ಸರೋಜಿನಿಯು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಒಂದು ಷರ್ಟಿನ ಇಸ್ತ್ರಿ ಮಾಡಬಲ್ಲರು. ಪಂಚೆಯ ಇಸ್ತ್ರಿಗೆ ಎರಡು ನಿಮಿಷ ಹಿಡಿಯುತ್ತದೆ. ಕೆಲವೊಮ್ಮೆ ಸ್ವಲ್ಪ ನಿಧಾನಿಸಿ, ಹೆಚ್ಚು ಸುಕ್ಕುಗಟ್ಟಿದ ಷರ್ಟನ್ನು ಒದ್ದೆ ಬಟ್ಟೆಯ ತುಣುಕುಗಳನ್ನು ತುಂಬಿದ ಕಾಲುಚೀಲವೊಂದರಿಂದ ತೀಡುತ್ತಾರೆ – ಇದು ಬಟ್ಟೆಯನ್ನು ಒದ್ದೆ ಮಾಡಿ ಸುಕ್ಕುಗಳಿಗೆ ಇಸ್ತ್ರಿ ಹಾಕುವ ಜಾಣತನದ ಯುಕ್ತಿ.
80ರ ವಯಸ್ಸಿನ ಸರೋಜಿನಿ, ಬಟ್ಟೆ ಒಗೆಯುವ ಕೆಲಸಕ್ಕೆಂದು ಮೀಸಲಾಗಿರುವ ಕೇರಳದ ಫೋರ್ಟ್ ಕೊಚಿನ್‌ನ ಧೋಬಿ ಖಾನಾ ಪ್ರದೇಶದಲ್ಲಿ 15ನೇ ವಯಸ್ಸಿನಿಂದಲೂ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕವಾಗಿ ಬಟ್ಟೆ ಒಗೆಯುವ ಸ್ಥಳದಲ್ಲಿನ ತನ್ನ ಜಾಗದಲ್ಲಿ, ಇಸ್ತ್ರಿ ಮಾಡುವುದನ್ನು ಮುಂದುವರಿಸುತ್ತ, “ನಾನು ಆರೋಗ್ಯದಿಂದಿರುವವರೆಗೂ ಇದನ್ನು ನಿರ್ವಹಿಸುತ್ತೇನೆ (ಬಟ್ಟೆಗಳನ್ನು ಒಗೆಯುವುದು ಮತ್ತು ಇಸ್ತ್ರಿ ಮಾಡುವುದು)” ಎನ್ನುತ್ತಾರೆ ಆಕೆ.
ಇದೇ ಸ್ಥಳದಲ್ಲಿನ 60ರ ವಯಸ್ಸಿನ ಕುಮರೇಸನ್, “ಇಲ್ಲಿನ ಏಕೈಕ ಕೌಶಲವೆಂದರೆ, ಶ್ರಮವಹಿಸಿ ದುಡಿಯುವುದು” ಎನ್ನುತ್ತಾರೆ. ದಿನಂಪ್ರತಿ ಮುಂಜಾನೆ 5 ಗಂಟೆಗೆ ಅವರು ತಮ್ಮ ಮನೆಯಿಂದ ಒಂದು ಕಿ.ಮೀ.ಗಿಂತಲೂ ಕಡಿಮೆ ದೂರವಿರುವ ತೊಟ್ಟಿಗೆ ಸೈಕಲ್‌ನಲ್ಲಿ ಬರುತ್ತಾರೆ. ತುರ್ತಾಗಿ ಬಟ್ಟೆಗಳನ್ನು ತಲುಪಿಸಬೇಕಾದ ದಿನಗಳಲ್ಲಿ, ಅವರ ಕೆಲಸವು ಮುಂಜಾನೆ ೪ ಗಂಟೆಗೆ ಆರಂಭಗೊಂಡು, ರಾತ್ರಿ 11ರವರೆಗೂ ಮುಂದುವರಿಯುತ್ತದೆ. “ನಾಳೆ ಬಟ್ಟೆಗಳನ್ನು ತಲುಪಿಸಬೇಕಿರುವುದರಿಂದ ಇಂದು ನಾನು ಸ್ವಲ್ಪ ಆರಾಮವಾಗಿರಬಹುದು. ನಾಳೆ ನಾನು ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಬೇಕಾಗುತ್ತದೆ” ಎಂದು ಅವರು ತಿಳಿಸಿದರು.
ಗ್ರೇಟರ್ ಕೊಚಿನ್ ಡೆವಲಪ್‌ಮೆಂಟ್ ಅಥಾರಿಟಿಯಿಂದ ನಿರ್ಮಿಸಲ್ಪಟ್ಟ ಧೋಬಿ ಖಾನ, ಎರ್ನಾಕುಲಂ ಜಿಲ್ಲೆಯ ಫೋರ್ಟ್ ಕೊಚಿನ್ ಗ್ರಾಮದಲ್ಲಿ, ಎರಡು ಎಕರೆ ಪ್ರದೇಶದ, ವೆಲಿ ಮೈದಾನದ ಒಂದು ಕೊನೆಯಲ್ಲಿದ್ದು, ರಾಜ್ಯದಲ್ಲಿ, ಹಿಂದುಳಿದ ಜಾತಿಯ ಪಟ್ಟಿಗೆ ಸೇರಿಸಲ್ಪಟ್ಟ ವನ್ನನ್ ಸಮುದಾಯದವರಿಂದ ನಿರ್ವಹಿಸಲ್ಪಡುತ್ತದೆ. “ಇಲ್ಲಿನ ವನ್ನನ್ ಸಮುದಾಯದ ೧೫೦ ಕುಟುಂಬಗಳಲ್ಲಿ ಕೇವಲ ಸುಮಾರು 30 ಕುಟುಂಬಗಳು ಧೋಬಿ ಖಾನದಲ್ಲಿ ಕೆಲಸ ಮಾಡುತ್ತಿವೆ” ಎಂಬುದಾಗಿ, ಸಮುದಾಯದ ಕಾರ್ಯದರ್ಶಿ ಎಂ.ಪಿ. ಮೋಹನ್ ತಿಳಿಸುತ್ತಾರೆ.
ಈ ಸಮುದಾಯದ ಜನರಿಗೆ ತಮ್ಮ ಮಕ್ಕಳನ್ನು ಕುರಿತ ಮಹತ್ವಾಕಾಂಕ್ಷೆಯು ಧೋಬಿಯ ಕೆಲಸವನ್ನೂ ಮೀರಿದುದು. “ನನ್ನ ಮಕ್ಕಳಿಗೆ ಈ ಕೆಲಸವನ್ನು ಕಲಿಸಬೇಕೆಂದು ನನಗನಿಸಲಿಲ್ಲ. ಅವರಿಗೆ ನಾನು ವಿದ್ಯಾಭ್ಯಾಸವನ್ನು ನೀಡಿದ್ದೇನೆ. ಅವರು ಓದಿದ್ದಾರೆ. ಈಗ ಬದುಕು ಅವರದ್ದು” ಎನ್ನುತ್ತಾರೆ ಧೋಬಿ ಖಾನದ ಅಗಸ, ಕೆ.ಪಿ. ರಾಜನ್.
ಇದಕ್ಕೂ ಮೊದಲು 53ರ ವಯಸ್ಸಿನ ರಾಜನ್, ವಿವಿಧ ದಿನಗೂಲಿ ಉದ್ಯೋಗಗಳನ್ನು ನಿರ್ವಹಿಸಿದ್ದಾರೆ. ಕೇಬಲ್‌ಗಳನ್ನು ಹಾಕಲು ಅಗೆಯುವ ಕೆಲಸ, ಹುಲ್ಲು ಕತ್ತರಿಸುವುದು ಇತ್ಯಾದಿ. “ಆದರೆ ಈ ಕೆಲಸ(ಬಟ್ಟೆ ಒಗೆಯುವ ಹಾಗೂ ಇಸ್ತ್ರಿ ಮಾಡುವ)ವನ್ನು ನಾನೆಂದಿಗೂ ಬಿಟ್ಟಿಲ್ಲ. ಕೆಲವು ದಿನಗಳು ನನಗೆ 1000 ರೂ.ಗಳು, ಇನ್ನಿತರ ದಿನಗಳಲ್ಲಿ 500 ರೂ.ಗಳು ದೊರೆಯುತ್ತವೆ. ಕೆಲವು ದಿನಗಳಲ್ಲಿ ಏನೂ ಸಿಗದೆ ಮನೆಗೆ ತೆರಳುತ್ತೇವೆ. ಇದೆಲ್ಲವೂ ಆ ದಿನ ನಾವು ಮಾಡುವ ಕೆಲಸವನ್ನು ಅವಲಂಬಿಸಿರುತ್ತದೆ” ಎನ್ನುತ್ತಾರೆ.
ಧೋಬಿ ಖಾನದ ಕೆಲಸಗಾರರು ತಮ್ಮ ಗಿರಾಕಿಗಳನ್ನು ತಾವೇ ಹುಡುಕಿಕೊಳ್ಳಬೇಕು. ಬಟ್ಟೆಯನ್ನು ಒಗೆಯುವ, ಇಸ್ತ್ರಿ ಮಾಡುವ, ಬಿಳಿಪುಗೊಳಿಸುವ, ಹಿಗ್ಗಿಸುವ ಸೇವೆಗಳನ್ನು ಇವರು ಒದಗಿಸುತ್ತಾರೆ. ಒಂದು ಬಟ್ಟೆಯನ್ನು ಇಸ್ತ್ರಿ ಮಾಡಲು 15 ರೂ.ಗಳನ್ನು, ಒಗೆದು, ಇಸ್ತ್ರಿ ಮಾಡಲು 30 ರೂ.ಗಳನ್ನು ಪಾವತಿಸಬೇಕು.
ಕುಮರೇಸನ್ ಹೇಳುವಂತೆ, ಹೋಟೆಲ್ ಮತ್ತು ತಂಗುಮನೆ(homestay)ಗಳು ಡಿಸೆಂಬರ್ ಮತ್ತು ಫೆಬ್ರವರಿಯಲ್ಲಿ ಪ್ರವಾಸಿಗರು ಮತ್ತು ಭೇಟಿಗಾರರೊಂದಿಗೆ ಸಡಗರದಲ್ಲಿರುತ್ತವೆ. ಈ ತಿಂಗಳುಗಳಲ್ಲಿ, ಧೋಬಿ ಖಾನ, ಒಗೆಯುವ ಬಟ್ಟೆಗಳ ರಾಶಿಯನ್ನು ಸ್ವಾಗತಿಸುತ್ತದೆ. ಇತರೆ ಸಮಯದಲ್ಲಿ, ಆಸ್ಪತ್ರೆಗಳು, ಸ್ಥಳೀಯ ಹೋಟೆಲ್‌ಗಳು ಮತ್ತು ಮನೆಗಳು ಅವರ ಗಿರಾಕಿಗಳು.
ರಾಷ್ಟ್ರೀಯ ಮಾದರಿ ಸಮೀಕ್ಷೆಯ 68ನೇ ಸುತ್ತಿನ ವರದಿಯಂತೆ , ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಮನೆಗಳಲ್ಲಿನ ಜನರು ಬಟ್ಟೆ ಒಗೆಯುವ ಯಂತ್ರಗಳನ್ನು ಮತ್ತು ಲಾಂಡ್ರೊಮಾಟ್‌ಗಳನ್ನು ಬಳಸುವುದು ಹೆಚ್ಚಾಗಿದೆ.
ಆದರೆ ಧೋಬಿ ರಂಜನ್, ಈ ಪೈಪೋಟಿಯಿಂದ ವಿಚಲಿತಗರಾಗಿಲ್ಲ. “ಯಾವುದೇ ಯಂತ್ರಗಳು ನಿರ್ವಹಿಸಲಾಗದ ಗಂಜಿ ಹಾಕುವಂತಹ ಸಂಗತಿಗಳಿವೆ. ರಾಜಕಾರಣಿಗಳು ಧರಿಸುವ ಬಟ್ಟೆಗಳಿಗೆ ನಾವು ಕೈಯಿಂದ ಗಂಜಿ ಹಾಕಬೇಕು” ಎನ್ನುತ್ತಾರೆ ಆತ.
ಕಳೆದ 23 ವರ್ಷಗಳಿಂದ ಎ.ಎಸ್. ಜಯಪ್ರಕಾಶ್ ಧೋಬಿ ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಟ್ಟೆಗಳನ್ನು ಲಯಬದ್ಧವಾಗಿ ಬಡಿಯುತ್ತಾ 58ರ ಅವರು ಹೀಗೆನ್ನುತ್ತಾರೆ: “ಇದು ನಿಮ್ಮ ಕಾರ್ಪ್‌ರೆಟ್ ಕೆಲಸದಂತಲ್ಲ. ನಾವು ಯಾವಾಗ ಕೆಲಸ ಮಾಡಲು ಬಯಸುತ್ತೇವೆಂಬುದನ್ನು ನಾವು ನಿರ್ಧರಿಸುತ್ತೇವೆ.”
ಅನುವಾದ: ಶೈಲಜಾ ಜಿ.ಪಿ.