ಪ್ರತಿ ವರ್ಷದ ಏಪ್ರಿಲ್ 14 ರಂದು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ . ಈ ಸಂದರ್ಭದಲ್ಲಿ , ಪರಿ ತನ್ನ ' ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ' ಅಡಿಯಲ್ಲಿ ಈ ತಿಂಗಳು ಪೂರ್ತಿ ಡಾ . ಅಂಬೇಡ್ಕರ್ ಮತ್ತು ಜಾತಿ ವಿಷಯಗಳ ಆಧಾರದ ಮೇಲೆ ಕಟ್ಟಲ್ಪಟ್ಟಿರುವ ಜಾನಪದ ಗೀತೆಗಳನ್ನು ಹಂಚಿಕೊಳ್ಳಲಿದೆ . ಈ ಸರಣಿಯ ಮೊದಲ ಕಂತಿನಲ್ಲಿ , ನಾವು ಬುದ್ಧ , ಭೀಮರಾವ್ ಅಂಬೇಡ್ಕರ್ , ಧಮ್ಮ , ಸಂಘ ಮತ್ತು ರಮಾಬಾಯಿಯವರನ್ನು ಆಧರಿಸಿ ಹಾಡಲಾಗಿರುವ ಓ ವಿಯನ್ನು (ಬೀಸುಕಲ್ಲಿನ ಪದಗಳು) ಸಾವರ್ ಗಾಂವ್ ನ ರಾಧಾಬಾಯಿ ಬೋರ್ಡೆಯವರ ಕಂಠದಲ್ಲಿ ನಿಮಗಾಗಿ ತಂದಿದ್ದೇವೆ .
ಮೊದಲಿಗೆ, ಈ ಲೇಖನದೊಡನೆ ನೀಡಲಾಗಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳ ನಡುವೆ 21 ವರ್ಷಗಳ ವ್ಯತ್ಯಾಸವಿದೆಯೆನ್ನುವುದನ್ನು ನಮೂದಿಸಲು ಬಯಸುತ್ತೇವೆ. ರಾಧಾ ಬೋರ್ಡೆ (ಓವಿ) ಹಾಡುವ ಆಡಿಯೋ ಫೈಲನ್ನು ಏಪ್ರಿಲ್ 2, 1996ರಂದು ರೆಕಾರ್ಡ್ ಮಾಡಲಾಗಿತ್ತು. ಕಾಕತಾಳೀಯವೆಂಬಂತೆ ಈ ವರ್ಷ ಏಪ್ರಿಲ್ 2ರಂದೇ ನಾವು ಅವರನ್ನು ಭೇಟಿಯಾಗಿ ವಿಡಿಯೋ ರೆಕಾರ್ಡಿಂಗ್ ಮಾಡಿದೆವು.
ಈ ಹಾಡಿನ ಹಾಡುಗಾರ್ತಿಯಾದ ರಾಧಾಬಾಯಿ ಬೋರ್ಡೆಯವರಿಂದ 1996ರಲ್ಲಿ ಹಾಡುಗಳನ್ನು ಮೊದಲ ಬಾರಿಗೆ ಸಂಗ್ರಹಿಸಲಾಗಿತ್ತು. ಅದಾಗಿ 21 ವರ್ಷಗಳ ನಂತರ ಮತ್ತೆ ಈ ಹಾಡನ್ನು 2017ರಲ್ಲಿ ಸಂಗ್ರಹಿಸಲು ಹೋದಾಗ ಹಾಡಿನ ಕೆಲವು ಚರಣಗಳನ್ನು ಅವರು ಮರೆತಿದ್ದರು. ಆದರೆ ಹಾಡಿನ ಸಾಹಿತ್ಯವನ್ನು ಕೊಟ್ಟರೆ ತಾನು ಓದಿಕೊಂಡು ಹಾಡುವುದಾಗಿ ಹೇಳಿದರು. ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಅವರೀಗ ಓದುವುದನ್ನು ಕಲಿತಿದ್ದರು. ಅವರ ಹಾಡಿನ ರಾಗ ಮತ್ತು ಮಾಧುರ್ಯಗಳು ಮಾತ್ರ ಮೊದಲಿನಷ್ಟೇ ತಾಜಾ ಆಗಿದ್ದವು.
1997ರಲ್ಲಿ ರಾಧಾಬಾಯಿ ಮತ್ತು ಅವರ ಗಂಡ ಖಂಡು ಬೋರ್ಡೆ ಬೀಡ್ ಜಿಲ್ಲೆಯ ಮಜಲಗಾಂವ್ ಹಳ್ಳಿಯ ಭೀಮನಗರದ ನಿವಾಸಿಗಳಾಗಿದ್ದರು. ಅವರು ಪ್ರಸ್ತುತ ಬೀಡ್ ಜಿಲ್ಲೆಯ ಅದೇ ತಾಲೂಕಿನ ಸಾವರಗಾಂವ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ, ಅವರು ಜೀವನೋಪಾಯಕ್ಕಾಗಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅವರ ನಾಲ್ಕು ಜನ ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾರೆ.
ಮಜಲ್‌ಗಾಂವ್‌ನಲ್ಲಿ ತನ್ನ ಪತಿ ಖಂಡು ಬೋರ್ಡೆ ಅವರೊಂದಿಗೆ ವಾಸಿಸುತ್ತಿದ್ದ ರಾಧಾ ಅಲ್ಲಿ ಪತಿಯೊಡನೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ರಾಧಾಬಾಯಿ ಮುಖ್ಯವಾಗಿ ಕಳೆ ಕೀಳುವ ಕೆಲಸ ಮಾಡುತ್ತಿದ್ದರು. ಆಗಾಗ ಮೊಂಡಾ ಬಜಾರಿನಲ್ಲಿ ಧಾನ್ಯಗಳನ್ನು ಕೇರುವುದು ಮತ್ತು ಸ್ವಚ್ಛಗೊಳಿಸುವ ಕೆಲಸಗಳನ್ನೂ ಸಹ ಮಾಡುತ್ತಿದ್ದರು. ಜೊತೆಗೆ ಊರಿನಲ್ಲಿರುವ ಸ್ಥಿತಿವಂತರ ಮನೆಯ ಮನೆಗೆಲಸವನ್ನೂ ಮಾಡಿದ್ದಾರೆ.
ಆದರೆ, ಕಾಲ ಕಳೆದಂತೆ, ರಾಧಾ ಮತ್ತು ಅವರ ಪತಿಗೆ ಕೆಲಸ ಸಿಗುವುದು ಹೆಚ್ಚು ಕಷ್ಟವಾಗತೊಡಗಿತು. ಕೊನೆಗೆ, 12 ವರ್ಷಗಳ ಹಿಂದೆ ರಾಧಾ ತನ್ನ ಪತಿ ಖಂಡುವಿನೊಂದಿಗೆ ಸಾವರಗಾಂವ್ ತೆರಳಿ ಖಂಡು ಅವರ ಸಹೋದರನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭಿಸಿದರು. ಇಬ್ಬರೂ ಸಹೋದರರು ಈಗ ಬದುಕಿಲ್ಲ. ರಾಧಾಬಾಯಿ ತನ್ನ ಅತ್ತಿಗೆ ರಾಜುಬಾಯಿ ಮತ್ತು ಮಗ ಮಧುಕರ್ ಅವರೊಂದಿಗೆ ವಾಸಿಸುತ್ತಿದ್ದಾರೆ.
ಮಜಲ್‌ಗಾಂವ್ ಒಂದು ತಾಲೂಕು ಗ್ರಾಮವಾಗಿದ್ದು ಭೀಮ್ ನಗರ ಅಲ್ಲಿನ ಪ್ರಧಾನವಾಗಿ ದಲಿತ ಜನಸಂಖ್ಯೆಯನ್ನು ಹೊಂದಿರುವ ಕಾಲೊನಿಯಾಗಿದೆ. ಈ ಕಾಲೊನಿಯು ನಮ್ಮ ʼಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್ʼಗೆ ಮೊಗೆದಷ್ಟೂ ಉಕ್ಕುವ ಚಿಲುಮೆಯಂತೆ ಒದಗಿ ಬಂದಿದೆ. ರಾಜತಾಂತ್ರಿಕ, ರಾಷ್ಟ್ರೀಯ ನಾಯಕ, ತುಳಿತಕ್ಕೊಳಗಾದವರ ಮತ್ತು ಅಂಚಿನಲ್ಲಿರುವ ಜನರ ಧ್ವನಿ, ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತಾದ ಬಹಳಷ್ಟು ಹಾಡುಗಳು ಇಲ್ಲಿಯೇ ದೊರೆತವು. ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯ ಅಂಗವಾಗಿ ಈ ತಿಂಗಳು ಪೂರ್ತಿ ʼಪರಿʼ ತನ್ನ ಸಂಗ್ರಹದಿಂದ ಜಾತಿ ವ್ಯವಸ್ಥೆ ಮತ್ತು ಅಂಬೇಡ್ಕರ್ ಅವರನ್ನು ಕುರಿತಾಗಿ ಹಾಡಲಾಗುವ ಬೀಸುಕಲ್ಲಿನ ಪದಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲಿದೆ.
ಸರಣಿಯ ಈ ಮೊದಲ ಕಂತಿನಲ್ಲಿ, ರಾಧಾ ಬೋರ್ಡೆ ವಿಭಿನ್ನ ವಿಷಯಗಳ ಆಧಾರದ ಮೇಲೆ 5 ದ್ವಿಪದಿಗಳನ್ನು (ಓವಿ) ಹಾಡಿದ್ದಾರೆ. ಅವರು ಮೊದಲ ದ್ವಿಪದಿಯಲ್ಲಿ ಬುದ್ಧನನ್ನು ಕುರಿತು ಹಾಡಿದ್ದಾರೆ, ಈ ದ್ವಿಪದಿಯ ಸಾಹಿತ್ಯವು ಬುದ್ಧನು ದಲಿತರ ಕಲ್ಯಾಣಕ್ಕಾಗಿ ಬೌದ್ಧಧರ್ಮವನ್ನು ಸೃಷ್ಟಿಸಿದನೆಂದೂ, ಈ ಧರ್ಮವು ದಲಿತರನ್ನು ಅಸ್ಪೃಶ್ಯರೆಂದು ಕರೆಯದಂತೆ ಮುಕ್ತಗೊಳಿಸಿತು ಎಂದೂ ಹೇಳುತ್ತದೆ.
ಎರಡನೆಯ ದ್ವಿಪದಿ (ಓವಿ) ಭೀಮರಾವ್ ಅಂಬೇಡ್ಕರ್ ಅವರಿಗೆ ಸಂಬಂದಿಸಿದ್ದು, ಜಾತಿ ಆಧಾರಿತ ದಬ್ಬಾಳಿಕೆಯನ್ನು ವಿರೋಧಿಸಲು ದಲಿತರಿಗೆ ಪ್ರೇರಣೆ ನೀಡಿ ದಾರಿ ತೋರಿಸಿದರೆಂದು ಈ ದ್ವಿಪದಿ ಹೇಳುತ್ತದೆ.
ಮೂರನೆಯ ದ್ವಿಪದಿ ಬೌದ್ಧಧರ್ಮ ಮತ್ತು ಅದಕ್ಕೆ ಸಂಬಂಧಿಸಿದ ಜೀವನಶೈಲಿಯ ಕುರಿತು ಮಾತನಾಡುತ್ತದೆ. ಇದರ ಸಾಹಿತ್ಯವು ಧಮ್ಮ (ಧರ್ಮ)ದ ಮಾರ್ಗ ಮಾತ್ರವೇ ಈ ಜಗತ್ತನ್ನು ಉಳಿಸುತ್ತದೆ ಮತ್ತು ಅದನ್ನು ರಕ್ಷಿಸುತ್ತದೆಂದು ಹೇಳುತ್ತದೆ.
ನಾಲ್ಕನೆಯ ಹಾಡು ಸಂಘಕ್ಕೆ ಮೀಸಲು ಎನ್ನುವ ಹಾಡುಗಾರ್ತಿ ಸಂಘವು ತನಗೆ ಪಂಚಶೀಲ ತತ್ವಗಳನ್ನು ಪಾಲಿಸುವ ಬಗೆಯನ್ನು ಕಲಿಸಿದೆ ಎಂದು ಸ್ಮರಿಸಿಕೊಳ್ಳುತ್ತಾರೆ.
ಐದನೆಯ ಹಾಡನ್ನು ವಿಶೇಷವಾಗಿ ಬಾಬಾಸಾಹೇಬ್ ಅವರ ಹೆಂಡತಿ ರಮಾಬಾಯಿಯವರಿಗೆ ಅರ್ಪಿಸಿದ್ದಾರೆ. ರಮಾಬಾಯಿ ಇಡಿಯ ದಲಿತ ವರ್ಗಕ್ಕೆ ತಾಯಿಯಾಗಿದ್ದರು ಎನ್ನುತ್ತಾರೆ.
ನನ್ನ ಮೊದಲನೆಯ ಹಾಡು ಸ್ವಾಮಿ ಬುದ್ಧಗೆ
ಬುದ್ಧ ಧಮ್ಮವ
ದಲಿತರಿಗೆ ತಂದ ದೇವಗೆ
ನನ್ನ ಎರಡನೆಯ ಹಾಡು ಭೀಮರಾಯಗೆ
ದಲಿತರಲ್ಲಿ ವಜ್ರದಂತೆ ಹುಟ್ಟಿ ಬಂದವಗೆ
ನನ್ನ ಮೂರನೆಯ ಹಾಡು ಧಮ್ಮ ಗ್ರಂಥಕೆ
ಜಗವ ಪಾಲನೆ ಮಾಡುವ ಕರುಣೆಯ ಪಂಥಕೆ
ನನ್ನ ನಾಲ್ಕನೆಯ ಹಾಡು ಬುದ್ಧ ಸಂಘಕೆ
ಪಂಚಶೀಲ ತತ್ವವನ್ನು ಪಾಲಿಸುವುದಕೆ
ನನ್ನ ಐದನೆಯ ಹಾಡು ರಮಾಬಾಯಿಗೆ
ನಮ್ಮೆಲ್ಲರ ನಡುವೆ ಇರುವ ಮಹಾತಾಯಿಗೆ
ಪ್ರದರ್ಶಕಿ / ಗಾಯಕಿ : ರಾಧಾ ಬೋರ್ಡೆ
ಗ್ರಾಮ : ಮಜಲ್‌ಗಾಂವ್
ಊರು : ಭೀಮ್ ನಗರ
ತಾಲ್ಲೂಕು : ಮಜಲ್‌ಗಾಂವ್
ಜಿಲ್ಲೆ : ಬೀಡ್
ಲಿಂಗ : ಸ್ತ್ರೀ
ಮಕ್ಕಳು : 4 ಹೆಣ್ಣುಮಕ್ಕಳು
ಜಾತಿ : ನವ ಬೌದ್ಧ (ನವ ಬೌದ್ಧ)
ದಿನಾಂಕ : ಈ ವಿವರಗಳನ್ನು ಏಪ್ರಿಲ್ 2, 1996ರಂದು ದಾಖಲಿಸಲಾಗಿದೆ
ಪೋಸ್ಟರ್: ಆದಿತ್ಯ ದೀಪಂಕರ್, ಶ್ರೇಯಾ ಕಾತ್ಯಾಯಿನಿ ಮತ್ತು ಸಿಂಚಿತಾ ಮಾಜಿ
ಓವಿ ಅನುವಾದಕರು: ಸುಧಾ ಅಡುಕಳ
ಅನುವಾದ: ಶಂಕರ ಎನ್. ಕೆಂಚನೂರು