ಅದು 1997ನೇ ಇಸವಿ

ಹಿರಿಯ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್‌ನ ಅಂತಿಮ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಮತ್ತು ಮಣಿಪುರ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ವಾರ್ಷಿಕ ಅಂತರರಾಜ್ಯ ಪಂದ್ಯಾವಳಿಯಲ್ಲಿ ಮಣಿಪುರದೆದುರು ಕಳೆದ ಮೂರು ಫೈನಲ್ ಪಂದ್ಯಗಳಲ್ಲಿ ಬಂಗಾಳ ಸೋತಿತ್ತು, ಆದರೆ ಈ ಬಾರಿ ಆ ತಂಡವು ತಮ್ಮ ಹಳದಿ ಮತ್ತು ಮರೂನ್ ಜರ್ಸಿಗಳಲ್ಲಿ ದೈತ್ಯರಾಗಿ ನಿಂತಿದ್ದರು. ಪಶ್ಚಿಮ ಬಂಗಾಳದ ಹಲ್ದಿಯಾ ನಗರದ ದುರ್ಗಾಚಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಟಗಾರರಾದ ಬಂದನಾ ಪೌಲ್ ತಮ್ಮ ತವರಿನ ಅಂಗಳದಲ್ಲಿದ್ದರು.

ಸಿಳ್ಳೆ ಊದುವುದರೊಂದಿಗೆ ಪಂದ್ಯಾಟ ಆರಂಭಗೊಂಡಿತು.

ಇದಕ್ಕೂ ಮುನ್ನ, 16 ವರ್ಷದ ಸ್ಟ್ರೈಕರ್ ಈ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಪಶ್ಚಿಮ ಬಂಗಾಳವು ಗೋವಾ ವಿರುದ್ಧ ಗೆದ್ದಿತ್ತು, ಆದರೆ ಅದು ಪಾಲ್ ಅವರನ್ನು ಎಡಗಾಲಿನ ಗಾಯದಿಂದ ಬಳಲುವಂತೆ ಮಾಡಿತು: "ಆದರೂ ನಾನು [ಪಂಜಾಬ್ ವಿರುದ್ಧ] ಸೆಮಿಫೈನಲ್ಲಿನಲ್ಲಿ ಆಡಿದ್ದೆ ಆದರೆ ನಾನು ನೋವಿನಿಂದ ಬಳಲುತ್ತಿದ್ದೆ. ಆ ದಿನ ನಾವು ಫೈನಲ್ ತಲುಪಿದಾಗ, ನನಗೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ."

ಪಶ್ಚಿಮ ಬಂಗಾಳದ ಅತ್ಯಂತ ಕಿರಿಯ ಆಟಗಾರರಾದ ಪಾಲ್, ಅಂದು ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಬೆಂಚ್ ಮೂಲಕ ವೀಕ್ಷಿಸಿದರು.

ಪಂದ್ಯದ ಕೆಲವು ನಿಮಿಷಗಳು ಬಾಕಿ ಉಳಿದಿದ್ದವು ಮತ್ತು ಎರಡೂ ತಂಡಗಳು ಗೋಲು ಗಳಿಸಲಿಲ್ಲ. ಪಶ್ಚಿಮ ಬಂಗಾಳದ ತರಬೇತುದಾರ ಶಾಂತಿ ಮಲ್ಲಿಕ್ ಈ ಬೆಳವಣಿಗೆಯಿಂದ ಬೇಸರಗೊಂಡಿದ್ದರು. ಅಂದಿನ ಪಂದ್ಯಾಟಕ್ಕೆ 12,000 ಆಸನಗಳ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರು ಸೇರಿದ್ದರು. ಮಲ್ಲಿಕ್ ಪಾಲ್ ಬಳಿ ಪಂದ್ಯಕ್ಕೆ ಸಿದ್ಧಗೊಳ್ಳುವಂತೆ ಹೇಳಿದರು. "ನನ್ನ ಸ್ಥಿತಿಯನ್ನು ನೋಡಿ' ಎಂದು ನಾನು ಅವರಿಗೆ ಹೇಳಿದೆ. ಆದರೆ ತರಬೇತುದಾರ್ತಿ ಹೇಳಿದರು, 'ನೀನು ಎದ್ದು ಆಡಿದರೆ ಒಂದು ಗೋಲ್‌ ಬರುತ್ತೆ ಅಂರ ನನ್ನ ಮನಸ್ಸು ಹೇಳ್ತಿದೆ' ಎಂದು ಅವರು ಹುರಿದುಂಬಿಸಿದರು,” ಎಂದು ಪಾಲ್ ಹೇಳುತ್ತಾರೆ.

ಆಗ ಬೇಗನೆ ನೋವು ಕಡಿಮೆ ಮಾಡಬಲ್ಲಂತಹ ಎರಡು ಚುಚ್ಚುಮದ್ದುಗಳನ್ನು ನೀಡಲಾಯಿತು. ನಂತರ ಕಾಲಿಗೆ ಕ್ರೇಪ್‌ ಬ್ಯಾಂಡೇಜ್‌ ಕಟ್ಟಿಕೊಂಡು ತಮ್ಮ ಪರಿಕರಗಳೊಡನೆ ಪಾಲ್‌ ಆಡಲು ಸಿದ್ಧರಾಗಿ ಕಾಯತೊಡಗಿದರು. ಪಂದ್ಯವನ್ನು ಡ್ರಾ ಮಾಡಲಾಯಿತು ಮತ್ತು ಯಾವ ತಂಡ ಮೊದಲು ಗೋಲ್‌ ಹೊಡೆಯುತ್ತದೆಯೋ ಅದನ್ನು ಚಾಂಪಿಯನ್‌ ಎಂದು ಘೋಷಿಸಲಾಗುವ ಹೆಚ್ಚುವರಿ ಸಮಯದ ಆಟವಾದ ಗೋಲ್ಡನ್‌ ಗೋಲ್‌ ಸಮಯವನ್ನು ನಿದಿಪಡಿಸಲಾಯಿತು.

“ನಾನು ಕ್ರಾಸ್‌ ಬಾರ್‌ ಕಡೆ ಗುರಿಯಿಟ್ಟೆ, ಮತ್ತು ಚೆಂಡು ಬಲದಿಕ್ಕಿನತ್ತ ತಿರುಗಿತು. ಆಗ ಕೀಪರ್‌ ಜಿಗಿದಳಾದರೂ ಚೆಂಡು ಅವಳನ್ನು ದಾಟಿಕೊಂಡು ನೆಟ್‌ ಕಡೆ ಪುಟಿಯಿತು.”

PHOTO • Riya Behl
PHOTO • Riya Behl

ಎಡ: 2 ಡಿಸೆಂಬರ್ 2012ರಂದು ಆನಂದಬಜಾರ್ ಪತ್ರಿಕೆಯ ಕ್ರೀಡಾ ಪುರವಣಿಯಲ್ಲಿ ಪ್ರಕಟವಾದ ಬೋನಿ ಪೌಲ್ ಬಂದನಾ(ವಂದನಾ) ಪೌಲ್ ಆಗುವ ಮೊದಲು ಫುಟ್‌ಬಾಲ್ ಆಡುತ್ತಿರುವ ಚಿತ್ರ. ಬಲ: 1998ರ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಕ್ಕಾಗಿ AIFF ನಿಂದ ಬಂದನಾ ಅವರಿಗೆ ದೊರೆತ ಪ್ರಮಾಣಪತ್ರ

ಪಾಲ್‌ ಇಷ್ಟು ಹೇಳಿ, ಅನುಭವಿ ಕತೆಗಾರನಂತೆ ತನ್ನ ಕತೆಗೊಂದು ಅಲ್ಪವಿರಾಮ ನೀಡಿದರು. “ಅಂದು ನಾನು ನನ್ನ ಗಾಯಗೊಂಡಿದ್ದ ಕಾಲಿನಿಂದಲೇ ಶಾಟ್‌ ಹೊಡೆದೆ,” ಎಂದು ಖ್ಯಾತ ಫುಟ್‌ಬಾಲ್‌ ತಾರೆ ನಗುತ್ತಾ ಹೇಳುತ್ತಾರೆ. “ಕೀಪರ್‌ ಎಷ್ಟೇ ಎತ್ತರವಿದ್ದರೂ, ಕ್ರಾಸ್‌ಬಾರ್‌ ಶಾಟ್‌ಗಳನ್ನು ತಡೆಯುವುದು ಕಷ್ಟ. ನಾನು ಗೋಲ್‌ ದಾಖಲಿಸಿದೆ.”

ಇದೆಲ್ಲ ನಡೆದು ಇಪ್ಪತೈದು ವರ್ಷಗಳೇ ಸಂದುಹೋಗಿವೆ, ಆದರೆ 41 ವರ್ಷದ ಪಾಲ್‌ ಅದನ್ನು ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಒಂದು ವರ್ಷದ ನಂತರ ಪಾಲ್‌ ರಾಷ್ಟ್ರೀಯ ತಂಡಕ್ಕೂ ಸೇರಿಕೊಂಡರು. ಅವರು ಸ್ವಲ್ಪ ದಿನಗಳಲ್ಲೇ ಬ್ಯಾಂಕಾಕಿನಲ್ಲಿ ನಡೆಯಲಿರುವ 1998ರ ಏಷ್ಯನ್ ಕ್ರೀಡಾಕೂಟದಲ್ಲಿ ಆಡಬೇಕಿತ್ತು.

ಇಲ್ಲಿಯವರೆಗೆ, ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಇಚ್ಚಾಪುರ ಗ್ರಾಮದ ಈ ಫುಟ್ಬಾಲ್ ತಾರೆಗೆ ಇದು ಕನಸಿನ ಓಟವಾಗಿತ್ತು: "ನನ್ನ ಅಜ್ಜಿ ರೇಡಿಯೋದಲ್ಲಿ [ಫೈನಲ್‌ ಪಂದ್ಯಗಳ] ಕಮೆಂಟರಿಯನ್ನು ಕೇಳುತ್ತಿದ್ದರು. ನನ್ನ ಕುಟುಂಬದಲ್ಲಿ ಯಾರೂ ಈ ಮೊದಲು ಫುಟ್ಬಾಲ್ ಆಟದಲ್ಲಿ ಈ ಮಟ್ಟವನ್ನು ತಲುಪಿರಲಿಲ್ಲ. ಅವರೆಲ್ಲರೂ ನನ್ನ ಬಗ್ಗೆ ಹೆಮ್ಮೆಪಟ್ಟರು."

ಪಾಲ್ ಚಿಕ್ಕವರಿದ್ದಾಗ, ಏಳು ಜನರ ಕುಟುಂಬವು ಗಾಯ್‌ ಘಾಟ್ ಬ್ಲಾಕ್‌ನ ಇಚ್ಛಾಪುರದ ಅವರ ಮನೆಯಲ್ಲಿ ವಾಸಿಸುತ್ತಿತ್ತು, ಅಲ್ಲಿ ಅವರು ಎರಡು ಎಕರೆ ಜಮೀನನ್ನು ಹೊಂದಿದ್ದರು, ಅದರಲ್ಲಿ ಭತ್ತ, ಸಾಸಿವೆ, ಹಸಿರು ಬಟಾಣಿ, ಬೇಳೆಕಾಳುಗಳು ಮತ್ತು ಗೋಧಿಯನ್ನು ತಮ್ಮ ದೈನಂದಿನ ಆಹಾರಕ್ಕಾಗಿ ಬೆಳೆಯುತ್ತಿದ್ದರು. ಈ ಜಮೀನಿನ ಕೆಲವು ಭಾಗಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸ್ತುತ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿದೆ.

"ನನ್ನ ತಂದೆ ಟೈಲರ್ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಹೊಲಿಗೆ ಮತ್ತು ಕಸೂತಿ ಮಾಡಲು ಸಹಾಯ ಮಾಡುತ್ತಿದ್ದರು. ಅಮ್ಮ ಪಗ್ಡಿಗಳು [ಪೇಟಗಳು], ರಾಖಿ  ಮತ್ತು ಇತರ ವಸ್ತುಗಳನ್ನು ಸಹ ತಯಾರಿಸುತ್ತಿದ್ದರು" ಎಂದು ಐದು ಜನ ಒಡಹುಟ್ಟಿದವರಲ್ಲಿ ಕಿರಿಯವರಾದ ಪಾಲ್ ಹೇಳುತ್ತಾರೆ. "ನಾವು ಚಿಕ್ಕವರಿದ್ದಾಗಿನಿಂದಲೂ ನಾವು ಹೊಲದಲ್ಲಿ ಕೆಲಸ ಮಾಡುತ್ತಿದ್ದೆವು." ಮಕ್ಕಳ ಕರ್ತವ್ಯಗಳಲ್ಲಿ ಸುಮಾರು 70 ಕೋಳಿಗಳು ಮತ್ತು 15 ಆಡುಗಳನ್ನು ನೋಡಿಕೊಳ್ಳುವುದು ಸೇರಿತ್ತು - ಇದಕ್ಕಾಗಿ ಶಾಲೆಗೆ ಮೊದಲು ಮತ್ತು ನಂತರ ಹುಲ್ಲನ್ನು ಕೊಯ್ದು ತರಬೇಕಿತ್ತು.”

ಪಾಲ್ ಇಚ್ಛಾಪುರ ಪ್ರೌಢಶಾಲೆಯಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿದರು. "ಅಲ್ಲಿ ಯಾವುದೇ ಬಾಲಕಿಯರ ಫುಟ್‌ಬಾಲ್ ತಂಡ ಇದ್ದಿರಲಿಲ್ಲ,ಹೀಗಾಗಿ ನಾನು ಶಾಲೆಯ ನಂತರ ಹುಡುಗರೊಂದಿಗೆ ಆಡುತ್ತಿದ್ದೆ" ಎಂದು ಮಾಜಿ ಫುಟ್‌ಬಾಲ್ ಆಟಗಾರ ಹೇಳುತ್ತಾರೆ, ನಂತರ ಅವರು ಕಂಚಿಕಾಯಿ ( Citrus maxima ) ತರಲು ಕೊಠಡಿಯಿಂದ ಹೊರಟರು. “ನಾವು ಇದನ್ನು ಬಟಾಬಿ ಅಥವಾ ಜಂಬೂರಾ ಎಂದು ಕರೆಯುತ್ತೇವೆ. ಫುಟ್ಬಾಲ್ ಖರೀದಿಸಲು ನಮ್ಮ ಬಳಿ ಹಣವಿರಲಿಲ್ಲ, ಹಾಗಾಗಿ ಈ ಹಣ್ಣನ್ನು ಮರದಿಂದ ಕಿತ್ತು ಅದನ್ನು ಬಳಸಿ ಆಟವಾಡುತ್ತಿದ್ದೆವು" ಎಂದು ಪಾಲ್ ಹೇಳುತ್ತಾರೆ, "ನಾನು ಹೀಗೆ ನನ್ನ ಆಟ ಪ್ರಾರಂಭಿಸಿದೆ."

PHOTO • Riya Behl
PHOTO • Riya Behl

ಎಡ: ತಾನು ಮತ್ತು ಸ್ವಾತಿ ತನ್ನ ಕುಟುಂಬದ ಮನೆಯ ಮೊದಲ ಮಹಡಿಯಲ್ಲಿ ವಾಸಿಸುವ ಕೋಣೆಯಲ್ಲಿ ಬೋನಿ ಕುಳಿತಿ ರುವುದು . ಬಲ: ಎರಡು ಕಂಚಿಕಾಯಿ (ಎಡಕ್ಕೆ), ಬೋನಿ ತನ್ನ ಕುಟುಂಬದ ಬಳಿ ಫುಟ್ಬಾಲ್ ಖರೀದಿಸಲು ಹಣವಿಲ್ಲದ ಕಾರಣ ಈ ಹಣ್ಣನ್ನು ಚೆಂಡಿಗೆ ಬದಲಾಗಿ ಬಳಸುತ್ತಿದ್ದರು . ಫೋಟೋದಲ್ಲಿ ಅವರ ಕೋಚಿಂಗ್ ಶೂಗಳನ್ನು ಬಲಭಾಗದಲ್ಲಿ ನೋಡಬಹುದು

ಅಂತಹ ಒಂದು ದಿನ, ಇಚ್ಚಾಪುರದ ಬುಚು ದಾ (ಹಿರಿಯಣ್ಣ) ಎಂದು ಪ್ರೀತಿಯಿಂದ ಕರೆಯಲ್ಪಡುವ ಸಿದ್ನಾಥ್ ದಾಸ್ , 12 ವರ್ಷದ ಬಾಲಕಿ ಫುಟ್ಬಾಲ್ ಆಡುವುದನ್ನು ನೋಡಿದರು. ಬುಚು ದಾ ಅವರು ಹತ್ತಿರದ ಬರಾಸತ್ ಪಟ್ಟಣದಲ್ಲಿ ನಡೆಯುತ್ತಿರುವ ಫುಟ್ಬಾಲ್ ಟ್ರಯಲ್ಸ್ ಬಗ್ಗೆ ಪಾಲ್‌ಗೆ ಮಾಹಿತಿ ನೀಡಿದರು, ಅವರು ಆ ಮಾಹಿತಿಯನ್ನು ಅನುಸರಿಸಿ ಬರಾಸತ್ ಜುಬಕ್ ಸಂಘ ಕ್ಲಬ್ ತಂಡದಲ್ಲಿ ಸ್ಥಾನ ಪಡೆದರು. ಆ ಕ್ಲಬ್‌ ಜೊತೆ ಆಕರ್ಷಕ ಚೊಚ್ಚಲ ಋತುವಿನ ನಂತರ, ಪಾಲ್ ಅವರನ್ನು ಕೋಲ್ಕತ್ತಾದ ಇತಿಕಾ ಮೆಮೋರಿಯಲ್ ಎಂಬ ಕ್ಲಬ್ ತನ್ನತ್ತ ಸೆಳದುಕೊಂಡಿತು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.

1998ರ ಏಷ್ಯನ್ ಗೇಮ್ಸ್‌ನಲ್ಲಿ ಆಡಲು ಪಾಲ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಯಿತು ಮತ್ತು ಪಾಸ್ ಪೋರ್ಟ್ ಮತ್ತು ವೀಸಾ ಅರ್ಜಿಗಳನ್ನು ತರಾತುರಿಯಲ್ಲಿ ಕಳುಹಿಸಲಾಯಿತು. "ನಾವು ವಿಮಾನ ನಿಲ್ದಾಣದಲ್ಲಿದ್ದೆವು, ಹೊರಡಲು ಸಿದ್ಧರಾಗಿದ್ದೆವು" ಎಂದು ನೆನಪಿಸಿಕೊಳ್ಳುತ್ತಾರೆ. "ಆದರೆ ನಂತರ ಅವರು ನನ್ನನ್ನು ವಾಪಸ್ ಕಳುಹಿಸಿದರು," ಎಂದು ಮಾಜಿ ಫುಟ್‌ಬಾಲ್‌ ಆಟಗಾರ ನೆನಪಿಸಿಕೊಳ್ಳುತ್ತಾರೆ.

ಮಣಿಪುರ, ಪಂಜಾಬ್, ಕೇರಳ ಮತ್ತು ಒಡಿಶಾದ ಆಟಗಾರರು ಏಷ್ಯನ್ ಗೇಮ್ಸ್‌ ಸಲುವಾಗಿ ಒಟ್ಟಿಗೆ ತರಬೇತಿ ಪಡೆಯುತ್ತಿದ್ದಾಗ ಪಾಲ್ ಅವರ ಪ್ರದರ್ಶನವನ್ನು ಗಮನಿಸಿದ್ದರು. ಅವರು ಪಾಲ್ ಅವರ ಲಿಂಗದ ಬಗ್ಗೆ ಅನುಮಾನಪಟ್ಟರು ಮತ್ತು ಅದನ್ನು ತಮ್ಮ ತರಬೇತುದಾರರೊಂದಿಗೆ ಹಂಚಿಕೊಂಡರು. ಈ ವಿಷಯವು ಶೀಘ್ರದಲ್ಲೇ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಬಳಿ ತಲುಪಿತು, ಇದು ಕ್ರೀಡಾ ಆಡಳಿತ ಮಂಡಳಿಯಾಗಿದೆ.

“ನನ್ನನ್ನು ಕ್ರೋಮೋಸೋಮ್ ಪರೀಕ್ಷೆಗಾಗುವಂತೆ ಕೇಳಿಕೊಳ್ಳಲಾಯಿತು. ಆ ಸಮಯದಲ್ಲಿ ಅದನ್ನು ಬಾಂಬೆ ಅಥವಾ ಬೆಂಗಳೂರಿನಲ್ಲಿ ಮಾತ್ರವೇ ಮಾಡಬಹುದಿತ್ತು” ಎಂದು ಪಾಲ್ ಹೇಳುತ್ತಾರೆ. ಕೋಲ್ಕತ್ತಾದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಡಾ.ಲೈಲಾ ದಾಸ್ ಅವರು ಪಾಲ್ ಅವರ ರಕ್ತದ ಮಾದರಿಯನ್ನು ಮುಂಬೈಗೆ ಕಳುಹಿಸಿದರು. "ಒಂದೂವರೆ ತಿಂಗಳ ನಂತರ, ವರದಿಯು '46 XY' ತೋರಿಸುವ ಕ್ಯಾರಿಯೋಟೈಪ್ ಪರೀಕ್ಷೆಯ ಫಲಿತಾಂಶವನ್ನು ಹೋಂದಿತ್ತು. ಮಹಿಳೆಯರಿಗೆ ಇದು '46 XX‌ʼ ಆಗಿರಬೇಕು. ನಾನು [ಔಪಚಾರಿಕವಾಗಿ] ಆಡಲು ಸಾಧ್ಯವಿಲ್ಲ ಎಂದು ವೈದ್ಯರು ನನಗೆ ಹೇಳಿದರು," ಎಂದು ಪಾಲ್ ಹೇಳುತ್ತಾರೆ.

ಉದಯೋನ್ಮುಖ ಫುಟ್ಬಾಲ್ ತಾರೆಗೆ ಆಗ ಕೇವಲ 17 ವರ್ಷ ವಯಸ್ಸಾಗಿತ್ತು, ಆದರೆ ಅವರ ಕ್ರೀಡಾ ಬದುಕಿನ ಭವಿಷ್ಯವು ಈಗ ಆತಂಕದಲ್ಲಿತ್ತು.

PHOTO • Riya Behl

ಜುಲೈ 19, 2012 ರಂದು ಆಜ್ಕಾಲ್ ಸಿಲಿಗುರಿಯಲ್ಲಿ ಬೋನಿ ತನ್ನ ಬಯೋಡೇಟಾವನ್ನು ಸಿಲಿಗುರಿ ಉಪ-ವಿಭಾಗದ ಕ್ರೀಡಾ ಮಂಡಳಿಯ ಕಾರ್ಯದರ್ಶಿಗೆ ಹಸ್ತಾಂತರಿಸುತ್ತಿರುವ ಫೋಟೋ

ಇಂಟರ್‌ಸೆಕ್ಸ್  ವ್ಯಕ್ತಿಗಳು, ಅಥವಾ ಇಂಟರ್ಸೆಕ್ಸ್ ವ್ಯತ್ಯಾಸವನ್ನು ಹೊಂದಿರುವ ವ್ಯಕ್ತಿಗಳು, ಸ್ತ್ರೀ ಅಥವಾ ಪುರುಷ ದೇಹಗಳಿಗೆ ವೈದ್ಯಕೀಯ ಮತ್ತು ಸಾಮಾಜಿಕ ಮಾನದಂಡಗಳಿಗೆ ಅನುಗುಣವಾಗಿಲ್ಲದ ಸಹಜ ಲೈಂಗಿಕ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ವ್ಯತ್ಯಾಸಗಳು ಬಾಹ್ಯ ಅಥವಾ ಆಂತರಿಕ ಸಂತಾನೋತ್ಪತ್ತಿ ಭಾಗಗಳಲ್ಲಿ, ಕ್ರೋಮೋಸೋಮ್ ಮಾದರಿಗಳಲ್ಲಿ ಅಥವಾ ಹಾರ್ಮೋನ್ ಮಾದರಿಗಳಲ್ಲಿರಬಹುದು. ಅದು ಹುಟ್ಟಿನಲ್ಲಿ ಅಥವಾ ನಂತರ ಸ್ಪಷ್ಟವಾಗಿ ಕಾಣಿಸಬಹುದು

***

"ನನಗೆ ಗರ್ಭಕೋಶ, ಒಂದು ಅಂಡಾಶಯ ಮತ್ತು ಒಳಗೊಂದು ಶಿಶ್ನವಿತ್ತು. ನಾನು ಎರಡೂ 'ಪಾರ್ಶ್ವಗಳನ್ನು' (ಸಂತಾನೋತ್ಪತ್ತಿ ಭಾಗಗಳು) ಹೊಂದಿದ್ದೆ" ಎಂದು ಮಾಜಿ ಫುಟ್ಬಾಲ್ ಆಟಗಾರ ಹೇಳುತ್ತಾರೆ. ರಾತ್ರೋರಾತ್ರಿ, ಫುಟ್ಬಾಲ್ ಸಮುದಾಯ, ಮಾಧ್ಯಮಗಳು ಮತ್ತು ಪಾಲ್ ಅವರ ಕುಟುಂಬವು ಕ್ರೀಡಾಪಟುವಿನ ಗುರುತನ್ನು ಪ್ರಶ್ನಿಸಿತು.

"ಆ ಸಮಯದಲ್ಲಿ, ಇದೆಲ್ಲ ಯಾರಿಗೂ ತಿಳಿದಿರಲಿಲ್ಲ ಅಥವಾ ಅರ್ಥವಾಗುತ್ತಿರಲಿಲ್ಲ. ಜನರು ಈಗೀಗ ಈ ಕುರಿತು ಮಾತನಾಡುತ್ತಿದ್ದಾರೆ ಮತ್ತು LGBTQ ಸಮಸ್ಯೆಗಳನ್ನು ಎತ್ತಿ ತೋರಿಸಲಾಗುತ್ತಿದೆ" ಎಂದು ಮಾಜಿ ಫುಟ್ಬಾಲ್ ಆಟಗಾರ ಹೇಳುತ್ತಾರೆ.

ಪಾಲ್ ಓರ್ವ ಇಂಟರ್‌ಸೆಕ್ಸ್‌ (ಅಂತರಲಿಂಗಿ) ವ್ಯಕ್ತಿ - LGBTQIA + ಸಮುದಾಯದಲ್ಲಿ ಅವರು ' I ' - ಮತ್ತು ಈಗ ಬೋನಿ ಪಾಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. "ನನ್ನ ರೀತಿಯ ದೇಹವು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅಸ್ತಿತ್ವದಲ್ಲಿದೆ. ಕ್ರೀಡಾಪಟುಗಳು, ಟೆನಿಸ್ ಆಟಗಾರರು, ಫುಟ್ಬಾಲ್ ಆಟಗಾರರು, ನನ್ನಂತಹ ಅನೇಕ ಆಟಗಾರರು ಇದ್ದಾರೆ" ಎಂದು ಬೋನಿ ಹೇಳುತ್ತಾರೆ. ಅವರು ತಮ್ಮ ಲಿಂಗ ಗುರುತಿಸುವಿಕೆ, ಲಿಂಗ ಅಭಿವ್ಯಕ್ತಿ, ಲೈಂಗಿಕತೆ ಮತ್ತು ವೈದ್ಯಕೀಯ ಸಮುದಾಯದ ಸದಸ್ಯರು ಸೇರಿದಂತೆ ವೈವಿಧ್ಯಮಯ ಪ್ರೇಕ್ಷಕರ ಲೈಂಗಿಕ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಾರೆ.

PHOTO • Riya Behl
PHOTO • Riya Behl

ಎಡ: ಟೈಮ್ಸ್ ಆಫ್ ಇಂಡಿಯಾದ ನಗರ ಪುರವಣಿಯಲ್ಲಿ ಪ್ರಕಟವಾದ ಬೋನಿ ಕುರಿತ ಲೇಖನ. ಬಲ: ಬೋನಿ ಪಾಲ್ ಅವರ ಆಧಾರ್ ಕಾರ್ಡ್, ಅಲ್ಲಿ ಅವ ಲಿಂಗವನ್ನು ಪುರುಷ ಎಂದು ಹೇಳಲಾಗಿದೆ

ಇಂಟರ್‌ಸೆಕ್ಸ್ ವ್ಯಕ್ತಿಗಳು , ಅಥವಾ ಇಂಟರ್‌ಸೆಕ್ಸ್ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳು, ಸ್ತ್ರೀ ಅಥವಾ ಪುರುಷ ದೇಹಗಳಿಗೆ ವೈದ್ಯಕೀಯ ಮತ್ತು ಸಾಮಾಜಿಕ ಮಾನದಂಡಗಳಿಗೆ ಹೊಂದಿಕೆಯಾಗದ ಜನ್ಮಸಿದ್ಧ ಲೈಂಗಿಕ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ವ್ಯತ್ಯಾಸಗಳು ಬಾಹ್ಯ ಅಥವಾ ಆಂತರಿಕ ಸಂತಾನೋತ್ಪತ್ತಿ ಭಾಗಗಳು, ವರ್ಣತಂತು ಮಾದರಿಗಳು ಅಥವಾ ಹಾರ್ಮೋನುಗಳ ಮಾದರಿಗಳಲ್ಲಿರಬಹುದು. ಈ ವ್ಯತ್ಯಾಸಗಳು ಹುಟ್ಟುವಾಗ ಅಥವಾ ನಂತರದ ಜೀವನದಲ್ಲಿ ಕಾಣಿಸಿಕೊಳ್ಳಬಹುದು.  ಇಂಟರ್‌ಸೆಕ್ಸ್ ವ್ಯತ್ಯಾಸಗಳನ್ನು ಹೊಂದಿರುವ ವ್ಯಕ್ತಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಡಿಎಸ್‌ಡಿ - ಲಿಂಗ ಅಭಿವೃದ್ಧಿಯ ವ್ಯತ್ಯಾಸಗಳು/ಅಸ್ವಸ್ಥತೆಗಳು (Differences/Disorders of Sex Development) - ಎಂಬ ಪದವನ್ನು ಬಳಸುತ್ತಾರೆ .

ದೆಹಲಿಯ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನ ಶರೀರಶಾಸ್ತ್ರದ ಪ್ರಾಧ್ಯಾಪಕರಾದ ಡಾ.ಸತೇಂದ್ರ ಸಿಂಗ್, "ವೈದ್ಯಕೀಯ ಸಮುದಾಯದಲ್ಲಿ DSDಯನ್ನು ಸಾಮಾನ್ಯವಾಗಿ 'ಲೈಂಗಿಕ ಬೆಳವಣಿಗೆಯ ಅಸ್ವಸ್ಥತೆ' ಎಂದು ತಪ್ಪಾಗಿ ಉಲ್ಲೇಖಿಸಲಾಗುತ್ತದೆ." ಇಂಟರ್‌ಸೆಕ್ಸ್ ಜನರ ಆರೋಗ್ಯದ ಬಗೆಗಿನ ಅಜ್ಞಾನ ಮತ್ತು ಗೊಂದಲದಿಂದಾಗಿ, ಇಂಟರ್‌ಸೆಕ್ಸ್ ಜನರ ಸಂಖ್ಯೆಯ ಕುರಿತು ಯಾವುದೇ ಖಚಿತ ಅಂಕಿಸಂಖ್ಯೆ ಇಲ್ಲ ಎಂದು ಅವರು ಹೇಳುತ್ತಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ  ಪ್ರಕಟಿಸಿದ ಟ್ರಾನ್ಸ್‌ಜೆಂಟರ್ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾದ 2014ರ ವರದಿಯು , ಪ್ರತಿ 2,000 ಮಕ್ಕಳಲ್ಲಿ ಕನಿಷ್ಠ ಒಬ್ಬರು ಲೈಂಗಿಕ ಅಂಗರಚನೆಯೊಂದಿಗೆ ಜನಿಸುತ್ತಾರೆ " ಇದು ಪುರುಷ ಮತ್ತು ಸ್ತ್ರೀ ಗುಣಲಕ್ಷಣಗಳನ್ನು "ಪುರುಷ ಮತ್ತು ಸ್ತ್ರೀ ಗುಣಲಕ್ಷಣಗಳನ್ನು ಬೆರೆಸುವ ರೀತಿಯಿಂದಾಗಿ, ಒಬ್ಬ ತಜ್ಞರಿಗೂ, ಅವರಿಗೆ ಪುರುಷ ಅಥವಾ ಹೆಣ್ಣು ಎಂದು ಹಣೆಪಟ್ಟಿ ಹಚ್ಚಲು ಕಷ್ಟಕರವಾಗುವಂತೆ ಮಾಡುತ್ತದೆ" ಎಂದು ಉಲ್ಲೇಖಿಸಿದೆ.

ಈ ಸಂಗತಿಯ ಹೊರತಾಗಿಯೂ, "ಪ್ರಮಾಣಿತ ಪಠ್ಯಪುಸ್ತಕಗಳು [ಭಾರತದ ವೈದ್ಯಕೀಯ ಪಠ್ಯಕ್ರಮದಲ್ಲಿ] ಇನ್ನೂ 'ಹರ್ಮಾಫ್ರೋಡೈಟ್', 'ಅಸ್ಪಷ್ಟ ಜನನಾಂಗ', ಮತ್ತು 'ಅಸ್ವಸ್ಥತೆಗಳು' ಎನ್ನುವಂತಹ ಅಸಹ್ಯಕರ ಪದಗಳನ್ನು ಉದ್ಧರಿಸುತ್ತವೆ" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಅಂಗವಿಕಲರ ಹಕ್ಕುಗಳ ರಕ್ಷಕರೂ ಆಗಿರುವ ಡಾ. ಸಿಂಗ್ ಹೇಳುತ್ತಾರೆ.

ಮಹಿಳಾ ತಂಡದಿಂದ ಹೊರಹಾಕಿದ ನಂತರ, ಬೋನಿಯವರನ್ನು ಕೋಲ್ಕತಾದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅನುಮೋದಿಸಿದ ದೈಹಿಕ ಪರೀಕ್ಷೆಗಳಿಗೆ ಒಳಪಡಿಸಲಾಯಿತು ಮತ್ತು ನಂತರ ಅವರಿಗೆ ಯಾವುದೇ ಮಹಿಳಾ ಫುಟ್ಬಾಲ್ ತಂಡದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. "ಫುಟ್ಬಾಲ್ ಬದುಕು ಕಳೆದುಹೋದಾಗ, ನನ್ನ ಜೀವನವು ಕೊನೆಗೊಂಡಂತೆ ಭಾಸವಾಯಿತು. ನನಗೆ ಅನ್ಯಾಯವಾಯಿತು" ಎಂದು ಬೋನಿ ಹೇಳುತ್ತಾರೆ.

PHOTO • Riya Behl
PHOTO • Riya Behl

ಎಡ: ಬೋನಿ ಯವರ ಕೈಯಲ್ಲಿ ಬಟಾಬಿ ಅಥವಾ ಜಂಬುರಾ ( ಕಂಚಿಕಾಯಿ ). ಅವರು ಫುಟ್‌ಬಾಲ್‌ ಆಡಲು ಆರಂಭಿಸಿದ ಕಾಲದಲ್ಲಿ ಇದರ ದಪ್ಪ ಸಿಪ್ಪೆಯ ಕಾರಣ ಇದನ್ನೇ ಅವರು ಚೆಂಡಿಗೆ ಬದಲಾಗಿ ಬಳಸುತ್ತಿದ್ದರು . ಬಲ: ತನ್ನ ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ಹೊಂದಿರುವ ಶೋಕೇಸ್ ಎದುರು ಬೋನಿ

2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಭರವಸೆ ಮೂಡಿಸಿತು ಎಂದು ಅವರು ಹೇಳುತ್ತಾರೆ. ಅದು ಹೇಳುವಂತೆ, “ಒಬ್ಬರ ಲಿಂಗ ಗುರುತಿಸುವಿಕೆಯು ಘನತೆಯಿಂದ ಬದುಕುವ ಮೂಲಭೂತ ಹಕ್ಕಿನ ಹೃದಯಭಾಗದಲ್ಲಿದೆ. ಲಿಂಗವು ವ್ಯಕ್ತಿಯ ಗುರುತಿನ ಅವಿಭಾಜ್ಯ ಅಂಗವಾಗಿದೆ, ಜೊತೆಗೆ ವ್ಯಕ್ತಿಯ ಪ್ರಜ್ಞೆಯ ತಿರುಳು. ಆದ್ದರಿಂದ, ಲಿಂಗ ಗುರುತಿನ ಕಾನೂನು ಮಾನ್ಯತೆ ನಮ್ಮ ಸಂವಿಧಾನದ ಅಡಿಯಲ್ಲಿ ಘನತೆ ಮತ್ತು ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿದೆ." ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪೂಜ್ಯ ಮಾತಾ ನಸೀಬ್ ಕೌರ್ ಜಿ ಮಹಿಳಾ ಕಲ್ಯಾಣ ಸೊಸೈಟಿಯು ಟ್ರಾನ್ಸ್‌ಜೆಂಡರ್ ಎಂದು ಗುರುತಿಸಿಕೊಳ್ಳುವ ವ್ಯಕ್ತಿಗಳ ಕಾನೂನು ಮಾನ್ಯತೆಗಾಗಿ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ನಿರ್ಧಾರವು ಬೋನಿಯವರ ಪರಿಸ್ಥಿತಿಯನ್ನು ಮಾನ್ಯ ಮಾಡಿತು. “ಮಹಿಳಾ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವುದು ನನ್ನ ಆಸೆಯಾಗಿತ್ತು. ಆದರೆ ನಾನು ಏಕೆ ಆಡಲು ಸಾಧ್ಯವಿಲ್ಲ ಎಂದು ನಾನು AIFF ಬಳಿ ಕೇಳಿದಾಗ, ಅವರು ನಿಮ್ಮ ದೇಹ ಮತ್ತು ಕ್ರೋಮೋಸೋಮ್‌ಗಳಿಂದಾಗಿ ಆಡಲು ಸಾಧ್ಯವಿಲ್ಲವೆಂದು ಹೇಳಿದರು.”

ಕೋಲ್ಕತ್ತಾದ ಸಾಯಿ ನೇತಾಜಿ ಸುಭಾಷ್ ಈಸ್ಟರ್ನ್ ಸೆಂಟರ್ ಮತ್ತು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ಗೆ ಇಂಟರ್‌ಸೆಕ್ಸ್ ವೈವಿಧ್ಯತೆ ಹೊಂದಿರುವ ಆಟಗಾರರಿಗೆ ಲಿಂಗ ಮತ್ತು ಲಿಂಗ ಪರೀಕ್ಷಾ ನೀತಿಗಳ ಕಾರ್ಯವಿಧಾನದ ಬಗ್ಗೆ ಮಾಹಿತಿ ಕೋರಿ ಹಲವಾರು ಸಂದೇಶಗಳನ್ನು ಕಳುಹಿಸಲಾಗಿದೆ, ಆದರೆ ವರದಿಗಾರರಿಗೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

***

ಏಪ್ರಿಲ್ 2019ರಲ್ಲಿ, ಬದಲಾವಣೆಗೆ ಪಣ ತೊಟ್ಟು ನಿಲ್ಲಲು ನಿರ್ಧರಿಸಿದ ಬೋನಿ ಇಂಟರ್‌ಸೆಕ್ಸ್ ಹ್ಯೂಮನ್ ರೈಟ್ಸ್ ಇಂಡಿಯಾ (IHRE), ಇಂಟರ್‌ಸೆಕ್ಸ್ ವ್ಯಕ್ತಿಗಳು ಮತ್ತು ಅವರ ಬೆಂಬಲಿಗರ ಪ್ಯಾನ್-ಇಂಡಿಯಾ ನೆಟ್‌ವರ್ಕ್‌ನ ಸ್ಥಾಪಕ ಸದಸ್ಯರಾದರು. ಸಮುದಾಯವು ಇಂಟರ್ಸೆಕ್ಸ್ ವ್ಯಕ್ತಿಗಳ ಹಕ್ಕುಗಳನ್ನು ಉತ್ತೇಜಿಸುತ್ತದೆ, ಸಮಾಲೋಚನೆ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು ಅವರ ಸವಾಲುಗಳು ಮತ್ತು ಅಗತ್ಯಗಳ ಕುರಿತು ಕೆಲಸ ಮಾಡುತ್ತದೆ.

ಈ ನೆಟ್‌ವರ್ಕ್‌ನಲ್ಲಿ ಮಕ್ಕಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುವ ಇಂಟರ್‌ಸೆಕ್ಸ್ ವೈವಿಧ್ಯತೆಯನ್ನು ಹೊಂದಿರುವ ಏಕೈಕ ವ್ಯಕ್ತಿ ಬೋನಿ. IHRE ನ ಬೆಂಬಲಿಗರು ಮತ್ತು ಸದಸ್ಯರಾದ ಪುಷ್ಪಾ ಅಚಂತಾ ಹೇಳುತ್ತಾರೆ, “ಪಶ್ಚಿಮ ಬಂಗಾಳದ ಸರ್ಕಾರಿ ಆರೋಗ್ಯ ಮತ್ತು ಶಿಶುಪಾಲನಾ ಸಂಸ್ಥೆಗಳ ಮೂಲಕ ಬೋನಿಯವರ ಸಮಯೋಚಿತ ಮಧ್ಯಪ್ರವೇಶ ಅನೇಕ ಯುವಜನರು ತಮ್ಮ ದೇಹ ಮತ್ತು ಲೈಂಗಿಕ ಮತ್ತು ಲಿಂಗ ಗುರುತುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಸಹಾಯ ಮಾಡಿದೆ ಮತ್ತು ಅವರ ಪೋಷಕರಿಗೆ ಅಗತ್ಯ ಮತ್ತು ಸಾಧ್ಯವಿರುವ ಸಹಾಯಗಳನ್ನು ಒದಗಿಸಿದೆ."

PHOTO • Riya Behl
PHOTO • Riya Behl

ಎಡ: ಸ್ವಾತಿ (ಎಡ) ಬೋನಿಯವರು ತರಬೇತುದಾರರಾಗಿ ಅವರ ಅನುಕರಣೀಯ ಕೆಲಸಕ್ಕಾಗಿ 2021ರಲ್ಲಿ ಪಶ್ಚಿಮ ಬಂಗಾಳದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪಡೆದ ಪ್ರಶಸ್ತಿಯ ಉಲ್ಲೇಖವನ್ನು ಓದುವುದನ್ನು ವೀಕ್ಷಿಸುತ್ತಿದ್ದಾರೆ. ಬಲ: ಅಬೆಲ್ಲಾದಲ್ಲಿ ಅಕ್ಟೋಬರ್ 9, 2017ರಂದು ಪ್ರಕಟವಾದ ಲೇಖನ; ಇದರಲ್ಲಿ ಸಾಲ್ಟ್ ಲೇಕ್‌ನಲ್ಲಿ ಶಾಲಾ ತಂಡವು ಫುಟ್‌ಬಾಲ್ ಪಂದ್ಯವನ್ನು ಗೆದ್ದ ನಂತರ ಬೋನಿ ಅವರ ತರಬೇತಿಯನ್ನು ಪ್ರಶಂಸಿಸಲಾಯಿತು

ಅಥ್ಲೀಟ್ ಹಕ್ಕುಗಳ ಕಾರ್ಯಕರ್ತೆ ಡಾ.ಪಯೋಷ್ನಿ ಮಿತ್ರಾ ಹೇಳುತ್ತಾರೆ, “ಯುವ ಕ್ರೀಡಾಪಟುಗಳಲ್ಲಿ ತಮ್ಮ ದೈಹಿಕ ಸ್ವಾಯತ್ತತೆಯ ಬಗ್ಗೆ ಅರಿವು ಹೆಚ್ಚಾಗಿದೆ. ಬೋನಿ ಕಾಲದಲ್ಲಿ ಹೀಗಿರಲಿಲ್ಲ. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿರುವ ಮಹಿಳೆಯರು, ಕ್ರೀಡೆ, ದೈಹಿಕ ಶಿಕ್ಷಣ ಮತ್ತು ದೈಹಿಕ ಚಟುವಟಿಕೆಗಾಗಿನ ಜಾಗತಿಕ ವೀಕ್ಷಣಾಲಯದಲ್ಲಿ CEO ಆಗಿ, ಡಾ. ಮಿತ್ರಾ ಅವರು ಕ್ರೀಡೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಹರಿಸಲು ಏಷ್ಯಾ ಮತ್ತು ಆಫ್ರಿಕಾದ ಮಹಿಳಾ ಕ್ರೀಡಾಪಟುಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.

ಬೋನಿ ನೆನಪಿಸಿಕೊಳ್ಳುತ್ತಾರೆ, “ನಾನು (ವಿಮಾನ ನಿಲ್ದಾಣದಿಂದ) ಹಿಂತಿರುಗಿದಾಗ, ಸ್ಥಳೀಯ ಪತ್ರಿಕೆಗಳು ನನಗೆ ಕಿರುಕುಳ ನೀಡಿವೆ. ಪತ್ರಿಕೆಗಳಲ್ಲಿ ‘ಮಹಿಳಾ ತಂಡದಲ್ಲಿ ಒಬ್ಬ ಪುರುಷ ಆಡುತ್ತಿದ್ದಾನೆ’ಎಂಬ ಹೆಡ್‌ಲೈನ್‌ ನೀಡಿದ್ದವು. ಇಚ್ಛಾಪುರಕ್ಕೆ ಹಿಂದಿರುಗಿದ ನಂತರದ ದುಃಖದ ಅನುಭವವನ್ನು ಬೋನಿ ವಿವರಿಸುತ್ತಾರೆ, “ನನ್ನ ಪೋಷಕರು, ಸಹೋದರ ಮತ್ತು ಸಹೋದರಿ ಎಲ್ಲರೂ ಭಯಭೀತರಾಗಿದ್ದರು. ನನ್ನ ಇಬ್ಬರು ಸಹೋದರಿಯರು ಮತ್ತು ಅವರ ಅಳಿಯಂದಿರು ಅವಮಾನಿತರಾಗಿದ್ದಾರು. ನಾನು ಬೆಳಿಗ್ಗೆ ಮನೆಗೆ ಮರಳಿದೆ, ಆದರೆ ಸಂಜೆ ಮನೆ ಬಿಟ್ಟು ಓಡಿಹೋಗಬೇಕಾಯಿತು.”

ಬೋನಿ ಸುಮಾರು ಎರಡು ಸಾವಿರ ರೂಪಾಯಿ ಹಣ ಜೇಬಿನಲ್ಲಿಟ್ಟುಕೊಂಡು ಓಡಿಹೋದರು. ತಾನು ಮನೆಯಿಂದ ಹೊರಡುವ ದಿನ ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ. ತನಗೆ ಯಾರೂ ಪರಿಚಯವಿಲ್ಲದ ಸ್ಥಳಕ್ಕೆ ಹೋಗಬೇಕೆಂದು ಅವರು ಬಯಸಿದರು.

ಪಾಲ್ ಸಮುದಾಯಕ್ಕೆ ಸೇರಿದವರಾದ ಬೋನಿ ಹೇಳುತ್ತಾರೆ, "ನಾವು ಶಿಲ್ಪಿಗಳು. ನನಗೆ ಶಿಲ್ಪಗಳನ್ನು ಮಾಡುವುದು ಹೇಗೆಂದು ತಿಳಿದಿತ್ತು, ಆದ್ದರಿಂದ ನಾನು ಈ ಕೆಲಸ ಮಾಡಲು ಕೃಷ್ಣನಗರಕ್ಕೆ ಓಡಿಹೋದೆ." ಬೋನಿ ಅವರ ಚಿಕ್ಕಪ್ಪ ಅವರು ಬೆಳೆದ ಇಚ್ಚಾಪುರ ಗ್ರಾಮದಲ್ಲಿ ವಿಗ್ರಹಗಳನ್ನು ತಯಾರಿಸುತ್ತಿದ್ದರು. ಮೂರ್ತಿಗಳನ್ನು ತಯಾರಿಸುವ ಕೆಲಸದಲ್ಲಿ ಅಂಕಲ್‌ಗೆ ಸಹಾಯ ಮಾಡಿದ ಅನುಭವ, ಮಣ್ಣಿನ ಶಿಲ್ಪಗಳು ಮತ್ತು ಗೊಂಬೆಗಳಿಗೆ ಪ್ರಸಿದ್ಧವಾದ ಕೃಷ್ಣನಗರ ನಗರದಲ್ಲಿ ಬೋನಿಗೆ ಕೆಲಸ ಮಾಡಲು ಸಹಾಯ ಮಾಡಿತು. ಅವರ ಕೆಲಸವನ್ನು ಪರೀಕ್ಷಿಸಲು, ಭತ್ತದ ಹುಲ್ಲು ಮತ್ತು ಸೆಣಬಿನ ಹಗ್ಗ ಬಳಸಿ ವಿಗ್ರಹವನ್ನು ಮಾಡುವಂತೆ ಹೇಳಲಾಯಿತು. ಅಲ್ಲಿ ಬೋನಿಯವರಿಗೆ ದಿನಕ್ಕೆ 200 ರೂಪಾಯಿ ಸಂಬಳ ಸಿಕ್ಕಿತು ಮತ್ತು ರಹಸ್ಯವಾಗಿ ಜೀವನ ನಡೆಸಲು ಪ್ರಾರಂಭಿಸಿದರು.

PHOTO • Riya Behl
PHOTO • Riya Behl

ಎಡ: ಇಚ್ಛಾಪುರದಲ್ಲಿರುವ ತನ್ನ ಚಿಕ್ಕಪ್ಪನ ವಿಗ್ರಹ ತಯಾರಿಸುವ ಕಾರ್ಖಾನೆಯಲ್ಲಿ ಬೋನಿ, ಲ್ಲಿ ಯೇ ಅವ ರು ಸಹಾಯಕರಾಗಿದ್ದುಕೊಂಡು ಕೆಲಸವನ್ನು ಕಲಿತರು . ಬಲ: ಹುಲ್ಲು ಮತ್ತು ಸೆಣಬಿನಿಂದ ಮಾಡಿದ ಮೂರ್ತಿಯ (ವಿಗ್ರಹ) ರಚನೆ. ಕೃಷ್ಣನಗರದಲ್ಲಿ ಕೆಲಸಕ್ಕಾಗಿ ಪರೀಕ್ಷಿಸಿದಾಗ ಬೋನಿ ಇದೇ ರೀತಿಯ ವಿಗ್ರಹ ತಯಾರಿಸಿದ್ದರು

ಬೋನಿ ಅವರ ಪೋಷಕರು, ಅಧೀರ್ ಮತ್ತು ನಿವಾ, ತಮ್ಮ ಹಿರಿಯ ಮಗಳು ಶಂಕರಿ ಮತ್ತು ಮಗ ಭೋಲಾ ಅವರೊಂದಿಗೆ ಇಚ್ಛಾಪುರದಲ್ಲಿ ವಾಸಿಸುತ್ತಿದ್ದರು. ಬೋನಿ ಮೂರು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ಮನೆಗೆ ಹೋಗಲು ನಿರ್ಧರಿಸಿದಾಗ ಅದು ತಂಪಾದ ಬೆಳಗಿನ ಹೊತ್ತಾಗಿತ್ತು ಎಂದು ಬೋನಿ ನೆನಪಿಸಿಕೊಳ್ಳುತ್ತಾರೆ: "ಅವರು (ಸ್ಥಳೀಯರು) ಸಂಜೆ ನನ್ನ ಮೇಲೆ ದಾಳಿ ಮಾಡಿದರು. ನಾನು ಕೂಡಲೇ ತಪ್ಪಿಸಿಕೊಂಡು ಓಡತೊಡಗಿದೆ, ಆದರೆ ನನ್ನ ತಾಯಿ ನಾನು ಹೋಗುವುದನ್ನು ನೋಡಿ ಅಳುತ್ತಿದ್ದರು.”

ಅದೇನೂ ಅವರ ಪಾಲಿಗೆ ದೈಹಿಕವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದ ಮೊದಲ ಅಥವಾ ಕೊನೆಯ ಕ್ಷಣವಾಗಿರಲಿಲ್ಲ, ಆದರೆ ಆ ದಿನ ಅವರು ತನಗೆ ತಾನೇ ಭರವಸೆ ಕೊಟ್ಟುಕೊಂಡರು. ಅವರು ವಿವರಿಸುತ್ತಾರೆ, “ನಾನು ನನ್ನ ಸ್ವಂತ ಕಾಲಿನ ಮೇಲೆ ನಿಲ್ಲಬಲ್ಲೆ ಎಂದು ಎಲ್ಲರಿಗೂ ತೋರಿಸಲು ಹೋಗುತ್ತಿದ್ದೆ. ನನ್ನ ದೇಹದಲ್ಲಿ ಏನೇ ಸಮಸ್ಯೆಗಳಿದ್ದರೂ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ನಾನು ನಿರ್ಧರಿಸಿದೆ.” ಆಗ ಬೋನಿ ಶಸ್ತ್ರಚಿಕಿತ್ಸೆಯ ಸಹಾಯ ಪಡೆಯಲು ನಿರ್ಧರಿಸಿದರು.

ಅವರು ತಮ್ಮ ಜನನಾಂಗದ ಆಪರೇಷನ್ ಮಾಡಬಲ್ಲ ವೈದ್ಯರನ್ನು ಹುಡುಕತೊಡಗಿದರು ಮತ್ತು ಅಂತಿಮವಾಗಿ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿ ಒಬ್ಬ ವೈದ್ಯರನ್ನು ಕಂಡುಕೊಂಡರು, ಅಲ್ಲಿಗೆ ತಲುಪಲು ತಲುಪಲು ರೈಲಿನಲ್ಲಿ ನಾಲ್ಕು ಗಂಟೆಗಳನ್ನು ತೆಗೆದುಕೊಂಡಿತು. ಬೋನಿ ಹೇಳುತ್ತಾರೆ, “ಪ್ರತಿ ಶನಿವಾರ ಡಾ.ಬಿ.ಎನ್. ಚಕ್ರವರ್ತಿ ಅವರು ಸುಮಾರು 10ರಿಂದ 15 ವೈದ್ಯರೊಂದಿಗೆ ಕುಳಿತುಕೊಳ್ಳುತ್ತಿದ್ದರು. ಅವರೆಲ್ಲರೂ ನನ್ನನ್ನು ಪರೀಕ್ಷಿಸಿದರು." ಅವರು ತಿಂಗಳುಗಳ ಕಾಲ ಹಲವಾರು ಬಾರಿ ಪರೀಕ್ಷೆಗಳನ್ನು ಮಾಡಿದರು. "ನನ್ನ ವೈದ್ಯರು ಬಾಂಗ್ಲಾದೇಶದ ಜನರ ಮೇಲೆ ಮೂರು ಅದೇ ರೀತಿಯ ಶಸ್ತ್ರಚಿಕಿತ್ಸೆಗಳು ಮಾಡಿದರು ಮತ್ತು ಅವೆಲ್ಲವೂ ಯಶಸ್ವಿಯಾದವು" ಎಂದು ಬೋನಿ ಹೇಳುತ್ತಾರೆ, ಆದರೆ ಪ್ರತಿಯೊಬ್ಬರ ದೇಹವು ವಿಭಿನ್ನವಾಗಿರುತ್ತದೆ ಮತ್ತು ಆಪರೇಷನ್‌ ಮಾಡಿಸಿಕೊಳ್ಳುವ ಮೊದಲು ಅವರು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೇಳುತ್ತಾರೆ. ಬೋನಿ ಈ ಆಪರೇಷನ್‌ ಮಾಡಿಸಿಕೊಳ್ಳುವ ಮೊದಲು ಹಲವು ಬಾರಿ ವೈದ್ಯರೊಡನೆ ಸಮಾಲೋಚನೆ ನಡೆಸಿದ್ದರು.

ಶಸ್ತ್ರಚಿಕಿತ್ಸೆಗಳಿಗೆ ಸುಮಾರು 2 ಲಕ್ಷ ರೂ.ಗಳ ತನಕ ಬೇಕಿತ್ತು. ಆದರೆ ಈ ವಿಷಯದಲ್ಲಿ ಬೋನಿ ದೃಢ ನಿರ್ಧಾರ ತಳೆದಿದ್ದರು. 2003ರಲ್ಲಿ, ಬೋನಿ ಮೊದಲಿಗೆ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಪ್ರಾರಂಭಿಸಿದರು, ಮತ್ತು ಟೆಸ್ಟೋಸ್ಟೆರಾನ್- ಅಂಶವನ್ನು ಪ್ರಚೋದಿಸುವ ಚುಚ್ಚುಮದ್ದಾಗಿರುವ ಟೆಸ್ಟೋವಿರಾನ್ 250 ಮಿಗ್ರಾಂ ಖರೀದಿಸಲು ತಿಂಗಳಿಗೆ ಸುಮಾರು 100 ರೂಪಾಯಿಗಳನ್ನು ಖರ್ಚು ಮಾಡಿದರು. ವೈದ್ಯರೊಂದಿಗಿನ ಸಮಾಲೋಚನೆ, ಔಷಧಿ ಇತ್ಯಾದಿ ಖರ್ಚುಗಳನ್ನು ನಿಭಾಯಿಸುವ ಸಲುವಾಗಿ ಕೊಲ್ಕತ್ತಾದ ಸುತ್ತಮುತ್ತಲಿನ ಊರುಗಳಲ್ಲಿ ಬೋನಿ ಪೇಂಟಿಂಗ್‌ ರೀತಿಯ ದಿನಗೂಲಿ ಕೆಲಸಗಳನ್ನು ಮಾಡತೊಡಗಿದರು. ಇದರ ಜೊತೆಗೆ ಕೃಷ್ಣನಗರದಲ್ಲಿನ ಮೂರ್ತಿಗಳನ್ನು ತಯಾರಿಸುವ ಕೆಲಸವನ್ನೂ ಮಾಡುತ್ತಿದ್ದರು.

"ಸೂರತ್‌ನ ಕಾರ್ಖಾನೆಯೊಂದರಲ್ಲಿ ಶಿಲ್ಪಗಳನ್ನು ತಯಾರಿಸುವ ಒಬ್ಬ ವ್ಯಕ್ತಿಯೊಬ್ಬರು ನನಗೆ ಪರಿಚಿತರಿದ್ದರು, ಆಗ ಅವರೊಡನೆ ನಾನು ಅವನೊಂದಿಗೆ ಅಲ್ಲಿಗೂ ಹೋಗಿದ್ದೆ" ಎಂದು ಬೋನಿ ಹೇಳುತ್ತಾರೆ. ವಾರದಲ್ಲಿ ಆರು ದಿನ ಅಲ್ಲಿ ದುಡಿದು ಗಣೇಶ ಚತುರ್ಥಿ, ಜನ್ಮಾಷ್ಟಮಿ, ಮತ್ತಿತರ ಹಬ್ಬಗಳಿಗೆ ಮೂರ್ತಿ ತಯಾರಿಸಿ ದಿನಕ್ಕೆ 1000 ರೂ. ಸಂಪಾದಿಸುತ್ತಿದ್ದೆ.

ಸಾಮಾನ್ಯವಾಗಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ನಡೆಯುವ ದುರ್ಗಾಪೂಜೆ ಮತ್ತು ಜಗದ್ಧಾತ್ರಿ ಪೂಜೆಗಾಗಿ ಅವರು ಪ್ರತಿ ವರ್ಷ ಕೃಷ್ಣನಗರಕ್ಕೆ ಹಿಂತಿರುಗುತ್ತಿದ್ದರು. ಈ ಪ್ರವೃತ್ತಿಯು 2006ರವರೆಗೂ ಮುಂದುವರೆಯಿತು, ನಂತರದ ದಿನಗಳಲ್ಲಿ ಬೋನಿ ಕೃಷ್ಣನಗರದಲ್ಲಿ ಒಪ್ಪಂದದ ಮೇಲೆ ವಿಗ್ರಹಗಳಿಗೆ ಆರ್ಡರ್ ತೆಗೆದುಕೊಳ್ಳಲು ಪ್ರಾರಂಭಿಸಿದರು. ಅವರು ಹೇಳುತ್ತಾರೆ, “ನಾನು ಸೂರತ್‌ನಲ್ಲಿ 150-200 ಅಡಿ ಎತ್ತರದ ಶಿಲ್ಪಗಳನ್ನು ಹೇಗೆ ಮಾಡಬೇಕೆಂದು ಕಲಿತಿದ್ದೆ ಮತ್ತು ಅಂತಹ ಶಿಲ್ಪಗಳಿಗೆ ಇಲ್ಲಿ ಬೇಡಿಕೆ ಇತ್ತು. ನಾನು ಒಬ್ಬ ಕೆಲಸಗಾರನನ್ನು ನೇಮಿಸಿಕೊಳ್ಳುತ್ತಿದ್ದೆ ಮತ್ತು ಆಗಸ್ಟ್ ಮತ್ತು ನವೆಂಬರ್ ನಡುವಿನ ಹಬ್ಬದ ಸಮಯದಲ್ಲಿ ನಾವು ಸಾಕಷ್ಟು ಹಣವನ್ನು ಗಳಿಸುತ್ತಿದ್ದೆವು.

PHOTO • Riya Behl
PHOTO • Riya Behl

ಎಡ: ಬೋನಿ ಮತ್ತು ಸ್ವಾತಿ. ಬಲ: ಇಚ್ಚಾಪುರ ಗ್ರಾಮದ ಕುಟುಂಬದ ಮನೆಯಲ್ಲಿ ಅವರ ತಾಯಿ ನಿವಾ ಅವರೊಂದಿಗೆ

ಈ ಸಮಯದಲ್ಲಿ, ಬೋನಿ ಕೃಷ್ಣನಗರದ ವಿಗ್ರಹ ತಯಾರರಕಿ ಸ್ವಾತಿ ಸರ್ಕಾರ್ ಅವರನ್ನು ಪ್ರೀತಿಸುತ್ತಿದ್ದರು.

ಸ್ವಾತಿ ಶಾಲೆಯಿಂದ ಹೊರಗುಳಿದಿದ್ದರು ಮತ್ತು ಜೀವನೋಪಾಯಕ್ಕಾಗಿ ಅವರು ತನ್ನ ತಾಯಿ ಮತ್ತು ನಾಲ್ಕು ಸಹೋದರಿಯರೊಂದಿಗೆ ಶಿಲ್ಪಗಳ ಅಲಂಕಾರದ ಕೆಲಸ ಮಾಡುತ್ತಿದ್ದರು. ಬೋನಿಯವರ ಪಾಲಿಗೆ ಇದು ಕಷ್ಟದ ಸಮಯವಾಗಿತ್ತು. ಬೋನಿ ನೆನಪಿಸಿಕೊಳ್ಳುತ್ತಾರೆ, "ನಾನು ಅವಳಿಗೆ ನನ್ನ ಬಗ್ಗೆ ಹೇಳಬೇಕಾಗಿತ್ತು. ನನಗೆ ವೈದ್ಯರ ಮೇಲೆ ವಿಶ್ವಾಸವಿತ್ತು (ನನ್ನ ಶಸ್ತ್ರಚಿಕಿತ್ಸೆಯ ಯಶಸ್ಸಿನ ಬಗ್ಗೆ), ಹಾಗಾಗಿ ನಾನು ಅವಳಿಗೆ ಹೇಳಲು ನಿರ್ಧರಿಸಿದೆ.

ಸ್ವಾತಿ ಮತ್ತು ಆಕೆಯ ತಾಯಿ ದುರ್ಗಾ ಬೋನಿಯವರನ್ನು ಬೆಂಬಲಿಸಿದರು, ಮತ್ತು ಸ್ವಾತಿ 2006ರಲ್ಲಿ ಬೋನಿಯ ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು. ಬೋನಿ ಮತ್ತು ಸ್ವಾತಿ ಮೂರು ವರ್ಷಗಳ ನಂತರ ಜುಲೈ 29, 2009ರಂದು ವಿವಾಹವಾದರು.

ಸ್ವಾತಿ ತನ್ನ ತಾಯಿ ಬೋನಿಯವರಿಗೆ ಆ ರಾತ್ರಿ ಹೇಳಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ, “ನನ್ನ ಮಗಳು ನಿನ್ನ ದೇಹದ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಾಳೆ. ಆದರೂ ಅವಳು ನಿನ್ನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ, ನಾನು ಏನು ಹೇಳಲಿ? ತುಮಿ ಶಾತ್ ದಿಬಾ, ತುಮಿ ಥಾಕ್ಬಾ (ನೀನು ಅವಳೊಡನೆ ಇರಬೇಕು, ನೀನು ಇರುತ್ತೀ)."

***

ಬೋನಿ ಮತ್ತು ಸ್ವಾತಿಯ ವೈವಾಹಿಕ ಜೀವನವು ಅವರ ಸ್ಥಳಾಂತರದೊಂದಿಗೆ ಪ್ರಾರಂಭವಾಯಿತು. ಕೃಷ್ಣನಗರದಲ್ಲಿ ಜನರು ಕೊಳಕು ಮಾತನಾಡಲು ಪ್ರಾರಂಭಿಸಿದರು, ಆದ್ದರಿಂದ ಇಬ್ಬರೂ ಉತ್ತರಕ್ಕೆ 500 ಕಿಮೀ ದೂರದ ಡಾರ್ಜಿಲಿಂಗ್ ಜಿಲ್ಲೆಯ ಮಾಟಿಗಾರಕ್ಕೆ ಹೋಗಲು ನಿರ್ಧರಿಸಿದರು, ಅಲ್ಲಿ ಯಾರೂ ಅವರನ್ನು ಗುರುತಿಸಲಿಲ್ಲ. ಬೋನಿಗೆ ಹತ್ತಿರದ ವಿಗ್ರಹ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಸಿಕ್ಕಿತು. ಬೋನಿ ಹೇಳುತ್ತಾರೆ, “ಅವರು ನನ್ನ ಕೆಲಸವನ್ನು ನೋಡಿ ನನಗೆ 600 ರೂ. ಸಂಬಳ ಕೊಡುವುದಾಗಿ ಹೇಳಿದರು. ನಾನು ಒಪ್ಪಿಕೊಂಡೆ. ಮಾಟಿಗಾರದ ಜನರು ನನಗೆ ಅಪಾರ ಪ್ರೀತಿ ನೀಡಿದ್ದಾರೆ” ಎನ್ನುತ್ತಾರವು. ಅವನೊಂದಿಗೆ ಕೆಲಸ ಮಾಡುತ್ತಿದ್ದ ಪುರುಷರು ತನ್ನನ್ನು ಹೇಗೆ ಪರಿಗಣಿಸಿದ್ದರೆಂದು ಅವರು ನೆನಪಿಸಿಕೊಳ್ಳುತ್ತಾರೆ. ಸಂಜೆ ಟೀ ಅಂಗಡಿಗಳಲ್ಲಿ ಅವರೆಲ್ಲ ಒಟ್ಟಿಗೆ ಸೇರುತ್ತಿದ್ದರು.

PHOTO • Riya Behl
PHOTO • Riya Behl

ಎಡ: ಊರಿನ ಚಹಾದಂಗಡಿಯಲ್ಲಿ ಬೋನಿ. ಬಲ: ಮರದ ವ್ಯಾಪಾರಿ ಪುಷ್ಪನಾಥ್ ದೇವನಾಥ್ (ಎಡ), ಮತ್ತು ಎಳನೀರು ಮಾರಾಟಗಾರ ಗೋರಂಗ್ ಮಿಶ್ರಾ (ಬಲ) ಅವರೊಂದಿಗೆ ಕುಳಿತಿದ್ದಾರೆ

ಆದರೆ ಬೋನಿಯವರ ಕುಟುಂಬ ಅವರನ್ನು ಸ್ವೀಕರಿಸಲು ಸಿದ್ಧರಿಲ್ಲದ ಕಾರಣ ಇಬ್ಬರೂ ಇಚ್ಛಾಪುರಕ್ಕೆ ಮರಳಲು ಸಾಧ್ಯವಾಗಲಿಲ್ಲ. ಬೋನಿಯವರ ತಂದೆ ನಿಧನರಾದಾಗ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಲಿಲ್ಲ. ಕೇವಲ ಆಟಗಾರರಷ್ಟೇ ಅಲ್ಲ, ಸಮಾಜದ ಭಯದಿಂದ ನನ್ನಂತೆ ಮನೆಯಿಂದ ಹೊರಬರದ ಇನ್ನೂ ಅನೇಕ ಮಂದಿ ಇದ್ದಾರೆ’ಎಂದು ಬೋನಿ ಹೇಳುತ್ತಾರೆ.

2016ರ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೋನಿಯವರ ಜೀವನದ ಕುರಿತು ಐ ಆಮ್ ಬೋನಿ ಎಂಬ ಸಾಕ್ಷ್ಯಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಾಗ ತಮ್ಮ ಹೋರಾಟವನ್ನು ಗುರುತಿಸಲಾಗಿದೆಯೆಂಬ ಭಾವ ಇಬ್ಬರಲ್ಲೂ ಮೂಡಿತು. ಅದಾದ ಕೆಲವು ದಿನಗಳಲ್ಲೇ, ಬೋನಿಯವರಿಗೆ ಕಿಶಾಲಯ ಚಿಲ್ಡ್ರನ್ಸ್‌ ಹೋಮ್ಸ್‌ ಎನ್ನುವ ಸಂಸ್ಥೆಯಲ್ಲಿ ಫುಟ್ಬಾಲ್ ತರಬೇತುದಾರರಾಗಿ ಕೆಲಸ ನೀಡಲಾಯಿತು. ಕಿಶಾಲಯ ಹೋಮ್ ಎಂಬುದು ಬರಾಸತ್ ನಗರದಲ್ಲಿ ನೆಲೆಗೊಂಡಿರುವ ಸರ್ಕಾರದ ಮಕ್ಕಳ ಆರೈಕೆ ಸಂಸ್ಥೆಯಾಗಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪಶ್ಚಿಮ ಬಂಗಾಳ ಆಯೋಗದಿಂದ (WBCPCR) ಕಾರ್ಯನಿರ್ವಹಿಸುತ್ತದೆ. WBCPCR ನ ಅಧ್ಯಕ್ಷೆ ಅನನ್ಯಾ ಚಕ್ರವರ್ತಿ ಚಟರ್ಜಿ ಹೇಳುತ್ತಾರೆ, "ಅವರು ಮಕ್ಕಳಿಗೆ ಸ್ಫೂರ್ತಿಯಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ. ಬೋನಿ ಅವರನ್ನು ನಾವು ತರಬೇತುದಾರರನ್ನಾಗಿ ನೇಮಿಸಿದಾಗ, ಅವರು ರಾಜ್ಯಕ್ಕಾಗಿ ಆಡಿದ ಉತ್ತಮ ಫುಟ್ಬಾಲ್ ಆಟಗಾರ ಎಂದು ನಮಗೆ ತಿಳಿದಿತ್ತು. ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಆ ಸಮಯದಲ್ಲಿ ಅವರಿಗೆ ಯಾವುದೇ ಕೆಲಸವಿರಲಿಲ್ಲ. ಆದ್ದರಿಂದ ಅವರು ಎಂತಹ ಉತ್ತಮ ಆಟಗಾರ ಎಂಬುದನ್ನು ನಾವು ನೆನಪಿಸಿಕೊಳ್ಳುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ.”

ಬೋನಿ ಏಪ್ರಿಲ್ 2017ರಿಂದ ಅಲ್ಲಿ ತರಬೇತಿದಾರರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ಚಿತ್ರಕಲೆ ಮತ್ತು ಶಿಲ್ಪಕಲೆಯನ್ನೂ ಕಲಿಸುತ್ತಾರೆ. ಅವರು ತಮ್ಮ ಗುರುತಿನ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ ಮತ್ತು ಹಲವರ ಪಾಲಿಗೆ ವಿಶ್ವಾಸಾರ್ಹರಾಗಿದ್ದಾರೆ. ಆದರೂ, ಅವರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಅವರು ಹೇಳುತ್ತಾರೆ, “ನನಗೆ ಯಾವುದೇ ಶಾಶ್ವತ ಕೆಲಸವಿಲ್ಲ. ಕೆಲಸಕ್ಕೆ ಕರೆದ ದಿನಗಳಿಗೆ ಮಾತ್ರ ನನಗೆ ಸಂಬಳ ನೀಡಲಾಗುತ್ತದೆ.” ಅವರು ಸಾಮಾನ್ಯವಾಗಿ ತಿಂಗಳಿಗೆ ಸುಮಾರು 14,000 ರೂಪಾಯಿಗಳನ್ನು ಗಳಿಸುತ್ತಾರೆ, ಆದರೆ 2020ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ, ಅವರಿಗೆ ನಾಲ್ಕು ತಿಂಗಳವರೆಗೆ ಯಾವುದೇ ಆದಾಯವಿರಲಿಲ್ಲ.

ಫೆಬ್ರವರಿ 2020ರಲ್ಲಿ, ಬೋನಿ ಇಚ್ಚಾಪುರದಲ್ಲಿರುವ ತನ್ನ ತಾಯಿಯ ಮನೆಯಿಂದ ಸ್ವಲ್ಪ ದೂರದಲ್ಲಿ ಮನೆ ನಿರ್ಮಿಸಲು ಐದು ವರ್ಷಗಳ ಅವಧಿಯ ಸಾಲವನ್ನು ತೆಗೆದುಕೊಂಡರು, ಅಲ್ಲಿ ಅವರು ಈಗ ಸ್ವಾತಿ ಮತ್ತು ಅವರ ಸಹೋದರ, ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಾರೆ. ಬೋನಿ ಜೀವನ ಪರ್ಯಂತ ಪದೇ ಪದೇ ಓಡಿ ಹೋಗಬೇಕಾಗಿ ಬಂದಿದ್ದ ಮನೆ ಇದೇ. ಫುಟ್ಬಾಲ್ ಆಟಗಾರನಾಗಿ ಬೋನಿ ಗಳಿಸಿದ ಹಣವನ್ನು ಇದೇ ಮನೆಯನ್ನು ನಿರ್ಮಿಸಲು ಖರ್ಚು ಮಾಡಲಾಯಿತು. ಸ್ವಾತಿ ಮತ್ತು ಬೋನಿ ಅದೇ ಮನೆಯ ಸಣ್ಣ ಕೋಣೆಯೊಂದರಲ್ಲಿ ಈಗ ವಾಸವಿದ್ದಾರೆ. ಮನೆಯವರು ಈಗಲೂ ಅವರನ್ನು ಸಂಪೂರ್ಣವಾಗಿ ಸ್ವೀಕರಿಸಿಲ್ಲ. ಅವರು ತಮ್ಮ ಆಹಾರವನ್ನು ಕೋಣೆಯ ಹೊರಗಿನ ಸಣ್ಣ ಜಾಗದಲ್ಲಿ ಗ್ಯಾಸ್-ಸ್ಟೌವ್ ಮೇಲೆ ಬೇಯಿಸುತ್ತಾರೆ.

PHOTO • Riya Behl
PHOTO • Riya Behl

ಎಡ: ಸ್ವಾತಿ ಮತ್ತು ಬೋನಿ ಇಚ್ಚಾಪುರದಲ್ಲಿ ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಯ ಹೊರಗೆ ನಿಂತಿರುವುದು. ಬಲ: ಮನೆ ಪೂರ್ಣಗೊಂಡ ನಂತರ ತಮ್ಮ ಪುಟ್ಟ ಮಲಗುವ ಕೋಣೆಯಲ್ಲಿರುವ ಈ ಟ್ರೋಫಿಗಳ ಶೆಲ್ಫ್ ಶಾಶ್ವತ ಮನೆಯನ್ನು ಕಂಡುಕೊಳ್ಳುತ್ತದೆ ಎಂದು ದಂಪತಿಗಳು ಆಶಿಸುತ್ತಾರೆ

ಬೋನಿ ತಮ್ಮ ಜೀವನಾಧಾರಿತ ಚಲನಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಬರುವ ಹಣದಿಂದ 3 ಲಕ್ಷದ 45 ಸಾವಿರ ಮೊತ್ತದ ಸಣ್ಣ ಗೃಹ ಸಾಲವನ್ನು ತೀರಿಸಲು ಆಶಿಸಿದರು. ಆದರೆ ಮುಂಬೈಯವರಾದ ಚಲನಚಿತ್ರ ನಿರ್ಮಾಪಕರಿಗೆ ಚಿತ್ರವನ್ನು ಮಾರಾಟ ಮಾಡಲು ಸಾಧ್ಯವಾಗಲಿಲ್ಲ ಮತ್ತು ಆದ್ದರಿಂದ ಬೋನಿ ಅವರ ಸಾಲವು ಇನ್ನೂ ಬಾಕಿ ಉಳಿದಿದೆ.

ಸರ್ಟಿಫಿಕೇಟ್‌ಗಳು ಮತ್ತು ಮಿನುಗುವ ಟ್ರೋಫಿಗಳಿಂದ ತುಂಬಿದ ಬೀರು ಮುಂದೆ ಕುಳಿತು, ಬೋನಿ ಇಂಟರ್‌ಸೆಕ್ಸ್ ಮ್ಯಾನ್ ಆಗಿ ತನ್ನ ಜೀವನದ ಬಗ್ಗೆ ಮಾತನಾಡುತ್ತಾರೆ. ಜೀವನದ ಅನಿಶ್ಚಿತತೆಗಳ ಹೊರತಾಗಿಯೂ, ಅವರು ಮತ್ತು ಸ್ವಾತಿ ಎಚ್ಚರಿಕೆಯಿಂದ ವೃತ್ತಪತ್ರಿಕೆ ತುಣುಕುಗಳು, ಛಾಯಾಚಿತ್ರಗಳು ಮತ್ತು ಸ್ಮರಣಿಕೆಗಳನ್ನು ಕೆಂಪು ಸೂಟ್‌ಕೇಸ್‌ನಲ್ಲಿ ಕಾಪಿಟ್ಟುಕೊಂಡಿದ್ದಾರೆ, ಅದನ್ನು ಸದ್ಯ ಬೀರುವಿನ ಮೇಲೆ ಇರಿಸಲಾಗಿದೆ. ಎರಡು ವರ್ಷಗಳ ಹಿಂದೆ ಕಟ್ಟಲು ಆರಂಭಿಸಿದ ಮನೆಯಲ್ಲಿ ಆದಷ್ಟು ಬೇಗ ಈ ಕಪಾಟಿಗೆ ಶಾಶ್ವತ ಸ್ಥಾನ ಸಿಗಲಿ ಎಂದು ಆಶಿಸುತ್ತಿದ್ದಾರೆ.

ಬೋನಿ ಹೇಳುತ್ತಾರೆ, "ಕೆಲವೊಮ್ಮೆ, ನಾನು ಈಗಲೂ ಆಗಸ್ಟ್ 15 ರಂದು (ಸ್ವಾತಂತ್ರ್ಯ ದಿನ) ನನ್ನ ಹಳ್ಳಿಯಲ್ಲಿ ಕ್ಲಬ್‌ಗಳೊಂದಿಗೆ ಸೌಹಾರ್ದ ಪಂದ್ಯಗಳನ್ನು ಆಡುತ್ತೇನೆ, ಆದರೆ ನನಗೆ ಮತ್ತೆ ಭಾರತಕ್ಕಾಗಿ ಆಡಲು ಅವಕಾಶ ಸಿಗಲೇ ಇಲ್ಲ"

ಅನುವಾದ: ಶಂಕರ. ಎನ್. ಕೆಂಚನೂರು

Riya Behl

রিয়া বেহ্‌ল পিপলস্‌ আর্কাইভ অফ রুরাল ইন্ডিয়ায় (পারি) কর্মরত বরিষ্ঠ সহকারী সম্পাদক। মাল্টিমিডিয়া সাংবাদিক রিয়া লিঙ্গ এবং শিক্ষা বিষয়ে লেখালিখি করেন। এছাড়া তিনি পারির সঙ্গে কাজে আগ্রহী পড়ুয়াদের মধ্যে কাজ করেন, অন্যান্য শিক্ষাবিদের সঙ্গে পারির কাহিনি স্কুল-কলেজের শিক্ষাক্রমে অন্তর্ভুক্তির জন্যও রিয়া প্রয়াসী।

Other stories by Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru