"ಅವರು ಮಧ್ಯರಾತ್ರಿಯಲ್ಲಿ ನಮ್ಮ ಊರನ್ನು ಪ್ರವೇಶಿಸಿ ನಮ್ಮ ಬೆಳೆಗಳನ್ನು ನಾಶಪಡಿಸಿದರು. ರಾತ್ರೋರಾತ್ರಿ ನಮ್ಮ ಭೂಮಿಯನ್ನು ನಮ್ಮಿಂದ ಕಸಿದುಕೊಂಡು ಅದರಲ್ಲಿ ಗುಡಿಸಲು ನಿರ್ಮಿಸಿದರು,” 48 ವರ್ಷದ ಅನುಸಯಾ ಕುಮಾರೆ, ಫೆಬ್ರವರಿ 2020ರಲ್ಲಿ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಖಾನಿ ಗ್ರಾಮದಲ್ಲಿ ತಮ್ಮ ಕುಟುಂಬವು ತಮ್ಮ ಎಂಟು ಎಕರೆ ಕೃಷಿಭೂಮಿಯ ದೊಡ್ಡ ಭಾಗವನ್ನು ಹೇಗೆ ಕಳೆದುಕೊಂಡಿತು ಎನ್ನುವುದನ್ನು ವಿವರಿಸುತ್ತಿದ್ದರು.

ಕೆಲವು ಸ್ಥಳೀಯ ಬುಡಕಟ್ಟು ಸಮುದಾಯದವರಲ್ಲದ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಕುಟುಂಬದ ಭೂಮಿಯನ್ನು ಕದಿಯಲು ಗೂಂಡಾಗಳನ್ನು ನೇಮಿಸಿಕೊಂಡಿದ್ದಾರೆ ಎಂದು ಗೊಂಡ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಅನುಸಯಾ ನಂಬಿದ್ದಾರೆ. “ಈ ಜನರು ಸುಳ್ಳು ದಾಖಲೆಗಳನ್ನು ರಚಿಸಿ ನಮ್ಮ ಭೂಮಿಯನ್ನು ಬುಡಕಟ್ಟಿನವರಲ್ಲದ ಜನರಿಗೆ ಮಾರಿದರು. ಏಳು ಹನ್ನೆರಡು [7/12; ಭೂ ಹಕ್ಕುಗಳ ದಾಖಲೆ] ನಮ್ಮ ಹೆಸರಿನಲ್ಲಿ ಇನ್ನೂ ಇದೆ." ಅವರ ಪರಿವಾರವು ಆ ಭೂಮಿಯಲ್ಲಿ ಹತ್ತಿ, ಮಸೂರ್‌ ಬೇಳೆ, ತೊಗರಿ ಮತ್ತು ಗೋಧಿಯನ್ನು ಬೆಳೆಯುತ್ತದೆ.

“ಕೋವಿಡ್ [ಲಾಕ್‌ಡೌನ್] ಸಮಯದಲ್ಲಿ, ನಾವು ಉಳಿದಿರುವ ಒಂದಿಷ್ಟು ಭೂಮಿಯಲ್ಲಿ ಬೆಳೆದ ಬೆಳೆಗಳಿಂದ ದಿನಗಳನ್ನು ಕಳೆದಿದ್ದೆವು. ಕಳೆದ ತಿಂಗಳು [2020 ರ ಡಿಸೆಂಬರ್‌ನಲ್ಲಿ] ಅವರು ಅದನ್ನು ಸಹ ಕಸಿದುಕೊಂಡರು” ಎಂದು ಅನುಸಯಾ ಹೇಳಿದರು. ಸರ್ಖಾನಿಯಲ್ಲಿ ಭೂಮಿಯನ್ನು ಕಳೆದುಕೊಂಡವರು ಇವರೊಬ್ಬರೇ ಅಲ್ಲ, 3,250 ಜನರಿರುವ ಈ ಗ್ರಾಮದಲ್ಲಿ (ಜನಗಣತಿ 2011) 900 ಬುಡಕಟ್ಟು ಜನಾಂಗದವರಲ್ಲಿ 200 ಜನರು ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅವರು ಜನವರಿ ಆರಂಭದಿಂದ ಪ್ರತಿದಿನ ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

“ನಾವು ಪಂಚಾಯತ್ ಕಚೇರಿಯೆದುರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಕಾಲುಗಳು ನೋಯುತ್ತಿವೆ,” ಎನ್ನುತ್ತಾ ಅನುಸಯಾ ತನ್ನ ಕಾಲುಗಳನ್ನು ಎರಡೂ ಕೈಗಳಿಂದ ಉಜ್ಜಿಕೊಂಡರು. ಅಂದು ಜನವರಿ 23ರಂದು ರಾತ್ರಿ 9 ಗಂಟೆಯ ಸಮಯವಾಗಿತ್ತು. ಅವರು ಆಗಷ್ಟೇ ಸಜ್ಜೆಯ ರೊಟ್ಟಿ ಮತ್ತು ಬೆಳ್ಳುಳ್ಳಿ ಚಟ್ನಿಯ ಊಟವನ್ನು ಮುಗಿಸಿದ್ದರು. ಅವರು ಹಾಗೂ ಇತರ ಕೆಲವು ಮಹಿಳೆಯರು ರಾತ್ರಿ ಕಳೆಯುವ ಸಲುವಾಗಿ ಇಗತ್‌ಪುರಿಯ ಘಂಟಾದೇವಿ ದೇವಸ್ಥಾನದೊಳಗೆ ದಪ್ಪ ಹೊದಿಕೆಗಳನ್ನು ಹಾಸಿಕೊಂಡಿದ್ದರು.

ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಾಸಿಕ್‌ನಿಂದ ಮುಂಬೈಗೆ ಬಂದ ವಾಹನ ಮೆರವಣಿಗೆಯಲ್ಲಿ ಈ ಮಹಿಳೆಯರು ಭಾಗವಹಿಸಿದ್ದರು. ಅವರು ಜೊತೆಗೆ ತಮ್ಮ ಅನೇಕ ಸಮಸ್ಯೆಗಳನ್ನೂ ಗಮನಕ್ಕೆ ತರಲು ಹೊರಟಿದ್ದರು.

PHOTO • Shraddha Agarwal

ಮೇಲಿನ ಎಡ: ನಾಂದೇಡ್ ಜಿಲ್ಲೆಯ ಸರ್ಖಾನಿ ಗ್ರಾಮದ ಅನುಸಾಯ ಕುಮಾರೆ (ಎಡ) ಮತ್ತು ಸರಜಾಬಾಯಿ ಆದೆ (ಬಲ). ಮೇಲಿನ ಬಲ: ರಾತ್ರಿ ತಂಗಲೆಂದು ಇಗತ್‌ಪುರಿಯ ಘಂಟಾದೇವಿ ದೇವಸ್ಥಾನದಲ್ಲಿ ಜಾಥಾ ನಿಂತಿತು. ಕೆಳಗಿನ ಚಿತ್ರ: ನಾಸಿಕ್‌ನಿಂದ ಮುಂಬೈಗೆ ಸಾವಿರಾರು ರೈತರು ಮತ್ತು ಕೃಷಿ ಕಾರ್ಮಿಕರು ಟೆಂಪೊ, ಜೀಪ್ ಮತ್ತು ಪಿಕ್ ಅಪ್ ಟ್ರಕ್‌ಗಳಲ್ಲಿ ಪ್ರಯಾಣಿಸಿದರು

ಜನವರಿ 22ರ ಮಧ್ಯಾಹ್ನ, ಅನುಸಾಯಾ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಇತರ 49 ಜನರು ಕಿನ್ವಾತ್ ತಾಲ್ಲೂಕಿನ ತಮ್ಮ ಊರಿನಿದಿಂದ ಜೀಪ್ ಮತ್ತು ಟೆಂಪೋಗಳಲ್ಲಿ ಹೊರಟರು. 18 ಗಂಟೆಗಳಲ್ಲಿ 540 ಕಿ.ಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ನಂತರ, ಮರುದಿನ ಬೆಳಿಗ್ಗೆ 4.30 ಕ್ಕೆ ನಾಸಿಕ್ ನಗರವನ್ನು ತಲುಪಿದರು. ಅಲ್ಲಿ ಅವರು ಜನವರಿ 23ರಂದು 180 ಕಿ.ಮೀ ದೂರದಲ್ಲಿರುವ ದಕ್ಷಿಣ ಮುಂಬೈನ ಆಜಾದ್ ಮೈದಾನಕ್ಕೆ ತೆರಳಬೇಕಿದ್ದ ಸಾವಿರಾರು ರೈತರು ಮತ್ತು ಕೃಷಿ ಕಾರ್ಮಿಕರನ್ನು ಸೇರಿಕೊಂಡರು.

ಅಂದು ರಾತ್ರಿ ಘಂಟಾ ದೇವಿ ದೇವಸ್ಥಾನದಲ್ಲಿ ತಂಗಿದ್ದ ಸರ್ಖಾನಿಯ ಸರಜಾ ಆದೆ ಕೂಡ ದಣಿದಿದ್ದರು. "ನನ್ನ ಬೆನ್ನು ಮತ್ತು ಕಾಲುಗಳು ನೋಯುತ್ತಿವೆ. ನಮ್ಮ ಊರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾವು ಈ ಗುಂಪಿನೊಂದಿಗೆ ಬಂದಿದ್ದೇವೆ. ನಾವು ಒಂದು ತಿಂಗಳಿನಿಂದ ನಮ್ಮ ಜಮೀನಿಗಾಗಿ ಹೋರಾಡುತ್ತಿದ್ದೇವೆ. ನಾವು ದಣಿದಿದ್ದೇವೆ. ಆದರೆ ನಾವು ನಮ್ಮ ಜಮೀನಿನ ಹಕ್ಕಿಗಾಗಿ ನಾವು ಬದುಕಿರುವವರೆಗೂ ಹೋರಾಡುತ್ತೇವೆ" ಎಂದು ಕೋಲಂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ 53 ವರ್ಷದ ಸರಜಾ ಬಾಯಿ ಹೇಳಿದರು.

ಅವರು ಮತ್ತು ಅವರ ಕುಟುಂಬವು ತಮ್ಮ ಮೂರು ಎಕರೆ ಭೂಮಿಯಲ್ಲಿ ತೊಗರಿ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರು. "ಅವರು ನಮ್ಮ ಬೆಳೆಗಳನ್ನು ನಾಶಪಡಿಸಿ, ಗುಡಿಸಲುಗಳನ್ನು ನಿರ್ಮಿಸಿದರು. ಇದು ಕೃಷಿ ಭೂಮಿಯಾಗಿದ್ದರೂ, ಕೃಷಿಯೇತರ ಭೂಮಿ ಎಂದು ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ,” ಎಂದು ಅವರು ಹೇಳಿದರು.

ಸರ್ಖಾನಿಯ ಬುಡಕಟ್ಟು ಸಮುದಾಯದವರು ತಮ್ಮ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಬೇಕಾಗುವ ಎಲ್ಲಾ ಕಾನೂನು ದಾಖಲೆಗಳನ್ನು ಹೊಂದಿದ್ದಾರೆಂದು ಸರಜಾಬಾಯಿ ಹೇಳಿದರು. “ಇದು ಕಾನೂನುಬದ್ಧವಾಗಿ ನಮ್ಮ ಭೂಮಿ. ನಾವು ನಾಂದೇಡ್ ಕಲೆಕ್ಟರ್‌ಗೆ ನೋಟಿಸ್ ನೀಡಿದ್ದೇವೆ ಮತ್ತು ಎಲ್ಲಾ ಸಂಬಂಧಿತ ದಾಖಲೆಗಳನ್ನು ಕಿನ್ವಾತ್‌ನ ತಹಶೀಲ್ದಾರ್‌ಗೆ ಸಲ್ಲಿಸಿದ್ದೇವೆ. 10 ದಿನಗಳ ತನಕವೂ, ಅವರು [ಕಲೆಕ್ಟರ್‌] ಊರಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹ ಬರಲಿಲ್ಲ. ನಾವು ಒಂದು ತಿಂಗಳು ಕಾಯ್ದೆವು ಅದರ ನಂತರ ಪ್ರತಿಭಟನೆ ನಡೆಸಲು ನಿರ್ಧರಿಸಿದೆವು."

"ಜಾಥಾಕ್ಕೆ ಬರುವ ಮೊದಲು ನಾವು ನಮ್ಮ ಅಫಿಡವಿಟ್‌ಗಳನ್ನು ಗ್ರಾಮ ಸೇವಕ, ತಹಶೀಲ್ದಾರ್ ಮತ್ತು ಕಲೆಕ್ಟರರಿಗೆ ನೀಡಿ ಬಂದಿದ್ದೇವೆ" ಎಂದು ಅನುಸಯಾ ಹೇಳಿದರು. ಅಫಿದವಿತ್ತಿನಲ್ಲಿ, ಬುಡಕಟ್ಟು ರೈತರು ತಮ್ಮ ಜಮೀನಿನ ನಿಜವಾದ ಮಾಲೀಕರು ಎಂದು ಹೇಳಿ ಅದಕ್ಕೆ ಸಾಕ್ಷಿಯಾಗಿ ಅಗತ್ಯ ಭೂ ದಾಖಲೆಗಳನ್ನು ಸಲ್ಲಿಸಿದ್ದಾರೆ. “ನಾವು ದಿನವಿಡೀ [ಪಂಚಾಯತ್ ಕಚೇರಿ] ಹೊರಗೆ ಕುಳಿತುಕೊಳ್ಳುತ್ತೇವೆ. ನಾವು ಅಲ್ಲಿಯೇ ತಿನ್ನುತ್ತೇವೆ ಮತ್ತು ಮಲಗುತ್ತೇವೆ ಕೇವಲ ಸ್ನಾನ ಮಾಡಲು ಹಾಗೂ ಒಂದಿಷ್ಟು ಆಹಾರವನ್ನು ತರಲು ಮನೆಗೆ ಬರುತ್ತೇವೆ. ನಾವು ಕೇಳಲು ಬಯಸುತ್ತೇವೆ, ಬುಡಕಟ್ಟು ಸಮುದಾಯದವರ ಸಮಸ್ಯೆಗಳನ್ನು ತಿಳಿದ ನಂತರವೂ ಅವರು ನಮ್ಮ ಭೂಮಿಯನ್ನು ಬುಡಕಟ್ಟಿನವರಲ್ಲದ ಜನರಿಗೆ ನೀಡುತ್ತಾರೆ ಯಾಕೆ ನೀಡುತ್ತಾರೆನ್ನುವುದನ್ನು ನಾವು ತಿಳಿಯಲು ಬಯಸುತ್ತೇವೆ,” ಎಂದು ಅವರು ಹೇಳಿದರು.
Farmers of Maharashtra sat in protest against the three new farm laws in Mumbai. The Adivasi farmers spoke up about their struggles at home
PHOTO • Sanket Jain
Farmers of Maharashtra sat in protest against the three new farm laws in Mumbai. The Adivasi farmers spoke up about their struggles at home
PHOTO • Riya Behl

ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಮಹಾರಾಷ್ಟ್ರದ ರೈತರು ಮುಂಬೈನಲ್ಲಿ ಧರಣಿ ನಡೆಸಿದರು. ಬುಡಕಟ್ಟು ರೈತರು ಊರುಗಳಲ್ಲಿ ನಡೆಯುತ್ತಿರುವ ತಮ್ಮ ಹೋರಾಟಗಳ ಬಗ್ಗೆ ಮಾತನಾಡಿದರು

ಜನವರಿ 24 ರಂದು ಆಜಾದ್ ಮೈದಾನಕ್ಕೆ ಆಗಮಿಸಿದ ಅನುಸಯಾ ಮತ್ತು ಸರಜಾಬಾಯಿ ಜನವರಿ 24-26ರವರೆಗೆ ಸಂಯುಕ್ತ ಶೆತ್ಕರಿ ಕಾಮಗಾರ್ ಮೋರ್ಚಾ ಆಯೋಜಿಸಿದ್ದ ಹೊಸ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಇದಕ್ಕಾಗಿ ಮಹಾರಾಷ್ಟ್ರದ 21 ಜಿಲ್ಲೆಗಳ ರೈತರು ಮುಂಬೈಗೆ ಬಂದು ಸೇರಿದ್ದರು. ಜನವರಿ 26ರಂದು ದೆಹಲಿಯ ಗಡಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದ ಪ್ರತಿಭಟನಾ ನಿರತ ರೈತರಿಗೆ ಅವರು ತಮ್ಮ ಬೆಂಬಲ ವ್ಯಕ್ತಪಡಿಸಿದರು.

ನವೆಂಬರ್ 26ರಿಂದ, ದೆಹಲಿಯಲ್ಲಿ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿರುವ ಈ ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಪರಿಚಯಿಸಲಾಯಿತು.

ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.

ರೈತರು ಈ ಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್‌ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಸರ್ಖಾನಿಯ ಬುಡಕಟ್ಟು ರೈತರು ಮುಂಬಯಿಯಲ್ಲಿ ತಮ್ಮ ಹೋರಾಟವನ್ನು ಪ್ರತಿನಿಧಿಸುತ್ತಿದ್ದರೆ, ಅಲ್ಲಿನ ಸುಮಾರು 150 ಇತರ ರೈತರು ಪಂಚಾಯತ್ ಕಚೇರಿಯ ಹೊರಗೆ ತಮ್ಮ ಹಗಲು-ರಾತ್ರಿಯ ಪ್ರತಿಭಟನೆಯನ್ನು ಮುಂದುವರಿಸಲು ಊರಿನಲ್ಲೇ ಉಳಿದಿದ್ದರು. "ನಾವು ಆದಿವಾಸಿಗಳ ಧ್ವನಿಯನ್ನು ಇನ್ನಷ್ಟು ಜೋರಾಗಿ ಸರಕಾರಕ್ಕೆ ತಲುಪಿಸಲು ಮುಂಬೈಗೆ ಬಂದಿದ್ದೇವೆ" ಎಂದು ಅನುಸಯಾ ಹೇಳಿದರು. "ಮತ್ತು ನ್ಯಾಯ ದೊರೆಯುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸಲಿದ್ದೇವೆ."

ಅನುವಾದ: ಶಂಕರ ಎನ್. ಕೆಂಚನೂರು

Shraddha Agarwal

শ্রদ্ধা অগরওয়াল পিপলস আর্কাইভ অফ রুরাল ইন্ডিয়ার সাংবাদিক এবং কন্টেন্ট সম্পাদক।

Other stories by Shraddha Agarwal
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru