ಒಬ್ಬ ತಾಯಿ ತಾನು ಯಾವ ಭಾಷೆಯಲ್ಲಿ ಕನಸು ಕಾಣುತ್ತಾಳೆ? ಗಂಗಾ ನದಿಯ ದಡದಿಂದ ಪೆರಿಯಾರ್ ನದಿಯ ದಡದ ತನಕ ಇರುವ ತನ್ನ ಮಕ್ಕಳ ಬಳಿ ಅವಳು ಯಾವ ಭಾಷೆಯಲ್ಲಿ ಮಾತನಾಡುತ್ತಾಳೆ? ಒಂದೊಂದು ರಾಜ್ಯ, ಜಿಲ್ಲೆ, ಹಳ್ಳಿಗಳಿಗೆ ಅನುಗುಣವಾಗಿ ಅವಳ ಭಾಷೆಯು ಬದಲಾಗುತ್ತದೆಯೇ? ಇಲ್ಲಿ ಸಾವಿರಾರು ಭಾಷೆಗಳು, ಲಕ್ಷಾಂತರ ಉಪಭಾಷೆಗಳಿವೆ, ಅವೆಲ್ಲವೂ ಅವಳಿಗೆ ತಿಳಿದಿದೆಯೇ? ವಿದರ್ಭದ ರೈತರು, ಹತ್ರಾಸ್‌ನ ಮಕ್ಕಳು, ದಿಂಡಿಗಲ್‌ನ ಮಹಿಳೆಯರೊಂದಿಗೆ ಅವಳು ಯಾವ ಭಾಷೆಯಲ್ಲಿ ಮಾತನಾಡುತ್ತಾಳೆ? ಒಮ್ಮೆ ಅವಳ ದನಿಗೆ ಕಿವಿಯಾಗಿ ಕೆಂಪು ಮರಳು ಸುಂಯ್ ಎನ್ನುವುದನ್ನು ಕೇಳಿ! ಅವಳು, ಅವಳ ದನಿ, ಅವಳ ಹಾಡು, ಅವಳ ಹಾಡು ಎಲ್ಲವೂ ಕೇಳಿಸೀತು. ಹೇಳಿ ನಿಮಗೆ ಅಲ್ಲಿ ಅವಳ ಭಾಷೆ ಯಾವುದೆನ್ನುವುದು ತಿಳಿಯಿತೇ? ನನಗೆ ಕೇಳಿಸುವಂತೆಯೇ ಅವಳ ಜೋಗುಳದ ಸದ್ದು ನಿಮಗೂ ಕೇಳಿಸಿತೆ?
ಭಾಷೆಗಳು
ಕಠಾರಿಯೊಂದು
ನನ್ನ ನಾಲಗೆ ಸೀಳುತ್ತಿದೆ
ಅದರ ಹರಿತದ ಅನುಭವವಾಗುತ್ತಿದೆ
ಮೆಲ್ಲ ಸೀಳುತ್ತಿದೆ
ನಾಲಗೆಯನ್ನು
ಇನ್ನು ನಾನು
ಮಾತನಾಡಲಾರೆ
ಕಠಾರಿ ನನ್ನ
ಪದಗಳನ್ನೆಲ್ಲ ಕೊಂದಿತು
ನನಗೆ ತಿಳಿದಿದ್ದ
ಅಕ್ಷರಗಳು, ಹಾಡು
ಎಲ್ಲವೂ ಈಗ ಕಠಾರಿಯ
ಪಾಲು
ಈ ರಕ್ತ ತೊಟ್ಟಿಕ್ಕುವ
ನಾಲಗೆ
ರಕ್ತದ ಹೊಳೆಯನ್ನೇ
ಹರಿಸುತ್ತಿದೆ
ಅದು ನನ್ನ ಬಾಯಿಯಿಂದ
ಎದೆಗಿಳಿದು
ಎದೆಯಿಂದ ಹೊಕ್ಕುಳಿಗಿಳಿದು,
ನನ್ನ ಲಿಂಗಕ್ಕಿಳಿದು
ಅಲ್ಲಿಂದ ಫಲವತ್ತಾದ
ದ್ರಾವಿಡ ಮಣ್ಣಿನ ತುಂಬಾ ಹರಿದು
ಮಣ್ಣೆಲ್ಲ ಕೆಂಪು
ಕೆಂಪು ನಾಲಗೆಯಂತಾಗಿದೆ
ಆ ಕಪ್ಪು ಮಣ್ಣಿನ
ತುಂಬೆಲ್ಲ ಕೆಂಪು ಅಲಗಿನ ಹುಲ್ಲಿನ ಗಿಡ ಹುಟ್ಟುತ್ತಿವೆ
ಮಣ್ಣಿನಡಿಯಲ್ಲಿದ್ದ
ನೂರಾರು ನಾಲಗೆಗಳು
ಲಕ್ಷಾಂತರ, ಕೋಟ್ಯಂತರ
ಭಾಷೆಗಳು
ಪುರಾತನ ಗೋರಿಗಳಿಂದ
ಮೇಲೆಳುತ್ತಿವೆ
ಮರೆತ ಭಾಷೆಗಳು
ಹೂಗಳಂತೆ ಅರಳಿ ನಿಲ್ಲುತ್ತಿವೆ
ನನ್ನವ್ವನಿಗೆ
ತಿಳಿದಿದ್ದ ಹಾಡುಗಳ, ಕತೆಗಳ ಸಾರಿ ಹೇಳುತ್ತಿವೆ
ಕಠಾರಿ ನಾಲಗೆಯ
ನಡುವೆ ಸಾಗುತ್ತಿದೆ
ಭಾಷೆಗಳ ನಾಡಿನ
ಹಾಡಿಗೆ ಹೆದರಿ
ಕಠಾರಿಯ ಅಲಗು
ಮೊಂಡಾಗಿ ನಡುಗುತ್ತಿದೆ
ಅನುವಾದ: ಶಂಕರ. ಎನ್. ಕೆಂಚನೂರು