"ಪ್ರತಿಭಟನಾಕಾರರು ರಸ್ತೆಗಳ ಸಂಚಾರವನ್ನು ತಡೆಗಟ್ಟಿದಾಗ ಅಥವಾ ರಸ್ತೆಗಳಿಗೆ ಹಾನಿಗೊಳಿಸಿದಾಗ ಸರಕಾರಗಳು ಅವರನ್ನು ಅಪರಾಧಿಗಳು ಎಂದು ಬ್ರಾಂಡ್ ಮಾಡುತ್ತದೆ. ಆದರೆ ಅದೇ ಕೆಲಸವನ್ನು ಸರಕಾರ ಮಾಡಿದರೆ ಅಂತಹ ಸರಕಾರವನ್ನು ಏನೆಂದು ಕರೆಯುವುದು?" ಇದು 70 ವರ್ಷದ ಹರೀಂದರ್ ಸಿಂಗ್ ಲಖಾ ಎನ್ನುವ ಪಂಜಾಬ್ನ ಮೊಗಾ ಜಿಲ್ಲೆಯ ಮೆಹ್ನಾ ಗ್ರಾಮದ ರೈತನ ಪ್ರಶ್ನೆ.
ಲಖಾ ಹೇಳುತ್ತಿರುವುದು ಆಕ್ರೋಶಭರಿತ ಪಂಜಾಬ್ನ ರೈತರು ದೆಹಲಿಗೆ ಬರದಂತೆ ತಡೆಯಲು ಸರ್ಕಾರಿ ಅಧಿಕಾರಿಗಳು ರಸ್ತೆಯಲ್ಲಿ 10 ಅಡಿ ಆಳದ ಹೊಂಡಗಳನ್ನು ಅಗೆದಿರುವ ಕುರಿತು. ಕೆಲವು ದಿನಗಳಿಂದ, ಪಂಜಾಬ್ ಮತ್ತು ಉತ್ತರ ಪ್ರದೇಶ ಮತ್ತು ಹರಿಯಾಣದ ಅನೇಕ ರೈತರು ತಮ್ಮ ದೇಶದ ರಾಜಧಾನಿಯನ್ನು ಪ್ರವೇಶಿಸಲು ಪೊಲೀಸ್ ಮತ್ತು ಇತರ ಪಡೆಗಳೊಂದಿಗೆ ಹೋರಾಡುತ್ತಿದ್ದಾರೆ.
ಮೂರು ದಿನಗಳ ಹೋರಾಟದ ನಂತರ, ದೆಹಲಿ ಪೊಲೀಸರು ತಲೆಬಾಗಿದರು, ಆದರೆ ಹರಿಯಾಣ ಸರ್ಕಾರ ರೈತರಿಗೆ ರಾಜ್ಯದ ಗಡಿ ದಾಟಲು ಈಗಲೂ ಅವಕಾಶ ನೀಡಿಲ್ಲ. ಈಗ ರಾಜಧಾನಿಗೆ ಪ್ರವೇಶಿಸಲು ಸಾರ್ವಜನಿಕವಾಗಿ ಅನುಮತಿ ನೀಡಲಾಗಿದ್ದರೂ, ವಾಸ್ತವದಲ್ಲಿ ಅದನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿಲ್ಲ. ‘ಅನುಮತಿ’ಯ ಹೊರತಾಗಿಯೂ, ಕಂದಕಗಳು, ಮುಳ್ಳುತಂತಿ, ಬ್ಯಾರಿಕೇಡ್ಗಳು - ಎಲ್ಲವೂ ಹಾಗೇ ಉಳಿದಿವೆ. ಮತ್ತು ಅಶ್ರುವಾಯು ಶೆಲ್ಗಳು ಮತ್ತು ಜಲ ಫಿರಂಗಿಗಳು ಚಳವಳಿ ಇನ್ನಷ್ಟು ಹೊತ್ತು ಅಲ್ಲೇ ನಿಲ್ಲುವಂತೆ ಮಾಡಿವೆ.
ಈ ವರ್ಷ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (APMCs)
ಕಾನೂನು
ಜಾರಿಗೆ ಬಂದರೆ, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಮಂಡಿ-ಮಾರುಕಟ್ಟೆ ಸಮಿತಿಗಳ ವ್ಯವಸ್ಥೆಯು ತೊಂದರೆಗೀಡಾಗುತ್ತದೆಂದು ರೈತರು ಹೇಳುತ್ತಾರೆ. ಮತ್ತು ಇದು ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಪ್ರಕ್ರಿಯೆಯನ್ನು ನಾಶಪಡಿಸುತ್ತದೆ ಮತ್ತು ದೊಡ್ಡ ಕೃಷಿ ಸರಣಿ ಕಂಪನಿಗಳು ಮತ್ತು ನಿಗಮಗಳಿಗೆ ಬೆಲೆಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಇದು ಮತ್ತು ಇನ್ನೆರಡು ಕಾನೂನುಗಳು ಕನಿಷ್ಟ ಬೆಂಬಲ ಬೆಲೆಯ ಖಾತರಿಯನ್ನು ನೀಡುವುದಿಲ್ಲವೆಂದು ರೈತರಿಗೆ ತಿಳಿದಿದೆ. ಜೊತೆಗೆ ಈ ಕಾಯಿದೆಗಳಲ್ಲಿ ಎಲ್ಲೂ ಸ್ವಾಮಿನಾಥನ್ ವರದಿಯ ಉಲ್ಲೇಖ ಕಾಣುವುದಿಲ್ಲ. ಎರಡನೆಯ ಕಾನೂನು,
ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ
) ಒಪ್ಪಂದವು ಖಾಸಗಿ ವ್ಯಾಪಾರಿಗಳು ಮತ್ತು ದೊಡ್ಡ ಸಂಸ್ಥೆಗಳನ್ನು ಒಳಗೊಂಡ ಒಪ್ಪಂದಗಳೊಂದಿಗೆ ವ್ಯವಹರಿಸುತ್ತದೆ ವ್ಯಾಪಾರಿಗಳ ಪರವಾಗಿ ಕೆಲಸ ಮಾಡುತ್ತದೆಯೆನ್ನುವುದನ್ನು ರೈತರು ಕಂಡುಕೊಂಡಿದ್ದಾರೆ.
ಅಗತ್ಯ ಸರಕುಗಳ ಕಾಯ್ದೆಯು
ಅಂತಹ ದೊಡ್ಡ ಕಂಪನಿಗಳನ್ನು ಉತ್ತೇಜಿಸುತ್ತದೆ ಮತ್ತು ಸಂಗ್ರಹಣೆಯನ್ನು ಉತ್ತೇಜಿಸುತ್ತದೆ. ಇಲ್ಲಿ ರೈತರು ಚೌಕಾಶಿ ನಡೆಸಬಹುದಾದ ಸಾಧ್ಯತೆಗಳು ಸೀಮಿತವಾಗಿವೆ.
ಈ ಮೂರು ಕಾನೂನುಗಳನ್ನು ರದ್ದುಪಡಿಸಬೇಕೆನ್ನುವುದು ಪ್ರತಿಭಟನಾಕಾರರ ಒತ್ತಾಯ.
"ಈ [ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸಂಬಂಧಿಸಿದ ಕಾನೂನುಗಳು] ಮರಣದ ಕರೆಗಂಟೆಯಾಗಿದೆ" ಎಂದು ಹರಿಯಾಣದ ಕರ್ನಾಲ್ ಜಿಲ್ಲೆಯ ಬಹೋಲಾ ಗ್ರಾಮದ ಸುರ್ಜಿತ್ ಮನ್ ಹೇಳುತ್ತಾರೆ. ಅವರು ತನ್ನ 2.5 ಎಕರೆ ಹೊಲದಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. "(ನಾನು ಇಲ್ಲಿ ಪ್ರತಿಭಟಿಸುತ್ತಿರುವ ವೇಳೆ) ನಮ್ಮ ಬೆಳೆ ಹಾಳಾದರೆ ಆಗಲಿ, ಅದು ಒಮ್ಮೆ ಮಾತ್ರ ಆಗುವುದು. ಆದರೆ ನಮ್ಮ ಮುಂದಿನ ಪೀಳಿಗೆ ತೊಂದರೆ ಅನುಭವಿಸವಂತೆ ಆಗಬಾರದು.”
ಈ ಕಾನೂನುಗಳ ಸಹಾಯದೊಂದಿಗೆ ದೇಶದ ಕೃಷಿಯ ಮೇಲೆ ಖಾಸಗಿ ಸಂಸ್ಥೆಗಳು ನಿಯಂತ್ರಣ ತಮ್ಮ ಕೈಗೆ ಪಡೆಯಬಹುದೆನ್ನುವ ಆತಂಕ ಮತ್ತು ಎಚ್ಚರಿಕೆಯನ್ನು ರೈತರು ಎದುರಿಗಿಡುತ್ತಿದ್ದಾರೆ. "ನಾವು ಅಂಬಾನಿ ಅದಾನಿಗಳು ನಮ್ಮ ಪಂಜಾಬಿನ ಹೊಲಗಳಲ್ಲಿ ಕಾಲಿಡಲು ಬಿಡುವುದಿಲ್ಲ" ಎಂದು ಪಂಜಾಬ್ನ ತಾರ್ನ್ ತರಣ್ ಜಿಲ್ಲೆಯ ಕೋಟ್ ಬುಧಾ ಗ್ರಾಮದ 72 ವರ್ಷದ ಬಲದೇವ್ ಸಿಂಗ್ ಹೇಳುತ್ತಾರೆ. ಅವರು ಅನೇಕ ಬ್ಯಾರಿಕೇಡ್ಗಳನ್ನು ದಾಟುತ್ತಾ 500 ಕಿಲೋಮೀಟರ್ ಪ್ರಯಾಣಿಸಿ ಇಲ್ಲಿಗೆ ಬಂದು ತಲುಪಿದ್ದಾರೆ. ಸಿಂಗ್ 12 ಎಕರೆ ಕೃಷಿಭೂಮಿಯಲ್ಲಿ ತನ್ನ ಜೀವಮಾನದುದ್ದಕ್ಕೂ ಆಹಾರ ಬೆಳೆಗಳನ್ನು ಬೆಳೆದಿದ್ದಾರೆ. ಈ ಸಮಯದಲ್ಲಿ ಅವರು ತನ್ನ ಹೊಲದಲ್ಲಿರಬೇಕಿತ್ತು. "ಆದರೆ ಈ ಅನಿಶ್ಚತತೆಯ ಕಾರ್ಮೋಡಗಳು ಈ ಬದುಕಿನ ಸಂಜೆಯಲ್ಲಿ ನನ್ನನ್ನು ರಸ್ತೆಗಳ ಮೇಲಿರುವಂತೆ ಮಾಡಿದೆ" ಎಂದು ಅವರು ಬೇಸರದಿಂದ ಹೇಳುತ್ತಾರೆ.
ಕೋಟ್ ಬುಧಾ ಭಾರತ-ಪಾಕಿಸ್ತಾನ ಗಡಿಯಿಂದ ಹೆಚ್ಚು ದೂರದಲ್ಲೇನು ಇಲ್ಲ. "ಮುಳ್ಳು ತಂತಿಗಳನ್ನು ಈ ಮೊದಲೂ ನೋಡಿದ್ದೆ, ಆದರೆ ಅವುಗಳನ್ನು ಒಂದು ದಿನ ನಾನು ಎದುರಿಸಬೇಕಾಗಬಹುದೆಂದು ನಿರೀಕ್ಷಿಸಿರಲಿಲ್ಲ. ಅದೂ ನನ್ನದೇ ದೇಶದ ರಾಜಧಾನಿಗೆ ಪ್ರಯತ್ನಿಸಲು ಯತ್ನಿಸಿದ್ದಕ್ಕಾಗಿ." ಎಂದು ಸಿಂಗ್ ಹೇಳುತ್ತಾರೆ.
"ಇದು ಕೇಂದ್ರದೊಡನೆ ನಮ್ಮ ನೇರ ಹೋರಾಟ" ಎಂದು ಭೀಮ್ ಸಿಂಗ್ ಹೇಳುತ್ತಾರೆ. ಹರಿಯಾಣದ ಸೋನಿಪತ್ ಜಿಲ್ಲೆಯ ಖಾನ್ಪುರ್ ಕಲಾನ್ ಗ್ರಾಮದ 68 ವರ್ಷದ ರೈತರಾದ ಇವರು ತನ್ನ 1.5 ಎಕರೆ ಹೊಲದಲ್ಲಿ ಕೃಷಿ ಮಾಡುತ್ತಾರೆ. ʼಸರಕಾರವು ಈ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ಇಲ್ಲದೇ ಹೋದಲ್ಲಿ ನಾನು ಮತ್ತು ನನ್ನ ರೈತ ಸಹೋದರರು ಇತರರಿಗಾಗಿ ಬೆಳೆ ಬೆಳೆಯುವುದನ್ನು ನಿಲ್ಲಿಸುತ್ತೇವೆʼ ಎನ್ನುತ್ತಾರೆ.
ಅವರು ರೈತರಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಸರ್ ಛೋಟುರಾಮ್ ಅವರನ್ನು ನೆನಪಿಸಿಕೊಳ್ಳುತ್ತಾರೆ. "ಆಗ ಬ್ರಿಟಿಷರು ಕ್ವಿಂಟಾಳ್ ಒಂದಕ್ಕೆ 20-25 ಪೈಸೆ ಪಾವತಿಸುತ್ತಿದ್ದರು. ಆದರೆ ಛೋಟುರಾಮ್ ಅವರು ಸರಿಸುಮಾರು ಹತ್ತು ರೂಪಾಯಿ ಬೆಲೆಗಾಗಿ ಆಗ್ರಹಿಸುತ್ತಿದ್ದರು. ಆಗ ಅವರು ʼವಸಾಹತುಶಾಹಿ ಶಕ್ತಿಗಳಿಗೆ ತಲೆ ಬಾಗುವುದಕ್ಕಿಂತ ರೈತರು ತಮ್ಮ ಬೆಳೆಗಳನ್ನು ಸುಟ್ಟು ಹಾಕುವದನ್ನು ಆಯ್ಕೆ ಮಾಡಿಕೊಳ್ಳುತ್ತಾರೆʼ ಎಂದಿದ್ದರು. "ಮೋದಿ ಸರಕಾರ ನಮ್ಮ ಮಾತುಗಳನ್ನು ಕೇಳದಿದ್ದಲ್ಲಿ ನಾವೂ ಅದನ್ನೇ ಮಾಡಬೇಕಾಗಿ ಬರಬಹುದು" ಎಂದು ಸಿಂಗ್ ಹೇಳುತ್ತಾರೆ.
2018ರ ಅಕ್ಟೋಬರ್ನಲ್ಲಿ ಪ್ರಧಾನ ಮಂತ್ರಿಯವರು ಛೋಟು ರಾಮ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ ʼಛೋಟುರಾಮ್ ಅವರ ಸಂದೇಶ ಮತ್ತು ಪರಂಪರೆಗಳನ್ನು ಕೇವಲ ಒಂದು ರಾಜ್ಯಕ್ಕೆ ಸೀಮಿತಗೊಳಿಸಲಾಗಿದೆʼ ಎಂದು
ಹೇಳಿದ್ದರು
. ಆದರೆ "ಈಗ ಈ ಕಾನೂನುಗಳನ್ನು ತರುವ ಮೂಲಕ ಸರ್ಕಾರ ಅವರನ್ನು ಅವಮಾನಿಸುತ್ತಿದೆ." ಎಂದು ಸಿಂಗ್ ಹೇಳುತ್ತಾರೆ.
"ನನ್ನ ದೇಶ ಹಸಿವಿನಿಂದ ಸಾಯುವುದನ್ನು ನಾನು ನೋಡುತ್ತಾ ಕೂರಲಾರೆ" ಎಂದು ಪಂಜಾಬ್ನ ಮೊಗಾ ಜಿಲ್ಲೆಯ ಮೆಹ್ನಾ ಗ್ರಾಮದ ರೈತ 70 ವರ್ಷದ ಹರಿಂದರ್ ಸಿಂಗ್ ಹೇಳುತ್ತಾರೆ. ಇವರು ಐದು ಎಕರೆ ಕೃ ಭೂಮಿ ಹೊಂದಿದ್ದಾರೆ. "[ಈ ಹೊಸ ಕಾನೂನುಗಳು ಬಂದರೆ] ಸರ್ಕಾರವು ರೈತರಿಂದ ಧಾನ್ಯವನ್ನು ಖರೀದಿಸುತ್ತದೆ ಎಂಬುದಕ್ಕೆ ಯಾವುದೇ ಖಾತರಿಯಿಲ್ಲ ಮತ್ತು ನಂತರ ಇಡೀ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಸ್ಥವ್ಯಸ್ತಗೊಳ್ಳುವ ಆತಂಕವಿದೆ."
ಕಾರ್ಪೊರೇಟ್ಗಳು ಬಡವರಿಗೆ ಆಹಾರ ನೀಡುವುದಿಲ್ಲವೇ? ಎಂದು ನಾನು ಕೇಳಿದಾಗ ಅವರು "ಕಾರ್ಪೊರೇಟ್ಗಳು ಬಡವರಿಗೆ ಆಹಾರ ನೀಡುತ್ತವೆಯೇ? ಅವರು ಬಡವರನ್ನೇ ಕಿತ್ತು ತಿನ್ನುವವರು. ಬಡವರೇ ಕಾರ್ಪೊರೇಟ್ಗಳ ಆಹಾರವಾಗಿರದೆ ಹೋಗಿದ್ದರೆ ನಾವು ನಿಮ್ಮ ಪ್ರಶ್ನೆಯನ್ನು ಪರಿಗಣಿಸಬಹುದಿತ್ತು" ಎಂದು ಅವರು ಮಾರುತ್ತರ ನೀಡಿದರು.
ಕಳೆದ ಹಲವು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಹಂತಗಳಲ್ಲಿ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಗಳು ಫಲಪ್ರದವಾಗಿಲ್ಲ. "ಇನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ. ಈಗ ನಾವು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಲು ಬಂದಿದ್ದೇವೆ ”ಎಂದು ಕರ್ನಾಲ್ನ ಬಹೋಲಾ ಗ್ರಾಮದ ಸುರ್ಜಿತ್ ಮನ್ ಹೇಳುತ್ತಾರೆ.
“ಮೊದಲಿಗೆ, ನಾವು [ಸಂಸತ್ತು ಅಧಿವೇಶನ ನಡೆಯುತ್ತಿದ್ದಾಗ] ಸಭೆ ನಡೆಸಲೆಂದು ದೆಹಲಿಗೆ ಬಂದೆವು. ಆಗ ನಮ್ಮನ್ನು ಅವಮಾನಿಸಿದ ಸರ್ಕಾರ ಈಗ ನಾವು ಮತ್ತೆ ಬರುತ್ತಿರುವುದನ್ನು ನೋಡಿ ನಮ್ಮ ಮೇಲೆ ಕೈಯೆತ್ತಿದೆ. ಮೊದಲು ಉಪ್ಪು ತಿಕ್ಕಿ, ನಂತರ ಗಾಯಗೊಳಿಸಿದಂತಾಗಿದೆ ಈಗಿನ ಸರ್ಕಾರದ ನಡೆ." ಎನ್ನುತ್ತಾರೆ ಕೋಟ್ ಬುಧಾ ಗ್ರಾಮದ ಬಲದೇವ್ ಸಿಂಗ್.
"ದೇಶವನ್ನು ಹಸಿವಿನಿಂದ ಹೊರತಂದಿದ್ದಕ್ಕೆ ಪ್ರತಿಯಾಗಿ ಸರಕಾರ ನಮಗೆ ಕೊಡುತ್ತಿರುವುದನ್ನು ನೋಡಿದರೆ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ" ಎಂದು ಬಾಲ್ದೇವ್ ಸಿಂಗ್ ಮತ್ತು ಹರಿಂದರ್ ಸಿಂಗ್ ಹೇಳುತ್ತಾರೆ
"ಅದು ಕಾಂಗ್ರೆಸ್ ಆಗಿರಲಿ, ಭಾರತೀಯ ಜನತಾ ಪಕ್ಷವಾಗಲಿ, ಸ್ಥಳೀಯ ಅಕಾಲಿ ದಳವಾಗಲಿ, ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಿ ಪಂಜಾಬ್ ಅನ್ನು ಲೂಟಿ ಮಾಡಿವೆ. ಆಮ್ ಆದ್ಮಿ ಪಕ್ಷವೂ ಇದೇ ಹಾದಿಯಲ್ಲಿದೆ”ಎಂದು ಪಂಜಾಬ್ನ ಮೊಗಾದಲ್ಲಿ 12 ಎಕರೆ ಜಮೀನನ್ನು ಹೊಂದಿರುವ 62 ವರ್ಷದ ಜೋಗ್ರಾಜ್ ಸಿಂಗ್ ಹೇಳುತ್ತಾರೆ.
ರೈತರು ರಾಷ್ಟ್ರೀಯ ಮಾಧ್ಯಮಗಳ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಅವರು ನಮ್ಮನ್ನು ನಕಾರಾತ್ಮಕ ರೀತಿಯಲ್ಲಿ ತೋರಿಸುತ್ತಿದ್ದಾರೆ. ವರದಿಗಾರರು ನಮ್ಮೊಂದಿಗೆ ವಿವರವಾಗಿ ಮಾತನಾಡುತ್ತಿಲ್ಲ” ಎಂದು ಜೋಗ್ರಾಜ್ ಸಿಂಗ್ ಹೇಳುತ್ತಾರೆ. “ಅನ್ಯಾಯಕ್ಕೊಳಗಾದವರೊಂದಿಗೆ ಮಾತನಾಡದೆ ಅವರು ಸಮಸ್ಯೆಯನ್ನು ಹೇಗೆ ಅರ್ಥಮಾಡಿಕೊಳ್ಳಲು ಸಾಧ್ಯ? ಅವರು ಸತ್ಯವನ್ನು ತೋರಿಸಬೇಕು. ಸರ್ಕಾರವು ನಮಗಾಗಿ ಸಿದ್ಧಪಡಿಸಿದ ಡೆತ್ ವಾರಂಟ್ ಕುರಿತು ಅವರು ಮಾತನಾಡಬೇಕು. ಸರ್ಕಾರವು ನಮ್ಮ ಜಮೀನುಗಳನ್ನು ಕಸಿದುಕೊಳ್ಳಬೇಕೆಂದು ಮಾಧ್ಯಮಗಳು ಬಯಸಿದರೆ, ಹಾಗಾಗಲಿ ಎಂದು ತೋರಿಸಬೇಕಾಗಿತ್ತು. ಆದರೆ ಹಾಗೆ ಮಾಡುವ ಮೊದಲು ಸರಕಾರ ನಮ್ಮನ್ನು ತುಂಡುಗಳಾಗಿ ಕತ್ತರಿಸಲಿ.”
ಬಹುಸಂಖ್ಯೆಯ ಧ್ವನಿಗಳು ಹೊರಹೊಮ್ಮುತ್ತವೆ:
“ಗುತ್ತಿಗೆ ಕೃಷಿ ಹೆಚ್ಚಾಗುತ್ತದೆ. ಅವರು ಆರಂಭದಲ್ಲಿ ಕೃಷಿಗೆ ಹೆಚ್ಚಿನ ಬೆಲೆ ನೀಡಿದರೂ, ದಿನ ಕಳೆದಂತೆ ಇದು ಇನ್ನೊಂದು ಉಚಿತ ಜಿಯೋ ಸಿಮ್ ಕಾರ್ಡ್ ಯೋಜನೆಯಂತೆಯೇ ಆಗುತ್ತದೆ. ನಿಧಾನವಾಗಿ, ಅವರು ನಮ್ಮ ಭೂಮಿಯ ಮಾಲಿಕರಾಗುತ್ತಾರೆ.”
"ಒಪ್ಪಂದಗಳ ಮೂಲಕ, ಅವರು ನಮ್ಮ ಭೂಮಿಯಲ್ಲಿನ ರಚನೆಗಳನ್ನು ವಿಸ್ತರಿಸಬಹುದು ಮತ್ತು ಇದಕ್ಕಾಗಿ ಅವರು ಸಾಲಗಳನ್ನು ಸಹ ಪಡೆಯಬಹುದು. ಬೆಳೆ ಸರಿಯಾಗಿ ಆಗದಿದ್ದರೆ, ಅಥವಾ ಒಪ್ಪಂದ ಮುರಿದು ಹೋದರೆ ಅವರು ಪಲಾಯನ ಮಾಡುತ್ತಾರೆ. ಆಗ ನಾವು ಸಾಲವನ್ನು ಮರುಪಾವತಿಸಬೇಕು. ನಮ್ಮಿಂದ ಪಾವತಿಸಲು ಸಾಧ್ಯವಾಗದಿದ್ದರೆ, ನಮ್ಮ ಭೂಮಿ ಕೈತಪ್ಪಿ ಹೋಗುತ್ತದೆ."
ʼಪ್ರತಿಭಟನಾ ಸ್ಥಳದಲ್ಲಿರುವ ಪೋಲಿಸರು ಕೂಡ ನಮ್ಮ ಮಕ್ಕಳೇ. ಸರಕಾರ ನಮಗೆ ಅನ್ಯಾಯವೆಸಗುತ್ತಿದೆಯೆಂದು ಅವರಿಗೂ ತಿಳಿದಿದೆ. ಅದು ನಮ್ಮ ಮಕ್ಕಳನ್ನೇ ನಮಗೆ ಹೊಡೆಯಲು ಬಳಸುತ್ತಿದೆ. ಅವರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡುವುದಕ್ಕಾಗಿ ಸಂಬಳ ಪಡೆಯುತ್ತಿದ್ದಲ್ಲಿ ನಾವು ನಮ್ಮ ಶರೀರವನ್ನು ಅವರೆದು ಒಡ್ಡಲು ತಯಾರಿದ್ದೇವೆ. ಈ ರೀತಿಯಲ್ಲಿಯೂ ನಾವು ಅವರ ಆಹಾರದ ದಾರಿಯಾಗುತ್ತೇವೆ.ʼ
ಅನುವಾದ: ಶಂಕರ ಎನ್. ಕೆಂಚನೂರು