ನೀವು ನಮ್ಮನ್ನು ಬೇರುಸಹಿತ ಕಿತ್ತು ನೀರಿನಲ್ಲಿ ಮುಳುಗಿಸಬಹುದು. ಆದರೆ ಅದಾದ ಕೆಲವು ದಿನಗಳಲ್ಲೇ ನಿಮ್ಮ ಪಾಲಿಗೆ ನೀರಿರುವುದಿಲ್ಲ – ಎಂದು ನಾನೊಂದು ಕಡೆ ಬರೆದಿದ್ದೆ. ನೀವು ನಮ್ಮ ನೆಲ, ನೀರನ್ನು ಕದಿಯಬಹುದು, ಆದರೂ ನಾವು ನಿಮ್ಮ ಮುಂದಿನ ಪೀಳಿಗೆಗಾಗಿ ಹೋರಾಡುತ್ತೇವೆ ಹಾಗೂ ಜೀವವನ್ನೂ ತೆರುತ್ತೇವೆ. ನೀರು, ಕಾಡು ಮತ್ತು ಭೂಮಿಗಾಗಿ ನಮ್ಮ ಹೋರಾಟಗಳು ಕೇವಲ ನಮ್ಮ ಸಲುವಾಗಿಯಲ್ಲ, ನಮ್ಮಲ್ಲಿ ಯಾರೂ ಪ್ರಕೃತಿಯಿಂದ ಬೇರೆಯಾಗಿಲ್ಲ. ಆದಿವಾಸಿ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿರುತ್ತದೆ. ಇವುಗಳ ಹೊರತಾದ ಆದಿವಾಸಿ ಬದುಕಿಲ್ಲ. ಹೀಗಾಗಿ ನಾವು ಪ್ರಕೃತಿಯಿಂದ ನಮ್ಮನ್ನು ಬೇರೆಯಾಗಿಸಿಕೊಂಡು ನೋಡುವುದಿಲ್ಲ. ನಾನು ದೆಹ್ವಾಲಿ ಭಿಲಿಯಲ್ಲಿ ಬರೆಯುವ ಅನೇಕ ಕವಿತೆಗಳಲ್ಲಿ , ನಮ್ಮ ಜನರ ಮೌಲ್ಯಗಳನ್ನು ಸಂರಕ್ಷಿಸಲು ಪ್ರಯತ್ನಿಸಿದ್ದೇನೆ.
ನಮ್ಮ ಆದಿವಾಸಿ ಸಮುದಾಯಗಳ ಲೋಕದೃಷ್ಟಿಯು ಮುಂದಿನ ಪೀಳಿಗೆಗೆ ಅಡಿಪಾಯವಾಗಬಹುದು. ನೀವು ಸಾಮೂಹಿಕ ಆತ್ಮಹತ್ಯೆಗೆ ಸಿದ್ಧರಿಲ್ಲದಿದ್ದರೆ, ಆ ಬದುಕಿಗೆ, ಆ ಲೋಕದೃಷ್ಟಿಗೆ ಹಿಂತಿರುಗುವುದನ್ನು ಬಿಟ್ಟು ನಿಮಗೆ ಬೇರೆ ಆಯ್ಕೆಗಳಿಲ್ಲ.
ನಮ್ಮ ಪಾದಗಳ ದಣಿವಾರಿಸಲೊಂದು ತುಂಡು ಭೂಮಿ
ಗೆಳೆಯ,
ಕಲ್ಲು ಅರೆಯುವುದು
ಮಣ್ಣು ಸುಡುವುದು
ಇದೆಲ್ಲ ಏನೆಂದು ನಿನಗೆ ಅರ್ಥವಾಗಲಿಕ್ಕಿಲ್ಲ.
ನಿನ್ನ ಬೆಳಗುತಿದೆಯೆಂದು
ಈ ಜಗತ್ತು ನಿನ್ನ ಮುಷ್ಟಿಯಲ್ಲಿದೆಯೆಂದು
ನೀನು ಬಹಳ ಸಂತೋಷದಲ್ಲಿರುವೆ.
ಒಂದು ಹನಿ ಇಲ್ಲವಾಗುವುದೆಂದರೇನು ಎನ್ನುವುದು
ನಿನಗೆ ಅರ್ಥವಾಗಲಿಕ್ಕಿಲ್ಲ.
ಎಷ್ಟಾದರೂ ನೀನು ಈ ಭೂಮಿಯ ಮೇಲಿನ ಶ್ರೇಷ್ಟ ಸೃಷ್ಟಿಯಲ್ಲವೆ
ಈ ʼಪ್ರಯೋಗಾಲಯವೇʼ ಸಾಕ್ಷಿ
ನಿನ್ನ ಶ್ರೇಷ್ಟತೆಗೆ
ಈ ಕೀಟಗಳ ಜೊತೆ ನಿನಗೆಲ್ಲಿಯ ಸಂಬಂಧ?
ಈ ಮರಗಳು, ಸಸ್ಯಗಳು ನಿನಗೇನಾಗಬೇಕು?
ನೀನು ಆಕಾಶದಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿರುವೆ
ನೀನೀಗ ಭೂಮಿ ತಾಯಿಯ ಮುದ್ದಿನ ಮಗನಲ್ಲ
ನಿನಗೆ ಬೇಸರವಿಲ್ಲವಾದರೆ ಗೆಳೆಯ
ನಾನು ನಿನ್ನನ್ನು
ʼಚಂದ್ರಲೋಕದ ಮನುಷ್ಯʼನೆಂದು ಕರೆಯವೆ.
ನೀನು ಹಕ್ಕಿಯಲ್ಲ
ಆದರೂ ಹಾರುವೆ ಆಗಸದೆತ್ತರಕ್ಕೆ ಹಾರುವ ಕನಸು ಕಾಣುವೆ
ತಪ್ಪೇನಿಲ್ಲ ಬಿಡು,
ನೀನು ಕಲಿತಿರುವ ವಿದ್ಯೆಯೇ ಹಾಗಿದೆ!
ನೀನು ಯಾರ ಮಾತನ್ನೂ ಕೇಳುವವನಲ್ಲ
ಆದರೂ, ಒಂದು ಮಾತು ಗೆಳೆಯ
ನಿಮಗೆ ಬೇಕಿರುವುದನ್ನೆಲ್ಲ ಮಾಡಿ
ಸಾಧ್ಯವಾದರೆ, ನಾವಿದ್ದೇವಲ್ಲ ಅನಕ್ಷರಸ್ಥರು
ದಯಮಾಡಿ ನಮಗಾಗಿ ಒಂದು ತುಂಡು ಭೂಮಿಯನ್ನಾದರೂ ಬಿಡಿ
ನಮ್ಮ ಪಾದಗಳು ದಣಿದಿವೆ
ನಮಗೂ ಒಂದಿಷ್ಟು ವಿಶ್ರಾಂತಿ ಬೇಕು.
ಗೆಳೆಯ,
ಕಲ್ಲು ಅರೆಯುವುದು
ಮಣ್ಣು ಸುಡುವುದು
ಇದೆಲ್ಲ ಏನೆಂದು ನಿನಗೆ ಅರ್ಥವಾಗಲಿಕ್ಕಿಲ್ಲ.
ನಿನ್ನ ಬೆಳಗುತಿದೆಯೆಂದು
ಈ ಜಗತ್ತು ನಿನ್ನ ಮುಷ್ಟಿಯಲ್ಲಿದೆಯೆಂದು
ನೀನು ಬಹಳ ಸಂತೋಷದಲ್ಲಿರುವೆ.
ಒಂದು ಹನಿ ಇಲ್ಲವಾಗುವುದೆಂದರೇನು ಎನ್ನುವುದು
ನಿನಗೆ ಅರ್ಥವಾಗಲಿಕ್ಕಿಲ್ಲ.
ಎಷ್ಟಾದರೂ ನೀನು ಈ ಭೂಮಿಯ ಮೇಲಿನ ಶ್ರೇಷ್ಟ ಸೃಷ್ಟಿ
ಅನುವಾದ: ಶಂಕರ. ಎನ್. ಕೆಂಚನೂರು