ಎಲ್ಲವೂ ಎಂದಿನಂಥೆ ಇರುತ್ತಿದ್ದರೆ ಇಷ್ಟೊತ್ತಿಗೆ ಶಂಶುದ್ದೀನ್ ಮುಲ್ಲಾ ಎಂಜಿನ್ ಮತ್ತು ಪಂಪ್‌ಗಳನ್ನು ಸರಿಪಡಿಸಲು ಹೊಲಗಳಲ್ಲಿ ಇರುತ್ತಿದ್ದರು.
ಲಾಕ್‌ಡೌನ್‌ನ ಎರಡನೇ ದಿನವಾದ ಮಾರ್ಚ್ 26ರಂದು ಅವರು ಸುಲ್ಕುದ್ ಗ್ರಾಮ (ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕು)ದಲ್ಲಿರುವ ಅವರ ಮನೆಗೆ ಹತಾಶನಾಗಿದ್ದ ರೈತ ಬಂದಾಗಲಷ್ಟೇ ಅವರು ಮನೆಯಿಂದ ಹೊರಗೆ ಕಾಲಿಟ್ಟಿದ್ದು, "ಅವರು ನನ್ನನ್ನು ತಮ್ಮ ಜಮೀನಿಗೆ ಕರೆದೊಯ್ದರು, ಅಲ್ಲಿ ನಾನು ಅವರ ಡೀಸೆಲ್-ಎಂಜಿನ್ ವಾಟರ್ ಪಂಪ್ ಸೆಟ್ ಅನ್ನು ಸರಿಪಡಿಸಿದೆ." ಒಂದು ವೇಳೆ ಶಂಶುದ್ದೀನ್ ಹಾಗೆ ಮಾಡದೆ ಹೋಗಿದ್ದಲ್ಲಿ, ರೈತನು ತನ್ನ ಕಬ್ಬಿನ ಬೆಳೆಗೆ ನೀರು ಹಾಯಿಸುವುದು ಕಷ್ಟವಾಗುತ್ತಿತ್ತು.
ತಮ್ಮ 10ನೇ ವಯಸ್ಸಿನಲ್ಲಿ ಕೆಲಸ ಮಾಡಲು ಆರಂಭಿಸಿದ್ದ 84 ವರ್ಷದ ಈ ಮಾಸ್ಟರ್ ಮೆಕ್ಯಾನಿಕ್, ತಮ್ಮ 74 ವರ್ಷಗಳ ಜೀವನದಲ್ಲಿ ಇದೇ ಎರಡನೇ ಬಾರಿಗೆ ಇಂಜಿನ್ ಸರಿಪಡಿಸುವ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅವರು 2019ರ ಜನವರಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ತೆಗೆದುಕೊಂಡಿದ್ದರು.
ಶಂಶುದ್ದೀನ್ ತಮ್ಮ ಏಳು ದಶಕದ ವೃತ್ತಿ ಜೀವನದಲ್ಲಿ ಬೋರ್‌ವೆಲ್ ಪಂಪ್‌ಗಳು, ಕಿರಿದಾದ-ಅಗೆಯುವ ಯಂತ್ರಗಳು, ನೀರಿನ ಪಂಪ್‌ಗಳು, ಡೀಸೆಲ್ ಎಂಜಿನ್‌ಗಳು ಸೇರಿದಂತೆ 5,000ಕ್ಕೂ ಹೆಚ್ಚು ಎಂಜಿನ್‌ಗಳನ್ನು ದುರಸ್ತಿ ಮಾಡಿದ್ದಾರೆ ಮತ್ತು ಈಗ ಅವರ ಈ ಕೌಶಲ ಕಲೆಯ ಮಟ್ಟಕ್ಕೆ ಏರಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಬಾರವಾಡ್ ಗ್ರಾಮದಲ್ಲಿರುವ ಅವರ ಮನೆ ಬಹಳ ಹಿಂದಿನಿಂದಲೂ ಕೂಡ ಯಂತ್ರೋಪಕರಣಗಳ ಸಮಸ್ಯೆಯೊಂದಿಗೆ ಬರುವ ರೈತರಿಗೆ ಒಂದು ರೀತಿ ಎಸ್‌ಒಎಸ್ ಕೇಂದ್ರದಂತಾಗಿದೆ. ಸಾಮಾನ್ಯ ವರ್ಷದಲ್ಲಿ ಅವರ ಗರಿಷ್ಟ ದುಡಿಮೆಯ ದಿನಗಳೆಂದರೆ ಮಾರ್ಚ್, ಎಪ್ರಿಲ್, ಮೇ ತಿಂಗಳುಗಳು. ಈ ಅವಧಿಯಲ್ಲಿ ಅವರು 30 ವಿವಿಧ ರೀತಿಯ ಇಂಜಿನ್ನುಗಳನ್ನು ದುರಸ್ತಿ ಮಾಡಬಹುದೆಂದು ಅವರು ಅಂದಾಜಿಸುತ್ತಾರೆ. ಈ ಕೆಲಸದಮೂಲಕ ಅವರು ಇಂಜಿನ್ ಒಂದಕ್ಕೆ 500 ರೂಪಾಯಿಗಳನ್ನು ಸಂಪಾದಿಸುತ್ತಾರೆ. ಆದರೆ ಈಗ ಲಾಕ್ ಡೌನ್ ನಿಂದಾಗಿ ಎಲ್ಲವೂ ನಷ್ಟವಾಗಿದೆ.
ಈಗ ಅವರ ಕುಟುಂಬವು ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಅವರು ರಿಪೇರಿ ಮಾಡಿದ ಎಂಟು ಇಂಜಿನ್ ಗಳಿಂದ ಬಂದಂತಹ 5000 ರೂ.ಗಳ ಆದಾಯ ಮತ್ತು ಸರ್ಕಾರವು ಘೋಷಿಸಿದ ಪ್ರತಿಯೊಬ್ಬರಿಗೂ ಐದು ಕಿಲೋಗ್ರಾಂಗಳಷ್ಟು ಉಚಿತ ಆಹಾರ ಧಾನ್ಯಗಳ ರೇಷನ್ ಮೇಲೆ ನಡೆಯುತ್ತಿದೆ.
ಸುಲ್ಕುದ್ನ ರೈತ ಇತ್ತೀಚೆಗೆ ತನ್ನ ಮನೆಗೆ ಬೈಕ್‌ನಲ್ಲಿ ಬಂದ ನಂತರ, ಇನ್ನೂ ಮೂವರು ರೈತರು ಶಂಶುದ್ದೀನ್ ಅವರನ್ನು ದೋಷಯುಕ್ತ ಯಂತ್ರಗಳೊಂದಿಗೆ ಸಂಪರ್ಕಿಸಿದರು, ಆದರೆ ಅವರ ಸಮಸ್ಯೆಗಳು ಬಗೆಹರಿಯದ ಕಾರಣ ಅವರು ಹಾಗೆಯೇ ಹಿಂದಿರುಗಬೇಕಾಯಿತು "ನನ್ನ ಬಳಿ ಅಗತ್ಯವಾದ ಸಾಮಗ್ರಿಗಳು ಇಲ್ಲ ಮತ್ತು ಕೊಲ್ಹಾಪುರ ನಗರದ ಎಲ್ಲಾ ಅಂಗಡಿಗಳನ್ನು ಈಗ ಮುಚ್ಚಲಾಗಿದೆ" ಎಂದು ಅವರು ನನಗೆ ಫೋನ್‌ನಲ್ಲಿ ಹೇಳಿದರು.
ಎರಡು ತಿಂಗಳ ಹಿಂದೆ, ಅವರ 70 ವರ್ಷದ ಪತ್ನಿ ಗುಲ್ಶನ್ ಮತ್ತು 50 ರ ಹರೆಯದ ಮಗ ಐಸಾಕ್ ಅವರ ಜೊತೆಗೂಡಿ ಶಂಶುದ್ದೀನ್ ಅವರ ಎರಡು ಎಕರೆ ಜಾಗದಲ್ಲಿ ಕಬ್ಬನ್ನು ಬೆಳೆದಿದ್ದಾರೆ. ಆದರೆ ಸಾಮಾನ್ಯ ಅವಧಿಯಲ್ಲಿಯೂ (ಕೆಲವೊಮ್ಮೆ ಬೆಳಗ್ಗೆ 2 ಗಂಟೆಗೆ) ಕೃಷಿಗೆ ನೀರು ಅನಿಯಮಿತವಾಗಿ ಪೂರೈಕೆಯಾಗುತ್ತದೆ. ಹಾಗಾಗಿ ಈಗ ಅವರು ತಮ್ಮ ಜಮೀನಿಗೆ ಹೋಗುವುದರ ಬಗ್ಗೆಯೂ ಚಿಂತಿಸಬೇಕಾಗಿದೆ. ಅದು ಹತ್ತಿರದಲ್ಲಿದ್ದರೂ ಸಹಿತ ಅವರಿಗೆ ಯಾವಾಗಲೂ ಪೋಲಿಸರು ಹೊಡೆಯುತ್ತಾರೆ ಎನ್ನುವ ಭೀತಿ ಇರುತ್ತದೆ. ಹೀಗಾಗಿ ಈಗ ಫಸಲಿನ ಭವಿಷ್ಯವು ತುಂಬಾ ಅನಿಶ್ಚಿತವಾಗಿದೆ.
ಲಾಕ್‌ಡೌನ್ ಆದ ಸುಮಾರು 40 ದಿನಗಳಲ್ಲಿ ಶಂಶುದ್ದೀನ್ ಒಂದೇ ಒಂದು ಇಂಜಿನ್ ಅಥವಾ ಯಾವುದೇ ಯಂತ್ರವನ್ನು ರಿಪೇರಿ ಮಾಡಿಲ್ಲ. ಅವರು ಈಗಾಗಲೇ ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ, ಅವರೇ ಅಂದಾಜು ಮಾಡುವಂತೆ, "ಈ ಐದು ವಾರಗಳಲ್ಲಿ ಕನಿಷ್ಠ 15,000 ರೂ.ನಷ್ಟ” ಅನುಭವಿಸಿರುವುದಾಗಿ ಹೇಳುತ್ತಾರೆ. “ನಾನು ಈ ಸಾಂಕ್ರಾಮಿಕ ಕೊರೊನಾ ಮತ್ತು ಲಾಕ್‌ಡೌನ್ ತರ ಎಂದಿಗೂ ನೋಡಿಲ್ಲ ಎನ್ನುತ್ತಾರೆ. ಅವರು ಈ ಹಿಂದೆ ಗ್ರಾಮೀಣ ಕೊಲ್ಲಾಪುರದ ಭಾಗದಲ್ಲಿ ಪ್ಲೇಗ್ ಬಂದಿದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಆಗ ಅವರು ಕೇವಲ ಎಂಟು ವರ್ಷದವರಾಗಿದ್ದರು, ಆಗ ಅವರ ಕುಟುಂಬವು ಮಹಾರಾಷ್ಟ್ರದ ಆ ನೆರೆಯ ಜಿಲ್ಲೆಯ ಹತ್ಕಾನಂಗಲ್ ತಾಲ್ಲೂಕಿನ ಪಟ್ಟನ್ ಕೊಡೋಲಿ ಗ್ರಾಮದಲ್ಲಿ ನೆಲೆಸಿತ್ತು.
"ಆ ದಿನಗಳಲ್ಲಿ ನಮ್ಮ ಮನೆಗಳನ್ನು ತೊರೆದು ಹೊಲಗಳಲ್ಲಿ ಉಳಿಯುವಂತೆ ಹೇಳಲಾಗುತ್ತಿತ್ತು. ಇಂದು ನಮ್ಮನ್ನು ಮನೆಯಲ್ಲಿಯೇ ಇರಲು ಹೇಳಲಾಗುತ್ತಿದೆ ಎಂದು ಅವರು ನಗೆ ಬೀರುತ್ತಾರೆ.
*****
ವಸಂತ್ ತಾಂಬೆ ತಮ್ಮ 83ನೇ ವಯಸ್ಸಿನಲ್ಲಿಯೂ ಕೊಲ್ಹಾಪುರದ ಹಟ್ಕಾನಂಗಲ್ ತಾಲ್ಲೂಕಿನ ರೆಂಡಾಲ್ ಗ್ರಾಮದಲ್ಲಿರುವ ತಮ್ಮ ಮನೆಯ ಎರಡು ಕಿಲೋಮೀಟರ್ ವ್ಯಾಪ್ತಿಯೊಳಗೆ ಕಬ್ಬನ್ನು ಕಟಾವ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಮುಖ್ಯ ಸಂಪಾದನೆ ಒಟ್ಟಾಗಿ ಇನ್ನಿತರ ಕೆಲಸಗಳಿಂದ ಬಂದಿದೆ. ಅವರು 2019ರಲ್ಲಿ ರೆಂಡಾಲ್‌ನ ಅತ್ಯಂತ ಹಿರಿಯ ನೇಕಾರರಾಗಿ ನಿವೃತ್ತರಾಗುವವರೆಗೂ ಅವರು ಈ ಪ್ರದೇಶದ ಅತ್ಯಂತ ನುರಿತ ಕೈಮಗ್ಗ ತಜ್ಞರಲ್ಲಿ ಒಬ್ಬರಾಗಿದ್ದರು. ಅವರ ಅಂದಾಜಿನ ಪ್ರಕಾರ, ತಮ್ಮ ಆರು ದಶಕಗಳವರೆಗಿನ ವೃತ್ತಿ ಜೀವನದಲ್ಲಿ ಅವರು 100,000 ಮೀಟರ್ ಬಟ್ಟೆಯನ್ನು ನೇಯ್ದಿರುವುದಾಗಿ ಹೇಳುತ್ತಾರೆ.
ಅವರ ಈ ನೇಕಾರಿಕೆಯಲ್ಲಿನ ಪ್ರಾವಿಣ್ಯತೆ ಎಂದರೆ ಯಾವಾಗಲೂ ಪ್ರಯಾಸದ ಕೆಲಸದಲ್ಲಿಯೇ ಬದುಕುವುದಷ್ಟೇ ಎಂದರ್ಥವಲ್ಲ. ಕಳೆದ 25 ವರ್ಷಗಳಿಂದ, ಅವರು ಇತರರ ಹೊಲಗಳಲ್ಲಿ ಕಬ್ಬು ಕತ್ತರಿಸುವ ಕೆಲಸಕ್ಕಾಗಿಯೂ ಅವರು ತಮ್ಮ ಸಾಕಷ್ಟು ಸಮಯವನ್ನು ವ್ಯಯ ಮಾಡಿದ್ದಾರೆ ಮತ್ತು ಅವರು ಒಂದು ಎಕರೆ ಪ್ರದೇಶದಲ್ಲಿ ಇಬ್ಬರು ಸಹೋದರರೊಂದಿಗೆ ಜಂಟಿ ಮಾಲಿಕತ್ವವನ್ನು ಹೊಂದಿದ್ದಾರೆ. ಆದರೆ ಈಗ ಲಾಕ್‌ಡೌನ್ ನಿಂದಾಗಿ ದುರ್ಬಲವಾಗಿರುವ ಅವರ ಅಸ್ತಿತ್ವವೇ ಅಲುಗಾಡುತ್ತಿದೆ.
"ಸಾಮಾನ್ಯ ಅವಧಿಯಲ್ಲಿ ನಾನು ಮೂರು ಗಂಟೆಯಲ್ಲಿ 10-15 ಮೊಲ್ಯವನ್ನು (ಸುಮಾರು 200 ಕಿಲೋಗಳ ಕಟ್ಟು) ಕತ್ತರಿಸುತ್ತೇನೆ" ಎಂದು ಅವರು ಹೇಳುತ್ತಾರೆ, ಇನ್ನೂ ಇತರರ ಹೊಲದಲ್ಲಿ ಕೆಲಸ ಮಾಡುವುದಕ್ಕಾಗಿ ವಸಂತ್ ಗೆ 100 ರೂ. ಮೌಲ್ಯದ ಮೇವು ಸಿಗುತ್ತದೆ. ಅವರು ಇದನ್ನೇ ದಿನಗೂಲಿ ಎಂದು ಪರಿಗಣಿಸುತ್ತಾರೆ. ಅದನ್ನು ಅವರು ತಮ್ಮ ಎಮ್ಮೆ ಮತ್ತು ರೆಡ್ಕು (ಕರು)ವಿಗಾಗಿ ಬಳಸುತ್ತಾರೆ. ಈ ವಯಸ್ಸಿನಲ್ಲಿಯೂ ಅವರು ತಮ್ಮ ಸೈಕಲ್ಲಿನಲ್ಲಿ ಮೇವನ್ನು ಮನೆಗೆ ಕೊಂಡೊಯ್ಯುತ್ತಾರೆ. ಸಾಮಾನ್ಯ ಅವಧಿಯಲ್ಲಿ ಅವರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ಹೊರಟು, ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಮರಳುತ್ತಾರೆ.
"ನಾನು ಕಬ್ಬನ್ನು ಕೊನೆಯದಾಗಿ ಕತ್ತರಿಸಿದ್ದು ಮಾರ್ಚ್ 31ರಂದು" ಎಂದು ವಸಂತ್ ಹೇಳುತ್ತಾರೆ. ಅಂದರೆ ಅವರಿಗೆ ಈಗಾಗಲೇ 32 ದಿನಗಳ ಕಬ್ಬು ಕತ್ತರಿಸುವ ಅಥವಾ 3,200 ರೂ.ಗೆ ಸಮನಾಗಿರುವ ಮೇವು ಅವರಿಗೆ ನಷ್ಟವಾಗಿದೆ. ಆದರೆ ನಿಜ ಹೇಳಬೇಕೆಂದರೆ ಈ ನಷ್ಟದ ಜಾಡು ಆ ದಿನಾಂಕಕ್ಕೂ ಮೊದಲೇ ಅವರಿಗೆ ಆರಂಭವಾಗಿತ್ತು.
ಆಗಸ್ಟ್ 2019ರ ಪ್ರವಾಹದಿಂದಾಗಿ ಶೇ 60ರಷ್ಟು ಕಬ್ಬು ಹಾಳಾಯಿತು, ಮತ್ತು ಅವರು ಮತ್ತು ಅವರ ಸಹೋದರರು ತಮ್ಮ ಒಂದು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ್ದರು. ಅವರು ತಮಗೆ ಬಂದಿರುವ 0.33 ಎಕರೆ ಪಾಲಿನಲ್ಲಿ ಮಾಡಿದ ಕೊಯ್ಲಿಗೆ ಏಳು ಟನ್ ಗಳಿಗೆ ಪ್ರತಿ ಒಂದು ಟನ್ ಗೆ 2,875 ರೂ.ಗಳಂತೆ ಪಡೆದಿದ್ದರು. (ಹಿಂದಿನ ವರ್ಷದಲ್ಲಿ ಎಕರೆಯ ಅದೇ ಮೂರನೇ ಒಂದು ಭಾಗದಿಂದ 21 ಟನ್ ಕೊಯ್ಲು ತೆಗೆದಿದ್ದರು). “ಈಗ ಹೇಗಾದರೂ ಮಾಡಿ ಈಗ ಆ ಏಳು ಟನ್‌ಗಳ ಮಾರಾಟದಿಂದ ಬಂದಿರುವ 20,000 ರೂ. ಗಳಿಂದ (ಅದೂ ಇದೇ ಮಾರ್ಚಿಯಲ್ಲಿ ಹಣವನ್ನು ಸ್ವೀಕರಿಸಿದ್ದರು ) ನಾವು ಒಂದು ವರ್ಷ ಕಳೆಯಬೇಕಾಗಿದೆ.” ಎಂದು ಹೇಳುತ್ತಾರೆ.
ವಸಂತ್ ಮತ್ತು ಅವರ ಪತ್ನಿ ವಿಮಲ್ (76) ಅವರಿಗೆ ಮಾರ್ಚ್ 26ರಂದು ಸರ್ಕಾರ ಘೋಷಿಸಿದ್ದ ಉಚಿತ ಅಕ್ಕಿ ಪ್ಯಾಕೇಜ್‌ನ್ನು ತಕ್ಷಣಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಏಪ್ರಿಲ್ 2ರಂದು ತಮ್ಮ ಬಳಿ ಇರುವ ಪಡಿತರ ಚೀಟಿ ಮೂಲಕ ದಂಪತಿಗಳು 6. ಕೆಜಿ ಗೋಧಿ ಮತ್ತು 4. ಕೆಜಿ ಅಕ್ಕಿಯನ್ನು ಕ್ರಮವಾಗಿ ಕಿಲೋಗೆ 3 ರೂ.ಮತ್ತು 2 ರೂ.ದರದಲ್ಲಿ ಸಾಮಾನ್ಯ ರೇಷನ್ ಅಂಗಡಿಯಿಂದ ಪಡೆದರು. ಸುಮಾರು 10 ದಿನಗಳ ನಂತರ ಅವರು ತಲಾ 5 ಕಿಲೋ ಆಹಾರ ಧಾನ್ಯವನ್ನು ಉಚಿತವಾಗಿ ಪಡೆದರು.
ಗಂಡ ಮತ್ತು ಹೆಂಡತಿ ಇಬ್ಬರೂ ಧನಗರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದನ್ನು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಪಟ್ಟಿ ಮಾಡಲಾಗಿದೆ. ಇಬ್ಬರಿಗೂ ಮಾಸಿಕ 1,000 ರೂ. ವೃದ್ಧಾಪ್ಯ ವೇತನ ಸಿಗುತ್ತದೆ, ಶಂಶುದ್ದೀನ್ ಮತ್ತು ಗುಲ್ಶನ್ ಅವರಂತೆ. ಬ್ರಿಟಿಷರ ಕಾಲಾವಧಿಯಲ್ಲಿ ಬಾಲಕನಾಗಿದ್ದಾಗ ಇಡೀ ಗ್ರಾಮೀಣ ಕೊಲ್ಲಾಪುರ ಪ್ರದೇಶವು ಪ್ಲೇಗ್ ರೋಗದಿಂದ ತತ್ತರಿಸಿದ್ದನ್ನು ವಸಂತ್ ಅವರು ಸ್ಮರಿಸಿಕೊಳ್ಳುತ್ತಾರೆ. "ಆ ಸಮಯದಲ್ಲಿ ಬಹಳಷ್ಟು ಜನರು ಸಾವನ್ನಪ್ಪಿದರು. ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಬಿಟ್ಟು ಊರ ಹೊರಗೆ ಹೋಗುವಂತೆ ಮನವಿ ಮಾಡಿಕೊಳ್ಳಲಾಗಿತ್ತು," ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಅವರ ಮೂಲ ವೃತ್ತಿಯಾದ ನೇಕಾರಿಕೆಯಲ್ಲಿ ಸುಮಾರು 60ಕ್ಕೂ ಅಧಿಕ ವರ್ಷಗಳ ಕಾಲ ಪ್ರಾವಿಣ್ಯತೆಯನ್ನು ಸಾಧಿಸಿ ನಿವೃತ್ತಿಯಾದ ಒಂದು ವರ್ಷದ ಬಳಿಕ ಈ ಲಾಕ್ ಡೌನ್ ಬಂದಿದೆ. “ವೈ ಝಾಲಾ ಕಿ (ನನಗೂ ಈಗ ವಯಸ್ಸಾಗಿದೆ)” ಎನ್ನುತ್ತಾರೆ. ನೇಯ್ಗೆಗೆ ಸಾಕಷ್ಟು ದೈಹಿಕ ಶ್ರಮ ಬೇಕಾಗುತ್ತದೆ. ಇದೊಂದು ರೀತಿ ರೆಂಡಾಲಿನಿಂದ ಕೊಲ್ಲಾಪುರಕ್ಕೆ (27.5 ಕಿ.ಮಿ) ಪ್ರತಿದಿನ ನಡೆದಂತೆ ಎಂದು ನಗೆ ಬೀರುತ್ತಾರೆ.
ತದನಂತರ, ಗಂಭೀರವಾಗಿ: "ನನ್ನ ಇಡೀ ಜೀವನದಲ್ಲಿ, ನಾನು ಈ ರೀತಿಯ ಬಿಕ್ಕಟ್ಟನ್ನು ನೋಡಿಲ್ಲ." ಎಂದು ಹೇಳುತ್ತಾರೆ.
*****
ದೇವು ಭೋರ್ ಅವರಿಗೆ ಶೀಘ್ರದಲ್ಲೇ 60 ವರ್ಷ ವಯಸ್ಸಾಗಲಿದ್ದು, ಕಳೆದ ಮೂರು ದಶಕಗಳಿಂದಲೂ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೋರಗಾಂವ್ ಗ್ರಾಮದಲ್ಲಿ ಹಗ್ಗವನ್ನು ತಯಾರಿಸುತ್ತಿದ್ದಾರೆ. ಈಗ ಐದು ತಲೆಮಾರುಗಳಿಂದ ಇಲ್ಲಿನ ಭೋರ್ ಕುಟುಂಬವು ಹಗ್ಗ ತಯಾರಿಸುವ ಕಲೆಯನ್ನು ಜೀವಂತವಾಗಿರಿಸಿದೆ . ಈಗ ಲಾಕ್‌ಡೌನ್ ಅಡಿಯಲ್ಲಿ ಹೆಚ್ಚಾಗಿ ತಮ್ಮ ಬದುಕಿನ ಬಗ್ಗೆ ಗಮನ ಕೇಂದ್ರಿಕರಿಸಿದ್ದಾರೆ.
“ನಮ್ಮಲ್ಲಿ ಹಗ್ಗಗಳನ್ನು ತಯಾರಿಸಲಿಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳು ಇವೆ. ಈಗ ಕೆಲಸವನ್ನಷ್ಟೇ ಆರಂಭಿಸಬೇಕಾಗಿದೆ" ಎಂದು ಭೋರ್ ಅವರ 31 ವರ್ಷದ ಮಗ ಅಮಿತ್, ಏಪ್ರಿಲ್ 4 ರಂದು ನನಗೆ ಫೋನ್‌ನಲ್ಲಿ ಹೇಳಿದ್ದರು. ಅವರು ಆತಂಕದಲ್ಲಿದ್ದರು, ಕೃಷಿ ಆರ್ಥಿಕತೆಯಲ್ಲಿ ಎದುರಾಗಲಿರುವ ಕುಸಿತವನ್ನು ಅವರು ಆಗಲೇ ಗ್ರಹಿಸಿದ್ದರು. "ಏಪ್ರಿಲ್ ಮೊದಲ ವಾರದಿಂದ, ಬೆಂದೂರಿನಲ್ಲಿ ನಡೆಯುವ ಹಬ್ಬಕ್ಕಾಗಿ ನಾವು ಹಗ್ಗಗಳನ್ನು ತಯಾರಿಸಬೇಕು" ಎಂದು ಅವರು ಹೇಳಿದರು. ಇದು ಸಾಮಾನ್ಯವಾಗಿ ಜೂನ್ ಮತ್ತು ಆಗಸ್ಟ್ ನಡುವೆ ಎತ್ತುಗಳಿಗಾಗಿ ಮೀಸಲಾಗಿರುವ ಹಬ್ಬವಾಗಿದೆ.
ಭೋರ್ ಗಳು ಪರಿಶಿಷ್ಟ ಜಾತಿಯಲ್ಲಿನ ಮಾತಂಗ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರು ರೈತರಿಗಾಗಿ ಎರಡು ರೀತಿಯ ಹಗ್ಗಗಳನ್ನು ತಯಾರಿಸುತ್ತಾರೆ. ಒಂದು ನೇಗಿಲಿಗೆ ಕಟ್ಟುವ 12 ಅಡಿ ಉದ್ದದ ಕಸ್ರಾ. ಇದನ್ನು ಕೊಯ್ಲು ಮಾಡಿದ ಬೆಳೆಗಳನ್ನು ದೊಡ್ಡ ಕಟ್ಟುಗಳಲ್ಲಿ ಕಟ್ಟಲು ಮತ್ತು ಕೆಲವು ಗ್ರಾಮೀಣ ಪ್ರದೇಶದ ಮನೆಗಳ ಚಾವಣಿಯಲ್ಲಿ ಶಿಶುವಿನ ತೊಟ್ಟಿಲನ್ನು ಕಟ್ಟಲು ಸಹ ಇದನ್ನು ಬಳಸಲಾಗುತ್ತದೆ. ಇನ್ನೊಂದು, 'ಕಂದಾ' ಎಂದು ಕರೆಯಲ್ಪಡುವ ಮೂರು ಅಡಿ ಉದ್ದದ ಹಗ್ಗವನ್ನು ಎತ್ತಿನ ಕುತ್ತಿಗೆಗೆ ಕಟ್ಟಲಾಗುತ್ತದೆ. ಅವರು ಕಸ್ರಾ ಹಗ್ಗವನ್ನು 100 ರೂ.ಗಳಿಗೆ ಮತ್ತು ಒಂದು ಜೋಡಿ ಕಂದಾಗಳನ್ನು 50 ರೂ.ಗಳಿಗೆ ಮಾರುತ್ತಾರೆ.
ಅಮಿತ್ ಅವರ ಆತಂಕವೂ ತಪ್ಪಾಗಿ ವ್ಯಕ್ತವಾಗಿಲ್ಲ. ಹಲವು ವಾರಗಳಾಗುತ್ತಾ ಬಂದರೂ ಅವರಿಗೆ ಯಾವುದೇ ಕೆಲಸವಿಲ್ಲ. ಲಾಕ್‌ಡೌನ್ ಪೂರ್ವದ ದಿನಗಳಲ್ಲಿ , ದೇವು, ಅವರ ಪತ್ನಿ ನಂದುಬಾಯಿ (50 ವಯಸ್ಸಿನವರು ) ಮತ್ತು ಅಮಿತ್ ದಿನದ ಎಂಟು ಗಂಟೆಗಳ ಕೆಲಸಕ್ಕೆ ತಲಾ 100 ರೂ.ಗಳನ್ನು ಸಂಪಾದಿಸುತ್ತಾರೆ.ಲಾಕ್‌ಡೌನ್ ನಿಂದಾಗಿ 350 ಗಂಟೆಗಳಿಗಿಂತ ಹೆಚ್ಚಿನ ಕೆಲಸವನ್ನು ಕಳೆದುಕೊಂಡ ನಂತರ, ಈ ಅವಧಿಯಲ್ಲಿ 13,000 ರೂ.ಗಳ ನಷ್ಟವನ್ನು ಅನುಭವಿಸಿದ್ದಾರೆ ಎಂದು ಅವರು ಅಂದಾಜಿಸುತ್ತಾರೆ.
ಈ ವರ್ಷ ಜೂನ್ 7ರಂದು ಕರ್ನಾಟಕಿ ಬೆಂದೂರ್ (ಕರ್ನಾಟಕದ ಹಬ್ಬ) ಹಬ್ಬವಿದೆ. ದೇವು, ನಂದುಬಾಯಿ ಮತ್ತು ಅಮಿತ್ ಅವರದ್ದು ಈಗ ಕಷ್ಟದ ಪರಿಸ್ಥಿತಿಯಾಗಿದೆ. ಈಗ ಲಾಕ್‌ಡೌನ್ ಇರುವುದರಿಂದಾಗಿ ತಾವು ಬಳಸುವ ಪುಡಿ ಬಣ್ಣಗಳನ್ನು ಮೀರಜ್‌ನಿಂದ ತರುವುದು ಅಸಾಧ್ಯವಾಗಿದೆ. ಅಲ್ಲದೆ, ಅವರ ಕುಶಲ ತಂತ್ರಗಾರಿಕೆಗೆ ತಮ್ಮ ಮನೆಯ ಹೊರಗಿನ ಕಚ್ಚಾ ರಸ್ತೆಯಲ್ಲಿ 120 ಅಡಿ ಉದ್ದದ ವಿಸ್ತಾರವನ್ನು ಸ್ಥಾಪಿಸುವ ಅಗತ್ಯವಿದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಕೈಯಿಂದ ಮಾಡಬೇಕಾಗಿರುವುದರಿಂದಾಗಿ ಇದು ಬೇಗನೆ ಪೋಲೀಸರ ಕಣ್ಣಿಗೆ ರಾಚುತ್ತದೆ.
ಅವರು ಹಗ್ಗಗಳನ್ನು ತಯಾರಿಸುವುದನ್ನು ಹೇಗೂ ನಿರ್ವಹಿಸಿದರೂ ಕೂಡ ಸಮಸ್ಯೆಗಳು ಮಾತ್ರ ಹಾಗೆ ಉಳಿಯುತ್ತವೆ. ಹಲವಾರು ರೈತರು ಬೆಂದೂರು ಜಾತ್ರೆ ಸಮಯದಲ್ಲಿ ಕಸ್ರಾ ಮತ್ತು ಕಂದಾ ಹಗ್ಗಗಳನ್ನು ಖರೀದಿಸುತ್ತಾರೆ. ಇವುಗಳನ್ನು ಮಾರಾಟ ಮಾಡಲು, ದೇವು ಮತ್ತು ಅಮಿತ್ ಅವರು ಅಕ್ಕೋಲ್, ಭೋಜ್, ಗಲತಗಾ, ಕರದಗಾ, ಮತ್ತು ಕರ್ನಾಟಕದ ಸೌಂದಲಗಾ, ಮತ್ತು ಮಹಾರಾಷ್ಟ್ರದ ಕುರುಂದವಾಡ್ ಗಳ ಆರು ವಿವಿಧ ಹಳ್ಳಿಗಳ ವಾರದ ಸಂತೆಗೆ ತೆರಳುತ್ತಾರೆ. ಒಂದು ವೇಳೆ ದೊಡ್ಡ ಜಾತ್ರೆಗಳಿದ್ದರೆ ಒಂದೆಡೆರಡು ದಿನಗಳ ಮೊದಲು "ನಾವು ಇಚಲ್ಕರಂಜಿ ಪಟ್ಟಣದಲ್ಲಿಯೂ ಸಾಕಷ್ಟು ಹಗ್ಗವನ್ನು ಮಾರಾಟ ಮಾಡುತ್ತೇವೆ" ಎಂದು ಅಮಿತ್ ಹೇಳುತ್ತಾರೆ.
ಈ ಬಾರಿ, ಜೂನ್ 7 ರಂದು ಕರ್ನಾಟಕಿ ಬೆಂದೂರ್ ನಡೆಯಲಿದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ, ಅಥವಾ ಅದನ್ನು ನಿಜವಾಗಿ ಅನುಸರಿಸುವವರಿಗೆ ಇದು ನೋವನ್ನುಂಟು ಮಾಡುತ್ತದೆ. ಏಕೆಂದರೆ ಬೆಂದೂರ್ ಋತುವಿನಲ್ಲಿ ಅವರು ತಮ್ಮ ಕೈಯಿಂದ ಮಾಡಿದ ಹಗ್ಗದ ಮಾರಾಟದಿಂದ 15,000 ರೂ.ಗಳನ್ನು ಗಳಿಸುತ್ತಾರೆ. ಆದರೆ ಇದಾದ ನಂತರ ಮಾರಾಟದ ಪ್ರಮಾಣವು ಗಣನೀಯವಾಗಿ ಕುಸಿಯುತ್ತದೆ.
ದೇವು ಮತ್ತು ಅವರ ಮೂವರು ಸಹೋದರರು ಜಂಟಿಯಾಗಿ ಹೊಂದಿರುವ ಒಂದು ಎಕರೆ ಭೂಮಿಯನ್ನು ಬಾಡಿಗೆದಾರರಿಗೆ ವಾರ್ಷಿಕವಾಗಿ 10,000 ರೂ.ದಂತೆ ನೀಡಿರುತ್ತಾರೆ. ಆದರೆ ಬಾಡಿಗೆದಾರರು ಈ ವರ್ಷ ಹಣವನ್ನು ಪಾವತಿಸುತ್ತಾರೆಯೇ ಎನ್ನುವುದರ ಬಗ್ಗೆ ಕುಟುಂಬಕ್ಕೆ ಅನುಮಾನವಿದೆ.
ಏತನ್ಮಧ್ಯೆ, ಈ ವರ್ಷ ಯಾವುದೇ ಬೆಂದೂರ್ ಜಾತ್ರೆಗಳು ಜರುಗಲಿವೆಯೇ ಎನ್ನುವುದರ ಬಗ್ಗೆ ಭೋರ್ ಗಳಿಗೆ ಯಾವುದೇ ಖಚಿತತೆ ಇಲ್ಲ, ಲಾಕ್‌ಡೌನ್‌ಗೂ ಮುಂಚಿನ ತಿಂಗಳಲ್ಲಿ ಅವರು ಸಂಪಾದಿಸಿದ್ದ 9000 ರೂ.ಗಳು ಈಗ ಬೇಗನೆ ಖರ್ಚಾಗುತ್ತಿದೆ.
“ಈಗಾಗಲೇ ನಮಗೆ ತಡವಾಗಿದೆ, ಮತ್ತು ಲಾಕ್‌ಡೌನ್ ಅನ್ನು ಇನ್ನಷ್ಟು ವಿಸ್ತರಿಸಿದರೆ, ನಮಗೆ ಏನನ್ನೂ ಸಂಪಾದಿಸಲು ಸಾಧ್ಯವಾಗುವುದಿಲ್ಲ”ಎಂದು ಅಮಿತ್ ಹೇಳುತ್ತಾರೆ.
ಅನುವಾದ: ಎನ್. ಮಂಜುನಾಥ್