ಅದು ಮಾರ್ಚ್ ತಿಂಗಳ ಬಿಸಿಲಿನ ಒಂದು ಮಧ್ಯಾಹ್ನ ಮತ್ತು ಔರಾಪಾನಿ ಗ್ರಾಮದ ಹಿರಿಯರು ಸಣ್ಣ ಬಿಳಿ ಬಣ್ಣದ ಚರ್ಚಿನಲ್ಲಿ ಸೇರಿದ್ದರು. ಆದರೆ ಅವರ್ಯಾರೂ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುವ ಸಲುವಾಗಿ ಇಲ್ಲಿಗೆ ಬಂದಿರಲಿಲ್ಲ.
ನೆಲದ ಮೇಲೆ ವೃತ್ತಾಕಾರದಲ್ಲಿ ಕುಳಿತಿರುವ ಗುಂಪು ಒಂದು ಪ್ರಮುಖ ವಿಷಯವನ್ನು ಚರ್ಚಿಸುತ್ತಿದ್ದರು - ಅವರು ಅಧಿಕ ಅಥವಾ ಕಡಿಮೆ ದೀರ್ಘಕಾಲದ ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ, ಅವರೆಲ್ಲ ತಿಂಗಳಿಗೊಮ್ಮೆ ಭೇಟಿಯಾಗಿ ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುತ್ತಾರೆ ಮತ್ತು ತಮ್ಮ ಔಷಧಿಗಳನ್ನು ಪಡೆಯಲು ಕಾಯುವ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತಾನಾಡಿಕೊಳ್ಳುತ್ತಾರೆ.
“ಇಲ್ಲಿನ ಸಭೆಗಳಿಗೆ ಬರುವುದೆಂದರೆ ನನಗೆ ಇಷ್ಟ. ಏಕೆಂದರೆ ಇಲ್ಲಿ ಬಂದು ನಾನು ನನ್ನ ಚಿಂತೆಗಳನ್ನು ಹಂಚಿಕೊಳ್ಳುತ್ತೇನೆ” ಎಂದು ರೂಪಿ ಬಾಯಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ರಪಿ ಬಘೇಲ್ ಹೇಳುತ್ತಾರೆ. 53 ವರ್ಷದ ಅವರು ಕಳೆದು ಐದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದಾರೆ. ಬೈಗಾ ಬುಡಕಟ್ಟು ಜನಾಂಗಕ್ಕೆ ಸೇರಿದ ಅವರು ಜೀವನಾಧಾರಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದು, ತಮ್ಮ ಆದಾಯಕ್ಕೆ ಪೂರಕವಾಗಿ ಕಾಡಿನಿಂದ ಸೌದೆ, ಮಹುವಾದಂತಹ ಎನ್‌ಟಿಎಪ್‌ಟಿ ಕಾಡುತ್ಪತ್ತಿಯನ್ನೂ ಸಂಗ್ರಹಿಸುತ್ತಾರೆ. ಬೈಗಾ ಸಮುದಾಯವನ್ನು ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿಜಿವಿಟಿ) ಗುಂಪುಗಳಡಿ ಪಟ್ಟಿ ಮಾಡಲಾಗಿದೆ. ಔರಾಪಾನಿ ಗ್ರಾಮದಲ್ಲಿ ಹೆಚ್ಚಿನವರು ಬೈಗಾ ಸಮುದಾಯಕ್ಕೆ ಸೇರಿದವರು.
ಬಿಲಾಸಪುರ ಜಿಲ್ಲೆಯ ಕೋಟಾ ಬ್ಲಾಕಿನಲ್ಲಿರುವ ಈ ಊರು ಛತ್ತೀಸಗಢದ ಅಚಾನಕ್ಮಾರ್-ಅಮರಕಂಟಕ ಜೀವವಲಯ ಮೀಸಲು ಅರಣ್ಯದ (ಎಎಬಿಆರ್) ಹತ್ತಿರದಲ್ಲಿದೆ. “ನಾನು ಕಾಡಿನಿಂದ ಬಿದಿರು ತಂದು ಜಾಡೂ (ಪೊರಕೆ) ತಯಾರಿಸಿ ಮಾರುತ್ತಿದ್ದೆ. ಆದರೆ ಈಗ ಹೆಚ್ಚು ನಡೆಯಲು ಸಾಧ್ಯವಿಲ್ಲದ ಕಾರಣ ಮನೆಯಲ್ಲೇ ಇರುತ್ತೇನೆ” ಎನ್ನುತ್ತಾಅಧಿಕ ರಕ್ತದೊತ್ತಡದಿಂದಾಗಿ ಉಂಟಾಗುವ ಬಳಲಿಕೆಯು ತನ್ನ ಮೇಲೆ ಬೀರಿರುವ ಪರಿಣಾಮವನ್ನು ಪುಲ್ಸರಿ ಲಕ್ಡಾ ವಿವರಿಸುತ್ತಾರೆ. ಬದುಕಿನ ಆರನೇ ದಶಕದಲ್ಲಿರುವ ಅವರು ಈಗ ಮನೆಯಲ್ಲಿಯೇ ಇದ್ದು ತಮ್ಮ ಆಡುಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಹಗಲಿನಲ್ಲಿ ಹಸುವಿನ ಸಗಣಿಯನ್ನು ಸಂಗ್ರಹಿಸುತ್ತಾರೆ. ಬೈಗಾ ಸಮುದಾಯದ ಬಹುತೇಕ ಜನರು ಜೀವನೋಪಾಯ್ಕಕಾಗಿ ಕಾಡನ್ನೇ ಅವಲಂಬಿಸಿದ್ದಾರೆ.
ಛತ್ತೀಸಗಢ ರಾಜ್ಯದಲ್ಲಿ, ಗ್ರಾಮೀಣ ಜನಸಂಖ್ಯೆಯ 14 ಪ್ರತಿಶತದಷ್ಟು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5 (ಎನ್ಎಫ್ಎಚ್ಎಸ್ -5), 2019-2021 ಹೇಳುತ್ತದೆ. "ಒಬ್ಬ ವ್ಯಕ್ತಿಯು 140 ಎಂಎಂಹೆಚ್ ಹೆಚ್ಚು ಅಥವಾ ಸಮಾನವಾದ ಸಿಸ್ಟೋಲಿಕ್ ರಕ್ತದೊತ್ತಡದ ಮಟ್ಟವನ್ನು ಹೊಂದಿದ್ದರೆ ಅಥವಾ 90 ಎಂಎಂಹೆಚ್ ಅಳತೆಗಿಂತಲೂ ಹೆಚ್ಚು ಅಥವಾ ಸಮಾನವಾದ ಡಯಾಸ್ಟೊಲಿಕ್ ರಕ್ತದೊತ್ತಡದ ಮಟ್ಟವನ್ನು ಹೊಂದಿದ್ದರೆ ಅಂತಹ ವ್ಯಕ್ತಿಯನ್ನು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿ ಎಂದು ವರ್ಗೀಕರಿಸಲಾಗುತ್ತದೆ" ಎಂದು ಅದು ಹೇಳಿದೆ.
ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳವನ್ನು ತಡೆಯಲು ಅಧಿಕ ರಕ್ತದೊತ್ತಡವನ್ನು ಮುಂಚಿತವಾಗಿ ಪತ್ತೆಹಚ್ಚುವುದು ಬಹಳ ಅಗತ್ಯ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಹೇಳುತ್ತದೆ. ಲೋ ಬಿಪಿ ಸಮಸ್ಯೆಗೆ ಸಂಬಂಧಿಸಿದಂತೆ ಬೇಕಿರುವ ಜೀವನಶೈಲಿ ಬದಲಾವಣೆಗಳನ್ನು ಸಹಾಯಕ ಗುಂಪಿನ ಮೂಲಕ ಕಲಿಸಲಾಗುತ್ತದೆ. “ಮೇ ಮೀಟಿಂಗ್ ಮೇ ಆತಿ ಹು, ತೋ ಅಲಗ್ ಚೀಜ್ ಸೀಕ್ನೆ ಕೇ ಲಿಯಾ ಮಿಲ್ತಾ ಹೈ, ಜೈಸೇ ಯೋಗಾ ಜೋ ಮೇರೆ ಶರೀರ್ ಕೋ ಮಜಬೂತ್ ರಕ್ ಥಾ ಹೈ [ಈ ಮೀಟಿಂಗಿನಲ್ಲಿ ನನಗೆ ಒಳ್ಳೆಯ ವಿಷಯಗಳು ಕಲಿಯಲು ಸಿಗುತ್ತದೆ. ಇಲ್ಲಿಗೆ ಬಂದ ಮೇಲೆ ಯೋಗದಿಂದ ಶರೀರ ಗಟ್ಟಿಯಾಗುತ್ತದೆ ಎನ್ನುವುದು ತಿಳಿಯಿತು]” ಎಂದು ಪುಲ್ಸರಿ ಹೇಳುತ್ತಾರೆ.
ಸುಮಾರು ಮೂರು ದಶಕಗಳಿಂದ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ವೈದ್ಯಕೀಯ ಸಂಸ್ಥೆಯಾದ ಜನ ಸ್ವಾಸ್ಥ್ಯ ಸಹಯೋಗ್ (ಜೆಎಸ್ಎಸ್) ಸಂಸ್ಥೆಯ 31 ವರ್ಷದ ಹಿರಿಯ ಆರೋಗ್ಯ ಕಾರ್ಯಕರ್ತ ಸೂರಜ್ ಬೇಗಾ ನೀಡಿದ ಮಾಹಿತಿಯನ್ನು ಅವರು ಉಲ್ಲೇಖಿಸುತ್ತಿದ್ದಾರೆ. ಹೈ ಅಥವಾ ಲೋವ್ ಬಿಪಿಯ ಪರಿಣಾಮವನ್ನು ಸೂರಜ್ ಗುಂಪಿಗೆ ವಿವರಿಸುತ್ತಾರೆ ಮತ್ತು ರಕ್ತದೊತ್ತಡವನ್ನು ಮೆದುಳಿನಲ್ಲಿರುವ ಸ್ವಿಚ್ಚುಳಿಗೆ ಹೋಲಿಸುವ ಮೂಲಕ ಅದನ್ನು ವಿಭಜಿಸುತ್ತಾರೆ: "ಬಿಪಿ ನಮ್ಮ ಮೆದುಳಿನಲ್ಲಿನ ಸ್ವಿಚ್ಚುಳನ್ನು ದುರ್ಬಲಗೊಳಿಸಬಾರದು ಎಂದಾದರೆ, ನಾವು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳಬೇಕು, ವ್ಯಾಯಾಮಗಳನ್ನು ಮಾಡಬೇಕು."
ಮನೋಹರ್ ಕಾಕಾ ಎಂದು ಪ್ರೀತಿಯಿಂದ ಕರೆಯಲ್ಪಡುವ ಮನೋಹರ್ ಉರಾಣ್ವ್ ಅವರಿಗೆ 87 ವರ್ಷ ವಯಸ್ಸಾಗಿದೆ. ಅವರು ಕಳೆದ 10 ವರ್ಷಗಳಿಂದ ಸ್ವಸಹಾಯ ಗುಂಪಿನ ಸಭೆಗಳಿಗೆ ಬರುತ್ತಿದ್ದಾರೆ. "ನನ್ನ ಬಿಪಿ ಈಗ ನಿಯಂತ್ರಣದಲ್ಲಿದೆ, ಆದರೆ ಕೋಪವನ್ನು ನಿಯಂತ್ರಿಸಲು ನನಗೆ ಸಮಯ ಹಿಡಿಯಿತು. ಈಗ ಟೆನ್ಷನ್ ತೆಗೆದುಕೊಳ್ಳದಿರುವುದನ್ನು ಕಲಿತಿದ್ದೇನೆ!" ಎಂದು ಅವರು ಹೇಳುತ್ತಾರೆ.
ಜೆಎಸ್ಎಸ್ ಅಧಿಕ ರಕ್ತದೊತ್ತಡ ಮಾತ್ರವಲ್ಲದೆ ಇತರ ದೀರ್ಘಕಾಲದ ಕಾಯಿಲೆಗಳಿಗೆ ಇತರ ಸ್ವಸಹಾಯ ಗುಂಪುಗಳನ್ನು ಸಹ ಆಯೋಜಿಸುತ್ತದೆ - ಅಂತಹ 84 ಗುಂಪುಗಳು 50 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಸಾವಿರಕ್ಕೂ ಹೆಚ್ಚು ಜನರು ಇದರ ಉಪಯೋಗ ಪಡೆಯುತ್ತಿದ್ದಾರೆ. ಯುವ ಕಾರ್ಮಿಕರು ಸಹ ಇಲ್ಲಿಗೆ ಬರುತ್ತಾರೆ, ಆದರೆ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
“ಹಿರಿಯರು ದುಡಿಯುವುದನ್ನು ನಿಲ್ಲಿಸುವ ಕಾರಣ ಅವರನ್ನು ನಿರ್ಲಕ್ಷಿಸಲಾಗುತ್ತದೆ. ಇದು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. ಅವರು ಒಬ್ಬಂಟಿಯಾಗುವುದರ ಜೊತೆಗೆ ಅನೇಕ ಸಂದರ್ಭಗಳಲ್ಲಿ ಅವರ ಬದುಕಿನ ಕೊನೆಯಲ್ಲಿ ಅವರ ಜೊತೆ ಘನತೆಯ ಬದುಕು ಸಿಗುವುದಿಲ್ಲ” ಎಂದು ಜೆಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಮಿನಾಲ್ ಮದನಕರ್ ಹೇಳುತ್ತಾರೆ.
ಹೆಚ್ಚಾಗಿ ಈ ವಯಸ್ಸಿನವರು ವೈದ್ಯಕೀಯ ಆರೈಕೆ ಮತ್ತು ಬೆಂಬಲವನ್ನು ಬಯಸುತ್ತಾರೆ. ಜೊತೆಗೆ ಆಹಾರದ ಬಗ್ಗೆ ಸಲಹೆಯೂ ಬೇಕಿರುತ್ತದೆ. "ಅನ್ನವನ್ನು ತಿನ್ನುವುದಕ್ಕಿಂತ ಸಿರಿಧಾನ್ಯಗಳನ್ನು ತಿನ್ನುವುದು ಒಳ್ಳೆಯದು ಎಂಬಂತಹ ನನ್ನ ಬಗ್ಗೆ ಕಾಳಜಿ ವಹಿಸಲು ಸಹಾಯ ಮಾಡುವ ವಿಷಯಗಳನ್ನು ನಾವು ಇಲ್ಲಿ ಕಲಿಯುತ್ತೇವೆ, ಮತ್ತು ಸಹಜವಾಗಿ, ಇಲ್ಲಿ ಔಷಧಿಗಳೂ ದೊರೆಯುತ್ತವೆ" ಎಂದು ರೂಪಾ ಬಘೇಲ್ ಹೇಳುತ್ತಾರೆ.
ಸೆಷನ್ ನಂತರ ಭಾಗವಹಿಸುವವರಿಗೆ ಕೋಡೋ ಧಾನ್ಯದ ಖೀರ್ ನೀಡಲಾಗುತ್ತದೆ. ಸಿರಿಧಾನ್ಯಗಳ ರುಚಿಯು ಅವರನ್ನು ಅದನ್ನು ಇನ್ನಷ್ಟು ತಿನ್ನಲು ಪ್ರೇರೇಪಿಸುತ್ತದೆ ಮತ್ತು ಮುಂದಿನ ತಿಂಗಳು ಅವುಗಳನ್ನು ಮರಳಿ ತರಲು ಸಹಾಯ ಮಾಡುತ್ತದೆ ಎನ್ನುವುದು ಜೆಎಸ್ಎಸ್ ಸಿಬ್ಬಂದಿಯ ಆಶಯ. ಬಿಲಾಸ್ಪುರ ಮತ್ತು ಮುಂಗೇಲಿ ಜಿಲ್ಲೆಗಳ ಗ್ರಾಮೀಣ ಸಮುದಾಯಗಳು ಹೆಚ್ಚಾಗಿ ಮಧುಮೇಹವನ್ನು ಹೊಂದಿವೆ ಅವರ ಆಹಾರ ಪದ್ಧತಿ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಒದಗಿಸುವ ಬಿಳಿ ಅಕ್ಕಿಯಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಅಂಶವುಳ್ಳ ಆಹಾರ ಇದಕ್ಕೆ ಕಾರಣವಾಗಿದೆ.
“ಕೃಷಿ ಮತ್ತು ಆಹಾರ ಪದ್ಧತಿಗಳಲ್ಲಿ ಬದಲಾವಣೆ ಕಂಡುಬಂದಿದೆ. ಇಲ್ಲಿನ ಸಮುದಾಯಗಳು ವಿವಿಧ ರೀತಿಯ ಏಕದಳ ಧಾನ್ಯಗಳನ್ನು ಬೆಳೆದು ತಿನ್ನುತ್ತಿದ್ದವು. ಅವು ಹೆಚ್ಚು ಪೌಷ್ಟಿಕ ಮತ್ತು ಆರೋಗ್ಯಕರವಾಗಿದ್ದವು. ಆದರೆ ಈಗ ಅದರ ಜಾಗಕ್ಕೆ ಪಾಲಿಶ್ ಮಾಡಲಾದ ಬಿಳಿ ಅಕ್ಕಿ ಬಂದಿದೆ. ಎಂದು ಮಿನಾಲ್ ಹೇಳುತ್ತಾರೆ. ಸಭೆಯಲ್ಲಿ ಭಾಗವಹಿಸಿದವರಲ್ಲಿ ಅನೇಕರು ತಾವು ಹೆಚ್ಚು ಅಕ್ಕಿ ಮತ್ತು ಗೋಧಿಯನ್ನು ತಿನ್ನುತ್ತೇವೆ, ಇತರ ಕಿರು ಧಾನ್ಯಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದೇವೆ ಎಂದು ಹೇಳಿದರು.
ಈ ಹಿಂದೆ ರೂಢಿಯಲ್ಲಿದ್ದ ಕೃಷಿ ಮಾದರಿಗಳಲ್ಲಿ ಬದಲಾವಣೆ ಕಂಡುಬಂದಿದೆ. ಈ ಹಿಂದೆ ವಿವಿಧ ಬೇಳೆಗಳು ಮತ್ತು ತಿಲ್ಹನ್ (ದ್ವಿದಳ ಧಾನ್ಯಗಳು, ಹಸಿರು ತರಕಾರಿ ಕೋಡುಗಳು ಮತ್ತು ಎಣ್ಣೆಕಾಳುಗಳು) ಬೆಳೆಯುತ್ತಿದ್ದರು, ಪ್ರೋಟೀನ್ ಮತ್ತು ಅಗತ್ಯ ವಿಟಮಿನ್ ಇವುಗಳ ಪೂರೈಕೆಯಾಗುತ್ತಿತ್ತು, ಆದರೆ ಈಗ ಇದರ ಸೇವನೆ ಇಲ್ಲ. ಸಾಸಿವೆ, ನೆಲಗಡಲೆ, ಎಣ್ಣೆಕಾಳು ಮತ್ತು ಎಳ್ಳಿನಂತಹ ಪೌಷ್ಟಿಕ ತೈಲಗಳನ್ನು ಹೊಂದಿರುವ ವಿವಿಧ ಬೀಜಗಳು ಸಹ ಅವರ ಆಹಾರದಿಂದ ಬಹುತೇಕ ದೂರವಾಗಿವೆ.
ಚರ್ಚೆ ಮತ್ತು ರಕ್ತದೊತ್ತಡ ತಪಾಸಣೆಯ ನಂತರ, ಮೋಜು ಪ್ರಾರಂಭವಾಗುತ್ತದೆ – ಒಂದಷ್ಟು ವ್ಯಾಯಾಮ ಮತ್ತು ಯೋಗದೊಂದಿಗೆ ಹಲವು ಆಯಾಸದ ದನಿಗಳು ಕೇಳಿಸತೊಡಗುತ್ತವೆ.
“ಯಂತ್ರಕ್ಕೆ ಎಣ್ಣೆ ಹಾಕುತ್ತಿದ್ದರೆ ಅದು ಚಾಲನೆಯಲ್ಲಿರುತ್ತದೆ. ಹಾಗೆಯೇ ನಾವು ನಮ್ಮ ಸ್ನಾಯುಗಳಿಗೂ ಎಣ್ಣೆ ಹಾಕಬೇಕು. ಮೋಟಾರುಬೈಕಿನಂತೆ ನಾವು ನಮ್ಮ ಎಂಜಿನ್ನುಗಳಿಗೂ ಎಣ್ಣೆ ಹಾಕಬೇಕು” ಎಂದು ಸೂರಜ್ ಹೇಳಿದರು. ಗುಂಪು ಬೇರಾಗುವ ಮೊದಲು ಅಲ್ಲೊಂದು ನಗುವಿನ ಕ್ಷಣ ಹುಟ್ಟಿಕೊಂಡಿತು. ನಂತರ ಒಬ್ಬೊಬ್ಬರಾಗಿ ಮನೆಯ ಕಡೆ ಹೊರಟರು.
ಅನುವಾದ: ಶಂಕರ. ಎನ್. ಕೆಂಚನೂರು