ಒಮ್ಮೆ ನಾಯಿ ಬೊಗಳಿದ ಸದ್ದು, ಇನ್ನೊಮ್ಮೆ ಹುಲಿ ಘರ್ಜಿಸಿದ ಸದ್ದು, ಮತ್ತೊಮ್ಮೆ ಮನುಷ್ಯರು ಕೂಗುತ್ತಿರುವ ಸದ್ದು ಗಾಳಿಯಲ್ಲಿ ತುಂಬಿಕೊಳ್ಳುತ್ತದೆ.
ಚಂದ್ರಾಪುರದ ತಡೋಬಾ ಅಂಧಾರಿ ಹುಲಿ ಮೀಸಲು ಪ್ರದೇಶದಿಂದ (ಟಿಎಟಿಆರ್) ನಾವು ಸರಿಸುಮಾರು 100 ಕಿಲೋಮೀಟರ್ ದೂರದಲ್ಲಿರುವುದರಿಂದ ಈ ಸದ್ದುಗಳು ಅಸಾಮಾನ್ಯವೇನಲ್ಲ.
ಇಲ್ಲಿ ವಿಚಿತ್ರವೇನೆಂದರೆ ಆ ಸದ್ದುಗಳು ನಿಜವಾದ ಸದ್ದುಗಳಲ್ಲ. ಅದು ರೆಕಾರ್ಡ್ ಮಾಡಲಾದ ಸದ್ದುಗಳು. ಅದು ಬರುತ್ತಿರುವುದು ಮಂಗಿ ಗ್ರಾಮದಲ್ಲಿ ಆಳವಡಿಸಲಾಗಿರುವ ಲೌಡ್ ಸ್ಪೀಕರುಗಳಿಂದ. ಈ ಸ್ಪೀಕರುಗಳನ್ನು ಬಿದಿರಿನ ಕೋಲಿನ ತುದಿಗೆ ಕಟ್ಟಲಾಗಿದೆ. ಬ್ಯಾಟರಿಯಿಂದ ನಡೆಯುವ ಸ್ಪ್ರೇ ಪಂಪಿಗೆ ಅದರ ವೈರನ್ನು ಕನೆಕ್ಟ್ ಮಾಡಲಾಗಿದೆ.
"ನಾನು ರಾತ್ರಿಯಲ್ಲಿ ಈ ಸದ್ದುಗಳನ್ನು ನುಡಿಸದಿದ್ದರೆ, ಕಾಡು ಹಂದಿಗಳು [ನಿಶಾಚರ ಜೀವಿಗಳು] ಬೆಳೆಗಳನ್ನು ತಿನ್ನುತ್ತವೆ" ಎಂದು 48 ವರ್ಷದ ರೈತ ಸುರೇಶ್ ರೆಂಘೆ ಹೇಳುತ್ತಾರೆ. "ಅವು ವಿಶೇಷವಾಗಿ ತೊಗರಿ ಮತ್ತು ಕಡಲೆ [ಕಪ್ಪು ಕಡಲೆ] ಯನ್ನು ಹೆಚ್ಚು ತಿನ್ನುತ್ತವೆ" ಇದು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ಸೋಲಾರ್ ವಿದ್ಯುತ್ ಇರುವ ತಂತಿ ಬೇಲಿಯು ಪ್ರಾಣಿಗಳನ್ನು ದೂರವಿಡುವಲ್ಲಿ ಸೋತ ಕಾರಣ ಅವರು ಸಾಧನದ ಎರಡು ಪಿನ್ನುಗಳನ್ನು ಬ್ಯಾಟರಿ ಚಾಲಿತ ಸ್ಪ್ರೇಯಿಂಗ್ ಪಂಪಿನ ಸಾಕೆಟ್ಟಿಗೆ ಸಿಕ್ಕಿಸಿದರು. ಅದು ತಕ್ಷಣ ಸುತ್ತಲಿನ ವಾತಾವರಣದಲ್ಲಿ ದೊಡ್ಡ ಪ್ರಾಣಿ ಮತ್ತು ಮಾನವ ಶಬ್ದಗಳನ್ನು ವಾತಾವರಣದಲ್ಲಿ ಹರಡುತ್ತದೆ.
ಹತ್ತಿ, ಕಡಲೆ, ತೊಗರಿ, ಮೆಣಸಿನಕಾಯಿ, ಹೆಸರುಕಾಳು, ಸೋಯಾಬೀನ್ ಮತ್ತು ನೆಲಗಡಲೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ತನ್ನ 17 ಎಕರೆ ಕೃಷಿಭೂಮಿಯ ಕುರಿತು ರೆಂಘೆಯವರಿಗೆ ಚಿಂತೆ ಕಾಡುತ್ತಿದೆ.
ಕಾಡು ಪ್ರಾಣಿಗಳ ಹಾವಳಿಯನ್ನು ಎದುರಿಸಲು ಗ್ರಾಮೀಣ ವಿದರ್ಭದಾದ್ಯಂತ ನೂರಾರು ಹಳ್ಳಿಗಳಲ್ಲಿ ಈ ನವೀನ ಕೃಷಿ ಅಲಾರಮ್‌ಗಳನ್ನು ನಿಯೋಜಿಸಲಾಗುತ್ತಿದೆ.
ಅದು ಕೇವಲ ಪ್ರಾಣಿಗಳನ್ನಷ್ಟೇ ಹೆದರಿಸುವುದಿಲ್ಲ. “ಖಾಲಿ ರಸ್ತೆಯಲ್ಲಿ ಓಡಾಡುವ ಬೈಕ್ ಸವಾರರು ಮತ್ತು ಪ್ರಯಾಣಿಕರಲ್ಲೂ ಹೆದರಿಕೆ ಹುಟ್ಟಿಸುತ್ತದೆ” ಎಂದು ತಮಾಷೆಯಾಗಿ ಹೇಳುವಾಗ ಅವರ ಸುತ್ತಲಿದ್ದ ರೈತರು ನಗುತ್ತಾರೆ.
ಮಂಗಿ ಗ್ರಾಮವು ಸಣ್ಣ ಪೊದೆಗಳು ಮತ್ತು ತೇಗದ ಕಾಡುಗಳಿಂದ ಸುತ್ತುವರೆದಿದೆ. ಇದು ಯವತ್ಮಾಲ್‌ನ ರಾಲೆಗಾಂವ್ ತಹಸಿಲ್‌ನ ನಾಗ್ಪುರ-ಪಂಢರಕಾವ್ಡಾ ಹೆದ್ದಾರಿಯಲ್ಲಿದೆ. ಇದರ ಪೂರ್ವದ ಅಂಚಿನಲ್ಲಿ ಟಿಎಟಿಆರ್ ಇದೆ, ಇದು ಮಹಾರಾಷ್ಟ್ರದ 315 ಹುಲಿಗಳಲ್ಲಿ 82 ಹುಲಿಗಳನ್ನು ಹೊಂದಿದೆ ಮತ್ತು ಅದರ ಪಶ್ಚಿಮದಲ್ಲಿ ಯವತ್ಮಾಲ್ ಜಿಲ್ಲೆಯ ತಿಪೇಶ್ವರ ವನ್ಯಜೀವಿ ಅಭಯಾರಣ್ಯವಿದೆ. ಈ ಮೀಸಲು ಪ್ರದೇಶವು ಹುಲಿಗಳು ಮಾತ್ರವಲ್ಲ, ಚಿರತೆಗಳು, ಕರಡಿಗಳು, ಕಾಡು ನಾಯಿಗಳು, ಗೌರ್, ಚಿಟಾಲ್ ಮತ್ತು ಸಾಂಬಾರ್ – ಇಂತಹ ಎಲ್ಲಾ ಸಂಭಾವ್ಯ ಬೆದರಿಕೆಗಳಿಗೆ ನೆಲೆಯಾಗಿದೆ.
ಸುಮಾರು 850 ಜನರಿರುವ ಗ್ರಾಮ ಇವೆರಡರ ನಡುವಿನ ಕಾರಿಡಾರ್. ಮಂಗಿ ಗ್ರಾಮವು ಎದುರಿಸುತ್ತಿರುವ ಈ ಎಲ್ಲ ಸಮಸ್ಯೆಗಳು ಕುರುಚಲು ಕಾಡುಗಳಿಂದ ಸುತ್ತುವರೆದಿರುವ ಹಳ್ಳಿಗಳ ಸಮಸ್ಯೆಯೂ ಹೌದು, ಈ ಕೃಷಿ ಭೂಮಿಯನ್ನು ಕಾಡು ಛೇದಿಸಿಕೊಂಡು ಹೋಗುತ್ತದೆ. ಕಾಡುಗಳು ದಟ್ಟವಾಗಿದ್ದಾಗ, ಕಾಡು ಪ್ರಾಣಿಗಳಿಗೆ ಕಾಡಿನಲ್ಲ ನೀರು ಮತ್ತು ಆಹಾರ ದೊರಕುತ್ತಿತ್ತು. ಈಗ, ರೆಂಘೆಯವರಂತಹವರ ಹೊಲವೇ ಅವುಗಳಿಗೆ ಬೇಟೆಯ ತಾಣವಾಗಿದೆ.
"ಅವರು ಅವುಗಳನ್ನು ತೆಗೆದುಕೊಂಡು ಹೋಗಬೇಕು ಅಥವಾ ಕಾಡು ಪ್ರಾಣಿಗಳನ್ನು ಕೊಲ್ಲಲು ನಮಗೆ ಅವಕಾಶ ಮಾಡಿಕೊಡಬೇಕು" ಎಂದು ಸಮಸ್ಯೆಗೆ ಅರಣ್ಯ ಇಲಾಖೆಯನ್ನು ದೂಷಿಸುವ ರೈತರು ಹೇಳುತ್ತಾರೆ. "ಇವು ಅವರ [ಅರಣ್ಯ ಇಲಾಖೆಯ] ಪ್ರಾಣಿಗಳು," ಎನ್ನುವುದು ಇಲ್ಲಿ ಎಲ್ಲೆಡೆ ಕೇಳಿ ಬರುವ ಮಾತಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಪ್ರಕಾರ, ಅವುಗಳನ್ನು ಕೊಲ್ಲುವುದು ಅಥವಾ ಬಲೆಗೆ ಬೀಳಿಸುವುದು "ಒಂದು ವರ್ಷಕ್ಕಿಂತ ಕಡಿಮೆಯಿಲ್ಲದ ಆದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ.ಗಿಂತ ಕಡಿಮೆಯಿಲ್ಲದ ದಂಡಕ್ಕೆ" ಕಾರಣವಾಗಬಹುದು. ಕಾಡು ಪ್ರಾಣಿಗಳಿಂದ ಉಂಟಾಗುವ ಬೆಳೆ ನಷ್ಟವನ್ನು ವರದಿ ಮಾಡಲು ಕಾಯ್ದೆಯು ನಿಬಂಧನೆಗಳನ್ನು ಹೊಂದಿದ್ದರೂ, ಇದರ ಕಾರ್ಯವಿಧಾನವು ತೊಡಕಾಗಿದೆ ಮತ್ತು ಆರ್ಥಿಕ ಪರಿಹಾರವು ಶೋಚನೀಯವಾಗಿ ಅಸಮರ್ಪಕವಾಗಿದೆ. ಓದಿರಿ: 'ಇದು ಹೊಸ ರೀತಿಯ ಬರಗಾಲ'
ಸಾಮಾನ್ಯವಾಗಿ, ಕಾಡುಹಂದಿಗಳು ಅಥವಾ ಜಿಂಕೆ ಅಥವಾ ನೀಲ್‌ಗಾಯ್‌ಗಳು ಒಂದು ಡಜನ್, ಎರಡು ಡಜನ್ ಅಥವಾ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ದೊಡ್ಡ ಗುಂಪುಗಳಲ್ಲಿ ಬರುತ್ತವೆ. "ಒಮ್ಮೆ ಅವು ನಿಮ್ಮ ಅನುಪಸ್ಥಿತಿಯಲ್ಲಿ ಹೊಲಕ್ಕೆ ಕಾಲಿಟ್ಟರೆ, ದೊಡ್ಡ ಹಾನಿಯನ್ನುಂಟುಮಾಡುತ್ತವೆ" ಎಂದು ರೆಂಘೆ ಹೇಳುತ್ತಾರೆ.
ಮಾನವ ಉಪಸ್ಥಿತಿಯು ಇವುಗಳಿಗೆ ಪ್ರತಿಬಂಧಕವಾಗಿ ಕೆಲಸ ಮಾಡುತ್ತದೆ. ಆದರೆ ಮಂಗಿಯ ರೈತರು ಈಗ ಜಾಗರಣೆ ಮಾಡುವ ಸಾಹಸ ಮಾಡುವುದಿಲ್ಲ. ಇದು ಅವರ ಆರೋಗ್ಯದ ದೊಡ್ಡ ಬೆಲೆಯನ್ನೇ ಬೇಡುತ್ತದೆ. ಜೊತೆಗೆ ಅಲ್ಲಿ ಮಲಗುವುದು ಅಪಾಯಕಾರಿ ಕೂಡಾ ಹೌದು. ಈಗ ಈ ಅನುಕೂಲಕಾರಿ ಸಾಧನ ಜನರ ನೆರವಿಗೆ ಬಂದಿದ್ದು ಅದು ಈ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿದೆ.
"ಆರೋಗ್ಯದ ಕಾರಣಗಳಿಂದಾಗಿ ನಾನು ಪ್ರತಿದಿನ ರಾತ್ರಿ ಜಮೀನಿನಲ್ಲಿ ಉಳಿಯಲು ಸಾಧ್ಯವಿಲ್ಲ" ಎಂದು ರೆಂಘೆ ಹೇಳುತ್ತಾರೆ, "ಇದು ಪರ್ಯಾಯವಾಗಿದೆ." ಮತ್ತು ಇದರ ನಿರ್ವಹಣೆ ಸುಲಭ, ಮತ್ತು ಬೆಲೆಯೂ ಕೈಗೆಟುಕುವಂತಿರುತ್ತದೆ. ಈ ಅಲಾರಮ್‌ಗಳು ಮಾನವ ಉಪಸ್ಥಿತಿಯ ಭ್ರಮೆಯನ್ನು ಸೃಷ್ಟಿಸುತ್ತವೆ, ಆದರೆ ರೆಂಘೆ ಹೇಳುತ್ತಾರೆ, "ಇದು ಸಂಪೂರ್ಣ ರಕ್ಷಣೆಯನ್ನು ನೀಡುವುದಿಲ್ಲ; ಕಾಡು ಪ್ರಾಣಿಗಳು ಹೇಗಾದರೂ ಬೆಳೆಗಳನ್ನು ಆಕ್ರಮಿಸಿ ತಿನ್ನುತ್ತವೆ."
ಇದು ಬೇರೆಲ್ಲದಕ್ಕಿಂತಲೂ ಒಳ್ಳೆಯ ಉಪಾಯ.
*****
ಯವತ್ಮಾಲ್ ಮಾತ್ರವಲ್ಲ, ಹತ್ತಿಯ ನಾಡು ಎಂದು ಕರೆಯಲ್ಪಡುವ ವಿದರ್ಭ ಪ್ರದೇಶದ ಈ ಪೂರ್ವ ಮಹಾರಾಷ್ಟ್ರ ಪ್ರದೇಶದ ದೊಡ್ಡ ಭೂಪ್ರದೇಶಗಳಲ್ಲಿ ಕೃಷಿ ಹೆಚ್ಚಾಗಿ ಮಳೆಯಾಧಾರಿತವಾಗಿದೆ. ಆದಾಗ್ಯೂ, ಮಂಗಿ ಗ್ರಾಮದ ಸಮೀಪವಿರುವ ಬಾಬುಲ್ಗಾಂವ್ ಎನ್ನುವಲ್ಲಿ ಪೂರ್ಣಗೊಳ್ಳುವ ಹಂತದಲ್ಲಿರುವ ಪ್ರಮುಖ ನೀರಾವರಿ ಯೋಜನೆಯಾದ ಬೆಂಬ್ಲಾ ಅಣೆಕಟ್ಟಿನ ಮಾತು ವಿಷಯಗಳನ್ನು ಬದಲಾಯಿಸುತ್ತದೆ - ಈ ಗ್ರಾಮಕ್ಕೆ ಕಾಲುವೆಗಳ ಮೂಲಕ ನೀರು ಹರಿಯುತ್ತದೆ, ಇದು ದ್ವಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ಮೂಲಕ ಹೆಚ್ಚಿನ ಆದಾಯದ ಭರವಸೆಯನ್ನು ಹುಟ್ಟುಹಾಕುತ್ತದೆ.
"ಬಹು ಬೆಳೆಗಳು ಎಂದರೆ ಈ ಕಾಡು ಪ್ರಾಣಿಗಳಿಗೆ ವಿಸ್ತೃತ ಆಹಾರದ ಲಭ್ಯತೆ ಎಂದರ್ಥ" ಎಂದು ರೆಂಘೆ ಹೇಳುತ್ತಾರೆ. "ಪ್ರಾಣಿಗಳು ತುಂಬಾ ಬುದ್ಧಿವಂತರು ಮತ್ತು ಅವರು ಮತ್ತೆ ಮತ್ತೆ ಈ ಹೊಲಗಳಿಗೆ ಬರಬಹುದು ಎಂದು ತಿಳಿದಿದೆ."
ಇದು ಮುಖ್ಯವಾಗಿ ಯವತ್ಮಾಲ್ ಪ್ರದೇಶದಲ್ಲಿ ಹತ್ತಿ ಮತ್ತು ಸೋಯಾಬೀನ್ ಬೆಳೆಯುವ ಪ್ರದೇಶವಾಗಿದೆ, ಇದು ರೈತರ ಆತ್ಮಹತ್ಯೆಗಳ ಹೆಚ್ಚಿನ ಘಟನೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಎರಡು ದಶಕಗಳಿಂದ ಉಲ್ಬಣಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟಿನಿಂದ ಆವೃತವಾಗಿದೆ. ಔಪಚಾರಿಕ ಸಾಲದ ಲಭ್ಯತೆಯ ಕೊರತೆ, ಹೆಚ್ಚುತ್ತಿರುವ ಸಾಲ, ಮಳೆಯಾಧಾರಿತ ಕೃಷಿ, ಬೆಲೆ ಏರಿಳಿತಗಳು, ಕುಸಿಯುತ್ತಿರುವ ಆದಾಯ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಇವೆಲ್ಲವೂ ಗಂಭೀರ ಚಿಂತೆಗಳಾಗಿವೆ. ಭಯಂಕರ ಕಾಡು ಪ್ರಾಣಿಗಳ ಒಳನುಸುಳುವಿಕೆಯನ್ನು ರೈತರು "ಅನಪೇಕ್ಷಿತ ಕೀಟಗಳಿಗೆ" ಹೋಲಿಸುತ್ತಾರೆ.
ಜನವರಿ 2021ರಲ್ಲಿ, ಈ ವರದಿಗಾರ ಮಂಗಿ ಗ್ರಾಮಕ್ಕೆ ಭೇಟಿ ನೀಡಿದಾಗ, ಹತ್ತಿಯ ಮೊದಲ ಮೊದಲ ಕೊಯ್ಲು ಮುಗಿದಿತ್ತು; ಉದ್ದವಾದ ಸಸ್ಯಗಳಿಂದ ಬೀನ್ಸ್ ತೂಗಾಡುತ್ತಿತ್ತು. ರೆಂಘೆಯವರ ಹೊಲದ ಒಂದು ಭಾಗದಲ್ಲಿ ಮೆಣಸಿನಕಾಯಿ ಬೆಳೆ ಇನ್ನೊಂದು ತಿಂಗಳಲ್ಲಿ ಕೈಗೆ ಬರುವಂತಿತ್ತು.
ಕೊಯ್ಲಿನ ಸಮಯದಲ್ಲಿ ನಡೆಯುವ ಕಾಡು ಪ್ರಾಣಿಗಳ ದಾಳಿಯಿಂದ ಅವರು ಗಮನಾರ್ಹ ಮೊತ್ತವನ್ನು ಕಳೆದುಕೊಂಡಿದ್ದಾಗಿ ಹೇಳುತ್ತಾರೆ.
ಜನವರಿ 2021 ಮತ್ತು ಫೆಬ್ರವರಿ 2023ರ ನಡುವೆ - ಎರಡು ವರ್ಷಗಳ ಅವಧಿ - ಪರಿ ಹಲವಾರು ಸಂದರ್ಭಗಳಲ್ಲಿ ರೆಂಘೆಯವರನ್ನು ಭೇಟಿ ಮಾಡಿತ್ತು ಮತ್ತು ಕಾಡು ಪ್ರಾಣಿಗಳ ದಾಳಿಯಿಂದಾಗಿ ಅವರು ಅನೇಕ ಬೆಳೆ ನಷ್ಟವನ್ನು ಅನುಭವಿಸಿದ್ದರು.
ಹತಾಶೆಗೊಳಗಾದ ಅವರು ಸ್ಪೀಕರ್ ಹೊಂದಿರುವ ಸಣ್ಣ ಎಲೆಕ್ಟ್ರಾನಿಕ್ ಪೆಟ್ಟಿಗೆಯೊಂದನ್ನು ಕೊಂಡರು. ಸೌರಶಕ್ತಿ ಚಾಲಿತ ಸ್ಥಳೀಯವಾಗಿ ತಯಾರಿಸಿದ ಸಾಧನವು ಮಾರುಕಟ್ಟೆಗೆ ಹೊಸದು. ಜೊತೆಗೆ ಚೈನಾದಲ್ಲಿ ತಯಾರಿಸಲ್ಪಟ್ಟ ಅಗ್ಗದ ಸಾಧನಗಳೂ ಇವೆ. ಸ್ಥಳೀಯ ಅಂಗಡಿಗಳಲ್ಲಿ ಜನಪ್ರಿಯವಾಗಿರುವ ಮತ್ತು ಸುಲಭವಾಗಿ ದೊರೆಯುವ ಇವುಗಳ ಬೆಲೆ ರೂ. 200-1,000 - ಗುಣಮಟ್ಟ, ವಸ್ತು ಮತ್ತು ಬ್ಯಾಟರಿ-ಬಾಳಿಕೆಯನ್ನು ಅವಲಂಬಿಸಿ ಬೆಲೆಯಿರುತ್ತದೆ. ಗ್ಯಾಜೆಟ್ ಸಾಮಾನ್ಯ ಡೋರ್‌ಬೆಲ್‌ನ ಗಾತ್ರದಲ್ಲಿರುತ್ತದೆ ಹಾಗೂ ಅದರ ಬ್ಯಾಟರಿಯು 6-7 ಗಂಟೆಗಳ ಕಾಲ ಬಾಳಿಕೆ ಬರುತ್ತದೆ ಮತ್ತು ಸೌರಶಕ್ತಿ-ಚಾಲಿತ ಸ್ಪ್ರೇಯಿಂಗ್ ಪಂಪ್‌ಗಳಿಂದಲೂ ರೀಚಾರ್ಜ್ ಮಾಡಬಹುದು. ಮಾನ್ಯವಾಗಿ, ರೈತರು ಅದನ್ನು ಹಗಲಿನಲ್ಲಿ ರೀಚಾರ್ಜ್ ಮಾಡುತ್ತಾರೆ ಮತ್ತು ರಾತ್ರಿಯಿಡೀ ಅದನ್ನು ತಮ್ಮ ಹೊಲಗಳ ಮಧ್ಯಭಾಗದಲ್ಲಿರುವ ಕಂಬದ ಮೇಲೆ ನೇತುಹಾಕುತ್ತಾರೆ.
ಯವತ್ಮಾಲ್ ರೈತರ ಆತ್ಮಹತ್ಯೆಗಳು ಮತ್ತು ಉಲ್ಬಣಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟಿಗೆ ಹೆಸರುವಾಸಿಯಾಗಿದೆ. ಕಾಡು ಪ್ರಾಣಿಗಳ ಒಳನುಸುಳುವಿಕೆಯನ್ನು ಇಲ್ಲಿನ ರೈತರು 'ಅನಪೇಕ್ಷಿತ ಕೀಟಗಳಿಗೆ' ಹೋಲಿಸುತ್ತಾರೆ
ಕಳೆದ ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ, ಈ ವರದಿಗಾರನು ವಿದರ್ಭದ ದೊಡ್ಡ ಪ್ರದೇಶಗಳಲ್ಲಿರುವ ಜಮೀನುಗಳಲ್ಲಿ ಬೆರಗುಗೊಳಿಸುವ ವೈವಿಧ್ಯಮಯ ಸದ್ದುಗಳನ್ನು ರಾತ್ರಿ ಹೊತ್ತು ಹೊರಡಿಸುವ ಹಲವು ಫಾರ್ಮ್-ಅಲಾರ್ಮ್ ಸಾಧನಗಳನ್ನು ಕಂಡರು.
"ನಾವು ಕೆಲವು ವರ್ಷಗಳ ಹಿಂದೆ ಈ ಅಲಾರಂಗಳನ್ನು ಬಳಸಲು ಪ್ರಾರಂಭಿಸಿದೆವು" ಎಂದು ಮಂಗಿಯಲ್ಲಿ ನಾಲ್ಕು ಎಕರೆ ಭೂಮಿಯನ್ನು ಹೊಂದಿರುವ ರೈತ ರಮೇಶ್ ಸರೋದೆ ಹೇಳುತ್ತಾರೆ. ಅವರು ತಮ್ಮ ಬೆಳೆಗಳನ್ನು ರಕ್ಷಿಸಲು ತಮ್ಮ ಹೊಲದಲ್ಲಿ ಹಲವಾರು ಬೆಚ್ಚಪ್ಪಗಳನ್ನು ಹಾಕುವುದರ ಜೊತೆಗೆ ಸಾಧನವನ್ನು ಸ್ಥಾಪಿಸಿದರು. "ನಾವು ದಿನವಿಡೀ ಪಟಾಕಿ ಹೊಡೆದು ನೋಡಿದೆವು, ಆದರೆ ಅವು ತುಂಬಾ ದುಬಾರಿ ಮತ್ತು ಅಪ್ರಾಯೋಗಿಕವಾಗಿವೆ. ಹೆಚ್ಚಿನ ಸ್ಥಳೀಯ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಈ ಅಲಾರಂ ಲಭ್ಯವಿದೆ" ಎಂದು ಅವರು ಹೇಳುತ್ತಾರೆ.
ರೈತರು ಸಂಜೆ ಮನೆಗೆ ಹೋಗುವ ಮೊದಲು ಗ್ಯಾಜೆಟ್‌ಗಳನ್ನು ಆನ್ ಮಾಡುತ್ತಾರೆ. ಕೆಲವು ಕಿಲೋಮೀಟರ್ ದೂರದ ಹಳ್ಳಿಯಲ್ಲಿರುವ ಅವರ ಮನೆಗೆ ಹೊಲಗಳಿಂದ ಹೊರಡುವ ಪ್ರಾಣಿಗಳ ವಿದ್ಯುನ್ಮಾನ ಶಬ್ದ ಕೇಳಿಸುತ್ತದೆ. ಆದರೆ ಅದು ಬುದ್ಧಿವಂತ ಪ್ರಾಣಿಗಳನ್ನು ಹೆದರಿಸದ ಕಾರಣ, ರೆಂಘೆ ಗಾಳಿ-ಚಾಲಿತ ರೊಟೇಟರ್ ಫ್ಯಾನ್ ಅನ್ನು ಆವಿಷ್ಕರಿಸಿದ್ದಾರೆ, ಅದು ಸಮತಲವಾಗಿ ಕಟ್ಟಿರುವ ಸ್ಟೀಲ್ ಪ್ಲೇಟ್ ಅನ್ನು ಬಡಿಯುತ್ತದೆ. ಮನೆಗೆ ಬರುವ ಮೊದಲು ಎಲ್ಲ ಬೇಲಿಗಳನ್ನು ಪರಿಶೀಲಿಸಿ ನಂತರ ಮರದ ಗಳುವೊಂದನ್ನು ಕಟ್ಟಿ ಹೊರಡುತ್ತಾರೆ.
"ಮನಾಚ್ಯ ತಸಲ್ಲಿಸಾತಿ ಕರ್ತೋ ಜೀ ಹೇ [ನಾವು ಅದನ್ನು ನಮ್ಮ ಸಮಾಧಾನಕ್ಕಾಗಿ ಮಾಡುತ್ತೇವೆ]" ಎಂದು ರೆಂಘೆ ಹೇಳುತ್ತಾರೆ. "ಕಾ ಕರ್ತಾ [ನಾವು ಏನು ಮಾಡೋಕಾಗುತ್ತೆ]!"
ಇಲ್ಲಿ ಕಂಡುಬರುವ ಅಂಶವೆಂದರೆ, ಫಾರ್ಮ್ ಅಲಾರಂಗಳು ಮನುಷ್ಯರ ಅಥವಾ ಕಾವಲು ನಾಯಿಗಳ "ವಾಸನೆ ಇಲ್ಲ" ಎಂಬ ಶಬ್ದವನ್ನು ಹೊಂದಿದ್ದರೂ, ಇದು ಯಾವಾಗಲೂ ಕಾಡು ಪ್ರಾಣಿಗಳಿಗೆ ಪ್ರತಿಬಂಧಕವಲ್ಲ.
*****
"ಸುಗ್ಗಿಯ ಸಮಯದಲ್ಲಿ ನಾವು ಜಾಗರೂಕರಾಗಿರದಿದ್ದರೆ ಬೆಳೆ ನಷ್ಟವು ಶೇಕಡಾ 50ರಿಂದ 100ರಷ್ಟಾಗಬಹುದು" ಎಂದು ರೆಂಘೆ ಹೇಳುತ್ತಾರೆ.
ಮರಾಠಿಯ ಉಪಭಾಷೆಯಾದ ತನ್ನ ಸ್ಥಳೀಯ ವರ್ಹಾದಿಯಲ್ಲಿ, ರೆಂಘೆ ಹೇಳುತ್ತಾರೆ, "ಅಜಿ ತ್ಯೆ ಸಪ್ಪಾ ಸಾಫ್ ಕರ್ತೆ [ಪ್ರಾಣಿಗಳು ಇಡೀ ಹೊಲವನ್ನು ಮೇಯ್ದು ಬಿಡುತ್ತವೆ].
ಅದು ಫೆಬ್ರವರಿ ತಿಂಗಳ 2023ರ ಮಧ್ಯಭಾಗ, ನಾವು ಅವರ ಮನೆಗೆ ಹತ್ತಿರದಲ್ಲಿರುವ ಜಮೀನಿನ ಮೂಲಕ ನಡೆದುಕೊಂಡು ಹೋಗುತ್ತಿರುವಾಗ, ರೆಂಘೆ ಹಿಕ್ಕೆಗಳನ್ನು ತೋರಿಸಿದರು. ಅವು ಕಾಡುಹಂದಿಗಳು ಅವರ ರಬಿ (ಚಳಿಗಾಲ) ಗೋಧಿ ಬೆಳೆಯನ್ನು ಧ್ವಂಸಗೊಳಿಸಿದ ಕಥೆಯ ಚಿಹ್ನೆಗಳಾಗಿದ್ದವು.
ಇಲ್ಲಿ ಮೆಣಸಿನ ಗಿಡಗಳು ಸಹ ಸುರಕ್ಷಿತವಾಗಿಲ್ಲ. "ನವಿಲುಗಳು ಮೆಣಸಿನಕಾಯಿಗಳನ್ನು ತಿನ್ನುತ್ತವೆ" ಎಂದು ರೆಂಘೆ ಹೇಳುವಾಗ, ನಾವು ಕೆಂಪು ಮತ್ತು ಹಸಿರು ಮೆಣಸಿನಕಾಯಿ ಬಿಟ್ಟಿದ್ದ ಸಂಪೂರ್ಣವಾಗಿ ಬೆಳೆದ ಸಸ್ಯಗಳ ಸಾಲುಗಳನ್ನು ಹಾದು ಹೋಗುತ್ತಿದ್ದೆವು. "ಅವುಗಳ [ನವಿಲಿನ] ಚಂದಕ್ಕೆ ಮರುಳಾಗಬೇಡಿ, ಅವು ಸಹ ಸಮಾನ ವಿನಾಶಕಾರಿಗಳು" ಎಂದು ಅವರು ಹೇಳುತ್ತಾರೆ. ಅವರು ಒಂದು ಎಕರೆ ಅಥವಾ ಎರಡು ಎಕರೆಗಳಲ್ಲಿ ಕಡಲೆಕಾಯಿಯನ್ನು ಸಹ ಬೆಳೆಯುತ್ತಾರೆ ಅದು ಎಪ್ರಿಲ್ ತಿಂಗಳಿನಲ್ಲಿ ಕೊಯ್ಲಿಗೆ ಬರುತ್ತದೆ. ಈ ಬೆಳೆ ಹಂದಿಗಳಿಗೆ ಇಷ್ಟವಾಗುವ ಬೆಳೆಯಾಗಿದೆ.
ಬೆಳೆ ನಷ್ಟದ ಹೊರತಾಗಿ, ಅಲಾರಂಗಳು ಮತ್ತು ಬ್ಯಾಟರಿಗಳು ಹೆಚ್ಚುವರಿ ವೆಚ್ಚವಾಗಿದೆ, ಹಾಗೆಯೇ ನೈಲಾನ್ ಸೀರೆಗಳು ಹೊಲಗಳ ಸುತ್ತಲೂ ಬೇಲಿಗಳಾಗಿ ಕೆಲಸ ಮಾಡುತ್ತವೆ. ಸಸ್ಯಗಳ ಬುಡಕ್ಕೆ ಸಣ್ಣ ಬಟ್ಟೆ ಕಟ್ಟುಗಳಲ್ಲಿ ಕಟ್ಟಿದ ನಾಫ್ಥಲೀನ್ ಚೆಂಡುಗಳನ್ನು ರೆಂಘೆ ನಮಗೆ ತೋರಿಸುತ್ತಾರೆ - ಬಲವಾದ ವಾಸನೆ ಕಾಡು ಪ್ರಾಣಿಗಳನ್ನು ಹಿಮ್ಮೆಟ್ಟಿಸುತ್ತದೆ ಎಂದು ಯಾರೋ ಹೇಳಿದರು. ಈ ಕೆಲವು ವಿಲಕ್ಷಣ ತಂತ್ರಗಳು ಅಂತಿಮವಾಗಿ ನಿಷ್ಪ್ರಯೋಜಕವಾಗಿದ್ದರೂ ಸಹ ಅವರು ಎಲ್ಲವನ್ನೂ ಪ್ರಯತ್ನಿಸಲು ಸಿದ್ಧರಿದ್ದಾರೆ.
"ಈ ಸಮಸ್ಯೆಗೆ ಯಾವುದೇ ಪರಿಹಾರವಿಲ್ಲ" ಎಂದು ಸರೋದೆ ವಿಷಾದಿಸುತ್ತಾರೆ, ಅವರು ತಮ್ಮ ಭೂಮಿಯ ಒಂದು ಭಾಗವನ್ನು ಪಾಳುಭೂಮಿಯಾಗಿ ಇಟ್ಟುಕೊಂಡಿದ್ದಾರೆ - ಇದು ಅವರ ದೊಡ್ಡ ಹಿಡುವಳಿಗೆ ಹೊಂದಿಕೊಂಡಿಲ್ಲ. "ರಾತ್ರಿಯಿಡೀ ಜಾಗರೂಕರಾಗಿರಲು ನಾವು ಎಚ್ಚರವಾಗಿದ್ದರೆ, ಅನಾರೋಗ್ಯಕ್ಕೆ ಒಳಗಾಗುತ್ತೇವೆ; ಮಲಗಿದರೆ, ನಮ್ಮ ಬೆಳೆಯನ್ನು ಕಳೆದುಕೊಳ್ಳುತ್ತೇವೆ – ಏನು ಮಾಡಬೇಕು ನಾವು!"
ಸಮಸ್ಯೆಯ ಗಂಭೀರತೆ ಎಷ್ಟಿದೆಯೆಂದರೆ ವಿದರ್ಭದ ಅನೇಕ ಭಾಗಗಳಲ್ಲಿ ಅರಣ್ಯಗಳು ಕೃಷಿ ಕ್ಷೇತ್ರಗಳೊಂದಿಗೆ ಬೆರೆತಿವೆ, ಕೆಲವು ಸಣ್ಣ ಅಥವಾ ಅತಿಸಣ್ಣ ರೈತರು ತಮ್ಮ ಭೂಮಿಯನ್ನು ಪಾಳುಬಿಟ್ಟಿದ್ದಾರೆ. ಹಠಾತ್ ನಷ್ಟದ ಸಾಧ್ಯತೆ, ಬೆಳೆ ಬೆಳೆಯಲು ಅಗತ್ಯವಾದ ಶಕ್ತಿ, ಸಮಯ ಮತ್ತು ಹಣವನ್ನು ಕಳೆದುಕೊಳ್ಳಲು ಅವರು ಸಿದ್ಧರಿಲ್ಲ ಮತ್ತು ತಮ್ಮ ಆರೋಗ್ಯದ ವಿಷಯದಲ್ಲಿ ದಿನದ 24 ಗಂಟೆಯೂ ಜಾಗರೂಕರಾಗಿರುತ್ತಾರೆ.
ಕಾಡು ಪ್ರಾಣಿಗಳ ವಿರುದ್ಧ ನೀವು ಗೆಲ್ಲಲು ಸಾಧ್ಯವಿಲ್ಲ, ಎಂದು ಈ ಪಿಡುಗಿಗೆ ತಮ್ಮ ಇಳುವರಿಯ ಒಂದು ಭಾಗವನ್ನು ಬಿಟ್ಟುಕೊಡಲು ಈಗ ರಾಜಿ ಮಾಡಿಕೊಂಡಿರುವ ರೈತರು ತಮಾಷೆ ಮಾಡುತ್ತಾರೆ.
ಪ್ರತಿದಿನ ಹೊಲಕ್ಕೆ ಹೊರಡುವ ಮೊದಲು ಅಲ್ಲಿ ಕೆಟ್ಟದ್ದೇನು ನಡೆದಿರದಿರಲಿ ಎಂದು ಪ್ರಾರ್ಥಿಸುತ್ತ ಸಂಭವನೀಯ ಹಾನಿಗೂ ಸಿದ್ಧರಾಗಿರುತ್ತಾರೆ ರೆಂಘೆ.
ಅನುವಾದ: ಶಂಕರ. ಎನ್. ಕೆಂಚನೂರು