ಓಹ್ ದೇವ್ರೇ.! ಎಂದು ಉದ್ಘರಿಸುತ್ತಾ ಆಕೆ ತಮ್ಮ ಬೆಳಗಿನ ತಮ್ಮ ಫಿಲ್ಟರ್ ಕಾಫಿಯನ್ನು ಕೆಳಗಡೆ ಇಟ್ಟರು. ಈಗ ತಮ್ಮ ಫೋನ್ ಅನ್ನು ತಮ್ಮ ಎರಡೂ ಕೈಗಳಿಂದ ಹಿಡಿದು, ತಮ್ಮ ಕಚೇರಿಗೆ ಇಮೇಲ್ ಕಳಿಸುವಲ್ಲಿ ನಿರತರಾಗಿದ್ದ ತಮ್ಮ ಪತಿಗಾಗಿ ಅವರು ಅದನ್ನು ಗಟ್ಟಿ ಧ್ವನಿಯಲ್ಲಿ ಓದುತ್ತಿದ್ದರು. " 16 migrant workers run over by goods train near Aurangabad in Maharashtra" - ನೀವು ಈ ಸುದ್ದಿ ಓದಿದ್ರಾ? ಎಂತಹ ನರಕಯಾತನೆಯ ಘಟನೆ ನಡೆಯುತ್ತಿದೆ ಇಲ್ಲಿ..? ಈ ಸ್ಥಬ್ದತೆ ಆವರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ನಿಮಿಷವಾಗಿತ್ತು ಮತ್ತು ಉಳಿದ ಸುದ್ದಿಯೊಂದಿಗೆ ಸಣ್ಣ ಗುಟುಕಿನಲ್ಲಿ ಕಾಫಿ ಹೀರಬೇಕೆಂದರೆ, ಅದು ಆಗಲೇ ತಣ್ಣಗಾಗಿತ್ತು. "ಅಬ್ಭಾ! ಎಷ್ಟೊಂದು ಜನರು, ಇವರೆಲ್ಲ ಎಲ್ಲಿಂದ ಬರುತ್ತಾರೆ? ಎಂದು ಉದ್ಘರಿಸುತ್ತಿರುವ ಹೊತ್ತಿಗೆ ಅವರ ಧ್ವನಿಯಲ್ಲಿನ ಆಶ್ಚರ್ಯವು ಮೊದಲಿಗಿಂತ ಬಹುತೇಕ ಇಳಿದಿತ್ತು.
"ಈ ಗುಂಪಿನಲ್ಲಿರುವ ಕೆಲವರು ಉಮರಿಯಾದವರು ಎಂದು ಅವರು ಹೇಳುತ್ತಿದ್ದಾರೆ. ಮನು, ನಾವು ಕಳೆದ ಡಿಸೆಂಬರ್‌ನಲ್ಲಿ ಈ ಸ್ಥಳಕ್ಕೆ ಹೋಗಿರಲಿಲ್ಲವೇ? ಆ ರಜೆಯ ಉಲ್ಲೇಖವು ಪತಿಯನ್ನು ತನ್ನ ಇ-ಮೇಲ್ ಪ್ರಪಂಚದಿಂದ ಹೊರಬಂದು ಈ ಸುದ್ದಿಗೂ ಬೆಲೆ ಕೊಡುವಂತೆ ಮಾಡಿತು. "ಹೌದು," ಪತಿ ಹೇಳಿದ. "ಬಾಂಧವಗಢ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದು ನಾವು. ಇದು ಮಧ್ಯಪ್ರದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜನರು ಕೆಲಸ ಹುಡುಕಿಕೊಂಡು ಜಲ್ನಾ ತನಕ ಪ್ರಯಾಣಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಹಳಿಗಳ ಮೇಲೆ ಮಲದ್ದರು ಅಲ್ವಾ? ಅವರು ಅಷ್ಟು ಮೂರ್ಖರಾಗಬಹುದೇ? "
“ಓಹ್, ಅದು ತುಂಬಾ ಸುಂದರವಾಗಿತ್ತು,” ಅವಳು ಇನ್ನೊಂದು ಗ್ರಹಕ್ಕೆ ಮರಳಿದಂತೆ ತೋರುತ್ತಿತ್ತು, “ಶೇಶ್ ಶೈಯಾ ನೆನಪಿದೆಯೇ? ವಿಷ್ಣುವಿನ ಭವ್ಯವಾದ ಪ್ರತಿಮೆ ಮತ್ತು ಹಚ್ಚ ಹಸಿರಿನ ಸಾಲ್ (ಶಾಲ ಮರದ) ಕಾಡುಗಳಿಂದ ಆವೃತವಾದ ಸ್ತಬ್ಧ ವಸಂತ ಋತು...ಈ ಲಾಕ್‌ಡೌನ್ ಮುಗಿದ ನಂತರ ನಾವು ಮತ್ತೊಮ್ಮೆ ಅಲ್ಲಿಗೆ ಹೋಗಬೇಕು..”
ಯಾರು
ಅವರನ್ನು ಗಡಿಪಾರು ಮಾಡಿದವರ್ಯಾರು?
ಅವರ ಹಿಂದಿರುವ ಬಾಗಿಲನ್ನು ಮುಚ್ಚಿದವರ್ಯಾರು?
ಅವರನ್ನು ಸ್ಥಳದಿಂದ ಸ್ಥಳಕ್ಕೆ ಅಲೆಯಲು ಬಿಟ್ಟವರ್ಯಾರು?
ಅವರ ಬದುಕನ್ನು ಕಸಿದುಕೊಂಡವರ್ಯಾರು ?
ರಸ್ತೆಗಳಲ್ಲಿ ಅಡೆತಡೆಗಳನ್ನು ಹಾಕಿದವರ್ಯಾರು?
ಅವರನ್ನು ಗೃಹಬಂಧನದಲ್ಲಿ ಇಟ್ಟವರ್ಯಾರು?
ಅವರು ಮರೆತಿದ್ದ ಕನಸುಗಳನ್ನು ಮತ್ತೆ
ನೆನಪಿಸಿದವರ್ಯಾರು?
ಅವರ ಹಸಿವಿನ ಜ್ವಾಲೆಗೆ ನಿಟ್ಟುಸಿರನ್ನು
ಊದಿದವರ್ಯಾರು?
ಹಸಿಯಾಗಿರುವ ನೆನಪುಗಳೊಂದಿಗೆ
ಅವರ ಒಣ ಗಂಟಲನ್ನು ಬತ್ತಿಸಿದವರ್ಯಾರು?
ಮನೆ,
ಅಂಗಳ, ಗ್ರಾಮ,
ಹೊಲದ ಬದಿ ಮತ್ತು ಪುಟ್ಟ ಮಕ್ಕಳ ಮಧುರ ಧ್ವನಿಗಳು ...
ಇವೆಲ್ಲವನ್ನು
ಆ ಒಣ ರೊಟ್ಟಿ ಮತ್ತು ಮೆಣಸಿನಕಾಯಿ ಚಟ್ನಿಯೊಡನೆ
ಕಟ್ಟಿಟ್ಟವರು ಯಾರು?
ಆ ಒಣ ರೊಟ್ಟಿಯ ತುಣುಕಿನೊಳಗೆ ನಿದ್ರೆಯ
ಭರವಸೆ ತುಂಬಿದವರ್ಯಾರು?
ದೇವರಾಣೆಗೂ
ಆ ರೈಲ್ವೇ ಕಂಬಿಯ ಅಡಿಯಲ್ಲಿನ
ಸಾಲ್ ಮರದ ದಿಮ್ಮೆಯು
ಹಳ್ಳಿಯ ಪಕ್ಕದಲ್ಲಿರುವ ಕಾಡನ್ನು ಸೆಳೆಯುವ ಮೂಲಕ
ಈ ಕೃತ್ಯಗೈದಿರಬೇಕು
ಇಲ್ಲವಾದಲ್ಲಿ ಅಲ್ಲಿ ಅವರಿಗೆ
ಕನಸು ತುಂಬಿದ ರೇಷ್ಮೆ ಹಾಸುಗಳನ್ನು
ನೀಡುವ ಮೂರ್ಖನಾದರೂ ಯಾರು ಹೇಳಿ?
ಈಗ ಬಾಂಧವಗಡ್ ದ ಹದಿನಾರು ಸಹೋದರರು ಕಲ್ಲಿನಂತಾಗಲು
ಅವರಿಗೆ ಶಾಪ ಹಾಕಿದ್ದಾದರೂ ಯಾರು?
ಶೇಷನಾಗನ ಮೇಲೆ
ಒಬ್ಬರಲ್ಲ,
ಇಬ್ಬರಲ್ಲ
ಹದಿನಾರು ವಿಷ್ಣುಗಳನ್ನು ಮಲಗುವಂತೆ
ಮಾಡಿದವರು ಯಾರು?
ಕಡುಗೆಂಪು ಚಂದ್ರಗಂಗಾ
ಅವರ ಕಾಲ್ಬೆರಳುಗಳಲ್ಲಿ
ರಕ್ತಸ್ರಾವವಾಗುವಂತೆ ಮಾಡಿದವರು ಯಾರು?
ಆ ಚಪ್ಪಲಿಗಳನ್ನು
ರೈಲ್ವೆ ಕಂಬಿಗಳ ಮೇಲೆ ಬಿಟ್ಟವರು ಯಾರು ?
ದೇವರುಗಳು ನಮ್ಮನ್ನು ಶಿಕ್ಷಿಸಲಿದ್ದಾರೆ!
ಅರೆ ಬರೆ ತಿಂದ
ಆ ರೊಟ್ಟಿ ತುಣುಕುಗಳನ್ನು
ರೈಲ್ವೆ ಕಂಬಿಗಳ ಮೇಲೆ ಬಿಟ್ಟವರು ಯಾರು?
ಯಾರವರು?
ಆಡಿಯೋ : ಸುಧನ್ವಾ ದೇಶಪಾಂಡೆ ಅವರು ಜನ ನಾಟ್ಯಮಂಚ್ ನಲ್ಲಿ ನಟ ಮತ್ತು ನಿರ್ದೇಶಕರಾಗಿದ್ದಾರೆ ಮತ್ತು ಲೆಫ್ಟ್ ವರ್ಡ್ ಬುಕ್ಸ್ (LeftWord Books)ನಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಿಪ್ಪಣಿ : ಮೃತಪಟ್ಟಿರುವ ಕಾರ್ಮಿಕರ ಹೆಸರುಗಳನ್ನು ಮರಾಠಿ ದಿನಪತ್ರಿಕೆ ಲೋಕಮತ್ ನಲ್ಲಿ ಇದ್ದಂತೆ ಇಲ್ಲಿ ಪ್ರಕಟಿಸಲಾಗಿದೆ.
1. ಧನ್ ಸಿಂಗ್ ಗೊಂಡ್
2. ನಿರ್ವೇಶ್ ಸಿಂಗ್ ಗೊಂಡ್
3. ಬುದ್ಧರಾಜ್ ಸಿಂಗ್ ಗೊಂಡ
4. ಅಚ್ಚೇಲಾಲ್ ಸಿಂಗ್
5. ರಬೇಂದ್ರ ಸಿಂಗ್ ಗೊಂಡ್,
6. ಸುರೇಶ್ ಸಿಂಗ್ ಕೌಲ್
7. ರಾಜಬೋಹ್ರಾಮ್ ಪರಸ್ ಸಿಂಗ್
8. ಧರ್ಮೇಂದ್ರ ಸಿಂಗ್ ಗೊಂಡ್
9. ವೀರೇಂದ್ರ ಸಿಂಗ್ ಚೈನ್ಸಿಂಗ್
10. ಪ್ರದೀಪ್ ಸಿಂಗ್ ಗೊಂಡ
11. ಸಂತೋಷ್ ನಪಿತ್
12. ಬ್ರಿಜೇಶ್ ಭೇಯಾದಿನ್
13. ಮುನಿಂಸಿಂಗ್ ಶಿವರತನ್ ಸಿಂಗ್
14. ಶ್ರೀದಯಾಳ್ ಸಿಂಗ್
15. ನೆಮ್ಶಾ ಸಿಂಗ್
16. ದೀಪಕ್ ಸಿಂಗ್
ಅನುವಾದ - ಎನ್ . ಮಂಜುನಾಥ್