"ನಾನು ತುಂಬಾ ಒತ್ತಡದಲ್ಲಿದ್ದೇನೆ ಆದರೆ ಕೆಲಸ ಮಾಡದೆ ಬೇರೆ ದಾರಿಯಿಲ್ಲ. ನನಗೆ ಸಿಕ್ಕಿದ ಸಂಪಾದನೆಯಲ್ಲೇ ಮನೆ ನಡೆಸಬೇಕಿದೆ,” ಎಂದು ನಲವತ್ತರ ಹರೆಯದ ಸೆಂಥಿಲ್ ಕುಮಾರಿ ಹೇಳುತ್ತಾರೆ. ಅವರು ಮೀನು ಮಾರಾಟ ಮಾಡಲು ದಿನವೊಂದಕ್ಕೆ 130 ಕಿಲೋಮೀಟರ್ ಪ್ರಯಾಣಿಸುತ್ತಾರೆ. ಕೋವಿಡ್ -19 ಲಾಕ್‌ಡೌನ್ ವಿಧಿಸಿದಾಗ, ಅವರ ಮೇಲಿನ ಕೆಲಸದ ಹೊರೆ ಇನ್ನಷ್ಟು ಹೆಚ್ಚಾಯಿತು. ಏಕೆಂದರೆ ಮೀನುಗಾರಿಕೆ, ಸಾಗಾಣಿಕೆ, ಮಾರುಕಟ್ಟೆ ಹೀಗೆ ಎಲ್ಲವೂ ಸ್ಥಗಿತಗೊಂಡಿತ್ತು. “ಸಾಲ ಹೆಚ್ಚುತ್ತಿತ್ತು. ಮಗಳಿಗೆ ಆನ್‌ಲೈನ್ ತರಗತಿಗಳಿಗೆ ಸ್ಮಾರ್ಟ್‌ಫೋನ್ ಬೇಕಿತ್ತು ಆದರೆ ಅದನ್ನು ಖರೀದಿ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಎಲ್ಲವೂ ಹೊರೆಯಾಗಿದೆ,” ಎಂದು ಅವರು ಹೇಳುತ್ತಾರೆ.
ವನಗಿರಿ ತಮಿಳುನಾಡಿನ ಮಯಿಲಾಡುದುರೈ ಜಿಲ್ಲೆಯಲ್ಲಿರುವ ಒಂದು ಮೀನುಗಾರ ಗ್ರಾಮ. ಸೆಂಥಿಲ್ ಕುಮಾರಿ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ವಿವಿಧ ವಯೋಮಾನದ ಸುಮಾರು 400 ಮಹಿಳೆಯರು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಕೆಲವರು ತಲೆಯ ಮೇಲೆ ಮೀನು ಹೊತ್ತುಕೊಂಡು ವನಗಿರಿಯ ಓಣಿಗಳಲ್ಲಿ ಮಾರಿದರೆ ಇನ್ನು ಕೆಲವರು ರಿಕ್ಷಾ, ವ್ಯಾನ್ ಅಥವಾ ಬಸ್ಸುಗಳಲ್ಲಿ ಹತ್ತಿರದ ಹಳ್ಳಿಗಳಿಗೆ ಹೋಗಿ ಮಾರುತ್ತಾರೆ. ಕೆಲವರು ಬೇರೆ ಜಿಲ್ಲೆಗಳಿಗೆ ಹೋಗಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡುತ್ತಾರೆ.
ಸೆಂಥಿಲ್ ಕುಮಾರಿ ಅವರಂತೆ, ಹೆಚ್ಚಿನ ಮಹಿಳೆಯರು ತಮ್ಮ ಸಂಪಾದನೆಯಿಂದ ಮನೆಯ ಖರ್ಚುಗಳನ್ನು ನಿರ್ವಹಿಸುತ್ತಾರೆ. ಆದಾಗ್ಯೂ, ಈ ಸಮಯದಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊರೋನಾ ಮಹಾಮಾರಿಯು ಈ ಎಲ್ಲಾ ಮಹಿಳೆಯರ ಮೇಲೆ ಪರಿಣಾಮ ಬೀರಿದೆ. ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು, ಅವರು ಲೇವಾದೇವಿದಾರರು ಮತ್ತು ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾಲ ಮಾಡಬೇಕಾಗಿ ಬಂದಿತ್ತು ಮತ್ತು ಹೀಗಾಗಿ ಅವರು ಈಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆಯೆನ್ನುವ ಭರವಸೆ ಬಹಳ ಕ್ಷೀಣವಾಗಿದೆ. ಒಂದು ಸಾಲವನ್ನು ತೀರಿಸಲು, ಅವರು ಮತ್ತೊಂದು ಸಾಲವನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಇದಕ್ಕಾಗಿ ದೊಡ್ಡ ಬಡ್ಡಿದರಗಳನ್ನು ಪಾವತಿಸಬೇಕಾಗುತ್ತದೆ. “ಸಕಾಲಕ್ಕೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ಬಡ್ಡಿಯೂ ಹೆಚ್ಚುತ್ತಿದೆ” ಎನ್ನುತ್ತಾರೆ ಮೀನು ಮಾರಾಟಗಾರ ಅಮುದಾ (43 ವರ್ಷ).
ರಾಜ್ಯದ ಯಾವ ನೀತಿಯಲ್ಲಿಯೂ ಮಹಿಳಾ ಮೀನು ಮಾರಾಟಗಾರರ ಬಂಡವಾಳ ಮತ್ತು ಇತರ ಹಣಕಾಸಿನ ಅಗತ್ಯಗಳನ್ನು ಪೂರೈಸು ಯಾವುದೇ ಕಾಳಜಿಯನ್ನು ಸರಕಾರಗಳು ವಹಿಸಿಲ್ಲ. ಮತ್ತೊಂದೆಡೆ, ಪುರುಷರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ, ಮೀನುಗಾರಿಕೆಯೇತರ ಸಮುದಾಯದ ಮಹಿಳೆಯರೂ ಮೀನು ಮಾರಾಟವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಮೀನು ಮತ್ತು ಸಾಗಾಣಿಕೆ ವೆಚ್ಚ ಹೆಚ್ಚಿದ್ದು, ಆದಾಯವೂ ಕಡಿಮೆಯಾಗಿದೆ. ಮೊದಲು ಇಡೀ ದಿನಕ್ಕೆ 200-300 ರೂಪಾಯಿಯಷ್ಟಿದ್ದ ಅವರ ಸಂಪಾದನೆ ಈಗ 100 ರೂಪಾಯಿಗೆ ಇಳಿದಿದ್ದು, ಇದು ಕೆಲವೊಮ್ಮೆ ಇನ್ನೂ ಕಡಿಮೆಯಿರುತ್ತದೆ.
ಬದುಕು ಸಂಕಷ್ಟದಲ್ಲಿದೆ, ಆದರೂ ಅವರು ದಿನದಿಂದ ದಿನಕ್ಕೆ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ದಿನವೂ ಬಂದರಿಗೆ ಹೋಗುವುದು, ಮೀನು ಖರೀದಿಸುವುದು, ಹಾಗೂ ಇದರ ಜೊತೆ ನಿಂದನೆಗಳನ್ನು ಕೂಡ ಕೇಳಬೇಕರುತ್ತದೆ. ಇದೆಲ್ಲದರ ನಡುವೆಯೂ ತಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುತ್ತಾ ಮೀನು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ
ಅನುವಾದ: ಶಂಕರ ಎನ್. ಕೆಂಚನೂರು