“ಬಂಗಾಳದ ಸಾಕಷ್ಟು ರೈತರಿಗೆ ಈ ಕಾನೂನುಗಳ ಕುರಿತು ತಿಳಿದಿಲ್ಲ. ಇಲ್ಲಿನ ಸಭೆಯಲ್ಲಿ ನಾಯಕರ ಮಾತುಗಳನ್ನು ಕೇಳಿ, ಅರ್ಥಮಾಡಿಕೊಂಡು, ಊರಿಗೆ ಹಿಂದಿರುಗಿದ ನಂತರ ತಮ್ಮ ನೆರೆಹೊರೆಯವರಿಗೆ ಮತ್ತು ಸ್ನೇಹಿತರಿಗೆ ತಿಳಿಸಲು ಸಾಧ್ಯವಾಗುತ್ತದೆಯೆನ್ನುವ ಕಾರಣಕ್ಕಾಗಿ ನಾನು ನನ್ನ ಹಳ್ಳಿಯಿಂದ ಕೆಲವು ಜನರನ್ನು ಇಲ್ಲಿಗೆ ಕರೆತಂದಿದ್ದೇನೆ” ಎಂದು ಸುಬ್ರತಾ ಅದಾಕ್ ಹೇಳಿದರು.
ರೈತರಾಗಿರುವ 31 ವರ್ಷದ ಸುಬ್ರತಾ ಮಾರ್ಚ್ 14ರಂದು ಸಿಂಗೂರಿನಲ್ಲಿ ನಡೆದ ಪ್ರತಿಭಟನಾ ಸಭೆಗೆ 10 ಕಿ.ಮೀ ದೂರದಲ್ಲಿರುವ ತಮ್ಮ ಊರು ಬಡಾ ಕಮಲಾಪುರದಿಂದ ಬಂದಿದ್ದರು. ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಮತ್ತು ಸಂಘಗಳ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಮಾರ್ಚ್ ತಿಂಗಳ ನಡುವಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಸಭೆಗಳನ್ನು ನಡೆಸಿ ಕಾನೂನಿನ ಅಪಾಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರು. ಇದರ ಭಾಗವಾಗಿ ಸಿಂಗೂರ್‌ನ ಹೊರತಾಗಿ ಅಸನ್‌ಸೋಲ್, ಕೋಲ್ಕತಾ ಮತ್ತು ನಂದಿಗ್ರಾಮದಲ್ಲೂ ಸಭೆ ನಡೆಸಿದರು.
ಸಿಂಗೂರಿನ ನಬಪಲ್ಲಿ ಪ್ರದೇಶದಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನಡೆದ ಸಣ್ಣ ಸಭೆಯಲ್ಲಿ ಪಾಲ್ಗೊಂಡ ರೈತರು ಮತ್ತು ಬೆಂಬಲಿಗರ ಸಂಖ್ಯೆ ಅಂದಾಜು 500ರಿಂದ 2,000ದವರೆಗೆ ಇತ್ತು. ಕೋಲ್ಕತ್ತಾದ ವಾಯುವ್ಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಈ ನಗರವು 2006-07ರಲ್ಲಿ ಟಾಟಾ ಮೋಟಾರ್ಸ್‌ನ ನ್ಯಾನೋ ಕಾರ್ ಕಾರ್ಖಾನೆಗಾಗಿ ಸುಮಾರು 997 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರದ ವಿರುದ್ಧ ಐತಿಹಾಸಿಕ ಆಂದೋಲನಕ್ಕೆ ಸಾಕ್ಷಿಯಾಗಿತ್ತು. 2016ರಲ್ಲಿ ಸುಪ್ರೀಂ ಕೋರ್ಟ್ ತನ್ನ ಒಂದು ಆದೇಶದ ಮೂಲಕ ಭೂಮಿಯನ್ನು ರೈತರಿಗೆ ಹಿಂದಿರುಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು, ಆದರೆ ಇಂದಿಗೂ ಅಲ್ಲಿನ ಹೆಚ್ಚಿನ ಭೂಮಿ ಹಡಿಲು ಬಿದ್ದಿದೆ.
"ನಾನೊಬ್ಬ ಕೃಷಿಕನಾಗಿರುವುದರಿಂದ, ಭಾರತದ ಕೃಷಿಯ ಪರಿಸ್ಥಿತಿ ಹೇಗಿದೆಯೆನ್ನುವುದು ನನಗೆ ತಿಳಿದಿದೆ" ಎಂದು ತನ್ನ ಎಂಟು ಭಿಘಾ ಭೂಮಿಯಲ್ಲಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಬೆಳೆಯುವ ಸುಬ್ರತಾ (1 ಬಿಘಾ ಪಶ್ಚಿಮ ಬಂಗಾಳದಲ್ಲಿ 0.33 ಎಕರೆಗೆ ಸಮನಾಗಿರುತ್ತದೆ) ಹೇಳಿದರು. “ಸ್ವತಂತ್ರ ಪೂರ್ವ ಭಾರತದಲ್ಲಿಯೂ ಸಹ, ಬ್ರಿಟಿಷರು ಇಲ್ಲಿನ ರೈತರನ್ನು ಇನ್ನಿಲ್ಲದಂತೆ ಶೋಷಿಸಿದರು. ಪ್ರಸ್ತುತ ಸರ್ಕಾರ ಪುನಃ ಅದೇ ಪರಿಸ್ಥಿತಿಯನ್ನು ತರುತ್ತಿದೆ. ಆಲೂಗಡ್ಡೆಯ ಕೃಷಿ ವೆಚ್ಚಗಳು ಹೆಚ್ಚಾಗಿದೆ, ಬೀಜಗಳ ಬೆಲೆ ಏರಿದೆ. ಈ ಎಲ್ಲ ಶ್ರಮದ ಹಣ ನ್ಯಾಯಯುತ ರೀತಿಯಲ್ಲಿ ನಮಗೆ ಸಿಗುವ ಬದಲು ಕಾರ್ಪೋರೇಟ್‌ಗಳಿಗೆ ದೊರಕಿದರೆ ನಾವು ಹೇಗೆ ಬದುಕು ನಡೆಸುವುದು?”
"ನಾವು ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆನ್ನುವುದು ನಮ್ಮ ಆಗ್ರಹ" ಎಂದು ಸಿಂಗೂರಿನಿಂದ 65 ಕಿ.ಮೀ ದೂರದಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ಬಾರಾನಗರ ಪುರಸಭೆಯ ಡನ್‌ಲಪ್ ಪ್ರದೇಶದಿಂದ ಈ ಸಭೆಗೆ ಬಂದಿದ್ದ 65 ವರ್ಷದ ಅಮರ್ಜಿತ್ ಕೌರ್ ಹೇಳಿದರು. "ಸರ್ಕಾರವು ಈಗಾಗಲೇ ನಮಗೆ ಸಾಕಷ್ಟು ನಷ್ಟವನ್ನುಂಟುಮಾಡಿದೆ" ಎಂದು ಕೌರ್ ಹೇಳಿದರು, ಅವರ ಪೂರ್ವಜರ ಮನೆ ಲುಧಿಯಾನದಲ್ಲಿದೆ, ಅಲ್ಲಿ ಅವರ ಕುಟುಂಬ ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತದೆ. "ಅವರು ಮೊದಲು ನೋಟ್ ಬ್ಯಾನ್ ತಂದರು, ಇದರಿಂದಾಗಿ ಯಾರಿಗೂ ಕೆಲಸವಿಲ್ಲದಂತಾಯಿತು. ನಮಗೆ ಹೋರಾಟದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ನಾವು ಇಲ್ಲಿಂದಲೇ ಹೋರಾಡುತ್ತೇವೆ ಈ ಕರಾಳ ಕಾನೂನುಗಳನ್ನು ರದ್ದುಪಡಿಸುವವರೆಗೂ ಈ ಆಂದೋಲನವನ್ನು ಬೆಂಬಲಿಸಲಿದ್ದೇವೆ.
ರೈತರು ವಿರೋಧಿಸುತ್ತಿರುವ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕೃಷಿ ಕಾನೂನುಗಳನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು.
ರೈತರು ಈ ಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಸಭೆಯಲ್ಲಿ ಸಿಂಗೂರಿನಿಂದ 25 ಕಿ.ಮೀ ದೂರದಲ್ಲಿರುವ ಬಾಲಿ ಪಟ್ಟಣದ ಜತಿಂದರ್ ಸಿಂಗ್ (55) ಉಪಸ್ಥಿತರಿದ್ದರು. ಅವರು ಸಾರಿಗೆ ವ್ಯವಹಾರವನ್ನು ಹೊಂದಿದ್ದು, ಅವರು "ನಮ್ಮ (ದೇಶದ) ಮುಖ್ಯ ಆದಾಯದ ಮೂಲವೆಂದರೆ ಕೃಷಿ, ಆದರೆ ಈ ಕೃಷಿ ಕಾನೂನುಗಳು ಈ ವಲಯವದ ಬಹಳ ಕೆಟ್ಟ ಪರಿಣಾಮ ಬೀರಿವೆ. 2006ರಲ್ಲಿ ಎಪಿಎಮ್‌ಸಿ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ ಬಿಹಾರವನ್ನು ನೋಡಿ. ಬಿಹಾರ ರೈತರು ತಮ್ಮ ಬಳಿ ಭೂಮಿಯಿದ್ದರೂ, ಅವರು ತಮ್ಮ ಜೀವನೋಪಾಯಕ್ಕಾಗಿ ಪಂಜಾಬ್ ಮತ್ತು ಹರಿಯಾಣಕ್ಕೆ ವಲಸೆ ಹೋಗುತ್ತಾರೆ." ಎಂದು ಬೇಸರದಿಂದ ಹೇಳಿದರು.
"ಅವರು [ಸರ್ಕಾರ] ಎಂಎಸ್ಪಿ [ಕನಿಷ್ಠ ಬೆಂಬಲ ಬೆಲೆ] ಕುರಿತು ಏಕೆ ಮಾತನಾಡುತ್ತಿಲ್ಲ?" ಇದು 30 ವರ್ಷದ ನವಜೋತ್ ಸಿಂಗ್ ಅವರ ಪ್ರಶ್ನೆ. ಅವರು ಈ ಸಭೆಯಲ್ಲಿ ಭಾಗವಹಿಸಲೆಂದು ಬ್ಯಾಲಿಯಿಂದ ಸಿಂಗೂರಿಗೆ ಬಂದರು, ಅಲ್ಲಿ ಅವರ ಹೋಟೆಲ್ ವ್ಯವಹಾರವಿದೆ. ಅವರ ಕುಟುಂಬ ಪಂಜಾಬ್‌ನ ಬರ್ನಾಲಾ ಜಿಲ್ಲೆಯ ಶೇಖಾ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಭತ್ತ ಮತ್ತು ಗೋಧಿಯ ಬೇಸಾಯ ಮಾಡುತ್ತಾರೆ. "ಕನಿಷ್ಟ ಬೆಂಬಲ ಬೆಲೆಯ ಕುರಿತು ಬಂಗಾಳದ ರೈತರನ್ನು [ಇನ್ನಷ್ಟು] ಜಾಗೃತಗೊಳಿಸಲು ಈ ಸಭೆಗಳನ್ನು ಆಯೋಜಿಸಲಾಗುತ್ತಿದೆ."
ಹೂಗ್ಲಿ ಜಿಲ್ಲೆಯ ಸೆರಾಂಪುರ ಪಟ್ಟಣದ 50 ವರ್ಷದ ಪರಮಿಂದರ್ ಕೌರ್, "ಈ ಕೃಷಿ ಕಾನೂನುಗಳನ್ನು ಜಾರಿಗೆ ತಂದಲ್ಲಿ, ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ನಿಗದಿತ ಬೆಲೆಯಿರುವುದಿಲ್ಲ" ಎಂದು ಹೇಳಿದರು. ಅವರು ಪಂಜಾಬ್‌ನ ಲುಧಿಯಾನ ಮೂಲದವರು, ಅಲ್ಲಿ ಅವರ ಕುಟುಂಬದ ಕೆಲವು ಸದಸ್ಯರು10 ಎಕರೆ ಭೂಮಿಯಲ್ಲಿ ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. ಅವರ ಕುಟುಂಬವು ಪಶ್ಚಿಮ ಬಂಗಾಳದಲ್ಲಿ ಸಾರಿಗೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. "ನಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಲೆಂದು ಸಿಂಗೂರಿಗೆ ಬಂದಿಲ್ಲ" ಎಂದು ಅವರು ಹೇಳಿದರು. "ನಾವು ಬಂದಿರುವುದು ನಮ್ಮ ರೈತರಿಗಾಗಿ."
42 ವರ್ಷದ ಕಲ್ಯಾಣಿ ದಾಸ್ ಅವರು ಸಿಂಗೂರಿನಿಂದ ಸುಮಾರು 10 ಕಿಲೊಮೀಟರ್ ದೂರದ ಬಡಾ ಕಮಲಾಪುರದಿಂದ ನಡೆದುಕೊಂಡು ಬಂದಿದ್ದಾರೆ.ಅವರು ತಮ್ಮ ಎರಡು ಬಿಘಾ ಭೂಮಿಯಲ್ಲಿ “ಆಲೂಗಡ್ಡೆ, ಬೆಂಡೆ, ಭತ್ತ ಮತ್ತು ಸೆಣಬನ್ನು ಬೆಳೆಯುತ್ತಾರೆ. “ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ” ಎಂದು ಅವರು ಹೇಳಿದರು. “ಅಡುಗೆ ಎಣ್ಣೆ, ಗ್ಯಾಸ್ ಹಾಗೂ ಎಲ್ಲ ದಿನಬಳಕೆಯ ದಿನಸಿ ಇತ್ಯಾದಿ ಅಗತ್ಯ ವಸ್ತುಗಳನ್ನು ನಾವು ಅಂಗಡಿಯಿಂದ ಕೊಂಡುಕೊಳ್ಳುತ್ತೇವೆ. ನಮ್ಮ ಹೊಲದಲ್ಲಿ ಹಗಲಿರುಳು ದುಡಿದು ಬೇಸಾಯ ಮಾಡಿ ಬೆಳೆಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರುತ್ತೇವೆ. ಆದರೆ ಮುಂದೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ದೊರೆಯುವುದೋ ಇಲ್ಲವೋ ಎನ್ನುವ ಆತಂಕ ನಮ್ಮನ್ನು ಕಾಡುತ್ತದೆ. ಅಂತಹ ಪರಿಸ್ಥಿತಿ ಬಂದಲ್ಲಿ ನಮಗೆ ಸಾವೊಂದೇ ಗತಿಯಾಗುತ್ತದೆ.”
ಕಲ್ಯಾಣಿಯವರ ನೆರೆಯವರಾದ ಸ್ವಾತಿ ಅದಕ್ (43) ಮಾತು ಮುಂದುವರೆಸುತ್ತಾ “ನಮ್ಮದು ಮೂರು ಬಿಘಾ ಜಮೀನಿದೆ. ಇತ್ತೀಚೆಗೆ ಬಟಾಟೆ ಬೆಳೆಯ ಖರ್ಚುಗಳು ವಿಪರೀತ ಹೆಚ್ಚಿರುವುದರಿಂದ ಅದನ್ನು ಹೆಚ್ಚು ಬೆಳೆಯುತ್ತಿಲ್ಲ. ಸಾಕಷ್ಟು ಶ್ರಮವಹಿಸಿ ಬೆಳೆದ ನಂತರವೂ ಉತ್ತಮ ಬೆಲೆ ದೊರೆಯದ ಕಾರಣ ಸಾಕಷ್ಟು ಬಟಾಟೆ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.” ಎಂದರು.
ಲಿಚು ಮಹತೋ (51) ಸಹ ಸಭೆಯಲ್ಲಿ ಪಾಲಗೊಂಡಿದ್ದರು. ಅವರು ಸಿಂಗೂರಿನಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಅವರು ಹೂಗ್ಲಿ ಜಿಲ್ಲೆಯ ಬಾಲಗಢ್ ಬ್ಲಾಕಿನ ಹಳ್ಳಿಯಾದ ಮಹತೋಪರದಲ್ಲಿ ವಾಸಿಸುತ್ತಾರೆ. ಅಲ್ಲಿ ಅವರು ತನ್ನ ತುಂಡು ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. “ದಿನಕ್ಕೆ ಕೇವಲ 200 ರೂ. ಸಿಗುತ್ತದೆ [ಕೂಲಿ]” ಎಂದು ಹೇಳಿದರು. “ಒಂದು ವೇಳೆ ನನ್ನ ಕುಟುಂಬ ಊಟಕ್ಕಾಗಿ ಮೀನು ತರುವಂತೆ ಹೇಳಿದರೆ ಇಷ್ಟು ಸಣ್ಣ ಮೊತ್ತದಲ್ಲಿ ಹೇಗೆ ತರಲಿ? ನನ್ನ ಮಗ ರೈಲುಗಳಲ್ಲಿ ನೀರು ಮಾರುತ್ತಾನೆ. ನಾನಿಲ್ಲಿಗೆ ಕೃಷಿ ಕಾನೂನುಗಳ ಕುರಿತು ತಿಳಿಯಲು ಬಂದಿದ್ದೇನೆ. ನನ್ನ ಬದುಕು ಈಗಾಗಲೇ ಹದಗೆಟ್ಟಿದೆ ಅದು ಇನ್ನಷ್ಟು ಹದಗೆಡುವುದು ನನಗೆ ಬೇಕಿಲ್ಲ.”
ಅನುವಾದ: ಶಂಕರ ಎನ್. ಕೆಂಚನೂರು