ್ಲೆಯಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಇದ್ದು, 12 ಮೀಸಲು ಕೋವಿಡ್ ಆಸ್ಪತ್ರೆಗಳಿವೆ. ಒಟ್ಟು 2,284 ಪ್ರತ್ಯೇಕ ಹಾಸಿಗೆಗಳು, 599 ಆಮ್ಲಜನಕದ ಹಾಸಿಗೆಗಳು, 42 ತೀವ್ರ ನಿಗಾ ಘಟಕಗಳು ಮತ್ತು 75 ವೆಂಟಿಲೇಟರ್ ಹಾಸಿಗೆಗಳಿವೆ. ಮೇ 12ರಂದು, ಸುಮಾರು ಅರ್ಧದಷ್ಟು ಪ್ರತ್ಯೇಕ ಹಾಸಿಗೆಗಳು ಮತ್ತು 73 ಆಮ್ಲಜನಕದ ಹಾಸಿಗೆಗಳು ಖಾಲಿ ಇದ್ದವು ಎಂದು ಜಿಲ್ಲೆಯ ವೆಬ್ಸೈಟ್ ತಿಳಿಸಿದೆ. ಒಂದು ತೀವ್ರ ನಿಗಾ ಘಟಕದ ಹಾಸಿಗೆ ಮತ್ತು ಮೂರು ವೆಂಟಿಲೇಟರ್ ಹಾಸಿಗೆಗಳಷ್ಟೇ ಆ ದಿನ ಲಭ್ಯವಿದ್ದವು.

ಜಿಲ್ಲೆಯಲ್ಲಿ ಈವರೆಗೆ ಸುಮಾರು 1 ಲಕ್ಷ (99,539) ಕೋವಿಡ್-ಪಾಸಿಟಿವ್ ಪ್ರಕರಣಗಳು ಮತ್ತು 1,792 ಸಾವುಗಳು ದಾಖಲಾಗಿವೆ.

ಶ್ಯಾಮ್ ಅವರಿಗಾಗಿ ಹಾಸಿಗೆ ಹುಡುಕಲು ಹೆಣಗಾಡುತ್ತಿದ್ದ ಶ್ಯಾಮ್ ಅವರ ಇನ್ನೊಬ್ಬ ಸೋದರ ಮಾವ ಪಂಕಜ್ ಪಾಟ್ಕರ್ ಸ್ಥಳೀಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಸಹಾಯದಿಂದ ವಡಾ ಪಟ್ಟಣದಿಂದ ಆಮ್ಲಜನಕ ಸಿಲಿಂಡರ್ ಪಡೆದರು. "ನಾವು ಎರಡನೇ ಸಿಲಿಂಡರಿನೊಂದಿಗೆ ಅಲ್ಲಿಗೆ ತಲುಪಿದಾಗ ಆಂಬ್ಯುಲೆನ್ಸಿನಲ್ಲಿ ಆಮ್ಲಜನಕದ ಕೊರತೆಯಿತ್ತು" ಎಂದು ಪಂಕಜ್ ನನಗೆ ಫೋನಿನಲ್ಲಿ ಹೇಳಿದರು. "ನಾವು ಅವರನ್ನು ಬೋಯಿಸರದ [40 ಕಿಲೋಮೀಟರ್ ದೂರ] ಕೋವಿಡ್ ಕೇಂದ್ರಕ್ಕೆ ಕರೆದೊಯ್ದೆವು. ಅವರು ಅಲ್ಲಿ ಸಿಟಿ ಸ್ಕ್ಯಾನ್ ಮಾಡಿದರು, ಆದರೆ ಅಲ್ಲಿಯೂ ಅವರಿಗೆ ಹಾಸಿಗೆ ಸಿಗಲಿಲ್ಲ. ಭಿವಾಂಡಿ ಮತ್ತು ಥಾಣೆಯಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಹಾಸಿಗೆಗಳನ್ನು ಹುಡುಕಲು ನಾವು ಪ್ರಯತ್ನಿಸಿದೆವು."

Sumitra Moragha (left) says: 'No hospital gave him a bed. My brother couldn’t breathe. His new bride [Rupali, right, in blue] hasn’t eaten in days'
PHOTO • Shraddha Agarwal
Sumitra Moragha (left) says: 'No hospital gave him a bed. My brother couldn’t breathe. His new bride [Rupali, right, in blue] hasn’t eaten in days'
PHOTO • Shraddha Agarwal

ಸುಮಿತ್ರಾ ಮೊರ್ಗಾ (ಎಡ) ಹೇಳುತ್ತಾರೆ: 'ಅವರಿಗೆ ಯಾವ ಆಸ್ಪತ್ರೆಯಲ್ಲಿಯೂ ಹಾಸಿಗೆ ಸಿಗಲಿಲ್ಲ. ನನ್ನ ಸಹೋದರನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಅವರ ಪತ್ನಿ [ರೂಪಾಲಿ, ಬಲ, ನೀಲಿ ಗೌನ್ ಧರಿಸಿ] ಎರಡು ದಿನಗಳಿಂದ ಆಹಾರವನ್ನು ಮುಟ್ಟಿಲ್ಲʼ

"ಆದರೆ ಅಲ್ಲಿಯೂ ಹಾಸಿಗೆ ಸಿಗಲಿಲ್ಲ ಮತ್ತು ನಾವು ಅವರನ್ನು ಮತ್ತೆ ರೆವೆರಾಗೆ ಕರೆದೊಯ್ದೆವು" ಎಂದು ಪಂಕಜ್ ಹೇಳುತ್ತಾರೆ. ರೆವೆರಾದಲ್ಲಿ ಹಾಸಿಗೆ ಸಿಗಬಹುದೇ ಎಂದು ನೋಡಲು ಅವರು ಹಿಂತಿರುಗುವ ಹೊತ್ತಿಗೆ, ಮಧ್ಯಾಹ್ನ 3 ಗಂಟೆಯಾಗಿತ್ತು. ಹಾಸಿಗೆಗಾಗಿ ಅವರ ಹುಡುಕಾಟವು ಪ್ರಾರಂಭವಾಗಿ ಏಳು ಗಂಟೆಗಳು ಕಳೆದಿದ್ದವು. ಆಂಬ್ಯುಲೆನ್ಸ್ ವೆಚ್ಚವನ್ನು ಭರಿಸಲು ಅವರು ಸಂಬಂಧಿಕರಿಂದ 8,000 ರೂ.ಗಳನ್ನು ತೆಗೆದುಕೊಂಡಿದ್ದಾರೆ. ಅವರ ಕುಟುಂಬವು ಠಾಕೂರ್ ಆದಿವಾಸಿ ಸಮುದಾಯಕ್ಕೆ ಸೇರಿದೆ.

"ಅವರನ್ನು ದಾಖಲಿಸಿಕೊಳ್ಳುವಂತೆ ನಾವು ಅಲ್ಲಿನ ವೈದ್ಯರನ್ನು ಬೇಡಿಕೊಳ್ಳುತ್ತಿದ್ದಾಗ, ಶ್ಯಾಮ್ ಕೊನೆಯುಸಿರೆಳೆದರು" ಎಂದು ಪಂಕಜ್ ಹೇಳುತ್ತಾರೆ.

"ಅವರಿಗೆ ಉಸಿರಾಡಲು ಸಾಧ್ಯವಾಗಲಿಲ್ಲ" ಎಂದು ಶ್ಯಾಮ್ ಸಹೋದರಿ ಸುಮಿತ್ರಾ ಹೇಳುತ್ತಾರೆ. "ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರಿಗೆ ಎಲ್ಲಿಯೂ ಹಾಸಿಗೆಯನ್ನು ನೀಡಲಿಲ್ಲ. ಯಾರೂ ಅವಋಗೆ ಆಮ್ಲಜನಕವನ್ನು ನೀಡಲಿಲ್ಲ. ನನ್ನ ಸಹೋದರನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಅವನ ಹೆಂಡತಿ ತುಂಬಾ ದಿನಗಳಿಂದ ಆಹಾರವನ್ನು ಮುಟ್ಟಿಲ್ಲ. ಹೋಗಿ ಅವಳನ್ನು ನೋಡಿ. ಅವಳು ಆಘಾತದಿಂದ ಹೊರಬಂದಿಲ್ಲ.”

ಶ್ಯಾಮ್ ಗ್ರಾಮದ ಆಟೋಮೋಟಿವ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. 24 ವರ್ಷದ ರೂಪಾಲಿ ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕುಳಿತಿದ್ದಾರೆ. ಅವರ ಸಹೋದರಿ ಅವರನ್ನು ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ. ಪತಿ ತೀರಿಕೊಂಡಾಗಿನಿಂದ ಅವರು ಊಟ ಮಾಡಿಲ್ಲ. "ನಾವು ಆಮ್ಲಜನಕಕ್ಕಾಗಿ ಅವರ ಕಾಲಿಗೆ ಬಿದ್ದೆವು, ಬೇಡಿಕೊಂಡೆವು" ಎಂದು ಅವರು ಹೇಳುತ್ತಾರೆ. ಅವರಿಗೆ ಬೇರೇನೂ ಬೇಕಿರಲಿಲ್ಲ, ಆಮ್ಲಜನಕ ಸಿಕ್ಕಿದ್ದರೆ ಸಾಕಿತ್ತು. ನಿಮಗೆ ಏನಾದರೂ ಆದರೆ, ನಗರದಲ್ಲಿ ದೊಡ್ಡ ಆಸ್ಪತ್ರೆಗಳಿವೆ. ಆದರೆ ಹಳ್ಳಿಯ ಜನರಿಗೆ ಆಮ್ಲಜನಕವನ್ನು ಯಾರು ಪೂರೈಸುತ್ತಾರೆ?”

ಅನುವಾದ: ಶಂಕರ. ಎನ್. ಕೆಂಚನೂರು

Shraddha Agarwal

শ্রদ্ধা অগরওয়াল পিপলস আর্কাইভ অফ রুরাল ইন্ডিয়ার সাংবাদিক এবং কন্টেন্ট সম্পাদক।

Other stories by Shraddha Agarwal
Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru