“ಗೀತಾ ನೋವಿನಿಂದ ಬಳಲುತ್ತಿದ್ದರು, ಅವರಿಗೆ ತೀವ್ರ ಜ್ವರ ಬಂದಿತ್ತು, ಇದರಿಂದಾಗಿ ಅವರು ಮೂರ್ಛೆ ಹೋಗಿದ್ದರು.ಮರುದಿನ ಅವರು ವಾಂತಿಯನ್ನು ಸಹ ಮಾಡಿಕೊಳ್ಳುತ್ತಿದ್ದರು, ಇದರಿಂದಾಗಿ ನಾನು ಸಹಜವಾಗಿ ಭಯಬೀತನಾಗಿದ್ದೆ” ಎಂದು ಸತೇಂದರ್ ಸಿಂಗ್ ಹೇಳುತ್ತಾರೆ.

ಮರುದಿನ, ಮೇ 17ರ ಭಾನುವಾರದ ಹೊತ್ತಿಗೆ, ಮುಂದೆ ಏನು ಮಾಡಬೇಕೆಂದು ಸತೇಂದರ್ ಅವರಿಗೆ ತೋಚಿರಲಿಲ್ಲ. ಆಗ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ತಲುಪಲು ಚಾರಿಟಬಲ್ ಟ್ರಸ್ಟ್‌ನೊಂದಿಗೆ ಕೆಲಸ ಮಾಡುವ ಆಂಬ್ಯುಲೆನ್ಸ್ ಚಾಲಕನಿಗೆ ಫೋನ್ ಮಾಡಿದರು. ಅವರು ಅಲ್ಲಿಗೆ ಬಂದ ಕೂಡಲೇ ಗೀತಾ ಅವರನ್ನು ಅಪಘಾತದ ವಾರ್ಡ್‌ಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆಗೆ ಕೋವಿಡ್ -19 ಪರೀಕ್ಷೆಗೆ ಒಳಪಡಿಸಿದರು. ಸೋಮವಾರದಂದು ಆಕೆಯ ಫಲಿತಾಂಶ ಪಾಸಿಟಿವ್ ಎಂದು ಧೃಡಪಟ್ಟಿತು.

ಗೀತಾ ಅವರಿಗೆ ಉದರ ಕ್ಯಾನ್ಸರ್ ಇದೆ. ಸುಮಾರು ಎರಡು ವಾರಗಳ  ಹಿಂದೆ ಅವರು ಮತ್ತು ಸತೇಂದರ್ ಸೆಂಟ್ರಲ್ ಮುಂಬಯಿಯ ಪರೇಲ್ ಪ್ರದೇಶದ ಟಾಟಾ ಆಸ್ಪತ್ರೆಯ ಬಳಿಯ ಫುಟ್‌ಪಾತ್‌ಗೆ ವಾಪಸ್ಸಾಗಿದ್ದರು. ಅದಕ್ಕೂ ಕೆಲವು ವಾರಗಳ ಮೊದಲು, ಅವರು ಆಸ್ಪತ್ರೆಯಿಂದ 50 ಕಿಲೋಮೀಟರ್ ದೂರದಲ್ಲಿರುವ ಡೊಂಬಿವಿಲಿಯಲ್ಲಿ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಅದೂ ಅವರಿಗೆ ಸಾಕಷ್ಟು ಮನವಿ ಮಾಡಿಕೊಂಡಿದ್ದಲ್ಲದೆ ಸಂಬಂಧಿಕರಿಗೆ ಆಹಾರದ ಖರ್ಚು ಮತ್ತು ಬಾಡಿಗೆ ಹಣ ನೀಡುವ ಭರವಸೆ ನೀಡಿದ ನಂತರವೇ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡಲಾಯಿತು.

ಗೀತಾ (40) ಮತ್ತು ಸತೇಂದರ್ ಸಿಂಗ್ (42) ನವೆಂಬರ್‌ನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲಕರಂಜಿ ಪಟ್ಟಣದಿಂದ ಮುಂಬೈಗೆ ಆಗಮಿಸಿದ್ದಾರೆ. ಅವರ 16 ವರ್ಷದ ಮಗ ಬಾದಲ್ ಮತ್ತು 12 ವರ್ಷದ ಮಗಳು ಖುಷಿ, ಸತೇಂದರ್ ಅವರ ಹಿರಿಯ ಸಹೋದರ ಸುರೇಂದ್ರ ಅವರೊಂದಿಗೆ ಇಚಲಕರಂಜಿಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು ಒಂದು ದಶಕದ ಹಿಂದೆ ಈ ಕುಟುಂಬವು ಬಿಹಾರದ ರೋಹ್ತಾಸ್ ಜಿಲ್ಲೆಯ ದಿನಾರಾ ಬ್ಲಾಕ್‌ನ ಕಾನಿಯರಿ ಗ್ರಾಮದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದಿತ್ತು. ಸತೇಂದರ್ ಇಚಲಕರಂಜಿಯ ಪವರ್‌ಲೂಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಗೀತಾ ಅವರ ಜೊತೆ ಮುಂಬೈಗೆ ತೆರಳುವ ಮೊದಲು ಅವರು ತಿಂಗಳಿಗೆ 7000 ರೂ.ಗಳಂತೆ ದುಡಿಯುತ್ತಿದ್ದರು.

"ನಾವು ಶೀಘ್ರದಲ್ಲೇ ಹಿಂದಿರುಗುತ್ತೇವೆ ಎಂದು ನಾವು ನಮ್ಮ ಮಕ್ಕಳಿಗೆ ಭರವಸೆ ನೀಡಿದ್ದೇವೆ, ಆದರೆ ಅವರ ಮುಖಗಳನ್ನು ನಾವು ಯಾವಾಗ ನೋಡುತ್ತೇವೆ ಎನ್ನುವುದು ಈಗ ಗೊತ್ತಾಗುತ್ತಿಲ್ಲ" ಎಂದು ಗೀತಾ ಮಾರ್ಚ್ ತಿಂಗಳಲ್ಲಿ ಹೇಳಿದ್ದರು.

ನವೆಂಬರ್‌ನಲ್ಲಿ ಮುಂಬೈಗೆ ಬಂದಾಗ, ಅವರು ಉತ್ತರ ಉಪನಗರ ಗೋರೆಗಾಂವ್‌ನಲ್ಲಿ, ಸತೇಂದರ್ ಅವರ ಸೋದರ ಸಂಬಂಧಿಯೊಂದಿಗೆ ಉಳಿದುಕೊಂಡಿದ್ದರು. ಆದರೆ ಕೋವಿಡ್-19ರ ಭಯದಿಂದ,  ಅವರ ಸೋದರ ಸಂಬಂಧಿ ಹೊರಹೋಗುವಂತೆ ವಿನಂತಿಸಿದ್ದರು. ಮಾರ್ಚ್ 20ರಂದು ನಾನು ಅವರನ್ನು ಭೇಟಿಯಾದಾಗ "ನಾವು ನಿಲ್ದಾಣಗಳಲ್ಲಿ ಮತ್ತು ಈ ಫುಟ್‌ಪಾತ್‌ನಲ್ಲಿದ್ದೆವು" ಎಂದು ಗೀತಾ ಹೇಳಿದ್ದರು. ನಂತರ ಅವರು ಡೊಂಬಿವಲಿಗೆ ತೆರಳಿದ್ದರು. (ನೋಡಿ: Locked down with cancer on Mumbai’s footpaths )

Satender and Geeta Singh lived on the footpath for two days, where rats scurry around, before shifting to their relative's place in Dombivali (left). They had moved back to the footpath outside Mumbai's Tata Memorial Hospital two weeks ago (right)
PHOTO • Aakanksha
Satender and Geeta Singh lived on the footpath for two days, where rats scurry around, before shifting to their relative's place in Dombivali (left). They had moved back to the footpath outside Mumbai's Tata Memorial Hospital two weeks ago (right)
PHOTO • Abhinay Lad

ಎಡಕ್ಕೆ: ಸತೇಂದರ್ ಮತ್ತು ಗೀತಾ ಸಿಂಗ್ ಡೊಂಬಿವಾಲಿಯಲ್ಲಿ ತಮ್ಮ ಸಂಬಂಧಿಕರ ಸ್ಥಳಕ್ಕೆ ಸ್ಥಳಾಂತರಗೊಳ್ಳುವ ಮೊದಲು ಎರಡು ದಿನಗಳ ಕಾಲ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಇಲಿಗಳು ಸುತ್ತಲೂ ಓಡಾಡುತ್ತವೆ, ಬಲಕ್ಕೆ: ಅವರು ಎರಡು ವಾರಗಳ ಹಿಂದೆ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌ಗೆ ತೆರಳಿದ್ದರು .

ಮಾರ್ಚ್ ಅಂತ್ಯದಲ್ಲಿ ಲಾಕ್ ಡೌನ್ ತೆರೆದುಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಯ ಹೊರಗಿನ ಪಾದಚಾರಿಗ ದಾರಿಗಳಲ್ಲಿ ವಾಸಿಸುವ ರೋಗಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ʼಪರಿʼಯಲ್ಲಿ ವರದಿ ಪ್ರಕಟಿಸಿದ ನಂತರ, ಅವರಿಗೆ ವೈಯಕ್ತಿಕ ದಾನಿಗಳಿಂದ ಹಣಕಾಸಿನ ನೆರವು ದೊರೆಯಿತು. ಗೀತಾ ಮತ್ತು ಸತೇಂದರ್‌ಗೆ ಚಾರಿಟಬಲ್ ಟ್ರಸ್ಟ್ ಆಂಬುಲೆನ್ಸ್ ಸಹಾಯವನ್ನು ನೀಡಿತು, ಇದರಿಂದಾಗಿ ಗೀತಾ ಅವರ ಕೀಮೋಥೆರಪಿ ಮತ್ತು ತಪಾಸಣೆಗಾಗಿ ದೂರದ ಡೊಂಬಿವಲಿಯಿಂದ ಆಸ್ಪತ್ರೆಗೆ ತಲುಪಲು ಅನುಕೂಲವಾಯಿತು.

ಆದರೆ ನಗರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸುತ್ತಿದ್ದಂತೆ, ಆಂಬ್ಯುಲೆನ್ಸ್ ಗೆ ಹೆಚ್ಚಿನ ಕರೆಗಳು ಬರಲು ಆರಂಭಿಸಿದವು. ಸತೇಂದರ್ ಮತ್ತು ಗೀತಾ ಬಸ್‌ನಲ್ಲಿ ಪ್ರಯಾಣ ಬೆಳೆಸಿದರು. ಕಳೆದ ಎರಡು ತಿಂಗಳುಗಳಲ್ಲಿ, ಅವರು ಗೀತಾ ಅವರ ಕೀಮೋಥೆರಪಿಗಾಗಿ ಸುಮಾರು 7-8 ಬಾರಿ ಪರೇಲ್‌ಗೆ ಪ್ರಯಾಣಿಸಿದ್ದರು. ಚೆಕ್-ಅಪ್‌ಗಳು, ಸಿಟಿ ಸ್ಕ್ಯಾನ್‌ಗಳು ಮತ್ತು ಇತರ ಪರೀಕ್ಷೆಗಳಿಗಾಗಿ ಹಲವಾರು ಬಾರಿ ಸುತ್ತಿದ್ದಾರೆ.

ಪ್ರಯಾಣವು ತುಂಬಾ ಕಷ್ಟಕರವಾಗಿತ್ತು. ಅವರು ಬೆಳಿಗ್ಗೆ 6: 30 ಕ್ಕೆ ಪರೇಲ್‌ಗೆ ತೆರಳಲು ರಾಜ್ಯ ಸಾರಿಗೆ ಬಸ್  ಹಿಡಿಯುತ್ತಾರೆ, ನಂತರ ಬೆಳಿಗ್ಗೆ 9:30ರ ಹೊತ್ತಿಗೆ ಆಸ್ಪತ್ರೆಗೆ ತಲುಪಲು BEST ಬಸ್ ಮೂಲಕ ಪ್ರಯಾಣಿಸುತ್ತಾರೆ ಆದರೆ ಸ್ಥಳೀಯ ಪೊಲೀಸ್ ಚೌಕಿಗಳು ನೀಡಿದ ಕಡ್ಡಾಯ ಲಾಕ್ಡೌನ್ ಟ್ರಾವೆಲ್ ಪಾಸ್ ಇಲ್ಲದಿರುವುದರಿಂದಾಗಿ, ಅವರು ಬಸ್ ನಿಂದ ಹೊರಹೋಗಬೇಕಾಯಿತು. ಅನೇಕ ಬಾರಿ ಮುಂದಿನ ಬಸ್ ಗಾಗಿ ಕಾಯಬೇಕಾಗಿರುವುದರಿಂದ ಅವರ ಪ್ರಯಾಣವು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು,  “ನಮಗೆ ರಸ್ತೆಯ ಮಧ್ಯದಲ್ಲಿಯೇ ಇಳಿಯುವಂತೆ ತಿಳಿಸಲಾಯಿತು. ಆದರೆ ಆಗ ನನ್ನ ಬಳಿ ಆಸ್ಪತ್ರೆ ನೀಡಿರುವ ಪತ್ರವೇನೋ ಇತ್ತು, ಆದರೆ, ಬಸ್ ಕಂಡಕ್ಟರ್‌ಗಳು ಸರ್ಕಾರಿ ಅಧಿಕಾರಿಗಳು ನೀಡಿರುವ ಪಾಸ್ ಕೇಳುತ್ತಿದ್ದರು. ಬಸ್ ನಲ್ಲಿ ರೋಗಿ ಇರುವುದನ್ನು ಯಾರೂ ಬಯಸುತ್ತಿರಲಿಲ್ಲ" ಎಂದು ಸತೇಂದರ್ ವಿವರಿಸುತ್ತಿದ್ದರು.‌

ಅದೇ ದೀರ್ಘ ಪ್ರಯಾಣ ಸಂಜೆ ಕೂಡ ಪುನರಾವರ್ತಿತವಾಗುತ್ತಿತ್ತು- ಅವರು ಸಂಜೆ 5 ಗಂಟೆಗೆ ಪ್ರಯಾಣವನ್ನು ಆರಂಭಿಸಿದರೆ, ರಾತ್ರಿ 9 ಗಂಟೆ ಸುಮಾರಿಗೆ ಡೊಂಬಿವಲಿಯನ್ನು ತಲುಪಬಹುದಾಗಿತ್ತು. ಕೆಲವೊಮ್ಮೆ, ಪರೇಲ್ ಬಸ್ ನಿಲ್ದಾಣ ಮತ್ತು ಆಸ್ಪತ್ರೆಗೆ ಕಡಿಮೆ ದೂರದಲ್ಲಿ ಕರೆದೊಯ್ಯಲು ಸತೇಂದರ್ ಟ್ಯಾಕ್ಸಿ ಡ್ರೈವರ್ ಗಳನ್ನು ಕೇಳುತ್ತಿದ್ದರು. ಇದಕ್ಕಾಗಿ ಅವರು ದಿನಕ್ಕೆ ಕನಿಷ್ಠ 500 ರೂ.ಗಳನ್ನು ವ್ಯಯ ಮಾಡುತ್ತಿದ್ದರು.

ಗೀತಾ ಅವರ ವೈದ್ಯಕೀಯ ವೆಚ್ಚದ ಒಂದು ಭಾಗವನ್ನು ಆಸ್ಪತ್ರೆ ನೋಡಿಕೊಳ್ಳುತ್ತದೆ, ಉಳಿದದ್ದು ಸತೇಂದರ್ ಅವರ ಉಳಿತಾಯದಿಂದ ಸಾಗುತ್ತಿತ್ತು - ಅವರು ಒಟ್ಟು ಕನಿಷ್ಠ 20,000 ರೂ.ಗಳನ್ನು ಖರ್ಚು ಮಾಡಿರುವುದಾಗಿ ಅಂದಾಜು ಮಾಡುತ್ತಾರೆ.

ಏಪ್ರಿಲ್ ಕೊನೆಯಲ್ಲಿ, ಔಷಧವೊಂದು ಗೀತಾ ಮೇಲೆ ಕೆಟ್ಟ ಪರಿಣಾಮ ಬೀರಿತು, ಸತೇಂದರ್ ಹೇಳುವಂತೆ, ಏನನ್ನೂ ತಿನ್ನಲು ಸಾಧ್ಯವಾಗದೆ ಅವಳು ಎಸೆಯುತ್ತಿದ್ದಳು. ಆಗ ಆಹಾರ ಸೇವಿಸಲು ಆಕೆಯ ಮೂಗಿಗೆ ಟ್ಯೂಬ್ ಹಾಕಬೇಕಾಗಿತ್ತು, ಅದು ಅಷ್ಟೇನೂ ಸಹಾಯವಾಗಲಿಲ್ಲ, ಗೀತಾಗೆ ಈಗಲೂ ಹೆಚ್ಚು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪ್ರಯಾಣ ಮಾಡಲು ಕಷ್ಟವಾಗುತ್ತಿತ್ತು , ಕೊನೆಗೆ ಸತೇಂದರ್ ಅವರು ಆಸ್ಪತ್ರೆಯ ಸಿಬ್ಬಂದಿಗೆ ಆಶ್ರಯಕ್ಕೆ ಮನೆ ಹತ್ತಿರದಲ್ಲಿ ಸ್ಥಳಾವಕಾಶವನ್ನು ಹುಡುಕಲು ವಿನಂತಿಸಿಕೊಂಡರು. ಆದರೆ ಆಗ "ಯಾವುದೇ ಕೊಠಡಿಗಳು ಲಭ್ಯವಿಲ್ಲ ಎಂದು ನನಗೆ ತಿಳಿಸಲಾಯಿತು" ಎಂದು ಅವರು ಹೇಳಿದರು.

ಇಚಲಕರಂಜಿಯಲ್ಲಿರುವ ತನ್ನ ಸಹೋದರನ ಸಹಾಯದಿಂದ, ಮೇ 5ರಂದು, ಅವರಿಗೆ ಆಶ್ರಯ ಮನೆಯೊಂದರ ಅಗತ್ಯವನ್ನು ಅನುಮೋದಿಸುವ ಸರ್ಕಾರಿ ಅಧಿಕಾರಿಯ ಪತ್ರವೊಂದು ಸಿಕ್ಕಿತು."ಯಾರಾದರೂ ಈಗ ನಮ್ಮ ಕಷ್ಟವನ್ನು ಆಲಿಸುತ್ತಾರೆ ಮತ್ತು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ, ಆದರೆ ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ..." ಎಂದು ಸತೇಂದರ್ ಹೇಳುತ್ತಾರೆ.

For a while, a charitable trust offered ambulance assistance to Geeta and Satendar to reach the hospital from faraway Dombivali

ಸ್ವಲ್ಪಮಟ್ಟಿಗೆ ಚಾರಿಟಬಲ್ ಟ್ರಸ್ಟ್ ಗೀತಾ ಮತ್ತು ಸತೇಂದರ್ ಅವರಿಗೆ ದೂರದಲ್ಲಿರುವ ಡೊಂಬಿವಲಿಯಿಂದ ಆಸ್ಪತ್ರೆ ತಲುಪಲು ಆಂಬ್ಯುಲೆನ್ಸ್ ನ ನೆರವನ್ನು ನೀಡಿತು .

"ನಾವು ಈ ಪತ್ರದೊಂದಿಗೆ ಕೆಲವು ಆಶ್ರಯ ಮನೆಗಳಿಗೆ ಹೋಗಿದ್ದೆವು, ಆದರೆ ಅವರು ಹೊಸ ರೋಗಿಗಳಿಗೆ ಅವಕಾಶ ನೀಡದಂತೆ ಬಿಎಂಸಿ ಮತ್ತು ಪೊಲೀಸರಿಂದ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಹೊಂದಿದ್ದಾರೆಂದು ಹೇಳಿ ಅವರು ನಮ್ಮನ್ನು ದೂರವಿಟ್ಟರು. ಅವರಿಗಿರುವ ಕಟ್ಟಪ್ಪಣೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ " ಎಂದು ದಂಪತಿಗೆ ಸಹಾಯ ಮಾಡುವ ಆಂಬುಲೆನ್ಸ್ ಚಾಲಕ ಅಭಿನಯ್ ಲಾಡ್ ಹೇಳುತ್ತಾರೆ.

ಆ ನಂತರ ಕೊನೆಗೆ ಬೇರೆ ಯಾವುದೇ ಆಯ್ಕೆಯಿಲ್ಲದೆ, ಸುಮಾರು 10 ದಿನಗಳ ಹಿಂದೆಯಷ್ಟೇ, ಸತೇಂದರ್ ಮತ್ತು ಗೀತಾ ಟಾಟಾ ಸ್ಮಾರಕ ಆಸ್ಪತ್ರೆಯ ಹೊರಗಿನ ಫುಟ್‌ಪಾತ್‌ಗೆ ಮರಳಿದ್ದರು. ಆಂಬ್ಯುಲೆನ್ಸ್‌ಗೆ (ಜೀವನ್‌ ಜ್ಯೋತ್‌ ರಿಲೀಫ್‌ ಎಂಡ್‌ ಕೇರ್‌ ಟ್ರಸ್ಟ್) ವ್ಯವಸ್ಥೆ ಮಾಡಿದ್ದ ಚಾರಿಟಬಲ್ ಟ್ರಸ್ಟ್ ಅವರಿಗೆ ಆಹಾರವನ್ನು ಒದಗಿಸಿತು.

ಗೀತಾ ಅವರ ಕೋವಿಡ್ -19 ಪರೀಕ್ಷಾ ಫಲಿತಾಂಶ ಪಾಸಿಟಿವ್ ಎಂದು ಧೃಡಪಟ್ಟಾಗ, ಅವರನ್ನು ಆಸ್ಪತ್ರೆಯ ಕ್ವಾರಂಟೈನ್ ರೂಮಿಗೆ ಕರೆದೊಯ್ಯಲಾಯಿತು. “ಅವಳಿಗೆ ಆಗ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ನಾನು ಅವಳನ್ನು ಬಿಟ್ಟಿರಲು ಸಾಧ್ಯವಿಲ್ಲ, ಆಕೆಗೆ ಪೈಪ್ ಗಳನ್ನು ಜೋಡಿಸಲಾಗಿದೆ"‌ ಎಂದು ಸತೇಂದರ್ ಹೇಳುತ್ತಾರೆ.

ಟಾಟಾ ಸ್ಮಾರಕದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಕಸ್ತೂರ್ ಬಾ ಆಸ್ಪತ್ರೆಯಲ್ಲಿ ಪರೀಕ್ಷೆಯನ್ನು ಮಾಡಿಸಲು ಅವರನ್ನು ಕೋರಲಾಯಿತು. ಆದರೆ ಅವರು ತನ್ನ ಹೆಂಡತಿಯೊಂದಿಗೆ ಉಳಿಯುವ ಧೃಢ ನಿರ್ಧಾರ ಮಾಡಿದ್ದರಿಂದಾಗಿ,ಇದಕ್ಕೆ ಒಪ್ಪಲಿಲ್ಲ. ತಂದಂತರ ಮೇ 21ರಂದು, ಅವರನ್ನು ಟಾಟಾ ಆಸ್ಪತ್ರೆಯಲ್ಲಿಯೇ ಪರೀಕ್ಷಿಸಲಾಯಿತು, ಮೇ 23ರ ಶನಿವಾರ ಸಂಜೆ ಅವರ ಫಲಿತಾಂಶ ಕೊರೊನಾ ಪಾಸಿಟಿವ್ ಎಂದು ಧೃಢಪಟ್ಟಿತು.ಈಗ ಸತೇಂದರ್ ಅವರು ಕ್ಯಾರೆಂಟೈನ್ ವಾರ್ಡ್‌ನಲ್ಲಿ ಗೀತಾ ಪಕ್ಕದಲ್ಲಿಯೇ ಇರುತ್ತಾರೆ.

ಈಗ ಅವರು ಅಶಕ್ತರಾಗಿದ್ದಾರೆ, ಸುತ್ತಾಟ ಮತ್ತು ಅನೇಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿರುವುದು ಈ ಅಶಕ್ತತೆಗೆ ಕಾರಣ ಎಂದು ಹೇಳುತ್ತಾರೆ. ನಾನು ಚೇತರಿಸಿಕೊಳ್ಳುತ್ತೇನೆ' ಎಂದು ಅವರು ಹೇಳುತ್ತಾರೆ. ಗೀತಾ ಅವರ ಫಲಿತಾಂಶ ನೆಗಟಿವ್ ಬಂದ ನಂತರವೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯ ಎಂದು ಅವರಿಗೆ ತಿಳಿಸಲಾಗಿದೆ.

ಗೀತಾ ಅವರ ಕೇಸ್ ನೋಡಿಕೊಳ್ಳುತ್ತಿರುವ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಹಿರಿಯ ವೈದ್ಯರಾದ ಡಾ.ಯೋಗೇಶ್ ಬಾನ್ಸೋಡ್, ಆಕೆಗೆ ಸಂಪೂರ್ಣ ಗ್ಯಾಸ್ಟ್ರೆಕ್ಟೊಮಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಇದಕ್ಕಾಗಿ ಹೊಟ್ಟೆಯನ್ನು ಕೊಯ್ಯಬೇಕಾಗುತ್ತದೆ ಎಂದು ಹೇಳುತ್ತಾರೆ. ಅವರು ಪೋನ್ ನಲ್ಲಿ ಮಾತನಾಡುತ್ತಾ "ಅವರ ಹಿಮೋಗ್ಲೋಬಿನ್ ಅರ್ಧದಷ್ಟು ಕೂಡ ಇಲ್ಲ. ಈ ಇಂತಹ ಕನಿಷ್ಠ ಮಟ್ಟದಲ್ಲಿ ಶಸ್ತ್ರಚಿಕಿತ್ಸೆ ಮಾಡುವುದು ಅವರಿಗೆ ಅಪಾಯಕಾರಿ. ಮತ್ತು ಅವರಿಗೆ ಉಸಿರಾಟದ ಸೋಂಕು ಬರುವ ಸಾಧ್ಯತೆಗಳೂ ಕಡಿಮೆಯಾಗಬೇಕಾಗುತ್ತದೆ. ಕೋವಿಡ್ ಅವರಿಗೆ ಹೆಚ್ಚು ಹಾನಿ ಮಾಡುವುದಿಲ್ಲ ಎಂದು ನಾವು ಭಾವಿಸುತ್ತೇವೆ." ಎಂದು ಅವರು ವಿವರಿಸುತ್ತಿದ್ದರು.

ಕೋವಿಡ್ -19 ಪರೀಕ್ಷಾ ಫಲಿತಾಂಶಗಳ ಬಗ್ಗೆ ಸತೇಂದರ್ 16 ವರ್ಷದ ಬಾದಲ್ ಗೆ ತಿಳಿಸಿದ್ದಾರೆ. "ನಾನು ನನ್ನ ಮಗಳಿಗೆ ಹೇಳಿದರೆ ಅವಳಿಗೆ ಅರ್ಥವಾಗುವುದಿಲ್ಲ, ಮತ್ತು ಅವಳು ಅಳುತ್ತಾ ಕೂರುತ್ತಾಳೆ ಎಂದು ಅವರು ಹೇಳಿದರು. ಅವಳು ಚಿಕ್ಕವಳು, ಅವರು ನಮ್ಮನ್ನು ನೋಡಿ ಈಗಾಗಲೇ ತಿಂಗಳುಗಳೇ ಕಳೆದಿವೆ. ನಾವು ಶೀಘ್ರದಲ್ಲೇ ಬರುತ್ತೇವೆ ಎಂದು ಹೇಳಿದ್ದೇನೆ. ನಾನು ಸುಳ್ಳು ಹೇಳುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ… " ಎಂದು ಅವರು ಹೇಳಿದರು.

ಅಲ್ಲಿಯವರೆಗೆ, ಮನೆಯಲ್ಲಿನ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುವುದಾಗಿ ಬಾದಲ್ ತನ್ನ ತಂದೆಗೆ ಭರವಸೆ ನೀಡಿದ್ದಾನೆ.

ಅನುವಾದ - ಎನ್ . ಮಂಜುನಾಥ್

Aakanksha

আকাঙ্ক্ষা পিপলস আর্কাইভ অফ রুরাল ইন্ডিয়ার একজন সাংবাদিক এবং ফটোগ্রাফার। পারি'র এডুকেশন বিভাগে কনটেন্ট সম্পাদক রূপে তিনি গ্রামীণ এলাকার শিক্ষার্থীদের তাদের চারপাশের নানান বিষয় নথিভুক্ত করতে প্রশিক্ষণ দেন।

Other stories by Aakanksha
Translator : N. Manjunath