ಬೆಳ್ಳಂಬೆಳಗ್ಗೆ ಕಷ್ಟಪಟ್ಟು ಹಾಸಿಗೆಯಿಂದ ಮೇಲೆದ್ದ ಸುನೀತಾ ಸಾಹು “ಮಕ್ಕಳೆಲ್ಲಿ?” ಎಂದರು. ಅವರ ಗಂಡ ಬೋಧರಾಮ್ ಅವರು ಮಲಗಿದ್ದಾರೆ ಎಂದರು. ನಿಟ್ಟುಸಿರು ಬಿಟ್ಟರು ಸುನೀತಾ. ರಾತ್ರಿಯಿಡೀ ಸುನೀತಾ ನಿದ್ದೆ ಮಾಡಿರಲಿಲ್ಲ. ಬೋಧರಾಮರಿಗೆ ಆತಂಕ. ನಿಂತಲ್ಲಿ ಕುಂತಲ್ಲಿ ತೂಕಡಿಸಿ ಬಿದ್ದೀಯಾ ಜೋಕೆ, ಎಂದು ಬೋಧರಾಮ್ ಆಗಾಗ್ಗೆ ಗೇಲಿ ಮಾಡುತ್ತಿದ್ದರು.

ಆದರೆ ಏಪ್ರಿಲ್ 28ರ ಆ ರಾತ್ರಿ, ಬೋಧರಾಮ್ ಮತ್ತು ಸುನೀತಾ ಸಾಹುರವರ ಮೂವರು ಮಕ್ಕಳು (12ರಿಂದ 20 ವಯಸ್ಸಿನೊಳಗಿನವರು) ಬೆಚ್ಚಗಿನ ಸಾಸಿವೆ ಎಣ್ಣೆಯಿಂದ ತಮ್ಮ ತಾಯಿಯ ಕೈ, ಕಾಲು, ತಲೆ ಮತ್ತು ಹೊಟ್ಟೆಗೆ ಸರತಿಯ ಮೇಲೆ ತಿಕ್ಕುತ್ತಿದ್ದರೆ, ಅವರು ನೋವಿನಿಂದ ನರಳುತ್ತಿದ್ದರು. “ನನಗೇನೋ ಆಗುತ್ತಿದೆ,” ಎಂದು ಗೊಣಗುತ್ತಿದ್ದರು – ಬೆಳಿಗ್ಗೆ ಬೋಧರಾಮ್ ನೆನೆಸಿಕೊಂಡರು.

ಈ ಸಾಹು ಕುಟುಂಬವು ಲಕ್ನೋ ಜಿಲ್ಲೆಯ ಖರಗಪುರ ಜಾಗೀರಿನ ಜೋಪಡಿಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಛತ್ತೀಸಗಡದ ಬೆಮೆತ್ರ ಜಿಲ್ಲೆಯ ಮಾರೋ ಎಂಬ ಹಳ್ಳಿಯಿಂದ ಎರಡು ದಶಕಗಳ ಕೆಳಗೆ ಚಿನ್ಹಾತ ತಾಲ್ಲೂಕಿನ ಈ ಹಳ್ಳಿಗೆ ಬಂದವರು. ಬೋಧರಾಮ್, 42 ವ, ಕಟ್ಟಡಗಳ ಗಾರೆಕೆಲಸ ಮಾಡುತ್ತಾರೆ; ಸುನೀತಾ, 39 ವ, ಮನೆಗೆಲಸ ಮಾಡಿಕೊಂಡಿದ್ದಾರೆ.

ಉತ್ತರಪ್ರದೇಶದಲ್ಲಿ ಕೋವಿಡ್- 19 ಸಾಂಕ್ರಾಮಿಕದ ಎರಡನೇ ಅಲೆ ಭೀಕರತೆ ಸೃಷ್ಟಿಸಿದ್ದು ಏಪ್ರಿಲ್ ತಿಂಗಳಿನಲ್ಲೇ. ಏಪ್ರಿಲ್ 24ರಂದು, ರಾಜ್ಯದಲ್ಲಿ ಒಂದೇ ದಿನ 38,055 ಹೊಸ ಪ್ರಕರಣಗಳು ವರದಿಯಾದವು- ಉತ್ತರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂಬ ಅನುಮಾನಗಳಿದ್ದರೂ ಅದು ಗರಿಷ್ಟ ಸಂಖ್ಯೆಯಾಗಿತ್ತು.

“ನೈಜ ಪ್ರಕರಣಗಳ ಸಂಖ್ಯೆ ನಾಲ್ಕರಿಂದ ಐದು ಪಟ್ಟು ಹೆಚ್ಚಿರಬಹುದು. ರೋಗವನ್ನು ಅವಮಾನದಂತೆ ನೋಡುತ್ತಿರುವ ಜನರು ಪರೀಕ್ಷೆ ಮಾಡಿಸಲು ಹಿಂಜರಿಯುತ್ತಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ನೈಜ ಚಿತ್ರಣ ಪಡೆಯುವುದು ಕಷ್ಟ” ಎನ್ನುತ್ತಾರೆ ಲಕ್ನೋದ ರಾಮಮನೋಹರ ಲೋಹಿಯಾ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸನ ಕಮ್ಯುನಿಟಿ ಮೆಡಿಸಿನನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ರಶ್ಮಿಕುಮಾರಿ.

ಸುನೀತಾರು ಕರೋನಾ ವೈರಸ್ ಸೋಂಕಿನ ಲಕ್ಷಣಗಳಾದ ಜ್ವರ, ಮೈಕೈ ನೋವು ಮತ್ತು ಅತಿಸಾರ – ಇವುಗಳಿಂದ ಬಳಲುತ್ತಿದ್ದರೂ, ಮನೆಯಲ್ಲಿ ಬೇರೆ ಯಾರಿಗೂ ಸೋಂಕು ಇಲ್ಲದೇ ಇರುವುದರಿಂದ ಸುನೀತಾರಿಗೆ ಬಂದಿರುವುದು ಕೋವಿಡ್ -19 ಅಲ್ಲ ಎಂದು ಖಚಿತವಾಗಿ  ಅಂದುಕೊಂಡಿದ್ದರು.

Bodhram Sahu's wife Sunita was diagnosed with typhoid but could have been Covid-positive too
PHOTO • Courtesy: Bodhram Sahu

ಬೋಧರಾಮ್ ಸಾಹೂರವರ ಹೆಂಡತಿ ಸುನೀತಾರಿಗೆ ಟೈಫಾಯಿಡಗಾಗಿ ಚಿಕಿತ್ಸೆ ನೀಡಲಾಯಿತು ಆದರೆ ಅವರು ಕೋವಿಡ್ ಪಾಸಿಟಿವ್ ಕೂಡ ಆಗಿರಬಹುದು

ಏಪ್ರಿಲ್ 26ರ, ಮುಂಜಾನೆ ಮೊದಲ ಬಾರಿಗೆ ಮೈಕೈ ನೋವು ಮತ್ತು ಸುಸ್ತಾಗುತ್ತಿದೆ ಎಂದಾಗ, ಬೋಧರಾಮ್ ಅವರನ್ನು ಸೈಕಲ್ಲಿನ ಕ್ಯಾರಿಯರ್ರಿನ ಮೇಲೆ ಕೂರಿಸಿಕೊಂಡು,  ಮೂರು ಕಿಮೀ ದೂರ ಸೈಕಲ್ ತುಳಿದುಕೊಂಡು ಡಾಕ್ಟರಲ್ಲಿಗೆ ಹೋದರು. ದೊಡ್ಡ ಆಸ್ಪತ್ರೆಗೆ ಸೇರಿಸಬೇಕೇ? ಎಂದು ಡಾಕ್ಟರನ್ನು ಕೇಳಿದರು.

ಡಾಕ್ಟರು ಹೇಳಿದ್ದನ್ನು ಬೋಧರಾಮ್ ನೆನಪಿಸಿಕೊಳ್ಳುತ್ತಾರೆ: “ನೀವು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ? ಯಾವ ಆಸ್ಪತ್ರೆಯಲ್ಲೂ ಕಾಲಿಡಲು ಜಾಗವಿಲ್ಲ. ಈ ಔಷಧಿ ಕೊಡಿ, ಇನ್ನು ಮೂರು ದಿನದಲ್ಲಿ ಅವರು ಸರಿಹೋಗುತ್ತಾರೆ.” ಡಾಕ್ಟರು ಹತ್ತಿರದ ರೋಗ ಪರೀಕ್ಷಾ ಪ್ರಯೋಗಾಲಯಕ್ಕೆ ಹೇಳಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಿದರು. ಕೋವಿಡ್- 19 ಪರೀಕ್ಷೆ ಮಾಡಲಿಲ್ಲ.

ರಕ್ತ ಪರೀಕ್ಷೆಗೆ ರೂ. 3,000 ಖರ್ಚಾಯಿತು. ಸಲಹೆ ಮತ್ತು ಔಷಧಿಗಳು- ಕಂದು ಬಣ್ಣದ ಕಾಗದದ ಕವರುಗಳಲ್ಲಿದ್ದ ಮಾತ್ರೆಗಳು ಮತ್ತು ಕ್ಯಾಪ್ಸೂಲುಗಳನ್ನು ಮತ್ತು ಡಾಕ್ಟರು ಹೇಳಿದಂತೆ ಪುಷ್ಟಿಗಾಗಿ ಕಡು ಕಂದುಬಣ್ಣದ ದ್ರವವಿದ್ದ ಬಾಟಲು – ಇವುಗಳಿಗೆ ಮತ್ತೆ ರೂ. 1,700 ಕೊಟ್ಟರು.

ಅದೇ ದಿನ ಸಾಯಂಕಾಲ 5 ಗಂಟೆಗೆ, ತನಗೆ ತುಂಬಾ ಸುಸ್ತಾಗುತ್ತಿದೆಯೆಂದೂ, ಕೂರಲು ಆಗುತ್ತಿಲ್ಲವೆಂದರೂ ಸುನೀತಾರನ್ನು ಕೂರಿಸಿಕೊಂಡು ಬೋಧರಾಮ್ ಮತ್ತೆ ಕ್ಲಿನಿಕ್ಕಿಗೆ ಸೈಕಲ್ ತುಳಿದರು. ಅಷ್ಟೊತ್ತಿಗೆ ಅವರ ರಕ್ತದ ಪರೀಕ್ಷೆಯ ವರದಿ ಬಂದಿತ್ತು. ಅದರಲ್ಲಿ ಗ್ಲುಮ್ಯಾಟಿಕ್ ಆಕ್ಸಲೋಅಸಿಟಿಕ್ ಟ್ರಾನ್ಸ್ ಅಮೈನೇಸ್ ಕಿಣ್ವರಸದ ಪರಿಮಾಣ ಹೆಚ್ಚಾಗಿರುವುದು, ಪಿತ್ತಕೋಶಕ್ಕೆ (ಇತರೆ ಅಂಗಗಳಿಗಿಂತ) ಹಾನಿಯಾಗಿರುವುದನ್ನು ತೋರಿಸುತ್ತಿತ್ತು. ಸುನೀತಾರಿಗೆ ಟೈಫಾಯಿಡ್ ಇದೆ ಎಂಬ ತೀರ್ಮಾನಕ್ಕೆ ಡಾಕ್ಟರು ಬಂದರು. ಸುಸ್ತು ಕಡಿಮೆಯಾಗಲು ಕನಿಷ್ಟ ಒಂದು ಗ್ಲೂಕೋಸ್ ಡ್ರಿಪ್ ಆದರೂ ಹಾಕಿ ಎನ್ನುವ ಬೋಧರಾಮರ ಮನವಿಯನ್ನು ಒಪ್ಪದ ಡಾಕ್ಟರು, ಅವರು ಕೊಟ್ಟಿರುವ ಔಷಧಿಗಳು ತಕ್ಷಣ ಕಾಯಿಲೆ ವಾಸಿ ಮಾಡುತ್ತವೆ ಎಂದು ಸಾಗಹಾಕಿದರು.

ಸಂಶೋಧನಾ ಪ್ರಬಂಧವೊಂದು ಹೇಳುವಂತೆ ಒಂದು ಕಾಲದಲ್ಲಿ ಟೈಫಾಯಿಡ್ ಕೂಡ ಪ್ರಪಂಚದ ಆರೋಗ್ಯ ವ್ಯವಸ್ಥೇಗೆ ಸವಾಲಾಗಿತ್ತು, “…ಕೋವಿಡ್ -19 ರೋಗಿಗಳ ವೈಡಾಲ್ ಪರೀಕ್ಷೆ (ಟೈಫಾಯಿಡ್ ಪತ್ತೆ ಹಚ್ಚಲು ಮಾಡುವ ಪರೀಕ್ಷೆ) ಹುಸಿ ಪಾಸಿಟಿವ್ ಆಗುತ್ತಿರುವುದು ಮುಂದುವರೆಯುತ್ತಿರುವ ದೇಶಗಳ ಮುಖ್ಯ ಸಾರ್ವಜನಿಕ ಆರೋಗ್ಯದ ಸಮಸ್ಯೆಯಾಗಿದೆ … ಈಗ ಟೈಫಾಯಿಡ್ ಮತ್ತು ಡೆಂಗ್ಯೂ ಹುಸಿ ಪಾಸಿಟಿವಗಳನ್ನು … ಎಚ್ಚರಿಕೆಯಿಂದ ಗಮನಿಸಿ ತೀರ್ಮಾನಿಸಬೇಕು ಮತ್ತು ನಿಗಾ ಇಡಬೇಕು ಹಾಗೂ ಕೋವಿಡ್- 19 ಸಾಂಕ್ರಾಮಿಕದ ಸಮಯದಲ್ಲಿ ಇಂತಹ ರೋಗಿಗಳ ಮೇಲೆ ನಿರಂತರವಾಗಿ  ಗಮನವಿಟ್ಟಿರಬೇಕು.”

ಆರ್.ಎಂ.ಎಲ್.ಐ.ಎಂ.ಎಸ್ ನ ಕೋವಿಡ್- 19 ಆಸ್ಪತ್ರೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರಿವಳಿಕೆ ತಜ್ಞ ಪ್ರವೀಣ್ ಕುಮಾರರವರು ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ, “ಕೋವಿಡ್ ಮತ್ತು ಟೈಫಾಯಿಡ್ ಪ್ರತಿಕಾಯಗಳ ಪಾಸಿಟಿವಿಟಿಯು ಅದಲುಬದಲಾಗುತ್ತಿದೆ. ನಮ್ಮ ವೈದ್ಯಕೀಯ ಅನುಭವದಲ್ಲಿ ಹೇಳುವುದಾದರೆ ಶೇ. 10ರಷ್ಟು ಟೈಫಾಯಿಡ್ ಪಾಸಿಟಿವ್ ಪ್ರಕರಣಗಳು ನಿಜವಾಗಿಯೂ ಕೋವಿಡನ ಕಾರಣದಿಂದ ಪಾಸಿಟಿವ್ ಆಗಿರುತ್ತವೆ”

ಟೈಫಾಯಿಡ್ ಪಾಸಿಟಿವ್ ಆಗಿದ್ದ ಸುನೀತಾ, ಆದಿನ ಏಪ್ರಿಲ್ 29 ರ ಬೆಳಿಗ್ಗೆ ಮಕ್ಕಳೆಲ್ಲಿ ಎಂದು ಕೇಳಿದ ಮೇಲೆ ಅರ್ಧ ಗಂಟೆಯ ನಂತರ – ಜ್ವರ ಮತ್ತು ಇತರೆ ಲಕ್ಷಣಗಳು ಉಲ್ಬಣಿಸಿದವು, ಅಲ್ಲಿಂದ ಕೇವಲ ಮೂರು ದಿನಗಳಲ್ಲಿ ತೀರಿ ಹೋದರು. ಕೊನೆಗೂ ಅವಳು ನಿದ್ದೆ ಹೋದಳು ಎಂದುಕೊಂಡರು ಬೋಧರಾಮ್. ತನ್ನ ದುಃಖದ ಅಳು, ಮಲಗಿದ್ದ ಮಕ್ಕಳನ್ನು ಎಬ್ಬಿಸುವ ಮುನ್ನ ತಮ್ಮ ಕೈಯಿಂದ ಸುನೀತಾರ ಹಣೆಯನ್ನು ನೇವರಿಸಿದರು. “ಅವಳು ಕೊನೆಗೂ ಮತ್ತೆ ಏಳದಂತೆ ಮಲಗಿಬಿಟ್ಟಳು,” ಅವರ ಹಳ್ಳಿಯಿಂದ ಫೋನಿನಲ್ಲಿ ಮಾತನಾಡುವಾಗ ಎಲ್ಲ ಘಟನಾವಳಿಗಳು ಮತ್ತು ಸಾವಿನ ಬಗ್ಗೆ ವಿವರವಾಗಿ ಹೇಳಿದರು.

ಸುನೀತಾರ ಅಂತಿಮ ಕ್ರಿಯೆಗಳನ್ನು ಮಾಡಲು ಮರಣ ಪ್ರಮಾಣಪತ್ರ ಬೇಕಾಗಿತ್ತು. ಖರಗಪುರ ಜಾಗೀರಿನ ಪ್ರಧಾನರಾದ ರಬೀಲಾ ಮಿಶ್ರಾರಿಂದ ಅದನ್ನು ಪಡೆದೆವು. ನೀಲಿ ಶಾಹಿಯಲ್ಲಿ ’ಇವರು 29.04.2021 ರಂದು ತನ್ನ ಜೋಪಡಿಯಲ್ಲಿ ಸಾವಿಗೀಡಾಗಿದ್ದಾರೆ’ ಎಂದು ಬರೆದುಕೊಟ್ಟರು. ಅದರಲ್ಲಿ ಸಾವಿಗೆ ಕಾರಣ ಏನೆಂದು ಬರೆಯಲಿಲ್ಲ.

ಇಂತಹ ಸಂದರ್ಭದಲ್ಲಿ ಸುನೀತಾರ ಸಾವು ಕೋವಿಡ್ ಸಾವಿನ ಪ್ರಕರಣವೆಂದು ವರದಿಯಾಗುವುದಿಲ್ಲ. ಉತ್ತರಪ್ರದೇಶ ಮತ್ತು ಇತರೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ವರದಿ ಮಾಡಲಾಗುತ್ತಿದೆ ಎಂಬ ಆತಂಕದ ಜೊತೆಗೆ ಕೋವಿಡ್- 19 ಸಾವುಗಳು ವರದಿಯಾಗುತ್ತಿರುವ ಸಂಖ್ಯೆಗಿಂತ ಇನ್ನೂ ವಿಪರೀತ ಸಂಖ್ಯೆಯಲ್ಲಿವೆ ಎಂಬುದೂ ಕೂಡ ಜಾಗತಿಕ ಮಟ್ಟದಲ್ಲಿ ಕಳವಳಕಾರಿಯಾದ ಸಂಗತಿಯಾಗಿದೆ.

Ramvati with her son Rakesh Kumar at her husband Ram Saran’s kiosk: they disbelieve the ‘Covid-19 positive’ notation
PHOTO • Rana Tiwari

ಮಗ ರಾಕೇಶ್ ಕುಮಾರ್ ಜೊತೆಯಲ್ಲಿ ತನ್ನ ಗಂಡ ರಾಮ್ ಶರಣರ ಅಂಗಡಿಯಲ್ಲಿರುವ ರಾಮವತಿ: ಕೋವಿಡ್- 19 ಪಾಸಿಟಿವ್ ಆಗಿರುವ ಫಲಿತಾಂಶವನ್ನು ಅವರು ನಂಬುವುದೇ ಇಲ್ಲ

“… ನೇರವಾಗಿ ಮತ್ತು ಪರೋಕ್ಷವಾಗಿ ನಾವು ಕೋವಿಡ್- 19ಗೆ ಸಂಬಂಧಿಸಿದಂತೆ ವರದಿಯಾಗುತ್ತಿರುವ ಒಟ್ಟು ಸಾವುಗಳು ಕಡಿಮೆ ಸಂಖ್ಯೆಯಲ್ಲಿ ತೋರಿಸುತ್ತಿರುವುದನ್ನು ನೋಡುತ್ತಿದ್ದೇವೆ,” ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ . “ಹೆಚ್ಚುವರಿ ಸಾವು” ಪದದಲ್ಲಿ ಹೇಳಿದಂತೆ “ಸಾಮಾನ್ಯ” ಪರಿಸ್ಥಿತಿಯಲ್ಲಿ ನೋಡುತ್ತಿದ್ದ ಸಾವುಗಳಿಗಿಂತ ಹೆಚ್ಚಿನ ಸಾವುಗಳು. ಇವುಗಳಲ್ಲಿ ಕೇವಲ ಪರೀಕ್ಷಿಸಿ ಖಚಿತಪಡಿಸಿದ ಸಾವುಗಳು ಮತ್ತು ಸರಿಯಾಗಿ ತಪಾಸಣೆ ಮಾಡದೆ ವರದಿಯಾದ ಸಾವುಗಳ ಜೊತೆಗೆ ಕರೋನಾ ವಿಷಮ ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲ ಸಾವುಗಳನ್ನೂ ಒಳಗೊಳ್ಳುತ್ತವೆ.

ಸರಿಯಾಗಿ ಪರೀಕ್ಷೆ ಮಾಡದೆ, ಕೋವಿಡ್ ಅನ್ನು ಗುರುತಿಸದೇ ಇರುವ ಬಹುತೇಕ ಸಂದರ್ಭಗಳಲ್ಲಿ ಹೃದಯದ ಸಮಸ್ಯೆಗಳು ಹೆಚ್ಚು ಕಂಡುಬಂದಿವೆ. ಅಂದರೆ ಕೋವಿಡನಿಂದ ಆಮ್ಲಜನಕದ ಸರಬರಾಜಿಗೆ ತೊಂದರೆ ಉಂಟಾಗಿ ಹೃದಯಾಘಾತ ಉಂಟುಮಾಡಬಲ್ಲದು.

ಲಕ್ನೋದಿಂದ 56 ಕಿಮೀ ದೂರದ ಸೀತಾಪುರ ಜಿಲ್ಲೆಯ ಮಹಮದಾಬಾದ್ ಬ್ಲಾಕಿನ ಮೀರಾನಗರ ಹಳ್ಳಿಯ ಶರಣ್ ಅವರ ಕುಟುಂಬದಲ್ಲಿ ಆದದ್ದು ಇನ್ನೊಂದು ರೀತಿ. ಏಪ್ರಿಲ್ 22ರಂದು ಹೊತ್ತು ನೆತ್ತಿಗೇರಿದ ಮೇಲೆ 57ರ ಪ್ರಾಯದ ರಾಮಶರಣರಿಗೆ ವಿಪರೀತ ನೋವು ಕಾಣಿಸಿಕೊಂಡಿತು.  ಅವರ ಹೆಂಡತಿ 56 ರ ಪ್ರಾಯದ ರಾಮವತಿ ಎಲ್ಲಿ ನೋವಿದೆ ಎಂದು ತಿಳಿಯಲು ಅವರ ಎದೆಯ ಮೇಲೆ ಅಲ್ಲಲ್ಲಿ ಕೈ ಇಟ್ಟು ನೋಡಿದರು.

16 ವಯಸ್ಸಿರುವಾಗಲೇ ರಾಮವತಿ ತಮ್ಮ ಗಂಡನೊಂದಿಗೆ ಲಕ್ನೋಗೆ ಹೋದವರು, ಈಗಲೂ ಅಲ್ಲೇ ಇದ್ದರು. ನಗರದ ಬಡಗಣಕ್ಕಿರುವ ಅಲಿಗಂಜಿನಲ್ಲಿ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ಕುಟುಂಬದಲ್ಲಿ, ರಾಮಶರಣರು ಪುಟ್ಟ ಅಂಗಡಿಯಲ್ಲಿ ನೀರಿನ ಬಾಟಲು, ಚಿಪ್ಸ್, ತಂಪು ಪಾನೀಯಗಳು ಮತ್ತು ಸಿಗರೇಟು ಮಾರುತ್ತಾರೆ. ಕೆಲವು ತಿಂಗಳಿನಿಂದ ಅವರು ಮಾರುವ ಈ ಸಾಮಾನುಗಳ ನಡುವೆ ಮುಖಗವಸೂ (ಮಾಸ್ಕು) ಜಾಗ ಪಡೆದುಕೊಂಡಿದೆ.

ಲಾಕ್ ಡೌನಿನ ಕಾರಣದಿಂದ ಅಂಗಡಿಗೆ ಬಾಗಿಲು ಹಾಕಿದ್ದರಿಂದ ರಾಮಶರಣರು ಹಳ್ಳಿಯ ತಮ್ಮ ಹಿರೀಕರ ಮನೆಗೆ ಆಗಾಗ್ಗೆ ಹೋಗಿಬರುತ್ತಿದ್ದರು. ಇನ್ನು ರಾಮವತಿಯವರು ಅನೇಕ ಮನೆಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಸಂಸಾರ ನಡೆಯುತ್ತಿತ್ತು.

ರಾಮಶರಣರು ತಮಗೆ ನೋಯುತ್ತಿದೆ ಎಂದು ಹೇಳಿದಾಕ್ಷಣ, ಜೆರಾಕ್ಸ್ ಮಶೀನ್ ನಡೆಸುವ ಅವರ ಮಗ ರಾಜೇಶ್ ಕುಮಾರ್ ತಕ್ಷಣ ಅವರನ್ನು ಮನೆಯಿಂದ ಸುಮಾರು 10 ಕಿಮೀ ದೂರದ ಮಹಮದಾಬಾದಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆಗ ಅಲ್ಲೇ ಇದ್ದ ಡಾಕ್ಟರು ರಾಮಶರಣರಿಗೆ ಎರಡು ಇಂಜೆಕ್ಷನ್ ನೀಡಿದರು.

Ramvati in the colony where she does domestic work. With the kiosk (right) shut during the lockdown, the household had run on her earnings
PHOTO • Rana Tiwari
Ramvati in the colony where she does domestic work. With the kiosk (right) shut during the lockdown, the household had run on her earnings
PHOTO • Rana Tiwari

ತಾವು ಮನೆಗೆಲಸ ಮಾಡುವ ಕಾಲೋನಿಯಲ್ಲಿ ರಾಮಾವತಿ. ಲಾಕ್ ಡೌನಿನಲ್ಲಿ ಈ ಪುಟ್ಟ ಅಂಗಡಿ ಬಾಗಿಲು ಹಾಕಿದ್ದಾಗ ಅವರ ದುಡಿಮೆಯಿಂದಲೇ ಮನೆ ನಡೆಯುವಂತಾಯಿತು

“ಆಗಲೆ ನಮ್ಮ ತಂದೆ ಉಸಿರನ್ನು ಮೇಲೆಳೆಯುತ್ತಿದ್ದರು. ಆಗ ಡಾಕ್ಟರು ನಮ್ಮಲ್ಲಿ ಕೇವಲ ಚಿಕ್ಕ ಆಮ್ಲಜನಕದ ಸಿಲಿಂಡರಿದೆ, ಅದರಿಂದ ಏನೂ ಪ್ರಯೋಜನವಿಲ್ಲ, ಅವರನ್ನು ಜಿಲ್ಲಾಸ್ಪತ್ರೆಗೆ (ಆ ಹಳ್ಳಿಯಿಂದ ಸುಮಾರು 8 ಕಿಮೀ) ಕರೆದುಕೊಂಡು ಹೋಗಬೇಕೆಂದರು,” ನೆನಪಿಸಿಕೊಂಡರು ಕುಮಾರ್. ಅಂಬ್ಯುಲೆನ್ಸಿಗಾಗಿ 108 (ತುರ್ತು ಆರೋಗ್ಯಸೇವೆಯ ಕೇಂದ್ರೀಕೃತ ಸಹಾಯವಾಣಿ) ಕ್ಕೆ ಕರೆ ಮಾಡಿದೆ. ಏಪ್ರಿಲ್ 22ರ ಮಧ್ಯಾಹ್ನ ಸುಮಾರು 2.30 – ಅಂಬ್ಯುಲೆನ್ಸಿನೊಳಗೆ ಹತ್ತಿಸುತ್ತಿದ್ದಂತೆ ರಾಮಶರಣರು ತಮ್ಮ ಕೊನೆಯುಸಿರೆಳೆದರು.

“ನಾನಿನ್ನು ಬದುಕುವುದಿಲ್ಲ ಎಂದು ಹೇಳುತ್ತಲೇ ಇದ್ದರು. ಎಂತಹ ಆರೋಗ್ಯವಂತ ಜೀವ, ಆದರೆ ತನ್ನ ಒಡಲೊಳಗಿನ ಉಸಿರೆಲ್ಲವನ್ನೂ ಕಳಕೊಂಡಿತು,” ಎಂದರು ಕುಮಾರ್.

ಅವರಿಗೆ ಮರಣ ಪ್ರಮಾಣ ಪತ್ರ ನೀಡಲಿಲ್ಲ ಮತ್ತು ರಾಮಶರಣರನ್ನು ಅವೊತ್ತು ಸಾಯಂಕಾಲವೇ ಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಆರೋಗ್ಯ ಕೇಂದ್ರದ ಡಾಕ್ಞರರ ಚೀಟಿಯಲ್ಲಿ ‘ಕೋವಿಡ್ 19 ಎಜಿ ಟೆಸ್ಟ್ ಪಾಸಿಟಿವ್’ ಎಂದು ಬರೆದಿದ್ದರೂ, ಮನೆಯವರೆಲ್ಲ ಅವರು ‘ಹೃದಯಾಘಾತ’ದಿಂದ ತೀರಿಕೊಂಡಿದ್ದಾರೆ ಎಂದು ಭಾವಿಸಿದ್ದರಿಂದ ಅವರನ್ನು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಹಾಗೆಯೇ ಕೊನೆಯ ವಿಧಿಗಳನ್ನು ಮಾಡಲಾಯಿತು.

ಪ್ರಾಣ ಹೋಗುವ ಸಂದರ್ಭದಲ್ಲಿ ಆರೋಗ್ಯ ಕೇಂದ್ರದಲ್ಲಿ ರಾಮಶರಣರಿಗೆ ಚಿಕಿತ್ಸೆ ಸಿಗದಿದ್ದುದು ರಾಜ್ಯದ ನಗರಗಳು ಮತ್ತು ಹಳ್ಳಿಗಳಲ್ಲಿ ಹದಗೆಟ್ಟಿರುವ ಆರೋಗ್ಯ ಸೌಲಭ್ಯಗಳ ಬಗ್ಗೆ ಸಾಕಷ್ಟು ಹೇಳುತ್ತದೆ – ಮೇ 17ರಂದು, ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವು ಈ ಕೊರತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು.

ಆದರೆ ಕೇವಲ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಷ್ಟೇ ಆರೋಗ್ಯ ಸೇವೆಗಳ ಕೊರತೆಯಿರಲಿಲ್ಲ. ರಾಜಧಾನಿ ಲಕ್ನೋದಂತಹ ನಗರದಲ್ಲಿಯೂ ಆರೋಗ್ಯ ಸೌಕರ್ಯಗಳ ಕೊರತೆಯಿದೆ ಎಂಬುದು ಕೆಲವು ತಿಂಗಳ ಹಿಂದೆ ಮೌರ್ಯ ಅವರ ಕುಟುಂಬದವರಿಗೆ ಆದ ಅನುಭವ ಹೇಳುತ್ತದೆ.

ಏಪ್ರಿಲ್ 12 ರಂದು ಲಕ್ನೋದ ಚಿನ್ಹಾತ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುನಿಲ್ ಕುಮಾರ್ ಮೌರ್ಯ, 41 ವ., ಅಂದು ತನ್ನ ಸೋದರನ ಮಗನಿಗೆ ಹೇಳಿದ್ದರು: “ನನಗೆ ಉಸಿರಾಡಲು ಆಗುತ್ತಿಲ್ಲ. ಇನ್ನೂ ಯಾಕೆ ನನ್ನನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡಿದ್ದೀರಿ. ನನ್ನನ್ನು ಮನೆಗೆ ಕರೆದುಕೊಂಡು ಹೋದರೆ ಸಾಕು ಗುಣವಾಗುತ್ತದೆ”

ಅದಾಗುವ ಒಂದು ವಾರ ಮೊದಲು ಮೌರ್ಯ ಅವರಿಗೆ ಜ್ವರ ಬರಲು ಶುರುವಾಗಿತ್ತು. ಜೊತೆಗೆ ಕೆಮ್ಮೂ ಇತ್ತು, ಆದರೆ ಇದು ಸಾಮಾನ್ಯವಾಗಿ ಬರುತ್ತಿದುದರಿಂದ ಮನೆಯವರು ಅದರ ಬಗ್ಗೆ ಹೆಚ್ಚು ಗಮನ ವಹಿಸಲಿಲ್ಲ.  ಆದರೆ ಅವರು ಯಾವಾಗ “ನನಗೆ ನಡೆಯಲು ಶಕ್ತಿಯಿಲ್ಲ” ಎಂದರೋ ಆಗ ಮನೆಯವರಿಗೆ ದಿಗಿಲಾಯಿತು – 30 ವರ್ಷದ ಪವನ್ ನೆನಪು ಮಾಡಿಕೊಂಡರು.

ಮೌರ್ಯ ಅವರ ಕುಟುಂಬದವರು ಲಕ್ನೋದ ಮಧ್ಯದಲ್ಲಿರುವ ಗೋಮತಿನಗರ ಪ್ರದೇಶದ ಅನೇಕ ವಲಸೆ ಕುಟುಂಬಗಳಿಗೆ ಆಸರೆಯಾಗಿರುವ ಚೋಟಿ ಜುಗೌಲಿ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ. ಎರಡು ದಶಕಗಳ ಕೆಳಗೆ ಸುಲ್ತಾನಪುರ ಜಿಲ್ಲೆಯ ಜಯಸಿಂಗಪುರ ಬ್ಲಾಕಿನ ಬೀರಸಿಂಗಪುರದಿಂದ ಸುನೀಲ್ ಕುಮಾರ್ ಇಲ್ಲಿಗೆ ಬಂದರು. ಮೊದಲು ಕಟ್ಟಡ ನಿರ್ಮಾಣ ಜಾಗಗಳಿಗೆ ಕೂಲಿಯವರನ್ನು ಕಳುಹಿಸಿಕೊಡುವ ಕಟ್ಟಡ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು.

Rakesh Kumar with a photo of his father Ram Saran on his phone: the family's inability to get care at the CHC speaks of the precarious health facilities in the state’s towns and villages
PHOTO • Rana Tiwari

ತಂದೆ ರಾಮಶರಣರ ಚಿತ್ರವನ್ನು ಫೋನಿನಲ್ಲಿ ತೋರಿಸುತ್ತಿರುವ ರಾಕೇಶ್ ಕುಮಾರ್: ಈ ಕುಟುಂಬವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವುದು ರಾಜ್ಯದ ನಗರ ಮತ್ತು ಹಳ್ಳಿಗಳ ಹದಗೆಟ್ಟ ಆರೋಗ್ಯ ಸೌಲಭ್ಯಗಳ ಬಗ್ಗೆ ಹೇಳುತ್ತದೆ

ಅತ್ಯಂತ ಜನನಿಬಿಡವಾಗಿರುವ ಚೋಟು ಜುಗೌಲಿ ಮತ್ತು ಹೆಸರಿನಂತೆಯೇ ದೊಡ್ಡದಾದ ಬಡಿ ಜುಗೌಲಿ, ಸುಮಾರು 1.5 ಕಿಮೀ ವರೆಗೆ ಹರಡಿವೆ, ಇವೆರಡಕ್ಕೆ ಇರುವುದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರು ಅಂಗನವಾಡಿಗಳು.

ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರೊಬ್ಬರು (ಆಶಾ ಕಾರ್ಯಕರ್ತೆ) ಹೇಳುವಂತೆ ಈ ಸಾಂಕ್ರಾಮಿಕವು ಆರಂಭವಾದಾಗಿನಿಂದ ಈ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಾಗಲಿ, ಮಾಸ್ಕು ಮತ್ತು ಸ್ಯಾನಿಟೈಸರುಗಳನ್ನು ವಿತರಿಸಿದ್ದಾಗಲಿ ನಡೆದಿಲ್ಲ. ಸರಕಾರವು ಕ್ರಮ ಕೈಗೊಳ್ಳುವ ಭಯದಿಂದ ಅವರು ತಮ್ಮ ಹೆಸರು ಹೇಳಲು ಬಯಸಲಿಲ್ಲ, ಆದರೆ ಹೀಗೆ ಹರಡಿಕೊಂಡು ಬಿದ್ದಿರುವ 15,000 ಜನರಲ್ಲಿ ನೂರಾರು ಜನರಿಗೆ ಕೋವಿಡ್ -19 ತಗುಲಿದೆ – ಆದರೆ ಕೋವಿಡ್ ಪರೀಕ್ಷೆಯನ್ನೂ ಮಾಡಿಲ್ಲ ಅಥವಾ ಪಾಸಿಟಿವ್ ಪ್ರಕರಣಗಳೆಂದೂ ಪರಿಗಣಿಸಿಲ್ಲ.

ಅವರ ವ್ಯಾಪ್ತಿಯ 1517 ಮನೆಗಳಲ್ಲಿ ಒಂದೇ ಒಂದು ಸಾವೂ ಸಹ ಕೋವಿಡ್ ಸಾವು ಎಂದು ವರದಿಯಾಗಿಲ್ಲ. “ಜನರು ಶೀತ, ಕೆಮ್ಮು ಮತ್ತು ಜ್ವರಗಳಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ, ಆದರೆ ಒಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಲು ಸಿದ್ದವಿಲ್ಲ,” ಎಂದು ಅವರು ಕೆಲವು ತಿಂಗಳುಗಳ ಕೆಳಗೆ ಹೇಳಿದ್ದರು. “2020 ರ ಮಾರ್ಚಿಯಲ್ಲಿ ಕೋವಿಡ್ ಲಕ್ಷಣಗಳಿರುವ ರೋಗಿಗಳನ್ನು ಪತ್ತೆಹಚ್ಚಲು ಪ್ರತಿದಿನ 50 ಮನೆಗಳ ಸಮೀಕ್ಷೆ ಮಾಡಬೇಕೆಂದು ನಮಗೆ ಹೇಳಿದ್ದರು. ಅದು ಅಪಾಯಕರವಾದುದರಿಂದ ನಾನು ಹೊರಗೆ ಹೋಗುವುದಿಲ್ಲ. ನಾನು ನಮ್ಮ ವ್ಯಾಪ್ತಿಯಲ್ಲಿನ ಜನರ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದು, ಏನಾದರೂ ಆದರೆ ಫೋನಿನಲ್ಲಿ ತಿಳಿಸುವಂತೆ ಹೇಳಿದ್ದೇನೆ”

ಹಾಗಾಗಿ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಸುಲಭವಾಗಿ ಲಭ್ಯವಿರುವುದಿಲ್ಲ ಮತ್ತು ಪ್ರಾಥಮಿಕ ರೋಗ್ಯ ಕೇಂದ್ರದ ಡಾಕ್ಟರನ್ನು ಕೋವಿಡ್ ಕರ್ತವ್ಯಕ್ಕೆಂದು ಯಾವುದೋ ಆಸ್ಪತ್ರೆಗೆ ಹಾಕಿರುತ್ತಾರೆ. ಮೌರ್ಯ ಅಂತವರು ಕಾಯಿಲೆ ಬಿದ್ದಾಗ ತಕ್ಷಣಕ್ಕೆ ಯಾರ ನೆರವೂ ಸಿಕ್ಕುವುದಿಲ್ಲ.

ಇನ್ನೊಂದು ಕಡೆ, ಚೋಟಿ ಜುಗೌಲಿಯ ಡಾಕ್ಟರ್ ಕ್ಲಿನಿಕ್ಕೊಂದರಲ್ಲಿ ಕೆಲಸ ಮಾಡುವ ವಿಜ್ಞಾನ ಪದವೀಧರರಾಗಿರುವ ಪವನ್, ತಮ್ಮ ಚಿಕ್ಕಪ್ಪನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಅವರಿಗೆ ಆಂಟಿಜೆನ್ ಪರೀಕ್ಷೆಗೆಂದು ರೂ. 500 ಖರ್ಚಾಯಿತು, ಅದು ನೆಗೆಟಿವ್ ಆಗಿತ್ತು. ಮತ್ತೆ ಅವರನ್ನು ಅಲ್ಲಿಂದ ಸುಮಾರು 30 ಕಿಮೀ ದೂರದ ಟಿ.ಎಸ್. ಮಿಶ್ರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಆಸ್ಪತ್ರೆಯವರು ಆಂಟಿಜೆನ್ ಪರೀಕ್ಷೆ ನಂಬಲು ಸಾಧ್ಯವಿಲ್ಲ, ಆದ್ದರಿಂದ ಇಲ್ಲಿ ಅವರನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಆದರೆ ತುರ್ತು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಡಾಕ್ಟರು ಔಷಧ ಚೀಟಿಯನ್ನು ಬರೆದು ಕೊಟ್ಟರು, ಅದರಲ್ಲಿ ಇತರೆ ಔಷಧಗಳೊಂದಿಗೆ ಐವರಮೆಕ್ಟಿನ್, ‘ಸಿ’ ಜೀವಸತ್ವ ಮತ್ತು ಸತುವಿನ ಮಾತ್ರೆಗಳು ಇದ್ದವು – ಇವು ಸಾಮಾನ್ಯವಾಗಿ ಕೋವಿಡ್ -19 ಲಕ್ಷಣಗಳ ಚಿಕಿತ್ಸೆಗಾಗಿ ಶಿಫಾರಸು ಮಾಡುತ್ತಾರೆ.

Pawan Maurya: the antigen test turned up negative so his uncle Sunil Kumar Maurya could not be allotted a bed
PHOTO • Rana Tiwari

ಪವನ್ ಮೌರ್ಯ: ಇವರ ಚಿಕ್ಕಪ್ಪ ಸುನೀಲ್ ಕುಮಾರ್ ಮೌರ್ಯರ ಆಂಟಿಜೆನ್ ಪರೀಕ್ಷೆ ನೆಗೆಟಿವ್ ಆಗಿದ್ದರಿಂದ ಅವರಿಗೆ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲಿಲ್ಲ

ಸುನೀಲ್ ಮೌರ್ಯರ ಆಮ್ಲಜನಕ ಮಟ್ಟ ಅಷ್ಟೊತ್ತಿಗೆ 80 ಕ್ಕೆ ಇಳಿದಿತ್ತು. ಮನೆಯವರು ಇನ್ನೂ ಎರಡು ಆಸ್ಪತ್ರೆಗಳಿಗೆ ಎಡತಾಕಿದರು, ಆದರೆ ಅವರಿಗೆ ವೆಂಟಿಲೇಟರಿನ ಅವಶ್ಯಕತೆ ಇದೆ ಎಂದು ಹೇಳಿದರು, ಆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಇರಲಿಲ್ಲ. ಸತತ ನಾಲ್ಕು ತಾಸುಗಳ ಕಾಲ ಅಲೆದಾಡಿದ ಮೆಲೆ ಅವರನ್ನು ಒಂದು ಆಸ್ಪತ್ರೆಯವರು ದಾಖಲು ಮಾಡಿಕೊಳ್ಳಲು ಒಪ್ಪಿದರು, ಮೌರ್ಯ ಅವರಿಗೆ ಅಕ್ಸಿಜನ್ ಸಿಲಿಂಡರ್ ಅಳವಡಿಸಲಾಯಿತು. ಮತ್ತೆ ಪರೀಕ್ಷೆ, ಈ ಬಾರಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿದರು.

ಏಪ್ರಿಲ್ 12 ರಂದು ಅನೇಕ ಗಂಟೆಗಳ ಕಾಲ ಕಷ್ಟಪಟ್ಟು ಉಸಿರಾಟದ ಹೋರಾಟ ನಡೆಸಿದ ನಂತರ ಸುನೀಲ್ ತೀರಿಕೊಂಡರು. ಲಕ್ನೋ ನಗರ ಪಾಲಿಕೆಯಿಂದ ನೀಡಿದ ಪ್ರಮಾಣಪತ್ರದಲ್ಲಿ (ಅಂತ್ಯ ಸಂಸ್ಕಾರಕ್ಕೆ ಅಗತ್ಯವಾಗಿತ್ತು) ಸಾವಿಗೆ ಕಾರಣ “ಹೃದಯ ವೈಫಲ್ಯ” ಎಂದು ನಮೂದಿಸಲಾಗಿತ್ತು. ಎರಡು ದಿನಗಳ ನಂತರ ಬಂದ ಆರ್.ಟಿ-ಪಿ.ಸಿ.ಆರ್ ಪರೀಕ್ಷೆಯ ವರದಿಯಲ್ಲಿ ಕೋವಿಡ್ -19 ಪಾಸಿಟಿವ್ ಎಂದಿತ್ತು.

“ಒಂದೇ ವಾರದಲ್ಲಿ ಎಲ್ಲ ಮುಗಿದು ಹೋಗಿತ್ತು. ಕೋವಿಡ್ ಪರೀಕ್ಷೆಗಳು ನಮ್ಮನ್ನು ಸೋಲಿಸಿದ್ದವು,” ಎನ್ನುತ್ತಾರೆ ಪವನ್.

“ಸಾಂಕ್ರಾಮಿಕದ ಎರಡನೇ ಅಲೆ ಮತ್ತು ಆಸ್ಪತ್ರೆಗೆ ಹೋಗಲು ಸಾಲದ ವರಮಾನ ಎರಡೂ ಸೇರಿಕೊಂಡು ಕನಿಷ್ಟ ಚಿಕಿತ್ಸೆಯೂ ಸಿಗದೆ ನಗರದ ಬಡವರು ಸಾಯುವಂತಾಯಿತು,” ಎನ್ನುತ್ತಾರೆ ರಿಚಾ ಚಂದ್ರ, ಇವರು ನಗರದ ಕೊಳಚೆ ಪ್ರದೇಶಗಳು, ನಿರ್ಗತಿಕರು ಮತ್ತು ದಿನಗೂಲಿ ನೌಕರರೊಂದಿಗೆ ಕೆಲಸ ಮಾಡುವ ಲಕ್ನೋ ಮೂಲದ ವಿಜ್ಞಾನ್ ಫೌಂಡೇಶನ್ನಿನಲ್ಲಿ ಕಾರ್ಯಕ್ರಮ ವ್ಯವಸ್ಥಾಪಕರಾಗಿದ್ದಾರೆ. ಮುಂದುವರೆದು, ಕಿಕ್ಕಿರಿದ ಮನೆಗಳಲ್ಲಿ ವಾಸಿಸುವ ನಗರದ ಬಡವರಿಗೆ ಉದ್ಯೋಗದ ಕೊರತೆ, ಸಾಮಾಜಿಕ ಭದ್ರತೆಯ ಕೊರತೆ, ಅರಿವಿನ ಕೊರತೆ – ಈಗ ಅವುಗಳ ಜೊತೆಗೆ ಪರೀಕ್ಷೆ ಮಾಡಿದಾಗ ಕೋವಿಡ್ ಪಾಸಿಟಿವ್ ಆಗಿಬಿಟ್ಟರೆ ಎನ್ನುವ ಕಳಂಕದ ಭಯ.

ಆಂಟಿಜೆನ್ ಮತ್ತು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳೆರಡೂ ತಪ್ಪಾಗಿ ನೆಗೆಟಿವ್ ಆಗಬಲ್ಲದು ಎನ್ನುವ ವಿಷಯ ಈ ಭಯವನ್ನು ಇನ್ನಷ್ಟು ಹೆಚ್ಚಿಸಿದೆ.

“ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗಳು ತಪ್ಪಾಗುವುದಕ್ಕೆ ಬೇರೆ ಬೇರೆ ಕಾರಣಗಳಿವೆ” ಎನ್ನುತ್ತಾರೆ ಆರ್.ಎಂ.ಎಲ್.ಐ.ಎಂ.ಎಸ್ ನ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಜ್ಯೋತ್ಸ್ನಾ ಅಗರವಾಲ್. “ಈ ಪರೀಕ್ಷೆಯು ಆರ್.ಎನ್.ಎ.ಯ ಸಾರವನ್ನು ಹೆಚ್ಚಿಸುವ ತತ್ವವನ್ನು ಆಧರಿಸಿದೆ. ಇದು ಡಿ.ಎನ್.ಎ.ಯಂತೆ ಬದುಕುಳಿಯಲು ನಿರ್ದಿಷ್ಟ ಪರಿಸ್ಥಿತಿಯ ಅಗತ್ಯವಿಲ್ಲ (ಮಾದರಿಗಳನ್ನು ಕೊಂಡೊಯ್ಯುವಾಗ). ಜೊತೆಗೆ ಸ್ವಾಬನ್ನು ಸರಿಯಾಗಿ ತೆಗೆಯದಿರಬಹುದು, ಅಥವಾ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ನಿಂದ ಅನುಮೋದನೆಯಾಗದ ಕಿಟ್ಟನ್ನು ಬಳಸಿರಬಹುದು. ಆಂಟಿಜೆನ್ ಪರೀಕ್ಷೆಗಳು ಬೇಗ ಫಲಿತಾಂಶ ಕೊಡುತ್ತವೆ, ಆದರೆ ಅದರಲ್ಲಿ ಆರ್.ಎನ್.ಎಯ ಸಾರವನ್ನು ಹೆಚ್ಚಿಸಿ ಪರೀಕ್ಷಿಸುವುದಿಲ್ಲ, ಹಾಗಾಗಿ ಇದೊಂದು ರೀತಿ ಕಸದ ರಾಶಿಯಲ್ಲಿ ಕಳೆದು ಹೋದ ಸೂಜಿಯನ್ನು ಹುಡುಕಿದಂತೆ.

Neither private clinics nor government hospitals would admit Sadrunisha's son Suaib as his Covid test was negative.
PHOTO • Courtesy: Sadrunisha
Neither private clinics nor government hospitals would admit Sadrunisha's son Suaib as his Covid test was negative
PHOTO • Courtesy: Vigyan Foundation

ಸದೃನಿಶಾರ ಮಗ ಸುಯೀಬರ ಕೋವಿಡ್ ಫಲಿತಾಂಶ ನೆಗೆಟಿವ್ ಆಗಿದ್ದರಿಂದ ಖಾಸಗಿ ಕ್ಲಿನಿಕ್ಕುಗಳಾಗಲಿ ಅಥವಾ ಸರಕಾರಿ ಆಸ್ಪತ್ರೆಗಳಾಗಲಿ ಅವನನ್ನು ದಾಖಲು ಮಾಡಿಕೊಳ್ಳಲಿಲ್ಲ

ಕೇಂದ್ರ ಲಕ್ನೋದ ಮಣಕನಗರ ಪ್ರದೇಶದಲ್ಲಿನ ಗರಿ ಕನುವಾರ ಭಾಗದ 38 ವಯಸ್ಸಿನ ಸುಯೀಬ್ ಅಕ್ತರಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿತು.

ಏಪ್ರಿಲ್ ಎರಡನೇ ವಾರದಲ್ಲಿಯಷ್ಟೇ ಅಕ್ತರ್ ಸಿಡುಬಿನ ಕಾಯಿಲೆಯಿಂದ ಗುಣಮುಖರಾಗಿದ್ದರು. ಅದಾದ ನಂತರ 65ರ ಪ್ರಾಯದ ಅವರ ತಾಯಿ ಸದೃನಿಶರು ಬೇಡವೆಂದು ಹೇಳಿದರೂ ರಂಜಾನಿಗಾಗಿ ಉಪವಾಸ ಮಾಡಿದರು.

ಏಪ್ರಿಲ್ 27ರಂದು, ಅಕ್ತರ್ ಕೆಮ್ಮಲು ಮತ್ತು ಉಸಿರನ್ನು ಮೇಲೆಳೆಯಲು ಶುರು ಮಾಡಿದರು. ಮನೆಯವರು ಅವರನ್ನು ರೋಗ ಪರೀಕ್ಷಿಸುವ ಖಾಸಗಿ ಪ್ರಯೋಗಾಲಯಕ್ಕೆ ಕರೆದೊಯ್ದು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮತ್ತು ಸಿಟಿ ಸ್ಕ್ಯಾನ್ ಮಾಡಿಸಿದರು – ಇದಕ್ಕೆ ರೂ. 7800 ಖರ್ಚಾಯಿತು. ಆದರೆ ಪರೀಕ್ಷೆಯು ನೆಗೆಟಿವ್ ಎಂದು ಬಂತು, ಆದರೆ ಸ್ಕ್ಯಾನಿಂಗಿನಲ್ಲಿ ‘ವೈರಲ್ ನ್ಯುಮೋನಿಯಾ’ ಎಂದು ತೋರಿಸಿತ್ತು. ಕೋವಿಡ್ ಪರೀಕ್ಷೆಯು ನೆಗೆಟಿವ್ ಎಂದಿದ್ದರಿಂದ ಇತ್ತ ಖಾಸಗಿ ಕ್ಲಿನಿಕ್ಕುಗಳಾಗಲಿ ಅಥವಾ ಸರಕಾರಿ ಆಸ್ಪತ್ರೆಗಳಾಗಲಿ ಅವರನ್ನು ದಾಖಲು ಮಾಡಿಕೊಳ್ಳಲು ಸಿದ್ದವಿರಲಿಲ್ಲ. ಅವರಿಗೆ ಕೋವಿಡ್ ಪ್ರಕರಣಗಳೇ ಆದ್ಯತೆಯಾಗಿತ್ತು, ಹಾಸಿಗೆಗಳು ತುಂಬಿ ತುಳುಕುತ್ತಿದ್ದವು ಮತ್ತು ಇತರೆ ತುರ್ತಿಲ್ಲದ ದೈನಂದಿನ ಚಿಕಿತ್ಸೆಗಳು ಲಭ್ಯವಿರಲಿಲ್ಲ.

ಮನೆಯವರೆಲ್ಲ ಸೇರಿ ವ್ಯವಸ್ಥೆ ಮಾಡಿದ್ದ ಆಕ್ಸಿಜನ್ ಸಿಲಿಂಡರನ್ನು ಸಿಕ್ಕಿಸಿಕೊಂಡಿದ್ದರೂ ಉಸಿರಾಡಲು ಸಾಧ್ಯವಾಗದೆ ಏಪ್ರಿಲ್ 30ರಂದು ಅಕ್ತರ್ ತೀರಿಕೊಂಡರು. “ಉಸಿರನ್ನು ಮೇಲೆಳೆಯುತ್ತಿದ್ದರು, ಬಾಯಿಂದ ನೊರೆ ಬರಲು ಶುರುವಾಯಿತು” ಎಂದರು ಸದೃನಿಶಾ.

ಇತ್ತೀಚಿಗೆ ಕತಾರಿನಲ್ಲಿ ಕೆಲಸ ಗಿಟ್ಟಿಸಿರುವ ತಮ್ಮ ಮಗ “ಪ್ರತಿಭಾನ್ವಿತ ಎಲೆಕ್ಟ್ರಿಷಿಯನ್” ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.  “ಆದರೆ ಕೆಲಸದ ವೀಸಾ ಬರುವ ಮುನ್ನವೇ ಸಾವಿನ ವೀಸಾ ಬಂದಿತು” ಎಂದರು ತಣ್ಣನೆಯ ವಿಷಾದದಿಂದ.

ಮನೆಯಿಂದ ಸುಮಾರು ಮೂರು ಕಿಮೀ ದೂರದ ಪ್ರೇಮವತಿ ನಗರದಲ್ಲಿನ ತಾಕಿಯಾ ಮೀರನ್ ಶಾ ಮೈದಾನದಲ್ಲಿ ಅಕ್ತರರನ್ನು ಹೂಳಲಾಯಿತು. ಅಲ್ಲಿ ನೀಡಿದ ಪ್ರಮಾಣಪತ್ರದಲ್ಲಿ ಸಾವಿಗೆ ಕಾರಣವನ್ನೇ ನಮೂದಿಸಿರಲಿಲ್ಲ. ಆದರೆ ಸಿಡುಬಿನ ಹೊಡೆತದಿಂದ ಮಗನ ರೋಗನಿರೋಧಕ ಶಕ್ತಿ ಕುಂದಿ ಹೋಗಿದ್ದರಿಂದ ಸದೃನಿಶಾರಿಗೆ ತಮ್ಮ ಮಗನಿಗೆ ಬಂದಿರುವುದು ಕೋವಿಡ್ ಎಂದು ದಿಟವಾಗಿತ್ತು.

2020ರ ಜೂನ್ 14ರಂದು, ಭಾರತ ಸರಕಾರವು ಒಂದು ಅಧಿಸೂಚನೆಯನ್ನು ಹೊರಡಿಸಿತು, “…ಶಂಕಿತ ಕೋವಿಡ್ ಪ್ರಕರಣಗಳ ಮೃತದೇಹಗಳ ಪ್ರಯೋಗಾಲಯದ ಕೋವಿಡ್ ದೃಢೀಕರಕ್ಕಾಗಿ ಕಾಯದೆ ತಕ್ಷಣ ಸಂಬಂಧಿಕರಿಗೆ ಒಪ್ಪಿಸಬೇಕು” ಎಂದು

Two days after his death, the family – Vimla and sons Gyanendra Kumar, Dheerendra Kumar and Abhishek – received the test result which said he was Covid-19 positive, but his death certificate (left) says otherwise
PHOTO • Durgesh Singh
Two days after his death, the family – Vimla and sons Gyanendra Kumar, Dheerendra Kumar and Abhishek – received the test result which said he was Covid-19 positive, but his death certificate (left) says otherwise
PHOTO • Durgesh Singh

ಅವರ ಮರಣವಾದ ಎರಡು ದಿನಗಳ ನಂತರ ವಿಮಲಾ ಮತ್ತು ಮಕ್ಕಳಾದ ಜ್ಞಾನೇಂದ್ರ ಕುಮಾರ್, ಧೀರೇಂದ್ರ ಕುಮಾರ್ ಮತ್ತು ಅಭಿಶೇಕ್ – ಇವರ ಕುಟುಂಬಕ್ಕೆ ಕೋವಿಡ್-19 ಪರೀಕ್ಷಾ ವರದಿ ಸಿಕ್ಕಿತು, ಅದು ಪಾಸಿಟಿವ್ ಆಗಿತ್ತು. ಆದರೆ ಮರಣ ಪ್ರಮಾಣಪತ್ರವು (ಎಡಚಿತ್ರ) ಬೇರೆಯೇ ಹೇಳುತ್ತಿತ್ತು

ಅಂದರೆ ರೋಗದ ಲಕ್ಷಣಗಳಿದ್ದೂ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಅಂತಹ ಸಾವಿನ ಪ್ರಕರಣಗಳನ್ನು ಕೋವಿಡ್- 19 ಸಾವುಗಳ ಪಟ್ಟಿಗೆ ಸೇರಿಸುವುದಿಲ್ಲ.

ಇಂತಹದ್ದೇ ಒಂದು ಪ್ರಕರಣ ಉನ್ನವೋ ಜಿಲ್ಲೆಯ ಬಿಘಾಪುರ ತಹಶೀಲಿನ ಕುತುಬುದ್ದೀನ್ ಗರೇವಾ ಹಳ್ಳಿಯ ಅಶೋಕ್ ಕುಮಾರ್ ಯಾದವ್ ಅವರದ್ದು. ಸರಕಾರದ ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿದ್ದ, 56ರ ಪ್ರಾಯದ ಯಾದವ್ ಅವರಿಗೆ ಏಪ್ರಿಲ್ 22 ರಿಂದ ಜ್ವರ ಮತ್ತು ಕೆಮ್ಮು ಇತ್ತು, ಸ್ಥಳಿಯ ಔಷಧಿ ಅಂಗಡಿಯಲ್ಲಿ ಅದಕ್ಕೆ ಔಷಧಿ ತೆಗೆದುಕೊಂಡರು. ಆದರೆ ಕೆಮ್ಮು ಹೆಚ್ಚಾಗಿ ಅಸ್ವಸ್ಥರಾದಾಗ ಮನೆಯವರು ಏಪ್ರಿಲ್ 25ರಂದು 45 ಕಿಮೀ ದೂರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರು. ಯಾದವ್ ಅವರಿಗೆ ಅಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿದರು, ಆದರೆ ದಾಖಲು ಮಾಡಿಕೊಳ್ಳಲಿಲ್ಲ. ಮಾರನೆ ದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದು ಸಂಡಾಸಿಗೆ ಹೋಗುವಾಗ ನೆಲಕ್ಕೆ ಬಿದ್ದವರು ಮತ್ತೆ ಏಳಲಿಲ್ಲ.

“ಅಷ್ಟೇ ಆಗಿದ್ದು” ಎಂದರು 51ರ ಪ್ರಾಯದ ಗೃಹಿಣಿ ವಿಮಲಾ.

ವಿಮಲಾರ ಕುಟುಂಬದವರು – ಅವರು ಮತ್ತು 19ರಿಂದ 25 ವಯಸ್ಸಿನ ವರೆಗಿನ ಅವರ ಮೂವರು ಮಕ್ಕಳು – ಸೇರಿ ಯಾವ ಸುರಕ್ಷತಾ ಕ್ರಮ ಅನುಸರಿಸದೆ ಅವರ ಅಂತ್ಯಕ್ರಿಯೆ ನೆರವೇರಿಸಿದರು. ಎರಡು ದಿನಗಳಾದ ಮೇಲೆ ಕೋವಿಡ್ -19 ಪರೀಕ್ಷೆ ವರದಿಯು ಪಾಸಿಟಿವ್ ಎಂದು ಬಂದಿತು. ಜಿಲ್ಲಾ ಆಸ್ಪತ್ರೆಯಿಂದ ನೀಡಲಾದ ಪ್ರಮಾಣಪತ್ರದಲ್ಲಿ ಯಾದವರ ಸಾವಿಗೆ ಕಾರಣ ‘ಹೃದಯ ಉಸಿರಾಟದ ವೈಫಲ್ಯ’ ಎಂದು ನಮೂದಾಗಿತ್ತು.

“ಎಲ್ಲಾ ಕೋವಿಡ್ -19 ಸಾವುಗಳನ್ನು ದಾಖಲಿಸಲು ನಾವು ಸಾಕಷ್ಟು ಪ್ರಯತ್ನಿಸಿದರೂ, ಎಲ್ಲಾ ಸಾವಿನ ಪ್ರಕರಣಗಳಲ್ಲಿ ಕೋವಿಡ್ ಪರೀಕ್ಷೆ ಮಾಡಲಾಗಿಲ್ಲ ಎನ್ನುವುದೂ ಸತ್ಯ ಮತ್ತು ಇನ್ನು ಕೆಲವು ಪರೀಕ್ಷಾ ವರದಿಗಳು ತುಂಬಾ ತಡವಾಗಿ ಬಂದವು. ಆದರೆ ಈಗ ನಾವು ಇಂತವುಗಳ ಬಗ್ಗೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದೇವೆ” ಎನ್ನುತ್ತಾರೆ ಲಕ್ನೋದಲ್ಲಿ ಕೋವಿಡ್- 19 ಉಸ್ತುವಾರಿ ನೋಡಿಕೊಳ್ಳುತ್ತಿರುವ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಗಿರಿಜಾಶಂಕರ್ ಬಾಜಪೇಯಿ.

ಆದರೆ ಈಗಲೂ ಇಂತಹ ಅದೆಷ್ಟು ಪ್ರಕರಣಗಳು ಮತ್ತು ಸಾವುಗಳು ವರದಿಯಾಗದೇ ಹಾಗೆಯೇ ಮುಚ್ಚಿ ಹೋಗುತ್ತಿವೆಯೋ, ಅದೆಷ್ಟು ಸಾವುಗಳನ್ನು ಸಾಂಕ್ರಾಮಿಕದಿಂದ ಆದ ಸಾವುಗಳ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವೋ –ದೇವರೇ ಬಲ್ಲ.

ಉನ್ನಾವೋದ ದುರ್ಗೇಶ್ ಸಿಂಗರ ಮಾಹಿತಿಯ ಸಹಕಾರದೊಂದಿಗೆ

ಅನುವಾದ: ಬಿ.ಎಸ್. ಮಂಜಪ್ಪ

Rana Tiwari

রানা তিওয়ারি লখনউ নিবাসী স্বতন্ত্র সাংবাদিক।

Other stories by Rana Tiwari
Translator : B.S. Manjappa

Manjappa B. S. is an emerging writer and translator in Kannada.

Other stories by B.S. Manjappa