"ನನ್ನ ಅಜ್ಜನ ಬಳಿ 300 ಒಂಟೆಗಳಿದ್ದವು. ಈಗ ನನ್ನ ಬಳಿ ಕೇವಲ 40 ಒಂಟೆಗಳಿವೆ. ಉಳಿದುವು ಸತ್ತುಹೋದವು... ಅವುಗಳಿಗೆ ಸಮುದ್ರಕ್ಕೆ ಹೋಗಲು ಅವಕಾಶವಿರಲಿಲ," ಎಂದು ಜೇತಾಭಾಯಿ ರಾಬರಿ ಹೇಳುತ್ತಾರೆ. ಅವರು ಖಂಭಾಲಿಯಾ ತಾಲ್ಲೂಕಿನ ಬೆಹ್ ಗ್ರಾಮದಲ್ಲಿ ಸಮುದ್ರದ ಒಂಟೆಗಳನ್ನು ಮೇಯಿಸುತ್ತಾರೆ. ಈ ಪ್ರಾಣಿಗಳು ಅಳಿವಿನಂಚಿನಲ್ಲಿರುವ ಖರೈ ತಳಿಗೆ ಸೇರಿವೆ, ಇದು ಗುಜರಾತ್ ನ ಕರಾವಳಿ ಪರಿಸರ ವಲಯಕ್ಕೆ ಒಗ್ಗಿಕೊಂಡಿದೆ. ಒಂಟೆಗಳು ಕಛ್ ಕೊಲ್ಲಿಯ ಮ್ಯಾಂಗ್ರೋವ್ ಕಾಡುಗಳಲ್ಲಿ ಆಹಾರವನ್ನು ಹುಡುಕುತ್ತಾ ಗಂಟೆಗಟ್ಟಲೆ ಈಜುತ್ತವೆ.
ಖರೈ ಒಂಟೆಗಳನ್ನು ಫಕೀರಾನಿ ಜಾಟ್ ಮತ್ತು ಭೋಪಾ ರಬರಿ ಸಮುದಾಯಗಳು 17ನೇ ಶತಮಾನದಿಂದ ಕೊಲ್ಲಿಯ ದಕ್ಷಿಣ ತೀರದಲ್ಲಿ ಸಾಕುತ್ತಿವೆ, ಅಲ್ಲಿ ಈಗ ಸಾಗರ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯವಿದೆ. ಆದರೆ 1995ರಲ್ಲಿ ಸಾಗರ ಉದ್ಯಾನದೊಳಗೆ ಮೇಯಿಸುವುದಕ್ಕೆ ನಿಷೇಧ ಹೇರಲಾಗಿದ್ದು, ಇದು ಒಂಟೆಗಳು ಮತ್ತು ಅವುಗಳ ಪಾಲಕರ ಉಳಿವಿಗೆ ಬೆದರಿಕೆ ಹಾಕಿದೆ.
ಈ ಒಂಟೆಗಳಿಗೆ ಚೆರ್ (ಮ್ಯಾಂಗ್ರೋವ್/ಕಾಂಡ್ಲ) ಅಗತ್ಯವಿದೆ ಎಂದು ಜೇತಾಭಾಯ್ ಹೇಳುತ್ತಾರೆ. ಮ್ಯಾಂಗ್ರೋವ್ ಎಲೆಗಳು ಅವುಗಳ ಆಹಾರದ ಅತ್ಯಗತ್ಯ ಅಂಶವಾಗಿದೆ. "ಎಲೆಗಳನ್ನು ತಿನ್ನಲು ಅವುಗಳಿಗೆೆ ಅವಕಾಶ ನೀಡದಿದ್ದರೆ ಅವು ಸಾಯುವುದಿಲ್ಲವೇ?" ಎಂದು ಜೇತಾಭಾಯ್ ಕೇಳುತ್ತಾರೆ. ಆದರೆ ಪ್ರಾಣಿಗಳು ಸಮುದ್ರಕ್ಕೆ ಹೋದರೆ, "ಮರೈನ್ ಪಾರ್ಕ್ ಅಧಿಕಾರಿಗಳು ನಮಗೆ ದಂಡ ವಿಧಿಸುತ್ತಾರೆ ಮತ್ತು ನಮ್ಮ ಒಂಟೆಗಳನ್ನು ವಶಪಡಿಸಿಕೊಂಡು ಅವುಗಳನ್ನು ಬಂಧಿಸುತ್ತಾರೆ," ಎಂದು ಅವರು ಹೇಳುತ್ತಾರೆ.
ಈ ವೀಡಿಯೊದಲ್ಲಿ, ಒಂಟೆಗಳು ಮ್ಯಾಂಗ್ರೋ ಗಿಡಗಳನ್ನು ಹುಡುಕುತ್ತಾ ಈಜುವುದನ್ನು ನಾವು ನೋಡುತ್ತೇವೆ. ಪಶುಪಾಲಕರು ಅವುಗಳನ್ನು ಜೀವಂತವಾಗಿರಿಸಲು ತಾವು ಪಡುತ್ತಿರುವ ಪಾಡಿನ ಕುರಿತು ವಿವರಿಸಿದ್ದಾರೆ.
ಇದು ಊರ್ಜಾ ಅವರ ಪ್ರಸ್ತುತಿಯ ಚಿತ್ರ
ಮುಖಪುಟ ಚಿತ್ರ: ರಿತಾಯನ್ ಮುಖರ್ಜಿ
ಇದನ್ನೂ ಓದಿ: ದಟ್ಟ ಸುಳಿಯಲ್ಲಿ ಜಾಮ್ ನಗರದ ʼಈಜುವ ಒಂಟೆಗಳುʼ
ಅನುವಾದ: ಶಂಕರ. ಎನ್. ಕೆಂಚನೂರು