ಇನ್ನೇನು ಫಗುನ್ ತಿಂಗಳು ಬರುವುದರಲ್ಲಿತ್ತು. ಒಂದು ಆಲಸಿ ಭಾನುವಾರದ ದಿನ ಬೆಳಗಿನ ಹೊತ್ತು ಸುರೇಂದ್ರನಗರ ಜಿಲ್ಲೆಯ ಖಾರಗೋಡಾ ಸ್ಟೇಷನ್ ಬಳಿಯ ಕಾಲುವೆಯಲ್ಲಿ ಸೂರ್ಯ ಮುಖ ತೊಳೆದುಕೊಳ್ಳುತ್ತಿದ್ದ. ಕಾಲುವೆಗೆ ಅಡ್ಡಲಾಗಿ ಇಡಲಾಗಿದ್ದ ಒಂದು ತಾತ್ಕಾಲಿಕ ತಡೆ ನೀರು ಮುಂದಕ್ಕೆ ಹರಿಯದಂತೆ ತಡೆಯುತ್ತಿತ್ತು. ನಿಂತ ನೀರು ಅಲ್ಲೇ ಒಂದು ಸಣ್ಣ ಕೆರೆಯನ್ನು ಸೃಷ್ಟಿಸಿತ್ತು. ಆ ತಡೆಯಿಂದ ಬೀಳುತ್ತಿದ್ದ ನೀರಿನ ಸದ್ದು ಅಲ್ಲಿ ಧ್ಯಾನ ಮಾಡುತ್ತಾ ಕುಳಿತ ಮಕ್ಕಳಿಗಿಂತ ಜೋರಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು. ಏಳು ಜನ ಹುಡುಗರು ಗಾಳಿ ಇಲ್ಲದ ಕಾರಣ ಅಲುಗಾಡದ ಸಣ್ಣ ಮರಗಳಂತೆ ಸ್ಥಿರವಾಗಿ ಸಾಲಾಗಿ ಕುಳಿತಿದ್ದರು. ಅವರು ಅಲ್ಲಿ ಮೀನು ಹಿಡಿಯುವಲ್ಲಿ ನಿರತರಾಗಿದ್ದರು. ಗಾಳದ ಹಗ್ಗ ಅಲುಗಾಡುತ್ತಿದ್ದಂತೆ ಹುಡುಗ ಗಾಳವನ್ನು ಮೇಲಕ್ಕೆತ್ತುತ್ತಾನೆ. ಕೆಲವು ನಿಮಿಷ ಫಡಫಡಿಸಿದ ಮೀನು ನಂತರ ಸಾಯುತ್ತದೆ.
ಅಲ್ಲಿಂದ ಸ್ವಲ್ಪ ದೂರದಲ್ಲಿ ಅಕ್ಷಯ್ ದರೋದರ, ಮಹೇಶ್ ಸಿಪಾರಾ ಮಾತನಾಡುತ್ತುಅ, ಕೂಗುತ್ತಾ, ಕಚ್ಚಾಡುತ್ತಾ ಆಣೆ ಮಾಡುತ್ತಾ ಹ್ಯಾಕ್ ಸಾ ಬ್ಲೇಡ್ ಒಂದನ್ನು ಬಳಸಿ ಮೀನನ್ನು ಮೀನನ್ನು ಕ್ಲೀನ್ ಮಾಡಿ ನಂತರ ಕತ್ತರಿಸತೊಡಗಿದರು. ಮಹೇಶನಿಗೆ ಸುಮಾರು 15 ವರ್ಷ. ಉಳಿದ ಆರು ಜನ ಇನ್ನೂ ಸ್ವಲ್ಪ ಚಿಕ್ಕವರು. ಮೀನು ಹಿಡಿಯುವ ಆಟ ಮುಗಿದಿತ್ತು. ಇದೀಗ ಆಟವಾಡುತ್ತಾ, ಮಾತನಾಡುತ್ತಾ ಸಂತಸ ಅನುಭವಿಸುವ ಸಮಯ. ಅಷ್ಟು ಹೊತ್ತಿಗೆ ಮೀನು ಸ್ವಚ್ಛಗೊಳಿಸುವ ಕೆಲಸ ಮುಗಿದಿತ್ತು. ಇದೀಗ ಸಾಮೂಹಿಕವಾಗಿ ಮೀನಿನ ಅಡುಗೆ ಮಾಡುವ ಸಮಯ. ಅಡುಗೆ ಮುಗಿದ ನಂತರ ಮೀನನ್ನು ಹಂಚಿಕೊಂಡು ತಿಂದು ಸಂಭ್ರಮಪಡುವ ಘಳಿಗೆಯೂ ಬಂದಿತು.
ಸ್ವಲ್ಪ ಸಮಯದ ನಂತರ ಅದೇ ಕೊಳಕ್ಕೆ ಜಿಗಿದ ಹುಡುಗರು ಕಲಕಲವೆಬ್ಬಿಸುತ್ತಾ ಈಜುತ್ತಾರೆ. ನಂತರ ಮೇಲೆ ಬಂದು ಅಲ್ಲಿದ್ದ ತೆಳು ಹುಲ್ಲಿನ ಸ್ಥಳದಲ್ಲಿ ನಿಂತು ತಮ್ಮ ಮೈ ಒಣಗಿಸಿಕೊಂಡರು. ಈ ಏಳು ಹುಡುಗರಲ್ಲಿ ಮೂವರು ಚುಮವಾಲಿಯಾ ಡಿನೋಟಿಫೈಡ್ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದವರು, ಇಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೆ ಇನ್ನಿಬ್ಬರು ಇತರ ಸಮುದಾಯಗಳಿಗೆ ಸೇರಿದವರು. ಸ್ನಾನ ಮುಗಿದ ನಂತರ ಈ ಏಳೂ ಜನರು ಪ್ರಸ್ಪರ ಛೇಡಿಸುತ್ತಾ, ಮಾತನಾಡುತ್ತಾ ಅಲ್ಲೇ ಓಡಾಡತೊಡಗಿದರು. ಅವರ ಬಳಿಗೆ ಹೋದ ನಾನು ಮೌನ ಮುರಿಯುವ ಸಲುವಾಗಿ ಅವರ ಬಳಿ “ಹೋಯ್ ನೀವೆಲ್ಲ ಎಷ್ಟನೇ ಕ್ಲಾಸಿನಲ್ಲಿ ಓದುತ್ತಿದ್ದೀರಿ?” ಎಂದು ಕೇಳಿದೆ.
ಇನ್ನೂ ಬಟ್ಟೆ ಹಾಕಿಕೊಂಡಿರದೆ ನಗುತ್ತಾ ನಿಂತಿದ್ದ ಪವನ್, ನಗುತ್ತಾ, “ಆ ಮೆಸಿಯೋ ನವಾಮು ಭಾಣಾ, ಆನ್ ಆ ವಿಲಾಸಿಯೋ ಛಟ್ಠು ಭಾಣಾ. ಬಿಜ್ಜು ಕೋಯ್ ನಾಥ್ ಬಾಣಾಟುಮು ವೈ ನಾಥ್ ಭಾಣಾತೋ [ಇವನು ಮಹೇಶಿಯೋ (ಮಹೇಶ್) ಒಂಬತ್ತನೇ ತರಗತಿ, ಮತ್ತು ವಿಲಾಸಿಯೋ (ವಿಲಾಸ್) ಆರನೇ ತರಗತಿ. ಉಳಿದ ಯಾರೂ ಶಾಲೆಗೆ ಹೋಗುತ್ತಿಲ್ಲ. ನಾನೂ ಕೂಡಾ].” ಅವನು ಮಾತನಾಡುತ್ತಾ ಒಂದು ಚೀಲದಿಂದ ಅಡಿಕೆ ಹೊರತೆಗದು ಅದನ್ನು ಚೂರು ಮಾಡಿದ. ನಂತರ ಅದಕ್ಕೆ ಸುಣ್ಣವನ್ನು ಬೆರೆಸುತ್ತಲೇ ನನ್ನೊಂದಿಗೆ ಮಾತನಾಡಿದ. ಅದನ್ನು ಚೆನ್ನಾಗಿ ಪುಡಿ ಮಾಡಿ, ಅದರಲ್ಲೇ ಒಂದು ಚಿಟಿಕೆಯನ್ನು ತನ್ನ ತುಟಿಗಳ ನಡುವೆ ಇಟ್ಟುಕೊಂಡು, ಉಳಿದಿದ್ದನ್ನು ಗೆಳೆಯರಿಗೆ ನೀಡಿದ. ಕೆಂಪು ರಸವನ್ನು ನೀರಿಗೆ ಉಗಿದು ಪವನ್ ಮಾತು ಮುಂದುವರೆಸಿದ, “ನೋ ಮಜಾ ಆವೇ. ಬೆನ್ ಮಾರ್ತಾತಾ. [ಓದುವುದರಲ್ಲಿ ಏನೂ ಮಜಾ ಇಲ್ಲ. ಟೀಚರ್ ಹೊಡೆಯುತ್ತಿದ್ದರು.” ಅವನು ಮಾತು ಮುಗಿಸುತ್ತಿದ್ದ ಹಾಗೆ ನನ್ನೊಳಗೆ ಒಂದು ಮೌನ ನೆಲೆಸಿತು.
ಅನುವಾದ: ಶಂಕರ. ಎನ್. ಕೆಂಚನೂರು