ಐದು ತಿಂಗಳ ಗರ್ಭಿಣಿಯಾಗಿದ್ದ ಪಲ್ಲವಿ ಗವಿತ್ ಅವರು ಖಾಟ್ (ಹಗ್ಗದ ಮಂಚ) ಮೇಲೆ ಮೂರು ಗಂಟೆಗಳ ಕಾಲ ನೋವಿನಿಂದ ಬಳಲುತ್ತಿದ್ದರು. ಪಲ್ಲವಿಯವರ ಗರ್ಭಕೋಶವು ಯೋನಿಯಿಂದ ಜಾರಿಬಿದ್ದಾಗ, ಐದು ತಿಂಗಳ ಜೀವವಿಲ್ಲದ ಗಂಡು ಭ್ರೂಣವು ಒಳಗಿತ್ತು. ಆಕೆಯ ಅತ್ತಿಗೆ ಸಪ್ನಾ ಗರೆಲ್, 45, ಅವರ ಜೊತೆಯಲ್ಲಿದ್ದರು. ಅಸಹನೀಯ ನೋವು, ರಕ್ತ ಮತ್ತು ಸ್ರಾವದಿಂದಾಗಿ ಪಲ್ಲವಿ ಪ್ರಜ್ಞೆ ತಪ್ಪಿದರು.

ಅಂದು ಜುಲೈ 25, 2019ರಂದು ಮುಂಜಾನೆ 3 ಗಂಟೆ ಆಗಿತ್ತು. ಹೆಂಗ್ಲಾಪಾನಿಯಲ್ಲಿರುವ ಪಲ್ಲವಿಯವರ ಗುಡಿಸಲಿನ ಮೇಲೆ ಮಳೆ ಒಂದೇ ಸಮನೇ ಸುರಿಯುತ್ತಿತ್ತು, ಈ 55 ಭಿಲ್ ಕುಟುಂಬಗಳ ಕುಗ್ರಾಮವು ಸತ್ಪುರಾ ಬೆಟ್ಟಗಳ ಸಾಲಿನಲ್ಲಿದೆ. ವಾಯುವ್ಯ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ದುರ್ಗಮ ಪ್ರದೇಶವಾದ ಈ ಭಾಗದಲ್ಲಿ ಒಳ್ಳೆಯ ರಸ್ತೆಗಳಿಲ್ಲ, ಮೊಬೈಲ್‌ ನೆಟ್‌ವರ್ಕ್‌ ಸಹ ಇಲ್ಲ. "ತುರ್ತು ಪರಿಸ್ಥಿತಿಗಳು ನಮ್ಮ ಆಹ್ವಾನದಂತೆ ಬರುವುದಿಲ್ಲ ಅವು ಯಾವ ಸಂದರ್ಭದ್ಲಲಿಯೂ ಎದುರಾಗಬಹುದು" ಎಂದು ಪಲ್ಲವಿಯವರ ಪತಿ ಗಿರೀಶ್ ಹೇಳುತ್ತಾರೆ. (ಈ ಲೀಖನದಲ್ಲಿ ಎಲ್ಲ ಹೆಸರುಗಳನ್ನೂ ಬದಲಾಯಿಸಲಾಗಿದೆ) "ನೆಟ್‌ವರ್ಕ್‌ ಕವರೇಜ್‌ ಇಲ್ಲದೆ, ನಾವು ಆಂಬುಲೆನ್ಸ್‌ ಅಥವಾ ವೈದ್ಯರನ್ನು ಕರೆಸುವುದಾದರೂ ಹೇಗೆ?"

"ನಾನು ಭಯಭೀತನಾಗಿದ್ದೆ, ನನಗೆ ಅವಳನ್ನು ಕಳೆದುಕೊಳ್ಳುವುದು ಬೇಕಿರಲಿಲ್ಲ." 30 ವರ್ಷದ ಗಿರೀಶ್‌ ಮುಂದುವರಿಸುತ್ತಾರೆ. ಮುಂಜಾನೆ ಬೆಳಗಿನ ಜಾವ 4 ಗಂಟೆಗೆ ಕತ್ತಲೆಯಲ್ಲಿ ಸುರಿಯುವ ಮಳೆಯಲ್ಲೇ ಬಿದಿರು ಮತ್ತು ಬೆಡ್‌ಶೀಟ್‌ನಿಂದ ತಯಾರಿಸಿದ ಸ್ಟ್ರೆಚರ್‌ನಲ್ಲಿ 105 ಕಿಲೋಮೀಟರ್ ದೂರದಲ್ಲಿರುವ ಧಡ್ಗಾಂವ್ ಕಡೆಗೆ ಕೆಸರಿನಿಂದ ಕೂಡಿದ ಸತ್ಪುರಾ ಬೆಟ್ಟಗಳ ಮೂಲಕ ಕರೆದೊಯ್ದರು.

ಹೆಂಗ್ಲಾಪಾನಿ ಕುಗ್ರಾಮವು ಅಕ್ರಾನಿ ತಾಲ್ಲೂಕಿನ ತೋರನ್ಮಲ್ ಗ್ರಾಮ ಪಂಚಾಯತ್ ಪ್ರದೇಶದಲ್ಲಿದೆ. ತೋರನ್ಮಲ್ ಗ್ರಾಮೀಣ ಆಸ್ಪತ್ರೆ ಹತ್ತಿರವಾಗುತ್ತಿತ್ತು, ಆದರೆ ಆ ರಾತ್ರಿ ಆ ರಸ್ತೆ ಸುರಕ್ಷಿತವಾಗಿರಲಿಲ್ಲ. ಬರಿಗಾಲಿನಲ್ಲಿ (ಒದ್ದೆಯಾದ ಮಣ್ಣಿನ ಕಾರಣ ಚಪ್ಪಲಿ ಧರಿಸಲು ಕಷ್ಟವಾಗುತ್ತದೆ), ಗಿರೀಶ್ ಮತ್ತು ಅವರ ನೆರೆಹೊರೆಯವರು ಕೆಸರಿನ ಹಾದಿಯಲ್ಲಿ ಹಿಡಿತ ಸಾಧಿಸಲು ಹೆಣಗಾಡಿದರು. ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಲ್ಪಟ್ಟಿದ್ದ ಪಲ್ಲವಿ ನೋವಿನಿಂದ ನರಳುತ್ತಿದ್ದರು.

ಅವರು ತೋರನ್ಮಲ್ ಘಾಟ್ ರಸ್ತೆಯನ್ನು ತಲುಪುವುದಕ್ಕೆ ಸುಮಾರು ಮೂರು ಗಂಟೆಗಳ ಕಾಲ ಎತ್ತರದ ಬೆಟ್ಟವನ್ನು ಏರಿದರು. "ಸುಮಾರು 30 ಕಿಲೋಮೀಟರ್‌ ಬೆಟ್ಟ ಹತ್ತಬೇಕು" ಎಂದು ಗಿರೀಶ್‌ ಹೇಳುತ್ತಾರೆ. ಅಲ್ಲಿಂದ ದಡ್ಗಾಂವ್‌ ತಲುಪಲು 1,000 ರೂಪಾಯಿಗೆ ಜೀಪನ್ನು ಬಾಡಿಗೆ ಪಡೆದು ಹೊರಟರು. ಐದು ಗಂಟೆಗಳ ಪ್ರಯಾಣದ ನಂತರ ಪಲ್ಲವಿಯವರನ್ನು ಧಡ್ಗಾಂವ್‌ನ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು - ಅಲ್ಲಿನ ಗ್ರಾಮೀಣ ಆಸ್ಪತ್ರೆಯು ಇನ್ನೂ 10 ಕಿಲೋಮೀಟರ್ ದೂರದಲ್ಲಿದೆ. "ನಾಣು ಅವಳನ್ನು ದಾರಿಯಲ್ಲಿ ಮೊದಲು ಕಾಣಿಸಿದ ದವಾಖಾನ [ಆರೋಗ್ಯ ಸೌಲಭ್ಯ]ಕ್ಕೆ ಕರೆದೊಯ್ದೆ. ಅದು ದುಬಾರಿಯಾಗಿತ್ತು ಆದರೆ ಅವರು ನನ್ನ ಪಲ್ಲವಿಯನ್ನು ಉಳಿಸಿದರು." ಎಂದು ಅವರು ಹೇಳುತ್ತಾರೆ. ವೈದ್ಯರು ಅವರಿಗೆ ಮೂರು ಸಾವಿರ ರೂಪಾಯಿಗಳ ಶುಲ್ಕವನ್ನು ವಿಧಿಸಿ ಮರುದಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರು. "ಭಾರೀ ರಕ್ತಸ್ರಾವದಿಂದ ಅವಳು ಸಾಯುವ ಸಾಧ್ಯತೆಯಿತ್ತೆಂದು ಅವರು ಹೇಳಿದರು," ಗಿರೀಶ್ ಹಿಂದಿನದನ್ನು ನೆನಪಿಸಿಕೊಳ್ಳುತ್ತಾರೆ.
In the dark and in pelting rain, Girish (also in the photo on the left is the ASHA worker), and a neighbour carried Pallavi on a makeshift stretcher up the slushy Satpuda hills
PHOTO • Zishaan A Latif
In the dark and in pelting rain, Girish (also in the photo on the left is the ASHA worker), and a neighbour carried Pallavi on a makeshift stretcher up the slushy Satpuda hills
PHOTO • Zishaan A Latif

ಕತ್ತಲೆ ಮತ್ತು ಸುರಿಯುವ ಮಳೆಯಲ್ಲಿ, ಗಿರೀಶ್ (ಎಡಭಾಗದಲ್ಲಿರುವ ಫೋಟೋದಲ್ಲಿ ಆಶಾ ಕಾರ್ಯಕರ್ತೆಯೂ ಇದ್ದಾರೆ), ಮತ್ತು ಪಕ್ಕದ ಮನೆಯವರು ಪಲ್ಲವಿಯವರನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ಕೆಸರಿನ ದಾರಿಯಲ್ಲಿ ಸತ್ಪುರಾ ಬೆಟ್ಟಗಳ ದಾರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದರು

ಹಲವು ತಿಂಗಳುಗಳ ನಂತರವೂ, ಪಲ್ಲವಿ ಈಗಲೂ ದಿನವೂ ಅಸ್ವಸ್ಥತೆ ಮತ್ತು ನೋವನ್ನು ಅನುಭವಿಸುತ್ತಾರೆ. "ನಾನು ಭಾರವಾದ ಪಾತ್ರೆ ಎತ್ತುವ ಅಥವಾ ಕೆಳಗೆ ಬಾಗಿದಾಗಲೆಲ್ಲಾ ನನ್ನ ಕಾಟ್ [ಗರ್ಭಕೋಶ] ನನ್ನ ಯೋನಿಯಿಂದ ಹೊರಬರುತ್ತಲೇ ಇರುತ್ತದೆ" ಎಂದು ಅವರು ಹೇಳುತ್ತಾರೆ. ಪಲ್ಲವಿಗೆ 23 ವರ್ಷ ಮತ್ತು ಖುಷಿ ಎನ್ನುವ ಹೆಸರಿನ ಒಂದು ವರ್ಷದ ಮಗಳು ಇದ್ದಾಳೆ. ಹೆಂಗ್ಲಾಪಾನಿ ಗ್ರಾಮದ ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ) ಸಹಾಯದಿಂದ ಪಲ್ಲವಿ ಖುಷಿಗೆ ಮನೆಯಲ್ಲೇ ಜನ್ಮ ನೀಡಿದರು. ಆದರೆ ಅವರ ಚಿಕಿತ್ಸೆ ನೀಡದ ಗರ್ಭಕೋಶದ ಜಾರುವಿಕೆ ಮಗುವಿನ ಆರೈಕೆಯನ್ನು ಕಷ್ಟಕರವಾಗಿಸುತ್ತಿದೆ.

"ನಾನು ಖುಷಿಗೆ ಸ್ನಾನ ಮಾಡಿಸಬೇಕು, ಅವಳಿಗೆ ಆಹಾರವನ್ನು ನೀಡಬೇಕು, ದಿನಕ್ಕೆ ಹಲವಾರು ಬಾರಿ ಅವಳನ್ನು ಮೇಲಕ್ಕೆತ್ತಿ, ಅವಳೊಂದಿಗೆ ಆಟವಾಡಬೇಕು" ಎಂದು ಪಲ್ಲವಿ ನನ್ನೊಂದಿಗೆ ಹೇಳುತ್ತಾರೆ. "ಬಹಳಷ್ಟು ದೈಹಿಕ ಚಟುವಟಿಕೆಯಿಂದಾಗಿ, ಕೆಲವೊಮ್ಮೆ ನನ್ನ ಹೊಟ್ಟೆಯಲ್ಲಿ ಉರಿಯ ಅನುಭವ, ಎದೆಯಲ್ಲಿ ನೋವು, ಮತ್ತು ಕುಳಿತುಕೊಳ್ಳಲು ಮತ್ತು ಮೇಲೆ ಏಳಲು ಕಷ್ಟವಾಗುತ್ತದೆ."

ಗಿರೀಶ್ ತಮ್ಮ ಎರಡು ಹಸುಗಳನ್ನು ಮೇಯಿಸಲು ಹೊರಗೆ ಕರೆದೊಯ್ದರೆ, ಪಲ್ಲವಿಯವರು ಬೆಟ್ಟದ ಕೆಳಗಿರುವ ಹೊಳೆಯಿಂದ ಪ್ರತಿದಿನ ನೀರನ್ನು ತರಬೇಕು. “ಇದಕ್ಕಾಗಿ ಎರಡು ಕಿಲೋಮೀಟರ್ ದೂರ ಬೆಟ್ಟದ ದಾರಿಯನ್ನು ಇಳಿಯಬೇಕು. ಆದರೆ ಅದು ನಮಗೆ ಇರುವ ನೀರಿನ ಏಕೈಕ ಮೂಲವಾಗಿದೆ, ”ಎಂದು ಅವರು ಹೇಳುತ್ತಾರೆ. ಏಪ್ರಿಲ್-ಮೇ ವೇಳೆಗೆ ಆ ಮೂಲವೂ ಒಣಗಿ, ಪಲ್ಲವಿ ಮತ್ತು ಗ್ರಾಮದಲ್ಲಿರುವ ಇತರ ಮಹಿಳೆಯರು ನೀರಿನ ಹುಡುಕಾಟದಲ್ಲಿ ಮತ್ತಷ್ಟು ಕೆಳಕ್ಕೆ ಇಳಿಯುವ ಪರಿಸ್ಥಿತಿ ಬರುತ್ತದೆ.

ಪಲ್ಲವಿ ಮತ್ತು ಗಿರೀಶ್ ಮಳೆಗಾಲದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು ಜೋಳದ ಕೃಷಿ ಮಾಡುತ್ತಾರೆ. ಈ ಕಡಿದಾದ ಇಳಿಜಾರುಗಳಲ್ಲಿನ ಇಳುವರಿ ಕಳಪೆಯಾಗಿರುತ್ತದೆ ಎಂದು ಗಿರೀಶ್ ಹೇಳುತ್ತಾರೆ. "ನಾವು ನಾಲ್ಕು ಅಥವಾ ಐದು ಕ್ವಿಂಟಾಲ್‌ಗಳ [400-500 ಕಿಲೋಗ್ರಾಂಗಳಷ್ಟು] ಇಳುವರಿ ಪಡೆಯುತ್ತೇವೆ, ಅದರಲ್ಲಿ ನಾನು 1-2 ಕ್ವಿಂಟಾಲ್ ತೋರನ್ಮಲ್‌ನ ಕಿರಾಣಿ ಅಂಗಡಿಗಳಿಗೆ ರೂ. ಪ್ರತಿ ಕಿಲೋಗೆ 15 ರೂಪಾಯಿಯಂತೆ ಮಾರುತ್ತೇನೆ. ”ವಾರ್ಷಿಕ ಕೊಯ್ಲಿನ ಸಮಯದಲ್ಲಿ ಮಾಡಿದಾಗ ಗಿರೀಶ್ ಕಬ್ಬಿನ ಗದ್ದೆಗಳಲ್ಲಿ ಕೆಲಸ ಹುಡುಕಲು ನೆರೆಯ ಗುಜರಾತ್‌ನ  ಜಿಲ್ಲೆಗೆ ವಲಸೆ ಹೋಗುತ್ತಾರೆ. ಅಲ್ಲಿ ಅವರು ದಿನಗೂಲಿಯಾಗಿ ವರ್ಷದ ಸುಮಾರು 150 ದಿನಗಳ ಕಾಲ 250 ರೂಪಾಯಿಗೆ ದುಡಿಯುತ್ತಾರೆ.

ಮನೆ ಮತ್ತು ಜಮೀನಿನ ಎಲ್ಲಾ ಕೆಲಸಗಳೊಂದಿಗೆ, ಪಲ್ಲವಿಗೆ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಜಾಪಿ ಗ್ರಾಮದ ಹತ್ತಿರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಚಾರಣ ಮಾಡಲು ಶಕ್ತಿಯಿರುವುದಿಲ್ಲ - ಆಕೆಗೆ ಆಗಾಗ್ಗೆ ಜ್ವರ, ತಲೆತಿರುಗುವಿಕೆ ಮತ್ತು ಪ್ರಜ್ಞೆ ತಪ್ಪುವುದು ಇವೆಲ್ಲ ಇದ್ದರೂ ಹೋಗಲಾಗುವುದಿಲ್ಲ. ಆಶಾ ಕಾರ್ಯಕರ್ತೆ ಕೆಲವು ಔಷಧಿಗಳನ್ನು ನೀಡುತ್ತಾರೆ. “ನಾನು ವೈದ್ಯರ ಬಳಿಗೆ ಹೋಗಲು ಬಯಸುತ್ತೇನೆ, ಆದರೆ ಹೇಗೆ? ನಾನು ತುಂಬಾ ದುರ್ಬಲಳಾಗಿದ್ದೇನೆ"ಎಂದು ಅವರು ಹೇಳುತ್ತಾರೆ. ಬೆಟ್ಟಗಳ ಮೂಲಕ ತನ್ನ ಜಾರುವ ಗರ್ಭಕೋಶದೊಂದಿಗೆ ಆ ದೂರವನ್ನು ನಡೆಯುವುದು ಅವರಿಗೆ ಅಸಾಧ್ಯದ ಕೆಲಸ.
'I have to bathe Khushi, feed her, lift her several times a day, play with her', says Pallavi Gavit. 'With a lot of physical activity, sometimes I have a burning sensation in my stomach, pain in the chest, and difficulty sitting and getting up'
PHOTO • Zishaan A Latif
'I have to bathe Khushi, feed her, lift her several times a day, play with her', says Pallavi Gavit. 'With a lot of physical activity, sometimes I have a burning sensation in my stomach, pain in the chest, and difficulty sitting and getting up'
PHOTO • Zishaan A Latif

ʼನಾನು ಖುಷಿಗೆ ಸ್ನಾನ ಮಾಡಿಸಬೇಕು, ಅವಳಿಗೆ ಆಹಾರವನ್ನು ನೀಡಬೇಕು, ದಿನಕ್ಕೆ ಹಲವಾರು ಬಾರಿ ಅವಳನ್ನು ಮೇಲಕ್ಕೆತ್ತಿ, ಅವಳೊಂದಿಗೆ ಆಟವಾಡಬೇಕು" ಎಂದು ಪಲ್ಲವಿ ಗವಿತ್‌ ಹೇಳುತ್ತಾರೆ. ಬಹಳಷ್ಟು ದೈಹಿಕ ಚಟುವಟಿಕೆಯಿಂದಾಗಿ, ಕೆಲವೊಮ್ಮೆ ನನ್ನ ಹೊಟ್ಟೆಯಲ್ಲಿ ಉರಿಯ ಅನುಭವ, ಎದೆಯಲ್ಲಿ ನೋವು, ಮತ್ತು ಕುಳಿತುಕೊಳ್ಳಲು ಮತ್ತು ಮೇಲೆ ಏಳಲು ಕಷ್ಟವಾಗುತ್ತದೆʼ

ತೋರಣ್ಮಲ್ ಗ್ರಾಮ ಪಂಚಾಯತ್‌ನ 20,000 ಜನಸಂಖ್ಯೆಯು (ಗ್ರಾಮ ಪಂಚಾಯತ್ ಸದಸ್ಯರ ಅಂದಾಜಿನಂತೆ) 14 ಗ್ರಾಮಗಳು ಮತ್ತು 60 ಕುಗ್ರಾಮಗಳಲ್ಲಿ ವ್ಯಾಪಿಸಿದೆ. ಜಾಪಿಯಲ್ಲಿ ಒಂದು ಪಿಎಚ್‌ಸಿ, ಆರು ಉಪ ಕೇಂದ್ರಗಳು ಮತ್ತು ತೋರಣ್ಮಲ್ ಜೂನ್ (ಹಳೆಯ) ಗ್ರಾಮದಲ್ಲಿ ಒಂದು 30 ಹಾಸಿಗೆಗಳ ಗ್ರಾಮೀಣ ಆಸ್ಪತ್ರೆ‌ ಇವುಗಳ ಮೂಲಕ ಈ ಜನಸಂಖ್ಯೆಗೆ ಸೇವೆ ಸಲ್ಲಿಸಲಾಗುತ್ತದೆ, ಇದು ಕಾಂಡೋಮ್‌ಗಳು, ಸೇವಿಸಬಹುದಾದ ಮಾತ್ರೆಗಳು, ಸ್ಟೈರಿಲೈಸೇಷನ್ ಪ್ರಕ್ರಿಯೆಗಳು ಮತ್ತು ಐಯುಡಿಗಳನ್ನು ಸೇರಿಸುವಂತಹ ಗರ್ಭನಿರೋಧಕ ಆರೈಕೆಯನ್ನು ಒದಗಿಸುತ್ತದೆ, ಜೊತೆಗೆ ಪ್ರಸವಪೂರ್ವ ಸೇವೆಗಳನ್ನೂ ನೀಡುತ್ತದೆ. ಆದರೆ ಈ ಕ್ಲಿಷ್ಟಕರವಾದ ಭೂಪ್ರದೇಶದಲ್ಲಿ ಕುಗ್ರಾಮಗಳು ದೂರದ ಸ್ಥಳಗಳಲ್ಲಿರುವುದರಿಂದ, ಹೆಚ್ಚಿನ ಮಹಿಳೆಯರು ಮನೆಯಲ್ಲೇ ಹೆರಿಗೆಯನ್ನು ಹೊಂದುತ್ತಾರೆ.

"ತೋರಣ್‌ಮಲ್‌ನಲ್ಲಿ ಕ್ಲಿಷ್ಟಕರ ಹೆರಿಗೆಗಳ ಸಂಖ್ಯೆ ಬಹಳ ಹೆಚ್ಚಿದೆ ಏಕೆಂದರೆ ಇಲ್ಲಿ ಬುಡಕಟ್ಟು ಜನರು ಬೆಟ್ಟಗಳ ಮೇಲ್ಭಾಗದಲ್ಲಿ ವಾಸಿಸುತ್ತಾರೆ, ಗರ್ಭಾವಸ್ಥೆಯಲ್ಲಿಯೂ ಸಹ ನೀರಿಗಾಗಿ ದಿನಕ್ಕೆ ಹಲವಾರು ಬಾರಿ ಮೇಲಕ್ಕೆ ಮತ್ತು ಕೆಳಕ್ಕೆ ಏರಿಳಿಯುತ್ತಾರೆ. ಇದು ತೊಂದರೆಗಳು ಮತ್ತು ಅಕಾಲಿಕ ಹೆರಿಗೆಗೆ ಕಾರಣವಾಗುತ್ತದೆ ” ಎಂದು ಜಾಪಿ ಪಿಎಚ್‌ಸಿಯ(ಪ್ರಾಥಮಿಕ ಆರೋಗ್ಯ ಕೇಂದ್ರ) ವೈದ್ಯರೊಬ್ಬರು ಹೇಳುತ್ತಾರೆ. ಬ್ಬರು ವೈದ್ಯರು, ಇಬ್ಬರು ದಾದಿಯರು ಮತ್ತು ಒಬ್ಬ ವಾರ್ಡ್ ಸಹಾಯಕರನ್ನು ಹೊಂದಿರುವ ಪಿಎಚ್‌ಸಿಯನ್ನು ಇತ್ತೀಚೆಗೆ 2016ರಲ್ಲಿ ಸ್ಥಾಪಿಸಲಾಯಿತು ಮತ್ತು ಇಲ್ಲಿ ದಿನಕ್ಕೆ ನಾಲ್ಕರಿಂದ ಐದು ರೋಗಿಗಳನ್ನು ಮಾತ್ರ ನೋಡಲಾಗುತ್ತದೆ. "ಪರಿಸ್ಥಿತಿ ತೀರಾ ಹದಗೆಟ್ಟಾಗ ಅಥವಾ ಭಗತ್‌ನ [ಸಾಂಪ್ರದಾಯಿಕ ವೈದ್ಯ] ಚಿಕಿತ್ಸೆ ವಿಫಲವಾದಾಗ ಮಾತ್ರ ಜನರು ಬರುತ್ತಾರೆ" ಎಂದು ಅವರು ಹೇಳುತ್ತಾರೆ.

ಏಪ್ರಿಲ್ 2019 ಮತ್ತು ಮಾರ್ಚ್ 2020 ರ ನಡುವೆ, ಗರ್ಭಾಶಯ ಜಾರುವಿಕೆಯ ಐದು ಪ್ರಕರಣಗಳನ್ನು ವೈದ್ಯರು ನೋಡಿದ್ದಾರೆ. “ಅವರೆಲ್ಲರಿಗೂ ಶೇಕಡಾ 100ರಷ್ಟು ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದ್ದರಿಂದ ನಾವು ಅವರನ್ನು ನಂದೂರ್‌ಬಾರ್ ಸಿವಿಲ್ ಆಸ್ಪತ್ರೆಗೆ‌ ಹೋಗವಂತೆ ಸೂಚಿಸಿದ್ದೇವೆ. ಯಾಕೆಂದರೆ ಅಂತಹ ದೀರ್ಘಕಾಲದ ಪ್ರಸೂತಿ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಇಲ್ಲಿ ಯಾವುದೇ ಸೌಲಭ್ಯವಿಲ್ಲ, ”ಎಂದು ಅವರು ಹೇಳುತ್ತಾರೆ.

ಪೆಲ್ವಿಕ್‌ ಫ್ಲೋರ್‌ ಮಸಲ್ಸ್ ಮತ್ತು ಹಿಗ್ಗಿದಾಗ ಅಥವಾ ದುರ್ಬಲಗೊಂಡಾಗ ಗರ್ಭಕೋಶದ ಜಾರುವಿಕೆ ಸಂಭವಿಸುತ್ತದೆ. ಈಸ್ಥಿತಿಯಲ್ಲಿ ಅವು ಗರ್ಭಕೋಶಕ್ಕೆ ಬೆಂಬಲವಾಗಿ ಇರುವುದಿಲ್ಲ. "ಗರ್ಭಕೋಶವು ಸ್ನಾಯುವಿನ ರಚನೆಯಾಗಿದ್ದು, ವಿವಿಧ ಸ್ನಾಯುಗಳು, ಅಂಗಾಂಶಗಳು ಮತ್ತು ಅಸ್ಥಿರಜ್ಜುಗಳನ್ನು ಹೊಂದಿರುವ ಇದು ಸೊಂಟದ ಬಳಿಯಿರುತ್ತದೆ" ಎಂದು ಮುಂಬೈ ಮೂಲದ ಪ್ರಸೂತಿ ಮತ್ತು ಗೈನಾಕಾಲಜಿಕಲ್ ಸೊಸೈಟಿಗಳ ಅಧ್ಯಕ್ಷರಾದ ಡಾ. ಕೋಮಲ್ ಚವಾಣ್ ವಿವರಿಸುತ್ತಾರೆ. "ಗರ್ಭಧಾರಣೆ, ಬಹು ಹೆರಿಗೆ, ದೀರ್ಘಕಾಲದ ದುಡಿಮೆ ಅಥವಾ [ಹೆರಿಗೆಯ] ತಪ್ಪಾದ ನಿರ್ವಹಣೆ ಇಂತಹ ಕಾರಣಗಳಿಂದ. ಕೆಲವು ಮಹಿಳೆಯರಲ್ಲಿ ಈ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಮತ್ತು ಗರ್ಭಕೋಶ ಹೊರಬರುತ್ತದೆ. ತೀವ್ರ ಪ್ರಕರಣಗಳಲ್ಲಿ ದುರ್ಬಲಗೊಂಡ ಪೆಲ್ವಿಕ್‌ ಫ್ಲೋರ್‌ ಟಿಶ್ಯೂಗಳನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾಗುತ್ತದೆ. ಮಹಿಳೆಯ ವಯಸ್ಸು ಮತ್ತು ಸಮಸ್ಯೆಯ ತೀವ್ರತೆಯನ್ನು ಅವಲಂಬಿಸಿ ಹಿಸ್ಟೆರೆಕ್ಟಮಿ (ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುವುದು) ಮಾಡಬೇಕಾಗಬಹುದು.

2015 ರಲ್ಲಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟವಾದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಗ್ರಾಮೀಣ ಮಹಿಳೆಯರಲ್ಲಿ ದೀರ್ಘಕಾಲದ ಪ್ರಸೂತಿ ಸಂಬಂಧಿ ಕಾಯಿಲೆಗಳ (ಸಿಒಎಮ್) 2006-07ರ ಅಧ್ಯಯನವು, ಸಿಒಎಮ್ ಹೊಂದಿರುವ 136 ಮಹಿಳೆಯರಲ್ಲಿ, ಗರ್ಭಕೋಶದ ಜಾರುವಿಕೆ ಹೆಚ್ಚು ಸಾಮಾನ್ಯ ಎಂದು ಕಂಡುಬಂದಿದೆ (62 ಶೇಕಡಾ). ವಯಸ್ಸು ಮತ್ತು ಸ್ಥೂಲಕಾಯತೆ ಕೂಡ, “ಸಾಂಪ್ರದಾಯಿಕ ಹೆರಿಗೆ ನಡೆಸುವುವರಿಂದ ಹೆರಿಗೆ ಮಾಡಿಸುವುದು, ನಿರಂತರ ಮಕ್ಕಳಾಗುವಿಕೆ ಹೆಚ್ಚಾಗಿ ಗರ್ಭಕೋಶದ ಜಾರುವಿಕೆಗೆ ಕಾರಣವಾಗುತ್ತದೆ” ಎಂದು ವರದಿ ಹೇಳುತ್ತದೆ.
Pallavi and Girish are agricultural labourers in Nandurbar; Pallavi's untreated uterine prolapse makes it hard for her to take care of their daughter
PHOTO • Zishaan A Latif
Pallavi and Girish are agricultural labourers in Nandurbar; Pallavi's untreated uterine prolapse makes it hard for her to take care of their daughter
PHOTO • Zishaan A Latif

ಪಲ್ಲವಿ ಮತ್ತು ಗಿರೀಶ್ ಅವರು ನಂದೂರ್‌ಬಾರ್‌ನಲ್ಲಿ ಕೃಷಿ ಕಾರ್ಮಿಕರಾಗಿದ್ದಾರೆ; ಪಲ್ಲವಿಯ ಗರ್ಭಕೋಶದ ಜಾರುವಿಕೆಗೆ ಚಿಕಿತ್ಸೆಯಾಗದ ಕಾರಣ ಅವರಿಗೆ ತಮ್ಮ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿದೆ

ಪಲ್ಲವಿ ತನ್ನ ಉಚಿತ ಗರ್ಭಕೋಶದ ಚಿಕಿತ್ಸೆಗಾಗಿ ಹೋಗಬಹುದಾದ ನಂದೂರ್‌ಬಾರ್‌ ಸಿವಿಲ್‌ ಆಸ್ಪತ್ರೆ ಅವರ ಊರಾದ ಹೆಂಗ್ಲಪಾನಿಯಿಂದ ಸುಮಾರು 150 ಕಿಲೋಮೀಟರ್‌ ದೂರದಲ್ಲಿದೆ. ಅಲ್ಲಿಗೆ ಹೋಗಲು ಮೂರು ಗಂಟೆಗಳ ಕಾಲ ಬೆಟ್ಟಗಳನ್ನು ಏರಬೇಕು ಮತ್ತೆ ಅಲ್ಲಿಂದ ನಾಲ್ಕು ಗಂಟೆಗಳ ಬಸ್ ಪ್ರಯಾಣ. "ನಾನು ಕುಳಿತಾಗ ಯಾವುದೋ ವಸ್ತುವಿನ ಮೇಲೆ ಕುಳಿತಂತೆ ಭಾಸವಾಗುತ್ತದೆ. ಮತ್ತು ನೋವು ಕೂಡ ಆಗುತ್ತದೆ. ಎಂದು ಪಲ್ಲವಿ ಹೇಳುತ್ತಾರೆ.  "ನಾನು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಲು ಸಾಧ್ಯವಿಲ್ಲ." ಈ ಮಾರ್ಗದಲ್ಲಿ ಓಡಾಡುವ ರಾಜ್ಯ ಸಾರಿಗೆ ಬಸ್ ತೋರನ್ಮಲ್‌ನಿಂದ ಮಧ್ಯಾಹ್ನ 1ಒಂದು ಟ್ರಿಪ್‌ ಮಾತ್ರ ಬರುತ್ತದೆ. "ವೈದ್ಯರೇ ಇಲ್ಲಿಗೆ ಬರಲು ಸಾಧ್ಯವಿಲ್ಲವೇ?" ಅವರು ಕೇಳುತ್ತಾರೆ.

ಸಂಪರ್ಕ ರಸ್ತೆಗಳಿಲ್ಲದ ಕಾರಣ, ದೂರ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸುವ ಮೊಬೈಲ್‌ ಘಟಕಗಳೂ ತೋರಣ್‌ಮಲ್‌ನ ರೋಗಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲವೆಂದು ವೈದ್ಯರು ಹೇಳುತ್ತಾರೆ. ಅಕ್ರಾನಿ ಬ್ಲಾಕ್‌ನಲ್ಲಿ ಒಟ್ಟು 31 ಹಳ್ಳಿಗಳು ಮತ್ತು ಕುಗ್ರಾಮಗಳು ರಸ್ತೆ ಸಂಪರ್ಕವನ್ನು ಹೊಂದಿಲ್ಲ. ಮಹಾರಾಷ್ಟ್ರ ಸರ್ಕಾರದ ನವಸಂಜೀವಿನಿ ಯೋಜನೆಯಡಿ ಒಬ್ಬ ವೈದ್ಯಾಧಿಕಾರಿ ಮತ್ತು ಒಬ್ಬ ತರಬೇತಿ ಪಡೆದ ನರ್ಸ್‌ ಅವರನ್ನು ಒಳಗೊಂಡ ಮೊಬೈಲ್‌ ಯೂನಿಟ್‌ ದುರ್ಗಮ ಪ್ರದೇಶಗಳಲ್ಲಿ ಚಿಕಿತ್ಸೆಯನ್ನು ನೀಡುತ್ತದೆ. ಅಂತಹ ಎರಡು ಯೂನಿಟ್‌ಗಳು ಅಕ್ರಾನಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ.  ಎಂದು ಮಹಾರಾಷ್ಟ್ರ ಬುಡಕಟ್ಟು ಅಭಿವೃದ್ಧಿ ಇಲಾಖೆಯ 2018-19ರ ವಾರ್ಷಿಕ ಬುಡಕಟ್ಟು ಕಾಂಪೊನೆಂಟ್ ಯೋಜನೆಗಳ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಅಂತಹ ಈ ಯೂನಿಟ್‌ಗಳು ಪಲ್ಲವಿಯವರು ವಾಸಿಸುವಂತಹ ಕುಗ್ರಾಮಗಳನ್ನು ತಲುಪಲು ಸಾಧ್ಯವಿಲ್ಲ.

ಜಾಪಿ ಪಿಎಚ್‌ಸಿಯಲ್ಲಿ "ವಿದ್ಯುತ್‌, ನೀರು ಮತ್ತು ಸಿಬ್ಬಂದಿಗೆ ವಸತಿ ಲಭ್ಯವಿಲ್ಲ." ಎಂದು ಅಲ್ಲಿನ ವೈದ್ಯರು ಹೇಳುತ್ತಾರೆ. "ನಾನು ಈ ಕುರಿತು ಆರೋಗ್ಯ ಇಲಾಖೆಗೆ ಈಗಾಗಲೇ ಅನೇಕ ಕಾಗದಗಳನ್ನು ಬರೆದಿದ್ದೇನೆ, ಆದರೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ" ಆರೋಗ್ಯ ಕಾರ್ಯಕರ್ತರಿಗೆ ದಿನವೂ ನಂದೂರ್‌ಬಾರ್‌ನಿಂದ ಜಾಪಿಗೆ ಪ್ರಯಾಣ ಮಾಡಲು ಸಾಧ್ಯವಿಲ್, "ಹೀಗಾಗಿ ನಾವು ವಾರದ ದಿನಗಳಲ್ಲಿ  ಇಲ್ಲಿ ಕೆಲಸ ಮಾಡಿ ಆಶಾ ಕಾರ್ಯಕರ್ತೆಯರ ಮನೆಯಲ್ಲಿ ರಾತ್ರಿ ತಂಗುತ್ತೇವೆ, ವಾರಾಂತ್ಯದಲ್ಲಿ ನಂದೂರ್‌ಬಾರ್‌ನಲ್ಲಿರುವ ನಮ್ಮ ಮನೆಗಳಿಗೆ ಹೋಗುತ್ತೇವೆ" ಎಂದು ವೈದ್ಯರು ಹೇಳುತ್ತಾರೆ.

ಇದರಿಂದಾಗಿ ಆಶಾ ಕಾರ್ಯಕರ್ತರ ಪಾತ್ರವು ಇಲ್ಲಿ ಬಹಳ ನಿರ್ಣಾಯಕವಾಗುತ್ತದೆ. ಆದರೆ ಅವರೂ ಸೀಮಿತವಾಗಿ ಸರಬರಾಜಾಗುವ ಔಷಧಿ ಮತ್ತು ಕಿಟ್‌ಗಳೊಂದಿಗೆ ಹೆಣಗುತ್ತಾರೆ. "ಗರ್ಭಿಣಿ ಮಹಿಳೆಯರಿಗೆ ವಿತರಿಸಲು ಕಬ್ಬಿಣದಂಶ ಮತ್ತು ಫೋಲಿಕ್‌ ಆಸಿಡ್‌ನ ಮಾತ್ರೆಗಳನ್ನು ನಮಗೆ ನಿಯಮಿತವಾಗಿ ಪೂರೈಸುವುದಿಲ್ಲ. ಅಥವಾ ಮಾಸ್ಕ್‌, ಕೈಗವಸು ಮತ್ತು ಕತ್ತರಿಗಳೊಂದಿಗೆ ಬಳಸಿ ಎಸೆಯಬಹುದಾದ ಡೆಲಿವರಿ ಕಿಟ್‌ಗಳನ್ನು ಸರಿಯಾಗಿ ಸರಬರಾಜು ಮಾಡಲಾಗುವುದಿಲ್ಲ" ಎಂದು ಸುತ್ತಲಿನ ಹತ್ತು ಹಳ್ಳಿಗಳ ಆಶಾ ಕಾರ್ಯಕರ್ತೆಯರನ್ನು ಮೇಲ್ವಿಚಾರಣೆ ನಡೆಸುವ ಆಶಾ ಫೆಸಿಲಿಟೇಟರ್ ವಿದ್ಯಾ ನಾಯಕ್ (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ.

ಕೆಲವು ಆಶಾ ಕಾರ್ಯಕರ್ತೆಯರಿಗೆ ಹೆರಿಗೆ ಮಾಡಿಸಲು ತರಬೇತಿ ನೀಡಲಾಗಿದೆ. ಆದರೆ ಸಂಕೀರ್ಣ ಪ್ರಕರಣಗಳನ್ನು ಅವರು ನಿರ್ವವಹಿಸುವುದಿಲ್ಲ. ವಿದ್ಯಾ ಅವರು ಪ್ರತಿ  ತಿಂಗಳು ಎರಡು  ಮೂರು ಶಿಶು ಮರಣಗಳು ಮತ್ತು ಒಂದು ಅಥವಾ ಎರಡು ತಾಯಂದಿರ ಸಾವನ್ನು ದಾಖಲಿಸುತ್ತಾರೆ. "ನಮಗೆ ಬೇರೇನೂ ಕೊಡುವುದು ಬೇಡ ಕೇವಲ ಸುರಕ್ಷಿತ ಹೆರಿಗೆ ನಿರ್ವಹಿಸಲು ಹೋಗುವುದಕ್ಕೆ ಅನುಕೂಲವಾಗುವಂತೆ ಸುರಕ್ಷಿತ ರಸ್ತೆಗಳನ್ನು ನೀಡಿದರೆ ಸಾಕು" ಎನ್ನುತ್ತಾರೆ ವಿದ್ಯಾ.

"ದುರ್ಗಮ ಭೂಪ್ರದೇಶಗಳಲ್ಲಿ ಬಹುಬೇಗ ಪ್ರಾರಂಭಗೊಳ್ಳುವ ಪ್ರಸವಪೂರ್ವ ಆರೈಕೆಯೊಂದಿಗೆ, ಅರ್ಹ ಸ್ತ್ರೀರೋಗ ತಜ್ಞರ ಲಭ್ಯತೆಯೂ ಬಹಳ ಮುಖ್ಯ, ಅಂತಹ ಸ್ಥಳಗಳಲ್ಲಿ ಮಹಿಳೆಯರ ದೈನಂದಿನ ಕೆಲಸಗಳು ಇನ್ನಷ್ಟು ಸವಾಲಿನಿಂದ ಕೂಡಿರುತ್ತವೆ" ಎಂದು ಡಾ. ಚವ್ಹಾಣ್‌ ಹೇಳುತ್ತಾರೆ.

With no road connectivity, patients in Toranmal have no access even to the mobile medical units that provide doorstep healthcare in remote regions
PHOTO • Zishaan A Latif
With no road connectivity, patients in Toranmal have no access even to the mobile medical units that provide doorstep healthcare in remote regions
PHOTO • Zishaan A Latif

ರಸ್ತೆ ಸಂಪರ್ಕವಿಲ್ಲದ ಕಾರಣ, ತೋರಣ್‌ಮಲ್‌ನನ ರೋಗಿಗಳಿಗೆ ದುರ್ಗಮ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಮೊಬೈಲ್ ಮೆಡಿಕಲ್ ಯೂನಿಟ್‌ಗಳೂ‌ ತಲುಪಲು ಸಾಧ್ಯವಾಗುತ್ತಿಲ್ಲ

ಆದಾಗ್ಯೂ, ಮಹಾರಾಷ್ಟ್ರದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 1,456 ತಜ್ಞರ ಕೊರತೆಯಿದೆಯೆಂದು ಭಾರತ ಸರ್ಕಾರದ ಗ್ರಾಮೀಣ ಆರೋಗ್ಯ ಅಂಕಿಅಂಶ 2018-19 ದಾಖಲಿಸಿದೆ - ಪ್ರತಿ ಕೇಂದ್ರದಲ್ಲಿ ನಾಲ್ವರು, ಶಸ್ತ್ರಚಿಕಿತ್ಸಕರು, ಸ್ತ್ರೀರೋಗತಜ್ಞರು, ವೈದ್ಯರು ಮತ್ತು ಮಕ್ಕಳ ವೈದ್ಯರು ಸೇರಿದಂತೆ - ಕೇವಲ 485 ಮಂದಿ ಮಾತ್ರ ಮಾರ್ಚ್ 31, 2019ರ  ಸ್ಥಾನದಲ್ಲಿದ್ದಾರೆ , 971 ಅಥವಾ ಶೇಕಡಾ67 ರಷ್ಟು ಕೊರತೆಯನ್ನು ತೋರಿಸುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ( ಎನ್‌ಎಫ್‌ಎಚ್‌ಎಸ್ - 4, 2015-16) ಪ್ರಕಾರ ನಂದೂರ್‌ಬಾರ್‌ ಗ್ರಾಮೀಣದಲ್ಲಿ ಕೇವಲ 26.5ರಷ್ಟು ತಾಯಂದಿರು ಮಾತ್ರ ಪ್ರಸವಪೂರ್ವ ಆರೈಕೆಯನ್ನು ಪಡೆದಿದ್ದಾರೆ, ಕೇವಲ 52.5 ರಷ್ಟು ಮಹಿಳೆಯರು ಮಾತ್ರ ಸಾಂಸ್ಥಿಕ ಹೆರಿಗೆಗಳನ್ನು ಹೊಂದಿದ್ದಾರೆ ಮತ್ತು ಮನೆ ಹೆರಿಗೆ ಮಾಡಿಸಿಕೊಂಡವರಲ್ಲಿ ಕೇವಲ 10.4 ಶೇಕಡಾ ಮಾತ್ರ ನುರಿತ ಆರೋಗ್ಯ ಸೇವಕರ ಸಹಾಯವನ್ನು ಪಡೆದಿದ್ದಾರೆ.

ದೊಡ್ಡ ಮಟ್ಟದಲ್ಲಿ ಆದಿವಾಸಿ ಜನಸಂಖ್ಯೆಯನ್ನು ಹೊಂದಿರುವ ನಂದೂರ್‌ಬಾರ್ ಜಿಲ್ಲೆಯಲ್ಲಿ ಪ್ರಧಾನವಾಗಿ ಭಿಲ್ ಮತ್ತು ಪಾವ್ರಾ ಜನಾಂಗದವರು ವಾಸಿಸುತ್ತಾರೆ- ಮಹಾರಾಷ್ಟ್ರ ಮಾನವ ಅಭಿವೃದ್ಧಿ ಸೂಚ್ಯಂಕ 2012ರ ವರದಿಯಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿದೆ, ಅಪೌಷ್ಟಿಕತೆ ಮತ್ತು ಕಳಪೆ ಶಿಶು ಮತ್ತು ತಾಯಿಯ ಆರೋಗ್ಯದ ವಿಷಯದಲ್ಲೂ ಪರಿಸ್ಥಿತಿ ಹಾಗೆಯೇ ಇದೆ

ಪಲ್ಲವಿಯವರ ಮನೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ತೋರಣ್‌ಮಲ್ ಕಾಡಿನೊಳಗಿನ ಮತ್ತೊಂದು ಬೆಟ್ಟದ ತುದಿಯಲ್ಲಿರುವ ಕುಗ್ರಾಮ ಲೆಗಪಾನಿ. ದಟ್ಟ ಕಾನನದಲ್ಲಿರುವ ತನ್ನ ಗುಡಿಸಲಿನಲ್ಲಿ ಸಾರಿಕಾ ವಾಸೇವ್ (ಹೆಸರು ಬದಲಾಯಿಸಲಾಗಿದೆ)‌ ನೀರಿನಲ್ಲಿ ಪಲಾಶದ (ಬ್ಯುಟಿಯಾ ಮೊನೊಸ್ಪೆರ್ಮಾ) ಹೂಗಳನ್ನು ಕುದಿಸುತ್ತಿದ್ದರು "ಮಗಳಿಗೆ ಜ್ವರ ಬಂದಿದೆ ಈ ನೀರಿನಲ್ಲಿ ಸ್ನಾನ ಮಾಡಿಸಿದರೆ ಅವಳಿಗೆ ಜ್ವರ ವಾಸಿಯಾಗುತ್ತದೆ." ಎಂದು ಭಿಲ್ ಸಮುದಾಯಕ್ಕೆ ಸೇರಿದ 30 ವರ್ಷದ ಸಾರಿಕಾ ಹೇಳುತ್ತಾರೆ. ಆರು ತಿಂಗಳ ಗರ್ಭಿಣಿಯಾಗಿರುವ ಅವರಿಗೆ ಕಲ್ಲಿನ ಒಲೆಯ ಮುಂದೆ ಬಹಳ ಹೊತ್ತು ಕೂರಲು ಸಾಧ್ಯವಿಲ್ಲ. "ನನಗೆ ಕಣ್ಣು ಉರಿಯುತ್ತೆ ಮತ್ತೆ ಅಲ್ಲಿ ನೋವು ಬರುತ್ತೆ (ತನ್ನ ತೊಡೆಯ ನಡುವೆ ಬೆರಳು ತೋರಿಸುತ್ತಾ) ಬೆನ್ನು ಕೂಡ ನೋಯುತ್ತೆ" ಎನ್ನುತ್ತಾರೆ

ಆಯಾಸಗೊಂಡ ಮತ್ತು ದುರ್ಬಲರಾಗಿರುವ, ಸಾರಿಕಾ ಅವರ ಗರ್ಭಕೋಶ ಕೂಡ ಜಾರಿದೆ. ಆದರೆ ದೈನಂದಿನ ಕೆಲಸಗಳನ್ನು ಬಲವಂತವಾಗಿ ಮಾಡಲೇಬೇಕಾದ ಅನಿವಾರ್ಯತೆಯಿದೆ ಅವರಿಗೆ. ಅವರು ಮಲ, ಮೂತ್ರ ವಿಸರ್ಜಿಸುವಾಗ ಅಥವಾ ಆ ಸಮಯದಲ್ಲಿ ಸ್ವಲ್ಪ ಗಟ್ಟಿಯಾಗಿ ಒತ್ತಡ ನೀಡಿದರೆ, ಅವರ ಗರ್ಭಕೋಶವು ಅವರ ಯೋನಿಯಿಂದ ಇಳಿಯುತ್ತದೆ ಮತ್ತು ಹೊರಚಾಚಿಕೊಂಡಿರುತ್ತದೆ. “ನಾನು ಅದನ್ನು ನನ್ನ ಸೀರೆಯ ಅಂಚಿನಿಂದ ಹಿಂದಕ್ಕೆ ತಳ್ಳುತ್ತೇನೆ; ಹಾಗೆ ಮಾಡೋವಾಗ ನೋವಾಗುತ್ತೆ,” ಎಂದು ಜೋರಾಗಿ ಉಸಿರು ಎಳೆದುಕೊಂಡು ಬೆವರೊರೆಸಿಕೊಳ್ಳುತ್ತಾ ಹೇಳುತ್ತಾರೆ. ಒಲೆಯಿಂದ ಎದ್ದ ಹೊಗೆ ಮುಖದತ್ತ ಬಂದಾಗ ಮುಖವನ್ನು ಬೇರೆಡೆಗೆ ತಿರುಗಿಸಿದರು.

ಅವರು ಮೂರು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2015 ರಲ್ಲಿ, ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ಬೆಳಿಗ್ಗೆ 1 ಗಂಟೆಗೆ ಆಕೆಗೆ ಹಠಾತ್ ಹೆರಿಗೆ ನೋವು ಬಂದಿತ್ತು. ಆಕೆಯ ಅತ್ತೆ ಹೆರಿಗೆಯನ್ನು ಮಾಡಿದರು ಮತ್ತು ಅದಕ್ಕಾಗಿ ಅವರು ಆರು ಗಂಟೆಗಳ ಕಾಲ ಹೆರಿಗೆ ನೋವು ಅನುಭವಿಸಿದ್ದರು, ಸಾರಿಕಾರ ಗರ್ಭಕೋಶವು ಯೋನಿಯಿಂದ ಹೊರ ಬಂದಿತು. "ಯಾರೋ ನನ್ನ ದೇಹದ ಒಂದು ಭಾಗವನ್ನು ಹೊರಗೆ ಎಳಿದಿದ್ದಾರೇನೊ ಎನ್ನುವಂತೆ ಅನ್ನಿಸುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
PHOTO • Zishaan A Latif

ಆರು ತಿಂಗಳ ಗರ್ಭಿಣಿಯಾಗಿದ್ದ ಸಾರಿಕಾ ವಾಸೇವ್ ಪಲಾಶದ ಹೂಗಳನ್ನು ಕುದಿಸುತ್ತಿದ್ದರು (ಕೆಳಗೆ ಬಲಭಾಗದಲ್ಲಿ): 'ನನ್ನ ಮಗಳಿಗೆ [ಐದು ವರ್ಷ] ಜ್ವರವಿದೆ. ಅವಳಿಗೆ ಇದರಿಂದ ಸ್ನಾನ ಮಾಡಿಸಿದರೆ ಅವರು ಗುಣವಾಗುತ್ತಾಳೆ'

"ಗರ್ಭಕೋಶಧ ಜಾರುವಿಕೆಗೆ ಚಿಕಿತ್ಸೆಯಾಗದಿದ್ದರೆ ಮೂತ್ರದ ಸೋಂಕು, ಘರ್ಷಣೆಯಿಂದಾಗಿ ರಕ್ತಸ್ರಾವ, ಸೋಂಕು ಮತ್ತು ನೋವಿನಂತಹ ಮತ್ತಷ್ಟು ತೊಂದರೆಗಳಿಗೆ ಕಾರಣವಾಗಬಹುದು - ಇವೆಲ್ಲವೂ ದೈನಂದಿನ ಬದುಕಿನಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು" ಎಂದು ಡಾ. ಚವ್ಹಾಣ್ ಹೇಳುತ್ತಾರೆ.‌ ವಯಸ್ಸಾದಂತೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಅವರು ಹೇಳುತ್ತಾರೆ.

ಯಾವುದೇ ಮಟ್ಟದಲ್ಲಿ ಗರ್ಭಕೋಶ ಜಾರಿದ್ದರೂ ಅಂತಹ ಮಹಿಳೆಯರಿಗೆ ಭಾರವನ್ನು ಎತ್ತುವುದನ್ನು ತಪ್ಪಿಸಲು ಹೇಳಲಾಗುತ್ತದೆ ಮತ್ತು ಮಲಬದ್ಧತೆಯನ್ನು ತಪ್ಪಿಸಲು ಸಾಕಷ್ಟು ಪ್ರಮಾಣದ ನೀರಿರುವ ಹೆಚ್ಚಿನ ಫೈಬರ್, ಪೌಷ್ಟಿಕ ಆಹಾರವನ್ನು ಸೂಚಿಸಲಾಗುತ್ತದೆ. ಆದರೆ ಸಾರಿಕಾ ದಿನಕ್ಕೆ ಒಂದು ಊಟ ಮತ್ತು ಒಂದು ಬಿಂದಿಗೆ ನೀರಿಗೂ ಕಷ್ಟಪಡಬೇಕಿದೆ. ಗರ್ಭಿಣಿಯೋ ಇಲ್ಲವೋ ಅವರು ಒಂದು ಬಿಂದಿಗೆ ನೀರಿಗಾಗಿ ತಿದಿನ ಎಂಟು ಕಿಲೋಮೀಟರ್ ಬೆಟ್ಟ ಇಳಿದು ಹ್ಯಾಂಡ್‌ಪಂಪ್‌ಗೆ ಹೋಗಬೇಕು. "ಗರ್ಭಕೋಶವು ತೊಡೆಗೆ ತಾಗಿ ಘರ್ಷಣೆಯಿಂದ ಉರಿ ಶುರುವಾಗುತ್ತದೆ ಕೆಲವೊಮ್ಮೆ ರಕ್ತಸ್ರಾವ ಕೂಡ ಆಗುತ್ತದೆ." ಎನ್ನುತ್ತಾರೆ ಸಾರಿಕಾ. ಮನೆಗೆ ಬಂದ ಕೂಡಲೇ ಜಾರಿದ ಭಾಗವನ್ನು ಮತ್ತೆ ಒಳಗೆ ತಳ್ಳುತ್ತಾರೆ.

ದೈಹಿಕ ನೋವಿನ ಜೊತೆಗೆ, ಈ ಸ್ಥಿತಿಗೆ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳೂ. ಜಾರಿದ ಗರ್ಭಕೋಶದ ಸಮಸ್ಯೆ ವೈವಾಹಿಕ ಸಂಬಂಧದ ಮೇಲೆ ಪರಿಣಾಮ ಬೀರಬಹುದು, ಇದು ಸಾರಿಕಾ ಅವರ ಗಂಡ ಅವರನ್ನು ತಿರಸ್ಕರಿಸಿ ಇನ್ನೊಂದು ಮದುವೆಯಾದಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.

ಸಾರಿಕಾ ಅವರ ಪತಿ ಸಂಜಯ್ (ಹೆಸರು ಬದಲಾಗಿದೆ) ಅವರಿಗೆ ಈ ಸಮಸ್ಯೆ ಕಾಣಿಸಿದ ನಂತರ ಮತ್ತೆ ವಿವಾಹವಾದರು. ಸಂಜಯ್ ಧಡ್ಗಾಂವ್‌ನ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ನಾಲ್ಕರಿಂದ ಐದು ದಿನಗಳ ಕೆಲಸಕ್ಕೆ ದಿನಕ್ಕೆ 300 ರೂ ಸಂಪಾದಿಸುತ್ತಾನೆ. "ಅವರು ತನ್ನ ಆದಾಯವನ್ನು ತನ್ನ ಎರಡನೆಯ ಹೆಂಡತಿ ಮತ್ತು ಮಗನಿಗಾಗಿ ಖರ್ಚು ಮಾಡುತ್ತಾರೆ" ಎಂದು ಸಾರಿಕಾ ಹೇಳುತ್ತಾರೆ. ಅವರ ಗಂಡ ಯಾವತ್ತೂ ಹೊಲಗಳಲ್ಲಿ ಕೆಲಸ ಮಾಡುವುದಿಲ್ಲ. ಹೀಗಾಗಿ ಸಾರಿಕಾ ಸ್ವತಃ 2019ರ ಮಳೆಗಾಲದಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ ಒಂದು ಕ್ವಿಂಟಾಲ್ ಮೆಕ್ಕೆ ಜೋಳವನ್ನು ಬೆಳೆಸಿದರು. "ನನ್ನ ಪತಿ 50 ಕಿಲೋಗ್ರಾಂಗಳಷ್ಟನ್ನು ಅವರ ಎರಡನೆಯ ಹೆಂಡತಿ ಮತ್ತು ಮಗುವಿಗಾಗಿ ತೆಗೆದುಕೊಂಡು ಹೋದರು ಉಳಿದಿದ್ದನ್ನ ಭಕ್ರಿ ತಯಾರಿಸಲು ನಾನು ಹಿಟ್ಟು ಮಾಡಿಸಿದೆ”

ಯಾವುದೇ ಆದಾಯದ ಮೂಲವಿಲ್ಲದ ಸಾರಿಕಾ ತನ್ನ ಅಕ್ಕಿ ಮತ್ತು ಬೇಳೆ ಖರ್ಚಿಗಾಗಿ ಆಶಾ ಕಾರ್ಯಕರ್ತೆ ಮತ್ತು ಕೆಲವು ಗ್ರಾಮಸ್ಥರನ್ನು ಅವಲಂಬಿಸುತ್ತಾರೆ. ಕೆಲವೊಮ್ಮೆ, ಅವರು ಹಣವನ್ನು ಸಾಲ ಪಡೆಯುತ್ತಾರೆ. "ಪಡಿತರ ಮತ್ತು ಬೀಜಗಳನ್ನು ಖರೀದಿಸಲು ಹಳ್ಳಿಯ ಒಬ್ಬರಿಂದ ಜೂನ್ [2019]ನಲ್ಲಿ ಪಡೆದ ಸಾಲ 800 ರೂಪಾಯಿಗಳನ್ನು ನಾನು ಹಿಂದಿರುಗಿಸಬೇಕಾಗಿದೆ" ಎಂದು ಅವರು ಹೇಳುತ್ತಾರೆ.

ಮತ್ತು ಕೆಲವೊಮ್ಮೆ ಅವರ ಪತಿ ಅವರನ್ನು ಹೊಡೆದು ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸುತ್ತಾನೆ. “ಅವರು ನನ್ನ ಸ್ಥಿತಿಯನ್ನು ಇಷ್ಟಪಡುವುದಿಲ್ಲ [ಗರ್ಭಕೋಶ ಜಾರಿರುವುದು]. ಅದಕ್ಕಾಗಿಯೇ ಅವರು ಬೇರೆ ವಿವಾಹವಾದರು. ಆದರೆ ಅವರು ಕುಡಿದಾಗ ಬರುತ್ತಾರೆ. ನಾನು [ಸಂಭೋಗದ ಸಮಯದಲ್ಲಿ] ನೋವಿನಿಂದ ಅಳುತ್ತೇನೆ, ಆದರೆ ಆಗ ನನಗೆ ಹೊಡೆಯುತ್ತಾರೆ,” ಎಂದು ಅವರು ಹೇಳುತ್ತಾರೆ.
With no steady source of income, Sarika often depends on the ASHA worker and some villagers to give her rice and dal
PHOTO • Zishaan A Latif
With no steady source of income, Sarika often depends on the ASHA worker and some villagers to give her rice and dal
PHOTO • Zishaan A Latif

ಸ್ಥಿರವಾದ ಆದಾಯ ಮೂಲವಿಲ್ಲದ ಕಾರಣ, ಸಾರಿಕಾ ಆಗಾಗ್ಗೆ ತನ್ನ ಅಕ್ಕಿ, ಬೇಳೆಯ ಅವಶ್ಯಕತೆಗಳಿಗೆ ಆಶಾ ಕಾರ್ಯಕರ್ತೆ ಮತ್ತು ಕೆಲವು ಗ್ರಾಮಸ್ಥರನ್ನು ಅವಲಂಬಿಸುತ್ತಾರೆ

ನಾನು ಅವರನ್ನು ಭೇಟಿಯಾದ ದಿನ ಬೇಯಿಸಿದ ಅನ್ನದ ಮಡಕೆಯನ್ನು ಒಲೆಯ ಪಕ್ಕದಲ್ಲಿ ಇರಿಸಲಾಗಿತ್ತು. ತನಗೂ ಮತ್ತು ಅವರ ಐದು ವರ್ಷದ ಮಗಳು ಕರುಣಾಗೆ ಇದು ದಿನದ ಏಕೈಕ ಊಟ. "ಮನೆಯಲ್ಲಿ ಕೇವಲ ಒಂದು ಕಿಲೋ ಅಕ್ಕಿ ಮಾತ್ರ ಉಳಿದಿದೆ" ಎಂದು ಅವರು ಹೇಳುತ್ತಾರೆ. ಅವರ ಬಿಪಿಎಲ್ ಪಡಿತರ ಚೀಟಿಯಲ್ಲಿ ಸಿಕ್ಕಿದ ಮೂರು ಕಿಲೋ ಅಕ್ಕಿ ಮತ್ತು ಎಂಟು ಕಿಲೋ ಗೋಧಿಯಲ್ಲಿ ಈಗ ಉಳಿದಿರುವುದು ಅಷ್ಟೆ. ಉಳಿದಂತೆ ಅವರ ಮೂರು ಆಡುಗಳು ಪೌಷ್ಠಿಕಾಂಶದ ಹೆಚ್ಚುವರಿ ಮೂಲಗಳಾಗಿವೆ. "ಪ್ರತಿದಿನ ಒಂದು ಮೇಕೆಯಿಂದ ಒಂದು ಲೋಟ ಹಾಲು ಕರೆಯುತ್ತೇನೆ" ಎಂದು ಅವರು ಹೇಳುತ್ತಾರೆ. ಆ ಹಾಲನ್ನು ಸಹ ಅವರು ತನ್ನ ಮಗಳು ಮತ್ತು ತನ್ನ ನಾಲ್ಕು ವರ್ಷದ ಮಲಮಗು ಸುಧೀರ್‌ಗೆ ಸಮಾನ ಪಾಲು ಮಾಡಿ ಹಂಚುತ್ತಾರೆ, ಅವನು ತನ್ನ ತಾಯಿಯೊಂದಿಗೆ ಎರಡು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಾನೆ.

ತೋರನ್‌ಮಲ್‌ನ ಗ್ರಾಮಾಂತರ ಆಸ್ಪತ್ರೆ 15 ಕಿಲೋಮೀಟರ್ ದೂರದಲ್ಲಿದೆ ಮತ್ತು ಉಪ ಆರೋಗ್ಯ ಕೇಂದ್ರವು ಐದು ಕಿಲೋಮೀಟರ್ ದೂರದಲ್ಲಿದೆ. ಇದು ಕಡಿದಾದ ಪ್ರದೇಶವಾಗಿದ್ದು ಶೇರ್‌ ಜೀಪ್‌ ಸೇವೆ ಕೂಡ ವಿರಳವಾಗಿದ್ದು ಅವರಿಗೆ ನಡೆಯಲೇಬೇಕಾದ ಅನಿವಾರ್ಯತೆ ಕಾಡುತ್ತದೆ. ನನಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ. ನಾನು ಬೇಗನೆ ಉಸಿರಾದ ತೊಂದರೆಗೆ ಒಳಗಾಗುತ್ತಾನೆ,”ಎಂದು ಅವರು ಹೇಳುತ್ತಾರೆ. ಉಪ-ಕೇಂದ್ರದಲ್ಲಿ ಅವಳ ಪ್ರಸವಪೂರ್ವ ಭೇಟಿಗಳ ಸಮಯದಲ್ಲಿ, ಅವರಿಗೆ ಸಿಕ್‌ಲ್‌ ಸೆಲ್‌ ಡಿಸೀಸ್‌ (SCD) ಇರುವುದು ಪತ್ತೆಯಾಯಿತು.  ಇದು ಆನುವಂಶಿಕ ರಕ್ತದ ಕಾಯಿಲೆಯಾಗಿದ್ದು ಅದು ಹಿಮೋಗ್ಲೋಬಿನ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತಹೀನತೆಗೆ ಕಾರಣವಾಗುತ್ತದೆ.

2016ರಲ್ಲಿ ನಿರ್ಮಿಸಲಾದ ತೋರನ್‌ಮಲ್ ಗ್ರಾಮಾಂತರ ಆಸ್ಪತ್ರೆಯಲ್ಲಿ 30 ಹಾಸಿಗೆಗಳಿವೆ. ದೈನಂದಿನ ಹೊರರೋಗಿ ವಿಭಾಗವು 30 ರಿಂದ 50 ರೋಗಿಗಳನ್ನು ನೋಡುತ್ತದೆ ಎಂದು ವೈದ್ಯಕೀಯ ಅಧಿಕಾರಿ ಡಾ. ಸುಹಾಸ್ ಪಾಟೀಲ್ ಹೇಳುತ್ತಾರೆ. ಅವರು ಜ್ವರ, ಶೀತ ಅಥವಾ ದೈಹಿಕ ಗಾಯದಂತಹ ಸಣ್ಣ ಕಾಯಿಲೆಗಳೊಂದಿಗೆ ಬರುತ್ತಾರೆ. ಸುತ್ತಮುತ್ತಲಿನ 25 ಹಳ್ಳಿಗಳಿಂದ ಪ್ರತಿ ತಿಂಗಳು ಒಂದು ಅಥವಾ ಎರಡು ಮಂದಿ ಮಾತ್ರ ಹೆರಿಗೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಇಬ್ಬರು ವೈದ್ಯಕೀಯ ಅಧಿಕಾರಿಗಳು, ಏಳು ದಾದಿಯರು, ಒಂದು ಪ್ರಯೋಗಾಲಯ (ಆದರೆ ತಂತ್ರಜ್ಞರಿಲ್ಲ), ಮತ್ತು ಒಬ್ಬ ಲ್ಯಾಬ್ ಸಹಾಯಕ ಇದ್ದಾರೆ. ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗತಜ್ಞರು ಅಥವಾ ಸಾರಿಕಾ ಅವರಂತಹ ಗಂಭೀರ ಪ್ರಕರಣಗಳಿಗೆ ಚಿಕಿತ್ಸೆ ನೀಡಬಲ್ಲ ಯಾವುದೇ ತಜ್ಞರು ಇಲ್ಲ.

“ನಾವು ಗರ್ಭಕೋಶ ಜಾರಿದ ಪ್ರಕರಣಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಪೆಲ್ವಿಸ್‌ನ ರಕ್ತಸ್ರಾವ ಮತ್ತು ಸಿಕ್‌ಲ್‌ ಸೆಲ್ ರಕ್ತಹೀನತೆಯೊಂದಿಗೆ ಹೆಚ್ಚಿನ ಪ್ರಕರಣಗಳು ಬರುತ್ತವೆ. ನಾವು ಅಂತಹ ಕೇಸ್‌ಗಳನ್ನು ಅಡ್ಮಿಟ್‌ ಮಾಡಿಸಿಕೊಂಡರೂ, ಅವರಿಗೆ ಚಿಕಿತ್ಸೆ ನೀಡುವ ಸೌಲಭ್ಯ ಅಥವಾ ಪರಿಣತಿ ನಮ್ಮಲ್ಲಿಲ್ಲ” ಎಂದು ಡಾ. ಪಾಟೀಲ್ ಹೇಳುತ್ತಾರೆ, ಅವರು 2016ರಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಆಸ್ಪತ್ರೆಯ ಸ್ಟಾಫ್‌ ಕ್ವಾಟ್ರಸ್‌ನಲ್ಲಿ ವಾಸಿಸುತ್ತಾರೆ.

ಅವರು ಸೌಲಭ್ಯ ಮತ್ತು ಪರಿಣತಿಯನ್ನು ಹೊಂದಿದ್ದರೂ ಸಹ, ಸಾರಿಕಾ ತನ್ನ ಗರ್ಭಕೋಶ ಜಾರಿರುವುದರ ಬಗ್ಗೆ ವೈದ್ಯರಿಗೆ ಹೇಳದಿರಬಹುದು. “ಅಲ್ಲಿರುವುದು ಬಾಬ್ಪ್ಯಾ [ಪುರುಷ] ಡಾಕ್ಟರ್. ನನ್ನ ಕಾಟ್‌ (ಗರ್ಭಕೋಶ) ಜಾರುತ್ತಿದೆ ಎಂದು ನಾನು ಅವರಿಗೆ ಹೇಗೆ ಹೇಳಬಲ್ಲೆ?” ಅವರು ಕೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಛಾಯಾಚಿತ್ರಗಳು: ಜಿಶಾನ್ ಎ. ಲತೀಫ್ ಅವರು ಸ್ವತಂತ್ರ ಛಾಯಾಗ್ರಾಹಕ ಮತ್ತು ಮುಂಬೈ ಮೂಲದ ಚಲನಚಿತ್ರ ನಿರ್ಮಾಪಕರಾಗಿದ್ದು ಅವರ ಕೃತಿಗಳು ವಿಶ್ವಾದ್ಯಂತ ಕಲೆಕ್ಷನ್ಸ್, ‌ಪಬ್ಲಿಕೇಷನ್‌ಗಳಲ್ಲಿ, ಎಕ್ಷಿಬಿಷನ್‌ಗಳಲ್ಲಿ ಕಾಣಿಸಿಕೊಂಡಿವೆ: https://zishaanalatif.com/

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು, ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಫೌಂಡೇಷನ್ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ವಿಳಾಸವನ್ನು ಸಂಪರ್ಕಿಸಿ: [email protected] ಒಂದು ಪ್ರತಿಯನ್ನು [email protected] . ಈ ವಿಳಾಸಕ್ಕೆ ಕಳಿಸಿ

ಅನುವಾದ: ಶಂಕರ ಎನ್. ಕೆಂಚನೂರು
Jyoti Shinoli

জ্যোতি শিনোলি পিপলস্‌ আর্কাইভ অফ রুরাল ইন্ডিয়ার বরিষ্ঠ প্রতিবেদক। এর আগে তিনি 'মি মারাঠি' মহারাষ্ট্র ১' ইত্যাদি সংবাদ চ্যানেলে কাজ করেছেন।

Other stories by জ্যোতি শিনোলী
Illustration : Priyanka Borar

নিউ-মিডিয়া শিল্পী প্রিয়াঙ্কা বোরার নতুন প্রযুক্তির সাহায্যে ভাব এবং অভিব্যক্তিকে নতুন রূপে আবিষ্কার করার কাজে নিয়োজিত আছেন । তিনি শেখা তথা খেলার জন্য নতুন নতুন অভিজ্ঞতা তৈরি করছেন; ইন্টারেক্টিভ মিডিয়ায় তাঁর সমান বিচরণ এবং সেই সঙ্গে কলম আর কাগজের চিরাচরিত মাধ্যমেও তিনি একই রকম দক্ষ ।

Other stories by Priyanka Borar
Editor : Hutokshi Doctor
Series Editor : Sharmila Joshi

শর্মিলা জোশী পিপলস আর্কাইভ অফ রুরাল ইন্ডিয়ার (পারি) পূর্বতন প্রধান সম্পাদক। তিনি লেখালিখি, গবেষণা এবং শিক্ষকতার সঙ্গে যুক্ত।

Other stories by শর্মিলা জোশী
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

Other stories by Shankar N Kenchanuru